ವಿಮಾನದಲ್ಲಿ ಕಡಲಾಚೆ....
ಅಮೇರಿಕಾ ಮತ್ತು ಐರೋಪ್ಯ ದೇಶಗಳು ನಮಗೆ ಹೊಸದೇನಲ್ಲ. ಬೆಂಗಳೂರು, ಮೈಸೂರಿನಂತೆ ವಿದ್ಯಾರ್ಥಿದೆಸೆಯಿಂದಲೂ ತೀರಾ ಹತ್ತಿರದಿಂದ ನೋಡಿದ್ದೇವೆ. ಒಂದೇ ಮಾತಿನಲ್ಲಿ ಹೇಳುವುದಾದರೆ, the more I travel outside India, the more I discover my own motherland! ಪರದೇಶಗಳಲ್ಲಿ ಪ್ರವಾಸ ಮಾಡಿದಷ್ಟೂ ನಮ್ಮ ನಾಡನ್ನು ಹೆಚ್ಚು ತಿಳಿಯಲು ನಮಗೆ ಸಾಧ್ಯವಾಗಿದೆ. ಅದೆಷ್ಟು ವಿಮಾನಗಳನ್ನು ಹತ್ತಿ ಇಳಿದಿದ್ದೇವೋ ಲೆಕ್ಕವಿಲ್ಲ. ವಿಮಾನದಲ್ಲಿ ಪಯಣಿಸುವಾಗ ಆರಂಭದ ದಿನಗಳಲ್ಲಿ ಕಿಟಕಿಯ ಹತ್ತಿರ ಕುಳಿತು ನೋಡಬೇಕೆಂದಿದ್ದ ಕುತೂಹಲ ಈಗ ಇಲ್ಲವಾದರೂ ಭೂಮಿಯಿಂದ ಏಳೆಂಟು ಮೈಲಿ ಎತ್ತರದಲ್ಲಿ ಹಾರುವ ವಿಮಾನ ಸದಾ ವಿಸ್ಮಯಕಾರಿ. ಕಿಟಕಿಯಿಂದ ನೋಡದಿದ್ದರೂ ಸೀಟಿನ ಮುಂದಿರುವ ಪುಟ್ಟ ಟೆಲಿವಿಷನ್ ಪರದೆಯಲ್ಲಿ ವಿಮಾನದ ಕೆಳಗೆ ಕಾಣಿಸುವ ಭೂಭಾಗದ ವಿಹಂಗಮ ನೋಟ ಅತ್ಯದ್ಭುತ! ಮೂಡಣದಿಂದ ಪಡುವಣಕ್ಕೆ ಬೀಸುವ ತಂಗಾಳಿಗೆ, ಬಾನೆತ್ತರದಲ್ಲಿ ಖಂಡದಿಂದ ಖಂಡಾಂತರಕ್ಕೆ ಸಾಲುಗಟ್ಟಿ ಹಾರುವ ಹಕ್ಕಿಪಕ್ಷಿಗಳಿಗೆ ಯಾವ ದೇಶ ತಾನೇ ಅಡ್ಡಿ ಬರಲು ಸಾಧ್ಯ? ಯಾವ ದೇಶದ immigration and customs ಅಧಿಕಾರಿಗಳು ಅವುಗಳ ಪಾಸ್ ಪೋರ್ಟ್ ಮತ್ತು ವೀಸಾ ತಪಾಸಣೆ ಮಾಡುತ್ತಾರೆ? “ದೇಶಗಳು ಮತ್ತು ಸರ್ಕಾರಗಳು ಬರುತ್ತವೆ, ಹೋಗುತ್ತವೆ; ಆದರೆ ಪರ್ವತಗಳು ಮಾತ್ರ ಸದಾ ಇರುತ್ತವೆ!” (States and Governments come and disappear whereas the mountains remain for ever) ಎಂಬ ಚೀನೀ ಗಾದೆಯೊಂದು ಇದೆ. ದೇಶವಿದೇಶಗಳ ಸೀಮಾರೇಖೆಗಳನ್ನು ಲೆಕ್ಕಿಸದೆ ಗಡಿಬಾಂದುಗಳನ್ನು ದಾಟಿ ಮೈಚಾಚಿಕೊಂಡಿರುವ ಪರ್ವತಶ್ರೇಣಿಗಳು, ನದೀತಟಾಕಗಳು! ರಾತ್ರಿವೇಳೆ ಪಯಣಿಸುವಾಗ ದೀಪಾವಳಿಯ ಸಂಭ್ರಮದಂತೆ ವಿದ್ಯುದ್ದೀಪಗಳಿಂದ ಜಗಮಗಿಸುವ ನಗರಪ್ರದೇಶಗಳು! ದಿಗ್ ದಿಗಂತಗಳನ್ನು ಆವರಿಸಿರುವ ಸಾಗರಗಳು! ನಭೋಮಂಡಲದಿಂದ ಅವುಗಳನ್ನು ಕಣ್ಣಾರೆ ನೋಡಲು ಅನುವು ಮಾಡಿಕೊಟ್ಟ ವಿಜ್ಞಾನದ ಸಾಧನೆ ಅಸದಳ! ನೂರಾರು ಜನರನ್ನು ಮತ್ತು ಅವರ ಸಾಮಾನುಸರಂಜಾಮುಗಳನ್ನು ಹೊಟ್ಟೆಯೊಳಗಿಟ್ಟುಕೊಂಡು ಒಂದೇ ನೆಗೆತಕ್ಕೆ ಸಾವಿರಾರು ಮೈಲು ದೂರದ ಅಟ್ಲಾಂಟಿಕ್ ಮಹಾಸಾಗರವನ್ನು ದಾಟುವ ದೈತ್ಯಶಕ್ತಿಯುಳ್ಳ, ವಿಮಾನ! ಅಬ್ಬಾ! ಮನುಷ್ಯನ ಬುದ್ದಿ ಶಕ್ತಿಗೆ ಮೇರೆ ಇಲ್ಲ! “ಮನುಷ್ಯ ಹಕ್ಕಿಯಂತೆ ಹಾರಬಲ್ಲ ಮೀನಿನಂತೆ ಈಜಬಲ್ಲ ಆದರೆ ಈ ಭೂಮಿಯ ಮೇಲೆ ಸರಿಯಾಗಿ ಬದುಕುವುದನ್ನು ಮಾತ್ರ ಇನ್ನೂ ಕಲಿತಿಲ್ಲ” ಎಂಬ ಕೊರಗು ಮಾತ್ರ ಇದ್ದೇ ಇದ್ದೇ ವಿಮಾನವು ಮೋಡಗಳನ್ನು ಭೇದಿಸಿ ಮುಂದೆ ಮುಂದೆ ಸಾಗಿದಂತೆ ಮಹಾಕವಿ ಕಾಳಿದಾಸನ ಮೇಘದೂತದ ಆರಂಭದ ಸಾಲು ನೆನಪಾಯಿತು: “ಕಶ್ಚಿತ್ ಕಾಂತಾ-ವಿರಹ-ಗುರುಣಾ ಸ್ವಾಧಿಕಾರಾತ್ ಪ್ರಮತ್ತಃ.....”, ಆಧುನಿಕ ವಿಮಾನಯಾನದ ಸೌಲಭ್ಯವಿಲ್ಲದಿದ್ದರೂ ಕೇವಲ ಕಾವ್ಯಪ್ರತಿಭೆಯಿಂದಲೇ ಹೊರಹೊಮ್ಮಿದ ಮೇಘದೂತ ಕಾಳಿದಾಸನು ಮಾಡಿದ ಪ್ರಾಚೀನ ಭಾರತದ ವೈಮಾನಿಕ ಸಮೀಕ್ಷೆ ಎಂದು ನಮಗೆ ಭಾಸವಾಗುತ್ತದೆ. ಈ ಮಾತನ್ನು ಯಾರಾದರೂ ವಿದ್ವಾಂಸರು ಹೇಳಿದ್ದಾರೆಯೇ ನೋಡೋಣವೆಂದರೆ ಹತ್ತಿರದಲ್ಲಿ ಯಾವ ಪುಸ್ತಕವೂ ದೊರೆಯುವಂತಿರಲಿಲ್ಲ. ಕಾಶಿಯಲ್ಲಿ ಓದುವಾಗ ನಮ್ಮ ಪ್ರೊಫೆಸರ್ ಸಿದ್ದೇಶ್ವರ ಭಟ್ಟಾಚಾರ್ಯರವರು ಒಮ್ಮೆ ನಮ್ಮ ತರಗತಿಯಲ್ಲಿ ಕೇಳಿದ ಪ್ರಶ್ನೆ ನೆನಪಾಯಿತು: ಕಶ್ಚಿತ್ ಕಾಂತಾ ಎಂದು ಕಾಳಿದಾಸ ಬರೆದದ್ದು ವ್ಯಾಕರಣದ ದೃಷ್ಟಿಯಿಂದ ತಪ್ಪಲ್ಲವೇ? ಕಾಚಿತ್ ಕಾಂತಾ ಎಂದಿರಬೇಕಾಗಿತ್ತಲ್ಲವೇ? ಕಾಂತಾ ಸ್ತ್ರೀಲಿಂಗ, ಕಶ್ಚಿತ್ ಪುಲ್ಲಿಂಗ. ಹೌದು, ಮೇಲ್ನೋಟಕ್ಕೆ ಕಾಳಿದಾಸ ಅಶುದ್ಧ ಪ್ರಯೋಗ ಮಾಡಿದ್ದಾನೆ ಎಂದು ಅನಿಸುತ್ತದೆ. ಸರ್ವ ನಾಮವೂ ನಾಮಪದದ ಲಿಂಗ, ವಿಭಕ್ತಿ, ವಚನವನ್ನು ಅನುಸರಿಸಬೇಕಾಗುತ್ತದೆ. ಆದರೆ ಇಲ್ಲಿ ಕಶ್ಚಿತ್ ಎಂಬ ಶಬ್ದ ಪ್ರಯೋಗವಾಗಿರುವುದು ಕಾಂತಾ ಶಬ್ದವನ್ನು ಕುರಿತು ಅಲ್ಲ. ಪದ್ಯದ ಮುಂದಿನ ಸಾಲುಗಳಲ್ಲಿ ಬರುವ ಯಕ್ಷ ಎಂಬ ವಿರಹಿಯನ್ನು ಕುರಿತು. ಯಕ್ಷ ಶಬ್ದ ಪುಲ್ಲಿಂಗವಾದ್ದರಿಂದ ಕಶ್ಚಿತ್ ಎಂದು ಕಾಳಿದಾಸ ಪ್ರಯೋಗಿಸಿರುವುದು ಸರಿಯಾಗಿಯೇ ಇದೆ. ಇಂಟರ್ ವ್ಯೂ ಸಮಯದಲ್ಲಿ ವಿಷಯಪರಿಣತರು ಅಭ್ಯರ್ಥಿಗಳ ಬುದ್ಧಿಶಕ್ತಿಯನ್ನು ಪರೀಕ್ಷಿಸಲು ಇಂತಹ ಬುದ್ದಿವಂತಿಕೆಯ ಪ್ರಶ್ನೆಗಳನ್ನು ಕೇಳುತ್ತಾರೆ. ಆರ್ಲಾಂಡೋದ UCF ಅಂದರೆ University of Central Florida ದಲ್ಲಿ ಏರ್ಪಾಡಾಗಿದ್ದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪಾಣಿನಿಯ ಅಷ್ಟಾಧ್ಯಾಯಿ ಕುರಿತು ನೀಡಬೇಕಾದ ಉಪನ್ಯಾಸದ ಕಾರಣ ಈ ವಾರವೆಲ್ಲಾ ತಲೆಯಲ್ಲಿ ಸಂಸ್ಕೃತ ವ್ಯಾಕರಣವೇ ತುಂಬಿದೆ.
ರಾತ್ರಿ ಬೆಂಗಳೂರು ಬಿಟ್ಟು ಪ್ಯಾರಿಸ್ ಮುಖಾಂತರ ಅಮೇರಿಕಾದ ಅಟ್ಲಾಂಟಾ ನಗರವನ್ನು ತಲುಪುವ ವೇಳೆಗೆ ಇರುಳು ಕಳೆದು ಹಗಲು ಇಮ್ಮಡಿಯಾಗಿತ್ತು! ಇನ್ನು ಕೆಲವೇ ನಿಮಿಷಗಳಲ್ಲಿ ನಮ್ಮ ವಿಮಾನ ಅಟ್ಲಾಂಟಾ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇಳಿಯಲಿದೆಯೆಂದು ಗಗನಸಖಿ ಪ್ರಕಟಿಸಿದಳು. ಪ್ರಯಾಣಿಕರಿಗೆ ಸೀಟ್ ಬೆಲ್ಬನ್ನು ಹಾಕಿಕೊಂಡು ಸೀಟಿನ ಹಿಂಭಾಗವನ್ನು ಸರಿಪಡಿಸಿಕೊಂಡು ನೇರವಾಗಿ ಕುಳಿತುಕೊಳ್ಳಲು ಸೂಚಿಸಿದಳು. ಧ್ಯಾನಮುದ್ರೆಯಲ್ಲಿ ಕುಳಿತುಕೊಳ್ಳುವಂತೆ! ಇಳಿಯುವಾಗ ವ್ಯತ್ಯಾಸವೇನಾದರೂ ಉಂಟಾದರೆ ದೇವರೇ ಕಾಪಾಡಬೇಕೆಂದೋ ಏನೋ! ಸೂಚನೆಯಂತೆ ವಿಮಾನ ಅಧೋಮುಖವಾಗಿ ಇಳಿಯತೊಡಗಿತು. ಕಿಟಕಿಯ ಹೊರಗೆ ವಿಮಾನನಿಲ್ದಾಣದ ಹಸಿರುಹುಲ್ಲಿನ ಮೈದಾನ ಕಾಣಿಸುತ್ತಿತ್ತು. ವಿಮಾನದ ಚಕ್ರಗಳು ರನ್‌ವೇ ಮೇಲೆ ಅಡಿ ಇಡಲು ಕೆಲವೇ ಅಡಿಗಳಷ್ಟು ಅಂತರವಿದ್ದರೂ ಇಳಿಯದೆ ಇದ್ದಕ್ಕಿದ್ದಂತೆಯೇ ವಿಮಾನ ಮತ್ತೆ ಊರ್ಧ್ವಮುಖವಾಗಿ ಆಕಾಶಕ್ಕೆ ಆರ್ಭಟಿಸುತ್ತಾ ನೆಗೆಯಿತು! ಪ್ರಯಾಣಿಕರೆಲ್ಲರಿಗೂ ಅಚ್ಚರಿ ಮತ್ತು ಆತಂಕವನ್ನುಂಟುಮಾಡಿತು. ನಮಗೆ ಈ ತರಹದ ಅನುಭವ ಹಿಂದೊಮ್ಮೆ ಪ್ಯಾರಿಸ್ ನಗರದಲ್ಲಿ ಆಗಿತ್ತು. ರನ್‌ವೇ ಯಲ್ಲಿ ನಾಗಾಲೋಟದಿಂದ ಓಡುತ್ತಾ ಮುನ್ನಡೆದ ವಿಮಾನ ಆಕಾಶದೆಡೆಗೆ ಇನ್ನೇನು ಹಾರಬೇಕೆನ್ನುವಷ್ಟರಲ್ಲಿ ಒಂದು ಇಂಜಿನ್ ತಾಂತ್ರಿಕದೋಷದಿಂದ ಕೂಡಿದೆಯೆಂದು ಮನಗಂಡ ವಿಚಕ್ಷಣಮತಿ ಪೈಲಟ್ ಮುಂದೆ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಲು ದಿಢೀರನೆ ಬ್ರೇಕ್ ಹಾಕಿ ನಿಲ್ಲಿಸಿದ್ದ. ಹಿಂದೆಂದೂ ಕೇಳರಿಯದ ಭಯಾನಕ ಶಬ್ದ ಉಂಟಾಯಿತು. ಕ್ಷಣಾರ್ಧದಲ್ಲಿ ಅಂಬುಲೆನ್ಸ್‌ಗಳು ಫೈರ್ ಎಂಜಿನ್‌ಗಳು ಪೊಲೀಸ್ ವಾಹನಗಳು ಸಿನಿಮೀಯ ಮಾದರಿಯಲ್ಲಿ ನಮ್ಮ ವಿಮಾನವನ್ನು ಸುತ್ತುವರಿದಿದ್ದವು. ಈಗ ಇಳಿಯಬೇಕಾಗಿದ್ದ ವಿಮಾನ ಇದ್ದಕ್ಕಿದ್ದಂತೆಯೇ ಏಕೆ ಮೇಲೇರಿತೆಂದು ತಿಳಿದುಕೊಳ್ಳಬೇಕೆನ್ನುವಷ್ಟರಲ್ಲಿ ಗಗನಸಖಿ ಪ್ರಯಾಣಿಕರ ಆತಂಕವನ್ನು ಗಮನಿಸಿ “The Pilot is very busy in handling the situation and will make an annoucement after taking full control” ಎಂದು ನೀಡಿದ ಉತ್ತರ ಸಮಾಧಾನಕರವಾಗಿರಲಿಲ್ಲ, ಮೇಲೇರಿದ ವಿಮಾನ ಆಕಾಶದಲ್ಲಿ ಮೂರ್ನಾಲ್ಕು ಸುತ್ತು ಗಿರಕಿ ಹೊಡೆದ ಮೇಲೆ ಪೈಲೆಟ್ ನಿಂದ ತಿಳಿದು ಬಂದ ಸಂಗತಿ: ನಮ್ಮ ರನ್ ವೇನಲ್ಲಿ ಆಕಸ್ಮಿಕವಾಗಿ ಬೇರೊಂದು ವಿಮಾನ ಅಡ್ಡ ಬಂದಿತ್ತು! ಪೈಲೆಟ್ನ ಜಾಣ್ಯ ಮತ್ತು ಜಾಗರೂಕತೆಯಿಂದಾಗಿ ಯಾವ ಅನಾಹುತವೂ ಸಂಭವಿಸಲಿಲ್ಲ.
ಅಟ್ಲಾಂಟಾ ವಿಮಾನ ನಿಲ್ದಾಣದಲ್ಲಿ ಪ್ರತಿ 30 ಸೆಕೆಂಡಿಗೆ ಒಂದು ವಿಮಾನ ಇಳಿಯುತ್ತದೆ ಇಲ್ಲವೇ ಹಾರುತ್ತದೆ. ಇಲ್ಲಿಯ ಜನ ನೀವು ಸ್ವರ್ಗಕ್ಕಾಗಲೀ ನರಕಕ್ಕಾಗಲೀ ಎಲ್ಲಿಗೇ ಹೋಗುವುದಾದರೂ ಅಟ್ಲಾಂಟಾ ಮುಖಾಂತರ ಹಾಯ್ದು ಹೋಗದೆ ಬೇರೆ ಗತ್ಯಂತರವಿಲ್ಲ ಎನ್ನುತ್ತಾರೆ (You dont go to heaven or hell without flying through Atlanta), ನಮಗೆ ಅಮೇರಿಕಾದ ಮಕ್ಕಳು ಈಗಿನ ಅಧ್ಯಕ್ಷ ಜಾರ್ಜ್ ಬುಷ್ ಬಗ್ಗೆ ಹೇಳಿದ್ದ ಒಂದು ವಿಡಂಬನೆ ನೆನಪಾಯಿತು: ಒಮ್ಮೆ ವಿಮಾನವೊಂದು ಚಾಲಕನ ಹತೋಟಿ ತಪ್ಪಿತು. ಅಪಘಾತ ಸಂಭವಿಸುವ ಮುನ್ನ ಪ್ಯಾರಾಚ್ಯೂಟನ್ನು ಬಳಸಿಕೊಂಡು ವಿಮಾನದಿಂದ ಹೊರಗೆ ಜಿಗಿದು ಜೀವಸಂರಕ್ಷಣೆ ಮಾಡಿಕೊಳ್ಳಲು ಪೈಲೆಟ್ ಪ್ರಯಾಣಿಕರಿಗೆ ಸೂಚನೆ ನೀಡಿದ. ಆ ವಿಮಾನದಲ್ಲಿ 5 ಜನ ಪ್ರಯಾಣಿಕರು ಇದ್ದರು. ಆದರೆ ನಾಲ್ಕೇ ನಾಲ್ಕು ಪ್ಯಾರಾಚ್ಯೂಟ್ ಗಳು ಇದ್ದವು. ಪ್ರಯಾಣಿಕರಲ್ಲಿ ಒಬ್ಬನಾದ ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರನಾದ ರೊನಾಲ್ಡೊ ಚಂಗನೆ ಸೀಟಿನಿಂದ ನೆಗೆದು "ಫುಟ್ಬಾಲ್ ಕ್ರೀಡಾಜಗತ್ತಿಗೆ ನಾನು ಬೇಕು. ನಾನು ಸತ್ತರೆ ನನ್ನ ಕ್ರೀಡಾಭಿಮಾನಿಗಳಿಗೆ ತುಂಬಾ ವೇದನೆಯಾಗುತ್ತದೆ. ಆದ್ದರಿಂದ ನಾನು ಬದುಕಬೇಕು” ಎಂದು ಹೇಳಿ ಒಂದು ಪ್ಯಾರಾಚ್ಯೂಟ್‌ನ್ನು ತೆಗೆದುಕೊಂಡು ವಿಮಾನದಿಂದ ಹೊರಗೆ ಜಿಗಿದನು. 2ನೆಯ ಪ್ರಯಾಣಿಕಳಾದ ಶ್ರೀಮತಿ ಹಿಲೇರಿ ಕ್ಲಿಂಟನ್ “ನಾನು ಹಿಂದಿನ ಅಮೇರಿಕಾದ ಅಧ್ಯಕ್ಷನ ಹೆಂಡತಿ, ನ್ಯೂಯಾರ್ಕಿನ ಸೆನೆಟರ್. ಅಮೇರಿಕಾದ ಮುಂದಿನ ಅಧ್ಯಕ್ಷೆಯಾಗುವ ಎಲ್ಲ ಅರ್ಹತೆಗಳೂ ನನ್ನಲ್ಲಿವೆ, ನಾನು ಸಾಯಲಾರೆ” ಎಂದು ಹೇಳಿ 2ನೆಯ ಪ್ಯಾರಾಚ್ಯೂಟ್‌ನ್ನು ಹಿಡಿದುಕೊಂಡು ವಿಮಾನದಿಂದ ಹೊರಗೆ ಜಿಗಿದಳು. 3ನೆಯ ಪ್ರಯಾಣಿಕನಾದ ಜಾರ್ಜ್ ಬುಷ್: “ನಾನು ಅಮೇರಿಕಾದ ಅಧ್ಯಕ್ಷ, ಅಮೇರಿಕಾದ ಇತಿಹಾಸದಲ್ಲಿಯೇ ನನ್ನಂತಹ ದಕ್ಷ, ಜಾಣ ಅಧ್ಯಕ್ಷ ಮತ್ತೊಬ್ಬನಿಲ್ಲ. ಜಗತ್ತಿನ ಅನೇಕ ಜವಾಬ್ದಾರಿ ಕೆಲಸಗಳು ನನ್ನ ಹೆಗಲ ಮೇಲಿವೆ. ಹೀಗಿರುವಾಗ ನಾನು ಸತ್ತರೆ ಜಗತ್ತಿಗೆ ತುಂಬಾ ನಷ್ಟವಾಗುತ್ತದೆ” ಎಂದು ಹೇಳಿ 3ನೆಯ ಪ್ಯಾರಾಚ್ಯೂಟ್‌ನ್ನು ತೆಗೆದುಕೊಂಡು ಹೊರಗೆ ಜಿಗಿದನು. ಇನ್ನುಳಿದ ಪ್ರಯಾಣಿಕರೆಂದರೆ ಕೈಸ್ತರ ಧರ್ಮಗುರುವಾದ ಪೋಪ್ ಮತ್ತು ಒಬ್ಬ ಪುಟ್ಟ ಶಾಲಾಬಾಲಕ. ಆದರೆ ಬದುಕಿ ಉಳಿಯಲು ಇದ್ದದ್ದು ಒಂದೇ ಒಂದು ಪ್ಯಾರಾಚ್ಯೂಟ್ ಮಾತ್ರ. ಪುಟ್ಟ ಬಾಲಕನನ್ನು ನೋಡಿದ ಧರ್ಮಗುರು ಪೋಪ್ ಗೆ ಅಂತಃಕರಣ ಉಕ್ಕಿ ಬಂತು. ಆ ಬಾಲಕನನ್ನು ಹತ್ತಿರ ಕರೆದು ಮೈದಡವಿ ಪ್ರೀತಿಯಿಂದ “ಮಗು, ನನಗೆ ವಯಸ್ಸಾಗಿದೆ, ನಾನು ಈ ಜಗತ್ತಿನ ಒಳಿತಿಗಾಗಿ ಸಾಕಷ್ಟು ಧರ್ಮಬೋಧೆ ಮಾಡಿದ್ದೇನೆ. ಇನ್ನೆಷ್ಟು ಕಾಲ ನಾನು ಬದುಕಬಲ್ಲೆ? ನೀನಿನ್ನೂ ಎಳೆಯ ಹುಡುಗ, ಮುಂದೆ ಬಹಳ ಕಾಲ ಬದುಕಿ ಬಾಳಬೇಕಾದವನು. ನಾನು ಈ ಇಳಿ ವಯಸ್ಸಿನಲ್ಲಿ ಸತ್ತರೆ ಅಂತಹ ದೊಡ್ಡ ನಷ್ಟವೇನೂ ಆಗುವುದಿಲ್ಲ. ನಾನು ದೇವರಿಗೆ ಶರಣಾಗುತ್ತೇನೆ. ಇಗೋ ತೆಗೆದುಕೋ ಈ ಪ್ಯಾರಾಚ್ಯೂಟ್‌ನ್ನು. ಇದರ ಸಹಾಯದಿಂದ ನೀನು ಹೊರಗೆ ಜಿಗಿದು ಬದುಕಿ ನೂರ್ಕಾಲ ಬಾಳು!” ಎಂದು ಪೋಪ್ ಕೊನೆಗೆ ಉಳಿದಿದ್ದ ಆ ಪ್ಯಾರಾಚ್ಯೂಟ್‌ನ್ನು ಮಗುವಿಗೆ ಕೊಟ್ಟು ಹರಸುತ್ತಾನೆ. ಆ ಪೋರ ತುಂಟ ನಗೆಯಿಂದ ಪೋಪ್ನನ್ನು ದಿಟ್ಟಿಸಿ ನೋಡಿ “ಅಜ್ಜ, ನೀನೇನೂ ಚಿಂತಿಸಬೇಡ. ನಮ್ಮಿಬ್ಬರಿಗೂ ಒಂದೊಂದು ಪ್ಯಾರಾಚ್ಯೂಟ್ ಇದೆ. ಕಡುಜಾಣನೆನಿಸಿಕೊಂಡ ಅಮೇರಿಕಾದ ನಮ್ಮ ಅಧ್ಯಕ್ಷ ಜಾರ್ಜ್ ಬುಷ್ ನನ್ನ ಸ್ಕೂಲ್ ಬ್ಯಾಗನ್ನೇ ಪ್ಯಾರಾಚ್ಯೂಟ್ ಎಂದು ಭ್ರಮಿಸಿ ಅದನ್ನು ಹಿಡಿದುಕೊಂಡು ಕೆಳಗೆ ಹಾರಿದ್ದಾನೆ. ಆದಕಾರಣ ಇನ್ನೂ ಒಂದು ಪ್ಯಾರಡೂಟ್ ಮಿಕ್ಕಿ ಉಳಿದಿದೆ, ಬಾ ಇಬ್ಬರೂ ಒಟ್ಟಿಗೆ ಹಾರಿ ಬದುಕೋಣ” ಎಂದು ಪೋಪ್ ನ ಕೈಹಿಡಿದು ಜಗ್ಗಿದನಂತೆ!....
ಅಮೇರಿಕಾದಲ್ಲಿರುವ ತಂದೆ-ತಾಯಿಗಳು ಭಾರತವನ್ನು ಒಂದು ಗುಮ್ಮನನ್ನಾಗಿ ಮಾಡಿಕೊಂಡಿದ್ದಾರೆ. ಮಗು ಹಾಲು ಕುಡಿಯದಿದ್ದರೆ ಗುಮ್ಮನ ಕರೀತೀನಿ ನೋಡು ಎಂದು ಹೆದರಿಸಿದಂತೆ ತಮ್ಮ ಬೆಳೆಯುವ ಮಕ್ಕಳು ಯಾವುದೇ ವಿಷಯ ಕುರಿತು ಹಠ ಮಾಡಿದರೆ “Look, if you do like this, I will send you to India” (ಹೀಗೆಲ್ಲಾ ಮಾಡಿದರೆ ನಿನ್ನನ್ನು ಇಂಡಿಯಾಕ್ಕೆ ಕಳುಹಿಸಿಬಿಡ್ತೀನಿ ನೋಡು) ಎಂದು ಮಾತು ಮಾತಿಗೆ ಬೆದರಿಕೆ ಹಾಕುತ್ತಾರೆ. ಈ ರೀತಿ ಗದರಿಸುವಾಗ ಅವರಿಗೆ ಮಕ್ಕಳ ಮೇಲಿರುವ ಪ್ರೀತಿಗಿಂತ ಸಿಟ್ಟು ಎದ್ದು ಕಾಣಿಸುತ್ತದೆ. ಮಕ್ಕಳಿಗೂ ಭಾರತದ ಗುಮ್ಮ ಹೇಗಿರುತ್ತದೆ ಎಂಬುದು ಚೆನ್ನಾಗಿ ಗೊತ್ತು. ಅಮೇರಿಕಾದಲ್ಲಿ ನೆಲೆಸಿ ಅಲ್ಲಿ ಹೆಚ್ಚಿನ ನಾಗರಿಕ ಸೌಲಭ್ಯಗಳನ್ನು ಅನುಭವಿಸಿದ ಭಾರತೀಯ ಸಂಜಾತ ಮಕ್ಕಳಿಗೆ ರಜಾಕಾಲದಲ್ಲಿ ಭಾರತಕ್ಕೆ ಬಂದಾಗ ಅಲ್ಲಿಯ ಕೊಳಕು ಬಾತ್ ರೂಮುಗಳು, ಚರಂಡಿಗಳ ದುರ್ವಾಸನೆ, ಗುಂಡಿಬಿದ್ದ ರಸ್ತೆಗಳು, ಆಡ್ಡಾದಿಡ್ಡಿ ಸಂಚರಿಸುವ ವಾಹನಗಳು, ಕಿವಿಗಡಚಿಕ್ಕುವ ಹಾರನ್ ಗಳು, ಧ್ವನಿವರ್ಧಕಗಳ ಆರ್ಭಟ, ಜನರ ಕೂಗಾಟ ಕಿರಚಾಟ, ಬಿಸಿಲು, ಸೊಳ್ಳೆಗಳ ಕಡಿತದಿಂದ ಮೈ ಬೊಬ್ಬೆ ಬಂದು ಭಯಭೀತರಾಗಿ ಎಷ್ಟು ಬೇಗ ಅಮೇರಿಕಾಗೆ ಹಿಂದಿರುಗುತ್ತೇವೋ ಎಂದು ಚಡಪಡಿಸುತ್ತಿರುತ್ತಾರೆ. ತಂದೆ-ತಾಯಿಗಳಿಗೆ ಭಾರತದೊಂದಿಗಿರುವ ಭಾವನಾತ್ಮಕ ಸಂಬಂಧ ಅಮೇರಿಕಾದಲ್ಲಿ ನೆಲಸಿರುವ ಮಕ್ಕಳಿಗೆ ಅರ್ಥವಾಗುವುದಿಲ್ಲ. ಭಾರತವನ್ನು ಗುಮ್ಮನನ್ನಾಗಿ ಮಾಡಿ ಬೆಚ್ಚಿಬೀಳಿಸಿದರೆ ಅರ್ಥವಾಗುವುದಾದರೂ ಹೇಗೆ?
ಪರದೇಶಗಳಿಗೆ ಬಂದಾಗಲೆಲ್ಲಾ ನಾವು ಮಕ್ಕಳು ಮತ್ತು ಯುವಜನರೊಂದಿಗೆ ಮಾತನಾಡುವುದು ಹೆಚ್ಚು ದೊಡ್ಡವರು ನಮ್ಮನ್ನು ಮಾತನಾಡಿಸಲು ಹೆದರಿದರೆ, ಮಕ್ಕಳು ಹೆದರುವುದಿಲ್ಲ. ಅದಕ್ಕೆ ಕಾರಣ ಅವರ ಮುಗ್ಧತೆ, Have you got a job, how much do you get paid?” ಹೀಗೆ ಕೇಳಿದವರು ಯಾವ ಪತ್ರಕರ್ತರೂ ಅಲ್ಲ; ಅಮೇರಿಕಾದ ಭಾರತೀಯ ಸಂಜಾತಳಾದ ಒಬ್ಬ ಪುಟ್ಟ ಶಾಲಾ ಬಾಲಕಿ. ಕೇಳಿದ್ದು ಮತ್ತಾರನ್ನೂ ಅಲ್ಲ ಸಿರಿಗೆರೆಯ ಮಠದ ಗುರುಗಳಾದ ನಮ್ಮನ್ನು! ಸಂದರ್ಭ: ಉತ್ತರ ಅಮೇರಿಕಾದಲ್ಲಿ ನೆಲೆಸಿರುವ ವೀರಶೈವ ಸಮಾಜದ ವಾರ್ಷಿಕ ಸಮ್ಮೇಳನ. ಪ್ರತಿವರ್ಷ ಅಮೇರಿಕಾ ಮತ್ತು ಕೆನಡಾದ ಬೇರೆ ಬೇರೆ ನಗರಗಳಲ್ಲಿ ಇದುವರೆಗೆ 30 ಸಮ್ಮೇಳನಗಳು ನಡೆದಿದ್ದು ಈ ವರ್ಷದ 31ನೆಯ ಸಮ್ಮೇಳನ ಇದೇ ಜುಲೈ 3-5 ರವರೆಗೆ ಕ್ಯಾಲಿಫೋರ್ನಿಯಾದ ಸ್ಯಾನ್ ರೆಮೋನ್ (San Ramon) ನಲ್ಲಿ ನಡೆಯಲಿದೆ. ಇಂತಹದೇ ಸಮ್ಮೇಳನ ಈ ಹಿಂದೆ ಬೇರೆಡೆ ನಡೆದಾಗ ಸಮಾರಂಭದ ಸಂಘಟಕರು ಇಲ್ಲಿಯ ಮಕ್ಕಳೊಂದಿಗೆ ಒಂದು ಸಂವಾದವನ್ನು ಏರ್ಪಡಿಸಿದ್ದರು. ಎಳೆ ವಯಸ್ಸಿನ ಮಕ್ಕಳು ಕುಳಿತಿದ್ದ ಒಂದು ದೊಡ್ಡ ಕೊಠಡಿಗೆ ತಾಯಂದಿರು ನಮ್ಮನ್ನು ಕರೆದುಕೊಂಡು ಹೋದರು. ಮಕ್ಕಳು ಅರಳಿದ ತಾವರೆಯ ಕಣ್ಣುಗಳಿಂದ ನಮ್ಮನ್ನು ನೋಡಿ ತುಂಟ ನಗೆ ಬೀರಿದವು. ನಾವು ಧರಿಸಿದ್ದ ಕಾವಿ ಬಟ್ಟೆ, ಕೊರಳಲ್ಲಿನ ರುದ್ರಾಕ್ಷ ಮಾಲೆ, ತಲೆಯ ಮೇಲಿನ ಪೇಟ ಅವರಿಗೆ ವಿಚಿತ್ರವಾಗಿ ಕಾಣಿಸಿದ್ದವು. ಒಬ್ಬ ಮಹಿಳೆ ಮಕ್ಕಳಿಗೆ ನಮ್ಮ ಪರಿಚಯವನ್ನು ಮಾಡಿಕೊಟ್ಟು ಏನಾದರೂ ಪ್ರಶ್ನೆಗಳನ್ನು ಕೇಳುವುದಿದ್ದರೆ ಕೇಳಬಹುದೆಂದು ಸೂಚಿಸಿದಳು. ಹತ್ತಾರು ಮಕ್ಕಳು ಕೈ ಎತ್ತಿದರು. ಇಲ್ಲಿಯ ಶಿಕ್ಷಣ ಪದ್ಧತಿ ಕಲಿಸಿದ ಶಿಸ್ತು ಅದು. Yes ಎಂದು ಒಬ್ಬ ಮಗುವಿನತ್ತ ಬೆರಳು ಮಾಡಿ ತೋರಿಸಿದಾಗ ಆ ಮಗು ನಮ್ಮ ಕೊರಳಲ್ಲಿರುವ ರುದ್ರಾಕ್ಷಿಯನ್ನು ಕಂಡು ಕೇಳಿತು: “What is the necklace that you are wearing on your neck?” ಇನ್ನೊಬ್ಬ ಪುಟ್ಟ ಬಾಲಕಿ ಗಂಭೀರವದನಳಾಗಿ ಕೇಳಿದಳು: "Does your wife miss you when you are away from the country?” ಸಂವಾದವನ್ನು ಏರ್ಪಡಿಸಿದ್ದ ಮಹಿಳೆಯರು ಸುಸ್ತೋ ಸುಸ್ತು! ನಮ್ಮ ರಕ್ಷಣೆಗೆ ಧಾವಿಸಿದ ಮಹಿಳೆಯೊಬ್ಬಳು “Look, Swamiji is not married and does not have his own family!” ಎಂದು ವಿವರಿಸಿದಳು.
ಸಮಾಧಾನಗೊಳ್ಳದ ಆ ಪೋರಿ ಮತ್ತೊಂದು ಹರಿತವಾದ ಪ್ರಶ್ನೆಯ ಬಾಣ ಬಿಟ್ಟಳು: “If you do not have any family, how Were you born then?” ಆ ಬಾಲಕಿಯ ಬಗ್ಗೆ ನಮಗೆ ಅನುಕಂಪ ಮೂಡಿತು. ಆಕೆಯ ತಂದೆ ಒಬ್ಬ ದೊಡ್ಡ ವಾಣಿಜ್ಯೋದ್ಯಮಿ ಇರಬೇಕೆಂದೆನಿಸಿತು. ವ್ಯವಹಾರದ ನಿಮಿತ್ತ ವಾರಗಟ್ಟಲೆ ಮನೆಯಿಂದ ದೂರ ಹೋಗುತ್ತಿದ್ದು ತಾಯಿ ಮನೆಯಲ್ಲಿ ಏಕಾಂಗಿಯಾಗಿ ಇರುವುದು ಆ ಮಗಳ ಮನಸ್ಸಿಗೆ ವೇದನೆಯುಂಟುಮಾಡಿರಬೇಕೆಂಬ ನಮ್ಮ ಊಹೆ ನಿಜವಾಗಿತ್ತು!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 2.7.2008.