ಪ್ರವಾಸದ ಪ್ರಯಾಸ
ನಮ್ಮ ಮಠದಿಂದ ಏರ್ಪಡಿಸಿದ್ದ ವಿಶ್ವಶಾಂತಿ ಯಾತ್ರೆಯಲ್ಲಿ ಯೂರೋಪ್ ಪ್ರವಾಸ ಅತ್ಯಂತ ಆನಂದದಾಯಕವಾಗಿತ್ತು. ಸಣ್ಣ ಪುಟ್ಟ ಘಟನೆಗಳನ್ನು ಬಿಟ್ಟರೆ ಹೆಚ್ಚಿನ ತೊಂದರೆಯೇನೂ ಆಗಲಿಲ್ಲ. ನಮ್ಮ ಪ್ರವಾಸದ ಪ್ರಯಾಸ ಆರಂಭವಾಗಿದ್ದು ಅಮೇರಿಕಾದ ನ್ಯೂಯಾರ್ಕ್ ನಗರವನ್ನು ತಲುಪಿದ ಮೇಲೆ, ನ್ಯೂಯಾರ್ಕಿನಲ್ಲಿರುವ “Inter-Religious Federation for World Peace” ಎಂಬ ಅಂತರ ರಾಷ್ಟ್ರೀಯ ಸಂಸ್ಥೆಯು ನಮ್ಮ ಹಾಗೂ ನಮ್ಮ ಪ್ರವಾಸೀ ತಂಡದ ಗೌರವಾರ್ಥವಾಗಿ ಒಂದು ಔತಣಕೂಟವನ್ನು ಏರ್ಪಡಿಸಿತ್ತು. ಆ ಸಂಸ್ಥೆ ಇದ್ದ ಸ್ಥಳಕ್ಕೆ ಕರೆದುಕೊಂಡು ಹೋಗಲು ನಮ್ಮ ಟ್ರಾವಲ್ ಏಜೆಂಟ್ ಬಸ್ಸಿನ ವ್ಯವಸ್ಥೆಯನ್ನೇ ಮಾಡಿರಲಿಲ್ಲ. ನೂರು ಜನ ಯಾತ್ರಿಕರಿಗೂ ಕ್ಯಾಬ್ (ಟ್ಯಾಕ್ಸಿ) ವ್ಯವಸ್ಥೆ ಮಾಡಬೇಕೆಂದರೆ ತುಂಬಾ ದುಬಾರಿ. ಅಷ್ಟು ಕಡಿಮೆ ಅವಧಿಯಲ್ಲಿ ಕೋಚ್ (ಬಸ್ಸು) ವ್ಯವಸ್ಥೆ ಮಾಡಿಕೊಳ್ಳುವುದೂ ಸುಲಭವಾದ ಕೆಲಸವಾಗಿರಲಿಲ್ಲ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಎಲ್ಲವನ್ನೂ ಮುಂಚಿತವಾಗಿಯೇ ರಿಸರ್ವ ಮಾಡಿಸಿರಬೇಕು. ಹೀಗಾಗಿ ನಮ್ಮನ್ನು ಆಹ್ವಾನಿಸಿದ ಸಂಸ್ಥೆಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗುವುದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು. ಅನಿವಾರ್ಯವಾಗಿ ಆ ಸಂಸ್ಥೆಯ ನಿರ್ದೇಶಕರೂ ನಮ್ಮ ಆತ್ಮೀಯರೂ ಆದ ಡಾ|| ಫ್ರಾಂಕ್ ಕಾಫ್ ಮನ್ (Frank Kaufmann) ರವರನ್ನು ಸಂಪರ್ಕಿಸಿ ಅವರ ನೆರವಿನಿಂದ ಹೇಗೋ ಬಸ್ಸಿನ ವ್ಯವಸ್ಥೆಯನ್ನು ಮಾಡಿಕೊಂಡು ತಲುಪಿದ್ದಾಯಿತು. “Welcome to World Peace Tour Participants” ಎಂದು ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದಿದ್ದ ಸ್ವಾಗತಫಲಕದೊಂದಿಗೆ ಅವರ ಸಂಸ್ಥೆಯ ಪದಾಧಿಕಾರಿಗಳೆಲ್ಲರೂ ತುಂಬಾ ಆತ್ಮೀಯತೆಯಿಂದ ನಮ್ಮೆಲ್ಲರನ್ನೂ ಬರಮಾಡಿಕೊಂಡರು. ಗೌರವದಿಂದ ಕಂಡು ತಮ್ಮ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಪರಿಚಯ ಮಾಡಿಕೊಟ್ಟರು.
ನ್ಯೂಯಾರ್ಕ್ ನಿಂದ ಮುಂದಕ್ಕೆ ಜಗತ್ ಪ್ರಸಿದ್ಧವಾದ ನಯಾಗರಾ ಜಲಪಾತವನ್ನು ನೋಡಲು ಬಫೆಲೋ ನಗರಕ್ಕೆ ವಿಮಾನದಲ್ಲಿ ಹೋಗಬೇಕಾಗಿತ್ತು. ಅದುವರೆಗೆ ಒಟ್ಟೊಟ್ಟಿಗೆ ಎಲ್ಲರೂ ಒಂದೇ ವಿಮಾನದಲ್ಲಿ ಸುಖವಾಗಿ ಪ್ರಯಾಣ ಮಾಡಿದ್ದ ನಮಗೆ ಈಗ ಅಮೇರಿಕೆಯಲ್ಲಿ ಮಾತ್ರ 50 ಜನರಂತೆ ಎರಡು ತಂಡಗಳಲ್ಲಿ ಬೇರೆ ಬೇರೆ ವಿಮಾನಗಳಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆ ಒದಗಿ ಬಂತು. ಅದಕ್ಕಾಗಿ ಮುಂಚಿತವಾಗಿಯೇ ಸಿದ್ಧತೆಯನ್ನು ಮಾಡಿಕೊಂಡಿದ್ದರೂ ತಾಂತ್ರಿಕ ತೊಡಕಿನಿಂದ ಒಂದು ವಿಮಾನಯಾನವು ಕೊನೇ ಗಳಿಗೆಯಲ್ಲಿ ರದ್ದಾಗಿ ಅನಿರೀಕ್ಷಿತ ತೊಂದರೆಯುಂಟಾಯಿತು. ಒಂದು ತಂಡದವರು ರಾತ್ರಿಯೆಲ್ಲಾ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿಯೇ ಉಳಿದು ಬೆಳಗಿನ ಜಾವ ಬಸ್ಸಿನಲ್ಲಿ ಪ್ರಯಾಣಿಸಬೇಕಾಗಿತ್ತು. ವಯಸ್ಸಾದವರೂ, ದುರ್ಬಲ ದೇಹಾರೋಗ್ಯವುಳ್ಳವರೂ ರಾತ್ರಿಯೆಲ್ಲಾ ಜಾಗರಣೆ ಮಾಡಿ ಬಸ್ಸಿನಲ್ಲಿ ಪ್ರಯಾಣ ಮಾಡುವುದೆಂದರೆ ತುಂಬಾ ಕಷ್ಟ ಎನಿಸಿತು. ಎರಡೂ ತಂಡಗಳಲ್ಲಿದ್ದ ಅಂಥವರನ್ನು ಆಯ್ಕೆಮಾಡಿ, ಹೊರಡಲು ಸಜ್ಜಾಗಿ ನಿಂತಿದ್ದ ವಿಮಾನದಲ್ಲಿ ಕರೆದುಕೊಂಡು ಹೋಗಲು ನೀಡಿದ ಸಲಹೆಗೆ ಏರ್ ಲೈನ್ ರವರು ಒಪ್ಪಲಿಲ್ಲ. ವೈಮಾನಿಕ ನಿಯಮಾವಳಿಗಳ ಪ್ರಕಾರ ಆಯಾಯ ವಿಮಾನದಲ್ಲಿ ರಿಸರ್ವೇಷನ್ ಇರುವ ಯಾತ್ರಿಕರೇ ಪ್ರಯಾಣಿಸಬೇಕೆಂದು ಹೇಳಿ ಬೇರೆಯವರಿಗೆ ಅವಕಾಶಕೊಡಲು ಆಗುವುದಿಲ್ಲವೆಂದು ನಿರಾಕರಿಸಿದರು. ಪ್ರವಾಸಿಗರ ದೈಹಿಕ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಟ್ಟು ಒತ್ತಾಯಪಡಿಸಿದ ಮೇಲೆ ನಮ್ಮ ವಿವೇಚನೆಗೊಳಪಟ್ಟಂತೆ ಆಯ್ಕೆ ಮಾಡಿದ ಪ್ರಯಾಣಿಕರಿಗೆ ವಿಶೇಷ ಅನುಮತಿಯನ್ನು ಮೇಲಧಿಕಾರಿಗಳಿಂದ ಪಡೆದು ಅವಕಾಶ ಮಾಡಿಕೊಟ್ಟರು.
ಮಾರನೆಯ ದಿನ ನಯನಮನೋಹರವಾದ ನಯಾಗರಾ ಜಲಪಾತವನ್ನು ನೋಡಿದ ಮೇಲೆ ನ್ಯೂಯಾರ್ಕ್ ನಿಂದ ಬಸ್ಸಿನಲ್ಲಿ ಮುಂಜಾವದಲ್ಲಿ ತೂಕಡಿಸಿಕೊಂಡು ಬಂದಿದ್ದ ಪ್ರವಾಸಿಗರ ದಣಿವೆಲ್ಲವೂ ನಿವಾರಣೆಯಾಯಿತು. ನಮ್ಮ ಮುಂದಿನ ವಿಮಾನ ಪ್ರಯಾಣ ಮತ್ತೆ ಎರಡು ತಂಡಗಳಲ್ಲಿ ಅಟ್ಲಾಂಟಾ ನಗರಕ್ಕೆ. ಅಟ್ಲಾಂಟಾದಲ್ಲಿ ಆ ವರ್ಷ ಉತ್ತರ ಅಮೇರಿಕಾದ ವೀರಶೈವ ಸಮಾಜದ (VSNA) ವಾರ್ಷಿಕ ಸಮ್ಮೇಳನವಿತ್ತು. ವಿಮಾನ ನಿಲ್ದಾಣದಲ್ಲಿ ಇಳಿದೊಡನೆಯೇ ಮತ್ತೆ ಅದೇ ಸಮಸ್ಯೆ. ಸಮಾರಂಭ ನಡೆಯುವ ಸ್ಥಳಕ್ಕೆ ಬಸ್ಸಿನ ವ್ಯವಸ್ಥೆಯನ್ನು ಟ್ರಾವಲ್ ಏಜಂಟ್ ಮಾಡಿರಲಿಲ್ಲ. ಅಮೇರಿಕಾದಲ್ಲಿ ವೈದ್ಯರಾಗಿ, ಇಂಜಿನಿಯರುಗಳಾಗಿ ನೆಲೆಸಿರುವ ನಮ್ಮ ಪ್ರವಾಸಿಗರ ಬಂಧುಗಳು ಅನೇಕರು ಸಮಾರಂಭಕ್ಕೆ ಬಂದಿದ್ದರು. ಹೀಗಾಗಿ ನಮ್ಮ ಸೂಚನೆಯಂತೆ ಅವರೇ ಸರದಿ ಪ್ರಕಾರ ಎಲ್ಲರನ್ನೂ ತಮ್ಮ ತಮ್ಮ ಕಾರುಗಳಲ್ಲಿ ಸಮಾರಂಭಕ್ಕೆ ಕರೆದುಕೊಂಡು ಹೋಗಿ ನಂತರ ವಾಪಾಸ್ ತಂಗಿದ್ದ ಹೋಟೆಲ್ ಗೆ ತಲುಪಿಸಿದರು. ಯೂರೋಪ್ ಪ್ರವಾಸ ಮುಗಿಸಿಕೊಂಡು ಅಮೇರಿಕೆಗೆ ಬರುವ ಹೊತ್ತಿಗೆ ಪ್ರವಾಸಿಗರು ನಮ್ಮ ದೇಶದಿಂದ ಜತೆಯಲ್ಲಿ ತಂದಿದ್ದ ತಿಂಡಿ ತಿನಿಸುಗಳೆಲ್ಲಾ ಖಾಲಿಯಾಗಿ ಅವರ ಬಾಯಿ ಒಣಗಿಹೋಗಿತ್ತು! VSNA ವಾರ್ಷಿಕ ಸಮ್ಮೇಳನದಲ್ಲಿ ರುಚಿ ರುಚಿಯಾದ ಭಾರತೀಯ ಭಕ್ಷ್ಯಭೋಜ್ಯಗಳು ದೊರೆತು ಎಲ್ಲರೂ ಬಾಯಿ ಚಪ್ಪರಿಸಿದರು! ಬಂಧುಗಳ ಅಪರೂಪದ ಮಿಲನದಿಂದಾಗಿ ಸಮ್ಮೇಳನವು ಮದುವೆ ಮನೆಯ ಸಡಗರ ಸಂಭ್ರಮಗಳಿಂದ ಕೂಡಿ ಕಂಗೊಳಿಸುತ್ತಿತ್ತು.
ಅಟ್ನಾಂಟಾದಿಂದ ಆರ್ಲ್ಯಾಂಡೋಕ್ಕೆ (Orlando) ನಮ್ಮ ಮುಂದಿನ ಪ್ರಯಾಣ. ಅಟ್ಲಾಂಟಾದ ಸಮ್ಮೇಳನದಲ್ಲಿ ಸೇರಿದ್ದ ಬಂಧುಗಳಿಗೀಗ ಅಗಲಿಕೆಯ ತೀವ್ರ ಪರಿತಾಪ, ಏನೂ ಮಾಡುವಂತಿರಲಿಲ್ಲ. ಜೀವನವೇ ಹಾಗೆ. ಗೋಡೆಯ ಗಡಿಯಾರದ ಲೋಲಕದಂತೆ! ನಿರಂತರವಾಗಿ ಸುಖ-ದುಃಖಗಳ ಮಧ್ಯೆ ಓಲಾಡುತ್ತಿರುತ್ತದೆ. (Life is a pendulum Oscillating between joy and sorrow!). ಒಮ್ಮೆ ಸುಖ, ಮತ್ತೊಮ್ಮೆ ದುಃಖ; ಒಮ್ಮೆ ನಲಿವು ಮಗುದೊಮ್ಮೆ ನೋವು! ಗಡಿಯಾರದ ಮುಳ್ಳು ಸದಾ ತಿರುಗುತ್ತಿರಬೇಕು. ಒಂದೆಡೆ ನಿಂತರೆ ಕೆಟ್ಟುಹೋದಂತೆಯೇ! ಜೀವನವೆಂಬ ಗಡಿಯಾರದ ಮುಳ್ಳು ನಿರಂತರವಾಗಿ ತಿರುಗುತ್ತಿರಬೇಕೆಂದರೆ ನೋವು-ನಲಿವು ಅನಿವಾರ್ಯ!
ಅಟ್ನಾಂಟಾದಿಂದ ಆರ್ಲಾಂಡೋಕೆ ಹೊರಟಾಗ ಮಾರ್ಗಮಧ್ಯೆ ಶಾರ್ಲೆಟ್ ನಲ್ಲಿ (Charlotte) ವಿಮಾನವನ್ನು ಬದಲಾಯಿಸಬೇಕಾಗಿತ್ತು. ಶಾರ್ಲೆಟ್ ನಲ್ಲಿ ನಾವು ಬಂದಿಳಿದ ಹಿಂದಿನ ದಿನವೇ ಅದೇ ಯಾನಸಂಖ್ಯೆಯ (Flight No.) ಇನ್ನೊಂದು ವಿಮಾನವು ಅಪಘಾತಕ್ಕೆ ಈಡಾಗಿ ಅದರಲ್ಲಿದ್ದ ಪ್ರಯಾಣಿಕರೆಲ್ಲರೂ ಮರಣಹೊಂದಿದ್ದರು. ವಿಮಾನ ನಿಲ್ದಾಣದ ಪಕ್ಕದ ರನ್ ವೇನಲ್ಲಿ ಅದರ ಅವಶೇಷಗಳು ಕಾಣುತ್ತಿದ್ದವು. ಪ್ರವಾಸಿಗರು ಅದನ್ನು ಕುತೂಹಲದಿಂದ ನೋಡಿದರಾದರೂ ಯಾವುದೋ ವಿಮಾನ ಅಪಘಾತಕ್ಕೆ ಒಳಗಾಗಿದೆಯೆಂದು ತಮ್ಮೊಳಗೇ ಮಾತನಾಡಿಕೊಂಡು ಸುಮ್ಮನಾದರು. ಅವರು ಗಾಬರಿಯಾಗುತ್ತಾರೆಂದು ಆಗ ಹತ್ತಿ ಕುಳಿತಿದ್ದ ವಿಮಾನವು ನಿನ್ನೆಯ ಅದೇ ಯಾನ ಸಂಖ್ಯೆಯ ವಿಮಾನವೆಂದು ನಾವೂ ಸಹ ಯಾರಿಗೂ ಹೇಳಲು ಹೋಗಲಿಲ್ಲ. ಅಂದು ಪ್ರಯಾಣಿಸುವ ಬದಲು ಹಿಂದಿನ ದಿನವೇ ಹೊರಟಿದ್ದರೆ ಬಹುಶಃ ಆ ಅವಶೇಷಗಳನ್ನು ನೋಡಲು ಯಾರೂ ಇರುತ್ತಿರಲಿಲ್ಲ! ಕಣ್ಣಿಗೆ ಕಾಣುವ ಅವಶೇಷಗಳ ಜೊತೆಯಲ್ಲಿ ಎಲ್ಲರೂ ನಾಮಾವಶೇಷವಾಗಿದ್ದನ್ನು ಬೇರೆಯವರು ನೋಡಿಕೊಂಡು ಮುಂದೆ ಹೋಗುತ್ತಿದ್ದರು!
ಆರ್ಲಾಂಡೋದಲ್ಲಿ ನಾವಿದ್ದ ದಿನಗಳು ಬೇರೆಲ್ಲ ಸ್ಥಳಗಳಿಗಿಂತ ಹೆಚ್ಚೆಂದೇ ಹೇಳಬೇಕು. ಬೇರೆ ಸ್ಥಳಗಳಲ್ಲಿ ಒಂದೆರಡು ದಿನಗಳು ಮಾತ್ರ ಇದ್ದರೆ ಇಲ್ಲಿ ಇದ್ದದ್ದು ಪೂರಾ ನಾಲ್ಕು ದಿನಗಳು. ಆದರೂ ಪ್ರವಾಸಿಗರಿಗೆ ಕಡಿಮೆ ಎನಿಸಿತ್ತು. ಹಿಂದಿನ ದಿನದ ಬಂಧುಗಳ ಅಗಲಿಕೆಯ ತಾಪ ಸಂಪೂರ್ಣ ಮರೆತಂತಾಗಿತ್ತು! ಅದಕ್ಕೆ ಕಾರಣ ಆಬಾಲವೃದ್ಧರಿಗೆಲ್ಲಾ ಅಂತಹ ಪ್ರಮುಖ ಆಕರ್ಷಣೆ ಆ ಸ್ಥಳದಲ್ಲಿತ್ತು. ಐರೋಪ್ಯದೇಶಗಳಲ್ಲಿ ಗತಕಾಲದ ಸ್ಮಾರಕಗಳೋ, ಶಿಲ್ಪಕಲಾ ಸೌಂದರ್ಯದಿಂದ ಕೂಡಿದ ಭವ್ಯ ಪ್ರಾಚೀನ ಸೌಧಗಳೋ, ಚಿತ್ರಕಲೆಗಳೋ ರಮಣೀಯವಾದ ಪ್ರಾಕೃತಿಕ ಸೊಬಗೋ ಕಣ್ಮನ ತಣಿಸಿದರೆ, ಅಮೇರಿಕಾದ ಆರ್ಲಾಂಡೋದಲ್ಲಿರುವ Disney World ಪ್ರವಾಸಿಗರ ಕಣ್ಣನ್ನು ಕಟ್ಟಿ ಕನಸಿನ ಲೋಕಕ್ಕೆ (Fantasy world) ಕೊಂಡೊಯ್ಯುತ್ತದೆ!
ಒಂದು ಪ್ರದರ್ಶನದಿಂದ ಮತ್ತೊಂದು ಪ್ರದರ್ಶನಕ್ಕೆ ಜನರ ನೂಕು ನುಗ್ಗಲು. ನಮ್ಮ ಪ್ರವಾಸದುದ್ದಕ್ಕೂ ನಾವು ಹೋದೆಡೆಯಲ್ಲೆಲ್ಲಾ ಬೀರೂರಿನ ಮಾರ್ಗದ ಮನೆತನದ ಮಲ್ಲಿಕಾರ್ಜುನಪ್ಪನವರು ಅವರ ಮನೆತನದ ಹೆಸರಿಗೆ ತಕ್ಕಂತೆ ನಮ್ಮ ಮುಂದೆ, ವಿಶೇಷವಾಗಿ ವಿಮಾನ ನಿಲ್ದಾಣಗಳಲ್ಲಿ ಹೋಗುವಾಗ, ನಮ್ಮ ಮಠದ ಶಿವ ಧ್ವಜವನ್ನು ಎತ್ತಿ ಹಿಡಿಯುತ್ತಾ ಪ್ರವಾಸಿಗರು ಧ್ವಜವನ್ನು ಹಿಂಬಾಲಿಸಿ ಬರುವಂತೆ ಮಾಡುತ್ತಿದ್ದರು. ದಾರಿಯಲ್ಲಿ ಗಂಡನ ಕೈಗೆ ಉದ್ದನೆಯ ಸ್ಕಾರ್ಫನ್ನು ಕಟ್ಟಿ ಹಿಡಿದುಕೊಂಡಿದ್ದ ಅವರ ಪತ್ನಿ ಶ್ರೀಮತಿ ಶಾಂತಮ್ಮ ನಮ್ಮ ಕಣ್ಣಿಗೆ ಬಿದ್ದರು. “ಏನಮ್ಮಾ ಏನಿದು? ಗಂಡನ ಕೈಗೆ ಸ್ಕಾರ್ಫ್ ಕಟ್ಟಿದ್ದೀಯಾ?” ಎಂದು ಕೇಳಿದ್ದಕ್ಕೆ ಶಾಂತಮ್ಮ ನಸುನಗುತ್ತಾ: “ಬುದ್ದಿ, ಇವರು ಈ ದೇಶದಲ್ಲಿ ಬೇರೆ ಯಾರ ಹಿಂದೆಯಾದರೂ ಓಡಿಹೋಗದಿರಲಿ ಎಂದು ಹೀಗೆ ಕಟ್ಟಿ ಹಿಡಿದುಕೊಂಡಿದ್ದೇನೆ” ಎಂದು ನುಡಿದರು. ಅವರ ಹಾಸ್ಯಪ್ರಜ್ಞೆ ಪ್ರವಾಸಿಗರ ಮುಖದಲ್ಲಿ ನಗೆಯನ್ನು ಮೂಡಿಸಿತು. ಶ್ರೀಮತಿ ಶಾಂತಮ್ಮ ಮಾಜಿ ಶಾಸಕ ಲಿಂಗೈಕ್ಯ ಡಿ ಜಿ ಬಸವನಗೌಡರ ತಂಗಿ, ನಮ್ಮ ಗುರುಗಳ ಗುರುಗಳಾಗಿದ್ದ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರ ಕಾಲದಲ್ಲಿ ಮಠಕ್ಕೆ ಬೆಳ್ಳಿ ಪಲ್ಲಕ್ಕಿ ಮಾಡಿಸಿಕೊಟ್ಟಿದ್ದ ಹೊನ್ನಾಳಿ ತಾ|| ಹೊಳೆಬೆನಕನಹಳ್ಳಿಯ ದೊಡ್ಡಮನೆ ಗೌಡರ ಮನೆತನದವರು. ಹಿರಿಯರಾದ ಸಿದ್ಧಪ್ಪ ಗೌಡರ ತಮ್ಮ ಶಂಕರಪ್ಪ ಗೌಡರು. ಸಿದ್ಧಪ್ಪ ಗೌಡರು ಬೆಳ್ಳಿ ಪಲ್ಲಕ್ಕಿ ಮಾಡಿಸಿಕೊಂಡು ಬರಲು ಆಗಿನ ಕಾಲದಲ್ಲಿ ಬೆಳ್ಳಿ ರೂಪಾಯಿ ಗಂಟನ್ನು ತೆಗೆದುಕೊಂಡು ಕಾಶಿಗೆ ಹೋಗಿದ್ದರಂತೆ. ಅವರನ್ನು ನಾವು ಬಾಲ್ಯದಲ್ಲಿ ನೋಡಿದ ನೆನಪು ಇನ್ನೂ ಹಚ್ಚ ಹಸಿರಾಗಿದೆ. ಆಜಾನು ಬಾಹು. ಗಂಭೀರ ವದನ. ಹೆಚ್ಚು ಮಾತನಾಡುತ್ತಿರಲಿಲ್ಲ. ಶಂಕರಪ್ಪ ಗೌಡರದೂ ಅಷ್ಟೇ ಗಂಭೀರವಾದ ವ್ಯಕ್ತಿತ್ವ. ನಾವು ಚಿಕ್ಕ ಹುಡುಗರಾಗಿದ್ದಾಗ ಒಮ್ಮೆ ಅವರ ಮನೆಯಲ್ಲಿ ಚಪ್ಪಲಿಯನ್ನು ಬಿಟ್ಟು ಮರೆತು ಬಂದಿದ್ದೆವು. ಆಗರ್ಭ ಶ್ರೀಮಂತರಾಗಿದ್ದರೂ ಅಹಂಕಾರಪಡದ ಗೌಡರು ತಮ್ಮ ಮಗ ಡಿ.ಜಿ. ಬಸವನಗೌಡರನ್ನು ಕರೆದು ನಮ್ಮ ಸ್ವಾಮಿಗಳ ಮರಿ ಬಿಟ್ಟು ಹೋಗಿದೆ, ಮುಟ್ಟಿಸಿ ಬಾ ಎಂದು ಹೇಳಿದರು. ಆಗ ತಾನೆ ಪರದೇಶದಲ್ಲಿ ಓದಿ ಬಂದಿದ್ದ ಮಗ ಒಪ್ಪಲಿಲ್ಲ. ಸ್ವತಃ ಗೌಡರೇ ತಮ್ಮ ಕೈಚೀಲದಲ್ಲಿ ಆ ಚಪ್ಪಲಿಗಳನ್ನು ಇಟ್ಟುಕೊಂಡು ನಮ್ಮ ಪೂರ್ವಾಶ್ರಮದ ಊರಿನವರೆಗೂ ಖುದ್ದಾಗಿ ಬಂದು ಕೊಟ್ಟು ಹೋದರು! ಅಂತಹ ಭಕ್ತಿ ಸಂಪನ್ನ ಹಿರಿಯ ಜೀವಗಳನ್ನು ಮರೆಯುವುದಾದರೂ ಹೇಗೆ ಸಾಧ್ಯ?
Disney World ನಲ್ಲಿ ನೋಡಲು ಇರುವ ಅನೇಕ ಪ್ರದರ್ಶನಗಳಲ್ಲಿ ಸಾಗರಜೀವಿಗಳನ್ನು ಪಳಗಿಸಿ ತೋರಿಸುವ ರುದ್ರರಮಣೀಯವಾದ ಪ್ರದರ್ಶನವೆಂದರೆ Sea World. ಈಜುಕೊಳದ ಸುತ್ತಲೂ ಒಂದಿಂಚೂ ಜಾಗ ಬಿಡದಂತೆ ಎತ್ತರದ ಗ್ಯಾಲರಿಯಲ್ಲಿ ಕಿಕ್ಕಿರಿದು ಕುಳಿತ ಪ್ರೇಕ್ಷಕರು! ವಾದ್ಯಸಂಗೀತದ ಅಬ್ಬರ! ಇದ್ದಕ್ಕಿದ್ದಂತೆಯೇ ಕಣ್ಣೆದುರಿನಲ್ಲಿ ಈಜುಕೊಳದ ಆಳದಿಂದ ಆಕಾಶದೆಡೆಗೆ ಸಮಾನಾಂತರವಾಗಿ ಚಿಮ್ಮುವ ಜೋಡಿ ಡಾಲ್ಫಿನ್ ಗಳು (Dolphins) ಮತ್ತೆ ನೀರಿಗೆ ಜೊತೆ ಜೊತೆಯಲ್ಲಿಯೇ ಲಾಗ ಹಾಕುವ ಆ ಭೀಮಕಾಯದ ಡಾಲ್ಫಿನ್ ಗಳ ದೃಶ್ಯ ರುದ್ರ ರಮಣೀಯ! ಅವುಗಳ ಬೆನ್ನಹಿಂದೆಯೇ ಪೈಪೋಟಿಯ ಮೇಲೆ ಮತ್ತೆರೆಡು ಜೋಡಿ ಈಜುಕೊಳದಿಂದ ರಾಕೆಟ್ ನಂತೆ ಮೇಲಕ್ಕೆ ಜಿಗಿದು ದೊಪ್ಪೆಂದು ನೀರೊಳಕ್ಕೆ ಬೀಳುವ ಸಮುದ್ರಸಿಂಹಗಳು (Sea Lions)! ನೋಡಲು ಎರಡು ಕಣ್ಣುಗಳು ಸಾಲವು. ಈಜುಕೊಳದ ಒಂದು ಬದಿಯಿಂದ ಮತ್ತೊಂದು ಬದಿಯವರೆಗೆ ಮಿಂಚಿನ ವೇಗದಲ್ಲಿ ಸಂಚರಿಸಿ ಎತ್ತರದ ಗ್ಯಾಲರಿಯಲ್ಲಿ ಕುಳಿತ ಜನರವರೆಗೂ ಅವರು ತೊಟ್ಟ ಬಟ್ಟೆಗಳು ಒದ್ದೆಯಾಗುವಂತೆ ತನ್ನ ಬಾಲದ ರೆಕ್ಕೆಯಿಂದ ನೀರನ್ನು ಬಡಿದು ಸಿಂಪಡಿಸುವ ಅವುಗಳ ದೈತ್ಯಶಕ್ತಿ ವರ್ಣಿಸಲಸದಳ! ಒಂದು ದೊಡ್ಡ ಕಲ್ಲು ಬಂಡೆ ಈಜುಕೊಳಕ್ಕೆ ಬಿದ್ದರೆ ಹೇಗೋ ಹಾಗೆ! ಅಡಿಯಿಂದ ಮುಡಿಯವರೆಗೆ ಬಟ್ಟೆಯೆಲ್ಲಾ ಒದ್ದೆಯಾಗಿ ನದಿಯ ನೀರಲ್ಲಿ ಮುಳುಗೆದ್ದವರಂತೆ ಕಾಣುವ ಪ್ರೇಕ್ಷಕರು ಖುಷಿಯಿಂದ ಕಿವಿಗಡಚಿಕ್ಕುವಂತೆ ಕೂಗುವ ಕಿರುಚಾಟ, ಆರ್ಭಟಗಳು! ಡಾಲ್ಫಿನ್ ಗಳು ನೀರಿನ ಮೇಲ್ಮೈನಿಂದ ದಿಢೀರನೆ ಹೊರಬಂದು, ಈಜು ಕೊಳದ ವೇದಿಕೆಯ ಮೇಲೆ ಮುಂಮೈ ತಾಗಿಸಿ ಗಕ್ಕನೆ ನಿಲ್ಲುತ್ತವೆ. ಮೈಕಿನಲ್ಲಿ ಕೇಳಿಬರುವ ಸಂಗೀತ-ತಾಳ-ಲಯಗಳಿಗನುಗುಣವಾಗಿ ತಮ್ಮ ಶರೀರವನ್ನು ನಾಟಕೀಯವಾಗಿ ತೊನೆದಾಡಿಸುತ್ತವೆ. ತರಪೇತುದಾರಳ ಕೈಯಿಂದ ಮೆಚ್ಚುಗೆಯ ರೂಪದಲ್ಲಿ ಬಾಯ್ತುಂಬ ಆಹಾರವಾಗಿ ಪಡೆದ ಸಣ್ಣ ಸಣ್ಣ ಮೀನುಗಳನ್ನು ಗಬಕ್ಕನೆ ಕಬಳಿಸುವ ಆ ದೈತ್ಯಾಕಾರದ ಡಾಲ್ಫಿನ್ ಗಳ ನೃತ್ಯವನ್ನು ನೋಡಿ ಮೈಮರೆಯದವರಿಲ್ಲ!
ಮತ್ತೊಂದೆಡೆ ಕುಳಿತಲ್ಲಿಯೇ ಕುಳಿತಿದ್ದರೂ ಎದುರಿಗೆ ರಜತಪರದೆಯ ಮೇಲೆ 3-D ಆಕಾರದಲ್ಲಿ ಬಾನೆತ್ತರದ ಹಿಮಾಚ್ಛಾದಿತ ಪರ್ವತ ಶ್ರೇಣಿಯ ಶಿಖರಗಳನ್ನು ತೋರಿಸಿ ಆಕಾಶ ನೌಕೆಯಲ್ಲಿ ಕುಳಿತು ದಿಗ್ ದಿಗಂತಗಳೆತ್ತರಕ್ಕೆ ಏರುತ್ತಿರುವಂತೆ ಖುಷಿಯನ್ನುಂಟುಮಾಡಲಾಗುತ್ತದೆ. ಇದ್ದಕ್ಕಿದ್ದಂತೆಯೇ ಕುಳಿತ ಸೀಟುಗಳನ್ನು ಯಂತ್ರಗಳಿಂದ ಅಲ್ಲಾಡಿಸಿ, ಆಕಾಶದಿಂದ ಪರ್ವತದ ಕಂದರಕ್ಕೆ ದಿಢೀರನೆ ಬೀಳುತ್ತಿರುವಂತೆ ಭ್ರಮೆಯನ್ನು ಹುಟ್ಟಿಸಲಾಗುತ್ತದೆ. ಮೈ ಜುಂಮ್ ಎನ್ನುವ ಭಯ ಹುಟ್ಟಿಸಿ, ಪ್ರವಾಸಿಗರು ಹೋ….! ಎಂದು ಆಕ್ರಂದಿಸುವಂತೆ ಮಾಡುವ ತಾಂತ್ರಿಕ ಜಾಣ್ಮೆಯ ರುದ್ರ ಭಯಾನಕತೆ! ಇಂಥವು; ಒಂದೇ ಎರಡೇ! ಅವೆಲ್ಲವುಗಳನ್ನೂ ನೋಡಿ ರಾತ್ರಿ ಸುಮಾರು ೧೦ ಗಂಟೆಯ ಹೊತ್ತಿಗೆ ಎಲ್ಲರೂ ಬಸ್ಸಿಗೆ ಹಿಂತಿರುಗಿದರೆ ನಮಗೆ ಮತ್ತೊಂದು ಆತಂಕದ ಸುದ್ದಿ ಕಾದಿತ್ತು.
ಅದೆಂದರೆ ಭೀಮಸಮುದ್ರದ ಜಿ ಮಲ್ಲಿಕಾರ್ಜುನಪ್ಪನವರು ನಾಪತ್ತೆ! ಆಗಿನ್ನೂ ಅವರು ಲೋಕಸಭಾ ಸದಸ್ಯರಾಗಿರಲಿಲ್ಲ. ಇಂತಹ ಪ್ರಸಂಗಗಳು ಬಂದೊದಗಿದರೆ ಬೇಕಾಗಬಹುದೆಂದೇ ಬೆಂಗಳೂರಿನಿಂದ ಹೊರಡುವಾಗ ನೂರೊಂದು ಪ್ರವಾಸಿಗರೆಲ್ಲರ ಪಾಸ್ ಫೋರ್ಟ್ ಗಾತ್ರದ ಕಲರ್ ಫೋಟೋ, ಅವರ ಹೆಸರು ಮತ್ತು ನಾವು ಕೊಟ್ಟಿದ್ದ ಐ.ಡಿ. ನಂಬರ್ ಇರುವ ಒಂದು ಚಿಕ್ಕ ಆಲ್ಬಮ್ ಅನ್ನು ಸದಾ ನಮ್ಮ ಹತ್ತಿರ ಇಟ್ಟುಕೊಂಡಿರುತ್ತಿದ್ದೆವು. ಪ್ರತಿಯೊಬ್ಬರ ಪಾಸ್ ಫೋರ್ಟ್ ನಂಬರ್, ಮನೆಯ ವಿಳಾಸ, ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ಬೇಕಾದ ಅವರ ಹತ್ತಿರದ ಬಂಧುಗಳ ಫೋನ್ ನಂಬರ್, ಹೆಲ್ತ್ ಇನ್ಸೂರೆನ್ಸ್, ಬ್ಲಡ್ ಗ್ರೂಪ್ ಇತ್ಯಾದಿ ವಿವರವಾದ ಮಾಹಿತಿಯನ್ನು ಸದಾ ನಮ್ಮೊಂದಿಗಿರುವ ಲ್ಯಾಪ್ ಟಾಪ್ ನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದೆವು. ಸುಮಾರು ಒಂದು ಗಂಟೆ ಕಾಲ ಎಲ್ಲಿ ಹುಡುಕಿದರೂ ಮಲ್ಲಿಕಾರ್ಜುನಪ್ಪನವರು ಸಿಗಲಿಲ್ಲ. ಪ್ರವಾಸಿಗರೆಲ್ಲರೂ ದಿನವಿಡೀ ಓಡಾಡಿ ಬಳಲಿದ್ದರಿಂದ ಚಡಪಡಿಸತೊಡಗಿದರು. ದಿನವೆಲ್ಲಾ ಸಂತೋಷದಿಂದ ಕಾಲ ಕಳೆದ ಪ್ರವಾಸಿಗರ ಮುಖ ಮಲ್ಲಿಕಾರ್ಜುನಪ್ಪನವರ ಕಣ್ಮರೆಯಿಂದ ಕಳಾಹೀನವಾಗಿತ್ತು. ಎಲ್ಲರ ಹೃದಯದಲ್ಲೂ ದುಗುಡ ಆವರಿಸಿತ್ತು. ಅವರ ಪತ್ನಿ ಹಾಲಮ್ಮನವರಂತೂ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ದಿಙ್ಮೂಢರಾಗಿದ್ದರು. ಪ್ರವಾಸಿಗರೆಲ್ಲಾ ಎಪ್ ಕಾಟ್ ಸೆಂಟರ್ (Epcot Center) ನೋಡುತ್ತಾ ನಿಂತಿದ್ದರೆ, ಮಲ್ಲಿಕಾರ್ಜುನಪ್ಪನವರು ತಮ್ಮ ಪತ್ನಿಯನ್ನು ಇತರೆ ಹೆಣ್ಣು ಮಕ್ಕಳ ಜೊತೆಗೆ ಕೂರಿಸಿ ಒಬ್ಬರೇ ಮಾನೋ ರೈಲನ್ನು (Mono Rail) ಹತ್ತಿ ಮ್ಯಾಜಿಕ್ ಕಿಂಗ್ ಡಮ್ (Magic Kingdom) ನೋಡಲು ಹೋಗಿ ದಿಕ್ಕುಗಾಣದೆ ಮಂತ್ರಮಾಯವಾಗಿದ್ದರು! Disney World ನ ಸುರಕ್ಷಾ ಸಿಬ್ಬಂದಿಗೆ ಅವರ ಫೋಟೋ ಕೊಟ್ಟು ಹುಡುಕಿಸಲಾರಂಭಿಸಿದೆವು. ನೂರಾರು ಎಕರೆ ಪ್ರದೇಶದ ಆವರಣದಲ್ಲಿ ಕ್ಷಣಾರ್ಧದಲ್ಲಿ ಅವರ ಕೈಯಲ್ಲಿದ್ದ ವೈರ್ ಲೆಸ್ ನಿಂದ ಎಲ್ಲೆಡೆ ಸಂದೇಶ ಹೋಯಿತು. “O that old man who looks like Gandhi?” ಎಂದು ಅವರನ್ನು ನೋಡಿದ್ದ ರಕ್ಷಣಾಧಿಕಾರಿಯೊಬ್ಬ ಅರ್ಧ ಮುಕ್ಕಾಲು ಗಂಟೆಯೊಳಗೆ ಅವರನ್ನು ಪತ್ತೆ ಮಾಡಿ ಕರೆತಂದ!
ನಮ್ಮ ಪ್ರವಾಸದಲ್ಲಿ ಭಾಗವಹಿಸಿದ್ದವರಲ್ಲಿ ನಾಲ್ಕಾರು ಜನ ಈಗ ಜೀವಂತವಿಲ್ಲ, ಅವರು ಜೀವನಯಾತ್ರೆಯಲ್ಲಿ ಹೋದ ತಾಣ ನಿಗೂಢ! Disney World ನಲ್ಲಿ ರಕ್ಷಣೆ ಮಾಡಿದಂತೆ ಅವರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಾಗಿಲ್ಲ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 30.6.2010.