ದೇವರಿಗೇ ತಿರುಮಂತ್ರ ಹಾಕಿದ ಭೂಪರು!
ವ್ಯಕ್ತಿಗಳ ಹೆಸರಿನ ಹಿಂದೆ ಇನಿಷಿಯಲ್ಸ್ ಗಳಾಗಿ ಇಂಗ್ಲೀಷ್ ವರ್ಣಮಾಲೆಯ ಅಕ್ಷರಗಳು ಇರುವಂತೆ ನಮ್ಮ ನಾಡಿನ ಅನೇಕ ಹಳ್ಳಿಗಳ ಹೆಸರಿನ ಹಿಂದೆಯೂ ಇಂಗ್ಲೀಷ್ ಅಕ್ಷರಗಳು ಇರುವುದು ಒಂದು ವಿಶೇಷ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನಲ್ಲಿರುವ ಒಂದು ಚಿಕ್ಕ ಹಳ್ಳಿ ಎಸ್.ಬಿದರೆ. ಈ ತಾಲ್ಲೂಕಿನಲ್ಲಿ ಬಿದರೆ ಎಂಬ ಹೆಸರಿನ ಎರಡು ಹಳ್ಳಿಗಳು ಇರುವುದರಿಂದ ಸಿಂದಿಗೆರೆ ಗ್ರಾಮದ ಸಮೀಪದಲ್ಲಿರುವ ಈ ಹಳ್ಳಿಯನ್ನು ಎಸ್.ಬಿದರೆ ಎಂದೂ ಕಂಚುಗಲ್ ಗ್ರಾಮದ ಸಮೀಪದ ಹಳ್ಳಿಯನ್ನು ಕೆ.ಬಿದರೆ ಎಂದೂ ಕರೆಯುತ್ತಾರೆ. ವಾಸ್ತವವಾಗಿ ಈ ಗ್ರಾಮದ ಪುರಾತನ ಹೆಸರು ಶ್ರೀಬಿದರೆ. ಬ್ರಿಟಿಷರ ಆಳ್ವಿಕೆಯಲ್ಲಿ ನಮ್ಮ ದೇಶದ ಹಳ್ಳಿಗಳ, ನಗರ ಪಟ್ಟಣಗಳ ಹೆಸರುಗಳು ಹೇಗೆ ವಿಕೃತಗೊಂಡಿವೆ ಎಂಬುದಕ್ಕೆ ಇದೊಂದು ಉದಾಹರಣೆ. ಇತ್ತೀಚೆಗೆ ಈ ಹಳ್ಳಿಯ ದೇವಸ್ಥಾನದ ಒಂದು ಕಾರ್ಯಕ್ರಮಕ್ಕೆ ಹೋದಾಗ ಅದರ ಆವರಣದಲ್ಲಿರುವ ಅನೇಕ ಪ್ರಾಚೀನ ಶಾಸನಗಳು ನಮ್ಮ ಕಣ್ಣಿಗೆ ಬಿದ್ದವು. ಅವುಗಳಲ್ಲಿ ಒಂದು ಕ್ರಿ.ಶ 1162 ರಲ್ಲಿ ಹೊಯ್ಸಳರ ಒಂದನೇ ನರಸಿಂಗದೇವನ ಆಳ್ವಿಕೆಯ ಕಾಲದ ಕನ್ನಡ ಶಾಸನ. ಈ ಗ್ರಾಮದ ಬ್ರಹ್ಮದೇವಾಲಯದ ಧೂಪ-ದೀಪ-ನೈವೇದ್ಯ-ಜೀರ್ಣೋದ್ದಾರಕ್ಕೆಂದು ಒಂದು ಸಲಿಗೆ ಜಮೀನನ್ನು ದಾನವಾಗಿ ನೀಡಿದ ವಿಷಯ ಇದರಲ್ಲಿ ಉಲ್ಲೇಖವಾಗಿದೆ. ಆ ಜಮೀನನ್ನು ದಾನ ಮಾಡಿದವರು ಈ ಊರಿನ ಬಮ್ಮಗವುಂಡ ಮತ್ತು ಕೇತವ್ವೆಯರ ಮಗನಾದ ಗುಲ್ಲಗವುಂಡ ಹಾಗೂ ಅವನ ಅಣ್ಣ ದೇವಗವುಂಡ ಮತ್ತು ಅವರ ಸತಿಯರು. ಅಷ್ಟೇ ಅಲ್ಲದೆ ಆ ಜಮೀನಿಗೆ ಹೊಂದಿಕೊಂಡಂತೆ ಇರುವ ಜಮೀನನ್ನೂ ಸಹ ಇನ್ನೊಬ್ಬರು ಖರೀದಿಸಿ ದಾನ ಮಾಡಿರುವುದಾಗಿಯೂ ಶಾಸನದಲ್ಲಿ ಉಕ್ತವಾಗಿದೆ. ಶಾಸನದ ಕೊನೆಯಲ್ಲಿ ಬರುವ ಈ ಮುಂದಿನ ಅಪರೂಪದ ಸಂಸ್ಕೃತ ಶ್ಲೋಕ ನಮ್ಮ ಗಮನ ಸೆಳೆಯಿತು:
ಸ್ವದತ್ತಾಂ ಪರದತ್ತಾಂ ವಾ ಯೋ ಹರತಿ ವಸುಂಧರಾಂ।
ಷಷ್ಠಿರ್ವರ್ಪಸಹಸ್ರಾಣಿ ವಿಷ್ಠಾಯಾಂ ಜಾಯತೇ ಕ್ರಿಮಿಃll
ಅಂದರೆ ಒಬ್ಬರು ದಾನವಾಗಿ ಕೊಟ್ಟ ಭೂಮಿಯನ್ನು ಬೇರೊಬ್ಬರು ಅಪಹರಿಸಿದರೆ ಅಂಥವರು 60 ಸಾವಿರ ವರ್ಷ ಮನುಷ್ಯನ ಮಲದಲ್ಲಿ ಹುಳುವಾಗಿ ಹುಟ್ಟುತ್ತಾರೆ ಎಂದು ಇದರ ಅರ್ಥ. ಸಾರ್ವಜನಿಕ ಸೊತ್ತುಗಳನ್ನು ಅಪಹರಿಸುವವರಿಗೆ ಎಚ್ಚರಿಕೆ ನೀಡುವಂತಿರುವ ಈ ಶಾಸನವು ಆ ಕಾಲದ ಜನರ ಧಾರ್ಮಿಕಶ್ರದ್ಧೆ ಮತ್ತು ನಿಷ್ಠೆಯ ದ್ಯೋತಕವಾಗಿದೆ. ಗತಕಾಲದ ಶಾಸನಗಳನ್ನು ಈಗ ನಾವು ಕೇವಲ ಐತಿಹಾಸಿಕ ದಾಖಲೆಗಳನ್ನಾಗಿ ನೋಡುತ್ತೇವೆ. ವಾಸ್ತವವಾಗಿ ಅವು ಅಂದಿನ ಕಾಲದ ಕಾನೂನು ದಾಖಲೆಗಳೆಂದರೂ ತಪ್ಪಲ್ಲ. ಶಾಸನ ಎಂದರೆ ಕಾನೂನೇ ಅಲ್ಲವೆ! ತಾಮ್ರ ಶಾಸನಗಳಿಗಿಂತ ಶಿಲಾಶಾಸನಗಳು ಹೆಚ್ಚು ವಿಶ್ವಾಸನೀಯ ಎಂದು ಇತಿಹಾಸಜ್ಞರ ಅಭಿಪ್ರಾಯ.
ಮೇಲಿನ ಶಾಸನವನ್ನು ಬರೆದು 850 ವರ್ಷಗಳು ಗತಿಸಿವೆ. ಕಾಲವನ್ನು ಅವಸರ್ಪಿಣೀ ಎಂದು ಜೈನರು ಕರೆಯುತ್ತಾರೆ. ಅಂದರೆ ಬರುಬರುತ್ತಾ ಜನರಲ್ಲಿ ಧರ್ಮಶ್ರದ್ದೆ ಕಡಿಮೆಯಾಗುತ್ತದೆ; ಸ್ವಾರ್ಥ ಲಾಲಸೆಗಳು ಹೆಚ್ಚುತ್ತಾ ಹೋಗುತ್ತವೆ. ಅಂದು ಜನರಲ್ಲಿದ್ದ ಧಾರ್ಮಿಕ ಶ್ರದ್ದೆ ಇಂದು ಉಳಿದಿಲ್ಲ. ತನ್ನ ಸ್ವಾರ್ಥಕ್ಕಾಗಿ ನೆಲದ ದಾಹಕ್ಕಾಗಿ ದೇವಾಲಯಗಳ ಸೊತ್ತುಗಳನ್ನು ಆಪೋಶನ ತೆಗೆದುಕೊಳುವುದು ಹೆಚ್ಚುತ್ತಾ ಬರುತ್ತಿದೆ. ನಮ್ಮ ಸದ್ದರ್ಮನ್ಯಾಯಪೀಠದ ಮುಂದೆ ವಿಚಾರಣೆಗಾಗಿ ಬಂದಂತಹ ಒಂದೆರಡು ಪ್ರಕರಣಗಳು ಹೀಗಿವೆ:
ಚನ್ನಗಿರಿ ತಾಲ್ಲೂಕು ಸಂತೇಬೆನ್ನೂರು ಹೋಬಳಿಯಲ್ಲಿರುವ ಸಿದ್ಧನಮಠ ಎಂಬ ಒಂದು ಹಳ್ಳಿ. ಅಲ್ಲಿ ಇತಿಹಾಸ ಪ್ರಸಿದ್ದವಾದ ಶ್ರೀರಾಮೇಶ್ವರ ದೇವಾಲಯವಿದೆ. ಈ ದೇವಸ್ಥಾನದ ಪೂಜಾಕೈಂಕರ್ಯಕ್ಕೆಂದು ಗ್ರಾಮದ ಪೂರ್ವಜರು ಸುಮಾರು 10 ಎಕರೆ ಜಮೀನನ್ನು ದಾನವಾಗಿ ನೀಡಿದ್ದರು. ಈ ಜಮೀನನ್ನು ಗ್ರಾಮಸ್ಥರು ಪ್ರತಿವರ್ಷ ಬೆಳೆ ಗುತ್ತಿಗೆ ಹರಾಜು ಮಾಡಿ ಬಂದ ಹಣದಿಂದ ದೇವತಾ ಕಾರ್ಯ ನಡೆಸುತ್ತಿದ್ದರು. 1974 ರಲ್ಲಿ ಉಳುವವನೇ ಒಡೆಯ ಎಂಬ ಭೂಸುಧಾರಣಾ ಕಾಯ್ದೆ ಜಾರಿಗೆ ಬಂದಾಗ ದೇವರ ಜಮೀನು ತಪ್ಪಿಹೋಗಬಾರದೆಂದು ಗ್ರಾಮಸ್ಥರೆಲ್ಲರೂ ಸೇರಿ ಸಮಾಲೋಚನೆ ನಡೆಸಿದರು. ಭೂನ್ಯಾಯಮಂಡಳಿಯ ಮುಂದೆ ಒಮ್ಮತದ ಸಾಕ್ಷಿ ನುಡಿದು ಗ್ರಾಮದ ಹಿರಿಯರೊಬ್ಬರ ಹೆಸರಿಗೆ ಜಮೀನು ಉಳಿಯುವಂತೆ ಮಾಡಿದರು. ನೆಪಮಾತ್ರಕ್ಕೆ ಗೇಣಿದಾರನಾಗಿದ್ದ ಆ ಮಹಾನುಭಾವ ತನ್ನ ಹೆಸರಿಗೆ ಜಮೀನು ಖಾತೆಯಾದ ಕೆಲವೇ ದಿನಗಳಲ್ಲಿ ಗ್ರಾಮಸ್ಥರ ನಂಬುಗೆಗೆ ದ್ರೋಹ ಬಗೆದು ತನ್ನ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡ. ಸ್ವಂತಕ್ಕೆ 40 ಎಕರೆ ಜಮೀನಿದ್ದರೂ ದೇವರ ಜಮೀನನ್ನೂ ಸೇರಿಸಿ ತನ್ನ ಮಕ್ಕಳಿಗೆ ಪಾಲುವಿಭಾಗ ಮಾಡಿಕೊಟ್ಟ. ಇದನ್ನು ವಿರೋಧಿಸಿ ಚಳುವಳಿ ಆರಂಭಿಸಿದ ಗ್ರಾಮಸ್ಥರು ಪೋಲೀಸರ ಬೆತ್ತದ ರುಚಿ ನೋಡಬೇಕಾಯಿತು. ಕೋರ್ಟು ಕಛೇರಿಗಳಿಗೆ ಅಲೆದಾಡಬೇಕಾಯಿತು. ಕೊನೆಗೂ ದೇವರ ಜಮೀನನ್ನು ಲಪಟಾಯಿಸಿದ ಆ ವ್ಯಕ್ತಿಗೆ ಕಾನೂನಿನ ರಕ್ಷಣೆ ದೊರೆಯಿತು.
ಮತ್ತೊಂದು ಪ್ರಕರಣ. ದಾವಣಗೆರೆ ತಾಲ್ಲೂಕಿನಲ್ಲಿರುವ ಕಾಡಜ್ಜಿ ಎಂಬ ಹಳ್ಳಿ. ಅಲ್ಲಿ ಪುರಾತನ ಕಾಲದ ಆಂಜನೇಯಸ್ವಾಮಿ ದೇವಾಲಯವಿದೆ. ದೇವರ ಪೂಜೆಗೆಂದು ಪೂರ್ವಜರು ಸುಮಾರು 52 ಎಕರೆ ಜಮೀನನ್ನು ದಾನವಾಗಿ ನೀಡಿದ್ದರು. ಗೇಣಿ ಕಾಯಿದೆ ಜಾರಿಗೆ ಬಂದ ಮೇಲೆ ಈ ಎಲ್ಲಾ ಜಮೀನನ್ನೂ ದೇವರ ಪೂಜಾದಿ ಕೆಲಸಗಳನ್ನು ಮಾಡುತ್ತಿದ್ದವರಿಗೆ ಅವರವರ ಕಾಯಕವನ್ನು ಮುಂದುವರಿಸುವ ಷರತ್ತಿನ ಮೇರೆಗೆ ಗ್ರಾಮಸ್ಥರು ಬಿಟ್ಟುಕೊಟ್ಟರು. ಗ್ರಾಮಸ್ಥರ ನಿರೀಕ್ಷೆಯಂತೆ ಒಪ್ಪಿ ಅವರೆಲ್ಲರೂ ತಂತಮ್ಮ ಹೆಸರಿಗೆ ಜಮೀನುಗಳನ್ನು ಕಾನೂನು ರೀತ್ಯಾ ಮಾಡಿಸಿಕೊಂಡರು. ಒಪ್ಪಿಕೊಂಡಂತೆ ದೇವಸ್ಥಾನದ ಕೆಲಸಗಳನ್ನು ಮಾಡುತ್ತಾ ಬಂದರು. ಅದರಂತೆ ಪೂಜಾರಿಯೂ ಸಹ ತನಗೆ ಬಂದ 12 ಎಕರೆ ಜಮೀನನ್ನು ಅನುಭವಿಸುತ್ತಾ ಪೂಜೆ ಮಾಡಿಕೊಂಡಿದ್ದನು. ಆದರೆ ಸ್ಥಳೀಯ ಪೋಸ್ಟ್ ಮಾಸ್ಟರ್ ಸಹ ಆಗಿದ್ದ ಆತನಿಗೆ ಬೇರೆಡೆಗೆ ವರ್ಗವಾಯಿತು. ಪೂಜೆ ಮಾಡುವುದನ್ನು ನಿಲ್ಲಿಸಿ ಹೊಸ ಜಾಗಕ್ಕೆ ಆತ ಹೋಗಬೇಕಾಯಿತು. ಪೂಜೆ ಮಾಡುವುದಿಲ್ಲವೆಂದ ಮೇಲೆ ಜಮೀನನ್ನು ಬಿಟ್ಟುಕೊಡು ಎಂದು ಗ್ರಾಮಸ್ಥರು ಕೇಳಿದ್ದಕ್ಕೆ ಆತ ಒಪ್ಪಿದ್ದ. ಆದರೆ ಚಿನ್ನದಂತಹ ಭೂಮಿಯ ಮೇಲೆ ಕಣ್ಣಿಟ್ಟಿದ್ದ ಅದೇ ಊರಿನ ಕೆಲವು ಪ್ರತಿಷ್ಠಿತರು ಪೂಜಾರಿಗೆ ಲಕ್ಷಾಂತರ ರೂ. ದುಡ್ಡುಕೊಟ್ಟು ದೇವರ ಜಮೀನನ್ನು ತಮ್ಮ ಹೆಸರಿಗೆ ಶುದ್ಧಕ್ರಯಕ್ಕೆ ಬರೆಸಿಕೊಂಡರು! ದೇವರು ವರ ಕೊಟ್ಟರೂ ಪೂಜಾರಿ ವರ ಕೊಡ ಎಂಬ ಗಾದೆ ಮಾತು ನಿಜವಾಯಿತು.
ಮೇಲಿನ ಎರಡೂ ಪ್ರಕರಣಗಳಲ್ಲಿ ಧರ್ಮ ಯಾವುದು ಅಧರ್ಮ ಯಾವುದು ಎಂದು ಕೇಳಿದರೆ ಯಾರಾದರೂ ಥಟ್ ಅಂತ ಉತ್ತರ ಹೇಳಿಬಿಡಬಹುದು. ಇಲ್ಲಿ ಕಾನೂನು ಅಧರ್ಮದ ಪರವಾಗಿ ನಿಂತಂತೆ ತೋರುತ್ತದೆ. ಆದರೆ ವಾಸ್ತವವಾಗಿ ಧರ್ಮ ಮತ್ತು ಕಾನೂನು ಒಂದಕ್ಕೊಂದು ಪೂರಕ. ಧರ್ಮದಲ್ಲಿ ಅಂತರ್ಗತವಾದ ಒಳ್ಳೆಯ ಅಂಶಗಳನ್ನೇ ಕಾನೂನು ಒಳಗೊಂಡಿದೆ. ಧರ್ಮವು ಸಾರುತ್ತಿರುವ ನೈತಿಕ ಮೌಲ್ಯಗಳನ್ನು ಕಾನೂನು ಸಹ ಎತ್ತಿ ಹಿಡಿಯುತ್ತದೆ. ಧರ್ಮವು ಕಳ್ಳತನ ಮಾಡಬಾರದು, ಸುಳ್ಳು ಹೇಳಬಾರದು ಎಂದು ಸಾರುವುದನ್ನೇ ಕಾನೂನೂ ಸಹ ಅಪೇಕ್ಷಿಸುತ್ತದೆ. ಅದಕ್ಕೆ ವಿರುದ್ಧವಾಗಿ ಜನರು ನಡೆದರೆ ತನ್ನ ಕಲಮುಗಳ ಮೂಲಕ ಪ್ರತಿಬಂಧಿಸುತ್ತದೆ. ಆದರೆ ಈ ಮೇಲೆ ಪ್ರಸ್ತಾಪಿಸಲಾದ ಸಂದರ್ಭಗಳಲ್ಲಿ ಕಾನೂನಿನ ಕಣ್ಣುಗಳಿಗೆ ಮಣ್ಣೆರಚುವ ಬುದ್ಧಿವಂತ ಜನರ ಜಾಣ್ಮೆಯನ್ನು ನೋಡಬಹುದಾಗಿದೆ. ಅದನ್ನು ನಿಯಂತ್ರಿಸುವಲ್ಲಿ ಕಾನೂನು ವಿಫಲವಾಗಿದೆ. ನ್ಯಾಯದೇವತೆಯ ಕಣ್ಣುಗಳಿಗೆ ಕಟ್ಟಿರುವ ಕಪ್ಪುಬಟ್ಟೆಯು ನಿಷ್ಪಕ್ಷಪಾತವಾದ ನ್ಯಾಯಪ್ರದಾನದ ದ್ಯೋತಕ. ಆದರೂ ಇದು ಇನ್ನೊಂದು ಅರ್ಥದಲ್ಲಿ, ಅನ್ಯಾಯವೆಂದು ಕಂಡುಬಂದರೂ ಕಾನೂನಿನ ಚೌಕಟ್ಟನ್ನು ಮೀರಲಾಗದ ನ್ಯಾಯಾಧೀಶರ ಅಸಹಾಯಕತೆಯನ್ನೂ ಬಿಂಬಿಸುವಂತೆ ತೋರುತ್ತದೆ.
ಇಂತಹ ದೇವಾಲಯಗಳಿಗೆ ಜಮೀನು ದಾನ ನೀಡಿದವರೇನೂ ಶ್ರೀಮಂತರಲ್ಲ; ಧರ್ಮಬುದ್ದಿಯಿಂದ ಅವರು ನೀಡಿದ್ದರು. ಆದರೆ ಅಧರ್ಮ ಬುದ್ದಿಯಿಂದ ಕಾನೂನಿನ ರಕ್ಷಣೆ ಪಡೆದು ಅದನ್ನು ಲಪಟಾಯಿಸುವ ನೆಲಗಳ್ಳರಿಗೇ ಕಾನೂನು ಅನುಕೂಲವಾಗಿದೆ. ಇದರಿಂದ ಧರ್ಮದ ಆಶಯಕ್ಕೆ ಅನುಗುಣವಾಗಿ ಪ್ರತಿಭಟನೆ ಮಾಡುವ ಜನರು ಅಸಹಾಯಕರಾಗಿದ್ದಾರೆ. ಧರ್ಮಬಾಹಿರವಾಗಿ ಕಾನೂನಿನ ಅಡಿಯಲ್ಲಿಯೇ ಹಗಲು ದರೋಡೆ ಮಾಡಿ ದಕ್ಕಿಸಿಕೊಳ್ಳುವ ವಂಚಕರನ್ನು ತಡೆಯುವವರಾರು? ದೇವರ ವರ ಬೇಡಲು ಗುಡಿಗೆ ಹೋಗಿ ದೇವರಿಗೇ ತಿರುಮಂತ್ರ ಹಾಕುವ ಜಾಣ ಭಕ್ತರು ಈ ನಾಡಿನಲ್ಲಿ ಅಸಂಖ್ಯಾತರಿದ್ದಾರೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 05.09.2013