ವಿಶ್ವಶಾಂತಿ ಯಾತ್ರೆ....

  •  
  •  
  •  
  •  
  •    Views  

ಕೋಶನಾದ್ರೂ ಓದ್ಬೇಕು, ದೇಶನಾದ್ರೂ ತಿರುಗ್‌ ಬೇಕು” ಎಂಬ ಗಾದೆ ಮಾತೊಂದಿದೆ. ಜೀವನಾನುಭವದ ಮೂಸೆಯಲ್ಲಿ ಗಟ್ಟಿಗೊಂಡು ಕೆಲವೇ ಶಬ್ದಗಳಲ್ಲಿ ಮೂಡಿಬಂದ ಅನುಭವತೀವ್ರತೆಯ ರಸಪಾಕವೇ ಗಾದೆ. “ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ” ಎಂಬ ಗಾದೆ ಮಾತೇ ಇದೆ. ಗಾದೆಯನ್ನೇ ಕುರಿತು ಹೇಳಿದ ಇಂತಹ ಗಾದೆ ಮಾತು ಕನ್ನಡದಲ್ಲಲ್ಲದೆ ಬೇರಾವ ಭಾಷೆಯಲ್ಲೂ ಇದ್ದಂತಿಲ್ಲ. ಈ ಮೇಲಿನ ಗಾದೆಯಲ್ಲಿ “ಕೋಶ” ಎಂದರೆ ಯಾವುದೇ ಭಾಷೆಯ “ಶಬ್ದಕೋಶ” (Dictionary) ಅಲ್ಲ, ಜ್ಞಾನವನ್ನು ವರ್ಧಿಸುವ ಒಂದು ಒಳ್ಳೆಯ ಪುಸ್ತಕ ಎಂದರ್ಥ. ದೇಶ ಎಂದರೆ ಯಾವುದೇ ಒಂದು ನಿರ್ದಿಷ್ಟ ನಾಡಲ್ಲ, ಪ್ರವಾಸೀ ತಾಣ ಎಂದರ್ಥ. ಪುಸ್ತಕದ ಓದು ಮತ್ತು ದೇಶದ ಪರಿಭ್ರಮಣೆ ಇವೆರಡೂ ಜ್ಞಾನದ ಸಾಧನಗಳು. ಕೇವಲ ಪುಸ್ತಕವನ್ನು ರಚಿಸಿದ ಮಾತ್ರಕ್ಕೆ ಅಥವಾ ಯಾವುದೇ ದೇಶವನ್ನು ಎರ್ರಾಬಿರ್ರಿಯಾಗಿ ತಿರುಗಿದ ಮಾತ್ರಕ್ಕೆ ಜ್ಞಾನಸಂಪಾದನೆ ಆಗುವುದಿಲ್ಲ, ಹಾಗಾಗುವುದಿದ್ದರೆ ಆಡಿದ ಮಾತನ್ನು ಯಥಾವತ್ತಾಗಿ ದಾಖಲಿಸಿಕೊಂಡು ಪುನರುಚ್ಚರಿಸುವ ಶಕ್ತಿಯುಳ್ಳ, ಧ್ವನಿಮುದ್ರಿಕೆ (Tape Recorder) ಜ್ಞಾನಿಯಾಗಬೇಕಾಗಿತ್ತು! ಹಡಗಿನಲ್ಲಿ ಬೇರೆ ದೇಶಕ್ಕೆ ಹೋಗಿ ಬರುವ ಇಲಿ-ಹೆಗ್ಗಣಗಳೂ ಅನುಭವಿಗಳಾಗಬೇಕಾಗಿತ್ತು. ಹಾಗೆಂದು ಬೇರೆ ದೇಶಕ್ಕೆ ಹೋಗಿಲ್ಲವೆಂದ ಮಾತ್ರಕ್ಕೆ ಯಾರನ್ನಾದರೂ ಅಜ್ಞಾನಿಗಳೆಂದು ಅಲ್ಲಗಳೆಯಲು ಸಾಧ್ಯವಿಲ್ಲ. ಒಂದು ಒಳ್ಳೆಯ ಪುಸ್ತಕವನ್ನು ಓದಿ ಅದರ ಸಾರವನ್ನು ಗ್ರಹಿಸಿ, ದೇಶವನ್ನೂ ತಿರುಗಿ ತಿಳಿದು ಬಂದರೆ ಆ ಜ್ಞಾನ ಪರಿಪೂರ್ಣವಾದ ಜ್ಞಾನವಾಗುತ್ತದೆ ಎಂದು ಇದರ ಆಶಯ. ಪುಸ್ತಕದ ಓದು ಮತ್ತು ದೇಶ ಪರ್ಯಟನೆ ಪರಸ್ಪರ ಪೂರಕವೇ ಹೊರತು ಬೇರೆಯಲ್ಲ. ಇದರಲ್ಲಿ ಯಾವುದು ಮೊದಲು, ಯಾವುದು ನಂತರ ಎಂದು ಹೇಳುವುದು ಕಷ್ಟ. ಗಾದೆಯ ಪ್ರಕಾರ ಇವುಗಳಲ್ಲಿ ಯಾವುದೇ ಒಂದನ್ನು ಮಾಡಿದರೂ ಜ್ಞಾನಸಂಪಾದನೆಯಾಗುತ್ತದೆ. ದೇಶಪರ್ಯಟನೆ ಪುಸ್ತಕದ ಓದಿಗೆ ಪ್ರೇರಕವಾಗಬಲ್ಲುದು. ಪುಸ್ತಕದ ಓದು ದೇಶ ಪರ್ಯಟನೆಗೆ ಸ್ಫೂರ್ತಿಯಾಗಬಲ್ಲುದು. ದೇಶ ಪರ್ಯಟನೆಗೆ ಶಾರೀರಿಕ ಸ್ವಾಸ್ಯ, ಆರ್ಥಿಕ ಅನುಕೂಲ, ನೋಡುವ ಕುತೂಹಲ ಇರಬೇಕು. ಪುಸ್ತಕದ ಓದಿಗೆ ಓದುವ ಹಂಬಲ, ಜ್ಞಾನಾರ್ಜನೆಯ ತುಡಿತ ಇರಬೇಕು. ದುಡ್ಡಿದ್ದವರೆಲ್ಲರೂ ದೇಶವನ್ನು ತಿರುಗುವುದಿಲ್ಲ: ಪುಸ್ತಕವಿದ್ದವರೆಲ್ಲರೂ ಓದುತ್ತಾರೆಂದು ಹೇಳಲು ಆಗುವುದಿಲ್ಲ, ದುಡ್ಡಿದ್ದವನು ಮಹಡಿಯ ಮೇಲೊಂದು ಮಹಡಿಯನ್ನು ಕಟ್ಟಿಸಲು ಬಯಸಬಹುದು; ಪುಸ್ತಕವಿದ್ದವನು ಗುಜರಿಗೆ ಮಾರಿ ದುಡ್ಡು ಸಂಪಾದಿಸಲು ಬಯಸಬಹುದು.

ನಮ್ಮ ಪರಮಾರಾಧ್ಯ ಗುರುಗಳಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಈ ಗಾದೆಯ ಮಾತಿನ ತಾತ್ಪರ್ಯವನ್ನು ತಿಳಿದುಕೊಂಡು 1973 ರ ಜುಲೈನಲ್ಲಿ 750 ಜನ ಶಿಷ್ಯ ಸಮುದಾಯದೊಂದಿಗೆ ಮೂರು ತಿಂಗಳ ಕಾಲ ಉತ್ತರ ಭಾರತ ಮತ್ತು ನೇಪಾಳಕ್ಕೆ ರೈಲು ಪ್ರವಾಸವನ್ನು ಏರ್ಪಡಿಸಿ ಹಳ್ಳಿಯ ಜನರಿಗೆ ಭಾರತದ ದರ್ಶನ ಮಾಡಿಸಿದ್ದರು. ಪ್ರಾಚೀನ ವಿದ್ಯಾ ಮತ್ತು ಧಾರ್ಮಿಕ ಕೇಂದ್ರವಾದ ಕಾಶಿಗೂ ಪ್ರವಾಸಿಗರೊಂದಿಗೆ ದಯಮಾಡಿಸಿದ್ದರು. ಆಗ ನಾವು ಕಾಶೀ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಸೂತಸಂಹಿತೆಯ ಮೇಲೆ ಸಂಶೋಧನಾ ಮಹಾಪ್ರಬಂಧ ಬರೆಯುವುದರಲ್ಲಿ ನಿರತರಾಗಿದ್ದೆವು. ಪ್ರವಾಸಿಗರೆಲ್ಲರಿಗೂ ವಿಶ್ವವಿದ್ಯಾನಿಲಯದಲ್ಲಿ ಆಗತಾನೇ ಹೊಸದಾಗಿ ನಿರ್ಮಾಣವಾಗಿದ್ದ ಒಂದು ದೊಡ್ಡ ವಿದ್ಯಾರ್ಥಿನಿಲಯದಲ್ಲಿ ರಿಜಿಸ್ಟಾರ್ ಸೋಮಸ್ಕಂಧನ್‌ ರವರಿಂದ ವಿಶೇಷ ಅನುಮತಿಯನ್ನು ಪಡೆದು ವಸತಿ ಮತ್ತು ಪ್ರಸಾದದ ವ್ಯವಸ್ಥೆಯನ್ನು ಮಾಡಿದ್ದೆವು. ಪೂಜ್ಯ ಶ್ರೀ ಗುರುವರ್ಯರಿಗೆ ಉಪಕುಲಪತಿಗಳ ಬಂಗಲೆಯ ಪಕ್ಕದಲ್ಲಿಯೇ ಇರುವ ಲಕ್ಷಣದಾಸ್ ಅತಿಥಿ ಗೃಹದಲ್ಲಿ ಬಿಡಾರದ ವ್ಯವಸ್ಥೆಯನ್ನು ಮಾಡಿದ್ದೆವು. ಪೂಜ್ಯರು ನಮ್ಮನ್ನು ಹತ್ತಿರ ಕರೆದು ನೋಡಪ್ಪ, ನಮ್ಮ ಜನ ತುಂಬಾ ದಣಿದಿದ್ದಾರೆ, ಇದುವರೆಗಿನ ಪ್ರವಾಸದಲ್ಲಿ ಊಟದ ವ್ಯವಸ್ಥೆ ಅಷ್ಟು ಸರಿಯಾಗಿ ಆಗಿಲ್ಲ, ಪ್ರವಾಸಿಗರೆಲ್ಲರಿಗೂ ಕಾಶಿಯಲ್ಲಿ ರಸಗುಲ್ಲಾ, ಬರ್ಫಿ, ಚಂಚಂ ಇತ್ಯಾದಿ ಅದೆಷ್ಟು ನಮೂನೆಯ ಬಂಗಾಲೀ ಸಿಹಿಗಳು ಇವೆಯೋ ಅವೆಲ್ಲವನ್ನೂ ಉಣಬಡಿಸಿ ಇದುವರೆಗಿನ ನೋವನ್ನೆಲ್ಲಾ ಮರೆಯುವಂತೆ ನೀನು ಮಾಡಬೇಕು ಎಂದು ಆಜ್ಞಾಪಿಸಿದರು. ಈ ಮಾತುಗಳ ಹಿಂದೆ ಏನೋ ಒಂದು ಅವರ್ಣನೀಯವಾದ ಮಾರ್ದವತೆ ಇತ್ತು. ಪ್ರವಾಸಿಗರ ಮೇಲಿನ ಶಿಷ್ಯವಾತ್ಸಲ್ಯ ಹೊರಹೊಮ್ಮಿತ್ತು. 30 ರ ದಶಕದಲ್ಲಿ ಅವರು ಸ್ವತಃ ಪ್ರತಿಭಾನ್ವಿತ ಸಂಸ್ಕೃತ ವಿದ್ಯಾರ್ಥಿಗಳಾಗಿ ಕಾಶಿಯಲ್ಲಿ ಓದುತ್ತಿದ್ದ ಆ ದಿನಗಳ ಸಿಹಿ ನೆನಪುಗಳು ಅವರಿಗೆ ಮರುಕಳಿಸಿದಂತೆ ಕಾಣಿಸಿತು. ಅವರ ಅಪೇಕ್ಷೆಯಂತೆಯೇ ನಾನಾ ನಮೂನೆಯ ಸಿಹಿ ತಿಂಡಿಗಳು ಮತ್ತು ರುಚಿ ರುಚಿಯಾದ ಭಕ್ಷ ಭೋಜ್ಯಗಳನ್ನು ಮಾಡಿಸಿದ್ದೆವು.

ಕಾಶೀ ಕರ್ನಾಟಕ ಸಂಘದ ಆಶ್ರಯದಲ್ಲಿ ವಿಶ್ವವಿದ್ಯಾನಿಲಯದ ರಂಗಮಂದಿರದಲ್ಲಿ ಪ್ರವಾಸೀ ತಂಡದಲ್ಲಿದ್ದ ಮಠದ “ತರಳಬಾಳು ಕಲಾಸಂಘದ” ಕಲಾವಿದರಿಂದ ಬಸವಣ್ಣನವರ ಜೀವನಾದರ್ಶಗಳನ್ನು ಕುರಿತ “ಮರಣವೇ ಮಹಾನವಮಿ” ಎಂಬ ನಾಟಕದ ಏರ್ಪಾಡನ್ನು ಮಾಡಿದ್ದೆವು. ಒಂದು ದಿನ ವಿಶ್ವವಿದ್ಯಾನಿಲಯದ ಸಂಸ್ಥಾಪಕರ ಹೆಸರಿನಲ್ಲಿರುವ ಮಾಲವೀಯ ಭವನದಲ್ಲಿ ಪೂಜ್ಯ ಗುರುವರ್ಯರ ಆಶೀರ್ವಚನವನ್ನೂ ಏರ್ಪಡಿಸಿದ್ದೆವು. ಆ ದಿನ ಪೂಜ್ಯರು ಬಹಳ ವರ್ಷಗಳ ಅಭ್ಯಾಸ ತಪ್ಪಿಹೋಗಿದ್ದರಿಂದ ಹಿಂದಿಯಲ್ಲಿ ತಮ್ಮ ಆಶೀರ್ವಚನವನ್ನು ಬರೆದುಕೊಂಡು ಓದಿದ್ದರು. ಪ್ರವಾಸದಲ್ಲಿ ಭಾಗವಹಿಸಿದ್ದ ಅಂದಿನ ಕೆಲವರು ಹಿರಿಯರು ಈಗಲೂ ತುಂಬಾ ಸಂತೋಷದಿಂದ ಆ ದಿನಗಳನ್ನು ನೆನೆಸಿಕೊಳ್ಳುತ್ತಾರೆ. ಮೂರು ತಿಂಗಳ ಅವರ ಪ್ರವಾಸಕಾಲದಲ್ಲಿ ಕಾಶೀ ಮರೆಯಲಾರದ ಅನುಭವವೆಂದು ಬಣ್ಣಿಸುವುದಲ್ಲದೆ ಅಂತಹ ವ್ಯವಸ್ಥೆಯನ್ನು ತಾವು ಮಾಡಿದ್ದಿರೆಂದು ಈಗಲೂ ಕೃತಜ್ಞತೆಯಿಂದ ನಮ್ಮನ್ನು ಸ್ಮರಿಸುತ್ತಾರೆ.

ಉತ್ತರ ಭಾರತದ ಈ ರೈಲು ಪ್ರವಾಸವೇ ನಾವು 1994ರಲ್ಲಿ ಕೈಗೊಂಡ “ವಿಶ್ವಶಾಂತಿ ಯಾತ್ರೆಗೆ” ಸ್ಫೂರ್ತಿ. ದೊಡ್ಡ ದೊಡ್ಡ ಉದ್ದಿಮೆದಾರರು, ವಿಜ್ಞಾನಿಗಳು, ರಾಜಕಾರಣಿಗಳು, ವೈದ್ಯರು, ಇಂಜಿನಿಯರುಗಳು ಪರದೇಶಗಳಿಗೆ ಹೋಗಿ ಬರುತ್ತಾರೆ. ಆದರೆ ನಮ್ಮ ಹಳ್ಳಿಯ ಜನರಿಗೆ ಅಂಥ ಅವಕಾಶವೇ ಇಲ್ಲ. ಹೀಗಾಗಿ ನಮ್ಮ ಹಳ್ಳಿಯ ಜನರಿಗೆ ಮುಂದುವರಿದ ಪಾಶ್ಚಾತ್ಯ ದೇಶಗಳನ್ನು ತೋರಿಸಬೇಕೆಂಬ ಸಂಕಲ್ಪವನ್ನು ಮಾಡಿ 1994 ರ ಜೂನ್ 16 ರಿಂದ ಒಂದೂವರೆ ತಿಂಗಳ ಕಾಲ ಒಂದು ನೂರು ಜನ ಶಿಷ್ಯರಿಗೆ ಯೂರೋಪ್, ಇಂಗ್ಲೆಂಡ್, ಅಮೇರಿಕಾ ಮತ್ತು ಕೆನಡಾ ದೇಶಗಳಿಗೆ ಪ್ರವಾಸವನ್ನು ಏರ್ಪಡಿಸಿದ್ದೆವು. ನಮ್ಮ ಜತೆಗೆ ಬಂದವರಲ್ಲಿ ಸಮಾಜದ ಕೆನೆಪದರದ ಜನರಾದ ವೈದ್ಯರು, ಇಂಜಿನಿಯರು, ವ್ಯಾಪಾರಸ್ಥರು ಇದ್ದರೂ ಮೇಟಿವಿದ್ಯೆಯ ಹಳ್ಳಿಯ ಕೃಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಪಾಸ್ ಪೋರ್ಟ್ ಅರ್ಜಿಯಲ್ಲಿ ರುಜು ಹಾಕಬೇಕಾದ ಜಾಗದಲ್ಲಿ ಎಡಗೈ ಹೆಬ್ಬೆಟ್ಟನ್ನು ಒತ್ತುವ ನಿರಕ್ಷರಕುಕ್ಷಿಗಳೂ ಸಹ ಇದ್ದರು! ಎಂದೂ ಬೆಂಗಳೂರಿನ ಮುಖವನ್ನೇ ನೋಡದ ಅಜ್ಜ-ಅಜ್ಜಿಯರೂ ಇದ್ದರು! ಕೆಲವರು ವಯಸ್ಸಾದ ಜನರಂತೂ ಪ್ರವಾಸ ಹೊರಡಲು ಸಿದ್ದರಾಗಿ ಏನೋ ನೆನೆಸಿಕೊಂಡು ಬಹಳ ಹೆದರಿದ್ದರು. ದೂರದ ಪ್ರಯಾಣ! ಹೇಗೋ ಏನೋ? ಹೋದವರು ಮರಳಿ ಮನೆಗೆ ಬರುತ್ತೇವೋ ಇಲ್ಲವೋ ಎಂದೆಲ್ಲಾ ಯೋಚನೆ ಮಾಡಿ ಮಕ್ಕಳಿಗೆ ವಿಲ್ ಬರೆದಿಟ್ಟು ಕೆಲವರು ಪ್ರವಾಸ ಹೊರಟಿದ್ದರು. ಅನೇಕರು ತುಂಬಾ ವಯಸ್ಸಾಗಿದ್ದರೂ ದೊಡ್ಡ ಗುರುಗಳ ಕಾಲದಲ್ಲಿ ರೈಲು ಪ್ರವಾಸ ಮಾಡಿದ್ದು, ತಮ್ಮ ಕಾಲದಲ್ಲಿ ವಿಮಾನದಲ್ಲಿ ವಿಶ್ವಪರ್ಯಟನೆ ಮಾಡಬೇಕೆಂಬ ಹಂಬಲವಿದೆಯೆನ್ನುವ ಉತ್ಸಾಹಿಗಳು ಇದ್ದರು. ಒಂದೆರಡು ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದ ಹೃದಯರೋಗಿಗಳೂ ನಮ್ಮ ಜತೆ ಹೊರಟಿದ್ದರು. ಆರೋಗ್ಯ ತಪಾಸಣೆ ಮಾಡಲು ನೇಮಿಸಿದ್ದ ದಾವಣಗೆರೆಯ ಪ್ರಖ್ಯಾತ ವೈದ್ಯರಾದ ಡಾ|| ಧನಂಜಯಮೂರ್ತಿಯವರು ಇಂಥವರನ್ನು ಕರೆದುಕೊಂಡು ಹೋಗುವುದು ಬೇಡವೆಂದು ತಮ್ಮ ತಜ್ಞ ಅಭಿಪ್ರಾಯವನ್ನು ಸೂಚಿಸಿದ್ದರೂ, ಪ್ರವಾಸ ಹೊರಟ ಆ ವೃದ್ದರ ಉತ್ಸಾಹವನ್ನು ನೋಡಿ ಅವರನ್ನು ನಿರಾಶೆಗೊಳಿಸುವ ಮನಸ್ಸಾಗದೆ ಉತ್ಸಾಹದಿಂದ ಬಂದವರನ್ನೆಲ್ಲಾ ಕರೆದೊಯ್ದಿದ್ದೆವು. ಮುಂಜಾಗರೂಕತೆಯಿಂದ ಎಲ್ಲರಿಗೂ ಆರೋಗ್ಯ ವಿಮೆ (Health Insurance) ಮಾಡಿಸಿ ಪ್ರವಾಸದಲ್ಲಿ ಏನಾದರೂ ಆದರೆ ಹೇಗೆ ಎಂದು ಯೋಚಿಸುವ ಗೊಡವೆಗೇ ಹೋಗಲಿಲ್ಲ. ಆಗಿನ ಪ್ರವಾಸವಂತೂ ಸುದೈವದಿಂದ ಏನೊಂದೂ ಅಹಿತಕರ ಘಟನೆ ನಡೆಯದೆ ಬಹಳ ಚೆನ್ನಾಗಿಯೇ ಪೂರ್ಣಗೊಂಡಿತು. ಪ್ರವಾಸದುದ್ದಕ್ಕೂ ತುಂಬಾ ರೋಚಕ ಪ್ರಸಂಗಗಳು ಘಟಿಸಿದವು:

ಬೆಂಗಳೂರಿನಿಂದ ಹೊರಡುವಾಗ HAL ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದ ಜನಸಾಗರ. ಪ್ರಧಾನಮಂತ್ರಿಯೋ ಅಥವಾ ರಾಷ್ಟ್ರಪತಿಯೋ ಬರುತ್ತಿರಬಹುದೆಂದು ನೋಡಿದವರು ಮಾತನಾಡಿಕೊಳ್ಳುತ್ತಿದ್ದರು. ಅವರಿಗೇನು ಗೊತ್ತು ನಮ್ಮೊಂದಿಗೆ ಹೊರಟಿದ್ದವರು ಭಾರತದ ಪ್ರಭುಗಳಾದ ಶ್ರೀಸಾಮಾನ್ಯ ಜನರೆಂದು! ಅವರನ್ನು ಬೀಳ್ಕೊಡಲು ಅವರ ಸಂಬಂಧಿಕರು ಅಧಿಕಸಂಖ್ಯೆಯಲ್ಲಿ ಜಮಾಯಿಸಿದ್ದರು! ವಿಮಾನನಿಲ್ದಾಣದ ಅಧಿಕಾರಿಗಳಿಗೆ ಈ ಅನಿರೀಕ್ಷಿತ ಜನರ ಪ್ರವಾಹವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಆಗ ಈಗಿನಂತೆ ಬಿಗಿಯಾದ ಭದ್ರತಾ ನಿಯಮಗಳು ಇರಲಿಲ್ಲ, ಎಂ. ಮಹಾದೇವ್ ಮೊದಲಾದ ನಮ್ಮ ಕಾರ್ಯಕರ್ತರೇ ಮೈಕ್‌ ನಲ್ಲಿ ಪ್ರವಾಸಿಗರಿಗೆ ಸೂಕ್ತ ಸೂಚನೆ ಕೊಡುತ್ತಿದ್ದರು. ಬೆಂಗಳೂರಿನಿಂದ ಮುಂಬಯಿಗೆ ಬಂದಿಳಿದದ್ದು ನಮ್ಮ ಜನರಿಗೆ ಗೊತ್ತೇ ಆಗಲಿಲ್ಲ. ನಮ್ಮ ಮುಂದಿನ ಪಯಣ ಏರ್ ಫ್ರಾನ್ಸ್ ವಿಮಾನದಲ್ಲಿ ಲಂಡನ್‌ ಗೆ, ಮುಂಬೈನ ಸಹಾರಾ (ಈಗಿನ ಛತ್ರಪತಿ ಶಿವಾಜಿ) ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯ ರಾತ್ರಿ ನಮ್ಮ ವಿಮಾನವು ಪಶ್ಚಿಮಾಭಿಮುಖವಾಗಿ ಒಂದು ದೊಡ್ಡ ಹಕ್ಕಿಯಂತೆ ಗರಿಗೆದರಿ ಆಕಾಶಕ್ಕೆ ಹಾರಿತು. ಸುತ್ತ ಕಣ್ಣು ಹಾಯಿಸಿದರೆ ವಿಮಾನದಲ್ಲಿ ಅರ್ಧದಷ್ಟು ಜನ ನಮ್ಮ ಪ್ರವಾಸಿಗರೇ. 35 ಸಾವಿರ ಅಡಿ ಎತ್ತರದಲ್ಲಿ ಗಂಟೆಗೆ 500 ಮೈಲಿ ವೇಗದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ಮೊದಲಬಾರಿಗೆ ಕುಳಿತು ಪ್ರಯಾಣಿಸುತ್ತಿದ್ದ ಪ್ರವಾಸಿಗರಿಗೆ ರೋಮಾಂಚನಕಾರಿ ಅನುಭವ. ಸಣ್ಣ ಮಕ್ಕಳಂತೆ ಕುತೂಹಲದಿಂದ ಕಿಟಕಿಯಾಚೆ ಇಣುಕಿ ನೋಡುತ್ತಿದ್ದರು! ಸುತ್ತಲೂ ಕಾರ್ಗತ್ತಲು! ನಗರ ಪ್ರದೇಶಗಳ ಮೇಲೆ ಹಾರುವಾಗ ಕೆಳಗೆ ನೋಡಿದರೆ ದಸರಾದಲ್ಲಿ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸುವ ಮೈಸೂರಿನ ಅರಮನೆಯಂತೆ ಇಡೀ ನಗರವೇ ವಿದ್ಯುದ್ದೀಪಗಳಿಂದ ಝಗಝಗಿಸುವ ನೋಟ! ರಸ್ತೆಯುದ್ದಕ್ಕೂ ಸಾಲಾಗಿ ಕಾಣಿಸುವ ವರ್ಣರಂಜಿತ ಬೀದಿ ದೀಪಗಳು ಇಡೀ ನಗರದ ಜನರು ದೀಪಾವಳಿಯ ಹಬ್ಬದ ಸಂಭ್ರಮದಲ್ಲಿರುವಂತೆ ಭ್ರಮೆ ಹುಟ್ಟಿಸುವ ನಯನ ಮನೋಹರವಾದ ದೃಶ್ಯ! ಇದ್ದಕ್ಕಿದ್ದಂತೆಯೇ ಹವಾಮಾನದ ವೈಪರೀತ್ಯದಿಂದಾಗಿ ವಿಮಾನದ ಹಾರಾಟದಲ್ಲಿ ಏರುಪೇರು! ಸುರಕ್ಷತೆಯ ದೃಷ್ಟಿಯಿಂದ ಸೊಂಟದ ಸುತ್ತ ಸೀಟ್ ಬೆಲ್ಟ್‌ನ್ನು ಹಾಕಿಕೊಳ್ಳಲು ಗಗನಸಖಿಯರಿಂದ ಪ್ರಯಾಣಿಕರಿಗೆ ಸೂಚನೆ! ನಮ್ಮ ಪ್ರವಾಸಿಗರಲ್ಲೊಬ್ಬರಾದ ಚನ್ನಗಿರಿ ತಾಲ್ಲೂಕಿನ ಮೇದಗೊಂಡನಹಳ್ಳಿಯ ವೃದ್ದ ವೀರಪ್ಪನಿಗೆ ಏನೋ ಒಂದು ರೀತಿಯ ಗಾಬರಿ, ಪಕ್ಕದಲ್ಲಿಯೇ ಕುಳಿತಿದ್ದ ಸಿರಿಗೆರೆಯ ಕಾಲೇಜಿನ ಪ್ರಾಧ್ಯಾಪಕರಾದ ಡಿ.ಎಂ.ನಾಗರಾಜ್‌ ರವರ ಗಮನವನ್ನು ಸೆಳೆದು: “ಏನ್ರಿ ಮೇಷ್ಟ್ರೇ, ವಿಮಾನ ನಡುಗುತ್ತಿದೆಯಲ್ಲಾ ಏಕೆ?” ಎಂದು ಅಜ್ಜ ಕೇಳಿತು. ಅದಕ್ಕೆ ಹಾಸ್ಯಪ್ರಿಯರಾದ ನಾಗರಾಜ್‌ ರವರು ಗಂಭೀರವದನರಾಗಿ “ನೋಡಜ್ಜಾ ಇದು ಮಳೆಗಾಲ ಅಲ್ವಾ, ಭಾರೀ ಮಳೆ ಬಂದು ರಸ್ತೆ ಕೆಟ್ಟು ಹೋಗಿದೆ, ನೀನೇನೂ ಗಾಬರಿಯಾಗಬೇಡ” ಎಂದು ಹೇಳಿಬಿಡುವುದೇ! ಅಜ್ಜನಿಗೆ ಪೂರ್ತಿ ನಂಬಲೂ ಆಗದೆ ಬಿಡಲೂ ಆಗದೆ ಸ್ವಲ್ಪ ಅನುಮಾನದಿಂದಲೇ “ಮೇಷ್ಟ್ರೇ, ಆಕಾಶದಲ್ಲಿ.... ರಸ್ತೆ ಇರುತ್ತದೆಯೇ?” ಎಂದು ಮತ್ತೆ ಕೇಳಿತು. ನಾಗರಾಜ್‌ ರವರು ಅದಕ್ಕೆ ಮತ್ತಷ್ಟೂ ಗಂಭೀರವಾಗಿ ಉತ್ತರಿಸುತ್ತಾ ಜೆಟ್ ವಿಮಾನಗಳು ಹಾರುತ್ತಿರುವಾಗ ಅದರ ಹಿಂದುಗಡೆ ಬಹಳ ಹೊತ್ತಿನವರೆಗೆ ಕಾಣಬರುವ ದಟ್ಟವಾದ ಬಿಳಿಯ ಹೊಗೆಯಿಂದ ಉಂಟಾಗುವ ಉದ್ದನೆಯ ಧೂಮರೇಖೆಯನ್ನೇ ವಿಮಾನದ ದಾರಿಯೆಂದು ಹೇಳಿ ಅಜ್ಜನಿಗೆ ನಂಬಿಕೆ ಹುಟ್ಟಿಸಿದರು! “ಓ ಹಾಗೋ, ನನಗೆ ಗೊತ್ತೇ ಇರಲಿಲ್ಲ ಎಂದು ಅಜ್ಜ ತನ್ನ ಎತ್ತಿನ ಗಾಡಿ ದಡಗುಟ್ಟುವ ಹಳ್ಳಿ, ರಸ್ತೆಗಳನ್ನು ನೆನೆಸಿಕೊಂಡು ಸುಮ್ಮನಾಯಿತು.

ನಮ್ಮ ವಿಮಾನ ಲಂಡನ್ ಮಹಾನಗರವನ್ನು ತಲುಪಿತು. ಪ್ರಸಿದ್ದವಾದ ವೈಟ್ ಹೌಸ್ ಹೋಟೆಲ್ ನಲ್ಲಿ ಪ್ರವಾಸಿಗರಿಗೆ ವಸತಿಯ ಏರ್ಪಾಡಾಗಿತ್ತು. ಅತ್ಯಂತ ಸುಂದರವಾದ, ಅತ್ಯಾಧುನಿಕವಾದ ಬಹು ಮಹಡಿಯ ಕಟ್ಟಡವದು. ಪ್ರವಾಸಿಗರು ತಮ್ಮ ತಮ್ಮ ರೂಮಿನ ಬೀಗದ ಕೈಗಳನ್ನು ಪಡೆಯುತ್ತಿದ್ದರು. ನಾವಾಗ ಹೋಟೆಲ್ಲಿನ ಪಡಸಾಲೆ (ಲಾಂಜ್) ಯಲ್ಲಿ ಕುಳಿತಿದ್ದೆವು. ನಮ್ಮ ಪ್ರವಾಸಿಗರಲ್ಲಿ ಅನೇಕ ಮಹಿಳೆಯರೂ ಇದ್ದರು. ಸ್ವಲ್ಪ ಹೊತ್ತಿನಲ್ಲಿಯೇ ಹರಿಹರದ ಕೆಂಚಜ್ಜಿ ಗಾಬರಿಯಾಗಿ ನಾವಿದ್ದಲ್ಲಿಗೆ ಓಡಿ ಬಂತು. “ಬುದ್ದೀ! ನಾನು ಈ ಹೋಟೆಲಿನ ರೂಮಿನಲ್ಲಿ ಇರುವುದಿಲ್ಲ: ನನಗೆ ಹೆದರಿಕೆಯಾಗುತ್ತದೆ. ಇಲ್ಲಿಯೇ ಎಲ್ಲಾದರೂ ವರಾಂಡಾದಲ್ಲಿ ಮಲಗಿಕೊಳ್ಳುತ್ತೇನೆ” ಎಂದು ಮುಗ್ಧತೆಯಿಂದ ಹೇಳಿತು. ಅದಕ್ಕೆ ಕಾರಣವೇನೆಂದು ಬೇರೆಯವರನ್ನು ವಿಚಾರಿಸಿದಾಗ ತಿಳಿದು ಬಂದ ಸಂಗತಿಯೆಂದರೆ: ಅಜ್ಜಿ ಬೀಗದ ಕೈಯನ್ನು ಪಡೆದು ರೂಮಿಗೆ ಹೋಗಿ ಬಾಗಿಲನ್ನು ತೆರೆದು ತನ್ನ ಕೈಚೀಲ ಮತ್ತು ಸೂಟ್‌ ಕೇಸನ್ನು ಇಟ್ಟು ಯಾರನ್ನೋ ಮಾತನಾಡಿಸಲೆಂದು ಹೊರಬಂದಾಗ ಇದ್ದಕ್ಕಿದ್ದಂತೆಯೇ ರೂಮಿನ ಬಾಗಿಲು ದಿಢೀರನೆ ತನಗೆ ತಾನೇ ಹಾಕಿಕೊಂಡು ಲಾಕ್ ಆಗಿ ಬಿಟ್ಟಿತ್ತು! ಎಷ್ಟು ಪ್ರಯತ್ನಿಸಿದರೂ ಬಾಗಿಲು ತೆರೆಯಲಿಲ್ಲ. ತಾನು ಬೀಗ ಹಾಕದೇ ಇದ್ದರೂ ಬಾಗಿಲು ಲಾಕ್ ಆಗಿದ್ದು ಅಜ್ಜಿಯ ದಿಗಿಲಿಗೆ ಕಾರಣವಾಗಿತ್ತು! ರೂಮಿನಲ್ಲಿ ಏನಾದರೂ ಭೂತ ಇದೆಯೇನೋ ಎಂದು ಅಜ್ಜಿಗೆ ಭಯ!

ಲಂಡನ್‌ ನಗರದ ಹೋಟೆಲ್‌ ನಲ್ಲಿ ಹಳ್ಳಿಯ ಮನೆಯ ವರಾಂಡದಲ್ಲಿ ಮಲಗಿದಂತೆ ಬರುವುದಿಲ್ಲವೆಂದು ಹೇಳಿ ವಿದ್ಯಾವಂತ ಮಹಿಳೆಯೊಬ್ಬಳನ್ನು ಜೊತೆಮಾಡಿ ಕಳುಹಿಸಿದ ಮೇಲೆ ಅಜ್ಜಿಯ ಭಯ ನಿವಾರಣೆಯಾಯಿತು. ಅತ್ಯಂತ ಸುಸಜ್ಜಿತವಾದ ಮತ್ತು ಭವ್ಯವಾದ ಲಂಡನ್ನಿನ ಆ ವೈಟ್‌ ಹೌಸ್ ಹೋಟೆಲನ್ನು ನಮ್ಮ ಹಳ್ಳಿಯ ಕೆಂಚಜ್ಜಿಯಲ್ಲದೆ ಹಿಂದೆ ಬೇರೆ ಯಾರೂ ಜರಿದಿರಲಾರರು! ಇಂಗ್ಲೀಷ್ ಭಾಷೆಯ ಒಂದು ಶಬ್ದವೂ ಬರದೇ ಇದ್ದ ಅಜ್ಜಿಯು ಪ್ರವಾಸದ ಕೆಲವೇ ದಿನಗಳಲ್ಲಿ ಏರ್‌ ಬ್ಯಾಗನ್ನು ಬಲಭುಜದಲ್ಲಿ ಸಲೀಸಾಗಿ ಸಿಕ್ಕಿಸಿಕೊಂಡು ಯಾರಾದರೂ ಕನ್ನಡ ಬಾರದವರು ಎದುರಿಗೆ ಸಿಕ್ಕರೆ ಮುಗುಳ್ಳಗುತ್ತಾ “Good Morning! Good Evening! Thank You!” ಎಂದು ಸಂಕೋಚವಿಲ್ಲದೆ ಚೆನ್ನಾಗಿ ಹೇಳುವುದನ್ನು ಕಲಿತಿತ್ತು. ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ಮರಳುವ ವೇಳೆಗೆ ಸ್ಥೂಲಕಾಯದ ಕೆಂಚಜ್ಜಿಯು ಪ್ರವಾಸಿಗರೆಲ್ಲರ ಬಾಯಲ್ಲಿ ಕೆಂಚಿ ಆಂಟಿ ಆಗಿತ್ತು. ಅಜ್ಜಿಯೂ ಸಹ ಯಾರಾದರೂ ಮೊದಲಿನಂತೆ ಕೆಂಚಜ್ಜಿ ಎಂದರೆ ಮುಖ ಸಿಂಡರಿಸುತ್ತಿತ್ತು. ಕೆಂಚಜ್ಜಿ ಎನ್ನುವುದರ ಬದಲು ಕೆಂಚಿ ಆಂಟಿ ಎಂದರೆ ಹೆಚ್ಚು ಖುಷಿಪಡುತ್ತಿತ್ತು!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 23.7.2008.