ಡಿ.ಎಲ್.ಎನ್ - ಒಂದು ಸವಿ ನೆನಪು

  •  
  •  
  •  
  •  
  •    Views  

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ 1965 ರಿಂದ 67 ರವರೆಗೆ ಬಿ.ಎ. ಅಭ್ಯಾಸ ಮಾಡುತ್ತಿದ್ದ ಅವಧಿಯ ಒಂದು ಹಸಿರಾದ ನೆನಪು. ಕನ್ನಡ ಮತ್ತು ಸಂಸ್ಕೃತ ನಮ್ಮ ಐಚ್ಛಿಕ ವಿಷಯಗಳಾಗಿದ್ದವು. ಪಿ.ಯು.ಸಿ. ವರೆಗೂ ವಿಜ್ಞಾನದ ಒಳ್ಳೆಯ ವಿದ್ಯಾರ್ಥಿಯಾಗಿದ್ದ ನಮಗೆ ಎಲ್ಲರೂ ವಿಜ್ಞಾನ ಓದುತ್ತಾರೆ, ನೀನು ಸಾಹಿತ್ಯ ಓದು ಎಂದು ಆಜ್ಞಾಪಿಸಿ, ಕನ್ನಡ ಮತ್ತು ಸಂಸ್ಕೃತವನ್ನು ಓದುವಂತೆ ಪ್ರೇರೇಪಿಸಿದವರು ನಮ್ಮ ಪರಮಾರಾಧ್ಯ ಗುರುವರ್ಯರಾದ ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಹೀಗೆ ವಿಜ್ಞಾನದಿಂದ ಸಾಹಿತ್ಯಕ್ಕೆ ಪಕ್ಷಾಂತರಗೊಂಡದ್ದು ನಮ್ಮ ಅಭಿರುಚಿಗಿಂತ ಹೆಚ್ಚಾಗಿ ಗುರುಕೃಪೆಯೆಂದೇ ಹೇಳಬೇಕು. ಯುವರಾಜ ಕಾಲೇಜಿನಿಂದ ಮಹಾರಾಜ ಕಾಲೇಜಿಗೆ ಪದಾರ್ಪಣೆಮಾಡಿದಾಗ ಬೇಸರಗೊಂಡವರು ನಮ್ಮ ವಿಜ್ಞಾನದ ಅಧ್ಯಾಪಕರು, ಸಂಸ್ಕೃತ ಓದಿದರೆ ಯಾವ ಭವಿಷ್ಯವಿದೆ? ಎಂದು ಅಸಮಾಧಾನದ ಮಾತುಗಳನ್ನಾಡಿದರು. ಆದರೆ ಗುರುಗಳ ಆದೇಶದಂತೆ ತಪ್ಪದೆ ನಡೆದುಕೋ ಎಂದು ಪ್ರೋತ್ಸಾಹಿಸಿದವರು ಗುರುಭಕ್ತಿಪಾರಾಯಣರಾಗಿದ್ದ ನಮ್ಮ ಪೂರ್ವಾಶ್ರಮದ ತಂದೆತಾಯಿಗಳು.

ಕನ್ನಡ ಸಾಹಿತ್ಯದ ಹಿರಿಯ ತಲೆಮಾರಿನ ದಿಗ್ಗಜಗಳಾದ ಕುವೆಂಪು, ಡಿ.ಎಲ್.ಎನ್., ತೀ.ನಂ.ಶ್ರೀ. ಮೊದಲಾದವರು ಇನ್ನೂ ಬದುಕಿದ್ದ ಕಾಲವದು. ಕನ್ನಡ ಸಾರಸ್ವತಲೋಕದಲ್ಲಿ ಹಳೆಗನ್ನಡದ ಚಲಿಸುವ ಶಬ್ದಕೋಶ (Moving Dictionary) ಎಂದೇ ಪ್ರಸಿದ್ದರಾಗಿದ್ದ ಡಿ.ಎಲ್. ನರಸಿಂಹಾಚಾರ್ಯರನ್ನು ನಾವು ಮೊಟ್ಟ ಮೊದಲಿಗೆ ನೋಡಿದ್ದು ಒಂದು ಸನ್ಮಾನ ಸಮಾರಂಭದಲ್ಲಿ, ಕಚ್ಚೆಪಂಚೆ, ಕೋಟು, ಹಣೆಯ ಮಧ್ಯಭಾಗದಲ್ಲಿ ನೀಳವಾದ ಉದ್ದನೆಯ ನಾಮ, ತಲೆಯ ಮೇಲೆ ಪೇಟ, ದುಂಡನೆಯ ಮುಖ, ಸ್ವಲ್ಪ ಸ್ಥೂಲವಾದ ಶರೀರ. ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆ ಮಾತಿನಂತಹ ಅಪರೂಪದ ವ್ಯಕ್ತಿತ್ವ. ಮೈಸೂರು ಮಹಾರಾಜ ಕಾಲೇಜಿನ ಪಕ್ಕದಲ್ಲಿಯೇ ಇರುವ ಶತಮಾನೋತ್ಸವ ಸಭಾಂಗಣ (Centinary Hall) ದಲ್ಲಿ ಡಿ.ಎಲ್.ಎನ್ ರವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭವು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಸಹಪಾಠಿಗಳಾಗಿದ್ದ ತೀ.ನಂ. ಶಂಕರನಾರಾಯಣ, ಕಾಳೇಗೌಡ  ನಾಗವಾರ, ಪಿ.ಕೆ. ರಾಜಶೇಖರ, ಆಲನಹಳ್ಳಿ ಶ್ರೀಕೃಷ್ಣ, ರಾಮದಾಸ್ ಮತ್ತಿತರ ಮಿತ್ರರು ಜೊತೆಯಲ್ಲಿದ್ದ ನೆನಪು. ಸಮಾರಂಭ ನಡೆದದ್ದು ಖಚಿತವಾಗಿ ಯಾವ ವರ್ಷ, ಏತಕ್ಕಾಗಿ ಸನ್ಮಾನ ಮತ್ತು ಭಾಗವಹಿಸಿದ ಇತರೆ ಪ್ರತಿಷ್ಠಿತ ವ್ಯಕ್ತಿಗಳು ಯಾರು ಯಾರು ಎಂಬುದು ಈಗ ನಮಗೆ ನೆನಪಿನಲ್ಲಿಲ್ಲ. ಆದರೆ ನಮ್ಮ ಸ್ಮೃತಿಯಲ್ಲಿ ಅಚ್ಚಳಿಯದೆ ಉಳಿದಿರುವುದೆಂದರೆ ಆ ಸಂದರ್ಭದಲ್ಲಿ ಶ್ರೀ ಡಿ.ಎಲ್. ನರಸಿಂಹಾಚಾರ್ಯರು ಆಡಿದ ಕೆಲವು ಮಾತುಗಳು ಮಾತ್ರ. ತಮ್ಮ ಪ್ರಗಲ್ಭಪಾಂಡಿತ್ಯದಿಂದ ಕನ್ನಡಸಾಹಿತ್ಯ ಸಂಶೋಧನೆಗೆ ದೊಡ್ಡಬೆಲೆಯನ್ನು ತಂದುಕೊಟ್ಟ ಡಿ.ಎಲ್.ಎನ್. (ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್) ಅವರು ನಿಧನ ಹೊಂದಿದ್ದು ನಾಲ್ಕು ದಶಕಗಳ ಹಿಂದೆ (1971) ಇದೇ ಮೇ ತಿಂಗಳು 7 ರಂದು. ತನ್ನಿಮಿತ್ತ ಈ ಲೇಖನ. 

ಹೆಸರಾಂತ ವಿದ್ವಾಂಸರಾಗಿದ್ದ ಡಿ.ಎಲ್.ಎನ್ ರವರು ಅಂತಹ ಹೇಳಿಕೊಳ್ಳುವಂತಹ ವಾಗ್ಮಿಗಳೇನೂ ಆಗಿರಲಿಲ್ಲ. ವೈದುಷ್ಯಕ್ಕೂ ವಾಕ್‌ ಪಟುತ್ವಕ್ಕೂ ಸಂಬಂಧವಿಲ್ಲವೆಂದೇ ಹೇಳಬೇಕು. ಅದಕ್ಕೆ ಡಿ.ಎಲ್.ಎನ್. ಅವರೇ ಒಂದು ಉತ್ತಮ ನಿದರ್ಶನ. ಪಾಂಡಿತ್ಯವು ಉತ್ತಮ ವಾಗ್ಮಿಯಾಗಲು ಸಹಾಯಕವಾಗಬಲ್ಲುದೇ ಹೊರತು ಕೇವಲ ಪಾಂಡಿತ್ಯದಿಂದಲೇ ವಾಕ್ ಸಿದ್ಧಿಯು ಕರಗತವಾಗಲು ಸಾಧ್ಯವಿಲ್ಲ. ಅದೇ ರೀತಿ ಒಳ್ಳೆಯ ಮಾತುಗಾರಿಕೆಯು ಪಾಂಡಿತ್ಯದ ಪ್ರತೀಕವಾಗಬಹುದಾದರೂ, ವಾಚಾಳಿಗಳೆಲ್ಲರೂ ಪಂಡಿತರಾಗಿರಲು ಸಾಧ್ಯವಿಲ್ಲ. ಹುರುಳಿಯನ್ನು ಹುರಿದಂತೆ ಪಟಪಟನೆ ಗಂಟೆಗಟ್ಟಲೆ ಮಾತನಾಡುವ ವಾಕ್‌ ಪಟುಗಳು ಇದ್ದಾರೆ. ಆದರೆ ಮಂತ್ರಕ್ಕಿಂತ ಉಗಳೇ ಜಾಸ್ತಿ ಎಂಬ ನಾಣ್ಣುಡಿಯಂತೆ ಅವರ ಮಾತುಗಳು! ಬಹಳ ಚೆನ್ನಾಗಿ ಮಾತನಾಡಿದರು ಎಂದು ಜನ ಉದ್ಧರಿಸಿದರೂ ಕೊನೆಯಲ್ಲಿ ಒಂದು ನಿಮಿಷ ಮೌನವಾಗಿ ಕುಳಿತು ಅವರು ಏನನ್ನು ಮಾತನಾಡಿದರೆಂದು ಮೆಲಕು ಹಾಕಿದರೆ ಮನಸ್ಸಿನಲ್ಲಿ ಉಳಿಯುವಂತಹದು ಏನೂ ಸಿಕ್ಕುವುದಿಲ್ಲ. ಪ್ರಗಲ್ಭ ಪಾಂಡಿತ್ಯವನ್ನು ಹೊಂದಿದ್ದ ಡಿ.ಎಲ್.ಎನ್ ರವರ ಮಾತು ಅಂತಹ ಜೊಳ್ಳು ಮಾತು ಆಗಿರಲಿಲ್ಲವೆಂಬುದಕ್ಕೆ ಅವರು 45 ವರ್ಷಗಳ ಹಿಂದೆ ಆಡಿದ ಮಾತು ನಮ್ಮ ಸ್ಮೃತಿಪಟಲದಲ್ಲಿ ಇನ್ನೂ ಉಳಿದಿರುವುದೇ ಸಾಕ್ಷಿ.

ಸನ್ಮಾನಕ್ಕೆ ಉತ್ತರವನ್ನು ನೀಡುತ್ತಾ ಅವರು ತಮಗೆ ನೀಡಿದ ಸನ್ಮಾನವನ್ನು ನಾಲ್ಕು ಭಾಗಗಳಾಗಿ ವಿಭಾಗಿಸುವುದಾಗಿ ಹೇಳಿದರು. ಅದರಲ್ಲಿ ಮೊದಲನೆಯ ಭಾಗವು ಯಾರ ಪದತಲದಲ್ಲಿ ಕುಳಿತು ಅಧ್ಯಯನ ಮಾಡಿದರೋ “ಆ ನನ್ನ ವಿದ್ಯಾಗುರುಗಳಿಗೆ ಸಲ್ಲಬೇಕು” ಎಂದು ತುಂಬಾ ವಿನಯಪೂರ್ವಕವಾಗಿ ನುಡಿದರು. “ಎರಡನೆಯ ಭಾಗವು ನನ್ನ ತರಗತಿಯ ವಿದ್ಯಾರ್ಥಿಗಳಿಗೆ ಸಲ್ಲಬೇಕು” ಎಂದು ತುಂಬಾ ಅಭಿಮಾನದಿಂದ ಹೇಳಿಕೊಂಡರು. ಅದಕ್ಕೆ ಅವರು ಕೊಟ್ಟ ಕಾರಣವೆಂದರೆ ಕೆಲವು ಜಾಣ ವಿದ್ಯಾರ್ಥಿಗಳು ತರಗತಿಯಲ್ಲಿ ಅನೇಕ ಕ್ಲಿಷ್ಟ ಪ್ರಶ್ನೆಗಳನ್ನು ಕೇಳಿ ಅವುಗಳಿಗೆಲ್ಲಾ ತಕ್ಷಣವೇ ಉತ್ತರ ಕೊಡಲು ಸಾಧ್ಯವಾಗದೆ ಅವರನ್ನು ತಬ್ಬಿಬ್ಬಾಗಿಸಿ ಆಲೋಚನಾಪರರನ್ನಾಗಿ ಮಾಡುತ್ತಿದ್ದರಂತೆ. ನಾಳೆ ಆಲೋಚಿಸಿ ಉತ್ತರ ಹೇಳುವುದಾಗಿ ಆಶ್ವಾಸನೆ ನೀಡಿ ಸರಿಯಾದ ಉತ್ತರಕ್ಕಾಗಿ ಮತ್ತಷ್ಟೂ ಓದುತ್ತಿದ್ದರಂತೆ. ಹೀಗಾಗಿ ತಮ್ಮ ಅಧ್ಯಯನಕ್ಕೆ, ಹೆಚ್ಚಿನ ಜ್ಞಾನಾರ್ಜನೆಗೆ ವಿದ್ಯಾರ್ಥಿಗಳೇ ಪ್ರೇರಕ ಶಕ್ತಿ ಎಂಬುದು ಅವರ ಸೌಜನ್ಯಪೂರ್ಣ ನಿಲವು. “ಇನ್ನು ಮೂರನೆಯ ಭಾಗವು ನನ್ನ ಧರ್ಮಪತ್ನಿಗೆ ಸಲ್ಲಬೇಕು” ಎಂದು ಮುಗುಳ್ನಗುತ್ತಾ ನುಡಿದರು. ಏನು ಕಾರಣವಿರಬಹುದೆಂದು ಕಿವಿಯಗಲಿಸಿ ಕೇಳುತ್ತಿದ್ದ ಸಭಿಕರಿಗೆ ಅವರು ಕೊಟ್ಟ ಕಾರಣವೆಂದರೆ “ಏನೋ ಬಡಪಾಯಿ ಮೇಷ್ಟ್ರು ಓದಿಕೊಳ್ಳಲಿ” ಎಂದು ಅವರ ಹೆಂಡತಿ ಅವರಿಗೆ ಏನೂ ಕಾಟ ಕೊಡುತ್ತಿರಲಿಲ್ಲವಂತೆ! ಹೊತ್ತಿಗೆ ಸರಿಯಾಗಿ ಕಾಫಿ ತಿಂಡಿ ಕೊಟ್ಟು ಅವರನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರಂತೆ. ಇದನ್ನು ಕೇಳಿ ಬಿದ್ದು ಬಿದ್ದು ನಗುತ್ತಿದ್ದ ಸಭಿಕರಿಗೆ “ಸನ್ಮಾನದ ಇನ್ನುಳಿದ ನಾಲ್ಕನೆಯ ಭಾಗವನ್ನು ಮಾತ್ರ ನಾನು ಸ್ವಂತಕ್ಕೆ ಇಟ್ಟುಕೊಳ್ಳುತ್ತೇನೆ” ಎಂದು ತಗ್ಗಿದ ದನಿಯಲ್ಲಿ ಬಹಳ ವಿನಯದಿಂದ ಹೇಳಿಕೊಂಡ ಅವರ ಮಾತು ಕೇಳಿಸಲೇ ಇಲ್ಲ. ಏನು ಹೇಳಿದರೆಂದು ಮುಂದೆ ಕುಳಿತವರಿಂದ ಕೇಳಿ ತಿಳಿದುಕೊಂಡು ಸಭಿಕರು ಗಟ್ಟಿಯಾಗಿ ಚಪ್ಪಾಳೆ ತಟ್ಟಿದರು. 

ಈ ಮಾತುಗಳ ಹಿಂದೆ ಡಿ.ಎಲ್.ಎನ್. ರವರ ಹೃದಯದಲ್ಲಿ ಇದ್ದ ಗುರುಭಕ್ತಿ, ಶಿಷ್ಯವಾತ್ಸಲ್ಯ, ಸಹಧರ್ಮಿಣಿಯ ಮೇಲಿನ ಗಾಢವಾದ ಪ್ರೇಮ ಮತ್ತು ತಮ್ಮ ವಿದ್ವತ್ತಿನ ಬಗ್ಗೆ ಇದ್ದ ನಿರಹಂಕಾರ ಮನೋಭಾವ ನಿಚ್ಚಳವಾಗಿ ಗೋಚರಿಸುತ್ತವೆ. ಪರೀಕ್ಷೆಯಲ್ಲಿ ಕಾಪಿ ಮಾಡಲು ಅವಕಾಶ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸುವ ಇಂದಿನ ಗೂಂಡಾ ವಿದ್ಯಾರ್ಥಿಗಳು, ಐದು ನದಿಗಳು ಹರಿಯುವುದರಿಂದ ಪಂಜಾಬ್ ಎಂದು ಕರೆಯುತ್ತಾರೆಂದು ಪಾಠವನ್ನು ಕೇಳಿದ ಶಾಲೆಯ ಮಕ್ಕಳು ಕುತೂಹಲದಿಂದ ಅವು ಯಾವುವು ಸಾರ್? ಎಂದು ಪ್ರಶ್ನಿಸಿದರೆ ತಬ್ಬಿಬ್ಬಾಗಿ ತುಂಗಾ, ಭದ್ರಾ, ಕೃಷ್ಣ, ಕಾವೇರಿ ಮತ್ತು ಗೋದಾವರಿ ಎಂದು ಐಲು ಪೈಲು ರೈಲು ಬಿಡುವ ದರಿದ್ರ ಅಧ್ಯಾಪಕರು, ಸಂಸಾರವೆಂಬ ನೊಗಕ್ಕೆ ತಾಳಿ ಎಂಬ ಹಗ್ಗದಿಂದ ಹೆಣ್ಣಿನ ಕೊರಳನ್ನು ಬಿಗಿದು ತಾನು ಹೇಳಿದಂತೆ ಕೇಳಿಕೊಂಡು ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಿದ್ದಿರಬೇಕೆಂದು ಜೋರು ಮಾಡುವ ಗಂಡನೆಂಬ ಕ್ರೂರ ಪ್ರಾಣಿಗಳು, ವಿದ್ವತ್ತಿನ ಗಂಧವೇ ಇಲ್ಲದಿದ್ದರೂ ಅಹಂಕಾರದಿಂದ ಬೀಗುವ ಪಂಡಿತಮಾನ್ಯರು ಇರುವ ಇಂದಿನ ದಿನಗಳಲ್ಲಿ ಡಿ.ಎಲ್.ಎನ್. ರವರ ಮೇಲಿನ ಮಾತುಗಳು ತುಂಬಾ ಮನನೀಯವಾಗಿವೆ. ಕಲಿಸಿದ ಗುರುವಿನ ಮೇಲಿರಬೇಕಾದ ಗೌರವ, ಕಲಿಯುವ ವಿದ್ಯಾರ್ಥಿಗಳ ಮೇಲಿರಬೇಕಾದ ಕಳಕಳಿ, ಕೈಹಿಡಿದ ಹೆಂಡತಿಯ ಮೇಲಿರಬೇಕಾದ ಪ್ರೀತಿ, ಕಲಿತ ಜ್ಞಾನದ ಬಗ್ಗೆ ಇರಬೇಕಾದ ಅಲ್ಪಜ್ಞತೆ ಇವು ಡಿ.ಎಲ್.ಎನ್. ರವರ ವಿದ್ವತ್ತಿನ ಹಿಂದೆ ಇದ್ದ ಮೌಲ್ಯಗಳು. ಏನೂ ಓದದೇ ಇದ್ದರೂ ಬಹಳ ಓದಿದವರಂತೆ ಡೋಂಗಿ ಹೊಡೆಯುವ ಜನರು ಅನೇಕರು ಇದ್ದಾರೆ. ಅಂತಹ ಅಹಂಕಾರವನ್ನು ತಲೆಯಲ್ಲಿ ತುಂಬಿಕೊಂಡು ತಮಗೆ ಗೊತ್ತಿರದ ಯಾವುದೇ ವಿಷಯದ ಬಗ್ಗೆ ಅಡ್ಡಾದಿಡ್ಡಿಯಾಗಿ ಮಾತನಾಡುವ ಅಥವಾ ಬರೆಯುವ ಪ್ರವೃತ್ತಿ ಡಿ.ಎಲ್.ಎನ್. ರವರದಾಗಿರಲಿಲ್ಲ, ನಮ್ಮ ಬೃಹನ್ಮಠದ ಕಾಗದ ಪತ್ರಗಳನ್ನು ಪರಿಶೀಲಿಸುವಾಗ ನಮಗೆ ದೊರೆತ ಅವರ ಸ್ವಹಸ್ತಾಕ್ಷರದ ಒಂದು ಅಂಚೆ ಕಾರ್ಡು ಇದಕ್ಕೆ ಸಾಕ್ಷಿಯಾಗಿದೆ. ಅದರ ಹಿನ್ನೆಲೆಯಾಗಿ ಒಂದೆರಡು ಮಾತುಗಳು: 

ನಮ್ಮ ಮಠದ ಮೂಲಪುರುಷರಾದ ವಿಶ್ವಬಂಧು ಮರುಳಸಿದ್ಧರು ಬಸವಣ್ಣನವರ ಹಿರಿಯ ಸಮಕಾಲೀನರು. ಹಿರಿಯ ಸಂಶೋಧಕರಾದ ಗೋವಿಂದ ಪೈ ಅವರು ಮರುಳಸಿದ್ಧರ ಕಾಲ 1120/25 ರಿಂದ 1205/10 ಎಂದು ನಿಷ್ಕರ್ಷೆ ಮಾಡಿರುತ್ತಾರೆ. ಆದಯ್ಯನು ತನ್ನ ವಚನಗಳಲ್ಲಿ ಮರುಳಸಿದ್ಧದೇವರ ಅದೃಷ್ಟ ಪ್ರಸಾದ ನಿಷ್ಠೆ, ಮರುಳಸಿದ್ಧದೇವರೆನ್ನ ಶ್ರೋತ್ರ ಎಂದು ಎರಡು ಕಡೆ ಅವರ ಹೆಸರನ್ನು ಸ್ಮರಿಸಿದ್ದಾನೆ. ಮರುಳಸಿದ್ಧರು ಇತರೆ ಎಲ್ಲ ಶರಣರಂತೆ ಸಾವಿರಾರು ವಚನಗಳನ್ನು ರಚನೆ ಮಾಡಿದ್ದರೆಂಬುದಕ್ಕೆ ಸಿದ್ಧರಾಮೇಶ್ವರರ ಈ ಕೆಳಗಿನ ವಚನದಲ್ಲಿ ಉಲ್ಲೇಖವಿದೆ: 

ಮರುಳಸಿದ್ಧನ ವಚನ ಅರುವತ್ತೆಂಟು ಸಾಸಿರ 
ಇಂತಪ್ಪ ವಚನದ ರಚನೆಯ ಬಿಟ್ಟು 
ಹುಡಿಮಣ್ಣ ಹೊಯ್ಯದೆ ಮಾಬನೆ 
ಕುತ್ಸಿತ ಕಾವ್ಯಾಲಂಕಾರ ನೋಡುವರ ನೋಡಿ 
ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನ

ಮರುಳಸಿದ್ಧರು ರಚಿಸಿದ ವಚನಗಳು ಕಾಲದ ಕರಾಳಗರ್ಭದಲ್ಲಿ ಅಡಗಿಹೋಗಿವೆ. ಅವರ ಜೀವನೇತಿಹಾಸವನ್ನು ಕುರಿತು 16ನೆಯ ಶತಮಾನದಲ್ಲಿ ದೇವಕವಿಯು ವಾರ್ಧಕ ಷಟ್ಟದಿಯಲ್ಲಿ ಬರೆದ ಮರುಳಸಿದ್ಧಕಾವ್ಯ ಎಂಬ ಗ್ರಂಥವನ್ನು ಅ.ನ.ಕೃ. ರವರು 1945ರಲ್ಲಿ ಸಂಪಾದಿಸಿ ಪ್ರಕಟಿಸಿರುತ್ತಾರೆ. ದೇವಕವಿಯು ತನ್ನ ಈ ಗ್ರಂಥವನ್ನು ಶಾಲಿವಾಹನ ಶಕ 1509 ಸರ್ವಜಿತು ಸಂವತ್ಸರ ನಿಜ ವೈಶಾಖ ಶುದ್ಧ 15 ಜೀವ (=ಗುರು) ವಾರ ಅಂದರೆ ಕ್ರಿ.ಶ. 1587 ರಲ್ಲಿ ಇದೇ ಮೇ ತಿಂಗಳು 11 ರಂದು ಪೂರ್ಣಗೊಳಿಸಿರುವುದು ಇಲ್ಲಿ ಸ್ಮರಣೀಯ. ದೇವಕವಿಯ ಈ ಗ್ರಂಥದಲ್ಲಿ ಬರುವ ವಿಚಾರಗಳನ್ನು ಕುರಿತು ನಡೆದ ವಾದ-ವಿವಾದಗಳ ಹಿನ್ನೆಲೆಯಲ್ಲಿ ಡಿ.ಎಲ್.ಎನ್. ರವರು ತಮ್ಮ ಸ್ವಹಸ್ತಾಕ್ಷರಗಳಲ್ಲಿ ಬರೆದ ಪತ್ರ ಹೀಗಿದೆ: 
2876, ಚಾಮರಾಜ ಮೊಹಲ್ಲ
ಮೈಸೂರು, 1.7.1950

“ಮಾನ್ಯರೇ, 
ತಾವು ದಯವಿಟ್ಟು ಕಳಿಸಿರುವ “ಶ್ರೀ ಮರುಳಸಿದ್ಧಾಂಕ ವಿಮರ್ಶೆ” ಎಂಬ ತಮ್ಮ ಗ್ರಂಥ ನನಗೆ ಇಂದು ತಲುಪಿದೆ. ಅದಕ್ಕಾಗಿ ತಮಗೆ ವಂದನೆಗಳು. ಪುಸ್ತಕದಲ್ಲಿ ಪ್ರತಿಪಾದಿಸಿರುವ ವಿಷಯಗಳನ್ನು ಕುರಿತು ನಾನು ಯಾವ ಅಭಿಪ್ರಾಯವನ್ನು ಕೊಡಲು ಅಸಮರ್ಥನಾಗಿದ್ದೇನೆ. ದೇವಕವಿಯ ಮರುಳಸಿದ್ಧ ಕಾವ್ಯವನ್ನಾಗಲಿ ಅದಕ್ಕೆ ಪ್ರತಿಕಕ್ಷಿಯಾಗಿ ಪ್ರಕಟಿತವಾಗಿರುವ ಶ್ರೀ ಮರುಳಸಿದ್ಧಾಂಕ ಎಂಬ ಗ್ರಂಥವನ್ನಾಗಲಿ ನಾನು ವ್ಯಾಸಂಗ ಮಾಡುವ ಅವಕಾಶ ನನಗೆ ಇದುವರೆಗೂ ದೊರೆತಿಲ್ಲ. ಇವೆರಡನ್ನು ಅವಲಂಬಿಸಿರುವ ನಿಮ್ಮ ಗ್ರಂಥದ ಬಗ್ಗೆ ನಾನು ಆ ಗ್ರಂಥಗಳನ್ನು ನೋಡಿದ ಮೇಲೆಯೇ ಏನಾದರೂ ಹೇಳಬೇಕಾದ್ದು ಉಚಿತ. ಸದ್ಯದಲ್ಲಿ ಅದು ನನಗೆ ಸಾಧ್ಯವಿಲ್ಲ. ಮರುಳಸಿದ್ಧೇಶ್ವರನ ವಿಚಾರವಾಗಿ ನಾನು ಹಿಂದೆ ಕೆಲವು ಸಂಗತಿಗಳನ್ನು ತಿಳಿಸಿದ್ದೇನೆ. ನನಗೆ ದೊರೆತ ಆತನ ಒಂದೇ ಒಂದು ವಚನವನ್ನು ಪ್ರಕಟಿಸಿದ್ದೇನೆ. ಇದನ್ನು ನೀವು ಪ್ರಬುದ್ಧ ಕರ್ನಾಟಕ ಸಂಪುಟ 19 ಸಂಚಿಕೆ 1 ಪುಟ 19 ರಲ್ಲಿ ನೋಡಬಹುದು. ಅಲ್ಲಿಂದೀಚೆಗೆ ಮರುಳಸಿದ್ಧ ವಿಷಯಕವಾದ ನನ್ನ ಜ್ಞಾನವನ್ನು ಬೆಳೆಸಿಕೊಳ್ಳಲು ನಾನು ಪ್ರಯತ್ನ ಮಾಡಿಲ್ಲ. ನಿಮ್ಮ ಪ್ರಕೃತ ಗ್ರಂಥದ ಸರಣಿಯನ್ನು ನೋಡಿದರೆ ಅದು ವಿಚಾರಪೂರಿತವಾಗಿರುವಂತೆ ಕಾಣುತ್ತದೆ. ತಮ್ಮ ಪ್ರಯತ್ನದಲ್ಲಿ ನನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ವೀರಶೈವ ಸಾಹಿತ್ಯದಲ್ಲಿ ಐತಿಹಾಸಿಕವೂ ಶಾಸ್ತ್ರೀಯವೂ ಆದ ದೃಷ್ಟಿಯಿಂದ ಮಾಡಬೇಕಾದ ಕೆಲಸ ಅಪಾರವಾಗಿದೆ. ಆ ಕೆಲಸವನ್ನು ತಾವು ಕೈಗೊಂಡಿರುವುದಕ್ಕಾಗಿ ನಿಮಗೆ ನನ್ನ ಧನ್ಯವಾದಗಳು. ವಿಶ್ವಾಸವಿರಲಿ.
ಇತಿ,
ಡಿ. ಎಲ್‌ ನರಸಿಂಹಾಚಾರ್‌

ಮೇಲೆ ವಿವರಿಸಿದಂತೆ ಡಿ.ಎಲ್‌.ಎನ್ ಅವರು ಸಂಶೋಧಿಸಿ ಪ್ರಕಟಿಸಿದ ಮರುಳಸಿದ್ಧರ ಆಧ್ಯಾತ್ಮಿಕ ಔನ್ಯತ್ಯವನ್ನು ಪ್ರತಿಬಿಂಬಿಸುವ ಆ ವಚನ ಹೀಗಿದೆ: 

ಆಲಿ ಆಲಯದಲ್ಲಿ ಕರಿಗೊಳಲು 
ಶ್ರವಣವು ಆಕಾಶವನಡರಲು 
ಉಲುಹು ನಿರ್ಭೂತ ಚಿತ್ತಸಮಾಧಾನವನೆಯ್ದಲು 
ಕಾಲಕರ್ಮಭವಂಗಳ ಗೆಲುವುದಿದೇನು ಸೋಜಿಗವು 
ಹೇಳಾ ರೇವಣ್ಣ ಪ್ರಭುವೆ!

ಇದರಿಂದ ಮರುಳಸಿದ್ಧರ ವಚನಗಳ ಅಂಕಿತ ರೇವಣ್ಣ ಪ್ರಭು ಎಂದು ತಿಳಿದು ಬರುತ್ತದೆ. ಗುರು ರೇವಣಸಿದ್ಧರು ತಮ್ಮ ದೀಕ್ಷಾಗುರುವಾಗಿದ್ದರಿಂದ ಅವರು ತಮ್ಮ ವಚನಗಳಿಗೆ ಆಯ್ಕೆಮಾಡಿಕೊಂಡಿರುವ ಈ ಅಂಕಿತ ಸಹಜವಾಗಿದೆ. 

ಡಿ.ಎಲ್.ಎನ್. ಅವರು ನಮ್ಮ ಮಠಕ್ಕೆ 60 ವರ್ಷಗಳ ಹಿಂದೆ ಬರೆದಿರುವ ಮೇಲಿನ ಪತ್ರ (ಪೋಸ್ಟ್ಕಾರ್ಡ್) ಅವರ ನಿರ್ವ್ಯಾಜ ವೈದುಷ್ಯಕ್ಕೆ ಕನ್ನಡಿ ಹಿಡಿದಂತಿದೆ. ನಮ್ಮ ತರಳಬಾಳು ಗುರುಪರಂಪರೆಯ ಮೂಲಪುರುಷರಾದ ವಿಶ್ವಬಂಧು ಮರುಳಸಿದ್ಧರು ರಚಿಸಿರುವ ವಚನಗಳು ಕರ್ಮಯೋಗಿ ಸಿದ್ಧರಾಮರು ಉಲ್ಲೇಖಿಸಿರುವಂತೆ ಅರವತ್ತೆಂಟು ಸಾವಿರವಾದರೂ ಕಾಲದ ಕರಾಳ ಗರ್ಭದಲ್ಲಿ ಅಡಗಿ ಹೋಗಿರುವ ಆ ಅಪಾರ ವಚನರಾಶಿಯಲ್ಲಿ ಒಂದನ್ನು ಸಂಶೋಧಿಸಿ ದೊರಕಿಸಿಕೊಟ್ಟ ಕೀರ್ತಿ ಡಿ.ಎಲ್.ಎನ್. ಅವರಿಗೆ ಸಲ್ಲುತ್ತದೆ.

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 12.5.2010.