ರಾಜಧರ್ಮ ಮತ್ತು ಪ್ರಜಾಧರ್ಮ
ಕಳೆದ ವಾರ ವಿಧಾನಸಭೆಯಲ್ಲಿ ನಡೆದ ಕೋಲಾಹಲ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ. ಆಡಳಿತ-ಪ್ರತಿಪಕ್ಷಗಳ ಮಾರಾಮಾರಿ, ವಿಧಾನಸಭೆಯಲ್ಲಿ ವಾರ್, ಸಮರಾಂಗಣವಾದ ಸದನ ಇತ್ಯಾದಿಯಾಗಿ ಪತ್ರಿಕೆಗಳು ಬಣ್ಣಿಸಿದವು. ಆಡಳಿತಪಕ್ಷ ಮತ್ತು ವಿರೋಧಪಕ್ಷದವರು ಸುಸಂಸ್ಕೃತರೀತಿಯಲ್ಲಿ ವಾದ-ವಿವಾದಗಳನ್ನು ನಡೆಸಿ ಜನರ ಹಿತಚಿಂತನೆ ಮಾಡುವ ಬದಲು ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿದ್ದು ಲಜ್ಜೆಗೇಡಿತನ. ಮುಂದಿನ ದಿನಮಾನಗಳಲ್ಲಿ ವಿಧಾನಸಭೆಯಲ್ಲಿರುವ ಎಲ್ಲ ಪೀಠೋಪಕರಣಗಳನ್ನೂ ತೆಗೆಸಿ, ನೆಲವನ್ನು ಅಗಿಸಿ, ಕೆಮ್ಮಣ್ಣನ್ನು ಹಾಕಿಸಿ ಕುಸ್ತಿಯಾಡಲು ಇವರಿಗೆ ಒಂದು ಅಖಾಡವನ್ನೇ ನಿರ್ಮಿಸಿಕೊಡಬೇಕಾಗುತ್ತದೆಯೋ ಏನೋ! ಇವರೇನು ರೌಡಿಗಳೇ ಅಥವಾ ಜನಪ್ರತಿನಿಧಿಗಳೇ? ಎಂದು ಒಂದು ಪತ್ರಿಕೆ ಕಟುಟೀಕೆಯನ್ನು ಮಾಡಿದ್ದರಲ್ಲಿ ಅತಿಶಯೋಕ್ತಿಯೇನೂ ಇಲ್ಲ. ಚುನಾವಣೆಗಳು ಹೇಗೆ ನಡೆಯುತ್ತವೆ ಎಂಬುದನ್ನು ನೆನೆಸಿಕೊಂಡರೆ ಇವರು ರೌಡಿಗಳೂ ಅಲ್ಲ, ಜನಪ್ರತಿನಿಧಿಗಳೂ ಅಲ್ಲ. ರೌಡಿಜನರ ಪ್ರತಿನಿಧಿಗಳು ಎಂದು ಹೇಳಬೇಕೆನಿಸುತ್ತದೆ! ರಾಜಕೀಯ ಎಂದರೆ ರಾವಣನ, ಜರಾಸಂಧನ, ಕೀಚಕನ, ಯಮರಾಜನ ಸಕಲಸದ್ಗುಣಗಳನ್ನು ಉಳ್ಳವರ ಒಂದು ದುಷ್ಟಕೂಟವೇ ವಿಧಾನಸಭೆಯಲ್ಲಿ ಮೇಳವಿಸಿದಂತಿದೆ. ಮೊನ್ನೆ ಮೊನ್ನೆ ರಾಜ್ಯದ ಉಚ್ಚನ್ಯಾಯಾಲಯದ ಆವರಣ ಹಾಡುಹಗಲೇ ಯುವ ವಕೀಲೆಯೊಬ್ಬಳ ಕೊಲೆಯಿಂದ ರಕ್ತಸಿಕ್ತವಾಯಿತು. ವಿಧಾನಸೌಧವೂ ಹಾಗೆ ಆಗಬೇಕೆ? ಎಷ್ಟೊಂದು ಆಕ್ರೋಶ, ಆವೇಶ, ಅಸಭ್ಯನಡವಳಿಕೆ? ಇವರಿಗೆ ತಿಳಿಹೇಳುವವರು ಯಾರು? ದೂರದರ್ಶನದಲ್ಲಿ ಇವರ ವಿರಾಡ್ ರೂಪದರ್ಶನವನ್ನು ಮಾಡುವ ಜನ ಏನೆಂದುಕೊಂಡಾರು ಎಂಬ ಭೀತಿ ಸ್ವಲ್ಪವಾದರೂ ಇವರಿಗೆ ಇದೆಯೇ? ಹಿರಿಯ ರಾಜಕೀಯ ಧುರೀಣರಾದ ಮಾಜಿ ಕೇಂದ್ರಸಚಿವ ಎಂ.ವಿ ರಾಜಶೇಖರನ್ ಅವರ ಮೊಮ್ಮಗಳು ಒಮ್ಮೆ ಇಂತಹ ಭೀಭತ್ಸ ದೃಶ್ಯಗಳನ್ನು ನೋಡಿ “ತಾತ, ಏಕೆ ಹೀಗೆ ನೀವೆಲ್ಲಾ ಕಚ್ಚಾಡುತ್ತೀರಿ?” ಎಂದು ಕೇಳಿದ್ದಳಂತೆ. ಆ ಪುಟ್ಟ ಮಗುವಿಗೆ ಇರುವ ಪ್ರಜ್ಞೆ ಈ ನಾಡನ್ನು ಆಳುವ ಜನರಿಗೆ ಏಕೆ ಇಲ್ಲ? “Politics is the last resort of a scoundrel” (ರಾಜಕೀಯ ಒಬ್ಬ ಫಟಿಂಗನ ಕೊನೆಯ ಆಯ್ಕೆ) ಎನ್ನುವ ಬದಲು “Politics is the first choice of a first rate criminal” (ರಾಜಕೀಯ ಒಬ್ಬ ಕ್ರಿಮಿನಲ್ ಕೈದಿಯ ಮೊದಲ ಆಯ್ಕೆ) ಎಂದು ಈ ಅಂಕಣದಲ್ಲಿ ಹಿಂದೆ ಬರೆದಿದ್ದ ಮಾತು ನಿಮಗೆ ನೆನಪಿರಬಹುದು. ವಿಧಾನಸಭೆಯ ಚರ್ಚೆಯಲ್ಲಿ ಸದಸ್ಯರು ಬಳಸುವ ಆಕ್ಷೇಪಾರ್ಹ ಪದಗಳನ್ನು (unparliamentary words) ಸಭೆಯ ಕಾರ್ಯಕಲಾಪಗಳ ಕಡತದಿಂದ ಕಿತ್ತುಹಾಕಿಸುವ ಪದ್ಧತಿ ಇದೆ. ಇದು ಹಳೆಯ ಶಿಷ್ಟಾಚಾರವಾಯಿತು. ಇನ್ನು ಮುಂದೆ ಸದನದೊಳಗೆ ಹೀಗೆ ತಮ್ಮ ತೋಳ್ಬಲವನ್ನು ಪ್ರದರ್ಶಿಸುವ ವೀರಾಗ್ರಣಿಗಳನ್ನು - ಅವರು ಆಡಳಿತಪಕ್ಷದವರೇ ಇರಲಿ, ವಿಪಕ್ಷದವರೇ ಇರಲಿ, ಸದನದಿಂದ ಕಿತ್ತುಹಾಕುವ ವ್ಯವಸ್ಥೆ ಜಾರಿಗೆ ಬಂದರೆ ನಾಡಿಗೆ ಒಳಿತೆಂದು ತೋರುತ್ತದೆ. ಹಿಂದಿನ ಕಾಲದ ಮಂತ್ರಿಮಹೋದಯರಲ್ಲಿದ್ದ ವ್ಯಕ್ತಿತ್ವ, ಘನತೆ ಗಾಂಭೀರ್ಯಗಳು ಈಗ ಕಣ್ಮರೆಯಾಗುತ್ತಿವೆ. 1957ರಲ್ಲಿ ಪ್ರಧಾನಿ ನೆಹರೂರವರ ಕಾಲದಲ್ಲಿ ಜಗಳೂರಿನ ಇಮಾಂ ಸಾಹೇಬರು ಪ್ರಜಾಸೋಷಲಿಸ್ಟ್ ಪಾರ್ಟಿಯ ಉಮೇದುವಾರರಾಗಿ ನಿಂತು ಚಿತ್ರದುರ್ಗ ಕ್ಷೇತ್ರದಿಂದ ಆಯ್ಕೆಯಾಗಿ ಲೋಕಸಭಾಸದಸ್ಯರಾಗಿದ್ದರು. ಅವರು ಇಳಿ ವಯಸ್ಸಿನಲ್ಲಿ ಜಾರಿಬಿದ್ದು ಕಾಲುಮುರಿದುಕೊಂಡಿದ್ದರು. ನಮ್ಮ ಮಠದ ಅಭಿಮಾನಿಗಳಾಗಿದ್ದ ಅವರ ಕ್ಷೇಮಸಮಾಚಾರವನ್ನು ವಿಚಾರಿಸಿಕೊಂಡು ಬರಲು ದಾವಣಗೆರೆಯ ಅವರ ಮನೆಗೆ ಹೋದಾಗ ಮಾತಿನ ಪ್ರಸಂಗದಲ್ಲಿ ಈಗಿನ ರಾಜಕಾರಣಿಗಳನ್ನು ಕಂಡು ನಿಮಗೆ ಏನೆನ್ನಿಸುತ್ತದೆಯೆಂದು ಕೇಳಿದ ನಮ್ಮ ಪ್ರಶ್ನೆಗೆ ಅವರು ತಟ್ಟನೆ ಕೊಟ್ಟ ಉತ್ತರ: “ಕ್ಯಾಕರಿಸಿ ಉಗಿಯಬೇಕೆನ್ನಿಸುತ್ತದೆ!” ಮೂರು ದಶಕಗಳ ಹಿಂದೆ ಬೇಸರಗೊಂಡು ಆಡಿದ್ದ ಅವರ ಈ ಕಟುವಾದ ಮಾತು ಅಂದಿಗಿಂತಲೂ ಇಂದು ಹೆಚ್ಚು ಅರ್ಥಪೂರ್ಣವಾಗಿದೆ.
ಹಿಂದಿನ ರಾಜಮಹಾರಾಜರುಗಳ ಆಳ್ವಿಕೆಗಿಂತ ಇಂದಿನ ಪ್ರಜಾಪ್ರಭುತ್ವದ ಆಳ್ವಿಕೆ ತಾತ್ವಿಕವಾಗಿ ಶ್ರೇಷ್ಠವೆನಿಸಿದರೂ ನಿರಂಕುಶಪ್ರಭುತ್ವ ಈಗಲೂ ಮುಂದುವರಿದೆ. ರಾಜಮಹಾರಾಜರುಗಳು ತಮ್ಮ ಅಧಿಕಾರ ಗದ್ದುಗೆಯ ಉಳಿವಿಗಾಗಿ, ಸಾಮ್ರಾಜ್ಯದ ವಿಸ್ತರಣೆಗಾಗಿ ಮಾಡುತ್ತಿದ್ದ ಕಾದಾಟ ಮತ್ತು ತಂತ್ರಗಾರಿಕೆಗಳು ಬೇರೊಂದು ರೀತಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ನುಸುಳಿವೆ. ವಂಶಪಾರಂಪರ್ಯವಾಗಿ ಅಧಿಕಾರವನ್ನು ಗಳಿಸುವ ಸನ್ನಾಹ ಕೊನೆಗೊಂಡಿಲ್ಲ. ಪ್ರಭಾವೀ ರಾಜಕಾರಣಿಯೊಬ್ಬ ಗತಿಸಿದರೆ ಅವನ ಹೆಂಡತಿ/ಮಕ್ಕಳು ಅನುಕಂಪೆಯ ಅಲೆಯಲ್ಲಿ ರಾಜಕೀಯ ಸ್ಥಾನಮಾನಗಳನ್ನು ಗಳಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾಜಮಹಾರಾಜರುಗಳ ಕಾಲದಲ್ಲಿ ರಾಜನ ವರ್ತನೆ, ಆಡಳಿತ ಹೇಗಿರಬೇಕೆಂಬುದಕ್ಕೆ ರಾಜಧರ್ಮ ಎಂದು ಕರೆಯುತ್ತಿದ್ದರು. ಮಹಾಭಾರತದ ಶಾಂತಿಪರ್ವದಲ್ಲಿ ಭೀಷ್ಮಪಿತಾಮಹರು ಧರ್ಮರಾಯನಿಗೆ ರಾಜಧರ್ಮದ ವಿಚಾರವಾಗಿ ಹೇಳಿದ ಕೆಲವು ಅನುಭವದ ಮಾತುಗಳು ಹೀಗಿವೆ:
ಆತ್ಮಾವಾಂಶ್ಚ ಜಿತಕ್ರೋಧಃ ಶಾಸ್ತ್ರಾರ್ಥಕೃತನಿಶ್ಚಯಃ |
ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಸತತಂ ರತಃ ||
ಮನಸ್ಸನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿರುವವನು, ಕ್ರೋಧವನ್ನು ಜಯಿಸಿರುವವನು, ಶಾಸ್ತ್ರ-ಸಿದ್ಧಾಂತಗಳ ಪರಿಜ್ಞಾನ ಉಳ್ಳವನು, ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳ ಸಾಧನೆಯಲ್ಲಿ ತೊಡಗಿರುವವನು ರಾಜನಾಗಲು ಅರ್ಹನು.
ನ ವಿಶ್ವಸೇಚ್ಚ ನೃಪತಿರ್ನ ಚಾತ್ಯರ್ಥಂ ಚ ವಿಶ್ವಸೇತ್|
ರಾಜನಾದವನು ಯಾರನ್ನೂ ನಂಬಬಾರದು. ವಿಶ್ವಾಸಕ್ಕೆ ಪಾತ್ರರಾದವರಲ್ಲಿಯೂ ಅತಿಯಾದ ವಿಶ್ವಾಸವನ್ನು ಇಡಬಾರದು.
ನೃಪತಿಃ ಸುಮುಖಶ್ಚ ಸ್ಯಾತ್ಸ್ಮಿತಪೂರ್ವಾಭಿಭಾಷಿತಾ|
ರಾಜನು ಯಾವಾಗಲೂ ಪ್ರಸನ್ನವದನನಾಗಿರಬೇಕು, ಇತರರೊಡನೆ ಮಾತನಾಡುವಾಗ ಹಸನ್ಮುಖಿಯಾಗಿರಬೇಕು.
ಪುತ್ರಾ ಇವ ಪಿತುರ್ಗೇಹೇ ವಿಷಯೇ ಯಸ್ಯ ಮಾನವಾಃ|
ನಿರ್ಭಯಾ ವಿಚರಿಷ್ಯಂತಿ ಸ ರಾಜಾ ರಾಜಸತ್ತಮಃ||
ತಂದೆಯ ಮನೆಯಲ್ಲಿ ಹೇಗೆ ಮಕ್ಕಳು ನಿರ್ಭಯವಾಗಿ ಆಡಿಕೊಂಡು ಇರುತ್ತಾರೋ ಹಾಗೆ ಯಾವ ರಾಜನ ರಾಜ್ಯದಲ್ಲಿ ಪ್ರಜೆಗಳು ನಿರಾತಂಕವಾಗಿ ಜೀವನವನ್ನು ಸಾಗಿಸುತ್ತಾರೋ ಆ ರಾಜನೇ ಶ್ರೇಷ್ಠನು.
ನ ಯಸ್ಯ ಕೂಟಂ ಕಪಟಂ ನ ಮಾಯಾ ನ ಚ ಮತ್ಸರಃ|
ವಿಷಯೇ ಭೂಮಿಪಾಲಸ್ಯ ತಸ್ಯ ಧರ್ಮಃ ಸನಾತನಃ||
ಒಳ್ಳೆಯ ರಾಜನ ಆಡಳಿತದಲ್ಲಿ ಸುಳ್ಳು, ಮೋಸ, ವಂಚನೆ, ಕಳ್ಳತನ, ಅಸೂಯೆ ಇರುವುದಿಲ್ಲ.
ತದ್ರಾಜ್ಯೇ ರಾಜ್ಯಕಾಮಾನಾಂ ನಾನ್ಯೋ ಧರ್ಮಃ ಸನಾತನಃ |
ಋತೇ ರಕ್ಷಾಂ ತು ವಿಸ್ಪಷ್ಟಾಂ ರಕ್ಷಾ ಲೋಕಸ್ಯ ಧಾರಿಣೀ ||
ರಾಜ್ಯದಲ್ಲಿರುವ ಪ್ರಜೆಗಳನ್ನು ಸಂರಕ್ಷಿಸುವುದೇ ರಾಜನ ಪ್ರಮುಖ ಕರ್ತವ್ಯ. ಇದಕ್ಕಿಂತ ಮಿಗಿಲಾದ ಕರ್ತವ್ಯ ಬೇರೇನೂ ಇಲ್ಲ.
ಮಾ ತೇ ರಾಷ್ಟ್ರೇ ಯಾಚನಕಾಃ ಭೂವನ್ಮಾ ಚಾsಪಿ ದಸ್ಯವಃ|
ನಿನ್ನ ರಾಜ್ಯದಲ್ಲಿ ಭಿಕ್ಷುಕರು ಇಲ್ಲದಂತಾಗಲಿ, ಕಳ್ಳಕಾಕರು ಇಲ್ಲದಂತಾಗಲಿ.
ರಾಜಧರ್ಮವನ್ನು ಕುರಿತು ಹೇಳಿದ ಮೇಲಿನ ಹಿತೋಕ್ತಿಗಳು ಇಂದು ಮಂತ್ರಿಮಹೋದಯರಿಗೂ ಅನ್ವಯಿಸುತ್ತವೆ. ರಾಜಪ್ರಭುತ್ವವೇ ಆಗಲಿ, ಪ್ರಜಾಪ್ರಭುತ್ವವೇ ಆಗಲಿ, ಅದು ಜನರ ಹಿತರಕ್ಷಣೆಯ ಒಂದು ವ್ಯವಸ್ಥೆ. ವ್ಯವಸ್ಥೆ ವ್ಯವಸ್ಥೆಯಾಗಿ ಉಳಿದಿದ್ದರೆ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತದೆ. ವ್ಯವಸ್ಥೆಯಲ್ಲಿ ಅವ್ಯವಸ್ಥೆಯು ಅಡಗಿ ಕುಳಿತರೆ ಶೋಚನೀಯ ಪರಿಸ್ಥಿತಿಯುಂಟಾಗುತ್ತದೆ. ಯಾವುದೇ ವ್ಯವಸ್ಥೆ ಇರಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕೈಗಳು ಎಂಥವು ಎಂಬುದರ ಮೇಲೆ ಅದರ ಯಶಸ್ಸು ನಿಂತಿದೆ.
ಹಿಂದಿನ ವಾರದ ಅಂಕಣದಲ್ಲಿ ಬಾಣಭಟ್ಟನ ಕಾದಂಬರೀ ಗ್ರಂಥದಲ್ಲಿ ಬರುವ ಯುವರಾಜ ಚಂದ್ರಾಪೀಡನಿಗೆ ಶುಕನಾಸ ಮಾಡಿದ ಉಪದೇಶದ ಮಾತುಗಳನ್ನು ಓದಿದ್ದೀರಿ. ಅದೇ ಚಂದ್ರಾಪೀಡನು ಮುಂದೆ ಕಾಶ್ಮೀರದ ಮಹಾರಾಜನಾದಾಗ ನಡೆದ ಒಂದು ವಿಶೇಷ ಪ್ರಸಂಗದ ಉಲ್ಲೇಖ ಕಲ್ಹಣನ ರಾಜತರಂಗಿಣೀ ಗ್ರಂಥದಲ್ಲಿ ಬರುತ್ತದೆ. ಮಹಾರಾಜ ಚಂದ್ರಾಪೀಡನ ಅಧಿಕಾರಿಗಳು ಯಾವುದೋ ಒಂದು ಸ್ಥಳದಲ್ಲಿ ತ್ರಿಭುವನಸ್ವಾಮಿ ದೇವಸ್ಥಾನವನ್ನು ಕಟ್ಟಲು ಆರಂಭಿಸುತ್ತಾರೆ. ಆ ಜಾಗದ ಮೂಲೆಯೊಂದರಲ್ಲಿ ಪಾದರಕ್ಷೆಗಳನ್ನು ತಯಾರಿಸುವ ಒಬ್ಬ ಬಡ ಚರ್ಮಕಾರನ ಗುಡಿಸಲು ಇರುತ್ತದೆ. ಅವನು ಗುಡಿಸಲನ್ನು ಕಿತ್ತುಹಾಕಲು ಒಪ್ಪುವುದಿಲ್ಲ. ಆ ಜಾಗದಲ್ಲಿ ದೇವಾಲಯ ಕಟ್ಟಲು ರಾಜಾಜ್ಞೆ ಆಗಿದೆಯೆಂದರೂ ವಿರೋಧಿಸುತ್ತಾನೆ. ಅಧಿಕಾರಿಗಳು ಅವನನ್ನು ಎಳೆದುಕೊಂಡು ಹೋಗಿ ರಾಜನ ಮುಂದೆ ನಿಲ್ಲಿಸುತ್ತಾರೆ. ಚರ್ಮಕಾರನು ದೈನ್ಯದಿಂದ “ಮಹಾಪ್ರಭು, ತಮಗೆ ಅರಮನೆಯು ಹೇಗೋ ಹಾಗೆ ನನ್ನ ಗುಡಿಸಲೇ ನನಗೆ ಅರಮನೆ. ಅದು ನನ್ನ ಕಣ್ಮುಂದೆ ಉರುಳಿ ಬೀಳುವುದನ್ನು ನಾನು ನೋಡಲಾರೆ” ಎಂದು ನಿವೇದಿಸಿಕೊಳ್ಳುತ್ತಾನೆ. ರಾಜ ಚಂದ್ರಾಪೀಡ ಅವನ ಅಹವಾಲನ್ನು ಸಮಾಧಾನಚಿತ್ತದಿಂದ ಕೇಳಿ ಅಧಿಕಾರಗಳತ್ತ ತಿರುಗಿ ಕೆಳಗಿನಂತೆ ಆದೇಶಿಸುತ್ತಾನೆ:
ನಿಯಮ್ಯತಾಂ ವಿನಿರ್ಮಾಣಂ ಯದ್ವಾsನ್ಯತ್ರ ವಿಧೀಯತಾಂ
ಪರಭೂಮ್ಯಪಹಾರೇಣ ಸುಕೃತಂ ಕಃ ಕಲಂಕಯೇತ್|
ಯೇ ದ್ರಷ್ಟಾರಃ ಸದಸತಾಂ ತೇ ಧರ್ಮವಿಗುಣಾಃ ಕ್ರಿಯಾಃ
ವಯಮೇವ ವಿದಧ್ಮಶ್ಚೇತ್ ಯಾತು ನ್ಯಾಯೇನ ಕೋsಧ್ವನಾ||
(ಕಲ್ಹಣನ ರಾಜತರಂಗಿಣಿ)
(ನಿಲ್ಲಿಸಿ ದೇವಾಲಯದ ನಿರ್ಮಾಣವನು ಇಲ್ಲವೇ ಬೇರೆಡೆ ನಿರ್ಮಿಸಿ ಪರರ ಭೂಮಿಯನ್ನು ಅಪಹರಿಸಿ ಪುಣ್ಯಕಾರ್ಯಕೆ ಕಳಂಕ ತರಬೇಡಿ! ಒಳಿತು/ಕೆಡುಕುಗಳನು ತೀರ್ಮಾನಿಸುವ ನಾವೇ ಧರ್ಮಬಾಹಿರವಾಗಿ ನಡೆದರೆ ನಡೆಯುವವರಾರು ನ್ಯಾಯಮಾರ್ಗದಲಿ ಈ ಭುವನದೊಳಗೆ?)
ಚರ್ಮಕಾರನಿಗೆ ಶಿಕ್ಷೆ ವಿಧಿಸಿ ದೇವಾಲಯವನ್ನು ಕಟ್ಟಲು ರಾಜ ಅನುಮತಿಯನ್ನು ನೀಡುತ್ತಾನೆಂಬ ಅಧಿಕಾರಿಗಳ ನಿರೀಕ್ಷೆ ಹುಸಿಯಾಗುತ್ತದೆ. ರಾಜನ ಈ ತೀರ್ಮಾನದಿಂದ ಚರ್ಮಕಾರ ಗದ್ಗದಿತನಾಗುತ್ತಾನೆ. ಬಡವನ ಕಷ್ಟಕ್ಕೆ ಮರುಗಿದ ರಾಜನಿಗೆ ತಲೆಬಾಗಿ ಗುಣಗಾನವನ್ನು ಮಾಡುತ್ತಾನೆ. ರಾಜನ ರಾಜಧರ್ಮಕ್ಕೆ ಮಾರುಹೋಗಿ ಪ್ರಜೆಯಾದ ಚರ್ಮಕಾರ ಸ್ವಯಂಸ್ಪೂರ್ತಿಯಿಂದ ತನ್ನ ಗುಡಿಸಲನ್ನು ರಾಜನಿಗೆ ಬಿಟ್ಟುಕೊಡುವುದಾಗಿ ಹೇಳಿ ಪ್ರಜಾಧರ್ಮವನ್ನು ಮೆರೆಯುತ್ತಾನೆ. ರಾಜನು ಬಡ ಚರ್ಮಕಾರನಿಗೆ ತೃಪ್ತಿಯಾಗುವಷ್ಟು ಹಣವನ್ನು ಕೊಟ್ಟು ಸತ್ಕರಿಸಿ ಕಳುಹಿಸುತ್ತಾನೆ.
ಇದು ಪ್ರಾಚೀನಕಾಲದ ಕಾಶ್ಮೀರದ ಅರಸು ಮತ್ತು ಪ್ರಜೆಯ ವೃತ್ತಾಂತವಾದರೆ ಇಂಥದೇ ಇನ್ನೊಂದು ಪ್ರಸಂಗ ಮೈಸೂರು ಆಳರಸರಾಗಿದ್ದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಘಟಿಸಿತು. ದಿನನಿತ್ಯ ಬೆಂಗಳೂರಿನಲ್ಲಿ ಓಡಾಡುವವರು ಬಳ್ಳಾರಿ ರಸ್ತೆಯಲ್ಲಿ ಹೆಬ್ಬಾಳಿನಿಂದ ಅರಮನೆ ಮೈದಾನದ ಕಡೆ ಪ್ರಯಾಣಿಸುವಾಗ ಮೇಕ್ರಿ ಸರ್ಕಲ್ ದಾಟಿ ಹೋಗುತ್ತಾರೆ. ಟ್ರಾಫಿಕ್ ಲೈಟ್ ಕೆಂಪು ದೀಪ ಕಾಣಿಸಿ ತಮ್ಮ ವಾಹನಗಳನ್ನು ಕೆಲಹೊತ್ತು ನಿಲ್ಲಿಸಬೇಕಾಗಿ ಬಂದಾಗ ವ್ಯಗ್ರರಾಗಿ ಎಲ್ಲರೂ ಮುಂದೆ ಹೋಗುವುದಕ್ಕಾಗಿ ಚಡಪಡಿಸುತ್ತಾರೆಯೇ ಹೊರತು ಯಾರೂ ಆ ಸರ್ಕಲ್ ಗೆ ಮೇಕ್ರಿ ಸರ್ಕಲ್ ಎಂದು ಏಕೆ ಹೆಸರು ಬಂದಿತೆಂದು ಚಿಂತಿಸಲು ಹೋಗುವುದಿಲ್ಲ. ಈ ಹೆಸರಿನ ಹಿಂದೆ ಒಂದು ಮಾನವೀಯ ವೃತ್ತಾಂತವಿದೆ. ಸ್ವಾತಂತ್ರ್ಯಪೂರ್ವದಲ್ಲಿ ಈ ವೃತ್ತ ಎತ್ತರದ ದಿಬ್ಬದಲ್ಲಿತ್ತು. ಹೆಬ್ಬಾಳಿನಿಂದ ಬೆಂಗಳೂರು ಕಡೆಗೆ ಬರುವ ಈ ದಾರಿಯಲ್ಲಿ ವ್ಯಾಪಾರದ ಸಾಮಾನು ಸರಂಜಾಮುಗಳನ್ನು ಎತ್ತಿನ ಗಾಡಿಯಲ್ಲಿ ಸಾಗಿಸಲಾಗುತ್ತಿತ್ತು. ಭಾರವಾದ ಗಾಡಿಯನ್ನು ಎಳೆದುಕೊಂಡು ಬಂದ ಎತ್ತುಗಳು ಈ ವೃತ್ತದ ದಿಬ್ಬವನ್ನು ಹತ್ತುವಾಗ ಏದುಸಿರು ಬಿಡುತ್ತಿದ್ದವು. ಕೆಲವು ಕಾಲುಗಳನ್ನೂ ಮುರಿದುಕೊಳ್ಳುತ್ತಿದ್ದವು. ಆ ಮೂಕಪ್ರಾಣಿಗಳ ಕಷ್ಟವನ್ನು ನೋಡಿ ಮರುಕಪಟ್ಟವರು ಆ ದಾರಿಯಲ್ಲಿ ಹೋಗುತ್ತಿದ್ದ ಆಗಿನ ಕಾಲದ ಬೆಂಗಳೂರಿನ ಪ್ರಸಿದ್ದ ವಾಣಿಜ್ಯೋದ್ಯಮಿ ಇನಾಯತ್ತುಲ್ಲಾ ಮೇಕ್ರಿ. ಅವರು ಕೇವಲ ಕಣ್ಣುಗಳಲ್ಲಿ ಮರುಕ ತೋರದೆ ಕ್ರಿಯಾಶೀಲರಾದರು. ಕೂಡಲೇ ತಮ್ಮ ಸ್ವಂತ ಖರ್ಚಿನಲ್ಲಿ ಕಡಿದಾದ ದಾರಿಯನ್ನು ಸಮತಟ್ಟಾಗಿಸಿ ಎತ್ತುಗಳು ನಿರಾಯಾಸವಾಗಿ ಮುನ್ನಡೆಯುವಂತೆ ಮಾಡಿದರು. ಈ ವಿಷಯ ಮೈಸೂರು ಮಹಾರಾಜರಾದ ಕೃಷ್ಣರಾಜ ಒಡೆಯರವರಿಗೆ ಅವರ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರಿಂದ ತಿಳಿಯಿತು. ಮಹಾರಾಜರು ಕೂಡಲೇ ಮೇಕ್ರಿಯವರನ್ನು ಅರಮನೆಗೆ ಕರೆಸಿದರು. “ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸದೇ ಇದ್ದರೆ ಅದು ನಮ್ಮ ಆಡಳಿತಕ್ಕೆ ಶೋಭೆಯನ್ನು ತರುವುದಿಲ್ಲ, ರಾಜರಾಗಿ ನಾವು ಮಾಡಬೇಕಾದ ಕೆಲಸವನ್ನು ನೀವು ಮಾಡಿದ್ದೀರಿ” ಎಂದು ಮಹಾರಾಜರು ಮೆಚ್ಚಿ ಮೇಕ್ರಿಯವರನ್ನು ಸನ್ಮಾನಿಸಿ ಒತ್ತಾಯಪೂರ್ವಕವಾಗಿ ಒಪ್ಪಿಸಿ ಅವರು ಮಾಡಿದ ಖರ್ಚೆಲ್ಲವನ್ನೂ ತಮ್ಮ ಖಜಾನೆಯಿಂದ ಭರಿಸಿದರು ಮತ್ತು ಈ ವೃತ್ತಕ್ಕೆ ಮೇಕ್ರಿಯವರ ಹೆಸರನ್ನು ಇಟ್ಟರು. ಹೀಗೆ ಮೈದಾಳಿದ ಈ ಮೇಕ್ರಿ ಸರ್ಕಲ್ ಆಗಿನ ಮದರಾಸು ಗವರ್ನರ್ ಲಾರ್ಡ್ ಜಾನ್ ಹೋಪ್ (Lord John Hope) ಅವರಿಂದ 1937 ರಲ್ಲಿ ಉದ್ಘಾಟನೆಗೊಂಡಿತು. ಮೇಕ್ರಿಯವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಹಿರಿಯ ಸ್ವಾತಂತ್ರನೇತಾರರಾದ ಸಿ.ರಾಜಗೋಪಾಲಾಚಾರಿ ಮತ್ತು ಇ.ವಿ.ರಾಮಸ್ವಾಮಿ ಮೊದಲಿಯಾರ್ ಜೊತೆ ಮದರಾಸಿನ ಸೆಂಟ್ರಲ್ ಜೈಲಿನಲ್ಲಿ ಆರು ತಿಂಗಳ ಕಾಲ ಸೆರೆಮನೆವಾಸ ಅನುಭವಿಸಿದವರು.
ಸಹೃದಯ ಓದುಗರೇ! ನಾವು ದಿನನಿತ್ಯ ಓಡಾಡುವ ಎಲ್ಲ ರಸ್ತೆ ಮತ್ತು ವೃತ್ತಗಳ ಹಿಂದೆ ಹೀಗೆ ಒಂದಲ್ಲ ಒಂದು ಇತಿಹಾಸವಿದೆ. ಅವು ಕೇವಲ ವ್ಯವಹಾರಾರ್ಥವಾಗಿ ನಾವು ಹೋಗಬೇಕೆಂದಿರುವ ತಾಣಗಳ ಗುರುತಾಗಿ ಪರಿಣಮಿಸದೆ ಅವುಗಳ ಹಿಂದೆ ಇರುವ ಭವ್ಯವಾದ ಇತಿಹಾಸದ ಹಿನ್ನೆಲೆಯಲ್ಲಿ ನಮ್ಮ ಜೀವನದ ದಾರಿಯನ್ನು ಕ್ರಮಿಸಲು ದಿಕ್ಸೂಚಿಗಳಾಗಲಿ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 14.7.2010.