ಕನ್ನಡ ಎನೆ ಕುಣಿದಾಡುವುದೆನ್ನೆದೆ!....

  •  
  •  
  •  
  •  
  •    Views  

ಸೆಪ್ಟೆಂಬರ್ 11 ಎಂದರೆ ಅಮೇರಿಕಾ ದೇಶದವರಿಗೆ ನೆನಪಾಗುವುದು ನ್ಯೂಯಾರ್ಕಿನ ವಿಶ್ವವಾಣಿಜ್ಯಕೇಂದ್ರ (World Trade Centre) ಭಯೋತ್ಪಾದಕರ ವೈಮಾನಿಕ ಧಾಳಿಯಿಂದ ಹತ್ತಿ ಉರಿದು ವಿಧ್ವಂಸಗೊಂಡ ಕರಾಳ ದೃಶ್ಯ. ಈ ದುರ್ಘಟನೆಯ ಇಸವಿ (2001) ನೆನಪಿಲ್ಲದೇ ಇರಬಹುದು, ಆದರೆ ದಿನ ಮತ್ತು ತಿಂಗಳು ಮಾತ್ರ ಜನ್ಮದಿನಾಂಕದಂತೆ ಚೆನ್ನಾಗಿ ನೆನಪಿದ್ದು ಈಗಲೂ ಅಮೇರಿಕನ್ನರಿಗೆ ಸಿಂಹಸ್ವಪ್ನವಾಗಿದೆ. ಆ ದಿನ ಹತ್ತಿರ ಬರುತ್ತಿದ್ದಂತೆಯೇ ಮತ್ತೇನು ಕಾದಿದೆಯೋ ಎಂಬ ಆತಂಕ, ದುಗುಡ ಇಲ್ಲಿಯ ಜನರ ಮನಸ್ಸನ್ನು ಸದಾ ಕಾಡಿಸುತ್ತಿರುತ್ತವೆ. ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠ ರಾಷ್ಟ್ರವೆಂದು ಅಹಂಕಾರದಿಂದ ಬೀಗುತ್ತಿದ್ದ ಅಮೇರಿಕೆಗೆ ಇದರಿಂದ ತಕ್ಕ ಪಾಠ ಕಲಿಸಿದಂತಾಯಿತು ಎಂದು ಹೇಳುವವರೂ ಇದ್ದಾರೆ. ಈ ದುರ್ಘಟನೆಯು ದೇವರಲ್ಲಿ ಅಷ್ಟಾಗಿ ನಂಬಿಕೆ ಇಲ್ಲದ ಜನರಿಗೂ ಸಹ ಜೀವಭಯದಿಂದ ಕೈಯಲ್ಲಿ ಉರಿಯುವ ಕ್ಯಾಂಡಲ್ ಹಿಡಿದು ದೇವರನ್ನು ಪ್ರಾರ್ಥಿಸುವಂತೆ ಮಾಡಿತು. ಒಂದು ಅಧ್ಯಯನದ ಪ್ರಕಾರ ಶೇಕಡ 90 ರಷ್ಟು ಜನರು ಆಗ ಧರ್ಮಭೀರುಗಳಾಗಿ ದೇವರಿಗೆ ಶರಣಾದರು. "ಸಂಕಟ ಬಂದಾಗ ವೆಂಕಟರಮಣ" ಎಂದು ಹೇಳುವುದು ಇದಕ್ಕೇ ಅಲ್ಲವೇ? 1994 ಮತ್ತು 2000 ನೇ ಇಸವಿಗಳಲ್ಲಿ ಎರಡು ಬಾರಿ ಒಂದೂವರೆ ತಿಂಗಳ ಕಾಲ ಯೂರೋಪ್, ಇಂಗ್ಲೆಂಡ್, ಕೆನಡಾ ಮತ್ತು ಅಮೇರಿಕಾ ದೇಶಗಳಿಗೆ ವಿಶ್ವಶಾಂತಿ ಸಂದೇಶವನ್ನು ಹೊತ್ತು ನಮ್ಮೊಂದಿಗೆ ಕರೆದುಕೊಂಡು ಬಂದಿದ್ದ ನೂರಾರು ಜನರ “ವಿಶ್ವಶಾಂತಿ ಯಾತ್ರೆ”ಯನ್ನು (World Peace Tour) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ವಾಗತಿಸಿ, ಯಾತ್ರಿಕರನ್ನು ಹೆಚ್ಚು ತಪಾಸಣೆ ಮಾಡದೆ “Great Message! The world needs it!” ಎಂದು ಉದ್ಧರಿಸಿದರೂ ಮುಂಬರುವ ಅಶಾಂತಿಯನ್ನು ತಡೆಯಲಾಗದೆ ವಿಫಲವಾಗಿತ್ತು.

1893 ರಷ್ಟು ಹಿಂದೆ ಚಿಕಾಗೋದಲ್ಲಿ ನಡೆದ ವಿಶ್ವಧರ್ಮಸಮ್ಮೇಳನದಲ್ಲಿ ಮತಾಂಧತೆಯನ್ನು ಕುರಿತು ಸ್ವಾಮಿ ವಿವೇಕಾನಂದರು ಹೇಳಿದ ಈ ಮೇಲಿನ ಮಾತು ಎಷ್ಟೊಂದು ಸಾರ್ವಕಾಲಿಕ ಸತ್ಯದಿಂದ ಕೂಡಿದೆ! ಇತ್ತೀಚಿನ ದಿನಮಾನಗಳಲ್ಲಿ ವಿಶ್ವಾದ್ಯಂತ ನಡೆಯುತ್ತಿರುವ ಭಯೋತ್ಪಾದನೆಯ ಸರಣಿ ಕೃತ್ಯಗಳನ್ನು ಕಂಡೇ ಹೇಳಿದ್ದಾರೇನೋ ಎನ್ನುವಷ್ಟರಮಟ್ಟಿಗೆ ಈ ಮಾತುಗಳು ಇಂದಿಗೂ relevant ಆಗಿವೆ. ಇದನ್ನು ಸ್ವಾಮಿ ವಿವೇಕಾನಂದರು ಹೇಳಿದ್ದೂ ಸಹ ಸೆಪ್ಟೆಂಬರ್ 11 ರಂದೇ ಎಂಬುದು ಇಲ್ಲಿ ಗಮನಾರ್ಹ. 1893 ರ ಸೆಪ್ಟೆಂಬರ್ 11 ರಂದು ಚಿಕಾಗೋದಲ್ಲಿ ಮತಾಂಧತೆಯನ್ನು ಕುರಿತು ಆಡಿದ ಅವರ ಈ ಮಾತಿಗೂ, 2001 ರ ಸೆಪ್ಟೆಂಬರ್ 11 ರಂದು ನ್ಯೂಯಾರ್ಕಿನಲ್ಲಿ ನಡೆದ ಭಯೋತ್ಪಾದನೆಯ ಘಟನೆಗೂ ಎಷ್ಟೊಂದು ಹೊಂದಾಣಿಕೆ ಇದೆ. ಬೇರೆ ದಿನಾಂಕದಂದು ಹೇಳಿದ್ದರೆ ಆ ಮಾತು ಬೇರೆ; ಅನುಭವವಾಣಿ ಎಂದು ಸುಮ್ಮನಾಗಬಹುದಾಗಿತ್ತು. ದಿನಾಂಕಗಳ ಸಾಮ್ಯತೆ ಸ್ವಾಮಿ ವಿವೇಕಾನಂದರ ಅನುಭವವಾಣಿಯನ್ನು ಭವಿಷ್ಯವಾಣಿಯನ್ನಾಗಿಸಿದೆ. ಇದೇ ರೀತಿ 1503 ರಲ್ಲಿದ್ದ ಫ್ರೆಂಚ್ ವೈದ್ಯ ಮತ್ತು ಜ್ಯೋತಿಷಿ ನೋಸ್ಟ್ರಡಾಮಸ್ (Nostradamus) “...two metal birds would crash into two tall statues...in the new city..." ಎಂದು ಭವಿಷ್ಯ ನುಡಿದಿದ್ದ ಎಂದು ಬಲವಾಗಿ ನಂಬುವವರೂ ಇದ್ದಾರೆ, ಇದೆಲ್ಲಾ hoax ಎಂದು ಅಲ್ಲಗಳೆಯುವವರೂ ಇದ್ದಾರೆ.

ಅದೇನೇ ಇರಲಿ ಕವಿಗಳ, ದ್ರಷ್ಟಾರರ ಸ್ವಾನುಭವದ ಮಾತುಗಳು ಸಾರ್ವಕಾಲಿಕ ಮತ್ತು ಅತ್ಯಂತ ಹೃದಯಸ್ಪರ್ಶಿ. ಚಿಕಾಗೋದ ವಿಶ್ವಧರ್ಮ ಸಮ್ಮೇಳನದಲ್ಲಿ “Sisters and Brothers of America” ಎಂದು ಸ್ವಾಮಿ ವಿವೇಕಾನಂದರು ತಮ್ಮ ಭಾಷಣವನ್ನು ಆರಂಭಿಸಿದಾಗ ಸಾವಿರಾರು ಜನ ಸೇರಿದ್ದ ಆ ಸಭೆಯಲ್ಲಿ ವಿದ್ಯುತ್‌ ಸಂಚಾರವಾದಂತಾಗಿತ್ತು. ಸಾರ್ವಜನಿಕ ಸಭೆಗಳಲ್ಲಿ ಎಂದೂ ಕೇಳರಿಯದ ಅತ್ಯಂತ ಆತ್ಮೀಯತೆಯ ಮತ್ತು ಪ್ರೀತಿಯ ಮಾತುಗಳನ್ನು ಕೇಳಿ ಸಭೆ ಗದ್ಗದಗೊಂಡಿತ್ತು. ಆರಂಭದ ಮೂರೇ ಮೂರು ಶಬ್ದಗಳಲ್ಲಿ ಭಾರತದ ಋಷಿ-ಮುನಿಗಳ ಮತ್ತು ದ್ರಷ್ಟಾರರ ವಿಶ್ವಕುಟುಂಬಿತ್ವದ ಸಂದೇಶ ಅಮೇರಿಕಾದ ನೆಲದಲ್ಲಿ ಮಾರ್ದನಿಗೊಂಡಿತ್ತು. ಅದನ್ನು ಕೇಳಿ ಪುಳಕಿತಗೊಂಡ ಸಭೆ ಎದ್ದು ನಿಂತು ಮಾಡಿದ ಕರತಾಡನ 3 ನಿಮಿಷಗಳಾದರೂ ನಿಲ್ಲಲಿಲ್ಲ. ಕ್ಷಣಾರ್ಧದಲ್ಲಿ ಅಮೇರಿಕಾದ ಅಸಂಖ್ಯಾತ ಸೋದರ-ಸೋದರಿಯರ ಹೃದಯವನ್ನು ಒಬ್ಬ ತ್ಯಾಗಮಯಿ ಹಿಂದೂ ಸಂನ್ಯಾಸಿ ಗೆದ್ದಿದ್ದ. ಹೀಗೆ ಇಡೀ ಅಮೇರಿಕಾದ ಜನತೆಯನ್ನು ರೋಮಾಂಚನಗೊಳಿಸಿದ್ದ ಸೋದರಿಯರೇ, ಸೋದರರೇ ಎಂಬ ಆ ಪ್ರಭಾವೀ ನುಡಿಗಟ್ಟನ್ನು ಕಾಲಾನುಕ್ರಮದಲ್ಲಿ ಅಂತಹ ತೀವ್ರತರವಾದ ಭಾವನೆಗಳಿಲ್ಲದ ಸಾಮಾನ್ಯ ಜನರು ಸಾರ್ವಜನಿಕ ಸಭೆಗಳಲ್ಲಿ ಬಳಸಿ ಬಳಸಿ ಮತ್ತೆ ಮಹಿಳೆಯರೇ ಮತ್ತು ಮಹನೀಯರೇ ಎಂಬ ನೀರಸ ಪದಗಳ ಮಟ್ಟಕ್ಕೆ ತಂದು ಕ್ಲೀಷೆಯಾಗಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅದೇ ಚಿಕಾಗೋ ನಗರದಲ್ಲಿ ಮತ್ತೆ ಸೋದರ ಸೋದರಿಯರೇ ಎಂದರೆ ಮೈನವಿರೇಳಿಸುವ ಮತ್ತು ಕಿವಿ ನಿಮಿರಿಸುವಂತಹ ಒಂದು ಅಪರೂಪದ ಕಾರ್ಯಕ್ರಮ ಮುಂದಿನ ತಿಂಗಳು (ಆಗಸ್ಟ್ 29-31) ನಡೆಯಲಿದೆ. ಅದುವೇ ಇಲ್ಲಿಗೆ ವಲಸೆ ಬಂದ ಉತ್ತರ ಅಮೇರಿಕಾದ ಉದ್ದಗಲಕ್ಕೂ ನೆಲೆಸಿರುವ ಕನ್ನಡಿಗರು ಸಂಘಟಿತರಾಗಿ ಚಿಕಾಗೋದಲ್ಲಿ ಏರ್ಪಡಿಸಿರುವ "5ನೆಯ ಅಕ್ಕ ವಿಶ್ವಕನ್ನಡ ಸಮ್ಮೇಳನ”. ಈ ಸಮ್ಮೇಳನದಲ್ಲಿ ಭಾಗವಹಿಸಲು ಈ ಲೇಖನ ಬರೆಯುವ ವೇಳೆಗೆ ತಲಾ 175 ರಿಂದ 275 ಡಾಲರ್ ಕೊಟ್ಟು ತಮ್ಮ ಹೆಸರನ್ನು ನೊಂದಾಯಿಸಿರುವ ಅಮೇರಿಕನ್ನಡಿಗರ ಸಂಖ್ಯೆ 2,200 ದಾಟಿದೆ. ಸಮ್ಮೇಳನ ಆರಂಭವಾಗುವ ಹೊತ್ತಿಗೆ ಈ ಸಂಖ್ಯೆ ಐದು ಸಾವಿರಕ್ಕೆ ಮುಟ್ಟುತ್ತದೆಯೆಂದು ಸಮ್ಮೇಳನದ ಜವಾಬ್ದಾರಿಯನ್ನು ಹೊತ್ತ ಆತಿಥೇಯ ಸಂಸ್ಥೆಯಾದ ಚಿಕಾಗೋ ನಗರದ ವಿದ್ಯಾರಣ್ಯ ಕನ್ನಡ ಕೂಟದ ನಿರೀಕ್ಷೆ, ಸಮ್ಮೇಳನದ ನೋಂದಣಿ ಶುಲ್ಕವನ್ನು ನೀವು ಡಾಲರ್‌ ಗಳಲ್ಲಿ ಓದಿಕೊಂಡರೆ ಕಡಿಮೆ. ಇಲ್ಲದಿದ್ದರೆ ಜಾಸ್ತಿಯಾಗುತ್ತದೆ. ಒಂದು ಡಾಲರನ್ನು ಒಂದು ರೂಪಾಯಿ ಎಂದು ತಿಳಿದುಕೊಂಡರೆ ಇನ್ನೂ ಒಳ್ಳೆಯದು. ಅಪ್ಪಿ ತಪ್ಪಿ ರೂಪಾಯಿಗಳಿಗೆ ಪರಿವರ್ತನೆ ಮಾಡಿದರೆ ನೋಂದಣಿ ಶುಲ್ಕ ಈಗಿನ ಪರಿವರ್ತನ ದರದ ಪ್ರಕಾರ (Exchange Rate) ತಲಾ 7,500/- ರೂ. ಗಳಿಂದ 12,000/- ರೂ. ಗಳಾಗಿ ನಿಮಗೆ ಹುಚ್ಚು ಹಿಡಿಯುತ್ತದೆ! ಕೆಲವರಿಗೆ ಈ ಕನ್ನಡದ ಸಹವಾಸವೇ ಬೇಡ ಎಂದೆನಿಸಿದರೆ ಆಶ್ಚರ್ಯವೇನೂ ಇಲ್ಲ.

ಕನ್ನಡದ ಅಕ್ಕ ಅಮೇರಿಕಾದಲ್ಲಿ ಒಂದು ವಿಶೇಷ ಅರ್ಥವನ್ನು ಪಡೆದಿದೆ. ಅಕ್ಕಾ ಕೇಳವ್ವಾ, ನಾನೊಂದು ಕನಸ ಕಂಡೆ ಎಂದು ಅಕ್ಕಮಹಾದೇವಿಯು ಹೇಳುವಂತೆ ಉತ್ತರ ಅಮೇರಿಕಾದಲ್ಲಿ ನೆಲೆಸಿರುವ ಕನ್ನಡಿಗರ ಹಿರಿದಾದ ಕನಸಿನ ಸಾಕಾರ ರೂಪವಿದು! ಅಮೇರಿಕಾ ಮತ್ತು ಕೆನಡಾದಲ್ಲಿರುವ ಎಲ್ಲ ಕನ್ನಡ ಕೂಟಗಳ ಒಕ್ಕೂಟವೇ ಅಕ್ಕ (AKKA =Association of Kannada Kootas of America). ಈ ಸಂಸ್ಥೆಯ ನಿಯಮಾವಳಿಗಳನ್ನು ಅವಲೋಕಿಸಿದಾಗ ಕಂಡು ಬರುವ ಒಂದು ಬಹು ಮುಖ್ಯ ಸಂಗತಿ ಎಂದರೆ ಕರ್ನಾಟಕದ ಭೌಗೋಳಿಕ ಹರವು ಅಥವಾ ವಿಸ್ತಾರ. ಅಮೇರಿಕನ್ನಡಿಗರ ಕರ್ನಾಟಕ ಈಗಿನ ಭಾರತದ ಭೂಪಟದಲ್ಲಿ ತೋರಿಸಿರುವುದಕ್ಕಿಂತ ದೊಡ್ಡದು. ಈ ಸಂಸ್ಥೆಯ ಸಂವಿಧಾನದ ವಿಧಿ 1 (Names and Definitions) ಪ್ರಕಾರ ಕರ್ನಾಟಕ ಎಂದರೆ ನಮ್ಮ ನಾಡಿನ ಈಗಿನ ಭೂಪಟದಲ್ಲಿರುವ ಭೂಭಾಗವಲ್ಲದೆ ಅದರ ಎಲ್ಲೆಯನ್ನು ಮೀರಿ ಕನ್ನಡನಾಡಿನ ಭವ್ಯ ಇತಿಹಾಸದಲ್ಲಿ ಕಂಡು ಬರುವ ಎಲ್ಲ ಭೂಭಾಗವನ್ನು ಒಳಗೊಂಡಿದೆ, (Karnataka shall mean the present state of Karnataka in India and/or its other boundaries in history). ಸಂಯುಕ್ತ ಗಣರಾಜ್ಯವೆನಿಸಿದ ಅಮೇರಿಕಾದಲ್ಲಿ 50 ರಾಜ್ಯಗಳಿದ್ದರೆ, ಅಕ್ಕ ಎಂಬ ಈ ಕನ್ನಡ ಸಂಸ್ಥೆಗಳ ಒಕ್ಕೂಟದಲ್ಲಿ 58 ಕನ್ನಡ ಕೂಟಗಳಿವೆ: ಕ್ಯಾಲಿಫೋರ್ನಿಯಾದಲ್ಲಿ ಕಸ್ತೂರಿ ಕನ್ನಡಸಂಘ, ತಾಂಪಾದಲ್ಲಿ ಶ್ರೀಗಂಧ ಕನ್ನಡಕೂಟ, ಫ್ಲಾರಿಡಾದಲ್ಲಿ ನಂದಿ ಕನ್ನಡಕೂಟ, ಜಾರ್ಜಿಯಾದಲ್ಲಿ ನೃಪತುಂಗ ಕನ್ನಡಕೂಟ, ಮಿಚಿಗನ್‌ ನಲ್ಲಿ ಪಂಪ ಕನ್ನಡಕೂಟ, ಟೆಕ್ಸಾಸ್‌ ನಲ್ಲಿ ಕುವೆಂಪು ಕನ್ನಡಕೂಟ ಇತ್ಯಾದಿ. ಅದೇಕೋ ಏನೋ ವಾಷಿಂಗ್ಟನ್ನಲ್ಲಿ ವರನಟ ರಾಜ್ಕುಮಾರ್ ಹೆಸರಿನಲ್ಲಿದ್ದ ಕನ್ನಡ ಸಂಘ ಅಮಾನತುಗೊಂಡಿದೆ. ಸುಮಾರು 15 ಸಾವಿರಕ್ಕೂ ಹೆಚ್ಚು ಕನ್ನಡ ಕುಟುಂಬಗಳು ಈ ವಿವಿಧ ಕನ್ನಡ ಕೂಟಗಳಲ್ಲಿ ಸಕ್ರಿಯ ಸದಸ್ಯರಾಗಿದ್ದಾರೆ. ಅತ್ಯಂತ ಹಳೆಯ ಕನ್ನಡ ಕೂಟವೆಂದರೆ 1971 ರಲ್ಲಿ ಮಿಚಿಗನ್‌ ನಲ್ಲಿ ಸ್ಥಾಪಿತವಾದ ಪಂಪ ಕನ್ನಡಕೂಟ. ಅತ್ಯಧಿಕ ಸಂಖ್ಯೆಯ ಸದಸ್ಯತ್ವವುಳ್ಳ, ಹಿರಿಯ ಕನ್ನಡ ಸಂಘವೆಂದರೆ 1972 ರಲ್ಲಿ ಸ್ಥಾಪಿತವಾದ ನ್ಯೂಯಾರ್ಕ್ ಕನ್ನಡಕೂಟ. ಇದರಲ್ಲಿ 3 ಸಾವಿರ ಕುಟುಂಬಗಳಿವೆ. ಈ ವರ್ಷ 5ನೆಯ ಅಕ್ಕ ಸಮ್ಮೇಳನ ನಡೆಸುವ ಜವಾಬ್ದಾರಿಯನ್ನು ಹೊತ್ತಿರುವ ಚಿಕಾಗೋದಲ್ಲಿರುವ ವಿದ್ಯಾರಣ್ಯ ಕನ್ನಡಕೂಟ 1972 ರಲ್ಲಿ ಸ್ಥಾಪಿತವಾದ ಹಿರಿಯ ಕನ್ನಡ ಸಂಘಗಳಲ್ಲಿ ಒಂದಾಗಿದ್ದು 900 ಕನ್ನಡ ಕುಟುಂಬಗಳನ್ನು ಹೊಂದಿದೆ. ಅಕ್ಕ ತನ್ನ ಮೊಟ್ಟಮೊದಲ ಮತ್ತು ಈ ಸಹಸ್ರಮಾನದ ಮೊದಲ ವಿಶ್ವ ಕನ್ನಡಸಮ್ಮೇಳನ ನಡೆಸಿದ್ದು 2000 ನೇ ಇಸವಿಯಲ್ಲಿ ಟೆಕ್ಸಾಸ್‌ ಹೂಸ್ಟನ್ ನಗರದಲ್ಲಿ ಈ ಲೇಖನವನ್ನು ನಾವು ಬರೆಯುತ್ತಿರುವುದು ಇದೇ ಪ್ರದೇಶದ ಡಲ್ಲಾಸ್ (Dallas) ನಗರದಿಂದ. ಕನ್ನಡ ನಾಡಿನಿಂದ ಸುಮಾರು 14 ಸಾವಿರ ಕಿ.ಮೀ ದೂರದಲ್ಲಿರುವ ಚಿಕಾಗೋದಲ್ಲಿ ನಡೆಯುವ 5ನೆಯ ವಿಶ್ವ ಕನ್ನಡ ಸಮ್ಮೇಳನದಲ್ಲಿ ನಾಡಿನ ಹೆಸರಾಂತ ಸಾಹಿತಿಗಳು, ಸಿನಿಮಾ ತಾರೆಯರು, ಶ್ರೇಷ್ಠ ಕಲಾವಿದರು ಕನ್ನಡದ ಡಿಂಡಿಮವನ್ನು ಬಾರಿಸಲಿದ್ದಾರೆ. ಈ ಚರಿತ್ರಾರ್ಹ ಸಮ್ಮೇಳನಕ್ಕೆ ಕರ್ನಾಟಕದ ಮುಖ್ಯಮಂತ್ರಿ ಯಡೆಯೂರಪ್ಪನವರು ಬರಲಿದ್ದಾರೆಂದು ಇಲ್ಲಿಯ ಕನ್ನಡಿಗರೆಲ್ಲರೂ ಸಂತಸದಲ್ಲಿದ್ದಾರೆ. ರೈತರನ್ನು ಗುಂಡಿಟ್ಟು ಕೊಂದು ಅವರಿಗೆ ರಸಗೊಬ್ಬರದ ಪೂರೈಕೆ ಮಾಡದೆ ಮುಖ್ಯಮಂತ್ರಿಗಳು ಅಮೇರಿಕೆಗೆ ಹಾರಿಹೋಗಿದ್ದಾರೆಂದು ವಿರೋಧ ಪಕ್ಷದವರು ಅವರ ಕಾಲು ಹಿಡಿದು ಜಗ್ಗುವುದು ಬೇಡ. ಕನ್ನಡದ ಅಭಿಮಾನಿಗಳಾದ ಅನಿವಾಸಿ ಭಾರತೀಯರ ಸಹಾಯದಿಂದ ರೈತರ ಅಭ್ಯುದಯಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಿಕೊಂಡು ಬನ್ನಿ ಎಂದು ಹಾರೈಸಲಿ.

ಧರ್ಮ, ಭಾಷೆ ಮತ್ತು ಪ್ರಾಂತ್ಯ-ಪ್ರದೇಶಗಳು ವ್ಯಕ್ತಿಯ ಬದುಕಿನಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತವೆ. ಒಂದಲ್ಲ ಒಂದು ರೀತಿಯಲ್ಲಿ ನಾವು ನಂಬಿದ ಧರ್ಮ, ನಾವು ಆಡುವ ಭಾಷೆ ಮತ್ತು ನಾವು ಹುಟ್ಟಿ ಬೆಳೆದ ಭೌಗೋಳಿಕ ಪರಿಸರದೊಂದಿಗೆ ನಮ್ಮನ್ನು ನಾವು ಗುರುತಿಸಿಕೊಳ್ಳುತ್ತೇವೆ. ಅವುಗಳ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತೇವೆ. ನಮ್ಮ ಆಲೋಚನೆ, ನಡವಳಿಕೆ ಮತ್ತು ಇತರೆ ಜನರೊಂದಿಗಿನ ನಮ್ಮ ಸಂಬಂಧಗಳನ್ನು ಅವು ನಿಯಂತ್ರಿಸುತ್ತವೆ. ದೂರದ ವ್ಯಕ್ತಿ ನಮ್ಮ ಧರ್ಮದವನಾಗಿದ್ದರೆ, ನಮ್ಮ ಭಾಷೆಯವನಾಗಿದ್ದರೆ ಅಥವಾ ನಮ್ಮ ಊರಿನವನಾಗಿದ್ದರೆ ಅವನು ಎಷ್ಟೇ ಅಪರಿಚಿತನಾಗಿದ್ದರೂ ನಮಗೆ ಹತ್ತಿರವಾಗುತ್ತಾನೆ. ಅಮೇರಿಕಾದ ವಿಮಾನ ನಿಲ್ದಾಣಗಳಲ್ಲಿ ಹಾಯ್ದುಹೋಗುವಾಗ ಅಥವಾ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವಾಗ ಕನ್ನಡದ ಇಂಚರ ಕಿವಿಗೆ ಬಿದ್ದರೆ ಕಣ್ಣು, ಕಿವಿ ಶಬ್ದವೇದಿ ಬಾಣಗಳಾಗುತ್ತವೆ! ಮನಸ್ಸಿನಲ್ಲಿ ಹತ್ತಿರ ಹೋಗಿ ಮಾತನಾಡಿಸಬೇಕೆನ್ನಿಸುತ್ತದೆ.

ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು!

ಕಾವ್ಯರ್ಷಿ ಕುವೆಂಪುರವರ ಕವಿತೆಯ ಮೇಲಿನ ಸಾಲುಗಳನ್ನು ಸವಿಯಬೇಕೆಂದರೆ ನೀವು ಅಮೇರಿಕೆಗೆ ಬರಬೇಕು. ಆದರೆ ಇಲ್ಲಿಯೇ ನೆಲೆಸಲು ಹೊಂಚುಹಾಕಬೇಡಿ. ಹಾಗೆ ನಿರ್ಧರಿಸುವ ಮೊದಲು ನಿವೃತ್ತ ನ್ಯಾಯಮೂರ್ತಿ ಮಳೀಮಠರ ಸೋದರ ಸಂಬಂಧಿ ಇಲ್ಲಿ ನೆಲೆಸಿ ಇಲ್ಲಿಯೇ ಲಿಂಗೈಕ್ಕಾಗಿ ಇಲ್ಲಿಯ ಮಣ್ಣಿನೊಳಗೊಂದಾದ ಸದ್ಗೃಹಿಣಿ ಶ್ರೀಮತಿ ವಿಮಲಾ ಚೆನ್ನಬಸಪ್ಪನವರ ಮುಂದಿನ ಅಪರೂಪದ ಕವಿತೆಯನ್ನು ಕಿವಿಗೊಟ್ಟು ಆಲಿಸಿ:

ಭಾರತ ಬಿಟ್ಟು ಬೆಂಗಳೂರ್ ಬಿಟ್ಟು ಬಂದದ್ದಾಯ್ತು ಇಲ್ಲಿ 
ದೊಡ್ ದೇಶದಾಗೆ ದುಡ್ ನಂಜ್ಕೊಂಡು ಮನಸೋಗ್ತೈತೆ ಅಲ್ಲಿ! 
ಕೆಲಸ ಸಿಗ್ದು ದುಡ್ಡಿಲ್ಲಾಂತ ಏನೋ ಬಂದ್ವು ಇಲ್ಲಿ,
ಕೆಲಸ ದುಡ್ಡು ಎರಡೂ ಇದ್ರೂ ನಮ್ಮೋರಿಲ್ಲಾ ಇಲ್ಲಿ! 
ಅಲ್ಲಿದ್ದವ್‌ರ್ಗೆ ಇಲ್ಗ್ ಬರ್ಬೇಕೂಂತ ಏನೋ ಭಾರೀ ಹುಚ್ಚು 
ಇಲ್ಲಿದ್ರೂನೆ ಅಲ್ಲಿದ್ ನೆನಸೋದ್ ಏನಿದ್ ನನ್ಗೆ ಪೆಚ್ಚು!
ಐಸ್ಕ್ರೀಂ ಕೇಕು ಚಾಕಲೇಟ್ ಬೇಕು ಮೈಸೂರ್ ಮಕ್ಕಳೀಗ್ ಅಲ್ಲಿ 
ಇಡ್ಲಿ ದೋಸೆ ಬೋಂಡಾ ನೆನ್ಸಿ ಬಾಯಲ್ ನೀರು ಇಲ್ಲಿ! 
ಮೈಸೂರ್ ಮಲ್ಲಿಗೆ ರೇಷ್ಮೆ ಸೀರೆ ಇಲ್ಲಿದ್ ನನ್ಗೆ ಕನ್ಸು 
ಮೈಸೂರ್ನಲ್ಲೇ ಇರೋ ಹುಡ್ಗಿಗೆ ಪ್ಯಾಂಟು ಸ್ಕರ್ಟಿನ ದಿರ್ಸು! 
ಮಕ್ಕಳೀಗ್ ಕನ್ನಡ ಕಲಿಸ್ಬೇಕೂಂತ ನಮಿಗೊದ್ದಾಟ ಇಲ್ಲಿ 
ಹುಟ್ಟೋಕ್ ಮೊದಲೇ ಕಾನ್ವೆಂಟಿಗ್ ಹಾಕಿ ಇಂಗ್ಲೀಷ್ ಕಲ್ಸೋದ್ ಅಲ್ಲಿ!
ಅಲ್ಲಿ ಇಲ್ಲಿ ಎಲ್ಲೇ ಆಗ್ಲಿ ನಮ್ ತಾಯ್ ಭಾಷೆ ನವಿರು
ಕೇಳೋಕ್ ಆಸೆ ಓದೋಕ್ ಆಸೆ ಕನ್ನಡವೇ ನನ್ ತವರು!

ಇದು ಕೇವಲ ಕನ್ನಡ ನಾಡಿನಿಂದ ಬಂದ ಒಬ್ಬ ಮಹಿಳೆಯ ಕೊರಗು ಮಾತ್ರವಲ್ಲ; ಅಮೇರಿಕೆಗೆ ವಲಸೆ ಬಂದ ಇಡೀ ಭಾರತೀಯ ಮಹಿಳೆಯರ ಕಣ್ಣಂಚಿನ ಹನಿ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 16.7.2008.