ವಿಶ್ವವೆಂಬ ಉದ್ಯಾನದ ಸುಂದರ ಹೂವುಗಳು....

  •  
  •  
  •  
  •  
  •    Views  

ಮೂರು ವಾರಗಳ ಹಿಂದೆ ವಿಶ್ವಶಾಂತಿ ಯಾತ್ರೆ ಕುರಿತು ಬರೆದ ನಮ್ಮ ಪ್ರವಾಸಕಥನದಲ್ಲಿ ಕೆಂಚಜ್ಜಿ ಕೆಂಚಿ ಆಂಟಿಯಾದ ಪ್ರಕರಣ ನಿಮಗೆ ನೆನಪಿರಬಹುದು. ನಮ್ಮ ನೂರು ಜನ ಪ್ರವಾಸಿಗರು ಮತ್ತು ನಾವು ಲಂಡನ್‌ ನಲ್ಲಿ ತಂಗಿದ್ದ ಸುಪ್ರಸಿದ್ದ ವೈಟ್‌ ಹೌಸ್‌ ಹೋಟೆಲ್‌ ನಲ್ಲಿ ಮತ್ತೊಂದು ರೋಚಕ ಪ್ರಸಂಗ ಘಟಿಸಿತು. ಮುಂಬೈನಿಂದ ರಾತ್ರಿಯೆಲ್ಲಾ ಪ್ರವಾಸ ಮಾಡಿ ದಣಿದಿದ್ದ ಪ್ರವಾಸಿಗರು ಲಂಡನ್ನಿನ ಹೋಟೆಲ್ ತಲುಪಿದ ತಕ್ಷಣವೇ ಹಾಯಾಗಿ ಸ್ನಾನ ಮಾಡಲು ತೊಡಗಿದರು. ತರೀಕೆರೆ ತಾಲ್ಲೂಕಿನ ಹಳ್ಳಿ, ಕುಡ್ಲೂರಿನಿಂದ ಬಂದಿದ್ದ ನಂಜುಂಡಪ್ಪ ಎಂಬ ಪ್ರವಾಸಿಗ ಬಾತ್ ರೂಂ ಒಳಗೆ ಹೋದಾಗ ಕಕ್ಕಾಬಿಕ್ಕಿಯಾದ. ಸುತ್ತಲೂ ನೋಡಿದ. ಸ್ನಾನ ಮಾಡಲು ಬಿಸಿ ನೀರನ್ನು ಹಿಡಿದಿಟ್ಟುಕೊಳ್ಳಲು ಬಕೆಟ್ಟೆ ಅಲ್ಲಿ ಇರಲಿಲ್ಲ! ಇಂತಹ ದೊಡ್ಡ ಹೋಟೆಲ್ನಲ್ಲಿ ಸ್ನಾನಕ್ಕೆ ನೀರು ತುಂಬಿಕೊಳ್ಳಲು ಒಂದು ಬಕೆಟ್ ಇಲ್ಲ ಎಂದರೆ ಏನು ಎಂದು ಸಿಡಿಮಿಡಿಗೊಂಡ. ಬಾತ್ ಟಬ್‌ ನೊಳಗೆ ಕುಳಿತುಕೊಂಡು ನೀರು ಸಿಡಿಯದಂತೆ ಪ್ಲಾಸ್ಟಿಕ್ಕಿನ ತೆಳುವಾದ ಪರದೆಯನ್ನು ಮರೆಮಾಡಿಕೊಂಡು ಸ್ನಾನ ಮಾಡಬೇಕೆಂಬುದು ಆತನಿಗೆ ತಿಳಿದಿರಲಿಲ್ಲ. ಆತನ ಮನಸ್ಸಿನಲ್ಲಿ ಒಂದು ವಿಶಿಷ್ಟ ಆಲೋಚನೆ ಸುಳಿಯಿತು. ಬಿಸಿ ನೀರನ್ನು ಬಾತ್ ಟಬ್ಬಿನ ತುಂಬ ತುಂಬಿಸಿದ. ಸ್ನಾನದ ನೀರು ಸಿಡಿದರೆ ಪಾಪ, ಪರದೆ ಕೊಳೆಯಾಗುತ್ತದೆ ಎಂದು ಪರದೆಯ ಮೇಲೆ ಕರುಣೆ ತೋರಿ, ಪರದೆಯನ್ನು ಮೇಲಕ್ಕೆ ಸರಿಸಿದ! ಬಾತ್ ಟಬ್ಬಿನ ಹೊರಗೆ ನಿಂತುಕೊಂಡು ಟಬ್ಬಿನಲ್ಲಿ ಸಂಗ್ರಹಿಸಿಟ್ಟ ನೀರನ್ನು ಮೈಮೇಲೆ ಹೊಯ್ದುಕೊಳ್ಳಲು ಆರಂಭಿಸಿದ. ಕೆಲಹೊತ್ತಿನಲ್ಲಿಯೇ ಸ್ನಾನದ ನೀರು ಹೊರಗೆ ಹೋಗಲು ಆಗದೆ ಬಾತ್ ರೂಮಿನಿಂದ ಕೆಳಗೆ ಬೆಲ್ ಕ್ಯಾಪ್ಟನ್ ಕುಳಿತ ಜಾಗದಲ್ಲಿ ತೊಟ್ಟಿಕ್ಕಲಾರಂಭಿಸಿತು. ಕೂಡಲೇ ಧಾವಿಸಿದ ಹೋಟೆಲ್ ಸಿಬ್ಬಂದಿ ಗಾಬರಿಯಾಗಿ ನೀರು ಬರುವ ಮೂಲ ಸ್ರೋತವನ್ನು ಹುಡುಕುತ್ತಾ ಪತ್ತೆ ಹಚ್ಚಿ ನಂಜುಂಡಪ್ಪನ ಬಾತ್ ರೂಂ ಕದವನ್ನು ಬಡಿಯಲಾರಂಭಿಸಿದರು! ಆನಂದದಿಂದ ಸ್ನಾನ ಮಾಡುತಿದ ನಂಜುಂಡಪ್ಪ ಕದಬಡಿದವರನ್ನು ಯಾರ್ರಿ ಅವರು, ನಿಮಗೆ ಸ್ವಲ್ಪನಾದರೂ ಮಾನಮರ್ಯಾದೆ ಇದೆಯೇನ್ರಿ? ಸ್ನಾನ ಮಾಡುತ್ತಿರುವುದು ಗೊತ್ತಾಗೋದಿಲ್ವಾ ನಿಮಗೆ?” ಎಂದು ಅಚ್ಚಗನ್ನಡದಲ್ಲಿ ಗದರಿಸಿದ! ಹೋಟೆಲ್ ಸಿಬ್ಬಂದಿ ಗರಬಡಿದಂತಾದರು! ಸ್ನಾನ ಮಾಡಿ ಹೊರಬಂದ ನಂಜುಂಡಪ್ಪನಿಗೆ ಒಂದು ನೂರು ಪೌಂಡ್ (ಆಗ ಸುಮಾರು 5 ಸಾವಿರ ರೂ. ಗಳು) ದಂಡ ವಿಧಿಸಿದರು. ನಮಗೆ ಈ ವಿಷಯ ತಿಳಿದು ಹೋಟೆಲ್ ಸಿಬ್ಬಂದಿಗೆ ನಮ್ಮ ಹಳ್ಳಿಯ ಜನರ ಮುಗ್ಧತೆಯನ್ನು ವಿವರಿಸಿದಾಗ ವಿಧಿಸಿದ ದಂಡವನ್ನು ಅರ್ಧಕ್ಕೆ ಇಳಿಸಿದರು. ಪ್ರವಾಸಕ್ಕೆ ಮುನ್ನ ಬೆಂಗಳೂರಿನ ನಮ್ಮ ತರಳಬಾಳು ಕೇಂದ್ರದಲ್ಲಿ ಪರದೇಶಗಳಲ್ಲಿ ಬಾತ್ ರೂಂಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬ ಬಗ್ಗೆ ತರಬೇತಿ ಕೊಡಲು ಏರ್ಪಡಿಸಿದ್ದ ಶಿಬಿರದಲ್ಲಿ ಭಾಗವಹಿಸದೆ ಇದನ್ನೆಲ್ಲಾ ಹೇಳಿಕೊಡಲು ನಾವೇನು ಚಿಕ್ಕ ಮಕ್ಕಳೇ?” ಎಂದು ಮೂದಲಿಸಿದ್ದವರಿಗೆ ಜ್ಞಾನೋದಯವಾಗಿತ್ತು!

ಜಗತ್ತಿನ ಸುಪ್ರಸಿದ್ದ ವ್ಯಕ್ತಿಗಳ ಪಕ್ಕದಲ್ಲಿ - ಅವರು ಈಗ ಬದುಕಿರಲಿ ಸತ್ತಿರಲಿ - ಅವರ ಪಕ್ಕದಲ್ಲಿರಬೇಕೆಂಬ ಆಸೆ ನಿಮಗಿದ್ದರೆ ನೀವು ಲಂಡನ್ನಿನ ಮೇಡಂ ಟುಸಾಡ್ ಹೆಸರಿನ ಮೇಣದ ಮ್ಯೂಜಿಯಂಗೆ (Madam Tsaud Wax Museum) ಹೋಗಬೇಕು. ನೀವು ಅದರೊಳಗೆ ಪ್ರವೇಶಿಸಿದರೆ ಭೂತ ಮತ್ತು ವರ್ತಮಾನದ ವರ್ತುಲವನ್ನು ದಾಟಿ ಮುಂದೆ ಹೋಗುತ್ತೀರಿ. ಪ್ರಪಂಚದ ಪ್ರಸಿದ್ದ ಕ್ರಿಕೆಟ್ ಆಟಗಾರನಾದ ಸ್ಪಿನ್ ಬೌಲರ್ ಶೇನ್ ವಾರ್ನ್ ಪಕ್ಕದಲ್ಲೋ, ಸುಪ್ರಸಿದ್ದ Pop Singer ಮೈಕೇಲ್ ಜಾಕ್ಸನ್ ಪಕ್ಕದಲ್ಲೋ, ಬ್ರಿಟನ್ನಿನ ದೊರೆ ಎಡ್ವರ್ಡ್ ಅಥವಾ ರಾಣಿ ಎಲಿಜಬೆತ್ ಪಕ್ಕದಲ್ಲೋ, ಭಗ್ನಪ್ರೇಮಿ ರಾಜಕುಮಾರಿ ಡಯಾನಾಳ ಪಕ್ಕದಲ್ಲೋ, ಅಮೇರಿಕಾದ ಹಿಂದಿನ ಅಧ್ಯಕ್ಷ ಜಾನ್ ಎಫ್ ಕೆನೆಡಿ ಅಥವಾ ಬಿಲ್ ಕ್ಲಿಂಟನ್ ಪಕ್ಕದಲ್ಲೋ, ಗಾಂಧಿ ತಾತನ ಪಕ್ಕದಲ್ಲೋ, ಇಂದಿರಾ ಗಾಂಧಿಯ ಪಕ್ಕದಲ್ಲೋ, ಜಗದ್ವಿಖ್ಯಾತ ವಿಜ್ಞಾನಿ ಐನ್‌ ಸ್ಟೀನ್‌ ಪಕ್ಕದಲ್ಲೋ ನಿಂತು ಅವರೊಂದಿಗೆ ಮಾತನಾಡುತ್ತಿರುವಂತೆ ಫೋಟೋ ತೆಗೆಸಿಕೊಂಡು ಮನೆಗೆ ಬಂದು ನಿಮ್ಮ ಮಡದಿಗೆ ಅಥವಾ ಸ್ನೇಹಿತರಿಗೆ ತೋರಿಸಿ ಬೀಗಬಹುದು. ನಿದ್ರಿಸುತ್ತಿರುವ ರಾಜಕುಮಾರಿಯ (Sleeping Beauty) ಪಕ್ಕದಲ್ಲಿ ಫೋಟೋ ತೆಗೆಸಿಕೊಂಡು ಬಂದರೆ ಮಾತ್ರ ನಿಮ್ಮ ಶ್ರೀಮತಿಯವರಿಂದ ಲಟ್ಟಣಿಗೆಯ ಪೂಜೆ ತಪ್ಪಿದ್ದಲ್ಲ.

ಲಂಡನ್‌ ನಿಂದ ಪ್ಯಾರಿಸ್‌ ಗೆ ನಮ್ಮ ಮುಂದಿನ ಪಯಣ. ನಮ್ಮ ಯೂರೋಪ್ ಪ್ರವಾಸ ಎರಡು ಹವಾನಿಯಂತ್ರಿತ ವಿಶೇಷ ಪ್ರವಾಸೀ ಬಸ್ಸುಗಳಲ್ಲಿ ನಡೆಯಿತು. ಮಧ್ಯೆ ಸಮುದ್ರವನ್ನು ದಾಟಲು ಒಂದೆರಡು ಗಂಟೆಗಳು ಹಡಗಿನಲ್ಲಿ ಪ್ರಯಾಣಿಸಬೇಕಾಗಿ ಬಂತು. ಹಡಗು ಹೇಗಿರುತ್ತದೆ ತೋರಿಸಬೇಕೆಂಬ ಉದ್ದೇಶದಿಂದಲೇ ಈ ವ್ಯವಸ್ಥೆಯನ್ನು ಮಾಡಿದ್ದೆವು. ಅದೊಂದು ದೈತ್ಯಾಕಾರದ ಬಹು ದೊಡ್ಡ ಹಡಗು. ಲಂಡನ್‌ ನಿಂದ ಹತ್ತಿ ಕುಳಿತಿದ್ದ ಬಸ್ಸುಗಳೂ ಸಹ ನಮ್ಮಂತೆಯೇ ಹಡಗಿನಲ್ಲಿಯೇ ಪ್ರಯಾಣಿಸಿದವು! ಇನ್ನಿತರೆ ಸಹ ಪ್ರಯಾಣಿಕರ ಅದೆಷ್ಟೋ ಕಾರುಗಳು, ಬಸ್ಸುಗಳು, ಟ್ರಕ್‌ ಗಳು ಹಡಗಿನ ಹೊಟ್ಟೆಯೊಳಗೆ ಸೇರಿದ್ದವು. ಇಂಗ್ಲೆಂಡಿನ ಬಂದರು ಡೋವರ್ (Dover) ನಿಂದ ಫ್ರಾನ್ಸ್ ದೇಶದ ಬಂದರು ಕಲೈಗೆ (Calais) ಬಂದು ತಲುಪಿದಾಗ ಹಡಗಿನಿಂದ ಪ್ರಯಾಣಿಕರ ಜೊತೆಗೆ ನೂರಾರು ಕಾರು, ಬಸ್ಸು, ಲಾರಿಗಳು ಇಳಿಯುತ್ತಿದ್ದುದು ಒಂದು ಅಪರೂಪದ ದೃಶ್ಯವಾಗಿತ್ತು.

ಪ್ಯಾರಿಸ್ ನಗರವನ್ನು ನಾವು ತಲುಪಿದ್ದು ಒಂದು ವಿಶೇಷ ದಿನದ ಮುನ್ನಾ ದಿನದಂದು, ಯೂರೋಪ್‌ ನಲ್ಲಿ ಜೂನ್ 21ನೇ ತಾರೀಖು ವರ್ಷದಲ್ಲೇ ಅತ್ಯಂತ ದೀರ್ಘವಾದ ದಿನ (Longest day of the year). ಅಂದರೆ ಆ ದಿನ ಹಗಲಿನ ಅವಧಿ ಜಾಸ್ತಿ, ರಾತ್ರಿ ಅವಧಿ ಕಡಿಮೆ. ಫ್ರೆಂಚ್ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಆ ದಿನವನ್ನು ರಾಷ್ಟ್ರೀಯ ಸಂಗೀತ ಹಬ್ಬವನ್ನಾಗಿ (National Music Festival) ಆಚರಿಸುತ್ತಿದೆ. ಫ್ರಾನ್ಸ್ ದೇಶಾದ್ಯಂತ ಜನರು ಅಂದು ರಾಜಧಾನಿ ಪ್ಯಾರಿಸ್ಸಿಗೆ ಧಾವಿಸಿ ಬರುತ್ತಾರೆ. ನಮ್ಮಲ್ಲಿ ಗಣಪತಿಯ ಹಬ್ಬ ಬಂದಾಗ ಗಲ್ಲಿ ಗಲ್ಲಿಗಳಲ್ಲಿ ಸ್ಥಾಪಿಸಿದ ಪೆಂಡಾಲುಗಳ ಮೈಕಿನಿಂದ ಸುಗಮ ಸಂಗೀತವೋ, ಸಿನಿಮಾ ಸಂಗೀತವೋ ಕೇಳಿಬರುವಂತೆ, ಅಲ್ಲಲ್ಲಿ ಕಿವಿಗೆ ಅಪ್ಪಳಿಸುವಂತೆ, ಪ್ಯಾರಿಸ್ಸಿನ ಬೀದಿ ಬೀದಿಗಳಲ್ಲಿ ಆ ದಿನ ಸಂಗೀತದ ಲಹರಿ ಎಲ್ಲೆಡೆ ಕಿವಿಗಡಚಿಕ್ಕುವಂತೆ ಕೇಳಿಬರುತ್ತದೆ. ಕಲಾವಿದರು ದಾರಿ ಬೀದಿಗಳಲ್ಲಿ ಗುಂಪು ಗುಂಪಾಗಿ ಮೈಕ್ ಮುಂದೆ ನಿಂತು ವಿವಿಧ ವಾದ್ಯಗಳನ್ನು ನುಡಿಸುತ್ತಾ ಕುಣಿಯುತ್ತಾ ತನ್ಮಯತೆಯಿಂದ ಹಾಡುತ್ತಿರುತ್ತಾರೆ. ಸಂಗೀತ ಪ್ರೇಮಿಗಳು ಸುತ್ತುವರೆದು ನಿಂತಿರುತ್ತಾರೆ. ಕೈಯಲ್ಲಿ ಹುರಿದ ಅರಳು (Pop-corn) ತುಂಬಿದ ಕಾಗದದ ಪೊಟ್ಟಣಗಳನ್ನು ಹಿಡಿದುಕೊಂಡಿರುತ್ತಾರೆ. ಒಂದೊಂದೇ ಅರಳನ್ನು ತಮಗರಿವಿಲ್ಲದೆಯೇ ಬಾಯಿಗೆ ಹಾಕಿಕೊಳ್ಳುತ್ತಾ ಸಂಗೀತದ ಲಯಕ್ಕೆ ಸ್ಪಂದಿಸಿ ಕೈಕಾಲು ತಲೆಯನ್ನು ಅಲ್ಲಾಡಿಸುತ್ತಿರುತ್ತಾರೆ. ಆ ದಿನ ನಗರದ ರಸ್ತೆ ಸಾರಿಗೆಯ ಯಾವ ನಿಯಮಾವಳಿಯೂ ಇರುವುದಿಲ್ಲ. ಯಾರು ಎಲ್ಲಿ ಬೇಕಾದರೂ ಹೇಗಾದರೂ ವಾಹನವನ್ನು ನಡೆಸಬಹುದು. ಯಾವ ನಿರ್ಬಂಧವೂ ಇರುವುದಿಲ್ಲ. ಆದರೂ ಯಾವ ಅಪಘಾತಗಳೂ ಆ ದಿನ ಸಂಭವಿಸಿಲ್ಲವೆಂದು ನಮಗೆ ತುಂಬಾ ಆತ್ಮೀಯರಾದ ಆಗಿನ ಪ್ಯಾರಿಸ್ ನಗರದ ಪೋಲೀಸ್ ಕಮಿಷನರಾಗಿದ್ದ ಪಿಯರ್‌ ರವರ ಅಭಿಪ್ರಾಯ.

ಪ್ಯಾರಿಸ್‌ ನಿಂದ ಮುಂದೆ ಜಿನೀವಾಕ್ಕೆ ನಮ್ಮ ಪ್ರಯಾಣ. ಸ್ವಿಸ್ ಬ್ಯಾಂಕಿನ ಹೆಸರನ್ನು ಕೇಳದವರಿಲ್ಲ. ಜಗತ್ತಿನ ಪ್ರತಿಷ್ಠಿತ ವ್ಯಕ್ತಿಗಳು, ರಾಜಕೀಯ ಧುರೀಣರು ತಮ್ಮ ಕಪ್ಪು ಹಣವನ್ನು ಇಲ್ಲಿಯ ಬ್ಯಾಂಕಿನಲ್ಲಿ ಬಚ್ಚಿಡುತ್ತಾರೆಂಬುದು ರಹಸ್ಯವಾದ ಸಂಗತಿಯಾಗಿ ಉಳಿದಿಲ್ಲ. ಇಲ್ಲಿಯ ಮಕ್ಕಳಿಗೆ ಚಿಕ್ಕಂದಿನಿಂದಲೂ ಬ್ಯಾಂಕಿನ ವಹಿವಾಟು, ಷೇರು ಬಂಡವಾಳ ಇತ್ಯಾದಿ ವಿಷಯವಾಗಿ ಅವರ ಆಟದ ಸಾಮಗ್ರಿಗಳಲ್ಲಿಯೇ ಕಲಿಸಿಕೊಡುವುದನ್ನು ನಾವು ಕಣ್ಣಾರೆ ನೋಡಿದ್ದೇವೆ.

ಸ್ವಿಟ್ಜರ್‌ ಲೆಂಡ್‌ ಒಂದು ಸುಂದರವಾದ ದೇಶ. ದಾರಿಯುದ್ದಕ್ಕೂ ಕಾಣಬರುವ ಪ್ರಕೃತಿಮಾತೆಯ ಹಚ್ಚ ಹಸಿರಿನ ಸೊಬಗು, ಗುಡ್ಡ ಬೆಟ್ಟಗಳ ಮಧ್ಯೆ ನುಸುಳಿ ಚಿಮ್ಮುವ ಝರಿಗಳು, ಆಳದ ಪ್ರಪಾತಗಳಿಗೆ ಧುಮ್ಮಿಕ್ಕುವ ಜಲಪಾತಗಳು ನೋಡುವ ಜನರ ಕಣ್ಮನಗಳನ್ನು ತಣಿಸುತ್ತವೆ. ಜಗತ್ತಿನ ಪ್ರಕೃತಿಯ ಐಸಿರಿಯೇ ಇಲ್ಲಿ ಘನೀಭವಿಸಿದಂತಿದೆ! ಇಲ್ಲಿನ ಆಲ್ಫ್ಸ್ ಪರ್ವತಶ್ರೇಣಿ ನಯನ ಮನೋಹರ! ಜಿನೀವಾಕ್ಕೆ ಸಮೀಪದಲ್ಲಿರುವ ಆಲ್ಫ್ಸ್ ಪರ್ವತದ ರುದ್ರ ರಮಣೀಯವಾದ ಶಿಖರ ಮೌಂಟ್ ಟಿಟ್ಸಿಸ್, ಅಂತೆಯೇ ಯೂರೋಪಿನಲ್ಲಿಯೇ ಅತ್ಯಂತ ಎತ್ತರವಾದ, ಸಮುದ್ರ ಮಟ್ಟದಿಂದ 11,782 ಅಡಿ ಎತ್ತರದಲ್ಲಿರುವ ಆಲ್ಫ್ಸ್  ಪರ್ವತದ ಸುಂದರವಾದ ಇನ್ನೊಂದು ಶಿಖರವೆಂದರೆ ಯುಂಗ್ ಫ್ರಾವ್ (Jung Frau), ಇದೊಂದು ಜರ್ಮನ್ ಭಾಷೆಯ ಪದ. ಆಂಗ್ಲಭಾಷೆಗೆ ತರ್ಜುಮೆ ಮಾಡಿದರೆ Young Lady ಎಂದಾಗುತ್ತದೆ. ಎಂತಹ ಬೇಸಿಗೆಯಲ್ಲಿಯೂ ಈ ಶಿಖರ ಹಿಮಾಚ್ಛಾದಿತವಾಗಿದ್ದು ಕೈಲಾಸ ಪರ್ವತವನ್ನು ನೆನಪಿಗೆ ತಂದಕೊಡುತ್ತದೆ. ಕ್ರೈಸ್ತ ಧರ್ಮದಲ್ಲಿ ನವ ವಧುವು ಪರಿಶುಭ್ರವಾದ ಶ್ವೇತವಸ್ತ್ರಧಾರಿಯಾಗಿರುವ ಹಿನ್ನೆಲೆಯಲ್ಲಿ ಈ ಹೆಸರು ಬಂದಿರಬಹುದು. ಈ ಶಿಖರವನ್ನು ಕನ್ನಡದಲ್ಲಿ ನಮ್ಮ ಸಂಸ್ಕೃತಿಯ ಹಿನ್ನೆಲೆಯಲ್ಲಿ ಹೆಸರಿಸುವುದಾದರೆ ಮಹಾಶ್ವೇತೆ ಎನ್ನಬಹುದು. ಇದನ್ನು ನೋಡಿದ ಮೇಲೆ ಸಂಸ್ಕೃತದಲ್ಲಿ ಬಹಳ ಹಿಂದೆ ಓದಿದ್ದ ಬಾಣನ ಮಹಾಶ್ವೇತಾ ವೃತ್ತಾಂತವನ್ನು ಮತ್ತೊಮ್ಮೆ ಓದಬೇಕೆನಿಸಿತು.

ನಮ್ಮ ಪ್ರವಾಸಿಗರಲ್ಲಿ ಅನೇಕರು ಹಳ್ಳಿಗರೇ ಇದ್ದುದರಿಂದ ಅವರಿಗೆ ಇಂಗ್ಲೀಷ್ ಮಾತನಾಡಲು ಸುತರಾಂ ಬರುತ್ತಿರಲಿಲ್ಲ. ಯಾರಾದರೂ ಅವರನ್ನು ನೋಡಿ ಕುತೂಹಲದಿಂದ ನಮ್ಮ ಪ್ರವಾಸದ ಬಗ್ಗೆ ಏನಾದರೂ ಕೇಳಿದರೆ ಕೈಸನ್ನೆ ಬಾಯ್‌ ಸನ್ನೆಯಾಗಿ ಉತ್ತರಿಸಲು ಬಾರದೆ ತಲೆ ತಗ್ಗಿಸುವಂತಾಗಬಾರದೆಂದು ಎಲ್ಲರ ಕೈಯಲ್ಲಿ ಕೆಲವು Picture Postcard ಗಳನ್ನು ಕೊಟ್ಟಿದ್ದೆವು. ಅದರ ಒಂದು ಬದಿಯಲ್ಲಿ ಬೆಂಗಳೂರಿನ ನಮ್ಮ ತರಳಬಾಳು ಕೇಂದ್ರದ ಭವ್ಯವಾದ ಕಟ್ಟಡದ ಚಿತ್ರವಿತ್ತು. ಮತ್ತೊಂದು ಬದಿಯಲ್ಲಿ ಬಸವಣ್ಣನವರ ದೇವನೊಬ್ಬ ನಾಮ ಹಲವು ಎಂಬ ವಚನದಿಂದ ಪ್ರೇರೇಪಿತರಾಗಿ ವಿಶ್ವಶಾಂತಿ ಕುರಿತು ಆಂಗ್ಲಭಾಷೆಯಲ್ಲಿ ಬರೆದ ನಮ್ಮ ಈ ಕವನವಿತ್ತು:

WORLD PEACE
Satyam Shivam Sundaram
God is one, but His names are many
Reality is one, but its ways are many
Spiritualiy is one, but religions are many
Humanity is one, but human beings are many
There cannot be one religion for the whole world
Religions are like flowers of a beautiful garden
Every flower has got its own individual beauty
Adding to the total beauty of the garden!
Enjoy the beauty of the flower of your choice
While enjoying the beauty of the garden as such!
Let not your choice be thrust on others
Nor be it a cause for coercion and conflict!

ಇದರ ತಾತ್ಪರ್ಯವಿಷ್ಟು. ಈ ಜಗತ್ತಿಗೆ ದೇವರೊಬ್ಬ ಅವನ ಹೆಸರು ಅನೇಕ. ಅವನನ್ನು ಅರಿಯಲು ಅನೇಕ ಮಾರ್ಗಗಳಿವೆ. ಅವೇ ವಿವಿಧ ಧರ್ಮ, ಧರ್ಮಗಳು ವಿಭಿನ್ನವಾದರೂ ಆಧ್ಯಾತ್ಮಿಕತೆ ಮಾತ್ರ ಒಂದು. ಜಗತ್ತಿನ ಜನರೆಲ್ಲರೂ ಒಂದೇ ಧರ್ಮವನ್ನು ಅನುಸರಿಸಲು ಸಾಧ್ಯವಿಲ್ಲ. ಜಗತ್ತಿನ ಧರ್ಮಗಳೆಲ್ಲವೂ ಒಂದು ಸುಂದರವಾದ ಉದ್ಯಾನವನದ ಹೂಗಳಿದ್ದಂತೆ. ಪ್ರತಿಯೊಂದು ಹೂವಿಗೂ ತನ್ನದೇ ಆದ ವಿಶಿಷ್ಟ ಸೌಂದರ್ಯವಿರುತ್ತದೆ. ಕೆಲವರಿಗೆ ಗುಲಾಬಿ ಇಷ್ಟವಾಗಬಹುದು, ಮತ್ತೆ ಕೆಲವರಿಗೆ ಮಲ್ಲಿಗೆ ಇಷ್ಟವಾಗಬಹುದು. ಆದರೆ ಆ ಎಲ್ಲ ಹೂಗಳ ಸೌಂದರ್ಯವೂ ಸೇರಿ ಉದ್ಯಾನವನದ ಸಮಷ್ಟಿ ಸೌಂದರ್ಯ ಉಂಟಾಗುತ್ತದೆ ಎಂಬುದನ್ನು ಮಾತ್ರ ನೋಡುಗರು ಮರೆಯಬಾರದು. ತಮಗೆ ಇಷ್ಟಬಂದ ಹೂವಿನ ಸೌಂದರ್ಯವನ್ನು ಆಸ್ವಾದಿಸುವ ಜೊತೆಗೆ ಇಡೀ ಉದ್ಯಾನವನದ ಸೌಂದರ್ಯವನ್ನು ಆಸ್ವಾದಿಸಿರಿ. ತಾನು ಇಷ್ಟಪಟ್ಟ ಹೂವೇ ಅತಿ ಸುಂದರ ಎಂದು ಮಾತ್ರ ಹೇಳದಿರಿ. ನಿಮ್ಮ ಆಯ್ಕೆಯನ್ನು ಇನ್ನೊಬ್ಬರ ಮೇಲೆ ಬಲವಂತವಾಗಿ ಹೇರದಿರಿ ಮತ್ತು ಕಲಹಕ್ಕೆ ಕಾರಣರಾಗದಿರಿ.

ನಮ್ಮ ನಿರೀಕ್ಷೆಯಂತೆ ಲಂಡನ್ನಿನ ವೈಟ್‌ ಹೌಸ್‌ ಹೋಟೆಲ್ ಗೆ ನಮ್ಮ ಪ್ರವಾಸಿಗರು ಬಂದಾಕ್ಷಣ ದಾವಣಗೆರೆಯ ಸಕ್ಕರೆ ರೋಗದ ವೈದ್ಯರಾದ ಡಾ| ಮಂಜುನಾಥ್‌ ರವರ ತಾಯಿ ಶ್ರೀಮತಿ ಸುನಂದಮ್ಮವರಿಗೆ ಅಂತಹ ಒಂದು ಪ್ರಸಂಗವನ್ನು ಎದುರಿಸಬೇಕಾದ ಪರಿಸ್ಥಿತಿ ಉಂಟಾಯಿತು. ಹೋಟೆಲ್ಲಿನ ಲಿಫ್ಟ್‌ ನೊಳಗೆ ಕಾಲಿಟ್ಟೊಡನೆ ಅಮೇರಿಕಾದ ಅಪರಿಚಿತ ವ್ಯಕ್ತಿಯೊಬ್ಬ ಎದುರಾದ. ಸಹಜವಾದ ಕುತೂಹಲದಿಂದ ಯಾರು ನೀವು? ಏನು ಮಾಡುತ್ತಿದ್ದೀರಿ ಇಲ್ಲಿ? ಎಂದು ಕೇಳಿದ. ಇಂಗ್ಲೀಷ್ ಬಾರದ ಶ್ರೀಮತಿ ಸುನಂದಮ್ಮ ಅಂಜದೆ ಆ ಕಾರ್ಡನ್ನು ಕೊಟ್ಟರು.

ಪ್ರವಾಸ ಮುಗಿದು ಭಾರತಕ್ಕೆ ಬಂದ ಮೇಲೆ ಶ್ರೀಮತಿ ಸುನಂದಮ್ಮನವರಿಗೆ ಲಂಡನ್‌ ನಲ್ಲಿ ಆಕಸ್ಮಿಕವಾಗಿ ಭೇಟಿಯಾಗಿದ್ದ ಅಮೇರಿಕಾದ ಅಪರಿಚಿತ ವ್ಯಕ್ತಿಯಿಂದ ಒಂದು ಪತ್ರ ಬಂದಿತ್ತು. ವಿಶ್ವಶಾಂತಿಯನ್ನು ಕುರಿತು ರಚಿಸಿದ್ದ ನಮ್ಮ ಇಂಗ್ಲೀಷ್ ಕವಿತೆಯನ್ನು ಆತ ಬಹಳವಾಗಿ ಮೆಚ್ಚಿಕೊಂಡಿದ್ದ. ಅದನ್ನು ಪ್ರತಿಲಿಪಿ ಮಾಡಿಸಿ ತನ್ನ ಅನೇಕ ಸ್ನೇಹಿತರಿಗೆ ಮತ್ತು ತನ್ನ ಕಂಪನಿಯ ಸಂಪರ್ಕದಲ್ಲಿರುವವರಿಗೆ ಕಳುಹಿಸಿದ್ದಾಗಿ ಆತ ಅದರಲ್ಲಿ ಬರೆದಿದ್ದ:                            

June 28, 1994 
Dear Ms Alur,

I was fortunate enough to meet you in London in June on the elevator at the White House Hotel. If you remember, I asked you what your group was doing and you gave me the poem about World Peace and your card.
I was so impressed by the poem, because it is so meaningful in the context of what is happening in the world today, that I have had many copies made and I am distributing it to my fiends and business acquaintances. Keep up the good work.

Sincerely
-Leonard Brown 

ಇದನ್ನು ಓದಿ ನಮ್ಮ ಪ್ರವಾಸ ಸಾರ್ಥಕವಾಯಿತು ಎನಿಸಿತು. ನಮ್ಮ ಪ್ರವಾಸದ ವಿಶ್ವಶಾಂತಿ ಸಂದೇಶ ಕೆಲವರಿಗಾದರೂ ಮುಟ್ಟಿತ್ತು. ಅದನ್ನು ಮುಟ್ಟಿಸಿದವರು ಇಂಗ್ಲೀಷ್ ಬಾರದ ಒಬ್ಬ ಗ್ರಾಮೀಣ ಮಹಿಳೆ ಎಂಬುದು ನಮಗೆ ಅಭಿಮಾನದ ಸಂಗತಿಯಾಯಿತು. ಮತ್ತೆ ಎರಡನೆಯ ಬಾರಿ 2000 ನೇ ಇಸವಿಯಲ್ಲಿ 150 ಜನರೊಂದಿಗೆ ವಿಶ್ವಶಾಂತಿ ಯಾತ್ರೆಯನ್ನು ಏರ್ಪಡಿಸಿದ್ದೆವು. ಆದರೆ ವಾಪಾಸು ಬಂದ ಒಂದೇ ವರ್ಷದಲ್ಲಿ 11 ಸೆಪ್ಟೆಂಬರ್ 2001 ರಂದು ನ್ಯೂಯಾರ್ಕಿನ ವಿಶ್ವವಾಣಿಜ್ಯ ಕೇಂದ್ರ (World Trade Centre) ಭಯೋತ್ಪಾದಕರ ಧಾಳಿಯಿಂದ ವಿಧ್ವಂಸಗೊಂಡಿತು! ಮರದ ಕೊಂಬೆಗಳಿಂದ ಉದುರಿಬಿದ್ದ ತರಗೆಲೆಗಳಂತೆ ಸಾವಿರಾರು ಜನರು ಉರಿಯುತ್ತಿದ್ದ ಆ ಕಟ್ಟಡದಿಂದ ಹೊರಬಿದ್ದು ಭಸ್ಮಗೊಂಡದ್ದು ಇಡೀ ಪ್ರಪಂಚದ ಹೃದಯವನ್ನು ಕಲಕಿತ್ತು! ನಮ್ಮ ವಿಶ್ವಶಾಂತಿಯ ಕನಸು ಭಗ್ನಗೊಂಡಿತ್ತು!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 13.8.2008.