'ಕಾವ್ಯಪೂರ್ಣಿಮಾ': ಬೆಳುದಿಂಗಳ ಕವಿಗೋಷ್ಠಿ
ಕಳೆದ ಶನಿವಾರ ರಾತ್ರಿ ಚೈತ್ರ ಹುಣ್ಣಿಮೆಯ ಮರುದಿನ ಬೆಂಗಳೂರಿನ ನಮ್ಮ ತರಳಬಾಳು ಕೇಂದ್ರದ ಮೇಲುಪ್ಪರಿಗೆಯಲ್ಲಿ ಬೆಳುದಿಂಗಳ ಕವಿಗೋಷ್ಠಿ “ಕಾವ್ಯಪೂರ್ಣಿಮಾ-2012” ಏರ್ಪಾಡಾಗಿತ್ತು. ಕಳೆದ ಎರಡು ದಶಕಗಳಿಂದ ಏರ್ಪಡಿಸುತ್ತಾ ಬಂದಿರುವ ಈ ಕಾವ್ಯಪೂರ್ಣಿಮಾ ನಾಡಿನ ಕವಿಗಳ ಹೃನ್ಮನಗಳನ್ನು ಗೆದ್ದಿದೆ. ಬೇರೆ ಯಾವುದೋ ಕಾರ್ಯಕ್ರಮದ ಅಂಗವಾಗಿ ಏರ್ಪಾಡಾಗದೆ ಕಾವ್ಯಾಸಕ್ತರಿಗೆ ಕಾವ್ಯವಾಚನಕ್ಕಾಗಿಯೇ ಮೀಸಲಾದ ಪರಿಪೂರ್ಣ ಕವಿಗೋಷ್ಠಿ ಇದು. ಈ ಬಾರಿ ಜ್ಞಾನಪೀಠಪ್ರಶಸ್ತಿ ವಿಜೇತರಾದ ಚಂದ್ರಶೇಖರ ಕಂಬಾರರು ಸಾಂಕೇತಿಕವಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು. ಆಹ್ವಾನಿತ ಕವಿಗಳೆಲ್ಲರೂ ಕೈಜೋಡಿಸಿದರು. ಅವರು ಬೆಳಗಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಗಾಳಿಯ ಹೊಡೆತಕ್ಕೆ ಸಿಕ್ಕಿ ದೀಪ ಆರಿಹೋಯಿತು. ಇದು ಎಲ್ಲ ಸಭೆ-ಸಮಾರಂಭಗಳಲ್ಲಿಯೂ ಕಾಣುವ ಸರ್ವೇ ಸಾಮಾನ್ಯ ದೃಶ್ಯ. ನಮ್ಮ ಅಭಿಪ್ರಾಯದಲ್ಲಿ ಈ ದೇಶದಲ್ಲಿ ದೀಪ ಹಚ್ಚುವುದು ತುಂಬಾ ಕಷ್ಟದ ಕೆಲಸ, ಆದರೆ ಬೆಂಕಿ ಹಚ್ಚುವುದು ಮಾತ್ರ ಬಹಳ ಸುಲಭ! ಉರಿಯುವ ಮನೆಯಲ್ಲಿ ಗಳ ಹಿರಿದುಕೊಳ್ಳುವ ಮನೋಧರ್ಮ ಉಳ್ಳವರೇ ಈ ದೇಶದ ಸಾರ್ವಜನಿಕ ಬದುಕಿನಲ್ಲಿ ಹೆಚ್ಚಾಗಿದ್ದಾರೆ. ಆದರೂ ಅರಿವುಳ್ಳವರು ದೀಪ ಹಚ್ಚುವ ಸಾಹಸದ ಕೆಲಸವನ್ನು ಮಾಡಲೇಬೇಕಾಗಿದೆ.
ಕವಿಗೋಷ್ಠಿ ಆರಂಭವಾಗುತ್ತಿದ್ದಂತೆಯೇ ಖ್ಯಾತಕವಿ ಬಿ.ಎಲ್ ಲಕ್ಷ್ಮಣರಾವ್ ರವರು ಬಾನಂಗಳದತ್ತ ಮುಖಮಾಡಿ ಮೆಲುದನಿಯಲ್ಲಿ “ಚಂದ್ರ ಎಲ್ಲಿ? ಕಾಣಿಸ್ತಾ ಇಲ್ಲವಲ್ಲಾ!” ಎಂದು ತುಂಟ ನಗೆ ಬೀರಿದರು. ತಟ್ಟನೆ ನಿಮ್ಮ ಪಕ್ಕದಲ್ಲಿಯೇ ಕುಳಿತಿದ್ದಾನೆ, ಏಕೆ ನೋಡುತ್ತಿಲ್ಲಾ?” ಎಂದು ಅವರ ಗಮನ ಸೆಳೆದವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಎಚ್.ಎಸ್ ವೆಂಕಟೇಶಮೂರ್ತಿಯವರು. ಆಗಸದಲ್ಲಿ ಮೋಡದ ಮರೆಯಲ್ಲಿ ಅಡಗಿ ಕುಳಿತಿದ್ದ ಚಂದ್ರನನ್ನು ಹುಡುಕುವ ಗೋಜಿಗೆ ಅವರು ಹೋಗಲಿಲ್ಲ. ಚಂದ್ರನನ್ನು ತಮ್ಮ ಹೆಸರಿನಲ್ಲಿ ಅಡಗಿಸಿಟ್ಟುಕೊಂಡಿರುವ ಕವಿಗೋಷ್ಠಿಯ ಉದ್ಘಾಟಕರಾದ ಕವಿ “ಚಂದ್ರಶೇಖರ ಕಂಬಾರರತ್ತ ಅವರು ಬೆರಳುಮಾಡಿ ತೋರಿಸಿದ್ದು ಅವರ ಕವಿಹೃದಯಕ್ಕೆ ಸಹಜವಾಗಿತ್ತು! ಪಶ್ಚಿಮಾಭಿಮುಖವಾಗಿ ವೇದಿಕೆಯ ಮೇಲೆ ಕುಳಿತಿದ್ದ ಕವಿಗಳಿಗೆ ಚಂದ್ರ ಕಾಣಿಸುತ್ತಿರಲಿಲ್ಲ. ಆದರೆ ಪೂರ್ವಾಭಿಮುಖವಾಗಿ ಕುಳಿತಿದ್ದ ಕಾವ್ಯಾಸಕ್ತರಿಗೆ ಆಗಸದಲ್ಲಿದ್ದ ಒಬ್ಬ ಚಂದ್ರನಲ್ಲದೆ ವೇದಿಕೆಯ ಮೇಲೆ ವಿರಾಜಮಾನರಾಗಿದ್ದ ಅನೇಕ ಕಾವ್ಯಚಂದ್ರರೂ ಕಾಣಿಸುತ್ತಿದ್ದರು!
ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯಾ ಎಂದು ಬಸವಣ್ಣನವರು ಹೇಳುವಂತೆ ಸಮುದ್ರಕ್ಕೂ ಚಂದ್ರನಿಗೂ ಇರುವ ಪ್ರಾಕೃತಿಕ ನಂಟು ಸರ್ವವಿದಿತ. ಹಾಗೆಯೇ ಕಾವ್ಯ ಮತ್ತು ಬೆಳುದಿಂಗಳಿನ ನಂಟಿಗೆ ಅತಿ ಪುರಾತನವಾದ ಇತಿಹಾಸವಿದೆ. ಕವಿಗಳ ಚಂದ್ರಿಕಾ ವ್ಯಾಮೋಹ ಸುಪ್ರಸಿದ್ಧ. ಬೆಳುದಿಂಗಳ ಮೋಡಿಗೆ ಒಳಗಾಗದ, ಅದಕ್ಕೆ ಸೋಲದ, ಅದನ್ನು ಬಣ್ಣಿಸದ ಕವಿಯಿಲ್ಲ. ಕವಿಗೋಷ್ಠಿಯ ಮುಖ್ಯ ಅತಿಥಿಯಾಗಿದ್ದ ಡಾ| ಕಮಲಾ ಹಂಪನಾ ಅವರು ಈ ಚಂದ್ರಿಕಾ ವ್ಯಾಮೋಹವು ಯಾರನ್ನೂ ಬಿಟ್ಟಿಲ್ಲ ತರಳಬಾಳು ಗುರುಗಳನ್ನೂ ಸಹ ಅದು ಬಿಟ್ಟಿಲ್ಲ! ಎಂದು ಹೇಳಿದರು. ಅವರು ಹೇಳಿದ್ದು ನಿಜ, ಹುಣ್ಣಿಮೆಗೂ ನಮ್ಮ ಮಠಕ್ಕೂ ಇರುವ ನಂಟು ತುಂಬಾ ಹಳೆಯದು. ನಮ್ಮ ಮಠದ ಮೂಲಪುರುಷರಾದ ವಿಶ್ವಬಂಧು ಮರುಳಸಿದ್ಧರು ತಮ್ಮ ಶಿಷ್ಯ ತೆಲಗುಬಾಳು ಸಿದ್ದೇಶ್ವರರನ್ನು ಸದ್ಧರ್ಮಪೀಠದಲ್ಲಿ ಕುಳ್ಳಿರಿಸಿ “ತರಳ, ಬಾಳು”! ಎಂದು ಹರಸಿದ್ದೇ ಮಾಘ ಶುದ್ಧ ಹುಣ್ಣಿಮೆಯಂದು. ಹಾಲು ಚೆಲ್ಲುವ ತುಂಬು ಚೆಂದಿರನ ಬೆಳುದಿಂಗಳು ಬಾನಿನಿಂದ ಸುರಿದು ಭುವಿಯನ್ನು ಆವರಿಸುವ ಅಮೃತಘಳಿಗೆಯದು. ಅದರ ನೆನಪೇ ಪ್ರಸಿದ್ಧ ತರಳಬಾಳು ಹುಣ್ಣಿಮೆ ಆಚರಣೆ. ತರಳಬಾಳು ಹುಣ್ಣಿಮೆಯ ನಂತರ ನಡೆಯುವುದೇ ಬೆಳುದಿಂಗಳ ಕವಿಗೋಷ್ಠಿಯಾದ ಕಾವ್ಯಪೂರ್ಣಿಮಾ. ಬುದ್ಧ ಗುರು ಹುಟ್ಟಿದ್ದು, ಅವನಿಗೆ ಜ್ಞಾನೋದಯವಾದುದು, ಆತನ ಪರಿನಿರ್ವಾಣವಾದುದು ವೈಶಾಖ ಹುಣ್ಣಿಮೆಯ ದಿನ! ಆದ್ದರಿಂದಲೇ ಅಲ್ಲವೇ ಅವನು ವೈಶಾಖಿ!
ಎಲ್ಲಿ ಚಂದ್ರ ಕಾಣಿಸ್ತಾ ಇಲ್ಲವಲ್ಲ ಎಂಬ ಪ್ರಶ್ನೆ ಅನೇಕ ವರ್ಷಗಳ ಹಿಂದೆ (1997) ನಡೆದ ಇದೇ ಕಾವ್ಯಪೂರ್ಣಿಮೆಯಲ್ಲಿ ಅಂದು ಭಾಗವಹಿಸಿದ್ದ ಕವಿಗಳನ್ನೂ ಕಾಡಿಸಿತ್ತು. ಆ ಪ್ರಶ್ನೆಗೆ ಖ್ಯಾತ ಕವಯಿತ್ರಿ ಬಿ.ಟಿ ಲಲಿತಾ ನಾಯಕ್ ಅವರು ಸ್ಥಳದಲ್ಲಿಯೇ ಬರೆದು ವಾಚಿಸಿದ ಆಶುಕವಿತೆಯ ಆಯ್ದ ಭಾಗ ಹೀಗಿದೆ:
ಚಂದ್ರ ಕಾಣುವಲ್ಲನಲ್ಲ ತಂಗಿ ಇವ ಎಲ್ಲಿಗ್ಹೋದ ತಂಗಿ
ಕಂಬಾರರ ಅಮೃತದಮಲು ನೆತ್ತಿಗಿತ್ತಿಗೇರಿತೇನ
ಉಕ್ಕಿ ಹರಿದ ಕಾವ್ಯರಸ ಮತ್ತು ಬರಿಸಿತೇನ ಮತ್ತ?
ಆಗಸವೇ ಬೇಸರೆಂದು ಧರೆಗೆ ಜಾರಿ ಬಿದ್ದನೋ
ತರಳಬಾಳು ತೋಟದೊಳಗೆ ಧ್ಯಾನಮಗ್ನನಾದನೋ
>ಸ್ವಾಮಿಗಳ ಮುಡಿಯೊಳಗೆ ಸೇರಿ ನಿದ್ದೆ ಹೋದನೋ
>ಶರ್ಮರವರ ನೆತ್ತಿಯಲ್ಲಿ ತನ್ನ ಬಿಂಬ ಕಾಣುತಿರಲು
ಅಲ್ಲೇ ಮೈ ಮರೆತನೋ
ಕವನ ಗಿವನ ಬರೆದುಕೊಂಡು ತನ್ನ ಲೋಕ ಮರೆತನೋ
ಹುಡುಕಿರಣ್ಣ ಬೇಗನೆ ಗೋಷ್ಠಿ ಮುಗಿವ ಹೊತ್ತಿಗೆ!
ಭಾರತೀಯ ಸಮಾಜದಲ್ಲಿ ಹೇಗೆ ವಿಭಿನ್ನ ಮತ-ಪಂಥಗಳು, ಜಾತಿ ಉಪಜಾತಿಗಳು ಇವೆಯೋ ಹಾಗೆಯೇ ಸಾಹಿತ್ಯದಲ್ಲಿಯೂ ವಿಭಿನ್ನ ಪಂಥಗಳು ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮತ-ಪಂಥಗಳ ಮಧ್ಯೆ ಹೇಗೆ ಸೇರಿಕೆಯಾಗುವುದಿಲ್ಲವೋ ಅಂತಹ ವಿಷಾದನೀಯ ಸ್ಥಿತಿಯಿಂದ ಸಾಹಿತ್ಯಕ್ಷೇತ್ರವೂ ಹೊರತಾಗಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ಕಾವ್ಯಪರಂಪರೆಯಲ್ಲಿ ಗುರುತಿಸಲಾಗುವ ವಿವಿಧ ಪಂಥಗಳ ಕವಿಗಳು ಕಾವ್ಯಪೂರ್ಣಿಮೆಯಲ್ಲಿ ಒಟ್ಟಿಗೆ ಭಾಗವಹಿಸಿದ್ದು ಒಂದು ವಿಶೇಷ. ನಮ್ಮ ಆಶಯಕ್ಕನುಗುಣವಾಗಿ ಸಂಘಟಿಸಿದವರು ಡಾ| ಲೋಕೇಶ ಅಗಸನಕಟ್ಟೆ. ಭಾರತಕ್ಕೆ ಬಂದ ವಿದೇಶೀಯರಿಗೆ ಇಲ್ಲಿನ ಜನರಲ್ಲಿರುವ ನಾನಾ ಜಾತಿಗಳನ್ನು ಗುರುತಿಸಲು ಆಗುವುದಿಲ್ಲ; ನಮ್ಮ ಜನರೆಲ್ಲರೂ ಅವರಿಗೆ ಒಂದೇ ತೆರನಾಗಿ ಕಾಣಿಸುತ್ತಾರೆ. ಹಾಗೆಯೇ ವೇದಿಕೆಯ ಮೇಲಿನ ಕವಿಗಳನ್ನು ಅವರವರ ಪಂಥಗಳಿಂದ ಗುರುತಿಸಲು ನಮಗೆ ಅಗಲಿಲ್ಲ. ಅವರೆಲ್ಲರೂ ನಮ್ಮ ನಾಡಿನ ಹೆಸರಾಂತ ಹೆಮ್ಮೆಯ ಕವಿಗಳಾಗಿ ಮಾತ್ರ ನಮಗೆ ಕಂಡರು. ಯಾವುದೇ ಪಂಥ ಪ್ರಭೇದವಿಲ್ಲದ ಕನ್ನಡ ಕಾವ್ಯಾನುಸಂಧಾನದ ವೇದಿಕೆ ಅದಾಗಿತ್ತು.
ಕಾವ್ಯವೆಂಬುದು ಕವಿಯ ಸಾಹಿತ್ಯ ಶಿಶು. ಕಾವ್ಯರಚನೆ ಕವಿಗೆ ವೈಯಕ್ತಿಕ ನೆಲೆಯಲ್ಲಿ ಸಂತಸವನ್ನುಂಟುಮಾಡಿದರೂ ಅದರ ಪರಿಣಾಮ ಸಾಮೂಹಿಕವಾದುದು. ತಾಯಿಗೆ ತನ್ನ ಮಗುವಿನ ಮೇಲೆ ಪ್ರೀತಿಯಿರುವುದು ಸಹಜ. ಆದರೆ ಮಗುವನ್ನು ತನ್ನ ಗಂಡ ಎತ್ತಿ ಮುದ್ದಾಡಿದಾಗ ಹೆತ್ತ ತಾಯಿಯ ಆನಂದ ಕೋಡಿವರಿಯುತ್ತದೆ. ನೆರೆಹೊರೆಯವರು, ನಂಟರಿಷ್ಟರು ಮಗುವಿನ ಆಟಪಾಠಗಳನ್ನು, ಅಂದಚೆಂದಗಳನ್ನು ಮೆಚ್ಚಿ ಮಾತಾಡಿದರೆ ತಾಯಿಯಲ್ಲಿ ಧನ್ಯತಾಭಾವ ಮೂಡುತ್ತದೆ. ಹಾಗೆಯೇ ಕವಿಗೆ ತನ್ನ ಪದ್ಯವು ಖಾಸಗಿಯಾಗಿ ಖುಷಿಯನ್ನು ನೀಡುವುದು ಸಹಜವಾದರೂ ಅದನ್ನು ಮೆಚ್ಚುವ ಕಾವ್ಯಾಸಕ್ತರು ಸಿಕ್ಕಿದರೆ ಅಪರಿಮಿತ ಆನಂದವನ್ನುಂಟುಮಾಡುತ್ತದೆ. ಇಲ್ಲದಿದ್ದರೆ ಕಟ್ಟಿಯುಮೇನೋ ಪೊಸ ಬಾಸಿಂಗಮಂ, ಮುಡಿವ ಭೋಗಿಗಳಳಿಲ್ಲದಿರ್ದಡೆ ಎಂಬ ವಿಷಾದ ಮೂಡುತ್ತದೆ! ಕವಿಗಳನ್ನು ಮತ್ತು ಕಾವ್ಯಾಸಕ್ತರನ್ನು ಮುಖಾಮುಖಿಯಾಗಿಸಿ ಇಬ್ಬರಲ್ಲೂ ಪುಳಕ ಉಂಟುಮಾಡುವುದೇ ನಿಜವಾದ ಕವಿಗೋಷ್ಠಿ .
ಇತ್ತೀಚಿನ ಕವಿಗಳ ಪದ್ಯಗಳು ಸಂವಹನೆಯಲ್ಲಿ ಸೋಲುತ್ತಿರುವುದನ್ನು ಕವಿಗೋಷ್ಠಿಯ ಉದ್ಘಾಟನೆ ಮಾಡಿದ ಡಾ| ಚಂದ್ರಶೇಖರ ಕಂಬಾರರು ಸರಿಯಾಗಿ ಗುರುತಿಸಿದರು. ರಸಿಕರಿಂದ ಕಾವ್ಯ ದೂರ ಸರಿಯುತ್ತಿರುವುದಕ್ಕೆ ಕವಿಗಳೇ ಜವಾಬುದಾರರು. ಹಿಂದಿನ ಕವಿಗಳ ಪದ್ಯಗಳಲ್ಲಿ ಛಂದಸ್ಸು ಲಯ ಇರುತ್ತಿದ್ದವು, ಕಥೆ ಇರುತ್ತಿತ್ತು. ಹೀಗಾಗಿ ಅವರಿಗೆ ಸಂವಹನೆ ಒಂದು ಸವಾಲೇ ಆಗಿರಲಿಲ್ಲ. ಆದರೆ ಈಗಿನವರ ಪದ್ಯಗಳಲ್ಲಿ ಲಯ ಛಂದಸ್ಸು ಮಾಯವಾಗುತ್ತಿದೆ, ಕಥೆಯೆಂಬುದು ಇರುವುದಿಲ್ಲ. ಹೀಗಾಗಿ ಅವರ ಪದ್ಯಗಳು ಸಂವಹನೆಯಲ್ಲಿ ಸೋಲುತ್ತಿವೆ. ಕವಿಯು ರಸಿಕರ ಜೊತೆ ಮಾತಾಡುವುದನ್ನು ಬಿಟ್ಟು ಅವರಿಂದ ದೂರವಾಗಿ ನಿಂತು ಕೇವಲ ತನಗೆ ತಾನೇ ಒಂಟಿಯಾಗಿ ಮಾತನಾಡಿಕೊಳ್ಳುವುದಕ್ಕೆ ಆರಂಭಿಸಿದ್ದಾನೆ. ಇದು ತುಂಬಾ ಆತಂಕದ ವಿಷಯವಾಗಿದೆ; ಇದರ ಬಗೆಗೆ ಕವಿಗಳು ಗಂಭೀರವಾಗಿ ಚಿಂತಿಸಬೇಕೆಂದು ಅವರು ಹೇಳಿದ್ದು ಕಟುವಾದರೂ ಸಮಯೋಚಿತ.
“Poets are the unacknowledged legislators of the World”. ಇದು ಇಂಗ್ಲೀಷಿನ ಪ್ರಸಿದ್ಧ ಕವಿ ಪಿ.ಬಿ ಶೆಲ್ಲಿ ಹೇಳಿದ ಮಾತು. ಒಬ್ಬ ಉತ್ತಮ ಕವಿಯ ಲೇಖನಿ ಜನರ ಹೃದಯವನ್ನು ತಟ್ಟುತ್ತದೆ, ಅವರ ಆಲೋಚನೆಗಳನ್ನು ರೂಪಿಸುತ್ತದೆ. ಜನರ ಭಾವನೆಗಳನ್ನು ಬಡಿದೆಬ್ಬಿಸಿ ಕ್ರಿಯಾಶೀಲರನ್ನಾಗಿ ಮಾಡುತ್ತದೆ.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 12.4.2012