ಕೂಡಲ ಸಂಗಮದ ಪುನರುಜ್ಜೀವನ
ಕೂಡಲ ಸಂಗಯ್ಯ ಹೊಳಿಯಾಗ ಹೆಂಗಿದ್ದಿ
ಹಳ್ಳೊತ್ತಿ ಸಣ್ಣ ಮಳಲೊತ್ತಿ | ಗಂಗೀಯ
ಜಲವೊತ್ತಿ ಲಿಂಗ ನೆನದಾನ ||
ಎಂದು ಭಾವತುಂಬಿ ಹಾಡಿದ್ದಾರೆ ನಮ್ಮ ಜನಪದರು. ಭಕ್ತ ಮತ್ತು ಭಗವಂತನ ಮಧ್ಯೆ ಇರುವ ಮಧುರ ಬಾಂಧವ್ಯದ ಪ್ರತೀಕ ಈ ಜನಪದ ಗೀತೆ. ಲೌಕಿಕ ಜೀವನದಲ್ಲಿ ನಮ್ಮ ಆತ್ಮೀಯರು ಸಂಧಿಸಿದಾಗ ಉಭಯಕುಶಲೋಪರಿಯ ಮಾತುಗಳನ್ನಾಡುತ್ತೇವೆ. ಅದರಂತೆ ನದಿಯ ದಡದಲ್ಲಿರುವ ಲಿಂಗವನ್ನು ನೋಡಿ “ಸುತ್ತ ಕಲ್ಲು ಮತ್ತು ಮರಳು ಮೈಗೆ ಒತ್ತಿ ಸದಾ ಕಾಲ ನೀರಿನಲ್ಲಿ ತೋಯಿಸಿಕೊಂಡು ಹೇಗಿದ್ದೀಯಾ?” ಎಂದು ದೇವರನ್ನೇ ಆತ್ಮೀಯತೆಯಿಂದ ಕೇಳುವ ಈ ಅಲೌಕಿಕ ಕ್ಷೇಮಸಮಾಚಾರದ ನುಡಿಗಳು ಭಕ್ತಿಸಂಪನ್ನ ಹೃದಯದಿಂದ ಹೊರಹೊಮ್ಮಿದ ಅಪರೂಪದ ಮಾನವೀಯ ಸ್ಪಂದನ!
ಎರಡು ನದಿಗಳು ಕೂಡುವ ಸ್ಥಳವನ್ನು ಸಂಗಮ ಎಂದು ಕರೆಯುವುದು ವಾಡಿಕೆ. ಸಂಗಮ ಪದವು ಯಾವುದೇ ಒಂದು ನಿರ್ದಿಷ್ಟ ಕ್ಷೇತ್ರದ ಅಂಕಿತನಾಮ (Proper name) ಅಲ್ಲ. ಎರಡು ನದಿಗಳು ಸೇರುವ ಯಾವುದೇ ಪುಣ್ಯಕ್ಷೇತ್ರವನ್ನು ಸೂಚಿಸಲು ಸರ್ವೆ ಸಾಧಾರಣವಾಗಿ ಬಳಸುವ ರೂಢನಾಮ (Common name). ಆದರೆ ಬಸವಣ್ಣನವರ ವಚನಗಳಲ್ಲಿ ಅಂಕಿತವಾಗಿರುವ ಕೂಡಲ ಸಂಗಮವು ಮಾತ್ರ ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಸಂಗಮದ ವಿಶಿಷ್ಟ ಹೆಸರು. ಇದನ್ನು ಕೂಡಲ ಸಂಗಮವೆಂದು ಏಕೆ ಕರೆಯುತ್ತಾರೆ ಎಂದು ಕೇಳಿದ್ದಕ್ಕೆ ಆ ಪ್ರದೇಶದ ಹಳ್ಳಿಗನೊಬ್ಬ ನೀಡಿದ ಉತ್ತರ: "ಎರಡು ನದಿಗಳು ಕೂಡ್ತಾವ್ರಿ, ಅದಕ್ಕೆ ಕೂಡಲ ಸಂಗಮ ರೀ.” ನದಿಗಳು ಕೂಡುವ ಸ್ಥಳವನ್ನು ಸಂಗಮ ಎಂದು ಕರೆಯುವಂತೆ ಕೂಡಲಿ ಎಂದು ಕರೆಯುವ ವಾಡಿಕೆಯೂ ಇದೆ. ಉದಾಹರಣೆಗೆ ತುಂಗಾ ಮತ್ತು ಭದ್ರಾ ನದಿಗಳ ಸಂಗಮವಾದ ಕೂಡಲಿಯನ್ನು ನೋಡಬಹುದು. ಸಂಗಮ ಸಂಸ್ಕೃತ ಪದ, ಕೂಡಲಿ ಅಚ್ಚಗನ್ನಡಪದ. ಹೀಗೆ ಒಂದೇ ಅರ್ಥವುಳ್ಳ ಎರಡು ವಿಭಿನ್ನ ಭಾಷೆಯ ಪದಗಳ ಜೋಡಣೆಯಿಂದ ಕೂಡಲ ಸಂಗಮ ಪದವು ಉಂಟಾಗಿದ್ದರೂ ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಸಂಗಮವನ್ನು ಬಿಟ್ಟು ಬೇರೆ ಯಾವ ಸಂಗಮಕ್ಕೂ ಈ ಪದವು ಅನ್ವಯಿಸುವುದಿಲ್ಲ. ಕೃಷ್ಣಾ ನದಿಯ ನೀರು ಹೆಸರಿಗೆ ತಕ್ಕಂತೆ ಕಪ್ಪು. ಮಲಪ್ರಭಾ ನದಿಯ ನೀರು ನೋಡಲು ಶುಭ್ರ. ಇದರ ಮೂಲ ಹೆಸರು ಮಲಾಪಹಾರಿ. ಮಲ ಎಂದರೆ ಕೊಳೆ ಅಥವಾ ಪಾಪ, ಅಪಹಾರಿ ಎಂದರೆ ಪಾಪವನ್ನು ಪರಿಹರಿಸುವ ಪುಣ್ಯನದಿ ಎಂದರ್ಥ. ಈಗ ವಾಡಿಕೆಯಲ್ಲಿರುವ ಮಲಪ್ರಭಾ ಎಂಬ ಹೆಸರನ್ನು ಯಥಾವತ್ತಾಗಿ ಅರ್ಥೈಸಿದರೆ ತುಂಬಾ ಅಪಾರ್ಥಕ್ಕೆ ಎಡೆಯಾಗುತ್ತದೆ.
ಬಸವಣ್ಣನವರ ಜೀವನದಲ್ಲಿ ಮಹತ್ವಪೂರ್ಣ ಸ್ಥಾನವನ್ನು ಪಡೆದ ಈ ಕೂಡಲ ಸಂಗಮವನ್ನು ಕೆಲವರು ಪಾಶ್ಚಾತ್ಯ ವಿದ್ವಾಂಸರು ಮತ್ತು ಭಾರತೀಯ ವಿದ್ವಾಂಸರು ಭೌಗೋಳಿಕವಾಗಿ ಸರಿಯಾಗಿ ಗುರುತಿಸಿಲ್ಲ. ಅಪರೂಪದ ಕನ್ನಡ ಶಬ್ಧಕೋಶವನ್ನು ರಚಿಸಿದ ರೆವರೆಂಡ್ ಎಫ್.ಕಿಟ್ಟಲ್ರವರು ಕೃಷ್ಣ ಮತ್ತು ಭೀಮಾ ನದಿಗಳ ಸಂಗಮವನ್ನು ಕೂಡಲಸಂಗಮವೆಂದು ಗ್ರಹಿಸಿದರೆ1, ಜೆ.ಎಫ್. ಫ್ಲೀಟ್ ರವರು ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ಸಂಗಮವನ್ನು ಕೂಡಲಸಂಗಮವೆಂದು ಗ್ರಹಿಸಿದ್ದಾರೆ2. ದಕ್ಷಿಣ ಭಾರತದ ಪ್ರಖ್ಯಾತ ಇತಿಹಾಸಜ್ಞರಾದ ಕೆ.ಎ.ನೀಲಕಂಠಶಾಸ್ತ್ರಿಯವರಂಥ ವಿದ್ವಾಂಸರೂ ಸಹ ಶಿವಮೊಗ್ಗ ಜಿಲ್ಲೆಯಲ್ಲಿರುವ ತುಂಗಾ ಮತ್ತು ಭದ್ರಾ ನದಿಗಳ ಸಂಗಮವಾದ ಕೂಡಲಿಯನ್ನೇ ಕೂಡಲಸಂಗಮವನ್ನಾಗಿ ತಪ್ಪಾಗಿ ಉಲ್ಲೇಖಿಸಿದ್ದಾರೆ3.
ಹಿಂದಿನ ಮೈಸೂರು ರಾಜ್ಯದ ಪ್ರವಾಸ ಅಭಿವೃದ್ಧಿ ನಿಗಮದವರು ಪ್ರಕಟಿಸಿರುವ ಪ್ರವಾಸಿಗರ ರಸ್ತೆಯ ಭೂಪಟದಲ್ಲಿ ಕೃಷ್ಣಾ ಮತ್ತು ಘಟಪ್ರಭಾ ನದಿಗಳ ಸಂಗಮವನ್ನು ಕೂಡಲ ಸಂಗಮವೆಂದು ತಪ್ಪಾಗಿ ಗುರುತಿಸಲಾಗಿದೆ (Mysore India Tourist Road Map, 1965?). ಅಲ್ಲಿರುವ ಸಂಗಮದ ಹೆಸರು ಮೂರು ಮಟ್ಟಿ ಸಂಗಮ. ಇದಕ್ಕೆ ಆ ಹೆಸರು ಬರಲು ಕಾರಣ ಅಲ್ಲಿ ಕಾಣಬರುವ ಮೂರು ಸಣ್ಣಗುಡ್ಡಗಳು. ಮೂರು ದಶಕಗಳ ಹಿಂದೆ ಅಲ್ಲಿಗೆ ಹೋದಾಗ ಈ ಸಂಗಮದ ಸಮೀಪದಲ್ಲಿ ಘಟಪ್ರಭಾ ನದಿಯ ದಡದ ಕಡೆ ಹಿರೇ ಮೂರುಮಟ್ಟಿ ಮತ್ತು ಚಿಕ್ಕ ಮೂರುಮಟ್ಟಿ ಎಂಬ ಎರಡು ಚಿಕ್ಕ ಗ್ರಾಮಗಳಿದ್ದವು. ಹಿರೇ ಮೂರುಮಟ್ಟಿ ಗ್ರಾಮದ ಮೂಲಕ ಹಾಯ್ದು ಬುರ್ಜಿನಂತಿರುವ ಎತ್ತರವಾದ ಸ್ಥಳಕ್ಕೆ ಹೋದರೆ ಅಲ್ಲಿಂದ ಈ ಮೂರುಮಟ್ಟಿಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು. ಘಟಪ್ರಭಾ ಮತ್ತು ಕೃಷ್ಣಾ ನದಿಗಳು ಜೋಡಿ ಹಾವಿನ ಡೊಂಕಿನಂತೆ ಮನಮೋಹಕ ಭಂಗಿಯಲ್ಲಿ ಹರಿದುಬಂದು ಒಂದುಗೂಡುವ ಆ ವಿಹಂಗಮ ನೋಟವು ಮರೆಯಲಾಗದ ಅತ್ಯಂತ ರಮಣೀಯ ದೃಶ್ಯ. ಬಹುಶಃ ಈಗಿನ ಯಾತ್ರಿಕರಿಗೆ ಆ ಅಪರೂಪದ ದೃಶ್ಯವು ದೊರೆಯಲಾಗದು. ಆಲಮಟ್ಟಿ ಅಣೆಕಟ್ಟು ಪೂರೈಸಿದ ಮೇಲೆ ಈ ಭಾಗವೆಲ್ಲಾ ಜಲಾಶಯದ ನೀರಿನಲ್ಲಿ ಮುಳುಗಡೆಯಾಗುತ್ತದೆಂದು ಆಗಲೇ ವದಂತಿಗಳು ಹಬ್ಬಿದ್ದವು. ಇಲ್ಲಿ ವಾಸವಾಗಿರುವ ಗ್ರಾಮಸ್ಥರಿಗೆ ಬೇರೆಡೆ ಹೋಗಿ ಮನೆಗಳನ್ನು ಕಟ್ಟಿಕೊಳ್ಳಲು ಅಲ್ಪಸ್ವಲ್ಪ ಪರಿಹಾರ ಧನವನ್ನು ಸರ್ಕಾರ ಮಂಜೂರು ಮಾಡಿತ್ತು. ಈ ಗ್ರಾಮಗಳಿಗೆ ಸಮೀಪದ ರೈಲ್ವೆ ಸ್ಟೇಷನ್ ಎಂದರೆ “ಸೀತಿಮನಿ”. ಈ ಮೂರುಮಟ್ಟಿ ಸಂಗಮದಲ್ಲಿಯೂ ಒಂದು ಪುರಾತನವಾದ ದೇವಾಲಯವಿತ್ತು. ಅದು ಈಗ ಇದೆಯೋ ಇಲ್ಲವೋ ಗೊತ್ತಿಲ್ಲ. ಅದೂ ಸಹ ಆಲಮಟ್ಟಿ ಜಲಾಶಯದಲ್ಲಿ ಮುಳುಗಿರಬಹುದು. ಅದರ ಕಡೆ ಯಾರೂ ಗಮನವನ್ನು ಹರಿಸಿದಂತೆ ಕಾಣಿಸುವುದಿಲ್ಲ.
ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಮಧ್ಯೆ ಇರುವ ಸಂಗಮವೇ ಇತಿಹಾಸ ಪ್ರಸಿದ್ದವಾದ ಕೂಡಲಸಂಗಮ. ಇಲ್ಲಿರುವ ಸಂಗಮೇಶ್ವರ ದೇವಾಲಯ ಮತ್ತು ಐಕ್ಯಮಂಟಪಗಳೇ ಬಸವಣ್ಣನವರ ಜೀವನೇತಿಹಾಸದ ಭವ್ಯ ಸ್ಮಾರಕಗಳು. ಬಸವಣ್ಣನವರಿಗಿಂತಲೂ ಸುಮಾರು ಎರಡು ಶತಮಾನಗಳಷ್ಟು ಪುರಾತನವಾದ ಸಂಗಮೇಶ್ವರ ದೇವಾಲಯವನ್ನು ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗುಡಿಯು ನಿರ್ಮಾಣವಾದ ಮೇಲೆ ಮಧ್ಯಂತರದ ಯಾವುದೋ ಕಾಲದಲ್ಲಿ ಅದರ ಜೀರ್ಣೋದ್ಧಾರ ಕಾರ್ಯವು ನಡೆದಿರುವಂತೆ ತೋರುತ್ತದೆ. ಗರ್ಭಗುಡಿಯ ಶಿಖರವನ್ನು ಹೊರತು ಪಡಿಸಿ ನವರಂಗ ಮಂಟಪ ಮತ್ತು ಮುಖ ಮಂಟಪದ ಮೇಲಿರುವ ಸಣ್ಣ ಸಣ್ಣ ಶಿಖರಗಳು ನಂತರದ ಕಾಲದಲ್ಲಿ ನಿರ್ಮಾಣವಾದವುಗಳು. ಅದೇ ರೀತಿ ನವರಂಗ ಮಂಟಪದ ಹೊರಗಿನ ಗೋಡೆಗಳೂ ಸಹ ಮೂಲ ದೇವಾಲಯವನ್ನು ನಿರ್ಮಿಸಿದಾಗ ಇರಲಿಲ್ಲವೆಂದೇ ತೋರುತ್ತದೆ. ಒಳ್ಳೆಯ ಶಿಲ್ಪಕಲಾ ಸೌಂದರ್ಯವುಳ್ಳ ಹೊರವಲಯದ ಕಂಬಗಳು ಗೋಡೆಯೊಳಗೆ ಅರೆಬರೆಯಾಗಿ ಸೇರಿಕೊಂಡಿರುವುದು ಈ ಅನಿಸಿಕೆಗೆ ಪುಷ್ಟಿಯನ್ನು ನೀಡುತ್ತದೆ. ಮೊದಲೇ ಹಾಗೆ ಗೋಡೆಗಳು ಇದ್ದಿದ್ದರೆ ಅಲ್ಲಿ ಸುಂದರವಾದ ಕೆತ್ತನೆಯ ಕಂಬಗಳ ಅವಶ್ಯಕತೆ ಬೀಳುತ್ತಿರಲಿಲ್ಲ. ಬಳ್ಳಿಗಾವಿ ಮತ್ತಿತರ ಕಡೆಗಳಲ್ಲಿರುವ ದೇವಾಲಯಗಳಂತೆ ರಂಗ ಮಂಟಪದ ಹೊರಭಾಗವೆಲ್ಲವೂ ಮೊದಲು ಬಯಲಾಗಿಯೇ ಇದ್ದಿರಬೇಕು. ಪ್ರಾಯಶಃ ದೇವಾಲಯವು ಶಿಥಿಲವಾದಾಗಲೋ ಅಥವಾ ಸುರಕ್ಷತೆಯ ದೃಷ್ಟಿಯಿಂದಲೋ ರಂಗಮಂಟಪದ ಸುತ್ತ ಕಲ್ಲಿನ ಗೋಡೆಯನ್ನು ನಿರ್ಮಿಸಿರಬೇಕು. ಸೈಜುಗಲ್ಲಿನ ಕಟ್ಟಡದಂತೆ ಕಾಣುವ ಮತ್ತು ಯಾವ ಶಿಲ್ಪಸೌಂದರ್ಯವೂ ಇಲ್ಲದ ಸಾದಾ ಚೌಕಾಕಾರದ ಕಲ್ಲುಗಳನ್ನು ನೋಡಿದರೆ ನಂತರವೇ ಈ ಕಲ್ಲುಗೊಡೆಯನ್ನು ಕಟ್ಟಿರಬೇಕೆಂದು ಯಾರಿಗಾದರೂ ಅನ್ನಿಸದಿರದು. ಹೀಗೆ ನವರಂಗ ಮಂಟಪದ ಸುತ್ತ ಕಲ್ಲಿನ ಗೋಡೆ ಮತ್ತು ಮೇಲಿನ ಸಣ್ಣ ಸಣ್ಣ ಶಿಖರಗಳು ಇಲ್ಲದಂತೆ ಮೂಲ ಸಂಗಮೇಶ್ವರ ದೇವಾಲಯವು ಹೇಗಿದ್ದಿರಬೇಕೆಂದು ಚಾಲುಕ್ಯ ಶೈಲಿಯ ಇತರ ದೇವಾಲಯಗಳ ಆಧಾರದ ಮೇಲೆ ನಾವು ಕಲ್ಪಿಸಿಕೊಂಡು ಕಲಾವಿದ ಕಮಲೇಶ್ರವರ ಕೈಯಲ್ಲಿ ಬರೆಸಿರುವ ರೇಖಾಚಿತ್ರವನ್ನು 1988ರಲ್ಲಿ ಪ್ರಕಟವಾದ ಕೂಡಲಸಂಗಮದ ಅಳಿವು ಉಳಿವು ಎಂಬ ನಮ್ಮ ಪುಸ್ತಕದಲ್ಲಿ ನೋಡಬಹುದು. ಅದನ್ನು ನೋಡಿದರೆ ಮೂಲ ಸಂಗಮೇಶ್ವರ ದೇವಾಲಯವು ಈಗಿನ ದೇವಾಲಯಕ್ಕಿಂತ ಹೆಚ್ಚು ಸುಂದರವಾಗಿಯೂ ಮತ್ತು ಭವ್ಯವಾಗಿಯೂ ಇತ್ತೆಂದು ಅನ್ನಿಸದೇ ಇರದು. ಬಸವಣ್ಣನವರ ಜನ್ಮಸ್ಥಳವಾದ ಬಸವನ ಬಾಗೇವಾಡಿಯಲ್ಲಿರುವ ಪುರಾತನವಾದ ಬಸವೇಶ್ವರ ಗುಡಿಯ ಮೂಲ ಕಟ್ಟಡವೂ ಸಹ ಬಾದಾಮಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದ್ದು ಅದು ಕಾಲಕಾಲಕ್ಕೆ ಮಾರ್ಪಾಡಾಗಿ ತನ್ನ ಮೂಲಸ್ವರೂಪವನ್ನೇ ಕಳೆದುಕೊಂಡಿತ್ತು ಎಂದು ಇತ್ತೀಚೆಗೆ ಅದರ ತಳಪಾಯದ ಉತ್ಪನನದ ಅವಶೇಷಗಳನ್ನು ಕೂಡಲಸಂಗಮದ ವಿಶೇಷಾಧಿಕಾರಿ ಡಾ. ಜಾಮ್ ದಾರ್ ರವರು ಕಳೆದ ಬಸವಜಯಂತಿಯಂದು ತೋರಿಸಿದ್ದು ನಮ್ಮ ಪರಿಕಲ್ಪನೆಯನ್ನು ಮತ್ತಷ್ಟೂ ಪುಷ್ಟೀಕರಿಸಿದಂತಾಗಿದೆ.
ಕೂಡಲಸಂಗಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ವಿಚಾರದಲ್ಲಿ ಮೂರು ದಶಕಗಳ ಹಿಂದೆ ನಾಡಿನ ಪ್ರಮುಖ ಸಾಹಿತಿಗಳ, ಮಠಾಧೀಶರ, ಸಂಘಸಂಸ್ಥೆಗಳ ಬೆಂಬಲವನ್ನು ಪಡೆದು ನಾವು ಮಾಡಿದ ಪ್ರಯತ್ನದ ವಿಚಾರವಾಗಿ ಕಳೆದ ವಾರದ ಅಂಕಣದಲ್ಲಿ ಓದಿರುತ್ತೀರಿ. ಜನರ ಧಾರ್ಮಿಕ ಭಾವನೆಗಳಿಗೆ ಚ್ಯುತಿ ಬರಬಾರದೆಂದು ಮೂಲ ಲಿಂಗಕ್ಕೆ ಯಾವ ಧಕ್ಕೆಯೂ ಉಂಟಾಗದಂತೆ ಅದನ್ನು ಕದಲಿಸದೆ ಇದ್ದಲ್ಲಿಯೇ ಸೂಕ್ತರಕ್ಷಣೆಯನ್ನು ನೀಡಬೇಕೆಂಬುದು ಜತ್ತಿಯವರು ಮತ್ತು ನಮ್ಮ ಮುಖಂಡತ್ವದಲ್ಲಿ ಹೋಗಿದ್ದ ನಿಯೋಗವು ಆಗಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರಿಗೆ ಸಲ್ಲಿಸಿದ ಮನವಿಯ ಮೊದಲ ಅಂಶವಾಗಿತ್ತು. ನೂರಾರು ಎಕರೆ ಜಮೀನನ್ನು ತೆಗೆದುಕೊಂಡು ಅದರಲ್ಲಿ ಕೂಡಲಸಂಗಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ವಿಚಾರದಲ್ಲಿ ಯಾರ ಭಿನ್ನಾಭಿಪ್ರಾಯವೂ ಇರಲಿಲ್ಲ. ಆದರೆ ಗುಡಿಯನ್ನು ಬಿಚ್ಚಿ ಮೇಲ್ಭಾಗಕ್ಕೆ ಸ್ಥಳಾಂತರಿಸುವ ವಿಚಾರದಲ್ಲಿ ಮಾತ್ರ ವಾದವಿವಾದಗಳು ಹುಟ್ಟಿಕೊಂಡವು. ಆಗಿನ ನೀರಾವರಿ ಸಲಹಾ ಮಂಡಳಿಯ ಅಧ್ಯಕ್ಷರಾಗಿದ್ದ ದಿವಂಗತ ಎಚ್.ಎಂ.ಚನ್ನಬಸಪ್ಪನವರ ಮಧ್ಯಪ್ರವೇಶದಿಂದ ಗುಡಿಯ ವಿಚಾರವು ಒಂದು ಹೊಸ ರೂಪವನ್ನು ತಾಳಿತು. ಒಮ್ಮೆ ಚನ್ನಬಸಪ್ಪನವರು ಸಿರಿಗೆರೆಗೆ ಬಂದು ನಮ್ಮನ್ನು ಭೇಟಿಮಾಡಿ ಗುಡಿಯನ್ನು ಇದ್ದಲ್ಲಿಯೇ ಇರಬೇಕೆಂದು ಹಠ ಹಿಡಿಯುವ ಜನರಿಗೆ ಸಮಾಧಾನವಾಗುವ ರೀತಿಯಲ್ಲಿ ತಜ್ಞರ ಸಲಹೆಯನ್ನು ಪಡೆದು ಹೊಸ ಯೋಜನೆಯನ್ನು ರೂಪಿಸಿರುವುದಾಗಿ ವಿವರಿಸಿದರು. ಅದನ್ನು ಒಪ್ಪಿಕೊಂಡರೆ ಯಾರ ಆಕ್ಷೇಪಣೆಯೂ ಇಲ್ಲವೆಂದು ಹೇಳಿದರು. ಅದಕ್ಕಾಗಿ ಸರ್ಕಾರವು ಇನ್ನೂ 40 ಲಕ್ಷ ರೂ. ಗಳನ್ನುಹೆಚ್ಚು ಖರ್ಚು ಮಾಡಲು ಸಿದ್ಧವಿದೆ ಎಂದೂ ಆಶ್ವಾಸನೆಯನ್ನು ನೀಡಿದರು. (ಅದುವರೆಗಿನ ಯೋಜನೆಯಲ್ಲಿ ಮುಂಜೂರಾಗಿದ್ದ ಮೊತ್ತ 1 ಕೋಟಿ 80 ಲಕ್ಷ ರೂ. ಗಳು). ಇದಕ್ಕಾಗಿ ದಿನಾಂಕ 31.5.1981 ರಂದು ಬಾಗಲಕೋಟೆಯಲ್ಲಿ ಒಂದು ಬಹಿರಂಗ ಸಭೆಯನ್ನು ಕರೆದಾಗ ಅಲ್ಲಿಯ ಜನರೆಲ್ಲರೂ ಈ ಹೊಸ ಯೋಜನೆಯನ್ನು ಒಪ್ಪಿಕೊಂಡರೆಂದೂ ತಿಳಿಸಿ ನಮ್ಮ ಸಮ್ಮತಿಯನ್ನು ಪಡೆದರು. ಆ ಯೋಜನೆಯ ವಿವರಗಳನ್ನು ಚನ್ನಬಸಪ್ಪನವರು ನಮಗೆ ಅಧಿಕೃತವಾಗಿ ದಿನಾಂಕ 19.6.1981 ರಂದು ಪತ್ರ ಬರೆದು ತಿಳಿಸಿದರು.
ಈ ಹೊಸ ಯೋಜನೆಯ ಪ್ರಕಾರ ಸಂಗಮೇಶ್ವರ ಗುಡಿಯನ್ನು ಇದ್ದ ಸ್ಥಳದಲ್ಲಿಯೇ ಜಲಾಶಯದ ನೀರಿನ ಗರಿಷ್ಠ ಮಟ್ಟಕ್ಕಿಂತ ಎತ್ತರಕ್ಕೆ ಪೈಲ್ ಫೌಂಡೇಶನ್ ಮೇಲೆ ವಿಶಾಲ ವೇದಿಕೆಯನ್ನು ನಿರ್ಮಿಸಿ, ಅದರ ಮೇಲೆ ಅದೇ ಗುಡಿಯನ್ನು ಪುನರ್ ರೂಪಿಸುವುದು. ಮೂಲ ಲಿಂಗವನ್ನು ಇದ್ದಲ್ಲಿಯೇ ಸುರಕ್ಷಿತವಾಗಿ ಇರಿಸಿ ಜಲಾಶಯವು ತುಂಬಿದಾಗ ಪ್ರಜ್ವಲಿಸುವ ವಿದ್ಯುದ್ದೀಪಗಳಿಂದ ಮೇಲಿನಿಂದಲೇ ನೀರಿನೊಳಗೆ ಮೂಲಲಿಂಗ ದರ್ಶನವಾಗುವಂತೆ ಮಾಡುವುದು. ಜಲಾಶಯದ ನೀರು ಕಡಿಮೆಯಾದಾಗ ಭಕ್ತಾದಿಗಳು ಕೆಳಗೆ ಇಳಿದು ಹೋಗಿ ಮೂಲ ಲಿಂಗವನ್ನು ದರ್ಶನ ಮಾಡಿಕೊಳ್ಳಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆ ಮಾಡುವುದು. ಮೂಲಲಿಂಗದ ನೆತ್ತಿಯ ಮೇಲೆ ಹೊಸದಾಗಿ ಪುನರ್ರೂಪಿಸಿದ ದೇವಾಲಯದಲ್ಲಿ ಮತ್ತೊಂದು ಲಿಂಗವನ್ನು ಸ್ಥಾಪಿಸುವುದು ಇವು ಮುಖ್ಯವಾದ ಅಂಶಗಳು. ಇದರಿಂದ ನಾರಾಯಣಪುರ ಅಣೆಕಟ್ಟು ನಿರ್ಮಾಣ ಪೂರ್ವದಲ್ಲಿ ಐಕ್ಯಮಂಟಪವು ಹೇಗೆ ನದಿಯು ತುಂಬಿ ಹರಿದಾಗ ವರ್ಷದಲ್ಲಿ ಮೂರು ತಿಂಗಳು ಮುಳುಗಿರುತ್ತಿತ್ತೋ, ಹಾಗೆಯೇ ಮೂಲ ಸಂಗಮೇಶ್ವರ ಲಿಂಗವೂ ಸಹ ಜಲಾಶಯವು ಪೂರ್ಣ ತುಂಬಿದಾಗ ಮುಳುಗಿ, ನೀರು ಇಳಿದಾಗ ದರ್ಶನಕ್ಕೆ ದೊರೆಯುತ್ತಿತ್ತು.
ಹೀಗೆ ಎಲ್ಲರಿಗೂ ಸಮ್ಮತವಾದ ಮೇಲೆ ಸರಕಾರವು ಕಾರ್ಯಪ್ರವೃತ್ತವಾಗಿ ಸುಮಾರು 175 ಎಕರೆ ಜಮೀನನ್ನು ವಶಪಡಿಸಿಕೊಂಡು ಕೂಡಲ ಸಂಗಮ ಕ್ಷೇತ್ರವನ್ನು ಹೊಸ ಯೋಜನೆಯ ಪ್ರಕಾರ ಅಭಿವೃದ್ಧಿಪಡಿಸಲು ಕೋಟ್ಯಂತರ ರೂ. ಖರ್ಚುಮಾಡಿತು. ಸರಕಾರವು ಸಾಕಷ್ಟು ಯೋಚಿಸಿ ಸಂಗಮೇಶ್ವರ ದೇವಾಲಯದ ಟ್ರಸ್ಟ್ ಕಮಿಟಿಯವರ ಒಪ್ಪಿಗೆಯನ್ನು ಪಡೆದು ಪೈಲ್ ಫೌಂಡೇಶನ್ ಮೇಲೆ ಪುನರ್ ರೂಪಿಸಲು ದಿನಾಂಕ 3.12.1983 ರಲ್ಲಿ ಗುಡಿಯನ್ನು ಬಿಚ್ಚಲು ಆದೇಶಿಸಿ ಪುರಾತತ್ವ ಇಲಾಖೆಯ ಉಸ್ತುವಾರಿಯಲ್ಲಿ ಗರ್ಭಗುಡಿಯ ಮುಂದಿನ ಭಾಗವೆಲ್ಲವನ್ನೂ ತೆಗೆಯಿತು. ಸರ್ವಸಮ್ಮತವಾದ ಹೊಸ ಯೋಜನೆಯನ್ನು ಕೈಗೆತ್ತಿಕೊಂಡು ಎಂಟು ವರ್ಷಗಳಾದ ಮೇಲೆ ಗುಡಿಯ ಮುಂದಿನ ಕೆಲಸ ನಡೆಯದಂತೆ ಅಡ್ಡಗಾಲು ಹಾಕಿದವರಲ್ಲಿ ಕೆಲವರು ಈ ಹಿಂದೆ ನಾವು ಸಾರ್ವಜನಿಕರ ಅಭಿಪ್ರಾಯವನ್ನು ಪಡೆದು ಸರ್ಕಾರದ ಮುಂದಿಟ್ಟ ಯೋಜನೆಯನ್ನು ಮನಸಾರೆ ಬೆಂಬಲಿಸಿದವರೇ ಆಗಿದ್ದರು. ಮತ್ತೆ ಗುಡಿಯು ಇದ್ದಲ್ಲಿಯೇ ಹೇಗಿತ್ತೋ ಹಾಗೆ ಉಳಿಯಬೇಕೆಂದು ಮುಗ್ಧಭಕ್ತರನ್ನು ಎತ್ತಿಕಟ್ಟುವ ರಾಜಕೀಯ ಹುನ್ನಾರ ನಡೆಸಿದರು. ಅಂಥವರನ್ನು ಕುರಿತು ಅಂದಿನ ಬಾಗಲಕೋಟೆ ಸಮಾಚಾರ ಪತ್ರಿಕೆಯ ಸಂಪಾದಕರು ಬರೆದ ಸಂಪಾದಕೀಯ ಇಲ್ಲಿ ಸ್ಮರಣೀಯ:
“ನಾಟಕದಲ್ಲಿ ನಡೆದ ಒಂದು ಪ್ರಸಂಗ ನೆನಪಿಗೆ ಬರುತ್ತದೆ. ಮಹಾಭಾರತ ನಾಟಕದಲ್ಲಿ ದ್ರೌಪದಿ ವಸ್ತ್ರಾಪಹರಣದ ಪ್ರಸಂಗ, ದುಃಶಾಸನ ದ್ರೌಪದಿ ಸೀರೆಯ ಸೆರಗು ಹಿಡಿದು ಎಳೆಯುತ್ತಿದ್ದಾನೆ. ದ್ರೌಪದಿ ಪಾತ್ರಧಾರಿ ಕೃಷ್ಣಾ, ಕೃಷ್ಣಾ ಎಂದು ಕೂಗುತ್ತಿದ್ದಾನೆ. ಆದರೆ ಕೃಷ್ಣನ ವೇಷಧಾರಿ ಆಗ ತಾನೇ ಪರದೆಯ ಹಿಂದೆ ಬೀಡಿ ಹಚ್ಚಿದ್ದ ಕಾರಣ ಎರಡು ದಮ್ಮು ಎಳೆದು ಬಂದೆ ದೌಪದಿ, ಬಂದೆ ಎಂದು ರಂಗ ಸ್ಥಳಕ್ಕೆ ತಡವಾಗಿ ಧಾವಿಸಿದ. ಆದರೆ ಆ ವೇಳೆಗಾಗಲೇ ಪೂರ್ಣ ವಸ್ತ್ರಾಪಹರಣವಾಗಿ ದ್ರೌಪದಿ ಪಾತ್ರಧಾರಿ ಚಡ್ಡಿಯ ಮೇಲೆ ನಿಂತಿದ್ದ!”
1 Kannada English Dictionary, 1894, p.456
2 J F Fleet, “Dynasties of the Kanarese Districts of the Bombay Presidency” Bombay Gazetteer, Von. I Part (ii), 1846,p.480. n.l.
3 “The Chalukyainvarders of Gangavati were driven back in disorder and heavily defeated in a battle at Kudal Sangam, that is, Kudali at the junction of the Tunga and Bhadra in the Mysore country. Somesvaras attempt to reverse the verdict of Koppam thus ended in failure (1061 2)” – K A Nilakantha Sastri, A History of South India, pp.186-7.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 2.6.2010.