ಬಡವರ ಬಿನ್ನಪವ ಕೇಳುವವರಾರು!
ನಮ್ಮ ಸಮ್ಮುಖದಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಹಾವೇರಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುಶಾಂತಯ್ಯ ಮಾಸಣಗಿ ಹೇಳಿದ ಒಂದು ರೋಚಕ ಕಥಾನಕ. ಯಾರು ಬರೆದದ್ದು ಎಲ್ಲಿ ಓದಿದ್ದೆಂದು ಅವರಿಗೂ ಗೊತ್ತಿಲ್ಲ. ಆದರೆ ನಿತ್ಯ ಒಂದಲ್ಲ ಒಂದು ಸಂದರ್ಭದಲ್ಲಿ ಎಲ್ಲರ ಅನುಭವಕ್ಕೆ ಬರುವ ಸಂಗತಿ. ಈ ಕಥಾನಕ ನಮ್ಮ ಸರಕಾರಗಳ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಿದೆ. ವಿಧಾನಸೌಧದ ಮೇಲೆ ರಾರಾಜಿಸುವ ಸರಕಾರದ ಕೆಲಸ ದೇವರ ಕೆಲಸ ಎಂಬ ನುಡಿಗಟ್ಟಿನ ಆಶಯಕ್ಕೆ ಅನುಗುಣವಾಗಿ ನಡೆಯದೆ ಸರಕಾರದ ಕೆಲಸ ದೆವ್ವಗಳ ಕೆಲಸವಾಗಿ ಹೇಗೆ ಮಾರ್ಪಟ್ಟಿದೆಯೆಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ:
ಒಮ್ಮೆ ವಿಧಾನಸೌಧದೊಳಕ್ಕೆ ಒಂದು ನಾಗರ ಹಾವು ನುಸುಳಿ ಅಲ್ಲಿನ ಕಡತಗಳಲ್ಲಿ ಮರೆಯಾಯಿತು. (ಕಡತಗಳೇ ನಾಗರಹಾವಾಗಿ ಅನೇಕ ಜನರನ್ನು ಕಚ್ಚುವ ಪ್ರಸಂಗಗಳೂ ಉಂಟು! ಅದು ಬೇರೆಯ ವಿಚಾರ.) ಗಲಿಬಿಲಿಗೊಂಡ ಅಧಿಕಾರಿಗಳು ಹಾವು ಹಿಡಿಯುವ ಹಳ್ಳಿಯ ಮುದುಕನೊಬ್ಬನನ್ನು ಕರೆಸಿದರು. ಅವನು ಬಹಳ ಕಷ್ಟಪಟ್ಟು ಹಾವನ್ನು ಹಿಡಿದು ತನ್ನ ಬುಟ್ಟಿಯೊಳಗೆ ಹಾಕಿದ. ಅಧಿಕಾರಿಗಳಿಗೆ ನಿರಾಳವಾಯಿತು. ನಂತರ ಹಾವು ಹಿಡಿದ ಅಜ್ಜ ಅಧಿಕಾರಗಳ ಹತ್ತಿರ ತನ್ನ ಕಷ್ಟಗಳನ್ನು ಹೇಳಿಕೊಂಡ. ತಾನು ಬಹಳ ಬಡವನಾಗಿರುವುದರಿಂದ ಸರಕಾರವು ನೀಡುವ ವೃದ್ಧಾಪ್ಯ ವೇತನವನ್ನು ಮುಂಜೂರು ಮಾಡಿಕೊಡುವಂತೆ ಕೇಳಿಕೊಂಡ. ಅಧಿಕಾರಿಗಳು ಅವನಿಗೆ ಒಂದು ಅರ್ಜಿ ಕೊಡು. ನೋಡೋಣ ಎಂದು ಹೇಳಿದರು. ಅವರ ಉತ್ತರವನ್ನು ಕೇಳಿಸಿಕೊಂಡ ಜಾಣ ಮುದುಕ ತನ್ನ ಬುಟ್ಟಿಯಿಂದ ಹಾವನ್ನು ಹೊರಗೆ ಬಿಟ್ಟ. ಅಧಿಕಾರಿಗಳು ಹೌಹಾರಿದರು. ಎಲ್ಲರ ಕಣ್ಣೆದುರಿಗೇ ಕಛೇರಿಯ ಕಡತಗಳಲ್ಲಿ ಅಡಗಿಕೊಳ್ಳುತ್ತಿದ್ದ ಹಾವನ್ನು ನೋಡಿ ಅಧಿಕಾರಿಗಳು ಏರಿದ ದನಿಯಲ್ಲಿ ಏಯ್, ಏಯ್ ಹಾವು ತಪ್ಪಿಸಿಕೊಳ್ಳುತ್ತಿದೆ, ಹಿಡಿ, ಹಿಡಿ! ಎಂದು ಮುದುಕನಿಗೆ ಹೇಳಿದರು. ಅದಕ್ಕೆ ಆ ಅಜ್ಜ ಏನು ಹೇಳಿದ ಗೊತ್ತೆ: ಒಂದು ಅರ್ಜಿ ಕೊಡಿ, ನೋಡೋಣ! ಅಧಿಕಾರಿಗಳು ಬೇಸ್ತುಬಿದ್ದರು.
ಈ ಕಾಲ್ಪನಿಕ ಕಥಾನಕವು ಇಂದಿನ ಪ್ರಜಾಪ್ರಭುತ್ವ (ಅ)ವ್ಯವಸ್ಥೆಯ ಕಟು ವಿಡಂಬನೆಯಾಗಿದೆ. ಅಧಿಕಾರಿಗಳು ಆ ಮುದುಕನ ಕಷ್ಟವೇನೆಂದು ಅರ್ಥ ಮಾಡಿಕೊಂಡು ತಾವೇ ಅರ್ಜಿ ಬರೆದು ಸಹಿ ಹಾಕಿಸಿಕೊಂಡು, ಟಿಪ್ಪಣಿ ಬರೆದು ತಕ್ಷಣ ನೆರವಾಗಬೇಕಿತ್ತು. ಅದರ ಬದಲಿಗೆ ಒಂದು ಅರ್ಜಿ ಕೊಡು, ನೋಡೋಣ ಎಂದರೇನರ್ಥ? ಆ ಮುದುಕನಿಗೆ ಅಧಿಕಾರಿಗಳೇನೂ ಅಧಿಕೃತವಾಗಿ ಅರ್ಜಿ ಕೊಟ್ಟಿರಲಿಲ್ಲ, ಹೇಳಿ ಕಳುಹಿಸಿದ ತಕ್ಷಣ ಧಾವಿಸಿ ಬಂದ, ಹಾವನ್ನು ಹಿಡಿದು ಬುಟ್ಟಿಗೆ ಹಾಕಿದ. ಅದೇ ರೀತಿ ಅವನು ತನ್ನ ಕಷ್ಟವನ್ನು ಹೇಳಿಕೊಂಡಾಗ ಅಧಿಕಾರಿಗಳು ಏಕೆ ಸ್ಪಂದಿಸಬಾರದು, ನೆರವಾಗಬಾರದು? ಸರಕಾರವೆಂದ ಮೇಲೆ ಕೆಲವು ನಿಯಮಗಳಿರುತ್ತವೆ; ಒಂದು ವ್ಯವಸ್ಥೆ ಹಾಗೂ ಕ್ರಮ ಇರುವುದೂ ಸಹಜ. ಆದರೆ ನಿಯಮಗಳಿರುವುದು ಆಡಳಿತ ನಿರ್ವಹಣೆಯ ಅನುಕೂಲಕ್ಕಾಗಿಯೇ ಹೊರತು ಜನರಿಗೆ ತೊಂದರೆಯನ್ನುಂಟುಮಾಡಲು ಅಲ್ಲ, ಅಶಿಕ್ಷಿತನಾದ ಆ ಮುದುಕನ ಅಹವಾಲನ್ನು ಕೇಳಿ ಅಗತ್ಯವಾದ ವಿಧಿ ವಿಧಾನಗಳನ್ನು ತಾವೇ ಪೂರೈಸಿ ತಕ್ಷಣ ನೆರವಾಗಿದ್ದರೆ ಮಾನವೀಯತೆ ಎನಿಸಿಕೊಳ್ಳುತ್ತಿತ್ತು; ಕಾನೂನಿನ ಕಲಂಗಳಿಗೆ ಮಾನವೀಯ ಸ್ಪರ್ಶ ಇರದೇ ಹೋದರೆ ಅದು ನಿರರ್ಥಕ. ಹಾಗೆ ನೋಡಿದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು. ಮಂತ್ರಿಗಳು, ಶಾಸಕರು, ಅಧಿಕಾರಿಗಳು ಅವನ ಸೇವಕರು. “ಅರ್ಜಿ ಕೊಡುವ ಪದ್ಧತಿಯಿಂದ ಅವನನ್ನು ಸೇವಕನನ್ನಾಗಿ ಮಾಡಲಾಗಿದೆ. ಪ್ರಭುವಿಗೆ ನೆರವಾಗುವುದು ಸೇವಕನ ಪರಮ ಕರ್ತವ್ಯ. ಆದರೆ ಸೇವಕರೇ ಪ್ರಭುಗಳ ಮೇಲೆ ಸವಾರಿ ಮಾಡುವುದು ಮಾತ್ರ ಪ್ರಜಾಪ್ರಭುತ್ವದ ವ್ಯಂಗ್ಯ.
ವಿಧಾನ ಸೌಧದಲ್ಲಿ ಈಗ ಒಂದಲ್ಲ, ಅಸಂಖ್ಯಾತ ಹಾವುಗಳು ಬೀಡು ಬಿಟ್ಟಿವೆ. ಅವುಗಳನ್ನು ಹಿಡಿದು ಬುಟ್ಟಿಗೆ ಹಾಕುವ ಕೆಲಸವನ್ನು ಮತದಾರರು ಚುನಾವಣೆಯ ಸಂದರ್ಭದಲ್ಲಿ ಮಾಡುತ್ತಾರೆ. ಅಂತಹ ಅವಕಾಶ ಅವರಿಗೆ ಸಿಗುವುದು ಐದು ವರ್ಷಕ್ಕೆ ಒಂದೇ ಒಂದು ಸಲ ಮಾತ್ರ. ಆಮೇಲೆ ಮುಗಿಯಿತು, ಹಾವುಗಳದೇ ದರ್ಬಾರು. ಯಾವಾಗ ಕಚ್ಚುತ್ತವೆ, ಯಾರನ್ನು ಕಚ್ಚುತ್ತವೆ, ಹೇಗೆ ಕಚ್ಚುತ್ತವೆ ಎಂದು ಹೇಳಲು ಬಾರದು. ಹಾವಿನ ಬಾಯ ಹಲ್ಲ ಕಳೆದು ಹಾವನಾಡಿಸಬಲ್ಲಡೆ, ಹಾವಿನ ಸಂಗವೇ ಲೇಸು ಕಂಡಯ್ಯಾ ಎನ್ನುತ್ತಾಳೆ ವೈರಾಗ್ಯನಿಧಿ ಅಕ್ಕಮಹಾದೇವಿ. ಇದು ಆಧ್ಯಾತ್ಮಿಕ ಸ್ತರದಲ್ಲಿ ಮನಸ್ಸನ್ನು ಹದಗೊಳಿಸುವ ವಿಚಾರದಲ್ಲಿ ಹೇಳಿದ ವಚನವಾದರೂ ಇಂದಿನ ರಾಜಕೀಯ ವಿದ್ಯಮಾನಗಳಿಗೂ ಅನ್ವಯಿಸಿ ವ್ಯಾಖ್ಯಾನಿಸಬಹುದು. ಪ್ರಜಾಪ್ರಭುತ್ವದಲ್ಲಿ ಹಾವುಗಳ ಸಂಗ ಅನಿವಾರ್ಯ. ಅವುಗಳ ವಿಷದ ಹಲ್ಲನ್ನು ಆಗಾಗ ನಿಯಮಿತವಾಗಿ ಕೀಳುತ್ತಿರಬೇಕು. ಕಿತ್ತಮೇಲೂ ವಿಷದ ಹಲ್ಲು ಬೆಳೆಯುತ್ತಲೇ ಇರುತ್ತವೆ. ಮತ್ತೆ ಮತ್ತೆ ಕೇಳುತ್ತಲೇ ಇರಬೇಕು.
ಹಿರೇಕೆರೂರು ತಾಲ್ಲೂಕಿನಲ್ಲಿ ಮಳಗಿ ಎಂಬ ಒಂದು ಹಳ್ಳಿ. ಮಳೆಗಾಲದಲ್ಲಿ ಕುಮುದ್ವತಿ ನದಿ ತುಂಬಿ ಹರಿದಾಗ ಈ ಹಳ್ಳಿ ಅಕ್ಷರಶಃ ದ್ವೀಪವಾಗಿಬಿಡುತ್ತದೆ. ಪಕ್ಕದ ಊರು, ಪೇಟೆಗಳಿಗೆ ಹೋಗಲು ಅಸಾಧ್ಯ. ತುಂಬು ಗರ್ಭಿಣಿಯರು ಹೆರಿಗೆಗೆಂದು ಆಸ್ಪತ್ರೆಗೆ ಹೋಗಲಾರದೆ ಪ್ರಾಣಾಪಾಯಕ್ಕೆ ಒಳಗಾಗುತ್ತಿದ್ದಾರೆ. ನದಿಗೆ ಅಡ್ಡಲಾಗಿ ಸೇತುವೆ ಕಟ್ಟಬೇಕೆಂದು ಗ್ರಾಮಸ್ಥರು ಬೇಡಿಕೆ ಸಲ್ಲಿಸಿ ಹಲವಾರು ವರ್ಷಗಳೇ ಆದವು. 2007 ರಲ್ಲಿ ಆಗಿನ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆಯೂ ಆಯಿತು. ಆದರೆ ಸರಕಾರಗಳು ಬಂದವು, ಹೋದವು; ಸೇತುವೆ ಮಾತ್ರ ಆಗಲಿಲ್ಲ, ಎರಡು ವರ್ಷಗಳ ಹಿಂದೆ ಗ್ರಾಮಸ್ಥರಿಂದ ನಮಗೆ ದೂರು. ಮಂತ್ರಿಗಳಿಗೆ ನಮ್ಮಿಂದ ಒತ್ತಡ. ಐದು ಕೋಟಿ ಅನುದಾನ ಮುಂಜೂರಾಗಿದ್ದು ಚುನಾವಣೆ ಸಮೀಪಿಸಿದಾಗ, ಅನುದಾನ ಮುಂಜೂರು ಮಾಡಿದ ಸಚಿವರು ಸೋತರು. ಸರಕಾರ ಬದಲಾಯಿತು. ಸೇತುವೆ ಇನ್ನೂ ಆಗಿಲ್ಲ. ಜನರ ಕಾರ್ಪಣ್ಯ ಇಂದಿಗೂ ತಪ್ಪಿಲ್ಲ. ಬಹಳ ಹಿಂದೆಯೇ ಕುಮಾರ ವ್ಯಾಸ ಹೇಳಿದ ಮಾತು ಈಗಲೂ ಸತ್ಯಸ್ಯ ಸತ್ಯ.
ಅರಸು ರಕ್ಕಸ, ಮಂತ್ರಿಯೆಂಬುವ
ಮೊರೆವ ಹುಲಿ, ಪರಿವಾರ ಹದ್ದಿನ
ನೆರವಿ, ಬಡವರ ಬಿನ್ನಪವನಿನ್ನಾರು ಕೇಳುವರು
ಉರಿವುತಿದೆ ದೇಶ!..... (ಕುಮಾರವ್ಯಾಸ)
ಒಂದು ಹಳ್ಳಿಗೆ ಬೇಕಾದ ಮೂಲಭೂತ ಸೌಲಭ್ಯವನ್ನು ಒದಗಿಸಲು ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳ ಮೇಲಾದರೂ ಸರಕಾರಗಳಿಂದ ಆಗಿಲ್ಲ. ಜನರಿಗೆ ಏನು ಬೇಕೆಂಬುದನ್ನು ಸರ್ವೆ ಮಾಡಿಸಿ ಅಂತಹ ಸೌಲಭ್ಯವನ್ನು ತಾನೇ ಸ್ವಯಂಸರ್ತಿಯಿಂದ ಒದಗಿಸಲು ಸರಕಾರ ಮುಂದಾಗಬೇಕು. ಜನರು ದೈನೇಸಿಯಾಗಿ ಕಾಡಿ ಬೇಡಿದರೂ ಕೆಲಸ ಮಾಡಿಕೊಡದ ಮಂತ್ರಿಮಹೋದಯರನ್ನು, ಶಾಸಕರನ್ನು ಸಭೆಸಮಾರಂಭಗಳಲ್ಲಿ ಶಾಲು ಹೊದಿಸಿ ಸನ್ಮಾನಿಸುವುದು ನಮ್ಮ ದೇಶದ ಜನರ ಅತಿ ದೊಡ್ಡ ಗುಣ. ನಮ್ಮ ಜನನಾಯಕರು ಆಶ್ವಾಸನೆಗಳನ್ನು ಕೊಡುವುದರಲ್ಲಿ ಮಾತ್ರ ಅದ್ವಿತೀಯರು. ಅವರು ಅರಿಯಬೇಕಾದ ಒಂದು ಸತ್ಯ ಇದೆ. ಕೆಲವು ಸಲ ಕೆಲವರನ್ನು ಮಾತ್ರ ಮೋಸಗೊಳಿಸಬಹುದೇ ಹೊರತು ಎಲ್ಲ ಕಾಲದಲ್ಲೂ ಎಲ್ಲರನ್ನೂ ಮರುಳು ಮಾಡುವುದು ಸಾಧ್ಯವಿಲ್ಲ. ಜನರೂ ಸಹ ನಿಧಾನವಾಗಿಯಾದರೂ ಬುದ್ದಿವಂತರಾಗುತ್ತಿದ್ದಾರೆ. ತಮ್ಮ ಪ್ರತಿನಿಧಿಗಳ ಮಾತುಗಳನ್ನು ಎಷ್ಟು ನಂಬಬೇಕು, ಎಷ್ಟು ನಂಬಬಾರದು ಎಂದು ಖಂಡಿತ ತೀರ್ಮಾನಿಸುತ್ತಾರೆ. ಶರಣರೊಂದಿಗೆ ಸರಸವಾಡಿದರೆ ಏನಾಗಬಹುದೆಂದು ಎಚ್ಚರಿಸುವ ಬಸವಣ್ಣನವರ ಈ ಮುಂದಿನ ವಚನದ ಹಿನ್ನೆಲೆಯಲ್ಲಿ ಜನರೊಂದಿಗೆ ಹೇಗೆ ವರ್ತಿಸಬೇಕೆಂಬ ಒಳ ಎಚ್ಚರ ಜನಪ್ರತಿನಿಧಿಗಳಿಗೆ ಇದ್ದರೆ ನಾಡಿಗೆ ಒಳಿತು ಆದೀತು.
ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸಿಕೊಂಡಂತೆ
ಹುಲಿಯ ಮೀಸೆಯ ಹಿಡಿದು ಒಲಿದು ಉಯ್ಯಾಲೆಯ ಆಡಿದಂತೆ
ಉರಿವ ಕೋಳಿಯ ಹಿಡಿದು ಮಂಡೆಯ ಸಿಕ್ಕ ಬಿಡಿಸಿದಂತೆ
ಕೂಡಲ ಸಂಗನ ಶರಣರೊಡನೆ ಮರೆದು ಸರಸವಾಡಿದರೆ
ಸುಣ್ಣದ ಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 9.1.2014