ಗಣಕ ತಂತ್ರಾಂಶದ ಮೂಲಪುರುಷ ಪಾಣಿನಿ....

  •  
  •  
  •  
  •  
  •    Views  

ಲ್ಲಿಗೆ ಸರಿಯಾಗಿ 31 ವರ್ಷಗಳ ಹಿಂದೆ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ನಾವು ಓದುತ್ತಿದ್ದಾಗ ಅಲ್ಲಿಯ ಜನರಿಗೆ ಬೆಂಗಳೂರು ಎಲ್ಲಿದೆ ಎಂದು ತಿಳಿಸಿ ಹೇಳುವುದು ತುಂಬಾ ಕಷ್ಟವಾಗುತ್ತಿತ್ತು. ಆಗ ಸಿರಿಗೆರೆಯಂತೆ ಬೆಂಗಳೂರು ನಗರ ಜಗತ್ತಿನ ಭೂಪಟದಲ್ಲಿ ಒಂದು ಅನಾಮಧೇಯ ಹಳ್ಳಿಯಾಗಿತ್ತು. ಪಾಶ್ಚಾತ್ಯರು ಬೆಂಗಳೂರು ನಗರದ ಹೆಸರನ್ನೇ ಕೇಳಿದ್ದಿಲ್ಲ. ಅವರಿಗೆ ಪರಿಚಯವಿದ್ದ ಭಾರತದ ಪ್ರಮುಖ ನಗರಗಳೆಂದರೆ ದೆಹಲಿ, ಕಲ್ಕತ್ತಾ, ಮುಂಬಯಿ ಮತ್ತು ಮದ್ರಾಸು ಮಾತ್ರ. ಬೆಂಗಳೂರಿನ ಪರಿಚಯವನ್ನು ಮಾಡಿಕೊಡಬೇಕೆಂದರೆ ಭಾರತದ ಭೂಪಟದಲ್ಲಿ ಮುಂಬಯಿ ಮತ್ತು ಮದ್ರಾಸ್ ನಗರಗಳನ್ನು ತೋರಿಸಿ ಮದ್ರಾಸ್‌ ಗೆ ಸಮೀಪದಲ್ಲಿ ಇಲ್ಲಿದೆ ನೋಡಿ ಎಂದು ವಿವರಿಸಬೇಕಾಗುತ್ತಿತ್ತು. ಅಂದಿನ ಮದ್ರಾಸು ಈಗ ಚೆನ್ನೈಯಾಗಿ ಮಾರ್ಪಾಡಾಗಿದೆ. ಅಂತೆಯೇ ಅಂದಿನ ಬೆಂಗಳೂರು ನಗರ ಮದ್ರಾಸನ್ನು ಮೀರಿ ಬೆಳೆದು Sylicon Valley of India ಎಂದು ಜಗತ್‌ ಪ್ರಸಿದ್ಧಿಯಾಗಿದೆ. ಇತ್ತೀಚೆಗೆ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವೂ ಆಗಿದೆ. ಹೀಗಾಗಿ ಇಂದು ಜಗತ್ತಿನಲ್ಲಿ ಬೆಂಗಳೂರಿನ ಹೆಸರನ್ನು ಕೇಳದವರೇ ಇಲ್ಲ. ಇದಕ್ಕೆ ಮೂಲಕಾರಣ ನಮ್ಮ ನಾಡಿನ ಸಾಫ್ಟ್‌ ವೇರ್ ಇಂಜಿನಿಯರುಗಳಾದ ಪ್ರತಿಭಾವಂತ ಯುವಕ-ಯುವತಿಯರು. ಅವರನ್ನು ಪ್ರೋತ್ಸಾಹಿಸಿದ ನಾರಾಯಣಮೂರ್ತಿಯವರ ಇನ್ಫೋಸಿಸ್ ಮತ್ತಿತರ ಸಾಫ್ಟ್‌ ವೇರ್ ಕಂಪನಿಗಳು. ಮಗ ಸಾಫ್ಟ್‌ ವೇರ್ ಇಂಜಿನಿಯರ್ ಆಗಿ ಅಮೇರಿಕಾದಲ್ಲಿದ್ದಾನೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ತಂದೆ-ತಾಯಿಗಳು ಕೀರ್ತಿಗೊಬ್ಬ ಮಗ, ಆರತಿಗೊಬ್ಬ ಮಗಳು ಎಂಬ ಧೋರಣೆಯನ್ನು ಬಿಟ್ಟು ತಮ್ಮ ಮಗಳೂ ಸಹ ಸಾಫ್ಟ್‌ ವೇರ್ ಇಂಜಿನಿಯರ್ ಆಗಿ ಬೆಂಗಳೂರಿನ ಸಾಫ್ಟ್‌ ವೇರ್ ಕಂಪನಿಯೊಂದರಲ್ಲಿದ್ದಾಳೆಂಬುದನ್ನು ಅಷ್ಟೇ ಹೆಮ್ಮೆಯಿಂದ ಹೇಳಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ಈ ಯುವಕ ಯುವತಿಯರು ಗೌರವವನ್ನು ತಂದುಕೊಟ್ಟಿರುವುದು ಕೇವಲ ಅವರ ಕುಟಂಬವರ್ಗಕ್ಕೆ ಮಾತ್ರವಲ್ಲ. ಇಡೀ ಕನ್ನಡ ನಾಡು ಹೆಮ್ಮೆಪಟ್ಟುಕೊಳ್ಳುವಂತಹ ಸಾಧನೆಯನ್ನು ಅವರು ಮಾಡಿದ್ದಾರೆ. ಅದಕ್ಕಾಗಿ ಅವರನ್ನು ಈ ನಾಡಿನ ಜನತೆ ಎಷ್ಟು ಕೊಂಡಾಡಿದರೂ ಸಾಲದು.

ಕಂಪ್ಯೂಟರ್‌ ನ ಕಾರ್ಯವಿಧಾನವನ್ನು ತೀರಾ ಹತ್ತಿರದಿಂದ ಮೊಟ್ಟಮೊದಲು ನಾವು ನೋಡಿದ್ದು ವಿಯೆನ್ನಾ ವಿಶ್ವವಿದ್ಯಾನಿಲಯದ ಮುದ್ರಣಾಲಯದಲ್ಲಿ, ನಮ್ಮ ಸಂಸ್ಕೃತ ಪ್ರೊಫೆಸರ್‌ ರವರಾದ ಗೆರ್‌ ಹಾರ್ಡ್‌ ಓಬರ್‌ ಹಾಮರ್‌ ರವರು (Gerhard Oberhammer) ತಮ್ಮ ಸಂಪಾದಕತ್ವದಲ್ಲಿ ಜರ್ಮನ್‌ ನಲ್ಲಿ ಪ್ರಕಟಗೊಳಿಸುತ್ತಿದ್ದ “Wiener Zeitshrift....” ಎಂಬ ಜರ್ನಲ್ ಮುದ್ರಣಗೊಳ್ಳುವುದನ್ನು ನೋಡಲು ಒಮ್ಮೆ ಕರೆದುಕೊಂಡು ಹೋಗಿದ್ದರು. ನಮ್ಮ ಪ್ರೊಫೆಸರ್‌ ರವರ ವಿದ್ಯಾಗುರುಗಳಾಗಿದ್ದವರು ಸಂಸ್ಕೃತ ಮತ್ತು ಭಾರತೀಯ ತತ್ವಜ್ಞಾನದಲ್ಲಿ ಪರಿಣತರಾಗಿದ್ದ ಪ್ರೊಫೆಸರ್ ಫ್ರಾವ್‌ ವಾಲ್ನರ್‌ ರವರು (Frauwalner), ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಪೀಠ ಮೊಟ್ಟಮೊದಲಿಗೆ ಸ್ಥಾಪಿತವಾಗಿದ್ದು ನಮಗೆ ನೆನಪಿರುವ ಮಟ್ಟಿಗೆ 1908 ರಲ್ಲಿ. ಅದನ್ನು ಸ್ಥಾಪಿಸಿದ ಮೊದಲ ಪ್ರೊಫೆಸರ್ ಜಾರ್ಜ್ ಬ್ಯೂಲರ್ (George Buehler) ಕನ್ನಡ ನಾಡಿನ ಮೈಸೂರು ಮತ್ತು ಕೊಡಗು ಪ್ರದೇಶಗಳ ಶಾಸನಗಳನ್ನು ಆಳವಾಗಿ ಅಧ್ಯಯನ ಮಾಡಿದವರು. ಹೀಗಾಗಿ ವಿಯೆನ್ನಾಕ್ಕೆ ಹೋದ ಕೆಲವೇ ದಿನಗಳಲ್ಲಿ ನಾವು ಓದುತ್ತಿದ್ದ Indological Institute ನಮಗೆ ಭಾವನಾತ್ಮಕವಾಗಿ ತೀರಾ ಹತ್ತಿರವೆನಿಸಿತು. ಆ ದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ದೊಡ್ಡ ದೊಡ್ಡ ಕಛೇರಿಗಳಲ್ಲಿ ರೈಲು/ವಿಮಾನ ನಿಲ್ದಾಣಗಳಲ್ಲಿ ಗಣಕಯಂತ್ರಗಳು ಬಳಕೆಯಾಗುತ್ತಿದ್ದರೂ ಆಗಿನ್ನೂ ಈಗಿನಂತೆ ದೈನಂದಿನ ವ್ಯವಹಾರಗಳಲ್ಲಿ ಸಾಮಾನ್ಯ ಜನರು ತಮ್ಮ ಮನೆಯಲ್ಲಿ ಬಳಸುವಷ್ಟು ತಂತ್ರಜ್ಞಾನ ಬೆಳೆದಿರಲಿಲ್ಲ.

ಈ ವಾರದ ಅಂಕಣದಲ್ಲಿ ಗಣಕಯಂತ್ರವನ್ನು ಕುರಿತು ಬರೆಯಲು ವಿಶೇಷ ಕಾರಣಗಳಿವೆ. ಮೊದಲನೆಯದಾಗಿ ಗಣಕಯಂತ್ರದ ಬಗ್ಗೆ ನಮಗೆ ಇರುವ ವಿಶೇಷ ಒಲವು ಮತ್ತು ಆಸಕ್ತಿ, ಎರಡನೆಯದಾಗಿ ಈ ವಾರಾಂತ್ಯದಲ್ಲಿ ಅಮೇರಿಕಾದ ಆರ್ಲಾಂಡೋ ನಗರದಲ್ಲಿ ನಡೆಯಲಿರುವ ಒಂದು ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕಳೆದ 15 ವರ್ಷಗಳಿಂದ ನಾವು ಗಣಕಯಂತ್ರದಲ್ಲಿ ಸಿದ್ಧಪಡಿಸಿರುವ ಗಣಕಾಷ್ಟಾಧ್ಯಾಯಿ ಎಂಬ ತಂತ್ರಾಂಶವನ್ನು (software) ಸಾದರ ಪಡಿಸಿ ವಿಶೇಷ ಉಪನ್ಯಾಸವನ್ನು ನೀಡಲು ನಮಗೆ ಬಂದಿರುವ ಆಹ್ವಾನ. ಅಲ್ಲಿ ಮಂಡಿಸಲಿರುವ ತಂತ್ರಾಂಶದ ಬಗ್ಗೆ ನಿಮ್ಮೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳಲು ಈ ಲೇಖನ.

ವಿದೇಶೀಯ ವಿದ್ವಾಂಸರ ಮತ್ತು ವಿಜ್ಞಾನಿಗಳ ನಿಕಟ ಸಂಪರ್ಕದಿಂದಾಗಿ 1986 ರಷ್ಟು ಹಿಂದೆಯೇ ಗಣಕಯಂತ್ರದ ಮಹತ್ವವನ್ನರಿತು ಅದನ್ನು ನಮ್ಮ ಮಠದ ಮತ್ತು ವಿದ್ಯಾಸಂಸ್ಥೆಯ ಆಡಳಿತ ನಿರ್ವಹಣೆಯಲ್ಲಿ ಯಶಸ್ವಿಯಾಗಿ ಬಳಕೆಮಾಡಿಕೊಳ್ಳುತ್ತಾ ಬಂದಿರುತ್ತೇವೆ. ಈ ಅಂಕಣದಲ್ಲಿ ಪ್ರಕಟವಾಗುತ್ತಿರುವ ನಮ್ಮ ಎಲ್ಲ ಲೇಖನಗಳು ಕಾಗದದ ಮೇಲೆ ಲೇಖನಿಯಿಂದ ಬರೆದ ಲೇಖನಗಳಾಗದೆ ಸದಾ ನಮ್ಮೊಂದಿಗೆ ಆಪ್ತಸಹಾಯಕನಂತಿರುವ ನಮ್ಮ ಪುಟ್ಟ ಗಣಕಯಂತ್ರದಲ್ಲಿ (Laptop) ನೇರವಾಗಿ ಕೈಬೆರಳುಗಳಿಂದ ಟಂಕಣಿಸಿ ಮೂಡಿಬಂದ ಲೇಖನಗಳಾಗಿವೆಯೆಂದರೆ ನೀವು ಆಶ್ಚರ್ಯಪಡಬಹುದು! 22 ವರ್ಷಗಳ ಹಿಂದೆ ಗಣಕಯಂತ್ರವನ್ನು ಮೊದಲು ನಾವು ಕಲಿತು ನಮ್ಮ ಸಿಬ್ಬಂದಿಗೆಲ್ಲಾ ಕಲಿಸಿಕೊಟ್ಟೆವು. ನಮ್ಮ ಮಠ ಮತ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ನೌಕರರ ಯಾದಿ, ಬಡ್ತಿ, ವರ್ಗಾವರ್ಗಿ. ನಮ್ಮ ಸಂಸ್ಥೆಯ ನೂರಾರು ಶಾಲಾಕಾಲೇಜುಗಳಲ್ಲಿ ಓದುತ್ತಿರುವ ಅಸಂಖ್ಯಾತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಮಠದ ಅಪಾರ ಶಿಷ್ಯರು ಮತ್ತು ಅಭಿಮಾನಿಗಳ ವಿಳಾಸಗಳು, ದೈನಂದಿನ ಪತ್ರವ್ಯವಹಾರ, ಲೆಕ್ಕಪತ್ರಗಳು, ನಾವು ಭಾಗವಹಿಸುವ ಅಂತರಾಷ್ಟ್ರೀಯ ಸಮ್ಮೇಳನಗಳಿಗೆ ಸಿದ್ಧಪಡಿಸಬೇಕಾದ ಇಂಗ್ಲಿಷ್ ಲೇಖನಗಳು ಇತ್ಯಾದಿ ಹಲವು ಹತ್ತು ಕಾರ್ಯಗಳಿಗೆ ನಾವು ಕಂಪ್ಯೂಟರ್ ಬಳಸುವುದನ್ನು ನೋಡಿ ನಮ್ಮನ್ನು ಹೈಟೆಕ್ ಸ್ವಾಮೀಜಿ ಎಂದು ಹಂಗಿಸಿದವರಿದ್ದಾರೆ, ಗಣಕ ಋಷಿ ಎಂದು ಗೌರವಿಸಿದವರೂ ಇದ್ದಾರೆ. ಇದಾವುದರಿಂದಲೂ ವಿಚಲಿತರಾಗದೆ ದೃಢವಾದ ಗುರಿಯನ್ನಿರಿಸಿಕೊಂಡು ಗಣಕಯಂತ್ರದ ಕಾರ್ಯವಿಧಾನವನ್ನು ಅರಿತು ದೈನಂದಿನ ವ್ಯವಹಾರಗಳಿಗಲ್ಲದೆ ಸಂಸ್ಕೃತದ ವ್ಯಾಕರಣಸೂತ್ರಗಳನ್ನು ಅಳವಡಿಸಲು ಬರುತ್ತದೆಯೆಂದು ಮನಗಂಡು ರೂಪಿಸಿದ ತಂತ್ರಾಂಶವೇ ಗಣಕಾಷ್ಟಾಧ್ಯಾಯೀ.

ಲೌಕಿಕ ಸಂಪತ್ತಿಗೆ ಮಾರುಹೋಗದೆ, ಜೀವನೋಪಾಯಕ್ಕೆ ಚಿಂತಿಸದೆ, ಜ್ಞಾನಸಂಪತ್ತನ್ನು ಸಂಪಾದಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಋಷಿ-ಮುನಿಗಳನ್ನೂ, ಜ್ಞಾನಿಗಳನ್ನೂ, ಶ್ರೇಷ್ಠ ಕವಿಗಳನ್ನೂ, ಕಲಾವಿದರನ್ನೂ ನಾವು ಇತಿಹಾಸದಲ್ಲಿ ನೋಡುತ್ತೇವೆ. ಕಾಲದ ಕರಾಳಗರ್ಭದಲ್ಲಿ ಅವರು ಲೀನವಾಗಿ ಹೋಗಿದ್ದರೂ, ನಾಡು-ನುಡಿಯನ್ನು ಕುರಿತು ಅವರು ಮಾಡಿದ ಚಿಂತನೆ, ರಚಿಸಿದ ಗ್ರಂಥಗಳು ಇಂದಿಗೂ ಚಿರಂತನವಾಗಿ ಉಳಿದು ಬಂದಿವೆ. ಸಂಸ್ಕೃತ ಸಾರಸ್ವತ ಲೋಕದಲ್ಲಿ ವ್ಯಾಕರಣವನ್ನು ಕುರಿತ ಅಂತಹ ಒಂದು ಅದ್ವಿತೀಯ ಗ್ರಂಥ ಅಷ್ಟಾಧ್ಯಾಯೀ. ಕ್ರಿ.ಪೂ. 5ನೆಯ ಶತಮಾನ ಅಂದರೆ ಇಲ್ಲಿಗೆ ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಇದ್ದ ಪಾಣಿನಿ ಮಹರ್ಷಿಯೇ ಈ ಅಪರೂಪ ಆ ಗ್ರಂಥದ ಕರ್ತೃ. ಜಗತ್ತಿನ ಯಾವ ಭಾಷೆಯಲ್ಲೂ ಇದಕ್ಕೆ ಸರಿಸಾಟಿಯಾದ ವ್ಯಾಕರಣ ಗ್ರಂಥ ಮತ್ತೊಂದಿಲ್ಲ. ಸಾವಿರಾರು ವರ್ಷಗಳ ಹಿಂದೆ ಒಂದು ಭಾಷೆಯನ್ನು ಅತ್ಯಂತ ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ಭಾಷೆಯ ಸಂಕೀರ್ಣತೆಯನ್ನು ಸೂತ್ರರೂಪದಲ್ಲಿ ಸೆರೆ ಹಿಡಿದಿಟ್ಟು ಆಧುನಿಕ ಭಾಷಾಶಾಸ್ತ್ರಕ್ಕೆ ಭದ್ರ ಬುನಾದಿಯನ್ನು ಹಾಕಿದವನು ಮಹರ್ಷಿ ಪಾಣಿನಿ. ಪಾಣಿನಿಗಿಂತ ಮೊದಲು ವ್ಯಾಕರಣ ಗ್ರಂಥಗಳನ್ನು ಬರೆದವರು ಯಾರೂ ಇರಲೇ ಇಲ್ಲ ಎಂದು ಹೇಳಲಾಗದು. ಸ್ವತಃ ಪಾಣಿನಿಯೇ ತನ್ನ ಅಷ್ಟಾಧ್ಯಾಯೀಯಲ್ಲಿ ಕಾಶ್ಯಪ, ಗಾರ್ಗ್ಯ, ಮಾಲವ, ಚಾಕ್ರವರ್ಮಣ, ಶಾಕಟಾಯನ, ಶಾಕಲ್ಯ, ಸೇನಕ, ಸ್ಫೋಟಾಯನ, ಭಾರದ್ವಾಜ ಮೊದಲಾದ ವ್ಯಾಕರಣ ತಜ್ಞರನ್ನು ಉಲ್ಲೇಖಿಸಿದ್ದಾನೆ. ಆದರೆ ವೈದುಷ್ಯದಲ್ಲಿ ಅವರೆಲ್ಲರ ವ್ಯಾಕರಣ ಗ್ರಂಥಗಳನ್ನು ಮೆಟ್ಟಿ ನಿಂತ ಅತ್ಯದ್ಭುತ ವ್ಯಾಕರಣ ಗ್ರಂಥ ಪಾಣಿನಿಯ ಅಷ್ಟಾಧ್ಯಾಯೀ. ಇದರಲ್ಲಿ ಎಂಟು ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯದಲ್ಲೂ ನಾಲ್ಕು ಪಾದಗಳಿವೆ. ಒಂದೊಂದು ಪಾದದಲ್ಲೂ ಸರ್ವೇ ಸಾಧಾರಣವಾಗಿ 100 ರಿಂದ 200 ಸೂತ್ರಗಳಿದ್ದು ಒಟ್ಟು 3983 ಸೂತ್ರಗಳಿವೆ. ಒಂದೊಂದರಲ್ಲಿ ಮೂರಾಲ್ಕು ಶಬ್ದಗಳಿದ್ದರೆ ಹೆಚ್ಚು. ಉದಾಹರಣೆಗೆ ಇಕೋ ಯಣಚಿ ಎಂಬುದು ಯಣ್ ಸಂಧಿ ಸೂತ್ರ. ಆದ್ ಗುಣಃ ಎಂಬುದು ಗುಣಸಂಧಿ ಸೂತ್ರ, ಸಂಸ್ಕೃತದಲ್ಲಿ ಗಣಕ ಎಂದರೆ ಕಂಪ್ಯೂಟರ್, ಪಾಣಿನಿಯ ಅಷ್ಟಾಧ್ಯಾಯಿ ಗ್ರಂಥದಲ್ಲಿರುವ ಸೂತ್ರಗಳನ್ನು ಆಧರಿಸಿ ಈ ತಂತ್ರಾಂಶವನ್ನು ರೂಪಿಸಿದ ಕಾರಣ ಇದಕ್ಕೆ ಗಣಕಾಷ್ಟಾಧ್ಯಾಯಿ ಎಂಬ ಹೆಸರನ್ನಿಟ್ಟಿರುತ್ತೇವೆ. ಈ ತಂತ್ರಾಂಶದ ಆರಂಭದ ಆವೃತ್ತಿಯನ್ನು 1994 ರ ಜನವರಿಯಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ನಡೆದ 9 ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ನಾವು ಪ್ರದರ್ಶಿಸಿದಾಗ ವಿದ್ವಾಂಸರು ತುಂಬಾ ಕುತೂಹಲದಿಂದ ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ತಮಿಳುನಾಡಿನಿಂದ ಬಂದಿದ್ದ ಸಂಸ್ಕೃತ ಪಂಡಿತರೊಬ್ಬರು ಮಾರುಹೋಗಿ ಸ್ಥಳದಲ್ಲಿಯೇ ಒಂದು ಆಶು ಕವಿತೆಯನ್ನು ಬರೆದು ನಮಗೆ ಅರ್ಪಿಸಿದರು:

ಪಾಣಿನೀಸೂತ್ರಕಾಂತಾರೇ ನಷ್ಟೋsಹಮಭವಂ ಪುರಾ | 
ಅಧುನಾ ಶ್ರೀಸ್ವಾಮಿಪಾದೈಃ ಗಣಕಯಂತ್ರೇಣ ರಕ್ಷಿತಃ ||

ಸಂಸ್ಕೃತವನ್ನು ಕಲಿಯುವವರಿಗೆ ಆರಂಭದಲ್ಲಿ ಹೇಳಿಕೊಡುವ ಅಕಾರಾಂತ ಪುಲ್ಲಿಂಗ ರಾಮ ಶಬ್ದದ ರೂಪವನ್ನು (Declension) ಪಕ್ಕದ ಚಿತ್ರದಲ್ಲಿ ನೋಡಬಹುದು. ಈ ಶಬ್ದರೂಪಗಳು ಗಣಕಯಂತ್ರದಲ್ಲಿ ಮೊದಲೇ ಸಂರಕ್ಷಿಸಿ ಇಟ್ಟ ಮಾಹಿತಿ ಅಲ್ಲ. ರಾಮ ಶಬ್ದವನ್ನು ಗಣಕಯಂತ್ರದಲ್ಲಿ ಟಂಕಣಿಸಿ Enter ಕೀಯನ್ನು ಒತ್ತಿದ ತಕ್ಷಣವೇ ನಾವು ರೂಪಿಸಿರುವ ತಂತ್ರಾಂಶವು ಕಾರ್ಯೋನ್ಮಖವಾಗಿ ಪಾಣಿನಿಯ ಎಲ್ಲ 4 ಸಾವಿರ ಸೂತ್ರಗಳನ್ನು ಕ್ಷಣಾರ್ಧದಲ್ಲಿ ಪರಿಶೋಧಿಸಿ ಅವುಗಳ ಆಧಾರದ ಮೇಲೆ ರಾಮ ಶಬ್ದದ ವಿಭಿನ್ನ ರೂಪಗಳನ್ನು ಎಲ್ಲಾ ವಿಭಕ್ತಿ ಮತ್ತು ವಚನಗಳಲ್ಲಿ ಕೊಡುತ್ತದೆ. ಹೀಗೆ ಪರಿಶೋಧಿಸುವಾಗ ಯಾವ ಸೂತ್ರದಿಂದ ಏನು ಬದಲಾವಣೆಯಾಗಿ ರೂಪಸಿದ್ಧಿಯಾಯಿತು ಎಂಬುದರ ವಿವರಗಳನ್ನು ಸಹ ಕೆಳಗಿನ ಭಾಗದಲ್ಲಿ ಕೊಡುತ್ತದೆ. ಪುರಂದರದಾಸರು ಹಾಡಿದ ಪ್ರಕಾರ ತಾಯಿ ಯಶೋದೆಗೆ ಮುದ್ದು ಕೃಷ್ಣ “ಲೋಕದೊಳಗೆ ನೀ ಶಿಶುವಾಗಿ ಮೂರ್ಲೋಕವನೆಲ್ಲ ಬಾಯಲಿ” ತೋರಿದಂತೆ!

ಹೇಳಬೇಕಾದುದನ್ನು ಸಂಕ್ಷಿಪ್ತವಾಗಿ ನಿಸ್ಸಂದಿಗ್ಧವಾಗಿ ಹೇಳುವುದೇ ಸೂತ್ರ. “ಅರ್ಧಮಾತ್ರಾಲಾಘವೇನ ಪುತ್ರೋತ್ಸವಂ ಮನ್ಯಂತೇ ವೈಯಾಕರಣಾಃ” ಎಂಬ ಒಂದು ಪ್ರಸಿದ್ದ ಉಕ್ತಿ ಇದೆ. ಸೂತ್ರವು ಮೊದಲೇ ಸಂಕ್ಷಿಪ್ತರೂಪವಾಗಿರುತ್ತದೆ. ಸೂತ್ರರಚನೆ ಮಾಡುವಾಗ ಅದನ್ನು ಇನ್ನೂ ಸಂಕ್ಷಿಪ್ತಗೊಳಿಸಿ ಒಂದು ಅರ್ಧ ಮಾತ್ರೆಯಷ್ಟು ಕಡಿಮೆ ಮಾಡಿ ಹೇಳಲು ಸಾಧ್ಯವಾಯಿತೆಂದರೆ ಒಂದು ಗಂಡು ಮಗು ಹುಟ್ಟಿದಷ್ಟು ಸಂತೋಷ ವ್ಯಾಕರಣತಜ್ಞರಿಗೆ ಉಂಟಾಗುತ್ತಿತ್ತಂತೆ! ಇಲ್ಲಿ ಮಾತ್ರೆ ಎಂದರೆ ವೈದ್ಯರು ಕೊಡುವ ಗುಳಿಗೆಯಲ್ಲ: ಛಂದಸ್ಸಿನಲ್ಲಿ ಬರುವ ಲಘು, ಗುರು!

ಸುಪ್ರಸಿದ್ಧ ಆಂಗ್ಲ ಕವಿ ಲಾರ್ಡ್ ಬೈರನ್ ಮಗಳಾದ ಅಡಾ ಅಗುಸ್ಟಾ ಬೈರನ್ ಆಧುನಿಕ ತಂತ್ರಾಂಶದ ಆದ್ಯ ಪ್ರವರ್ತಕಳು ಎಂದು ನಂಬಲಾಗಿದೆ. ಇದು ತಪ್ಪು, ಅದ್ಭುತ ಮೇಧಾಶಕ್ತಿ ಹೊಂದಿದ್ದ ಪಾಣಿನಿ ಮಹರ್ಷಿಯು ಪ್ರಾಚೀನ ಭಾರತದ ಬಹು ದೊಡ್ಡ ಕಂಪ್ಯೂಟರ್ ವಿಜ್ಞಾನಿ, ಜಗತ್ತಿನ ಮೊಟ್ಟ ಮೊದಲ ಕಂಪ್ಯೂಟರ್ ಪ್ರೊಗ್ರಾಮರ್ ಎಂಬುದು ನಮ್ಮ ದೃಢವಾದ ನಿಲುವು, ಸಾಫ್ಟ್‌ ವೇರ್‌ ನಲ್ಲಿ ತಂತ್ರಜ್ಞರು ಬರೆಯುವ Program Code ಗಿಂತಲೂ ಪಾಣಿನಿಯ ಸೂತ್ರಗಳು ವಿಸ್ಮಯಕಾರಿಯಾಗಿವೆ. Public Const, arrays, variables, If End If, Do While... Loop, conflict resolution  ಇತ್ಯಾದಿಗಳೆಲ್ಲವನ್ನೂ ಮೀರಿದ ತಾಂತ್ರಿಕತೆ ಪಾಣಿನಿಯ ಸೂತ್ರಗಳಲ್ಲಿದೆ. ಭೌತಿಕವಾಗಿ ಕಣ್ಣೆದುರಿಗೆ ಕಾಣುವ ಆಗ್ರಾದ ತಾಜ್‌ ಮಹಲ್, ಪ್ಯಾರಿಸ್ಸಿನ ಐಫೆಲ್ ಟವರ್, ಪೀಸಾದ ವಾಲುಗೋಪುರ ಮೊದಲಾದವುಗಳನ್ನು ಜಗತ್ತಿನ ಅದ್ಭುತಗಳೆಂದು ಪರಿಗಣಿಸಲಾಗಿದೆ. ಅವುಗಳಂತೆ ಬೌದ್ಧಿಕ ಜಗತ್ತಿನ ಏಕೈಕ ಅದ್ಭುತ ಸ್ಮಾರಕವೆಂದರೆ ಪಾಣಿನಿಯ ಈ ಅಷ್ಟಾಧ್ಯಾಯಿ! ಪಾಶ್ಚಾತ್ಯ ವಿದ್ವಾಂಸರಾದ ಲಿಯೊನಾರ್ಡ್ ಬ್ಲೂಮ್‌ ಫೀಲ್ಡ್ ಪಾಣಿನಿಯ ಅಷ್ಟಾಧ್ಯಾಯೀಯನ್ನು ಕುರಿತು “One of the greatest monuments of human intelligence” ಎಂದು ಬಣ್ಣಿಸಿರುವುದರಲ್ಲಿ ಯಾವ ಅತಿಶೋಕ್ತಿಯೂ ಇಲ್ಲ.

ನಾವು ಸಿದ್ಧಪಡಿಸಿದ ಈ ತಂತ್ರಾಂಶವನ್ನು ಅಂತರಜಾಲದಲ್ಲಿ ಅಳವಡಿಸಲಾಗಿದೆ. ಆಸಕ್ತಿಯುಳ್ಳವರು ಈ ಮುಂದಿನ ಅಂತರಜಾಲ ತಾಣದಿಂದ ಉಚಿತವಾಗಿ ಪಡೆಯಬಹುದು: www.taralabalu.org, ಹಿಂದಿನ ತಲೆಮಾರಿನ ಪಾಶ್ಚಾತ್ಯ ವಿದ್ವಾಂಸರಾದ ಕಿಟಲ್, ಮ್ಯಾಕ್ಸ್ ಮ್ಯುಲರ್, ಮೋನಿಯರ್ ವಿಲಿಯಂಸ್ ಮೊದಲಾದವರಿಗೆ ಈಗಿನ ಗಣಕಯಂತ್ರಗಳು ದೊರೆತಿದ್ದರೆ ಕನ್ನಡ ಮತ್ತು ಸಂಸ್ಕೃತ ಸಾರಸ್ವತ ಲೋಕದಲ್ಲಿ ಎಂತಹ ಅದ್ಭುತ ಕಾರ್ಯಗಳನ್ನು ಮಾಡುತ್ತಿದ್ದರೋ ಏನೋ! ಹಿಂದೆ ತಾಯಿ-ಮಗಳಂತಿದ್ದ ಸಂಸ್ಕೃತ ಮತ್ತು ಕನ್ನಡದ ಸಂಬಂಧ ಈಗ ಅತ್ತೆ-ಸೊಸೆಯಂತೆ ಆಗಿರುವುದು ವಿಷಾದನೀಯ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 25.6.2008.