ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ
ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳ ಬಗ್ಗೆ ನೀವು ಕೇಳಿರುತ್ತೀರಿ. ಸ್ವತಃ ಅನುಭವಿಸಿಯೂ ಇದ್ದೀರಿ. ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳದ ಯಾವೊಬ್ಬ ವ್ಯಕ್ತಿ ಜಗತ್ತಿನಲ್ಲಿ ಇಲ್ಲವೇ ಇಲ್ಲ. ಆದರೆ ನೀವು ಎಂದಾದರೂ "Birthday problem" ಎಂಬ ಸಮಸ್ಯೆ ಬಗ್ಗೆ ಕೇಳಿದ್ದೀರಾ? ಇದು ತಾಯಿ ಮಗುವಿಗೆ ಜನ್ಮ ನೀಡುವಾಗ ಅನುಭವಿಸುವ ಹೆರಿಗೆ ನೋವಾಗಲೀ, ಮಕ್ಕಳಿಗೆ ಹುಟ್ಟಿನಿಂದ ಬರುವ ಶಾರೀರಿಕ ಸಮಸ್ಯೆಗಳಾಗಲೀ ಅಲ್ಲ. ನಿಮ್ಮ ಮಕ್ಕಳ Birthday party ಏರ್ಪಡಿಸುವಾಗ ಸ್ನೇಹಿತರನ್ನೂ, ಬಂಧುಗಳನ್ನು ಆಹ್ವಾನಿಸಲು ನೀವು ಪಡುವ ಕಷ್ಟವೂ ಅಲ್ಲ. ಒಟ್ಟಾರೆ ವೈದ್ಯಕೀಯ ಶಾಸ್ತ್ರಕ್ಕೆ ಸಂಬಂಧಪಟ್ಟದ್ದಲ್ಲ, ಗಣಿತಶಾಸ್ತ್ರಕ್ಕೆ ಸಂಬಂಧಪಟ್ಟದ್ದು ಎಂದರೆ ನಿಮಗೆ ಆಶ್ಚರ್ಯವಾಗಬಹುದು.
ಗಣಿತ ಶಾಸ್ತ್ರದಲ್ಲಿ “Probability Theory” ಎಂಬ ಒಂದು ನಿಯಮವಿದೆ. ಜೀವನದಲ್ಲಿ ಅನುಭವಕ್ಕೆ ಬರುವ ಯಾವುದೇ ಘಟನೆಯನ್ನು ಅದು ಘಟಿಸಿದ ಮೇಲೆ ನಿರ್ದಿಷ್ಟವಾಗಿ ಹೇಳಬಹುದೇ ಹೊರತು ಮುಂಚಿತವಾಗಿ ಹೇಳಲು ಬರುವುದಿಲ್ಲ. ಅಂತಹ ಸಂದರ್ಭಗಳು ಒದಗಿ ಬಂದಾಗ ಹಿಂದಿನ ಅನುಭವದಿಂದ ಏನಾಗಬಹುದೆಂದು ಊಹಿಸಿ ಹೇಳಬಹುದೇ ಹೊರತು ಖಚಿತವಾಗಿ ಹೇಳಲು ಆಗುವುದಿಲ್ಲ. ಉದಾಹರಣೆಗೆ ನಿತ್ಯಜೀವನದಲ್ಲಿ ಕೇಳಿಬರುವ ಈ ಕೆಳಕಂಡ ಉದ್ಗಾರದ ಮಾತುಗಳನ್ನು ಗಮನಿಸಿ: 1.ಈ ದಿನ ಗುಡುಗು ಮಿಂಚು ಬಹಳ ಜೋರಾಗಿದೆ. ಬಹುಶಃ ಮಳೆ ಬರಬಹುದು. 2.ನಿಮ್ಮ ಮಗ ಬಹಳ ಜಾಣನಿದ್ದಾನೆ, ಪರೀಕ್ಷೆಯಲ್ಲಿ ರ‍್ಯಾಂಕ್ ಬರಬಹುದು. 3.ನಾಳೆ ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಇವರು ಗೆಲ್ಲಬಹುದು. ಈ ರೀತಿಯ ಮಾತುಗಳಲ್ಲಿ ಖಚಿತತೆ ಇರುವುದಿಲ್ಲ. ಊಹಾಪೋಹ ಇರುತ್ತದೆ. ಇದು ಚುನಾವಣೆಯ ಪೂರ್ವದಲ್ಲಿ ಪತ್ರಿಕೆಗಳು ನಡೆಸುವ ಸಮೀಕ್ಷೆಯಂತೆ, ರಾಜಕಾರಣಿಗಳು ನಂಬಿಕೊಂಡು ಬಂದಿರುವ ಜ್ಯೋತಿಷಿಗಳ ಭವಿಷ್ಯದಂತೆ. ಮುಂದಾಗಬಹುದಾದ ಫಲಿತಾಂಶದ ಬಗ್ಗೆ ಅನಿಶ್ಚಿತತೆ ಇರುವುದರಿಂದ ಬಹುದು, ಬಹುಶಃ ಎಂಬೀ ಶಬ್ದಗಳನ್ನು ಇಲ್ಲಿ ಬಳಸಲಾಗುತ್ತದೆ. ಆದರೆ ಗಣಿತಶಾಸ್ತ್ರದಲ್ಲಿ ಅಂಕಿ-ಅಂಶಗಳ ಆಧಾರದ ಮೇಲೆ ಲೆಕ್ಕಾಚಾರ ಹಾಕಿ ಕೆಲವೊಂದು ಸನ್ನಿವೇಶಗಳಲ್ಲಿ ಸಾಧ್ಯವಾದಷ್ಟು ಖಚಿತವಾಗಿ ಹೇಳಬಹುದಾದ ವಿಧಾನಕ್ಕೆ “Probability Theory” (ಸಂಭವನೀಯತೆ) ಎಂದು ಕರೆಯುತ್ತಾರೆ. ಉದಾಹರಣೆಗೆ ಒಂದು ಕೊಠಡಿಯಲ್ಲಿ 23 ಜನರನ್ನು ಯಾದೃಚ್ಛಿಕವಾಗಿ (at random) ಆಯ್ಕೆಮಾಡಿಕೊಂಡರೆ ಅವರಲ್ಲಿ ಒಬ್ಬರ ಜನ್ಮದಿನಾಂಕವನ್ನು ಮತ್ತೊಬ್ಬರ ಜನ್ಮದಿನಾಂಕದೊಂದಿಗೆ ಹೋಲಿಸಲು 22 ಅವಕಾಶಗಳು (chances) ಇರುತ್ತವೆ. ಅದೇ ರೀತಿ ಅವರಲ್ಲಿ ಪ್ರತಿಯೊಬ್ಬರ ಜನ್ಮದಿನಾಂಕವನ್ನು ಇನ್ನುಳಿದವರ ಜನ್ಮದಿನಾಂಕದೊಂದಿಗೆ ಹೋಲಿಸಲು 253 ಅವಕಾಶಗಳು ಸಿಗುತ್ತವೆ. ಇದನ್ನು ಗಣಿತದ ಸೂತ್ರದ ಅನ್ವಯ ಈ ಮುಂದಿನಂತೆ ಲೆಕ್ಕಾಚಾರ ಹಾಕುತ್ತಾರೆ:
23 x (23-1)/2 = 253
ಹೀಗೆ 23 ಜನರ ಗುಂಪಿನಲ್ಲಿ ಪರಸ್ಪರರ ಜನ್ಮದಿನಾಂಕವನ್ನು ಹೋಲಿಕೆ ಮಾಡಿದರೆ ಅವರಲ್ಲಿ ಕೆಲವರ ಜನ್ಮದಿನಾಂಕವು ಒಂದೇ ಆಗಿರುವ ಸಾಧ್ಯತೆಯು ಶೇಕಡ 50 ರಷ್ಟು ಇರುತ್ತದೆಯೆಂದು ಗಣಿತಶಾಸ್ತ್ರಜ್ಞರು ಹೇಳುತ್ತಾರೆ. ಅದೇ ಕೊಠಡಿಯಲ್ಲಿ 365 ಜನರು ಇದ್ದರೆ ಒಂದೇ ಜನ್ಮದಿನಾಂಕವುಳ್ಳ ವ್ಯಕ್ತಿಗಳು ಇರುವುದು ನೂರಕ್ಕೆ ನೂರು ಖಚಿತ. ಶೇಕಡ 50/100 ರಷ್ಟು ಎಂದು ಇಲ್ಲಿ ಹೇಳುವುದು ಹೋಲಿಕೆಯ ಸಾಧ್ಯತೆಯೇ ಹೊರತು ಹೋಲಿಕೆಯಾದ ವ್ಯಕ್ತಿಗಳ ಸಂಖ್ಯೆಯಲ್ಲ ಎಂಬುದನ್ನು ಗಮನಿಸಬೇಕು. ಕುತೂಹಲಕ್ಕಾಗಿ ಸಿರಿಗೆರೆಯ ನಮ್ಮ ಪ್ರೌಢಶಾಲೆಯಲ್ಲಿ ಈ ವರ್ಷ ಓದಲು ಸೇರಿದ ಸಾವಿರಾರು ಮಕ್ಕಳ ದಾಖಲೆಯನ್ನು ಗಣಕಯಂತ್ರದಲ್ಲಿ ಪರಿಶೀಲಿಸಿದಾಗ ಯಾದೃಚ್ಛಿಕವಾಗಿ ಆಯ್ಕೆಮಾಡಿಕೊಂಡ 365 ವಿದ್ಯಾರ್ಥಿಗಳಲ್ಲಿ 166 ಮಕ್ಕಳ ಜನ್ಮದಿನಾಂಕಗಳಲ್ಲಿ ಸಾಮ್ಯತೆ ಇರುವುದು ಕಂಡುಬಂತು. ಇದನ್ನೇ ಗಣಿತಶಾಸ್ತ್ರದಲ್ಲಿ “Birthday problem” ಅಥವಾ “Birthday paradox” ಎಂದು ಕರೆಯುವುದು.
ಭಾರತೀಯ ಸಂಸ್ಕೃತಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ, ರಾಮನವಮಿ, ಶಂಕರಜಯಂತಿ, ಬಸವಜಯಂತಿ, ಕನಕಜಯಂತಿ ಇತ್ಯಾದಿ ದೇವರ ಮತ್ತು ಪುಣ್ಯಪುರುಷರ ಜನ್ಮದಿನವನ್ನು ಆಚರಿಸುವ ಪದ್ಧತಿ ಇದೆಯೇ ಹೊರತು ಮಕ್ಕಳ ಜನ್ಮದಿನವನ್ನು ಆಚರಿಸುವ ಪದ್ಧತಿ ಪ್ರಾಚೀನ ಕಾಲದಿಂದಲೂ ಇಲ್ಲ. ಇತ್ತೀಚೆಗೆ ಈ ಜಯಂತಿಗಳು ಸರಕಾರದಿಂದ ರಜಾ ಪಡೆದು ಮೋಜು ಮಾಡಲು ದುರುಪಯೋಗವಾಗುತ್ತಿವೆಯೇ ಹೊರತು ಧರ್ಮಬುದ್ಧಿಯಿಂದ ದೇವರ, ಪುಣ್ಯಪುರುಷರ ಸ್ಮರಣೆಯನ್ನು ಮಾಡಿ ಪಾವನರಾಗಲು ಅಲ್ಲ. ಹುಟ್ಟಿದ ದಿನವನ್ನು ವರ್ಷಂಪ್ರತಿ ಆಚರಿಸುವ ಪದ್ಧತಿ ನಮ್ಮ ಸಂಸ್ಕೃತಿಯಲ್ಲಿ ಇಲ್ಲವೆಂದರೂ 60 ವರ್ಷ ತುಂಬಿದಾಗ ಷಷ್ಠ್ಯಬ್ದಪೂರ್ತಿಯನ್ನು ಆಚರಿಸುವ ಪದ್ಧತಿ ಇದೆ. 80 ವರ್ಷಗಳು ತುಂಬಿದಾಗ ಸಹಸ್ರ ಚಂದ್ರದರ್ಶನ ಮಾಡುವ ಪದ್ಧತಿ ಇದೆ.
ಹುಟ್ಟಿದ ಮೂರ್ನಾಲ್ಕು ವರ್ಷಗಳಲ್ಲಿ ಹರಕೆ ಹಾಕಿಕೊಂಡ ದೇವರ ಗುಡಿಗೆ ಹೋಗಿ ಎಳೆಯ ಮಕ್ಕಳ ತಲೆಗೂದಲನ್ನು ತೆಗೆಸುವ ಜವಳ ಪದ್ಧತಿಯನ್ನು ಬಿಟ್ಟರೆ ಅಲ್ಲಿಂದ ಮುಂದಕ್ಕೆ ಆ ಮಕ್ಕಳ ತಲೆ ಹೇಗೆ ಬೆಳೆಯುತ್ತಿದೆಯೆಂಬ ಕಾಳಜಿ ಹಳ್ಳಿಗರಿಗೆ ಇಲ್ಲ. ಹಳ್ಳಿಯ ಮಕ್ಕಳಿಗೆ ಪೇಟೆ-ಪಟ್ಟಣಗಳ ಮಕ್ಕಳಂತೆ ತಮ್ಮ ಜನ್ಮದಿನಾಂಕದ ಪರಿವೆಯೇ ಇರುವುದಿಲ್ಲ, ಅವರ ತಂದೆ-ತಾಯಿಗಳೂ ಸಹ ಮಕ್ಕಳ ಜನ್ಮದಿನಾಂಕವನ್ನು ನೆನಪಿಟ್ಟುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಶಾಲೆಯ ದಾಖಲಾತಿಗಳಲ್ಲಿ ಕಂಡುಬರುವ ಬಹುತೇಕ ಮಕ್ಕಳ ಜನ್ಮದಿನಾಂಕ ಶಾಲೆಯ ಶಿಕ್ಷಕರು ಅಂದಾಜಿನ ಮೇಲೆ ಬರೆದ ದಿನಾಂಕಗಳಾಗಿರುತ್ತವೆಯೆಂದರೆ ಅತಿಶಯೋಕ್ತಿಯಾಗಲಾರದು. ಹೀಗಾಗಿ ಮಕ್ಕಳು ದೇವರ ಸೃಷ್ಟಿಯಾದರೆ ಆ ಮಕ್ಕಳ ಜನ್ಮದಿನಾಂಕದ ಸೃಷ್ಟಿಕರ್ತ ನಿಃಸಂದೇಹವಾಗಿ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕ! ಅನೇಕ ವೇಳೆ ನಮ್ಮ ವಿದ್ಯಾ ಇಲಾಖೆಯ ಕೃಪೆಯಿಂದ ಅವನು ಚತುರ್ಮುಖ ಬ್ರಹ್ಮನಾಗಿಯೂ ದಕ್ಷತೆಯಿಂದ ಕೆಲಸ ನಿರ್ವಹಿಸುತ್ತಾನೆ. ಸರಕಾರ ಸಕಾಲದಲ್ಲಿ ಶಿಕ್ಷಕರ ನೇಮಕಾತಿ ಮಾಡದ ಕಾರಣ ಪ್ರಾಥಮಿಕ ಶಾಲೆಯಲ್ಲಿರುವ ಏಕೈಕ ಶಿಕ್ಷಕ ಒಂದೇ ಕೊಠಡಿಯಲ್ಲಿ ನಾಲ್ಕು ತರಗತಿಗಳ ಮಕ್ಕಳನ್ನು ನಾಲ್ಕು ದಿಕ್ಕುಗಳಿಗೆ ಕೂರಿಸಿಕೊಂಡು ಒಬ್ಬನೇ ಪಾಠಮಾಡುವ ಅಪರೂಪದ ದೃಶ್ಯ ಜಗತ್ತಿನ ಯಾವ ದೇಶದಲ್ಲಿಯೂ ನೋಡಲು ಸಿಗಲಾರದು! ಸರಕಾರದ ಕಡ್ಡಾಯ ಶಿಕ್ಷಣ ನೀತಿ ಕಾಟಾಚಾರದ ನೀತಿಯಾಗಿದೆ. ಶಾಲೆಗೆ ಮಕ್ಕಳನ್ನು ಕಳುಹಿಸದ ತಂದೆ-ತಾಯಿಗಳನ್ನು ಜೈಲಿಗೆ ಕಳುಹಿಸುವ ನಿಯಮವಿದ್ದರೂ ಹಾಗೆ ಮಾಡಲು ಹೋದರೆ ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿ ಶಿಕ್ಷಕರೇ ಜೈಲು ಸೇರಬೇಕಾಗಿ ಬರಬಹುದು. ಇತ್ತೀಚೆಗೆ ಮಠಮಾನ್ಯಗಳ, ಖಾಸಗಿ ಸಂಸ್ಥೆಗಳ ಶಾಲೆಗಳು ಹಳ್ಳಿ ಹಳ್ಳಿಗಳಲ್ಲಿ ಹೆಚ್ಚಾಗಿ ಮೈದಾಳಿರುವುದರಿಂದ ಮಕ್ಕಳನ್ನು ಓದಿಸಬೇಕೆಂಬ ಅರಿವು ಹಳ್ಳಿಗರಲ್ಲಿ ಮೂಡುತ್ತಿದೆ.
ವ್ಯಕ್ತಿಯ ಬದುಕಿನಲ್ಲಿ ಜನ್ಮದಿನ ಅತ್ಯಂತ ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತದೆ. ಜನ್ಮದಿನದಿಂದಲೇ ವಯಸ್ಸು ನಿರ್ಧಾರವಾಗುವುದು. ವಯೋಮಾನಕ್ಕನುಗುಣವಾಗಿಯೇ ಕೆಲವೊಂದು ಹಕ್ಕುಗಳು ಮತ್ತು ಜವಾಬ್ದಾರಿಗಳು ಸಿಗುವುದು. ಉದಾಹರಣೆಗೆ ಓಟು ಮಾಡುವ ಹಕ್ಕು, ಮದುವೆಯಾಗುವ ವಯಸ್ಸು, ವಾಹನಗಳನ್ನು ನಡೆಸಲು ಬೇಕಾದ ಡೈವಿಂಗ್ ಲೈಸೆನ್ಸ್ ಪಡೆಯುವ ವಯಸ್ಸು, ನಿವೃತ್ತಿಯಾಗುವ ವಯಸ್ಸು ಇತ್ಯಾದಿ. ನಮ್ಮ ದೇಶದಲ್ಲಿ ಇತ್ತೀಚೆಗೆ ಹೆಚ್ಚಾಗಿ ಪೇಟೆ-ಪಟ್ಟಣಗಳಲ್ಲಿ ನಡೆಯಲಾರಂಭಿಸಿರುವ Birthday ಪಾರ್ಟಿಗಳು ಎಲ್ಲರಿಗೂ ಗೊತ್ತಿರುವಂತೆ ಪಾಶ್ಚಾತ್ಯಸಂಸ್ಕೃತಿಯ ಪ್ರಭಾವ. ಕಾಲಬದಲಾದಂತೆ ಎರಡು ಸಂಸ್ಕೃತಿಗಳು ಮುಖಾಮುಖಿಯಾದಾಗ ಸಂಭವಿಸುವ ಅನಿವಾರ್ಯ ಬೆಳವಣಿಗೆ. ಆದರೆ ಈ ಬೆಳವಣಿಗೆ ನಮ್ಮ ಸಂಸ್ಕೃತಿಯನ್ನು ಹೀಗಳೆಯುವ, ನಮ್ಮತನವನ್ನು ಆಪೋಷಣಗೊಳ್ಳುವ ಅನಿವಾರ್ಯತೆ ಆಗಬೇಕಾಗಿಲ್ಲ. ಮಕ್ಕಳಿಗೆ ತಮ್ಮ ಜನ್ಮದಿನಾಚರಣೆಯಂದು ಓರಿಗೆಯ ಮಕ್ಕಳೊಂದಿಗೆ ಸುತ್ತುವರಿದು ಉರಿಯುವ ಮೇಣದ ಬತ್ತಿಗಳನ್ನು ಉಫ್ ಎಂದು ಊದುವುದೆಂದರೆ, ಕೇಕ್ ಕತ್ತರಿಸುವುದೆಂದರೆ ಖುಷಿಯಾಗುತ್ತದೆಯೆಂಬುದರಲ್ಲಿ ಎರಡುಮಾತಿಲ್ಲ. ಆದರೆ ನಮ್ಮ ಸಂಸ್ಕೃತಿಯ ಬೇರುಗಳು ಎಳೆಯ ಮನಸ್ಸಿನಲ್ಲಿ ಆಳವಾಗಿ ಬೇರೂರುವ ಮೊದಲೇ ಮಕ್ಕಳು ಪಾಶ್ಚಾತ್ಯಪದ್ಧತಿಯನ್ನು ಯಥಾವತ್ತಾಗಿ ಅನುಕರಿಸುವಂತೆ ಮಾಡುವುದು ಸರಿಯೇ? ಅದನ್ನು ಪರಿಮಾರ್ಜನಗೊಳಿಸಿ ದೀಪವನ್ನು ಬೆಳಗಿಸಿ ಕೇಕ್ ಕತ್ತರಿಸುವ ಹೊಸಪದ್ಧತಿಯನ್ನು ಅಳವಡಿಸಿಕೊಳ್ಳಬಾರದೇಕೆ? ದೀಪವು ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ಜ್ಯೋತಿ. ತಮಸೋ ಮಾ ಜ್ಯೋತಿರ್ಗಮಯ! ಹೀಗಿರುವಾಗ ಎಳೆಯ ಮಕ್ಕಳನ್ನು ನಮ್ಮ ಸಂಸ್ಕೃತಿಯ ಬೆಳಕಿನಿಂದ ಕತ್ತಲೆಗೆ ತಳ್ಳುವುದು ಸರಿಯೇ? ನಮ್ಮ ಸಂಸ್ಕೃತಿಯಲ್ಲಿ ದೀಪವನ್ನು ಬಾಯಿಂದ ಊದಿ ಆರಿಸುವುದು ಅಮಂಗಲಕಾರಕ. ಸಭ್ಯತೆಯ ನಡವಳಿಕೆಯಲ್ಲ. ಕೈಯಿಂದ ಗಾಳಿಯನ್ನು ಹಾಕಿ ನಂದಿಸುವುದು ನಮ್ಮ ಪದ್ಧತಿ. ಶಬ್ದಗಳ ಬಳಕೆಯಲ್ಲಿಯೂ ಒಂದು ವಿಶೇಷತೆ ಇದೆ. ದೀಪ ನಂದಿಸು, ಆರಿಸು ಎನ್ನುತ್ತಾರೆಯೇ ಹೊರತು ದೀಪ ಕೆಡಿಸು ಎನ್ನುವುದಿಲ್ಲ.
ಕ್ಯಾಂಡಲ್ ಊದಿ ಕೇಕ್ ಕತ್ತರಿಸುವ ಸಂದರ್ಭದಲ್ಲಿ ಹಿರಿಯರಾದಿಯಾಗಿ ಎಲ್ಲರೂ ನಗುಮುಖ ಬೀರಿ ಖುಷಿಪಟ್ಟು ಕರತಾಡನ ಮಾಡುತ್ತಾ “Happy Birthday to you!” ಎಂದು ಒಕ್ಕೊರಲಿನಿಂದ ಹಾಡುತ್ತಾರೆ. ಜನ್ಮದಿನ ಆಚರಿಸಿಕೊಳ್ಳುತ್ತಿರುವ ವ್ಯಕ್ತಿಯ ಹೆಸರನ್ನು ಆ ಹಾಡಿಗೆ ಜೋಡಿಸಿ ಶುಭ ಹಾರೈಸುವುದು ನಡೆದುಕೊಂಡು ಬಂದಿರುವ ಪದ್ಧತಿ. ಇಂತಹ ಸಂದರ್ಭಗಳಲ್ಲಿ “Many Happy returns of the day!” ಎಂದು ಹೇಳುವುದೂ ರೂಢಿಯಲ್ಲಿದೆ. ಆದರೆ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ಇದರ ಅರ್ಥವೇನೆಂಬುದೇ ಅನೇಕರಿಗೆ ಗೊತ್ತಿಲ್ಲ. ಮೊನ್ನೆ ಬೆಳಿಗ್ಗೆ ನಮ್ಮೊಡನೆ ವಾಯುವಿಹಾರಕ್ಕೆ ಬಂದ ಕೆಲವರು ಯುವಕರನ್ನು ಕೇಳಿದಾಗ ಉತ್ತರ ಹೊಳೆಯದೆ ಅವಾಕ್ಕಾದರು. ಬೆಂಗಳೂರಿನಿಂದ ಕಾರ್ಯಾರ್ಥವಾಗಿ ಸಿರಿಗೆರೆಗೆ ಬಂದಿದ್ದ ಸುಮಾರು 25 ವರ್ಷ ವಯೋಮಾನದ ಆ ಯುವಕರು ತಮ್ಮ ಜನ್ಮದಿನಾಚರಣೆಯನ್ನು ಅನೇಕ ವರ್ಷಗಳಿಂದ ಮಾಡಿಕೊಂಡು ಬಂದಿದ್ದರೂ ಇದರ ಅರ್ಥ ಗೊತ್ತಿರದೆ ತಲೆ ತಗ್ಗಿಸಿದರು. ಈ ಶುಭಹಾರೈಕೆಯ ನುಡಿಗಟ್ಟು ಪಾಶ್ಚಾತ್ಯ ರಾಷ್ಟ್ರಗಳಲ್ಲಿ 18 ನೆಯ ಶತಮಾನದಿಂದಲೂ ಬಳಕೆಯಲ್ಲಿದೆ. ಆಗಿನ ಕಾಲದಲ್ಲಿ ಯಾವುದೇ ಹಬ್ಬ ಅಥವಾ ಶುಭಕಾರ್ಯಗಳಲ್ಲಿ ಈ ನುಡಿಗಟ್ಟನ್ನು ಬಳಸುವ ಪದ್ಧತಿ ಪಾಶ್ಚಾತ್ಯರಲ್ಲಿ ಇತ್ತು. ಅದು ಕ್ರಮೇಣ ಜನ್ಮದಿನದ ಹಾರೈಕೆಯಾಗಿ ಪರಿಣಮಿಸಿತು. ಇದು ಅಮೇರಿಕನ್ ಇಂಗ್ಲೀಷ್ ಗಿಂತ ಬ್ರಿಟಿಷ್ ಇಂಗ್ಲೀಷ್ ನಲ್ಲಿ ಹೆಚ್ಚು ಬಳಕೆಯಲ್ಲಿದೆ. ಆದರೆ ಅನೇಕರು ಇದರ ಅರ್ಥವನ್ನು ಸರಿಯಾಗಿ ಗ್ರಹಿಸದೆ, ಇದರ ಅರ್ಥವನ್ನು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡದೆ ಅಂಧಾನುಕರಣೆಯಿಂದ wish ಮಾಡುತ್ತಾರೆ. ಸಂಸ್ಕೃತ ಗೊತ್ತಿಲ್ಲದಿದ್ದರೂ ಸಂಸ್ಕೃತದ ಮಂತ್ರಗಳನ್ನು ಪೂಜೆಯಲ್ಲಿ ಹೇಳುವಂತೆ. ಇದರ ನಿಜವಾದ ಅರ್ಥ Happy Birthday to you! ಎಂಬ ಹಾರೈಕೆಯ ವಿಸ್ತ್ರತರೂಪವೇ ಆಗಿದೆ. ಇದನ್ನು ಪೂರ್ಣವಾಕ್ಯವನ್ನಾಗಿ ಬಿಡಿಸಿ ಬರೆದರೆ "Happy birthday, and [I wish you] many happy returns [repeat occurrences] of [this] day [i.e. your birthday]”. ಅಂದರೆ ನಿಮ್ಮ ಈ ಜನ್ಮದಿನ ಸುಖಕರವಾಗಿರಲಿ, ಇಂತಹ ಸಂತಸದ ದಿನ ನಿಮ್ಮ ಜೀವನದಲ್ಲಿ ಅನೇಕ ಬಾರಿ ಬರಲಿ, ಅಂದರೆ ನೀವು ಸುಖವಾಗಿ ದೀರ್ಘಕಾಲ ಬಾಳಿರಿ ಎಂಬ ಅರ್ಥದ ಶುಭ ಹಾರೈಕೆ ಈ ನುಡಿಗಟ್ಟಿನಲ್ಲಿದೆ.
ಹಳ್ಳಿಗಳಲ್ಲಿ ಜಗಳ ಆಡುವಾಗ ತನಗಾಗದ ವ್ಯಕ್ತಿಯನ್ನು ಕುರಿತು “ಹುಟ್ಟಿದ ದಿನ ಕಾಣಿಸಿಬಿಡುತ್ತೇನೆ ನೋಡು” ಎಂದು ಸಿಟ್ಟಿನಿಂದ ಹೇಳುವುದನ್ನು ನೀವು ಕೇಳಿರಬಹುದು. ಭಾರತೀಯ ದಾರ್ಶನಿಕರ ದೃಷ್ಟಿಯಲ್ಲಿ ಹುಟ್ಟು ಸಂತಸಪಡುವ ದಿನವಲ್ಲ. ಗಣಿತಶಾಸ್ತ್ರಜ್ಞರಿಗೆ ಜನ್ಮದಿನಾಂಕವು ಒಂದು ಸಮಸ್ಯೆಯಾದರೆ (Birthday problem) ಭಾರತೀಯ ದಾರ್ಶನಿಕರಿಗೆ ಜನ್ಮದಿನವೇ ಒಂದು ಸಮಸ್ಯೆ. ಗರ್ಭೋಪನಿಷತ್ ಎಂಬ ಒಂದು ಉಪನಿಷತ್ ಇದೆ. ಅದರ ಪ್ರಕಾರ ತಾಯಗರ್ಭದಲ್ಲಿರುವ ಶಿಶುವು 6ನೆಯ ತಿಂಗಳಲ್ಲಿ ಮುಖ, ಕಣ್ಣು, ಮೂಗು, ಕಿವಿ ಇತ್ಯಾದಿ ಇಂದ್ರಿಯಗಳನ್ನು ಪಡೆಯುತ್ತದೆ. 7ನೆಯ ತಿಂಗಳಲ್ಲಿ ಜೀವಾತ್ಮ ಪ್ರವೇಶಿಸಿ ಹಿಂದಿನ ಜನ್ಮಜನ್ಮಾಂತರಗಳ ಬಾಧೆಯನ್ನು ಸ್ಮರಿಸಿಕೊಂಡು ದುಃಖಿಸುತ್ತದೆ. 8ನೆಯ ತಿಂಗಳಲ್ಲಿ ಶಿಶುವು ಸಂಪೂರ್ಣವಾಗಿ ಬೆಳೆಯುತ್ತದೆ. ಹುಟ್ಟುವುದೆಂದರೆ ಜೀವಾತ್ಮನು ಶರೀರದ ಬಂಧನಕ್ಕೆ ಒಳಗಾಗುವುದು. ಆದಕಾರಣ ಈ ಶರೀರದೊಳಗಿರುವ ಆತ್ಮವನ್ನು ಬದ್ಧಜೀವಾತ್ಮ ಎಂದು ಕರೆಯುತ್ತಾರೆ. ಭವಭವಾಂತರಗಳಲ್ಲಿ ಶರೀರ ಧರಿಸಿ ಹುಟ್ಟುವದು ಅಜ್ಞಾನದ ಕಾರಣದಿಂದಾಗಿ. ಪುನರಪಿ ಜನನಂ, ಪುನರಪಿ ಮರಣಂ, ಪುನರಪಿ ಜನನೀಜಠರೇ ಶಯನಂ ಹೀಗೆ ನಿರಂತರವಾಗಿ ಜೀವಾತ್ಮನು ತನ್ನ ಅಜ್ಞಾನದಿಂದ ಸಂಸಾರಚಕ್ರದಲ್ಲಿ ತಿರುಗುತ್ತಾ ದುಃಖದುಮ್ಮಾನಮಗಳಿಗೆ ಒಳಗಾಗುತ್ತಾನೆ. ಮನುಷ್ಯನ ಗುರಿ ತನ್ನ ತಪ್ಪನ್ನು ತಿದ್ದಿಕೊಂಡು ಈ ಭವಬಂಧನದಿಂದ ಪಾರಾಗಿ ನಿತ್ಯಸುಖವಾದ ಮುಕ್ತಿಯನ್ನು ಪಡೆಯುವುದು. ಇದನ್ನೇ ಬಸವಣ್ಣನವರು ಕೆಳಗಿನ ವಚನದಲ್ಲಿ ತಮ್ಮ ಜನ್ಮವನ್ನೇ ಹಳಿಯುತ್ತಾ ಮತ್ತೆ ಹುಟ್ಟದಂತೆ ಸಂಕಲ್ಪ ಮಾಡಿ ದೇವರ ಅನುಗ್ರಹಕ್ಕಾಗಿ ಹಂಬಲಿಸಿದ್ದಾರೆ:
ಅರಿಯದೆ ಜನನಿಯ ಜಠರದಲ್ಲಿ
ಬಾರದ ಭವಂಗಳಲ್ಲಿ ಬರಿಸಿದೆ ತಂದೆ
ಹುಟ್ಟಿದ್ದೆ ತಪ್ಪಾಯಿತ್ತೆ ಎಲೆ ಲಿಂಗವೆ?
ಮುನ್ನ ಹುಟ್ಟಿದುದಕ್ಕೆ ಕೃಪೆ ಮಾಡು
ಇನ್ನು ಹುಟ್ಟಿದೆನಾದೊಡೆ
ಕೂಡಲಸಂಗಮದೇವಾ ನಿಮ್ಮಾಣೆ!
ಸಹೃದಯ ಓದುಗರೇ! ಕಳೆದ ಎರಡು ವರ್ಷಗಳಿಂದ ಬರೆಯುತ್ತಿರುವ ಈ ಬಿಸಿಲುಬೆಳದಿಂಗಳು ಅಂಕಣ ಪ್ರಕಟವಾಗುವ ಬುಧವಾರದ ದಿನದಂದೇ ಕೆಲವು ಹಬ್ಬಹರಿದಿನಗಳು ಬಂದಿದ್ದು ಆಯಾಯ ದಿನಗಳ ವಿಶೇಷತೆಯ ಹಿನ್ನೆಲೆಯಲ್ಲಿ ಲೇಖನಿಸಲಾಗಿದೆ. ಈ ವಾರದ ಅಂಕಣದಲ್ಲಿ ಜನ್ಮದಿನವನ್ನು ಕುರಿತು ಬರೆಯಲು ಕಾರಣ ಇಂದು ನಮ್ಮ ಜನ್ಮದಿನ. ಈ ಲೇಖನ ಬರೆದು ಮುಗಿಸುವ ವೇಳೆಗೆ ಆತ್ಮೀಯ ಒಡನಾಟವುಳ್ಳ ಬಾಲ್ಯಸ್ನೇಹಿತರು ಕೆಲವರು ಶುಭ ಹಾರೈಸಿ SMS ಕಳುಹಿಸಿದ್ದಾರೆ. ಅವರ ಸಹೃದಯತೆಗೆ ಕೃತಜ್ಞತೆಗಳು. ಆದರೆ ಮಠದ ಸ್ವಾಮಿಗಳಾದವರ ನಿಜವಾದ ಜನ್ಮದಿನ ಪೂರ್ವಾಶ್ರಮದ ತಂದೆತಾಯಿಗಳಿಂದ ಶರೀರವನ್ನು ಪಡೆದ ದಿನವಲ್ಲ. “ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೇ, ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೇ” ಎಂದು ವೈರಾಗ್ಯನಿಧಿ ಅಕ್ಕಮಹಾದೇವಿಯು ಹೇಳುವಂತೆ ಗುರುವಿನಿಂದ ಉಪದೇಶವನ್ನು ಪಡೆದ ದಿನವೇ ನಿಜವಾದ ಜನ್ಮದಿನ. ನಮ್ಮನ್ನು ಮೂರು ದಶಕಗಳ ಹಿಂದೆ “ತರಳಬಾಳು ಪೀಠ”ದಲ್ಲಿ ಕುಳ್ಳಿರಿಸಿ “ತರಳಾ, ಬಾಳು” ಎಂದು ಹರಸಿ ಬಯಲಾದ ನಮ್ಮ ಪರಮಾರಾಧ್ಯ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಭಕ್ತಿಯಿಂದ ಸಂಸ್ಮರಿಸುತ್ತಾ ನಿಮ್ಮೆಲ್ಲರಿಗೂ ಶುಭಹಾರೈಕೆಗಳು.
ತಂದೆಗೆ ಗುರುವಿಗೆ ಒಂದು ಅಂತರವುಂಟು
ತಂದೆ ತೋರುವನು ಶ್ರೀಗುರುವ - ಗುರುರಾಯ
ಬಂಧನವ ಕಳೆವ ಸರ್ವಜ್ಞ
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 16.6.2010