ಬಯಲ ಬಂಡೆಯಲ್ಲಿ ಅಡಗಿದ ಅಜ್ಞಾತ ಶಿಲ್ಪಿ
ನಾರಾಯಣಪುರ ಅಣೆಕಟ್ಟಿನ ಜಲಾಶಯದಲ್ಲಿ ಮುಳುಗಡೆಯ ಭೀತಿಯಲ್ಲಿದ್ದ ಕೂಡಲಸಂಗಮ ಕ್ಷೇತ್ರವನ್ನು ಸರಕಾರ ಅಭಿವೃದ್ಧಿಪಡಿಸುವಂತೆ ಮೂರು ದಶಕಗಳ ಹಿಂದೆ ಮಾಡಿದ ನಮ್ಮ ಪ್ರಯತ್ನದ ವಿಚಾರವಾಗಿ ಹಿಂದಿನ ವಾರಗಳ ಅಂಕಣದಲ್ಲಿ ಓದಿರುತ್ತೀರಿ. ದಿನಾಂಕ 27.11.1980 ರಂದು ಪ್ರಕಟಿಸಿದ ನಮ್ಮ ಮನವಿಗೆ ಲಿಖಿತವಾಗಿ ಬೆಂಬಲ ಸೂಚಿಸಿದವರಲ್ಲಿ ಕೆಲವರು ಕಾಲಕ್ರಮೇಣ ಗೋಸುಂಬೆಯಂತೆ ತಮ್ಮ ಬಣ್ಣ ಬದಲಾಯಿಸಿದರು. ನೀರಾವರಿ ಸಲಹಾ ಮಂಡಳಿಯ ಅಧ್ಯಕ್ಷರಾಗಿದ್ದ ಎಚ್.ಎಂ. ಚನ್ನಬಸಪ್ಪನವರು ಸಿರಿಗೆರೆಗೆ ಬಂದು ನಮ್ಮ ಮುಂದಿಟ್ಟ ಸಲಹೆಯನ್ನು ಒಪ್ಪಿದ ಮೇಲೂ ಸಂಗಮೇಶ್ವರ ಗುಡಿಯನ್ನು ಪೈಲ್ ಫೌಂಡೇಷನ್ ಮೇಲೆ ಯಥಾವತ್ತಾಗಿ ಪ್ರತಿರೂಪಿಸಬೇಕೆಂಬ ವಿಚಾರದಲ್ಲಿಯೂ ಮತ್ತೆ ವಿರೋಧ ಬಂದಿತು. ಉನ್ನತ ಮಟ್ಟದ ಸಲಹಾ ಸಮಿತಿಯು ರಾಜಕೀಯ ಒತ್ತಡಗಳಿಗೆ ಮಣಿದು ಬಿಚ್ಚಿದ ಸಂಗಮೇಶ್ವರ ಗುಡಿಯನ್ನು ಇದ್ದಲ್ಲಿಯೇ ಇರುವ ಹಾಗೆ ಪುನರ್ ರೂಪಿಸಬೇಕೆಂದು ತೀರ್ಮಾನಿಸಿತು. ಸಂಗಮೇಶ್ವರ ಗುಡಿಯ ಎದುರುಗಡೆ ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಸಂಗಮದಲ್ಲಿರುವ ಐಕ್ಯಮಂಟಪದ ಸುತ್ತ ವೃತ್ತಾಕಾರದ ಕಾಂಕ್ರೀಟ್ ಗೋಡೆಯನ್ನು ನಿರ್ಮಿಸಿ ರಕ್ಷಣೆ ಮಾಡಲಾಯಿತು. ತುಂಬಿದ ಜಲಾಶಯದಲ್ಲಿ ಒಂದು ದೊಡ್ಡ ಕಾಂಕ್ರೀಟ್ ಕೊಳವೆ ಬಾವಿಯಂತಿರುವ ಅದರಲ್ಲಿ ಯಾತ್ರಾರ್ಥಿಗಳು ಇಳಿದುಹೋಗಿ ಐಕ್ಯಮಂಟಪದಲ್ಲಿರುವ ಲಿಂಗದ ದರ್ಶನವನ್ನು ಪಡೆಯಲು ಒಳಭಾಗದಲ್ಲಿ ಮೆಟ್ಟಿಲುಗಳಿವೆ (Spiral staircase). ಈ ಐಕ್ಯಮಂಟವು ಬಸವಣ್ಣನವರ ಸಮಾಧಿ ಸ್ಥಳವೆಂದು ಅನೇಕರು ಭಾವಿಸಿದ್ದಾರೆ. ಈ ಮಂಟಪವು ಬಸವಣ್ಣನವರ ಸಮಾಧಿ ಮಂಟಪವೇ ಅಥವಾ ಎಲ್ಲೆಡೆ ನದಿಗಳು ಕೂಡುವ ತಾಣದಲ್ಲಿರುವ ಸಾಮಾನ್ಯ ಸಂಗಮ ಮಂಟಪವೇ ಎನ್ನುವ ವಿಚಾರದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳೂ, ವಾದ-ವಿವಾದಗಳೂ ಇವೆ. ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಿಸುವ ಸಲುವಾಗಿ ತಳಪಾಯವನ್ನು ಉತ್ಖನನ ಮಾಡಿದ ಸಂದರ್ಭದಲ್ಲಿ ನಾವು ಕಣ್ಣಾರೆ ಕಂಡಂತೆ ಮಂಟಪದ ಕೆಳಭಾಗದಲ್ಲಿ ತುಂಬಾ ಆಳದವರೆಗೆ ಬೃಹದಾಕಾರದ ಕಲ್ಲುಬಂಡೆಗಳೇ ಇದ್ದವು. ಆದಕಾರಣ ಮಂಟಪದ ಕೆಳಭಾಗದಲ್ಲಿ ಸಮಾಧಿ ಇದೆಯೆಂದು ನಂಬುವುದು ಕಷ್ಟ. ಆದರೂ ಕೆಲವರು ಭಾವುಕತೆಯ ಭರದಲ್ಲಿ ಮಂಟಪದ ಕೆಳಭಾಗವನ್ನು ಜಾಗರೂಕತೆಯಿಂದ ಅಗೆದು ಅದರ ಅಡಿಯಲ್ಲಿ ಬಸವಣ್ಣನವರ ದೇಹದ ಅಸ್ಥಿಪಂಜರವೇನಾದರೂ ಸಿಕ್ಕರೆ ಅದರ ಆಧಾರದ ಮೇಲೆ ಬಸವಣ್ಣನವರ ಮುಖಚರ್ಯೆಯನ್ನು ಪ್ರತಿರೂಪಿಸಬಹುದು ಎಂದು ಆಗಿನ ಪತ್ರಿಕೆಗಳಲ್ಲಿ ಬರೆದರು. ಇರಾನ್ ದೇಶದಲ್ಲಿ ನೂರಾರು ವರ್ಷಗಳ ನಂತರ ಸಿಕ್ಕಿದ ಅಬೂಸಿನಾ ಎಂಬ ವಿದ್ವಾಂಸನ ಅಪೂರ್ಣ ಮುಖಾವಶೇಷಗಳ ತಳಹದಿಯ ಮೇಲೆ ಆತನ ಮೂರ್ತಿಯನ್ನು ರೂಪಿಸಿ ತಷ್ಕೆಂಟ್ ನಗರದಲ್ಲಿ ಇಟ್ಟಂತೆ ಬಸವಣ್ಣನವರ ಮೂರ್ತಿಯನ್ನು ಪುನರ್ರೂಪಿಸಲು ಏಕೆ ಸಾಧ್ಯವಾಗಬಾರದು ಎಂದೂ ಸಹ ಪ್ರತಿಪಾದಿಸಿದರು.
ಕೂಡಲಸಂಗಮ ಕ್ಷೇತ್ರದ ಪುನರುಜ್ಜೀವನ ಕಾರ್ಯವು ಹೇಗೆ ನಡೆಯುತ್ತಿದೆಯೆಂದು ನೋಡಲು 1982 ರ ಜುಲೈ 30 ರಂದು ಕೂಡಲ ಸಂಗಮಕ್ಕೆ ಹೋದಾಗ ಕರ್ನಾಟಕದ ವಾಸ್ತುಶಿಲ್ಪದ ಇತಿಹಾಸದಲ್ಲಿಯೇ ಅತ್ಯದ್ಭುತವಾದ ಒಂದು ಸಂಗತಿಯು ಅಲ್ಲಿಯ ಕಾರ್ಯನಿರತ ಇಂಜಿನಿಯರುಗಳಿಂದ ತಿಳಿಯಿತು. ಚಿತ್ರದುರ್ಗದಿಂದ ಸೊಲ್ಲಾಪುರಕ್ಕೆ ಹೋಗುವ 13ನೇ ನಂಬರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಡಲ ಸಂಗಮವು ಸಮೀಪಿಸುತ್ತಿದ್ದಂತೆ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಗಿಂತ ಸ್ವಲ್ಪ ಮುಂಚೆ ಬಲಭಾಗಕ್ಕೆ ಬೆಳಗಲ್ ಎಂಬ ಒಂದು ಗ್ರಾಮವಿದೆ. ಕೂಡಲಸಂಗಮದಿಂದ ಇಲ್ಲಿಗೆ ರಸ್ತೆಯ ಮೂಲಕ ಹೋದರೆ 10 ಕಿ.ಮೀ. ಆಗುತ್ತದೆ. ನದಿಯ ಮೂಲಕ ಬಹಳ ಹತ್ತಿರವಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯಿಂದ ಬೆಳಗಲ್ ಗ್ರಾಮದ ಕಡೆ ಹೊರಳಿ ಕೆಲವು ಹೆಜ್ಜೆ ಮುಂದೆ ಹೋದರೆ ರಸ್ತೆಯ ಬಲಬದಿಯಲ್ಲಿ ಒಂದು ಹಾಸುಬಂಡೆ ಇದೆ. ಈ ಹಾಸು ಬಂಡೆಯ ಮೇಲೆ ಸಂಗಮೇಶ್ವರ ದೇವಾಲಯದ ನಕ್ಷೆಯನ್ನು ಕೆತ್ತಲಾಗಿದೆ. ಒಂದು ಸಾವಿರ ವರ್ಷಗಳಿಗೂ ಹೆಚ್ಚು ಪ್ರಾಚೀನವಾದ ಈ ನಕ್ಷೆಯು ಬೆಳಗಲ್ ಗ್ರಾಮದ ಜನರನ್ನು ಬಿಟ್ಟರೆ ನಾಡಿನ ಅನೇಕ ವಿದ್ವಾಂಸರಿಗೂ ಮತ್ತು ಸಂಶೋಧಕರಿಗೂ ಗೊತ್ತೇ ಇಲ್ಲವೆನ್ನಬಹುದು. ನಮಗೆ ಗೊತ್ತಿದ್ದ ಮಟ್ಟಿಗೆ ಈ ಅಪರೂಪದ ನಕ್ಷೆಯನ್ನು ನಮಗಿಂತ ಮೊದಲು ನೋಡಿದವರೆಂದರೆ ಹತ್ತಿರದ ಇಲಕಲ್ ಕಾಲೇಜೊಂದರ ಹಿಂದಿನ ಪ್ರಿನ್ಸಿಪಾಲರೂ ಮತ್ತು ಕನ್ನಡ ಸಾಹಿತಿಗಳೂ ಆದ ಜಿ.ಹೆಚ್. ಹನ್ನೆರಡುಮಠರವರು.
ಈ ಹಾಸುಬಂಡೆಯ ನಕ್ಷೆಯ ವಿಚಾರವಾಗಿ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಪುನಃ ನಾವು ಬೆಳಗಲ್ಗೆ ಹೋಗಿದ್ದು ಅದೇ ವರ್ಷ (1982) ಡಿಸೆಂಬರ್ 10 ರಂದು. ಜೊತೆಯಲ್ಲಿ ನಮ್ಮ ಇಂಜಿನಿಯರಿಂಗ್ ಕಾಲೇಜಿನ ಆಗಿನ ಪ್ರಿನ್ಸಿಪಾಲರಾಗಿದ್ದ ಪ್ರೊಫೆಸರ್ ಆರ್.ಎಫ್. ಪಾಟೀಲರು ಮತ್ತು ಶರಣ ಸಾಹಿತ್ಯವನ್ನು ಚೆನ್ನಾಗಿ ತಿಳಿದುಕೊಂಡಿದ್ದು ನಮ್ಮ ಮಠದ ಆತ್ಮೀಯ ಒಡನಾಡಿಗಳಾಗಿದ್ದ ಬಿ. ಘಂಟಾಚಾರ್ಯರೂ ಇದ್ದರು. ಈ ಹಾಸುಬಂಡೆಯಿಂದ ಕೂಗಿದರೆ ಕೇಳುವಷ್ಟು ದೂರದಲ್ಲಿರುವ ಬೆಳಗಲ್ ಗ್ರಾಮದ ಸುತ್ತಮುತ್ತಣ ಪ್ರದೇಶದಲ್ಲಿ ಹೇರಳವಾಗಿ ದೊರೆಯುವ ಕಲ್ಲುಗಳು ಕಂದು ಬಣ್ಣ ಮಿಶ್ರಿತವಾದ ಬಿಳಿಯ ಕಲ್ಲುಗಳು. ಆದುದರಿಂದಲೇ ಈ ಹಳ್ಳಿಗೆ ಬೆಳಗಲ್ (ಬಿಳಿಯ ಕಲ್ಲು--> ಬೆಳಗಲ್ಲು -->ಬೆಳಗಲ್) ಎಂಬ ಅನ್ವರ್ಥಕ ಹೆಸರು ಬಂದಿರಲು ಸಾಕು. ಸಂಗಮೇಶ್ವರ ಗುಡಿಯ ನಕ್ಷೆಯನ್ನು ಮೊದಲು ಈ ಹಾಸು ಬಂಡೆಯ ಮೇಲೆ ಆ ಕಾಲದ ಶಿಲ್ಪಿಗಳು ತಯಾರು ಮಾಡಿಕೊಂಡು ಅದರಂತೆ ಕಲ್ಲುಗಳನ್ನೆಲ್ಲಾ ಇಲ್ಲಿಯೇ ಕಟೆದು ಸಿದ್ಧಪಡಿಸಿಕೊಂಡು ನಂತರ ಸಂಗಮಕ್ಕೆ ಹೋಗಿ ದೇವಾಲಯವನ್ನು ಕಟ್ಟಿರುವುದಾಗಿ ಗ್ರಾಮಸ್ಥರು ಹೇಳುತ್ತಾರೆ. ಪ್ರಾಯಶಃ ಇಲ್ಲಿಂದ ಮಲಪ್ರಭಾ ನದಿಯ ಮೂಲಕ ತೆಪ್ಪದ ಮೇಲೆ ಕಲ್ಲುಗಳನ್ನು ಸಾಗಿಸಿಕೊಂಡು ಹೋಗಿ ಸಂಗಮೇಶ್ವರ ದೇವಾಲಯವನ್ನು ನಿರ್ಮಿಸಿರಬಹುದು. ದೇವಾಲಯದ ಕಲ್ಲುಗಳಿಗೂ ಮತ್ತು ಈ ಪ್ರದೇಶದ ಕಲ್ಲುಗಳಿಗೂ ಸಾಮ್ಯ ಇರುವುದರಿಂದ ಈ ಮಾತನ್ನು ಒಪ್ಪಬಹುದಾಗಿದೆ. ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಮಧ್ಯದ ಪ್ರದೇಶದಲ್ಲಿ ಬೇರೆ ಎಲ್ಲಿಯೂ ಇಂಥ ಕಲ್ಲುಗಳಿಲ್ಲ. ಕೃಷ್ಣಾ ನದಿ ದಾಟಿದ ಮೇಲೂ ಇಲ್ಲ. ದೇವಸ್ಥಾನದ ನಿರ್ಮಾಣಕ್ಕೆ ಬಳಸಿದ ಅದೇ ನಮೂನೆಯ ಕಲ್ಲುಗಳು ಈಗಲೂ ಬೆಳಗಲ್ ಗ್ರಾಮದ ಸುತ್ತಮುತ್ತ ಇವೆ. ಗ್ರಾಮದ ಹಿರಿಯರು ಹೇಳುವಂತೆ ಕೆಲವು ವರ್ಷಗಳ ಹಿಂದೆ ಊರು ಕಾಣುವ ಹಾಗಿರಲಿಲ್ಲ, ಅಷ್ಟೊಂದು ಭಾರೀ ಕಲ್ಲುಗಳು ಇಲ್ಲಿ ಇದ್ದವು.
ಬಸವಸಾಗರದ ಜಲಾಶಯದ ಕಾರಣ ಅಪಾಯದ ಸ್ಥಿತಿಯಲ್ಲಿದ್ದ ಸಂಗಮೇಶ್ವರ ಗುಡಿಯನ್ನು ಇದ್ದ ಸ್ಥಳದಲ್ಲಿಯೇ ಪೈಲ್ ಪೌಂಡೇಶನ್ ಮೇಲೆ ಪುನರ್ ರೂಪಿಸಲು 1983 ರಲ್ಲಿ ಹೊರಟ ಸರ್ಕಾರದ ಆದೇಶದಂತೆ ಪುರಾತತ್ವ ಇಲಾಖೆಯವರು ಗುಡಿಯ ಒಂದೊಂದೇ ಕಲ್ಲನ್ನು ಜಾಗರೂಕತೆಯಿಂದ ಬಿಚ್ಚಿ ಪ್ರತಿಯೊಂದು ಕಲ್ಲಿಗೂ ಸೀರಿಯಲ್ ನಂಬರ್ಗಳನ್ನು ಕೊಟ್ಟಿದ್ದರು. ಅದರಂತೆಯೇ ಮೂಲ ಗುಡಿಯನ್ನು ಕಟ್ಟುವ ಪೂರ್ವದಲ್ಲಿಯೇ ಆಗಿನ ಕಾಲದ ಶಿಲ್ಪಿಗಳು ಬೆಳಗಲ್ ಬಂಡೆಯ ನಕ್ಷೆಯ ಪ್ರಕಾರ ಗರ್ಭಗುಡಿಯಲ್ಲಿ ಕಲ್ಲುಗಳನ್ನು ಜೋಡಿಸಲು ಗುರುತಿಗೆಂದು ಪ್ರತಿಯೊಂದು ವಿನ್ಯಾಸದ ಕಲ್ಲಿನ ಮೇಲೂ ೧|, ೧||, ೧||| . . . . ೨|, ೨||, ೨|||. . . .೩|, ೩||, ೩||| . . . ಈ ರೀತಿ ಅನುಕ್ರಮವಾಗಿ ಅವರದೇ ಆದ ಲೆಕ್ಕಾಚಾರದಲ್ಲಿ ಕನ್ನಡದ ಅಂಕೆಗಳನ್ನು ಕೆತ್ತಿರುತ್ತಾರೆ. ಅವುಗಳನ್ನು ಆ ಸಂಖ್ಯೆಗಳ ಅನುಕ್ರಮದಲ್ಲಿ ಒಂದರ ಮೇಲೆ ಮತ್ತು ಒಂದರ ಪಕ್ಕದಲ್ಲಿ ಜೋಡಿಸಿ ಗುಡಿಯನ್ನು ಕಟ್ಟಿದ್ದಾರೆ. ಹೀಗೆ ಆಗಿನ ಕಾಲದಲ್ಲಿ ಪ್ರತಿಯೊಂದು ಕಲ್ಲಿನ ಬಿಡಿ ಭಾಗದ ಮೇಲೂ ಗುರುತಿಗೆಂದು ಕೆತ್ತಿದ್ದ ಸಂಖ್ಯೆಗಳನ್ನು ಈಗಲೂ ಸಂಗಮೇಶ್ವರ ದೇವಾಲಯದ ಗರ್ಭಗುಡಿಯ ಹೊರಭಾಗದಲ್ಲಿ ನೋಡಬಹುದು. ಇದುವರೆಗೂ ಯಾವ ಇತಿಹಾಸಜ್ಞರೂ ಈ ಸಂಖ್ಯೆಗಳನ್ನು ಗಮನಿಸಿದಂತೆ ತೋರುವುದಿಲ್ಲ. ಬಹಳ ಸೂಕ್ಷ್ಮ ದೃಷ್ಟಿಯಿಂದ ನೋಡಿದರೆ ಮಾತ್ರ ಕಾಣಿಸುತ್ತವೆ.
ಸಂಗಮೇಶ್ವರ ದೇವಾಲಯದ ಪೂರ್ಣ ನಕ್ಷೆಯು ಹಾಸುಬಂಡೆಯ ಈ ನಕ್ಷೆಯಲ್ಲಿ ಇರುವುದಿಲ್ಲ, ನವರಂಗ ಮತ್ತು ಮುಖಮಂಟಪದ ಭಾಗಗಳನ್ನು ಬಿಟ್ಟು ಗರ್ಭಗುಡಿ ಮತ್ತು ಅದರ ಮುಂದಿನ ಸುಕನಾಸಿಯ ಭಾಗ ಮಾತ್ರ ಇವೆ. ಗರ್ಭಗುಡಿಯ ನಕ್ಷೆಯ ಮಧ್ಯದಲ್ಲಿ ಲಿಂಗದ ರೇಖಾ ಚಿತ್ರವಿದೆ. ಇಲ್ಲಿರುವ ನಕ್ಷೆಯು ಗರ್ಭಗುಡಿಯ ಬೇಸ್ಮೆಂಟ್ ಗೆ ಹೊಂದುವುದಿಲ್ಲ, ಇದು ಗರ್ಭಗುಡಿಯ Ground Plan ಅಲ್ಲ. ಭೂಮಿಗೆ ಅಂಟಿಕೊಂಡಂತೆ ಕಾಣುವ ಕಲ್ಲುಗಳ ನಕ್ಷೆ ಇದಲ್ಲ. ಬೇಸ್ಮೆಂಟ್ ಮೇಲೆ ಕಟ್ಟಡ ಎಲ್ಲಿಂದ ಪ್ರಾರಂಭವಾಗುತ್ತದೆಯೋ ಅಲ್ಲಿಂದ ಎಲ್ಲ ಕಡೆಯಿಂದಲೂ ಮೇಲೆ ಕೆಳಗೆ ಅಕ್ಕಪಕ್ಕ ಜೋಡಿಸಬೇಕಾದ ಬೇರೆ ಬೇರೆ ಆಕಾರದ ಕಲ್ಲುಗಳ ಆಫ್ಸೆಟ್ ಗಳು ಹೇಗಿರಬೇಕೆಂಬ ಶಿಲ್ಪದ ನವಿರಾದ ವಿನ್ಯಾಸವು ಈ ನಕ್ಷೆಯಲ್ಲಿ ಇದೆ. ಇದನ್ನು ಒಂದು ರೀತಿಯಲ್ಲಿ ಕಟ್ಟಡದ ಕೆಲಸವು ನಡೆಯುವಾಗ ಇಂಜಿನಿಯರುಗಳು ಕೊಡುವ working drawings ಎನ್ನಬಹುದು. ಆಧುನಿಕ ಇಂಜಿನಿಯರುಗಳು ಇಂಚುಪಟ್ಟಿ ಹಿಡಿದುಕೊಂಡು ಡ್ರಾಯಿಂಗ್ ಪೇಪರ್ ಮೇಲೆ ಗೆರೆಗಳನ್ನು ಎಳೆಯುವಂತೆಯೇ ಹಿಂದಿನ ಶಿಲ್ಪತಜ್ಞರು ಒಂದು ನಿರ್ದಿಷ್ಟ ಅಳತೆಯನ್ನು ಆಧಾರವಾಗಿರಿಸಿಕೊಂಡು ವಿವಿಧ ಕೆತ್ತನೆಯ ಕಲ್ಲುಗಳ ಹೊರ ಅಂಚಿನ ವಿನ್ಯಾಸಗಳನ್ನು ಸೂಚಿಸುವ ಈ ನಕ್ಷೆಯನ್ನು ಹಾಸು ಬಂಡೆಯ ಮೇಲೆ ಚಿತ್ರಿಸಿರುವಂತೆ ಕಾಣಿಸುತ್ತದೆ. ಈ ನಕ್ಷೆ ಮತ್ತು ದೇವಾಲಯದ ಅಳತೆ 1:10 ಅನುಪಾತದಲ್ಲಿ ಇರುವಂತೆ ತೋರುತ್ತದೆ. ಆಧುನಿಕ ಡ್ರಾಫ್ಟ್ ಮನ್ ಗಳು ಡ್ರಾಯಿಂಗ್ ಕೆಳಭಾಗದಲ್ಲಿ ಆರ್ಕಿಟೆಕ್ಟ್ ಗಳ ಹೆಸರನ್ನು ನಮೂದಿಸುತ್ತಾರೆ. ಹಾಗೆ ಎಲ್ಲಿಯೂ ತನ್ನ ಹೆಸರನ್ನು ನಮೂದಿಸದೆ ಈ ಪ್ರಾಚೀನ ಕಾಲದ ಸಂಗಮೇಶ್ವರ ಗುಡಿಯ ಆರ್ಕಿಟೆಕ್ಟ್ ಅಜ್ಞಾತವಾಗಿಯೇ ಉಳಿದಿದ್ದಾನೆ. ಆದರೆ ತನ್ನ ಶಿಲ್ಪಕಲಾ ಕೌಶಲದಿಂದ ಮಾತ್ರ ಚಿರಾಯುವಾಗಿದ್ದಾನೆ.
ಈ ಹಾಸು ಬಂಡೆಯ ನಕ್ಷೆಯ ಸುತ್ತಲೂ ಸೊಂಟ ಮಟ್ಟದವರೆಗೆ ಚೌಕಾಕಾರದ ಸೈಜುಗಲ್ಲಿನ ಕಟ್ಟೆ ಇದೆ. ಅದರೊಳಗೆ ಒಬ್ಬ ವ್ಯಕ್ತಿ ಹೋಗುವಷ್ಟು ಪೂರ್ವದಿಕ್ಕಿಗೆ ಕಟ್ಟೆಯಲ್ಲಿ ಸ್ವಲ್ಪ ಜಾಗ ಬಿಡಲಾಗಿದೆ. ಅದರೊಳಗೆ ಪ್ರವೇಶಿಸುತ್ತಿದ್ದಂತೆಯೇ ನಕ್ಷೆಯ ಕೆಳಭಾಗದಲ್ಲಿ ೧೨-೨-೫೧ ಎಂದು ತಾರೀಖನ್ನು ಕೆತ್ತಲಾಗಿದೆ. ನಕ್ಷೆಯನ್ನು ಮೊಟ್ಟ ಮೊದಲು ನೋಡಿದಾಗ ಈ ತಾರೀಖು ನಮ್ಮ ಕಣ್ಣಿಗೆ ಬಿದ್ದು ನಕ್ಷೆಯ ಪ್ರಾಚೀನತೆಯ ಪ್ರಾಚೀನತೆಯ ಬಗ್ಗೆ ತುಂಬಾ ಗೊಂದಲವುಂಟಾಯಿತು. ನಕ್ಷೆಯ ರೇಖಾ ಕೌಶಲ್ಯಕ್ಕೂ ದಿನಾಂಕದ ಮೊಂಡು ಮೊಂಡಾದ ಗೆರೆಗಳಿಗೂ ಬಹಳ ವ್ಯತ್ಯಾಸವಿರುವುದರಿಂದ ಈ ದಿನಾಂಕವನ್ನು ದನಕಾಯುವ ಹುಡುಗರು ಕೆತ್ತಿರಬಹುದೇ ಎನ್ನಿಸಿದರೂ ಸಂದೇಹ ಕಾಡುತ್ತಿತ್ತು. ಇದರ ಪರಿಶೀಲನೆಗೆಂದು ಎರಡನೆಯ ಬಾರಿ ಹೋದಾಗ ಬೆಳಗಲ್ ಗ್ರಾಮದ ಹಿರಿಯರಿಂದ ಹೆಚ್ಚಿನ ಮಾಹಿತಿ ದೊರೆಯಿತು: ಒಡ್ಡರ ಸಿದ್ಧಪ್ಪ (ಸಿದ್ಧಪ್ಪ ವೆಂಕಪ್ಪ ಒಡ್ಡರ್) ಎಂಬುವನು ಅಡ್ಡಾಡುವಾಗ ಇದನ್ನು ತುಳಿದನು. ಆದ್ದರಿಂದ ಅವನ ಕಣ್ಣುಗಳು ಹೋದವು. ಭಯಭೀತರಾದ ಗ್ರಾಮಸ್ಥರು ಇದನ್ನು ಯಾರೂ ತುಳಿಯದಿರಲೆಂದು ಸುತ್ತಲೂ ಕಲ್ಲು ದುಂಡಿಗಳನ್ನು ಇಟ್ಟರು. ನಂತರ ತುಂಬಾ ಧಾರ್ಮಿಕ ಪ್ರವೃತ್ತಿಯುಳ್ಳ ಬೆಳಗಲ್ ಗ್ರಾಮದ ಸಂಗಪ್ಪ ಶಾಸ್ತ್ರೀ (ಸಂಗಪ್ಪ ಬಸಪ್ಪ ಅಂಗಡಿ) ಎಂಬುವರು ಕಲ್ಲುದುಂಡಿಗಳನ್ನು ತೆಗೆಸಿ 4 ಅಡಿ ಎತ್ತರದ ಒಂದು ಕಟ್ಟೆಯನ್ನೇ ಕಟ್ಟಿಸಿದರು. ಭಕ್ತರು ಎಣ್ಣೆ ಹೊಯ್ದು ಇದನ್ನು ಪೂಜಿಸುತ್ತಿದ್ದುದರಿಂದ ರೇಖೆಗಳು ಮಾಸಲು ಮಾಸಲಾಗಿದ್ದವು. ಸಂಗಪ್ಪ ಶಾಸ್ತ್ರಿಯು ವಡ್ಡರ ಯಮಣಪ್ಪನಿಂದ ಮೂಲರೇಖೆಗಳ ಮೇಲೆ ಉಳಿಯಾಡಿಸಿ ಸ್ಪುಟವಾಗಿ ಕಾಣಿಸುವಂತೆ ಮಾಡಿದರು. ಹೀಗೆ ಎರಡನೆಯ ಬಾರಿ ಉಳಿಯಾಡಿಸಿದ ದಿನಾಂಕವೇ ೧೨-೨-೫೧. ಬೆಳಗಲ್ ಗ್ರಾಮದ ಯಮನಪ್ಪ ಭೀಮಪ್ಪ ವಾಲೀಕಾರ ಎಂಬ ಸುಮಾರು 70 ವರ್ಷ ವಯಸ್ಸಿನ ವೃದ್ಧರೊಬ್ಬರು ತಾನು 10 ವರ್ಷದ ಹುಡುಗನಾಗಿದ್ದಾಗ ದನಕಾಯಲಿಕ್ಕೆ ಹೋದಾಗ ಈ ನಕ್ಷೆಯನ್ನು ನೋಡಿದ್ದ ನೆನಪಿದೆ ಎಂದು ನಮಗೆ ಹೇಳಿದರು. ಆದ್ದರಿಂದ ಇದು 1951 ರಿಂದ ಈಚಿನದಾಗದೆ ಸಂಗಮೇಶ್ವರ ಗುಡಿಯಷ್ಟೇ ಪ್ರಾಚೀನವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಇಲ್ಲಿ 51 ಎಂದರೆ 951 ಅಥವಾ 1051 ಎಂದು ತಿಳಿದು 10 ಅಥವಾ 11 ನೆಯ ಶತಮಾನದ ಇಸವಿ ಏಕಿರಬಾರದು ಎಂದು ಊಹಿಸಲು ಸಾಧ್ಯವಿಲ್ಲ. ಏಕೆಂದರೆ ಆಗ ಇಂಗ್ಲೀಷ್ ತೇದಿಯ ಕ್ರಮದಲ್ಲಿ ದಿನಾಂಕವನ್ನು ಬರೆಯುವ ಪದ್ಧತಿ ಇರಲಿಲ್ಲ.
ಬಯಲೊಳಗೇ ಇರುವ ಈ ಹಾಸು ಬಂಡೆಯ ಮೇಲೆ ಯಾವ ಗುಡಿಯೂ ಇಲ್ಲ. ಆದರೆ ಜನರ ಭಕ್ತಿ ಭಾವನೆಗಳಿಗೇನೂ ಬಡತನವಿಲ್ಲ. ವ್ಯೋಮಕಾಯನಾದ ಶಿವನನ್ನು ಆರಾಧಿಸಲು ಭಕ್ತರಿಗೆ ಗುಡಿಯೇ ಬೇಕೆಂದೇನೂ ಇಲ್ಲ. ಬೆಳಗಲ್ ಗ್ರಾಮದ ಭಕ್ತಿವಂತ ಜನರು ಬಂಡೆಯ ಮೇಲಿರುವ ಈ ನಕ್ಷೆಯನ್ನೇ ಸಂಗಪ್ಪ (ಸಂಗಮೇಶ್ವರ) ನ ಗುಡಿಯೆಂದು ಪೂಜಿಸುತ್ತಾ ಬಂದಿದ್ದಾರೆ. ಹಬ್ಬ, ಹುಣ್ಣಿಮೆ, ಅಮವಾಸ್ಯೆಯಂದು ಅದಕ್ಕೆ ಹಣ್ಣು ಕಾಯಿ ಒಡೆದು, ಕರ್ಪೂರ ಬೆಳಗಿ ತಮ್ಮ ಭಕ್ತಿಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ನಮ್ಮ ಕಣ್ಣೆದುರಿಗೇ ಒಬ್ಬ ಮಹಿಳೆ ಬಂದು ಊದಿನಕಡ್ಡಿ ಹಚ್ಚಿ ಬೆಳಗಿ ಹಣ್ಣನ್ನು ನೈವೇದ್ಯ ಮಾಡಿ ನಮಸ್ಕರಿಸಿ ಹೋದಳು. ಹೀಗೆ ಜನರ ಭಕ್ತಿಭಾವಗಳಿಂದಲೇ ಸಾವಿರ ವರ್ಷಗಳಿಂದಲೂ ಉಳಿದುಕೊಂಡು ಬಂದಿರುವ ಈ ನಕ್ಷೆಯನ್ನು ವಾಸ್ತುಶಿಲ್ಪದ ಭವ್ಯ ಇತಿಹಾಸದ ದೃಷ್ಟಿಯಿಂದ ಸಂರಕ್ಷಿಸುವುದು ಅತ್ಯವಶ್ಯಕವಾಗಿದೆ. ಮೂರು ದಶಕಗಳ ಹಿಂದೆ ನೋಡಿದ್ದ ಈ ಬೆಳಗಲ್ ಬಂಡೆಯು ಈಗ ಹೇಗಿದೆಯೋ ಮತ್ತೆ ನೋಡಲು ಆಗಿಲ್ಲ. ಆದರೆ ಹಿಂದೆ ನೋಡಿದ್ದ ಸ್ಥಿತಿಗಿಂತ ಈಗ ವಿಭಿನ್ನವಾಗಿದೆಯೆಂದೇನೂ ಅನಿಸುವುದಿಲ್ಲ. ಕೂಡಲ ಸಂಗಮದ ಪುನರುಜ್ಜೀವನದ ಯೋಜನೆಯಲ್ಲಿ ಸರ್ಕಾರವು ಇದರ ಸಂರಕ್ಷಣಾ ಕಾರ್ಯವನ್ನು ಕೈಗೆತ್ತಿಕೊಳ್ಳುವುದು ಒಳ್ಳೆಯದು. ಪುರಾತತ್ವ ಇಲಾಖೆಯು ಇದನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಪರಿಗಣಿಸಿ ಬಿಸಿಲು, ಮಳೆ, ಬಿರುಗಾಳಿಯಿಂದ ಹಾಳಾಗದಂತೆಯೂ, ಶ್ರದ್ಧೆಯಿಲ್ಲದ ಜನರು ಬಂದು ಕಲ್ಲು ಕುಟ್ಟಿ ಹಾಳು ಮಾಡದಂತೆಯೂ ರಕ್ಷಿಸಲು ಎಲ್ಲ ಕ್ರಮ ಕೈಗೊಳ್ಳಬೇಕು. ಇದರ ಮೇಲೆ ಒಂದು ಸುಂದರವಾದ ಗೋಪುರವನ್ನು ನಿರ್ಮಿಸಿ ಸುತ್ತ ಪವಿತ್ರವನವನ್ನು ಮಾಡಿದರಂತೂ ಈ ಬೆಳಗಲ್ ಬಂಡೆಯು ಬಿಸಿಲಿನ ತಾಪದಿಂದ ಬೇಯದೆ ಕೂಡಲ ಸಂಗಮದ ಪ್ರವಾಸಿಗರನ್ನು ತನ್ನೆಡೆಗೆ ಕೂಗಿ ಕರೆಯುತ್ತದೆ; ಹಿಂದಿನ ಅಜ್ಞಾತ ಶಿಲ್ಪಿಗಳ ನಿಃಸ್ವಾರ್ಥ ಕಲಾರಾಧನೆಗೆ ಗೌರವ ಸಲ್ಲಿಸಿದಂತಾಗುತ್ತದೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 9.6.2010.