ಕರ್ನಾಟಕದ ರಾಜಕೀಯ ಆಗ ಮತ್ತು ಈಗ

  •  
  •  
  •  
  •  
  •    Views  

"ರಾಜಕೀಯದಲ್ಲಿ ಒಂದು ಸ್ಥಾನ ಪಡೆಯುವುದು ಉದರಪೋಷಣೆಗಲ್ಲ; ಅದು ಶಾಶ್ವತವಾದ ಜೀವನಮಾರ್ಗವೂ ಅಲ್ಲ. ಇಂತಹ ಅವಕಾಶವು ದೊರೆಯುವುದು ಜನಸೇವೆಗೋಸ್ಕರ. ನೈಜವಾದ ಸೇವೆಯನ್ನು ಸಲ್ಲಿಸಿ ಕೃತಾರ್ಥನಾಗಬೇಕೆಂದು ಬಯಸುವವನು ಸ್ವಾರ್ಥ ತ್ಯಾಗ ಮಾಡಲು ಸಿದ್ದನಾಗಿರಬೇಕು. ಅದಿಲ್ಲದೆ ರಾಜಕೀಯ ಸ್ಥಾನಮಾನವನ್ನು ಸ್ವಾರ್ಥ ಸಾಧನೆಗಾಗಿ ದುರುಪಯೋಗ ಮಾಡಿದರೆ ಅದು ನಂಬಿಕೆದ್ರೋಹವಾಗಿ ಹೀನಕಾರ್ಯವಾಗುತ್ತದೆ”. 

ಹೀಗೆಂದು ಹೇಳಿದವರು ಚಿತ್ರದುರ್ಗ ಜಿಲ್ಲೆಯ ಹಿರಿಯ ತಲೆಮಾರಿನ ರಾಜಕೀಯ ಧುರೀಣರಾಗಿದ್ದ ಜಗಳೂರಿನ ಜೆ.ಮಹಮದ್ ಇಮಾಂರವರು. 1966 ರಲ್ಲಿ ಅವರು ಬರೆದು ಪ್ರಕಟಿಸಿದ “ಮೈಸೂರು ಆಗ ಮತ್ತು ಈಗ” ಎಂಬ ಪುಸ್ತಕದಲ್ಲಿ ಬರುವ ಈ ಮಾತುಗಳು ಇಂದಿಗೂ ಎಷ್ಟೊಂದು ಪ್ರಸ್ತುತವಾಗಿವೆ. ಅವರು ಈ ಮಾತುಗಳನ್ನು ಕೇವಲ ಲೇಖನಿಯಿಂದ ಬರೆದವರಲ್ಲ; ಆ ಮಾತುಗಳ ಹಿಂದಿನ ಆಶಯದಂತೆ ಬದುಕಿದವರು. ಸಂದರ್ಭ: ಮೈಸೂರು ಮಹಾರಾಜರ ಕಾಲದಲ್ಲಿ ಸಚಿವರಾಗಿದ್ದ ಇಮಾಂರವರು ತಮ್ಮ ನಾಲ್ಕು ವರ್ಷಗಳ ಸಚಿವ ಪದವಿಯ ಅವಧಿಯು ಮುಗಿದ ಮೇಲೆ ಬೆಂಗಳೂರಿನಲ್ಲಿಯೇ ವಸತಿಯನ್ನು ಮಾಡಬೇಕೆಂದು ಅವರ ಸ್ನೇಹಿತರಿಂದ ಬಂದ ಒತ್ತಾಯ. ಬೆಂಗಳೂರಿನಲ್ಲಿಯೇ ಇದ್ದರೆ ಆಗಿಂದಾಗ್ಗೆ ದಿವಾನರನ್ನು, ಇತರೆ ಅಧಿಕಾರಿಗಳನ್ನು ಕಾಣುತ್ತಿರಬಹುದೆಂದೂ, ಅದರಿಂದ ಬೇರೆ ಯಾವುದಾದರೂ ಒಂದು ಪದವಿ ದೊರೆಯಬಹುದೆಂದು ಅವರ ಹಿತೈಷಿಗಳು ಆಶಿಸಿದ್ದರು. ಇಮಾಂರವರಿಗೆ ಸ್ನೇಹಿತರ ಸಲಹೆ ಸರಿತೋರಲಿಲ್ಲ. ಬೆಂಗಳೂರನ್ನು ಬಿಟ್ಟು ಸೀದಾ ಸ್ವಂತ ಊರಾದ ಜಗಳೂರಿಗೆ ಬಂದು ತಮ್ಮ ವ್ಯವಸಾಯ ವೃತ್ತಿಯನ್ನು ಮುಂದುವರಿಸಿದರು.

ಇಮಾಂ ಅವರ ಈ ನಿಸ್ವಾರ್ಥ ಬದುಕಿಗೆ ಪ್ರೇರೇಪಣೆ ಆಗಿನ ಕಾಲದ ಜನರ ಹೃದಯದಲ್ಲಿದ್ದ ಅಪ್ಪಟ ದೇಶಪ್ರೇಮ. ಅವರ ಮಾತಿನಲ್ಲಿಯೇ ಹೇಳುವುದಾರೆ ಅಂದಿನ ಹಿರಿಯ ರಾಜಕೀಯ ಧುರೀಣರು “ರಾಜಕೀಯದಲ್ಲಿರುವುದು ದೇಶಸೇವೆಗೆ ಒಂದು ಸದವಕಾಶವೆಂದು ಭಾವಿಸಿದ್ದರೇ ಹೊರತು" ಅದು ಒಂದು ಜೀವನೋಪಾಯ ಮಾರ್ಗವೆಂದು ಎಣಿಸುತ್ತಿರಲಿಲ್ಲ. ಆದ್ದರಿಂದ ರಾಜಕೀಯದಲ್ಲಿ ಪಾತ್ರ ವಹಿಸಿದವರು ಸ್ವಾರ್ಥತ್ಯಾಗ ಮಾಡಿದರೇ ಹೊರತು ಆಸ್ತಿಯನ್ನಾಗಲಿ, ಐಶ್ವರ್ಯವನ್ನಾಗಲಿ ಸಂಪಾದಿಸಲಿಲ್ಲ. ಈ ಹಿಂದೆ ದೇಶಸೇವೆಯಲ್ಲಿ ನಿರತರಾಗಿದ್ದವರ ಅಥವಾ ಅವರ ವಂಶೀಕರ ಆರ್ಥಿಕ ಪರಿಸ್ಥಿತಿಯನ್ನು ವಿಮರ್ಶೆ ಮಾಡಿದರೆ ಅವರು ಮಾಡಿದ ತ್ಯಾಗದ ರೀತಿಯು ಚೆನ್ನಾಗಿ ವೇದ್ಯವಾಗುತ್ತದೆ. ಅವರವರ ಕುಟುಂಬದ ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ಕಂಡು ಯಾರೂ ಕನಿಕರ ಪಡದೆ ಇರಲಾರರು. ಅವರನ್ನು ನಿಜವಾದ ತ್ಯಾಗಿಗಳೆಂದೇ ಹೇಳಬೇಕು. ಇವರು ತಮ್ಮ ರಾಜಕೀಯ ಸ್ಥಾನವನ್ನು ದುರುಪಯೋಗ ಮಾಡಿಕೊಂಡು ಮನೆಮಾರುಗಳನ್ನು ಕಟ್ಟಿಸಲಿಲ್ಲ. ಸರ್ಕಾರಿ ಜಮೀನುಗಳನ್ನು ಸಂಪಾದಿಸಲಿಲ್ಲ. ತಮ್ಮ ಬಂಧುಗಳಿಗೆ ಉನ್ನತ ನೌಕರಿಗಳನ್ನು ಕೊಡಿಸಲಿಲ್ಲ. ಈ ತರದ ನಿಸ್ವಾರ್ಥ ಸೇವೆ, ತ್ಯಾಗ ಮನೋಭಾವವು ಪ್ರಜಾಪ್ರಭುತ್ವ ಬಂದಾಗಿನಿಂದ ದಿನದಿನಕ್ಕೂ ಕ್ಷೀಣವಾಗುತ್ತಾ ಬಂದಿರುವುದು ಶೋಚನೀಯವಾಗಿದೆ”. ಜೆ.ಮಹಮ್ಮದ್ ಇಮಾಂ ಅವರು ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಕಾಲದ ರಾಜಕೀಯದಲ್ಲಿದ್ದವರು. ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯದ ರಾಜಕೀಯದಲ್ಲಿಯೂ, 5 ವರ್ಷಗಳ ಕಾಲ ಕೇಂದ್ರದ ರಾಜಕೀಯದಲ್ಲಿಯೂ ಸೇವೆ ಸಲ್ಲಿಸಿದವರು. ಜನರು ಪ್ರೀತಿವಿಶ್ವಾಸಗಳಿಂದ ಅವರನ್ನು ಇಮ್ಮಣ್ಣ, ಇಮ್ಮಣ್ಣ ಎಂದೇ ಕರೆಯುತ್ತಿದ್ದರು. ಅವರ ತಾತಂದಿರಾದ ಫಕೀರ್ ಸಾಹೇಬರೂ ಮತ್ತು ತಂದೆಯಾದ ಬಡೇಸಾಹೇಬರೂ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ, ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕ ಕೆಲಸಗಳನ್ನು ಮಾಡಿ ಜನಾನುರಾಗಿಗಳಾಗಿದ್ದರು. ಇಮಾಂರವರು ಜಗಳೂರಿನ ಪ್ರಪ್ರಥಮ ಮುನಿಸಿಪಲ್ ಅಧ್ಯಕ್ಷರಾಗಿ ನಾಗರೀಕ ಸೌಲಭ್ಯಗಳನ್ನು ಒದಗಿಸುವಲ್ಲಿ ಹೆಚ್ಚಿನ ಪರಿಶ್ರಮ ವಹಿಸಿದರು. 1936 ರಿಂದ 1940ರ ಅವಧಿಯಲ್ಲಿ ಚಿತ್ರದುರ್ಗ ಜಿಲ್ಲಾ ಬೋರ್ಡಿನ ಅಧ್ಯಕ್ಷರಾಗಿದ್ದರು. ಮೈಸೂರು ಮಹಾರಾಜರ ಕಾಲದಲ್ಲಿ ಖಾಸಗಿ ಮಂತ್ರಿಗಳಾಗಿ ನೇಮಕಗೊಂಡಿದ್ದ ಅವರು ರೈಲ್ವೆ, ನೀರಾವರಿ, ಲೋಕೋಪಯೋಗಿ, ಶಿಕ್ಷಣ, ಸಹಕಾರ, ಪೋಲೀಸ್, ಕೈಗಾರಿಕೆ ಇತ್ಯಾದಿ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿ ಮಹಾರಾಜರಿಂದ ಮುಷೀರ್–ಉಲ್-ಮುಲ್ಕ್ ಪ್ರಶಸ್ತಿ ಪಡೆದವರು. 1957 ರಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭಾಸದಸ್ಯರಾಗಿದ್ದರು. ಬೆಳಗಾಂ, ಖಾನಾಪುರ, ನಿಪ್ಪಾಣಿ ಮುಂತಾದ ಪ್ರದೇಶಗಳ ಗಡಿ ವಿವಾದ ಲೋಕಸಭೆಯಲ್ಲಿ ಭುಗಿಲೆದ್ದು ಮಹಾರಾಷ್ಟ್ರದ ಪರವಾಗಿ ವಿರೋಧಪಕ್ಷದವರೆಲ್ಲರೂ ಸಭಾತ್ಯಾಗ ಮಾಡಿದಾಗ ಪಕ್ಷದ ನಿರ್ದೇಶನವನ್ನೂ ಧಿಕ್ಕರಿಸಿ ಒಬ್ಬರೇ ಸಭೆಯಲ್ಲಿ ಗಟ್ಟಿಯಾಗಿ ನಿಂತು ಮೈಸೂರಿನ ಹಿತರಕ್ಷಣೆಗಾಗಿ ಹೋರಾಡಿದರು. ಹಿಂದುಳಿದ ಜಿಲ್ಲೆಯಾದ ಚಿತ್ರದುರ್ಗದಲ್ಲಿ ನೂರಾರು ಮೈಲಿ ದೂರದ ರಸ್ತೆಗಳು, ಸೇತುವೆಗಳು ಮತ್ತು ಕುಡಿಯುವ ನೀರಿನ ಬಾವಿಗಳು ಇತ್ಯಾದಿ ಅನೇಕ ಲೋಕೋಪಯೋಗಿ ಕಾರ್ಯಗಳನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರರಾದರು. ದೇಶಸೇವೆ ಎಂಬ ಪದ ಅಂದಿನ ದಿನಮಾನಗಳ ರಾಜಕೀಯ ಜೀವನಕ್ಕೆ ಅನ್ವಯಿಸುತ್ತದೆಯೇ ಹೊರತು ಈಗಿನ ರಾಜಕೀಯ ಜೀವನಕ್ಕೆ ಅನ್ವಯಿಸುವುದಿಲ್ಲ. ಇಂದಿನ ರಾಜಕೀಯ ದೇಶದ ಸೇವೆಯಾಗಿ ಉಳಿದಿಲ್ಲ, ದೇಶಸೇವೆಯ ಹೆಸರಿನಲ್ಲಿ ಸ್ವಾರ್ಥಸಾಧನೆಗೆ ಇರುವ ಸುಲಭೋಪಾಯವಾಗಿದೆ. 

ಅರ್ಧಶತಮಾನದ ಹಿಂದಿನ ರಾಜಕೀಯ ವಿದ್ಯಮಾನಗಳನ್ನು ವಿಶ್ಲೇಷಣೆ ಮಾಡಿ ತಮ್ಮ ಇಳಿವಯಸ್ಸಿನ ಹಿರಿದಾದ ಅನುಭವದ ಹಿನ್ನೆಲೆಯಲ್ಲಿ ಲೇಖನಿಸಿದ ಇಮಾಂ ಅವರ “ಮೈಸೂರು ಆಗ ಮತ್ತು ಈಗ” ಜೀವನಮೌಲ್ಯಗಳ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಎತ್ತಿತೋರಿಸುತ್ತದೆ. ಅದರಿಂದ ಆಯ್ದು ಸಂಕಲಿಸಿದ ಈ ಮುಂದಿನ ಕೆಲ ಪ್ರಮುಖ ಸಂಗತಿಗಳು ಹಾಗೂ ಪ್ರಬುದ್ಧ ವಿಚಾರಗಳು ಚಿಂತನಾರ್ಹವಾಗಿವೆ.

ಮೈಸೂರು ಮಹಾರಾಜರ ಆಳ್ವಿಕೆ ಕುರಿತು:

  • ಮೈಸೂರು ದೇಶವು ಬ್ರಿಟಿಷರ ಕೈಕೆಳಗೆ ಆಶ್ರಿತ ಸಂಸ್ಥಾನವಾಗಿದ್ದಿತು. ಅವರ ಪರವಾಗಿ ಒಬ್ಬ ರೆಸಿಡೆಂಟ್ ಎಂಬ ಆಂಗ್ಲ ಅಧಿಕಾರಿಯು ಬೆಂಗಳೂರಿನಲ್ಲಿರುತ್ತಿದ್ದರು. ಆದರೆ ಮೈಸೂರಿನ ಒಳ ಆಡಳಿತದಲ್ಲಿ ಬ್ರಿಟಿಷರೇ ಆಗಲಿ ರೆಸಿಡೆಂಟರವರೇ ಆಗಲಿ ಪ್ರವೇಶ ಮಾಡುತ್ತಿರಲಿಲ್ಲ. ಮೈಸೂರಿಗೆ ಸ್ವಯಂ ಆಡಳಿತದ ಅಧಿಕಾರವಿದ್ದಿತು. ಸರ್ ಮಾರ್ಕ್ ಕಬ್ಬನ್ನರು ಕಮಿಷನರ್ ಆಗಿದ್ದಾಗ ಕೆಲವು ಜನ ಇಂಗ್ಲೀಷರು ಉನ್ನತ ಸ್ಥಾನದಲ್ಲಿದ್ದರು. ಮಹಾರಾಜರ ಆಳ್ವಿಕೆಯು ಪುನರ್ ಸ್ಥಾಪಿತವಾದ ನಂತರ ಈ ಇಂಗ್ಲೀಷ್ ಅಧಿಕಾರಿಗಳ ಸಂಖ್ಯೆಯು ಕಡಿಮೆಯಾಗಿ ಮೈಸೂರಿನವರೇ ಅಧಿಕಾರದಲ್ಲಿ ಹೆಚ್ಚಾಗಿ ಸೇರಿದರು. ಇದರ ಫಲವಾಗಿ ಸರ್ಕಾರಕ್ಕೂ ಪ್ರಜೆಗಳಿಗೂ ಮಧುರ ಬಾಂಧವ್ಯವು ಬೆಳೆದು ಬಂದಿದ್ದಿತು. ಎಲ್ಲರಲ್ಲಿಯೂ ಮೈಸೂರಿನ ಮಕ್ಕಳೆಂಬ ಭಾವನೆಯು ಹರಡಿದ್ದಿತು. ಪ್ರಜೆಗಳು ಅಧಿಕಾರಿಗಳೊಂದಿಗೆ ಸಂಪರ್ಕವನ್ನಿಟ್ಟುಕೊಂಡು ಅವರನ್ನು ಸರಾಗವಾಗಿ ಕಾಣುತ್ತಿದ್ದರು.

ಇಂದಿನ ಪ್ರಜಾಪ್ರಭುತ್ವ ಕುರಿತು

  • ಪ್ರಜಾಪ್ರಭುತ್ವ ಬಂದ ನಂತರ ಈ ಮಹೋತ್ಸವಗಳು, ಆಡಂಬರಗಳು ತೀವ್ರವಾದ ಜಾಡ್ಯದ ರೂಪ ತಾಳಿವೆ. ಶಂಕುಕಲ್ಲು, ಅಡಿಗಲ್ಲು, ಮೂಲೆಕಲ್ಲುಗಳ ಪ್ರಾರಂಭೋತ್ಸವ, ಉದ್ಘಾಟನೆ, ಮುಕ್ತಾಯ ಸಮಾರಂಭ, ಸೆಮಿನಾರ್ ಇವೇ ಮೊದಲಾದ ಹೊಸ ರೀತಿಯ ಆಡಂಬರಗಳು ಜನ್ಮ ತಾಳಿವೆ. ಕಾರ್ಯ ಚಟುವಟಿಕೆ ಕಡಿಮೆಯಾಗಿ ಮಾತಿನ ಚಟುವಟಿಕೆ ಜಾಸ್ತಿಯಾಗಿದೆ. ಸಚಿವರನ್ನು ಗೌರವಿಸಲು ಈ ಸಂಭ್ರಮವನ್ನು ಏರ್ಪಾಡು ಮಾಡುತ್ತಾರೆ. ತಿಂಡಿ ತೀರ್ಥಗಳು ಜರುಗಿ ಕೊನೆಯಲ್ಲಿ ಈ ಯೋಜನೆಗಳೆಲ್ಲಾ ಮೃಷ್ಟಾನ್ನ ಭೋಜನಗಳಲ್ಲಿ ಮುಕ್ತಾಯವಾಗುತ್ತವೆ. ಯೋಜನೆಯ ಭವಿಷ್ಯವು ಅನಿಶ್ಚಿತ. ಅನೇಕ ಕಾಮಗಾರಿಗಳಿಗೆ ಹಾಕಿದ ಶಂಕು ಕಲ್ಲುಗಳು ಇಂಜಿನಿಯರಿಂಗ್ ಆಫೀಸಿನಲ್ಲಿಯೋ, ಪಂಚಾಯಿತಿ ಆಫೀಸಿನಲ್ಲಿಯೋ ಆಕಾಶವನ್ನು ನೋಡುತ್ತಾ ಬಿದ್ದಿವೆ.
  • ರಾಜ್ಯಸಭೆ ಮತ್ತು ವಿಧಾನಪರಿಷತ್ತುಗಳು ಯಾವ ಉದ್ದೇಶಕ್ಕಾಗಿ ರಚನೆಯಾಗಿವೆಯೋ ಆ ಉದ್ದೇಶವು ನೆರವೇರುತ್ತಾ ಇಲ್ಲ. ರಾಜಕೀಯದಲ್ಲಿ ಸ್ವಪ್ರಯೋಜನ ಪಡೆಯಲು ಹೆಚ್ಚು ಜನರಿಗೆ ಅವಕಾಶ ಕೊಡುವ ಸಂಸ್ಥೆಗಳಾಗಿವೆ. ಅವುಗಳನ್ನು ವಜಾ ಮಾಡಿದರೆ ದೇಶದ ಹಿತಕ್ಕೆ ಯಾವ ಕೊರತೆಯೂ ಬರುವುದಿಲ್ಲ. ಅವುಗಳಿಗೋಸ್ಕರ ಖರ್ಚಾಗುತ್ತಿರುವ ಅಪಾರವಾದ ಹಣವು ಉಳಿತಾಯವಾಗುತ್ತದೆ.

  • ಪ್ರಜಾಪ್ರಭುತ್ವವು ನೀತಿಯುಕ್ತವಾಗಿದ್ದು, ಸತ್ಯದಿಂದ ಕೂಡಿದ್ದರೆ ಪ್ರಜೆಗಳು ಸುಖಶಾಂತಿಗಳಿಂದಿರುತ್ತಾರೆ. ಹಾಗಿಲ್ಲದಿದ್ದರೆ ಜನ ಕಷ್ಟಕ್ಕೆ ಈಡಾಗಿ ಅನಾಯಕತೆ ತಲೆದೋರುತ್ತದೆ. ಪ್ರಜಾಪ್ರಭುತ್ವವು ಯಶಸ್ವಿಯಾಗಬೇಕಾದರೆ ಪ್ರಜೆಗಳು ಸುಸಂಘಟಿತರಾದ ಜನಾಂಗವಾಗಿರಬೇಕು. ಶಿಸ್ತು ಮತ್ತು ಸತ್ಯಗಳೇ ಪ್ರಜಾಪ್ರಭುತ್ವದ ತಳಹದಿ.
  • ಭಾರತದಲ್ಲಿರತಕ್ಕ ಪ್ರತಿಯೊಬ್ಬ ಪ್ರಜೆಯೂ ಯಾವ ಜನಾಂಗ ಅಥವಾ ಪಕ್ಷಕ್ಕೆ ಸೇರಿರಲಿ ತಾನು ಭಾರತದ ಪ್ರಜೆಯೆಂದು ಮನಸ್ಸಿನಲ್ಲಿಟ್ಟುಕೊಂಡು ನಡೆದರೆ ಕ್ಷೇಮ. 

  • ಪ್ರಜಾಪ್ರಭುತ್ವವು ಯಶಸ್ವಿಯಾಗಬೇಕಾದರೆ ಒಂದು ಪ್ರಬಲವಾದ ವಿರೋಧ ಪಕ್ಷವು ಬೇಕು. ಅನೇಕ ಪಕ್ಷಗಳು ಇರುವುದು ಆಡಳಿತಪಕ್ಷದ ಸೌಭಾಗ್ಯ; ಪ್ರಜಾಪ್ರಭುತ್ವದ ದೌರ್ಭಾಗ್ಯ.

  • ಪ್ರಜಾಪ್ರಭುತ್ವ ಸರ್ಕಾರದಲ್ಲಿ ಸಮಾಜವಾದ ನೀತಿಯನ್ನು ಅನುಸರಿಸಿ, ಪ್ರಜೆಗಳಲ್ಲಿ ಶಿಸ್ತು ಮತ್ತು ಸತ್ಯಗಳಿಲ್ಲದಿದ್ದರೆ ಸಮಾಜವಾದವು ಯಶಸ್ವಿಯಾಗುವುದಿಲ್ಲ.

  • ಪ್ರಜೆಗಳ ಪವಿತ್ರ ಕರ್ತವ್ಯವು ಪ್ರತಿನಿಧಿಗಳನ್ನು ಆರಿಸುವುದಾಗಿರುತ್ತೆ. ಆದರೆ ಈಗ ನಡೆಯುತ್ತಿರುವ ಚುನಾವಣೆಗಳು ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿವೆ. ಪಾಪದ ಕೂಪವಾಗಿವೆ. ಚುನಾವಣೆ ಬಂದರೆ ಅನೇಕರಿಗೆ ಹಬ್ಬ. ಹಣವನ್ನು ಸಂಪಾದಿಸಲು ಇದು ಅವರಿಗೆ ಸುಸಮಯ. ಮತದಾರರು ತಮ್ಮ ಮತವನ್ನು ಸರಾಯಿ, ಹೆಂಡಗಳಿಗೆ ಮಾರುತ್ತಾರೆ. ಏಜೆಂಟರುಗಳು ಎರಡು ಪಕ್ಷಗಳಿಂದಲೂ ಲಂಚ ತೆಗೆದುಕೊಳ್ಳುತ್ತಾರೆ.

  • ಪ್ರಜೆಗಳೇ ಪ್ರಭುಗಳು, ಪ್ರಭುಗಳೇ ಭ್ರಷ್ಟಾಚಾರಿಗಳಾದರೆ, ಅವರ ಸೇವಕರು ಲಂಚಕೋರರಾಗುವುದರಲ್ಲಿ ಆಶ್ಚರ್ಯವೇನಿದೆ?

  • ಭಾರತದ ಪ್ರಜಾಪ್ರಭುತ್ವ ಬಾಲ್ಯಾವಸ್ಥೆಯಲ್ಲಿದೆ. ಈ ಪ್ರಜಾಪ್ರಭುತ್ವದ ರಾಜ್ಯಸೂತ್ರಗಳನ್ನು ವಹಿಸಲು ತಮಗೆ ಯೋಗ್ಯತೆ ಇರಲಿ ಇಲ್ಲದಿರಲಿ, ಅನೇಕರು ಮುಂದೆ ಬರುತ್ತಿದ್ದಾರೆ. ಪ್ರಜೆಗಳಿಗೆ ನಿರೀಕ್ಷಿಸಿದಷ್ಟು ಸುಖಸೌಕರ್ಯಗಳು ದೊರೆಯುತ್ತಿಲ್ಲ. 

  • ಆಡಳಿತ ಸೂತ್ರವನ್ನು ಹಿಡಿದಿರುವ ಸಚಿವರ ವಿಷಯವಾಗಿ ಕಾಂಗ್ರೆಸ್ ಪ್ರೆಸಿಡೆಂಟರಾಗಿದ್ದ ಸಂಜೀವಯ್ಯನವರು ಈ ರೀತಿ ಹೇಳುತ್ತಾರೆ: “ಹಿಂದಿನ ಬಿಕಾರಿಗಳು ಈಗ ಕೋಟ್ಯಧೀಶರಾಗಿದ್ದಾರೆ”. ಇದು ಸತ್ಯ.

ಇಮಾಂರವರು ಭ್ರಷ್ಟಾಚಾರವನ್ನು ಕುರಿತು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿರುವ ಅಂದಿನ ವಿಧಾನಸಭಾ ಸದಸ್ಯೆ ನಾಗರತ್ನಮ್ಮ ಹಿರೇಮಠ ಅವರು ಸದನದಲ್ಲಿ ಹಾಡಿದ ಕವಿತೆ ತುಂಬಾ ಮನನೀಯವಾಗಿದೆ:

ಸರಕಾರಿ ಕೋಠಿಯಲ್ಲಿದ್ದ ಅಕ್ಕಿ 
ಮಧ್ಯರಾತ್ರಿಗೆ ತಿಂದು ಹಾಕಿದವು ಹಕ್ಕಿ 
ಈ ರೀತಿ ವರದಿ ಮಾಡಿದ ಹರಿಕಾರ 
ನಿಜವೆಂದು ನಂಬಿತು ಸರಕಾರ 
ಹುಚ್ಚಿಯ ಮದುವೆಯಲ್ಲಿ ಉಂಡವನೇ ಜಾಣ 
ಎಣ್ಣೆ ಬಂದಾಗ ಕಣ್ಣುಮುಚ್ಚಿದವನೇ ಕೋಣ 
ನಾಳೆ ನಮ್ಮ ಕಡೆ ಮಂತ್ರಿಗಳ ಸವಾರಿ 
ಇಂದು ರಸ್ತೆ ಸೇತುವೆಗಳ ರಿಪೇರಿ 
ಅವನಿಲ್ಲಿ ಬಂದಾಗ ತುಂಡು ಪಂಚೆ ಇತ್ತು 
ಇರಲಿಕ್ಕೆ ಮಣ್ಣಿನ ಜೋಪಡಿ ಇತ್ತು 
ಅವನ ಮಹಡಿಯ ಎದುರು ಹದಿನೈದು ಲಾರಿ 
ಕಂಟ್ರಾಕ್ಟುದಾರನಾಗಿ ನಾಡಿಗೆ ಮಾರಿ 
ಅವರೆಕಾಳನು ತಿಂದು ಆರು ದಿನ ಕಳೆದೆ 
ನೌಕರಿಯ ದೊರಕಿಸಲು ಎಲ್ಲೆಲ್ಲೋ ಅಲೆದೆ 
ರಾಜಕೀಯ ಸೇರಿ ಮುಂದೆ ಬಾರೋ ಕಂತ್ರಿ 
ಎಂದು ಹೇಳಿದನೊಬ್ಬ ಮಾಜಿ ಮಂತ್ರಿ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 21.7.2010.