ಪುಸ್ತಕಜ್ಞಾನ ಮತ್ತು ಮಸ್ತಕಜ್ಞಾನ

  •  
  •  
  •  
  •  
  •    Views  

ಸಂಸ್ಕೃತ ಸಾಹಿತ್ಯಲೋಕದಲ್ಲಿ ಆಬಾಲವೃದ್ಧರಿಗೆ ಪ್ರಿಯವಾದ ವಿಷ್ಣುಶರ್ಮನ "ಪಂಚತಂತ್ರ" ಗ್ರಂಥದಲ್ಲಿ ಅನೇಕ ರೋಚಕ ಕಥೆಗಳು ಇವೆ. ಅವುಗಳಲ್ಲಿ ಒಂದು ಹೀಗಿದೆ: ಒಂದು ಹಳ್ಳಿಯ ಆತ್ಮೀಯ ಸ್ನೇಹಿತರಾದ ನಾಲ್ವರು ವಟುಗಳು ವಿದ್ಯಾರ್ಜನೆ ಮಾಡಲು ನಿರ್ಧರಿಸಿ ಕಾನ್ಯಕುಬ್ಜಕ್ಕೆ ಹೋಗುತ್ತಾರೆ. ಅಲ್ಲಿ ಸತತವಾಗಿ ಹನ್ನೆರಡು ವರ್ಷಗಳ ಕಾಲ ಅಧ್ಯಯನ ಮಾಡಿ ವೇದಶಾಸ್ತ್ರ ಪಾರಂಗತರಾಗುತ್ತಾರೆ. ದೊಡ್ಡ ಪಂಡಿತರಾದೆವೆಂಬ ಅಹಂಕಾರವನ್ನು ತುಂಬಿಕೊಂಡು ಸ್ವಗ್ರಾಮಕ್ಕೆ ಹಿಂತಿರುಗುವಾಗ ಎರಡು ದಾರಿ ಸಿಗುತ್ತವೆ. ಅವುಗಳಲ್ಲಿ ಯಾವ ದಾರಿಯಲ್ಲಿ ಹೋಗಬೇಕೆಂದು ತಿಳಿಯದೆ ಎಲ್ಲರೂ ಒಂದು ಮರದಡಿ ಕುಳಿತು ಚಿಂತಿಸತೊಡಗುತ್ತಾರೆ. 

ಪಾಂಡಿತ್ಯದ ಅಮಲಿನಲ್ಲಿದ್ದ ಅವರು ದಾರಿಯಲ್ಲಿ ಕಂಡವರನ್ನು ಕೇಳುವುದಿಲ್ಲ. ಒಬ್ಬ ಪಂಡಿತ ತನ್ನ ಕೈಯಲ್ಲಿದ್ದ ಶಾಸ್ತ್ರಗ್ರಂಥಗಳ ಪುಟಗಳನ್ನು ತಿರುವಿಹಾಕುತ್ತಾನೆ. ಅದರಲ್ಲಿ ಅವನ ಕಣ್ಣಿಗೆ ಬಿದ್ದ ಸೂಕ್ತಿ: “ಮಹಾಜನೋ ಯೇನ ಗತಃ ಸ ಪಂಥಾಃ” ಅಂದರೆ “ದೊಡ್ಡವರು ಹೋದ ದಾರಿಯೇ ಸರಿಯಾದ ದಾರಿ”. ಆ ನಾಲ್ವರೂ ಪಂಡಿತರು ದೊಡ್ಡವರು ಯಾವ ದಾರಿಯಲ್ಲಿ ಹೋಗುತ್ತಿದ್ದಾರೆಂದು ಸುತ್ತಲೂ ಕಣ್ಣುಹಾಯಿಸುತ್ತಾರೆ. ಆ ಊರಿನಲ್ಲಿ ಒಬ್ಬ ವಣಿಕಶ್ರೇಷ್ಟನ ಮಗ ಸತ್ತಿರುತ್ತಾನೆ. ಅವನ ಶವವನ್ನು ಹೊತ್ತುಕೊಂಡು ಅನೇಕ ಜನರು ಅಂತ್ಯಕ್ರಿಯೆಗೆ ಹೋಗುತ್ತಿರುತ್ತಾರೆ. ಶಾಸ್ತ್ರಗ್ರಂಥ ಹೇಳುವಂತೆ ಅವರು ಹೋಗುತ್ತಿರುವ ದಾರಿಯೇ ಸರಿಯಾದ ದಾರಿ ಇರಬೇಕೆಂದು ಆ ಯುವ ಪಂಡಿತರು ಅವರನ್ನು ಹಿಂಬಾಲಿಸಿ ಸ್ಮಶಾನ ಸೇರುತ್ತಾರೆ. 

ಮುಂದಿನ ದಾರಿ ಯಾವುದೆಂದು ಗೊಂದಲಕ್ಕೀಡಾದ ಆ ಪಂಡಿತರು ಸ್ಮಶಾನಕ್ಕೆ ಬಂದ ಜನರನ್ನಾದರೂ ಕೇಳಬಹುದಿತ್ತು. ಆದರೆ ಹಾಗೆ ಮಾಡುವುದಿಲ್ಲ. ಎರಡನೆಯ ಪಂಡಿತ ಶಾಸ್ತ್ರಗ್ರಂಥಗಳ ಪುಟ ತಿರುವಿಹಾಕುತ್ತಾನೆ. ಈ ಮುಂದಿನ ಶ್ಲೋಕ ಕಣ್ಣಿಗೆ ಬೀಳುತ್ತದೆ: “ರಾಜಮಾರ್ಗೇ ಸ್ಮಶಾನೇ ಚ ಯಸ್ತಿಷ್ಠತಿ ಸ ಬಾಂಧವಃ” (ರಾಜಮಾರ್ಗದಲ್ಲಾಗಲೀ ಸ್ಮಶಾನದಲ್ಲಾಗಲೀ ಯಾರು ನಿಮ್ಮೊಂದಿಗಿರುತ್ತಾರೋ ಅವರೇ ನಿಜವಾದ ಬಂಧುಗಳು). ಸುತ್ತಲೂ ಕಣ್ಣುಹಾಯಿಸಿದಾಗ ಅಲ್ಲೊಂದು ಕತ್ತೆ ನಿಂತಿರುತ್ತದೆ. ಶಾಸ್ತ್ರಗಂಥದ ಪ್ರಕಾರ ಅದೇ ತಮ್ಮ ನಿಜವಾದ ಬಂಧುವೆಂದು ತೀರ್ಮಾನಿಸಿ ಆ ಕತ್ತೆಯ ಕೊರಳನ್ನು ಒಬ್ಬ ತಬ್ಬಿಕೊಳ್ಳುತ್ತಾನೆ, ಮತ್ತೊಬ್ಬ ಅದರ ಕಾಲುಗಳನ್ನು ತೊಳೆಯುತ್ತಾನೆ. 

ಮುಂದಿನ ದಾರಿ ಯಾವುದೆಂದು ಮತ್ತೆ ಹುಡುಕಾಡುತ್ತಿದ್ದಾಗ ಹತ್ತಿರದಲ್ಲಿ ಒಂದು ಒಂಟೆ ಕಾಣಿಸುತ್ತದೆ. ಮೂರನೆಯ ಪಂಡಿತ ತನ್ನ ಕೈಯಲ್ಲಿದ್ದ ಶಾಸ್ತ್ರಗ್ರಂಥದ ಪುಟಗಳನ್ನು ತಿರುವಿ ಹಾಕುತ್ತಾನೆ. ಅದರಲ್ಲಿ ಕಂಡುಬಂದ ಶ್ಲೋಕವೆಂದರೆ: "ಧರ್ಮಸ್ಯ ತ್ವರಿತಾ ಗತಿಃ” (ಧರ್ಮದ ಗತಿ ತ್ವರಿತ). ಅಂದರೆ ಧರ್ಮಕಾರ್ಯಗಳನ್ನು ಬೇಗ ಬೇಗನೆ ಮಾಡಿ ಮುಗಿಸಬೇಕು, ಮುಂದೆ ಮಾಡಿದರಾಯಿತು ಎಂದು ಉದಾಸೀನ ಮಾಡಬಾರದು ಎಂದರ್ಥ. ಆದರೆ ಇದರ ತಾತ್ವಿಕ ಅರ್ಥವನ್ನು ಗ್ರಹಿಸದ ಆ ಪಂಡಿತ “ತನ್ನೂನಂ ಏಷ ಧರ್ಮಸ್ತಾವತ್” ಎಂದು ಉದ್ಗರಿಸುತ್ತಾನೆ. ದೂರದ ಹೆಜ್ಜೆಗಳನ್ನಿಟ್ಟು ತ್ವರಿತ ಗತಿಯಲ್ಲಿ ಸಾಗುತ್ತಿದ್ದ ಒಂಟೆಯನ್ನೇ "ಧರ್ಮ" ಎಂದು ಪರಿಭಾವಿಸುತ್ತಾನೆ. ನಾಲ್ಕನೆಯ ಪಂಡಿತ ಇದಕ್ಕೆ ದನಿಗೂಡಿಸುತ್ತಾನೆ: “ಇಷ್ಟಂ ಧರ್ಮೇಣ ಯೋಜಯೇತ್" (ತನ್ನಿಚ್ಛೆಯನ್ನು ಧರ್ಮದೊಂದಿಗೆ ಜೋಡಿಸಬೇಕು). ಅಂದರೆ ತನ್ನ ಇಷ್ಟಾರ್ಥಸಿದ್ದಿಯನ್ನು ಧರ್ಮದಿಂದ ರೂಪಿಸಿಕೊಳ್ಳಬೇಕು, ನಿಯಂತ್ರಿಸಬೇಕು ಎಂದರ್ಥ. ಈ ಧರ್ಮಸೂಕ್ಷವನ್ನರಿಯದ ಆ ಪಂಡಿತ ಶಾಸ್ತ್ರಗ್ರಂಥಗಳಲ್ಲಿ ಧರ್ಮವೆಂದು ಪರಿಗಣಿಸಲಾದ ಒಂಟೆಗೆ ತಮಗೆ ಇಷ್ಟವಾದುದನ್ನು ಕಟ್ಟಬೇಕು ಎಂದು ತಪ್ಪಾಗಿ ಪರಿಭಾವಿಸುತ್ತಾನೆ. "ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ" ಎಂಬಂತೆ ನಾಲ್ವರೂ ಪಂಡಿತರು ಸೇರಿ ಕತ್ತೆಯನ್ನು ಒಂಟೆಯ ಕೊರಳಿಗೆ ಕಟ್ಟುವ ಸಾಹಸ ಕಾರ್ಯವನ್ನು ಮಾಡುತ್ತಾರೆ. ಈ ವಿಷಯ ಯಾರಿಂದಲೋ ಕತ್ತೆಯ ಒಡೆಯನಾದ ಅಗಸನಿಗೆ ಗೊತ್ತಾಗಿ ಅವನು ಸಿಟ್ಟಿಗೆದ್ದು ಓಡಿ ಬರುವುದರೊಳಗೆ ನಾಲ್ವರೂ ಪಂಡಿತರು ಅಲ್ಲಿಂದ ಕಾಲ್ಕಿತ್ತು ಹತ್ತಿರದಲ್ಲಿಯೇ ಇದ್ದ ನದಿಯ ದಡ ಸೇರಿರುತ್ತಾರೆ. 

ತುಂಬಿ ಹರಿಯುತ್ತಿದ್ದ ನದಿಯ ನೀರಿನಲ್ಲಿ ಒಂದು ಮುತ್ತುಗದ ಎಲೆ ತೇಲಿ ಬರುತ್ತಿರುವುದನ್ನು ಒಬ್ಬ ಪಂಡಿತ ನೋಡುತ್ತಾನೆ. ಅದು ತನ್ನನ್ನು ನದಿಯ ಆಚೆ ದಡಕ್ಕೆ ಮುಟ್ಟಿಸುತ್ತದೆಯೆಂದು ಭ್ರಮಿಸಿ ಆ ಎಲೆಯ ಮೇಲೆ ಕುಳಿತುಕೊಳ್ಳಲು ಹೋಗಿ ನೀರಿನಲ್ಲಿ ಮುಳುಗುತ್ತಾನೆ. ಮುಳುಗುತ್ತಿರುವ ತನ್ನ ಸ್ನೇಹಿತನನ್ನು ನೋಡಿ ಇನ್ನೊಬ್ಬ ಪಂಡಿತನಿಗೆ ಮತ್ತೊಂದು ನೀತಿವಾಕ್ಯ ನೆನಪಾಗುತ್ತದೆ: “ಸರ್ವನಾಶೇ ಸಮುತ್ಪನ್ನೇ ಅರ್ಧ೦ ತ್ಯಜತಿ ಪಂಡಿತಃ” ಅಂದರೆ ಗಂಡಾಂತರ ಪರಿಸ್ಥಿತಿಯಲ್ಲಿ ಪೂರಾ ಉಳಿಸಿಕೊಳ್ಳಲು ಹೋಗಿ ಎಲ್ಲವನ್ನೂ ಕಳೆದುಕೊಳ್ಳುವ ಬದಲು ಅರ್ಧದಷ್ಟನ್ನಾದರೂ ಉಳಿಸಿಕೊಳ್ಳಲು ಜಾಣನಾದವನು ಪ್ರಯತ್ನಿಸುತ್ತಾನೆ ಎಂದರ್ಥ. ಈ ಸೂಕ್ತಿಯ ಹಿನ್ನೆಲೆಯಲ್ಲಿ ಆ ಪಂಡಿತ ಮಾಡಿದ್ದೇನು? ತನ್ನ ಸ್ನೇಹಿತನ ಜುಟ್ಟನ್ನು ಹಿಡಿದು ತಲೆಯನ್ನು ಕತ್ತರಿಸುತ್ತಾನೆ! ಮುಂಡ ಮುಳುಗಿಹೋದರೂ ರುಂಡವನ್ನು ರಕ್ಷಣೆ ಮಾಡಿದೆನೆಂದು ಬೀಗುತ್ತಾನೆ!

ಹೀಗೆ ಪುಸ್ತಕದ ಓದು ವ್ಯಾವಹಾರಿಕ ಜ್ಞಾನವಿಲ್ಲದಿದ್ದರೆ ವ್ಯರ್ಥ ಹಾಗೂ ಅಪಾಯಕಾರಿ."ಗೀತವ ಬಲ್ಲಾತ ಜಾಣನಲ್ಲ ಮಾತು ಬಲ್ಲಾತ ಜಾಣನಲ್ಲ" ಎನ್ನುತ್ತಾರೆ ಬಸವಣ್ಣನವರು. "ಗಿಳಿಯೋದಿ ಫಲವೇನು?" ಎಂದು ಪ್ರಶ್ನಿಸುತ್ತಾರೆ. "ರಾಮ ರಾಮ" ಎಂದು ಗಿಳಿಗೆ ಮಾತನ್ನು ಕಲಿಸಿಕೊಟ್ಟರೆ ಅದು ಹೇಳಿಕೊಟ್ಟಷ್ಟನ್ನು ಹೇಳುತ್ತದೆ. ಬೆಕ್ಕು ಬಂದು ಅಪಾಯ ಸ್ಥಿತಿ ಒದಗಿದಾಗ "ನನ್ನನ್ನು ಕಾಪಾಡಿ" ಎಂದು ತನ್ನ ಯಜಮಾನನಿಗೆ ಕೂಗಿ ಹೇಳಲು ಅದಕ್ಕೆ ಬರುವುದಿಲ್ಲ. ಹಾಗೆಯೇ ಶಾಸ್ತ್ರಗ್ರಂಥಗಳನ್ನು ಅರ್ಥಮಾಡಿಕೊಳ್ಳದೆ ಕೇವಲ ಕಂಠಪಾಠ ಮಾಡಿದರೆ ಅದು "ಗಿಳಿಪಾಠ" ಅಷ್ಟೆ.

ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗ ನಮಗೆ ಸ್ಫೂರ್ತಿ ನೀಡಿದವರೆಂದರೆ ಆಗ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊಫೆಸರ್ ಡಾ. ಸಿದ್ದೇಶ್ವರ ಭಟ್ಟಾಚಾರ್ಯರು. ಒಮ್ಮೆ ವಿಭಾಗದಲ್ಲಿ ಯಾವುದೋ ಅಹಿತಕರ ಪ್ರಸಂಗ ಘಟಿಸಿ ಅಧ್ಯಾಪಕರ ಮಧ್ಯೆ ಜಗಳ ಉಂಟಾದಾಗ ಅವರು ಸಿಟ್ಟಿಗೆದ್ದು ಆಡಿದ ಕಟುವಾದ ಮಾತು: "ಜೋ ದಸ್ ಸಾಲ್ ಸಂಸ್ಕೃತ್ ಪಡತೇ ಹೈಂ ವೇ ಗಧೇ ಹೋತೇ ಹೈಂ!" (ಯಾರು ಹತ್ತು ವರ್ಷ ಸಂಸ್ಕೃತ ಓದುತ್ತಾರೋ ಅವರು ಕತ್ತೆಗಳಾಗುತ್ತಾರೆ). ಇದರಿಂದ ಬೇಸರಗೊಂಡ  ವಿರುದ್ಧ ಗುಂಪಿನ ಅಧ್ಯಾಪಕರುಗಳಿಂದ ಪಿಸುದನಿಯಲ್ಲಿ ಕೇಳಿ ಬಂದ ಪ್ರತಿಕ್ರಿಯೆ: “ತಬ್ ತೋ ಯೇ ಹಮಸೇ ಭೀ ಮಹಾನ್ ಗಧೇ ಲಗತೇ ಹೈಂ!”(ಹಾಗಾದರೆ ಇವರು ನಮಗಿಂತಲೂ ದೊಡ್ಡ ಕತ್ತೆ ಇದ್ದಂತೆ ತೋರುತ್ತದೆ!)

ಕಾಶಿಯಲ್ಲಿದ್ದಾಗ ಕೇಳಿದ ಮತ್ತೊಂದು ಪ್ರಹಸನ. ಪಂಡಿತರೊಬ್ಬರು ಭಗವದ್ಗೀತೆಯ ಮಹತ್ವವನ್ನು ಕುರಿತು ಈ ಕೆಳಗಿನ ಪ್ರಸಿದ್ಧ ಶ್ಲೋಕವನ್ನು ವಿವರಿಸಿದರಂತೆ. 

ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ 
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್

ಇದರ ಅರ್ಥ: ಉಪನಿಷತ್ತುಗಳೆಲ್ಲವೂ ಹಾಲು ಕರೆಯುವ ಹಸುಗಳಿದ್ದಂತೆ, ಹಾಲು ಕರೆಯುವವನು (ದೋಗ್ಧಾ) ಭಗವಾನ್ ಶ್ರೀಕೃಷ್ಣ, ಅರ್ಜುನ ಕರುವಾದರೆ ಹಾಲು ಕುಡಿಯುವವರು ಸಜ್ಜನರು. ಅಮೃತಸಂಜೀವಿನಿಯಾದ ಗೀತೆಯೇ ಆ ಹಾಲು. ಇದನ್ನು ಕೇಳಿದ ವಿದ್ಯಾರ್ಥಿಯೊಬ್ಬ ಶ್ಲೋಕದ ಮೊದಲನೆಯ ಸಾಲಿನಲ್ಲಿರುವ "ದೋಗ್ಧಾ" ಶಬ್ದವನ್ನು ಹಿಂದಿಯಲ್ಲಿ "ದೋ ಗಧಾ" (ಎರಡು ಕತ್ತೆಗಳು) ಎಂದು ತಪ್ಪಾಗಿ ಗ್ರಹಿಸಿ ಹೀಗೆ ಕೇಳಿದನಂತೆ: "ಪಂಡಿತ್‌ ಜೀ, ಏಕ್ ಗಧಾ ತೋ ಶ್ರೀಕೃಷ್ಣ ಭಗವಾನ್ ಹೈಂ, ದೂಸರಾ ಕೌನ್ ಹೈಂ?" ಇದರಿಂದ ಸಿಟ್ಟಿಗೆದ್ದ ಪಂಡಿತರು ಹೇಳಿದರಂತೆ: 

“ಅರೇ ಬೇವಕೂಫ್, ಉಲ್ಲೂ ಕೇ ಪಠೇ!ಶ್ರೀಕೃಷ್ಣಭಗವಾನ್
ಕೋ ಕ್ಯೋಂ ಗಧೇ ಬನಾ ರಹೇ ಹೋ?ಏಕ್ ಗಧಾ ತೂ 
ಹೈಂ, ದೂಸರೇ ಗಧಾ ಮೈಂ ಹೂಂ, ಕ್ಯೋಂಕಿ ತುಮ್ ಜೈಸೇ 
ಗಧೇ ಕೋ ಮೈಂ ಪಢಾನೇ ಕೀ ಮೂರ್ಖತಾ ಕೀ!

(ಏಯ್ ಬೇವಕೂಫ್, ಗೂಬೆ, ಭಗವಾನ್ ಶ್ರೀಕೃಷ್ಣನನ್ನು ಏಕೆ ಕತ್ತೆಯನ್ನಾಗಿ ಮಾಡುತ್ತಿದ್ದೀಯಾ? ಒಬ್ಬ ಕತ್ತೆ ನೀನು, ಇನ್ನೊಬ್ಬ ಕತ್ತೆ ನಾನು. ಏಕೆಂದರೆ ನಿನ್ನಂತಹ ಕತ್ತೆಗೆ ಪಾಠ ಹೇಳಿದ ಮೂರ್ಖತನ ಮಾಡಿದೆ ಅದಕ್ಕೆ) 

ಇದಕ್ಕೇ ಅಲ್ಲವೇ ಹಳ್ಳಿಯ ಗಾದೆ ಮಾತು ಬಂದಿರುವುದು: ಓದು ಒಕ್ಕಾಲು, ಬುದ್ಧಿ ಮುಕ್ಕಾಲು!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 8.3.2012