ಬದುಕಿನ ಮುಖವಾಡಗಳು....
ಈ ಭೂಮಂಡಲ ನೋಡಲು ತುಂಬಾ ಸುಂದರ. ಇಲ್ಲಿರುವ ನಯನ ಮನೋಹರವಾದ ಗಿಡ ಮರ ಬಳ್ಳಿಗಳು, ಆಹ್ಲಾದಕರವಾದ ಬಣ್ಣ ಬಣ್ಣದ ಹೂಗಳು, ಮೈಮನಸ್ಸುಗಳಿಗೆ ಮುದ ನೀಡುವ ತಂಗಾಳಿ, ಜುಳು ಜುಳು ಹರಿಯುವ ನದಿಗಳು, ಭೋರ್ಗರೆವ ಜಲಪಾತಗಳು, ಕವಲುದಾರಿಗಳಲ್ಲಿ ಕಣ್ಮನ ಸೆಳೆಯುವ ಹಳ್ಳಕೊಳ್ಳಗಳು, ಮೈಚಾಚಿ ನಿಂತ ಗುಡ್ಡ ಬೆಟ್ಟಗಳು, ಗಗನಚುಂಬಿಗಳಾದ ಪರ್ವತ ಶ್ರೇಣಿಗಳು, ದಿಗ್ ದಿಗಂತಗಳನ್ನು ದಾಟಿದ ಸಮುದ್ರಗಳು, ಕಲಾನಿಪುಣರಂತೆ ಆಗಸದಲ್ಲಿ ಚಣ ಚಣಕೆ ರಂಗು ರಂಗಿನ ಹೊಸ ಹೊಸ ಚಿತ್ತಾರ ಬಿಡಿಸುವ ಮನಮೋಹಕ ಮೋಡಗಳು, ಬಾನಂಗಳದಿಂದ ಶಿವನು ಸಿಡಿಮಿಡಿಗೊಂಡು ಗದರಿಸುವಂತೆ ಕಾಣುವ ಸಿಡಿಲು ಗುಡುಗು,ಒಂದೇ ಏಟಿಗೆ ಬಾಸುಂಡೆ ಮೂಡುವ ಹಾಗೆಭೂಮಿಗೆ ಹೊಡೆದ ಚಾಟಿ ಏಟೋ ಎಂಬತೆ ಝಟಿಲ್ ಎಂದು ಅಪ್ಪಳಿಸಿ ಕಣ್ಣುಕೋರೈಸುವ ಕೋಲ್ಮಿಂಚು, ಆ ಹೊಡೆತ ತಾಳಲಾರದೆ ನಲುಗಿದ ಭೂಮಿಯನ್ನು ಕಂಡು ಮರುಗಿದ ಮುಗಿಲು ಸುರಿಸುತ್ತಿರುವ ಕಣ್ಣೀರೋ ಎಂಬಂತೆ ಮೇಲಿನಿಂದ ಧಾರಾ ಪ್ರವಾಹವಾಗಿ ಸುರಿಯುವ ಜಡಿಮಳೆ! ಒಂದೇ ಎರಡೇ!
ಆನಂದಮಯ ಈ ಜಗಹೃದಯ
ಏತಕೆ ಭಯ? ಮಾಣೋ!
ಸೂರ್ಯೋದಯ ಚಂದ್ರೋದಯ
ದೇವರ ದಯ ಕಾಣೋ! - (ಕುವೆಂಪು)
ಎಂದು ಈ ಅದ್ಭುತ ಜಗತ್ತನ್ನು ನೋಡಿ ಉದ್ಗರಿಸಿತು ಕವಿಹೃದಯ. ಶಿವಮೊಗ್ಗ ಸುಬ್ಬಣ್ಣ ತನ್ನ ಗಡುಸು ದನಿಯಿಂದ ಇದನ್ನು ಹಾಡುವಾಗ ಮೈರೋಮಾಂಚನಗೊಳುತ್ತದೆ. ಈ ಸೃಷ್ಟಿಯ ಆರಂಭದಲ್ಲಿ ಪ್ರಕೃತಿಯ ಎದುರಿಗೆ ಕುಬ್ಜನಾಗಿ ಗುಹೆಗಳಲ್ಲಿ ಅಡಗಿ ಕುಳಿತಿದ್ದ ಮನುಷ್ಯ ಇಂದು ವಾಮನನಂತೆ ಆಕಾಶದೆತ್ತರಕ್ಕೆ ಬೆಳೆದು ತ್ರಿವಿಕ್ರಮನಾಗಿ ಬ್ರಹ್ಮಾಂಡದಿಂದತ್ತತ್ತ ಸಾಗಿದ್ದಾನೆ. ಪ್ರಕೃತಿಯ ಮೇಲೆ ಸಾಕಷ್ಟು ಹಿಡಿತವನ್ನು ಸಾಧಿಸಿರುವನಾದರೂ ತನ್ನ ಮೇಲೆಯೇ ಹಿಡಿತವನ್ನು ಕಳೆದುಕೊಂಡಿದ್ದಾನೆ! ಇಂದು ಇಡೀ ವಿಶ್ವವೇ ಒಂದು ಅಗ್ನಿಕುಂಡವಾಗಿದೆ. ಭೂಮಿಯೊಳಗೆ ಅಡಗಿದ ಲಾವಾರಸವು ಜ್ವಾಲಾಮುಖಿಯಾಗಿ ಘೂರ್ಣಿಸುತ್ತಾ ಉಕ್ಕಿ ಹರಿದು ಸುತ್ತಮುತ್ತಲ ಪ್ರದೇಶವನ್ನಷ್ಟೇ ದಗ್ಧಗೊಳಿಸಿದರೆ, ಆಧುನಿಕ ವಿಜ್ಞಾನಿಗಳು ಕಂಡುಹಿಡಿದ ಅಣ್ವಸ್ತ್ರಗಳು ಇಡೀ ವಿಶ್ವವನ್ನೇ ವಿಧ್ವಂಸಗೊಳಿಸುವ ಅತ್ಯಂತ ಅಪಾಯಕಾರಕ ಸ್ಥಿತಿಯನ್ನುಂಟು ಮಾಡಿವೆ. “ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದಡೆ ನಿಲಬಹುದೇ!” ಎಂದು ಎಂಟು ಶತಮಾನಗಳ ಹಿಂದೆ ಆಡಿದ ಬಸವಣ್ಣನವರ ಆತಂಕದ ಮಾತು ಇಂದು ಕರಾಳ ಸತ್ಯವಾಗತೊಡಗಿದೆ. ತನ್ನ ತಲೆಯ ಮೇಲೆಯೇ ಕೈಯಿಟ್ಟುಕೊಂಡು ಭಸ್ಮಗೊಂಡ ಭಸ್ಮಾಸುರನಂತೆ ಮನುಷ್ಯನು ತನ್ನ ನೆಲೆಯಾದ ಧರೆಯನ್ನೇ ಸುಟ್ಟು ಭಸ್ಮ ಮಾಡಬಲ್ಲ ಭಯಾನಕ ಶಕ್ತಿಯುಳ್ಳ ಅಣ್ವಸ್ತ್ರಗಳನ್ನು ಪಡೆದು ಮಾನವತೆಯನ್ನು ಸಂಪೂರ್ಣ ವಿನಾಶದ ಅಂಚಿಗೆ ತಳ್ಳಿದ್ದಾನೆ. ಸದಾ ಭಯ ತುಂಬಿದ ತುಮುಲತೆಯ ವಾತಾವರಣವನ್ನು ರೂಪಿಸಿದ್ದಾನೆ. The greatest tragedy of our day is that man has succeeded in splitting the atoms much before acquiring the wisdom to unite humanity. ಇಂದು ಮನುಷ್ಯ ಮಾನವತೆಯನ್ನು ಒಂದುಗೂಡಿಸುವಂತಹ ಮಾನವೀಯ ಗುಣಗಳನ್ನು ಸಂಪಾದಿಸುವ ಮೊದಲೇ ಪರಮಾಣುಗಳನ್ನು ವಿಭಜಿಸಿ ಮಾನವತೆಗೆ ಮಾರಕವಾಗುವ ಅಣ್ವಸ್ತ್ರಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿರುವುದು ಅತ್ಯಂತ ದುರದೃಷ್ಟಕರ. ಇದು ಪ್ರಕೃತಿಯ ರಹಸ್ಯವನ್ನು ಭೇದಿಸಲು ಯತ್ನಿಸಿದ ವಿಜ್ಞಾನಿಯ ತಪ್ಪೇ? ಖಂಡಿತಾ ಅಲ್ಲ. ಒಂದು ಚಾಕು ಒಬ್ಬ ಸದ್ ಗೃಹಿಣಿಯ ಕೈಗೆ ಸಿಕ್ಕರೆ ತರಕಾರಿಯನ್ನು ಹೆಚ್ಚಿ ರುಚಿ ರುಚಿಯಾದ ಭಕ್ಷ್ಯ ಭೋಜ್ಯಗಳನ್ನು ತಯಾರಿಸಲು ನೆರವಾಗಬಲ್ಲುದು. ಶಸ್ತ್ರವೈದ್ಯನ ಕೈಗೆ ಸಿಕ್ಕರೆ ಒಬ್ಬನ ಪ್ರಾಣ ಉಳಿಸಬಲ್ಲುದು. ಅದೇ ಚಾಕು ಕೊಲೆಗಾರನ ಕೈಗೆ ಸಿಕ್ಕರೆ ಒಬ್ಬನ ಪ್ರಾಣ ತೆಗೆಯಬಲ್ಲುದು. ಅದಕ್ಕಾಗಿ ಚಾಕುವನ್ನು ದೂಷಿಸುವುದು ವಿಹಿತವಲ್ಲ. ಚಾಕುವಿನಿಂದಾಗುವ ಒಳಿತು-ಕೆಡುಕುಗಳು ಚಾಕುವಿನಲ್ಲಿಲ್ಲ; ಅದನ್ನು ಹಿಡಿದ ಕೈಗಳಲ್ಲಿವೆ. ವಿಜ್ಞಾನ ನಾಗರೀಕತೆಯನ್ನು ಬೆಳೆಸಬಲ್ಲುದೇ ವಿನಾ ಸಂಸ್ಕೃತಿಯನ್ನು ಬೆಳೆಸಲಾರದು. ನಿಜವಾದ ಧರ್ಮವೊಂದೇ ಸಂಸ್ಕೃತಿಯನ್ನು ಬೆಳೆಸಲು ಸಾಧ್ಯ. ಮಾನವನ ಅಭ್ಯುದಯಕ್ಕೆಂದೇ ಹುಟ್ಟಿಕೊಂಡ ಧರ್ಮಗಳು (religions) ಇಂದು ದುರದೃಷ್ಟವಶಾತ್ ಮತಧರ್ಮಗಳಾಗಿ (sects) ಮಾನವೀಯ ಮೌಲ್ಯಗಳನ್ನು ಬೋಧಿಸುತ್ತಲೇ ಮಾನವತೆಗೆ ಮಾರಕವಾದ ಮತೀಯ ಸಂಘರ್ಷಕ್ಕೆ ಕಾರಣವಾಗಿವೆ.
ಇಂದು ವಿಜ್ಞಾನದಿಂದ ನಾಗರಿಕ ಸೌಲಭ್ಯಗಳು ಹೆಚ್ಚಿವೆ. ಆದರೆ ಸಾಂಸ್ಕೃತಿಕ ಮೌಲ್ಯಗಳು ಕುಸಿದು ಬಿದ್ದಿವೆ. ಒಬ್ಬನ ಕೈ ಮುರಿದರೆ ಅದನ್ನು ವಿಜ್ಞಾನವು ಮತ್ತೆ ಜೋಡಿಸಬಲ್ಲುದು. ಆದರೆ ಕೈ ನೀಡಿದವನಿಗೆ ಕೈ ಮುಗಿಯುವುದನ್ನು ಕಲಿಸಲು ಅದಕ್ಕೆ ಎಂದೂ ಸಾಧ್ಯವಿಲ್ಲ. ಮುರಿದ ಕೈಯನ್ನು ಯಾಂತ್ರಿಕವಾಗಿ ಜೋಡಿಸುವುದು ವಿಜ್ಞಾನವಾದರೆ, ಕೈಮುರಿದುಕೊಂಡ ವ್ಯಕ್ತಿಯ ನೋವನ್ನು ನೋಡಿ ಮರುಗಿ ಸಂತೈಸುವುದು ಮಾನವೀಯ ಧರ್ಮ! ಒಂದು ಬೌದ್ಧಿಕ ಸ್ತರದಲ್ಲಿ ನಡೆಯುವ ಭಾವನಾರಹಿತವಾದ ಯಾಂತ್ರಿಕ ಕ್ರಿಯೆಯಾದರೆ, ಮತ್ತೊಂದು ಅಂತಃಕರಣದಲ್ಲಿ ಮಿಡಿಯುವ ಭಾವನಾತ್ಮಕವಾದ ಕ್ರಿಯೆ. “ದಯವೇ ಧರ್ಮದ ಮೂಲವಯ್ಯಾ" ಎಂದು ಬಸವಣ್ಣನವರು ನುಡಿದದ್ದು ಈ ಎರಡನೆಯ ಅರ್ಥದಲ್ಲಿ.
ವಿಜ್ಞಾನದಿಂದ ಜನರು ಬಾಹ್ಯವಾಗಿ ತೀರಾ ಹತ್ತಿರಕ್ಕೆ ಬಂದಿದ್ದಾರೆ. ಆದರೆ ಆಂತರಿಕವಾಗಿ ಅಷ್ಟೇ ದೂರ ದೂರ ಸರಿದಿದ್ದಾರೆ. ರಸ್ತೆಗಳು ಜನರನ್ನು ಒಂದುಗೂಡಿಸುತ್ತದೆ (Roads bring people together ) ಎಂದು ರಸ್ತೆಯ ಪಕ್ಕದಲ್ಲಿ ಕೆಲವೆಡೆ ಹಾಕಿರುವ ಫಲಕವು ಜನರ ಶಾರೀರಿಕ ಸಾಮೀಪ್ಯವನ್ನು (Physical proximity) ಸೂಚಿಸಬಲ್ಲುದೇ ಹೊರತು ಭಾವನಾತ್ಮಕ ಸಂಬಂಧವನ್ನಲ್ಲ ( emotional affinity) ಒಬ್ಬರನ್ನೊಬ್ಬರು ಸಂಧಿಸುವುದು ಭಾವನಾತ್ಮಕ ಮಿಲನಕ್ಕೆ ದಾರಿ ಮಾಡಿಕೊಡಬಹುದು ಅಥವಾ ಮುಖಸಿಂಡರಿಸುವುದಕ್ಕೂ ಕಾರಣವಾಗಬಹುದು. ಇದು ಅವರವರ ಸಂಬಂಧ, ಅವರವರ ನಡೆ-ನುಡಿ ಮತ್ತು ಆಚಾರ-ವಿಚಾರಗಳನ್ನು ಅವಲಂಬಿಸಿರುತ್ತದೆ. ಐರೋಪ್ಯದೇಶಗಳ ರೈಲುಗಳಲ್ಲಿ ಒಂದೇ ಬೋಗಿಯಲ್ಲಿ ಅಕ್ಕ-ಪಕ್ಕದಲ್ಲಿಯೇ ಕುಳಿತು ಗಂಟೆಗಟ್ಟಲೆ ಪ್ರಯಾಣ ಮಾಡಿದರೂ ಪಕ್ಕದ ಸಹಪ್ರಯಾಣಿಕ ನಿಮ್ಮನ್ನು ಕ್ಯಾರೆ ಎಂದು ಮಾತನಾಡಿಸುವುದಿಲ್ಲ. ನೀವಾಗಿಯೇ ಮಾತನಾಡಿಸಿದರೆ ನಾಲ್ಕು ಮಾತುಗಳು. ಇಲ್ಲದಿದ್ದರೆ ಇಲ್ಲ,
ಒಮ್ಮೆ ಮುಂಬೈನಿಂದ ಲಂಡನ್ ಗೆ ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಪ್ರಯಾಣ ಮಾಡುವಾಗ ವಿದೇಶೀಯ ಸಹ ಪ್ರಯಾಣಿಕನೊಬ್ಬ ನಮ್ಮ ಪಕ್ಕದಲ್ಲಿಯೇ ಕುಳಿತಿದ್ದ. ಹಿಂದಿನ ಅನುಭವವನ್ನು ಮತ್ತಷ್ಟೂ ಖಚಿತಪಡಿಸಿಕೊಳ್ಳಲು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ಸುಮಾರು ಒಂಭತ್ತು ಗಂಟೆ ಪ್ರಯಾಣ. ಕೆಂಬಣ್ಣದ ಆ ದಢೂತಿ ವ್ಯಕ್ತಿ ಒಂದು ಘಂಟೆ ಕಳೆದರೂ ತುಟಿ ಪಿಟಕ್ಕೆನ್ನಲಿಲ್ಲ. ಕೆಲಹೊತ್ತು ಪತ್ರಿಕೆಯ ಪುಟಗಳಲ್ಲಿ ಕಣ್ಣನ್ನು ಕೊಕ್ಕರಿಸಿ ಕುಳಿತಿದ್ದ. ನಂತರ ಗೀತೆಯ ಸ್ಥಿತಪ್ರಜ್ಞನಂತೆ ಕಣ್ಮುಚ್ಚಿ ಸೀಟಿಗೊರಗಿದ. ಗಗನಸಖಿಯೊಬ್ಬಳು ದೀರ್ಘಕಾಲದ ಪ್ರಯಾಣದ ಬೇಸರಿಕೆಯನ್ನು ನಿವಾರಿಸಲು ರೇಡಿಯೋ ಕೇಳಬಯಸುವವರಿಗೆ ಕಿವಿಗೆ ಹಾಕಿಕೊಳ್ಳುವ ನಳಿಕೆಯನ್ನು (ear phone) ವಿತರಣೆ ಮಾಡುತ್ತಾ ಬಂದಳು. ಆತ ಅನಾಸಕ್ತಿಯಿಂದಲೇ ಕಣ್ತೆರೆದು ಅವಳಿಂದ ಪಡೆದ. ನಮ್ಮ ಕಡೆ ತಿರುಗಿ ಸೀಟಿನ ಪಕ್ಕದಲ್ಲಿದ್ದ ರೇಡಿಯೋ ಚಾನಲ್ಗೆ ಆ ನಳಿಕೆಯನ್ನು ಜೋಡಿಸಿ ಇನ್ನೇನು ಕಿವಿಗೆ ಹಚ್ಚಿಕೊಳ್ಳಲಿದ್ದ. ಅಷ್ಟರಲ್ಲಿ ಅವನ ಗಮನ ಸೆಳೆದು ಆತನನ್ನು ನಾವಾಗಿಯೇ ಮಾತಿಗೆ ಎಳೆದೆವು. ಆತನೊಬ್ಬ ಬ್ರಿಟಿಷ್ ನಾಗರಿಕ, ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದ. ರಜೆಗೆ ಬಂಧುಗಳನ್ನು ನೋಡಲೋಸುಗ ಸ್ವದೇಶಕ್ಕೆ ಹಿಂತಿರುಗುತ್ತಿದ್ದ. ಸೀಟಿನ ಎದುರುಗಡೆ ಒಂದು ರಮ್ಯವಾದ ತೈಲಚಿತ್ರವಿತ್ತು. ವಿಹಾರದ ದೋಣಿಯೊಂದು ಚಲಿಸುವ ಸುಂದರವಾದ ಸರೋವರದ ದೃಶ್ಯ. ಅದರ ದಡದಲ್ಲಿ ಮನಮೋಹಕವಾದ ಪುರಾತನ ಕಾಲದ ಒಂದು ಕೋಟೆ. ತನ್ನ ಹುಟ್ಟೂರಿನ ಸಮೀಪದ ಐತಿಹಾಸಿಕ ಸ್ಥಳವೆಂದು ಹೆಮ್ಮೆಯಿಂದ ಆತ ಹೇಳಿಕೊಂಡ. ಮಾತಿನ ಮಧ್ಯೆ ನೀವೇಕೆ ಅಪರಿಚಿತರನ್ನು ಸಂಧಿಸಿದಾಗ ಮಾತನಾಡಿಸುವ ಉತ್ಸುಕತೆಯನ್ನು ತೋರಿಸುವುದಿಲ್ಲವೆಂದು ನೇರವಾಗಿ ಕೇಳಿಯೇ ಬಿಟ್ಟೆವು. ಅದಕ್ಕೆ ಅವನು ನೀಡಿದ ನೇರ ಉತ್ತರ: “The person sitting next to you may be a gentleman or a smuggler. Who knows? We neither Want to trouble others nor We wish to get into trouble!” (ನಿಮ್ಮ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿ ಸಭ್ಯನಿರಬಹುದು ಅಥವಾ ಕಳ್ಳಸಾಗಣೆದಾರನಿರಬಹುದು. ಯಾರಿಗೆ ಗೊತ್ತು? ನಾವು ಇನ್ನೊಬ್ಬರಿಗೆ ತೊಂದರೆ ಕೊಡಲು ಇಷ್ಟಪಡುವುದಿಲ್ಲ) ನಾವೂ ಸಹ ತೊಂದರೆಗೆ ಸಿಕ್ಕಿಹಾಕಿಕೊಳ್ಳಲು ಇಷ್ಟಪಡುವುದಿಲ್ಲ. ಇಬ್ಬರಿಗೂ ಬೇಕಾದ ಮೂರನೆಯವರೊಬ್ಬರು ಬಂದು ಪರಿಚಯ ಮಾಡಿಕೊಡುವವರೆಗೂ ಅಪರಿಚಯಸ್ಥರನ್ನು ಮಾತನಾಡಿಸಬಾರದೆಂದೇ ಆ ದೇಶದಲ್ಲಿ ಮಕ್ಕಳಿಗೆ ಕಲಿಸಲಾಗುತ್ತದೆ. ಇದನ್ನು ಲೇವಡಿ ಮಾಡುವ ಒಂದು ಹಾಸ್ಯ ಚಟಾಕಿ ಹೀಗಿದೆ: ಉದ್ಯಾನವನದಲ್ಲಿ ಮಗುವೊಂದು ಆಡುತ್ತಾ ಬಂದು ಕೊಳದಲ್ಲಿ ಕಾಲು ಜಾರಿ ನೀರೊಳಗೆ ಬಿತ್ತು. ವಿಲಿವಿಲಿ ಒದ್ದಾಡುತ್ತಾ ನೀರಿನಲ್ಲಿ ಮುಳುಗುತ್ತಿತ್ತು. ಆದರೂ ಪಕ್ಕದಲ್ಲಿಯೇ ಇದ್ದ ಇಬ್ಬರು ಮಹಾನುಭಾವರು ಹಾಗೆಯೇ ನೋಡುತ್ತಿದ್ದರು. ಮಗುವಿನ ರಕ್ಷಣೆಗೆ ಧಾವಿಸಲಿಲ್ಲ. ಮಗು ಉಸಿರುಕಟ್ಟಿ ಸತ್ತೇ ಹೋಯಿತು. ಪೋಲೀಸರು ಬಂದು ಮಹಜರು ಮಾಡಿದರು. ಕೊಳದ ಪಕ್ಕದಲ್ಲಿ ಕುಳಿತಿದ್ದ ಆ ವ್ಯಕ್ತಿಗಳನ್ನು ನೀವು ಮಗು ಮುಳುಗುವುದನ್ನು ನೋಡಿದಿರಾ?” ಎಂದು ಕೇಳಿದರು. ಹೌದು ಎಂದು ಅವರು ಉತ್ತರಿಸಿದರು. ಹಾಗಾದರೆ ನೀವೇಕೆ ಮಗುವನ್ನು ಉಳಿಸಲು ಯತ್ನಿಸಲಿಲ್ಲ? ಎಂದು ಕೇಳಿದರು. ಅದಕ್ಕೆ ಆ ಮಹಾನುಭಾವರು ಹೇಳಿದರು: ನೋಡಿ, ಆ ಮಗು ಯಾರದೆಂದು ನಮಗೆ ಯಾರೂ ಪರಿಚಯ ಮಾಡಿಕೊಡಲಿಲ್ಲ! (Look, nobody introduced to us as to whose child it was!).
ನಮ್ಮ ದೇಶದ ರೈಲು, ಬಸ್ಸುಗಳಲ್ಲಿ ಪ್ರಯಾಣಿಕರು ಒಬ್ಬರಿಗೊಬ್ಬರು ಅಪರಿಚಯಸ್ಥರಾದರೂ ಒಂದು ಗಂಟೆಯ ಪ್ರಯಾಣದೊಳಗೆ ಯಾವುದೋ ಜನ್ಮದ ಬಂಧುಗಳಾಗಿ ಬಿಡುತ್ತಾರೆ.ತಮ್ಮ ಸುಖ ದುಃಖಗಳನ್ನು,ನೋವು ನಲಿವುಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ, ತಿಂಡಿ ತಿನಿಸುಗಳು ಕೈಯಲ್ಲಿದ್ದರೆ ಆತ್ಮೀಯವಾಗಿ ಹಂಚಿಕೊಂಡು ತಿನ್ನುತ್ತಾರೆ ಇಳಿಯುವಾಗ ಕಣ್ತುಂಬಾ ನೀರು ತಂದು ಪರಸ್ಪರರ ವಿಳಾಸಗಳನ್ನು ಬರೆಸಿಕೊಳ್ಳುತ್ತಾರೆ, ಆದರೆ ಅವರು ಸಂಧಿಸುವುದು ಮಾತ್ರ ಆಕಸ್ಮಿಕವಾಗಿ ಮುಂದಿನ ಬಸ್ಸಿನಲ್ಲೋ ಅಥವಾ ಮುಂದಿನ ಜನ್ಮದಲ್ಲೋ! ಅದೇನೇ ಇರಲಿ ಒಟ್ಟಿಗೆ ಇರುವಷ್ಟು ಕಾಲ ಆತ್ಮೀಯ ಬಂಧುಗಳಾಗಿ ವರ್ತಿಸುತ್ತಾರೆ. ಅಗಲಿಕೆಯ ಭಾರ ಹೊತ್ತು ಇಳಿಯುತ್ತಾರೆ. ಭಾರತೀಯರ ಈ ಸ್ವಭಾವ ಮೆಚ್ಚುವಂತಹದು. ಅದೇ ಜರ್ಮನರು ರೈಲು, ಬಸ್ಸು ಹತ್ತಿ ಪಕ್ಕದ ಸೀಟಿನಲ್ಲಿ ಬಂದು ಕುಳಿತುಕೊಳ್ಳುವಾಗ “Guten Morgen” ಎಂದು ಗೌರವದಿಂದ ಅವರ ತಲೆಯ ಮೇಲಿರುವ ಹ್ಯಾಟನ್ನು ಎತ್ತಿಹಿಡಿಯುತ್ತಾರೆ. ಕುಳಿತುಕೊಳ್ಳಲು ದಾರಿ ಮಾಡಿಕೊಟ್ಟಾಗ “Danke schon” ಎಂದು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಇಳಿದು ಹೋಗುವಾಗ ಮುಗುಳ್ನಗುತ್ತಾ “Auf Wiedersehen” ಎಂದು ಕೈಬೀಸಿ ಹೋಗುತ್ತಾರೆ. ನಾವು ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವಾಗ ಮೊದಮೊದಲು ನೋಡಿದ ನಮಗೆ ಅವರ ಸೌಜನ್ಯಕ್ಕಾಗಿ ಹೃದಯ ತುಂಬಿ ಬಂದರೂ, ಕ್ರಮೇಣ ಅವು ಅವರ ಹೃದಯದ ಅಂತರಾಳದಿಂದ ಬಂದ ಭಾವನಾರ್ದ್ರ ಮಾತುಗಳಲ್ಲವೆಂದೂ, ಕೇವಲ ಶಿಷ್ಟಾಚಾರಕ್ಕೆ ಹೇಳುವ ಆಧುನಿಕ ನಾಗರಿಕ ಸಮಾಜದ ಮೇಲ್ದುಟಿಯ ಮಾತುಗಳೆಂದೂ ಅರ್ಥವಾದಾಗ ಆದ ವೇದನೆ ಅಷ್ಟಿಷ್ಟಲ್ಲ.
ಸುಮಾರು 30 ವರ್ಷಗಳ ಹಿಂದೆ ಅಮೇರಿಕೆಯಲ್ಲಿ ಡಾ| ಕ್ಲಾರ್ಕ್ ಎಂಬ ದಂತ ವೈದ್ಯ ಹೃದ್ರೋಗದಿಂದ ಸಾವಿನ ದವಡೆಯಲ್ಲಿದ್ದ. ಅವನ ರೋಗಗ್ರಸ್ತ ಹೃದಯವನ್ನು ಕತ್ತರಿಸಿ ತಟ್ಟೆಯಲ್ಲಿ (tray) ತೆಗೆದಿಟ್ಟರು. ಅದರ ಸ್ಥಾನದಲ್ಲಿ ಕೃತಕವಾದ ಪ್ಲಾಸ್ಟಿಕ್ ಹೃದಯವನ್ನು ಯಶಸ್ವಿಯಾಗಿ ಅಳವಡಿಸಿದರು. ಆ ಪ್ಲಾಸ್ಟಿಕ್ ಹೃದಯ ಟಿಕ್ ಟಿಕ್ ಎಂದು ಬಡಿಯಲಾರಂಭಿಸಿತು. ರಕ್ತ ಧಮನಿ ಧಮನಿಗಳಲ್ಲಿ ಹರಿಯತೊಡಗಿತು. ಸುಮಾರು ಮೂರು ತಿಂಗಳ ಕಾಲ ಡಾ|| ಕ್ಲಾರ್ಕ್ ಬದುಕಿದ. ತನ್ನ ಮಡದಿ ಮಕ್ಕಳು ಮತ್ತು ಮಿತ್ರರೊಂದಿಗೆ ಎಂದಿನಂತೆ ಮಾತನಾಡಿದ. ಎಂತಹ ಅತ್ಯದ್ಭುತ ವೈದ್ಯಕೀಯ ಸಾಧನೆ ಇದು! ಮುಂದೊಂದು ದಿನ ಮನುಷ್ಯನ ಶರೀರದ ಎಲ್ಲ ಅವಯವಗಳೂ ಮಾರುಕಟ್ಟೆಯಲ್ಲಿ ಕಾರಿನ ಬಿಡಿಭಾಗಗಳು (spare parts) ದೊರೆಯುವಂತೆ ಔಷಧಿ ಅಂಗಡಿಗಳಲ್ಲಿ ದೊರೆತಾವು. ವಿವಿಧ ಕಂಪನಿಗಳು ಇವುಗಳ ನಾನಾ ವಿಧವಾದ ಆಕರ್ಷಕ ಮಾಡೆಲ್ಗಳನ್ನು ತಯಾರಿಸಿಯಾವು. ಕೃತಕ ಹೃದಯ! ಕೃತಕ ನಾಲಿಗೆ, ಕೃತಕ ಕಾಲುಗಳು, ಕೃತಕ ಕೈಗಳು, ಕೃತಕ ಹಲ್ಲುಗಳು, ಕೃತಕ ಕಣ್ಣುಗಳು, ಕೃತಕ ಮೂತ್ರಪಿಂಡ! ಎಲ್ಲವೂ ಕೃತಕ, ದಂಡಪಿಂಡ! ಅಂತೆಯೇ ನೋಡುವ ದೃಷ್ಟಿ ಕೃತಕ! ಆಡುವ ನುಡಿ ಕೃತಕ! ಇಡುವ ಹೆಜ್ಜೆ ಕೃತಕ! ಮಾಡುವ ಕ್ರಿಯೆ ಕೃತಕ! ಹೆಚ್ಚೇನು ಹೃದಯದ ಭಾವನೆಗಳೂ ಕೃತಕ!
ಅವಳ ವಚನ ಬೆಲ್ಲದಂತೆ, ಹೃದಯದಲ್ಲಿಪ್ಪುದು ನಂಜು ಕಂಡಯ್ಯಾ
ಕಂಗಳಲೊಬ್ಬನ ಕರೆವಳು, ಮನದಲೋಬ್ಬನ ನೆರೆವಳು
ಕೂಡಲಸಂಗಮ ದೇವ ಕೇಳಯ್ಯಾ,
ಮಾನಿಸಗಳ್ಳೆಯ ನಂಬದಿರಯ್ಯಾ!
ಸಂಸಾರದಲ್ಲಿ ಹೆಂಡತಿ ಗಂಡನಿಗೆ ವಂಚನೆಮಾಡುತ್ತಾಳೆ, ಗಂಡ ಹೆಂಡತಿಗೆ ವಂಚನೆಮಾಡುತ್ತಾನೆ. ಇಬ್ಬರೂ ಒಬ್ಬರನ್ನೊಬ್ಬರಿಗೆ ಮರೆಮಾಚಲು ಕೃತ್ರಿಮ ಭಾವನೆಗಳ ಮುಖವಾಡ ಧರಿಸುತ್ತಾರೆ. ಹಾಗೆ ನೋಡಿದರೆ ಈ ಲೋಕದಲ್ಲಿ ಎಲ್ಲರೂ ಮಾನಿಸಗಳರೇ, ಮುಖವಾಡಧಾರಿಗಳೇ! ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಮತ್ತೊಬ್ಬ ವ್ಯಕ್ತಿಗೆ ಕಾಣಿಸದಂತೆ ಒಂದಲ್ಲ ಒಂದು ತೆರನಾದ ಮುಖವಾಡ ಧರಿಸಿರುತ್ತಾನೆ. ಆಯಾಯ ವ್ಯಕ್ತಿಯ ಸಂಬಂಧಕ್ಕನುಗುಣವಾಗಿ ವಿಭಿನ್ನ ರೀತಿಯ ಮುಖವಾಡ ಧರಿಸುತ್ತಾನೆ. ವ್ಯಕ್ತಿ ತಾನಿರುವುದೇ ಒಂದು, ಲೋಕಕ್ಕೆ ಕಾಣಿಸುವುದೇ ಒಂದು. ಎದುರಿಗೆ ನಮಸ್ಕರಿಸಿ ಬೆನ್ನ ಹಿಂದೆ ಕಾಲೆಳೆವ ಧೂರ್ತತನ, ಕೃತ್ರಿಮತೆ, ನಯವಂಚನೆ ಲೋಕದ ಜನರ ನೈಜಗುಣಗಳೇ ಆಗಿಬಿಟ್ಟಿವೆ. ಇಂತಹ ಡಾಂಭಿಕ ಜೀವನವನ್ನು, ಆಷಾಡಭೂತಿತನವನ್ನು ಕಂಡು ಬಸವಣ್ಣನವರು ಹೇಳುತ್ತಾರೆ:
ತನುವಿನಲ್ಲೊಂದಿಟ್ಟು ಮನದಲ್ಲೆರಡಿಟ್ಟಿಡೆ
ಬಲ್ಲನೊಲ್ಲನಯ್ಯಾ ಲಿಂಗವು, ಬಲ್ಲನೊಲ್ಲನಯ್ಯಾ
ಒಳಗೆ ಕುಟಿಲ, ಹೊರಗೆ ವಿನಯವಾಗಿ ಭಕ್ತರೆನಿಸಿಕೊಂಬವರ
ಬಲನೊಲ್ಲನಯ್ಯಾ ಲಿಂಗವು
ಆವರು ಸತ್ ಪಥಕ್ಕೆ ಸಲ್ಲರು, ಸಲ್ಲರಯ್ಯಾ!
ಮನುಷ್ಯನ ಕುಟಿಲತೆ ಲೌಕಿಕ ಜನರನ್ನು ಮೋಸಗೊಳಿಸಬಹುದು. ಆದರೆ ತನ್ನೊಳಗಿರುವ ಸಾಕ್ಷೀಚೈತನ್ಯವನ್ನು ಮಾತ್ರ ಎಂದೂ ಮೋಸಗೊಳಿಸಲಾಗದು. ಭಕ್ತನೊಬ್ಬ ಗುಡಿಯಲ್ಲಿರುವ ದೇವರ ವಿಗ್ರಹಕ್ಕೆ ಬೆಳ್ಳಿ/ಬಂಗಾರದ ಮುಖಪದ್ಮವನ್ನು ಹೊದಿಸಬಹುದು. ಆ ಮುಖಪದ್ಮ ಅವನ ಕೃತ್ರಿಮ ಭಕ್ತಿಯ ಮುಖವಾಡ. ಅದರ ಹಿಂದಿರುವ ಕುಟಿಲತೆಯನ್ನು ಸರ್ವಜ್ಞನಾದ ದೇವರು ಗಮನಿಸದೇ ಇರಲಾರ. ಅವನೆಂದಿಗೂ ಆ ಕಳ್ಳ ಭಕ್ತನಿಗೆ ಒಲಿಯಲಾರ. ಯಾರೂ ಯಾವ ಮುಖವಾಡದಿಂದಲೂ ತಮ್ಮ ಅಂತಃಸಾಕ್ಷಿಯನ್ನು ವಂಚಿಸಲು ಸಾಧ್ಯವಿಲ್ಲ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ:11.6.2008.