ಚೆಲುವ ಕನ್ನಡ ನಾಡು ಕುಡುಕರ ಬೀಡು ಆಗದಿರಲಿ!

  •  
  •  
  •  
  •  
  •    Views  

ರು ಹಿತವರು ನಿನಗೆ ಈ ಮೂವರೊಳಗೆ, ನಾರಿಯೋ, ಧಾರುಣಿಯೋ ಬಲು ಧನದ ಸಿರಿಯೋ?” ಎಂಬ ಪುರಂದರದಾಸರ ಜನಪ್ರಿಯ ಕೀರ್ತನೆಯನ್ನು ನೀವು ಕೇಳಿದ್ದೀರಿ. ಮೊನ್ನೆ ಭಾನುವಾರದ ವಿಜಯಕರ್ನಾಟಕದ ರಾಜ್ಯ-ನಗರ-ಗ್ರಾಮೀಣ ಪುಟವನ್ನು ನೋಡಿದ ಮೇಲೆ ದಾಸರ ಈ ಮಾತನ್ನು ಬದಲಾಯಿಸಿ “ಆರು ಹಿತವರು ನಿನಗೆ ಈ ಮೂವರೊಳಗೆ ಬಿಸಲೇರಿ ನೀರೋ, ರೈತರ ನೀರಾನೋ, ಸರ್ಕಾರದ ಬೀರೋ?” ಎಂದು ಕೇಳಬೇಕೆನಿಸುತ್ತದೆ. ಪತ್ರಿಕೆಯ ಒಳ ಪುಟದ ಮಧ್ಯಭಾಗದಲ್ಲಿ ಮುಂಬರುವ ಶಿವರಾತ್ರಿಯ ಪ್ರಯುಕ್ತ ವಿಜಾಪುರದ ಬಸಂತವನದಲ್ಲಿರುವ ದೇಶದ ಎರಡನೇ ಅತಿ ಎತ್ತರದ ಶಿವನ ಮೂರ್ತಿಯ ಭಾವಚಿತ್ರವಿದೆ. ಧ್ಯಾನಮುದ್ರೆಯಲ್ಲಿರುವ ಶಿವನ ಚಿತ್ರದ ಬಲತುದಿಯಲ್ಲಿ ಸಣ್ಣ ಅಕ್ಷರಗಳಲ್ಲಿ “ನೀರು ಬಳಕೆದಾರರ ಸಂಘ ಸದೃಢಕ್ಕೆ ಯೋಜನೆ” ಎಂಬ ಚಿಕ್ಕ ತಲೆಬರಹದ ಸುದ್ದಿ ಇದೆ. ಚಿತ್ರದ ಮೇಲ್ಬಾಗದಲ್ಲಿ ದಪ್ಪನೆಯ ಅಕ್ಷರಗಳಲ್ಲಿ “ಇನ್ನೂ 2 ಸಾವಿರ ಮದ್ಯದಂಗಡಿ” ಎಂಬ ದೊಡ್ಡ ತಲೆಬರಹದ ಸುದ್ದಿ ಪ್ರಕಟವಾಗಿದೆ. 

“ನೀರು ಬಳಕೆದಾರರ ಸಂಘಗಳನ್ನು ಸದೃಢಗೊಳಿಸಲು ಕಾರ್ಯಯೋಜನೆ ಸಿದ್ದಪಡಿಸಲಾಗಿದೆ. ಈವರೆಗೆ ಇಲಾಖೆಯಿಂದ ನೀರು ಸಂಗ್ರಹಕ್ಕೆ ಹೆಚ್ಚು ಆದ್ಯತೆ ನೀಡಲಾಗಿತ್ತು. ಈಗ ನೀರು ನಿರ್ವಹಣೆ ಮುಖ್ಯವಾಗಿದ್ದು ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ” ಎಂದು ನೀರಾವರಿ ಸಚಿವರು ಹೇಳಿದರೆ “ಜನಸಂಖ್ಯೆಗೆ ಅನುಗುಣವಾಗಿ ನಮ್ಮಲ್ಲಿ ಮದ್ಯದಂಗಡಿಗಳು ಇಲ್ಲದಿರುವುದರಿಂದ ಹೊಸ ಬಾರ್‌ ಗಳನ್ನು ಆರಂಭಿಸುವ ಚಿಂತನೆ ಸರಕಾರಕ್ಕಿದೆ. ಜನಸಂಖ್ಯೆ ಬೆಳೆಯುತ್ತಿದ್ದು ರಾಜ್ಯದಲ್ಲಿ ಇನ್ನು 2 ಸಾವಿರ ಬಾರ್‌ ಗಳನ್ನು ಆರಂಭಿಸಬೇಕಾಗಿದೆ” ಎಂದು ಅಬಕಾರಿ ಸಚಿವರು ಹೇಳಿದ್ದಾರೆ. 2009-10 ನೇ ಸಾಲಿನಲ್ಲಿ ಇಲಾಖೆ 6,550 ಕೋಟಿ ರೂ. ಗುರಿ ಇಟ್ಟುಕೊಂಡಿದ್ದು ಡಿಸೆಂಬರ್ ಅಂತ್ಯದವರೆಗೆ ಈಗಾಗಲೇ 6,900 ಕೋಟಿ ರೂ. ಮೀರಿ ಆದಾಯ ಗಳಿಸಿದೆಯಂತೆ. ಮಾರ್ಚ್ ಅಂತ್ಯಕ್ಕೆ ಈ ಆದಾಯ ಮತ್ತಷ್ಟು ಏರಿಕೆಯಾಗಲಿದೆಯೆಂಬ ಆಶಾಭಾವನೆಯನ್ನು ಮಾನ್ಯ ಸಚಿವರು ಹೊಂದಿದ್ದಾರೆ. ಅವರು ನೀಡಿದ ಅಂಕಿಸಂಖ್ಯೆ ಪ್ರಕಾರ ಕಳೆದ ಸಾಲಿನಲ್ಲಿ 5,897 ಕೋಟಿ ರೂ. ಬಂದಿದ್ದು ಈ ವರ್ಷ ಒಂದು ಸಾವಿರ ಕೋಟಿ ರೂ. ಹೆಚ್ಚಿನ ಆದಾಯ ಬಂದಿದೆಯಂತೆ. ಇದರಿಂದ ಕರ್ನಾಟಕದಲ್ಲಿ ಕುಡುಕರ ಸಂಖ್ಯೆ ಜಾಸ್ತಿಯಾಗಿದೆಯೋ, ಕುಡಿತದ ಪ್ರಮಾಣ ಜಾಸ್ತಿಯಾಗಿದೆಯೋ ಮಾನ್ಯ ಸಚಿವರೇ ಮುಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳುವುದೊಳಿತು. 

ಸುದ್ದಿಸಂಪಾದಕರು ನೀರಾವರಿ ಖಾತೆಯ ಸುದ್ದಿಯನ್ನು ಕೆಳಭಾಗದಲ್ಲಿ ಸಣ್ಣ ಅಕ್ಷರಗಳಲ್ಲಿ ಪ್ರಕಟಿಸಿದ್ದರೆ ಅಬಕಾರಿ ಖಾತೆಯ ಸುದ್ದಿಯನ್ನು ಮೇಲ್ಬಾಗದಲ್ಲಿ ದಪ್ಪನೆಯ ಅಕ್ಷರಗಳಲ್ಲಿ ಪ್ರಕಟಿಸಿದ್ದಾರೆ. ಹೀಗೆ ಮೇಲೆ ಕೆಳಗೆ ಪ್ರಕಟಿಸಲು ಕಾರಣ ಇವೆರಡೂ ಸುದ್ದಿಗಳ ಮಹತ್ವವನ್ನು ಅರಿತು ಸಂಪಾದಕರು ಮಾಡಿದ ವಿವೇಚನೆಯೋ ಅಥವಾ ಸಚಿವರ/ಜನರ ಅಭಿರುಚಿಯನ್ನು ಅರಿತು ಮಾಡಿದ ವಿವೇಚನೆಯೋ ಓದುಗರೇ ನಿರ್ಧರಿಸುವುದು ಒಳಿತು. ಶಿವನ ಚಿತ್ರದ ಮೇಲೆ/ಕೆಳಗೆ ಪ್ರಕಟಿಸಲು ಮತ್ತೇನಾದರೂ ಬಲವಾದ ಕಾರಣವಿರಬಹುದೇ? ಶಿವನೇ ಈ ವಿಚಾರವಾಗಿ ತೀರ್ಮಾನ ಕೈಗೊಳ್ಳಲಿ ಎಂಬ ಆಶಯವಿರಬಹುದೇ? ಆಥವಾ ಬಾರುಗಳಲ್ಲಿ ಕಂಠಪೂರ್ತಿ ಕುಡಿದು ದಾರಿಯಲ್ಲಿ ತೂರಾಡಿ ಮನೆಸೇರುವ ಮೊದಲೇ ಗಟಾರದಲ್ಲಿ ಬಿದ್ದು ಗೊಟಕ್ ಎಂದು ಸ್ಮಶಾನ ಸೇರಿದರೆ ಮಾತ್ರ ಸ್ಮಶಾನವಾಸಿಯಾದ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯ ಎಂಬ ಸದಾಶಯವಿರಬಹುದೇ? ತೆಂಗಿನಚಿಪ್ಪಿನಲ್ಲಿ ಕುಡಿದರೆ ಇನ್ನೂ ರುಚಿಯಾಗಿರುತ್ತದೆಯೆಂದು ಹಿಂದೊಬ್ಬರು ಸಚಿವರು ಹೇಳಿದ್ದರು. ಅದರ ರುಚಿಯನ್ನು ಕಂಡ ಆ ಸಚಿವರು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಮದ್ಯದಂಗಡಿ ತೆರೆಯುವ ಯೋಜನೆ ಹಾಕಿದ್ದರು. ಅದೇನಾದರೂ ಜಾರಿಗೆ ಬಂದಿದ್ದರೆ ಬೆಂಗಳೂರು ಮುಟ್ಟುವ ಮೊದಲೇ ಪ್ರಯಾಣಿಕರು

ಸ್ವರ್ಗಾರೋಹಣ ಮಾಡುತ್ತಿದ್ದರು. ಎಂತಹ ಮಹೋನ್ನತ ಸಾಧನೆಯನ್ನು ನಮ್ಮ ಸರಕಾರಗಳು ಮಾಡುತ್ತಾ ಬಂದಿವೆ! ರಾಜ್ಯಸರಕಾರಗಳು ತಮ್ಮ ಕಾರ್ಯನಿರ್ವಹಣೆಯನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಸಂವಿಧಾನದ Directive Principles ಪರಿಚ್ಛೇದದಲ್ಲಿ ಈ ಕೆಳಕಂಡಂತೆ ನಿರ್ದೇಶನವಿದೆ: 

"The state shall regard the raising of the level of nutrition and the standard of living of its people and the improvement of public health as among its primary duties and in particular the state shall endeavour to bring about prohibition of the consumption, except for medical purposes of intoxicating drinks and of drugs which are injurious to health”. 

ಮದ್ಯಪಾನ ನಿಷೇಧವನ್ನು ಜಾರಿಗೆ ತರುವುದು ರಾಜ್ಯದ ಆದ್ಯ ಕರ್ತವ್ಯವಾಗಬೇಕು. ಜನರ ಆರೋಗ್ಯವನ್ನು ಸುಧಾರಿಸಬೇಕು. ಅವರಿಗೆ ಪೌಷ್ಟಿಕ ಆಹಾರವನ್ನು ನೀಡಬೇಕು. ಅವರ ಜೀವನ ಮಟ್ಟವನ್ನು ಎತ್ತರಿಸಬೇಕು. ಆರೋಗ್ಯಕ್ಕೆ ಹಾನಿಕಾರಕವಾದ ಮಾದಕವಸ್ತುಗಳ ಸೇವನೆಯನ್ನು ಪ್ರತಿಬಂಧಿಸಬೇಕು ಎಂದೆಲ್ಲಾ ರಾಜ್ಯಾಂಗದ 47ನೆಯ ಪರಿಚ್ಛೇದದಲ್ಲಿ ರಾಜ್ಯಗಳಿಗೆ ಆಡಳಿತ ನಡೆಸುವ ಸ್ಪಷ್ಟ ನಿರ್ದೇಶನವಿದೆ. ಸಂವಿಧಾನದ ಈ ನಿರ್ದೇಶನವನ್ನು ರಾಜ್ಯಸರಕಾರಗಳು ಪಾಲಿಸುತ್ತಿವೆಯೇ? ಇಲ್ಲವೆಂದರೆ ಅಂತಹ ಸರಕಾರಗಳನ್ನು ಏಕೆ ಕಿತ್ತೊಗೆಯಲು ಸಾಧ್ಯವಾಗುತ್ತಿಲ್ಲ? ಕಳ್ಳಭಟ್ಟಿಯನ್ನು ಕುಡಿದು ಸಾಯುತ್ತಾರೆಂಬ ನೆಪದಲ್ಲಿ ಮದ್ಯ ಕುಡಿಸಿ ದುಡ್ಡು ಮಾಡುವುದನ್ನೇ ಪ್ರಧಾನ ನೀತಿಯನ್ನಾಗಿ ಸರಕಾರ ಮಾಡಿಕೊಂಡಂತಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಬೇಕೆಂದು ಕಡ್ಡಾಯವಾಗಿ ಎಲ್ಲರೂ ಮದ್ಯ ಕುಡಿಯಲೇಬೇಕೆಂಬ ಕಾನೂನು ಮಾಡುವುದೊಂದು ಬಾಕಿ ಉಳಿದಿದೆ. ದರೋಡೆಗಳನ್ನು ನಿಲ್ಲಿಸಲು ಆಗುವುದಿಲ್ಲವೆಂದು ರಾಜ್ಯದ ಪೋಲೀಸ್ ಇಲಾಖೆಯನ್ನೇ ರದ್ದುಪಡಿಸಿ ದರೋಡೆಕೋರರಿಗೆ ಲೈಸೆನ್ಸ್ ಕೊಡಬಹುದೆ? ಹಾಗೇನಾದರೂ ಕೊಟ್ಟರೆ ಮದ್ಯದ ದೊರೆಗಳು ಕೊಡುವ ಹಣಕ್ಕಿಂತ ಸಾವಿರಪಟ್ಟು ಹಣವನ್ನು ದರೋಡೆಕೋರರು ತುಂಬಾ ಪ್ರಾಮಾಣಿಕವಾಗಿ ವಿಧಾನಸೌಧಕ್ಕೆ ತಂದು ಮುಟ್ಟಿಸುತ್ತಾರೆ. ಹಾಗೆಂದು ದರೋಡೆಕೋರರಿಗೆ ಲೈಸೆನ್ಸ್ ಕೊಟ್ಟು ಕಾನೂನುಬದ್ಧಗೊಳಿಸಿ ದಂಡಸಂಹಿತೆಯನ್ನು ಕೈಬಿಡಲು ಬರುತ್ತದೆಯೇ? ಮದ್ಯ ಕುಡಿಸಿ ಗಂಡಸರನ್ನು ಸಾಯಿಸಿ ಹೆಣ್ಣುಮಕ್ಕಳಿಗೆ ವಿಧವಾಭತ್ಯೆ ಕೊಡುವ ಭ್ರಷ್ಟಸರಕಾರಗಳು ಎಷ್ಟು ಬೇಗ ಉರುಳಿದರೂ ಅಷ್ಟೂ ನಾಡಿಗೆ ಒಳ್ಳೆಯದು. 

ಪಾನನಿಷೇಧವನ್ನು ಜಾರಿಗೆ ತರುವುದು ಸಾಧ್ಯವಾಗದ ಮಾತು, ಎಲ್ಲಿಯೂ ಯಶಸ್ವಿಯಾಗಿಲ್ಲ ಎಂಬ ವಾದ ಕೇಳಿಬರುತ್ತಿದೆ. ಇದು ನಿನ್ನೆ ಮೊನ್ನೆಯ ವಾದವಲ್ಲ. ಇಂತಹ ವಾದ ಮಂಡಿಸುವವರನ್ನು ಮೀರ್ಸಾದಿಕ್ನ ವಂಶಜರು ಎಂದು ಹೇಳಬೇಕೆನಿಸುತ್ತದೆ. ಏಕೆಂದರೆ ಟಿಪ್ಪೂಸುಲ್ತಾನನ ಕಾಲದಲ್ಲಿಯೂ ಇದೇ ವಾದವನ್ನು ಅಂದಿನ ಹಣಕಾಸುಮಂತ್ರಿಯಾಗಿದ್ದ ಮೀರ್ಸಾದಿಕ್ ಮಂಡಿಸಿದ್ದ. ಅವನಿಗೆ ಟಿಪ್ಪು ಸುಲ್ತಾನ್ ಕೊಟ್ಟ ಉತ್ತರವೇನು ಗೊತ್ತೆ? “ಹಣಕಾಸಿನ ಕಾರಣಗಳಿಂದಾಗಿ ನಾವು ಈ ವಿಚಾರವಾಗಿ ಅಂಜಬೇಕಾಗಿಲ್ಲ; ಹೆದರಬೇಕಾಗಿಲ್ಲ. ಸಂಪೂರ್ಣ ಪಾನನಿಷೇಧವನ್ನು ಜಾರಿಗೆ ತರಲು ನನ್ನ ಹೃದಯ ಹಾತೊರೆಯುತ್ತಿದೆ. ಇದು ಧರ್ಮದ ಪ್ರಶ್ನೆ ಮಾತ್ರವಲ್ಲ. ನಮ್ಮ ಜನರ ಆರ್ಥಿಕ ಸುಸ್ಥಿತಿ ಮತ್ತು ನೈತಿಕ ಉನ್ನತಿ ಮತ್ತು ಎಲ್ಲಕ್ಕೂ ಮಿಗಿಲಾಗಿ ನಮ್ಮ ಯುವಪೀಳಿಗೆಯ ಚಾರಿತ್ರ್ಯನಿರ್ಮಾಣ ಇವೆಲ್ಲವುಗಳ ಬಗ್ಗೆಯೂ ನಾವು ಅವಶ್ಯವಾಗಿ ಚಿಂತಿಸಬೇಕಾಗಿದೆ. ಪಾನನಿಷೇಧವನ್ನು ತಕ್ಷಣವೇ ಜಾರಿಗೆ ತರುವುದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವುಂಟಾಗುತ್ತದೆ ಎಂಬ ನಿಮ್ಮ ಕಳಕಳಿಯನ್ನು ನಾನು ಮೆಚ್ಚುತ್ತೇನೆ. ಆದರೆ ಹೀಗೆಯೇ ಬಿಟ್ಟರೆ ಮುಂದಿನ ಭವಿಷ್ಯ ಏನಾದೀತೆಂಬ ಬಗ್ಗೆ ನಾವು ಯೋಚಿಸಬೇಡವೇ? ನಮ್ಮ ಜನರ ಆರೋಗ್ಯ ಮತ್ತು ನೈತಿಕ ಉನ್ನತಿಗಿಂತ ನಮ್ಮ ರಾಜ್ಯದ ಬೊಕ್ಕಸಕ್ಕೆ ಬರುವ ಆದಾಯವೇ ಹೆಚ್ಚು ಮುಖ್ಯವಾಗಬೇಕೆ?” 

- (ಟಿಪ್ಪುವಿನ ರೆವಿನ್ಯೂ ದಾಖಲೆಗಳು 1787)

ಎರಡು ಶತಮಾನಗಳ ಹಿಂದೆ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಮೈಸೂರು ಹುಲಿ ಟಿಪ್ಪೂಸುಲ್ತಾನ್ ಇಂತಹ ಒಂದು ದಿಟ್ಟನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗಿದ್ದರೆ ಇಂದು ಪ್ರಜಾಪ್ರಭುತ್ವದಲ್ಲಿ ನಮ್ಮ ರಾಜಕೀಯ ಧುರೀಣರಿಗೆ ಏಕೆ ಸಾಧ್ಯವಾಗುತ್ತಿಲ್ಲ? ಭಗೀರಥನು ಶಿವನ ಜಟೆಯಿಂದ ಪಾವನಗಂಗೆ ಹರಿದು ಬರುವಂತೆ ಮಾಡಿ ತನ್ನ ಪೂರ್ವಜರನ್ನು ಬದುಕಿಸಿದರೆ, ನಮ್ಮ ರಾಜಕಾರಣಿಗಳು ಹಳ್ಳಿಹಳ್ಳಿಗಳಿಗೆ ಮದ್ಯವನ್ನು ಹರಿಸಿ ಬಡಜನರನ್ನು ಸಾಯಿಸುತ್ತಿದ್ದಾರೆ. ಶಿವನ ಕೃಪೆಗಿಂತ ಮದಿರಾಪ್ರಿಯರ ಕೃಪಾಕಟಾಕ್ಷದಿಂದಲೇ ರಾಜಕಾರಣಿಗಳು ಅಧಿಕಾರಕ್ಕೆ ಬರುವುದರಿಂದ ಅವರಾದರೂ ಇದರ ನಿಷೇಧಕ್ಕೆ ಏಕೆ ಮುಂದಾಗುತ್ತಾರೆ ಹೇಳಿ. ಇಂದು ಹಳ್ಳಿಗಳಲ್ಲಿ ಕುಡಿಯಲು ನೀರು ಸಿಗುತ್ತದೆಯೋ ಇಲ್ಲವೋ ಮದ್ಯವಂತೂ ಯಥೇಚ್ಛವಾಗಿ ಸಿಗುತ್ತದೆ. ಕುಡಿಯದೇ ಇರುವ ಗಂಡಿಗೆ ಮಗಳನ್ನು ಕೊಡಬೇಕೆಂದು ಹೆಣ್ಣು ಹೆತ್ತವರು ಬೆಂಗಳೂರಿನಿಂದ ಬೀದರ್ ಗೆ ಹೊರಟರೆ ಒಂದು ಗಂಡೂ ಸಿಕ್ಕುವುದಿಲ್ಲ, ಅವರಲ್ಲಿಯೇ ಕಡಿಮೆ ಕುಡಿಯುವ ಗಂಡಿಗೆ ಮಗಳನ್ನು ಮದುವೆಮಾಡಿಕೊಡದೆ ಬೇರೆ ಗತಿಯಿಲ್ಲ! ಇದು ನಮ್ಮ ಆಳರಸರ ಸಾಧನೆ! ಊರಿಗೆ ಬಂದವಳು ನೀರಿಗೆ ಬರುವುದಿಲ್ಲವೇ? ಎಂದು ಹೇಳುವ ಗಾದೆಮಾತಿನ ಕಾಲ ಹೋಯಿತು. ಈಗ ಊರಿಗೆ ಬಂದವನು ಬಾರಿಗೆ ಬರುವುದಿಲ್ಲವೇ? ಎಂಬ ಆಧುನಿಕ ಗಾದೆಯ ಕಾಲ ಬಂದಿದೆ. ಹಳ್ಳಿಗಳಲ್ಲಿ ಹಿಂದೆ ಇದ್ದ ಕಾಫಿ, ಟೀ ಕ್ಲಬ್ಬುಗಳು ಹೋಗಿ ಲಾಭದಾಯಕವಾದ ಬಾರ್ ಅಂಡ್ ರೆಸ್ಟೋರೆಂಟ್‌ ಗ ಳು ಬಂದಿವೆ. ಊರಮಧ್ಯದ ಬೀದಿಗಳಲ್ಲಿ ನಾಚಿಕೆಯಿಲ್ಲದೆ ನೇತುಹಾಕಿರುವ ಮದ್ಯದ ಅಂಗಡಿಗಳ ನಾಮಫಲಕಗಳು ನಮ್ಮ ಧರ್ಮಸಂಸ್ಕೃತಿಯನ್ನೇ ನಡುಬೀದಿಯಲ್ಲಿ ನೇಣುಗಂಬಕ್ಕೆ ನೇತುಹಾಕಿದಂತಾಗಿದೆ: ಧರ್ಮಸ್ಥಳ ಮಂಜುನಾಥ ಬಾರ್ ಅಂಡ್ ರೆಸ್ಟೋರೆಂಟ್, ರಾಘವೇಂದ್ರ ಬಾರ್ ಅಂಡ್ ರೆಸ್ಟೋರೆಂಟ್, ಶ್ರೀ ವೆಂಕಟೇಶ್ವರ ಬಾರ್ ಅಂಡ್ ರೆಸ್ಟೋರೆಂಟ್, ಶ್ರೀ ವಿಷ್ಣುಪ್ರಸಾದ್ ವೈನ್, ಶ್ರೀ ಲಕ್ಷ್ಮೀ ಬಾರ್ ಅಂಡ್ ರೆಸ್ಟೋರೆಂಟ್, ಶ್ರೀ ರೇಣುಕಾಂಬಾ ಬಾರ್ ಅಂಡ್ ರೆಸ್ಟೋರೆಂಟ್! ನಮ್ಮ ಎಲ್ಲಾ ದೇವಾನುದೇವತೆಗಳು ಈ ಆಧುನಿಕ ತೀರ್ಥಪ್ರಸಾದವನ್ನು ಮನೆಮನೆಗೆ ಮುಟ್ಟಿಸುವಲ್ಲಿ ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತಿರುವಂತೆ ತೋರುತ್ತಿವೆ. ಎಷ್ಟೇ ಆಗಲಿ ನಮ್ಮ ದೇವರು ಭಕ್ತಪರಾಧೀನ ಅಲ್ಲವೇ? 

ಒಂದೂರಲ್ಲಿ ಒಬ್ಬ ಮಹಾ ಕುಡುಕನಿದ್ದ. ಅವನು ಮನೆಗೆ ಹಿಂದಿರುಗುವಾಗ ಕುಡಿತದ ಅಮಲಿನಲ್ಲಿ ದಾರಿತಪ್ಪಿ ಕಾಡು ಸೇರಿದ. ಸಂಜೆಯವರಿಗೆ ಸುತ್ತಾಡಿದರೂ ಊರಿನ ದಾರಿ ಸಿಗಲಿಲ್ಲ. ಹತ್ತಿರದಲ್ಲಿಯೇ ಒಂದು ದುರ್ಗಾದೇವಿಯ ಹಾಳು ದೇಗುಲ ಕಾಣಿಸಿತು. ಅದರ ಪಕ್ಕದಲ್ಲಿ ಒಂದು ಹೊಂಡ ಇತ್ತು. ಕುಡುಕ ದೇಗುಲದೊಳಗೆ ಹೋಗಿ ದುರ್ಗಾದೇವಿಗೆ ಅಡ್ಡಬಿದ್ದ, ನಶೆ ಇಳಿದಿತ್ತು. ಆದರೆ ಮನಸ್ಸು ಕುಡಿಯಲು ಹಾತೊರೆಯುತ್ತಿತ್ತು. ಕಾಡಿನಲ್ಲಿ ಎಲ್ಲಿಯೂ ಕುಡಿಯಲು ಸಿಗುವಂತಿರಲಿಲ್ಲ. ಮನಸ್ಸಿನಲ್ಲಿ ತಟ್ಟನೆ ಒಂದು ಆಲೋಚನೆ ಸುಳಿಯಿತು. ಕಣ್ಮುಚ್ಚಿಕೊಂಡು ದೇವಿಯನ್ನು ಬೇಡಿಕೊಂಡ: “ಹೇ ದೇವಿ, ನಾನು ದಾರಿತಪ್ಪಿ ನಿನ್ನ ಸನ್ನಿಧಿಗೆ ಬಂದಿದ್ದೇನೆ. ಮನೆಗೆ ಹೋದರೆ ಹೆಂಡತಿ ಮಕ್ಕಳ ಕಾಟ. ಈ ಸಂಸಾರ ನನಗೆ ಸಾಕಾಗಿದೆ. ಇನ್ನು ಬದುಕುವ ಆಸೆ ಉಳಿದಿಲ್ಲ. ಕೃಪೆಮಾಡಿ ನಿನ್ನ ದೇಗುಲದ ಪಕ್ಕದಲ್ಲಿರುವ ಹೊಂಡದ ನೀರನ್ನು ಹೆಂಡ ಮಾಡಿಬಿಟ್ಟರೆ ಇಲ್ಲಿಯೇ ಕುಡಿದು ನಿನ್ನ ಸನ್ನಿಧಿಯಲ್ಲಿ ಸಾಯುತ್ತೇನೆ”. ಹೀಗೆಂದು ದೇವಿಗೆ ಅಡ್ಡಬಿದ್ದು ಹೊರಗೆ ಬಂದು ನೋಡಿದರೆ ಕುಡುನಿಗೆ ಆಶ್ಚರ್ಯವೋ ಆಶ್ಚರ್ಯ! ಅವನ ಬೇಡಿಕೆಯನ್ನು ಮನ್ನಿಸಿ ದುರ್ಗಾದೇವಿಯು ಹೊಂಡದ ನೀರನ್ನೆಲ್ಲಾ ಹೆಂಡವನ್ನಾಗಿ ಮಾಡಿದ್ದಳು. ಕುಡುಕನ ಸಂತೋಷಕ್ಕೆ ಪಾರವೇ ಇಲ್ಲ. ಕುಡಿದ, ಕುಡಿದ, ಸಿಕ್ಕಾಪಟ್ಟೆ ಕುಡಿದ. ನಶೆ ಏರಿತು, ಕಣ್ಣು ಮಂಜಾಯಿತು, ನಿದ್ರೆ ಆವರಿಸಿತು. ರಾತ್ರಿ ಕಳೆದದ್ದೇ ಗೊತ್ತಾಗಲಿಲ್ಲ. ಬೆಳಗಿನ ಅರುಣೋದಯ. ಹಕ್ಕಿಗಳ ಕಲರವ. ತಂಪನೆಯ ಗಾಳಿ. ಸೊಂಪಾದ ನಿದ್ರೆಯಿಂದ ಕುಡುಕ ಎಚ್ಚೆತ್ತು ಕಣ್ತೆರೆದು ನೋಡಿದರೆ ಎದುರಿಗೆ ಸಾಕ್ಷಾತ್ ದುರ್ಗಾದೇವಿ ಪ್ರತ್ಯಕ್ಷಳಾಗಿ ನಿಂತಿದ್ದಳು. “ಏನಯ್ಯಾ ನೀನಿನ್ನೂ ಬದುಕಿದ್ದೀಯಲ್ಲಾ? ನಿನ್ನೆ ಸಂಜೆ ಈ ಹೊಂಡದ ನೀರನ್ನು ಹೆಂಡ ಮಾಡಿದರೆ ಸಾಯುವುದಾಗಿ ನನಗೆ ಮಾತು ಕೊಟ್ಟಿದ್ದೆ. ಕೊಟ್ಟ ಮಾತಿನಂತೆ ಏಕೆ ನಡೆದುಕೊಳ್ಳಲಿಲ್ಲ?” ಎಂದು ದೇವಿ ಕೇಳಿದಳು. ಅದಕ್ಕೆ ಆ ಕುಡುಕ ನಸು ನಗುತ್ತಾ ಹೀಗೆ ಉತ್ತರಿಸಿದ: "ಕ್ಷಮಿಸು ತಾಯೇ! ನೀನು ಜಗನ್ಮಾತೆ". ಈ ಲೋಕವನ್ನೇ ಬಲ್ಲವಳು. ನಿನಗೆ ತಿಳಿಯದ ವಿಷಯ ಈ ಜಗತ್ತಿನಲ್ಲಿ ಏನಿದೆ? "ಭೂತ ಭವಿಷ್ಯ ವರ್ತಮಾನಗಳೆಲ್ಲವನ್ನೂ ಬಲ್ಲವಳು ನೀನು. ಆದರೆ ನಿನಗೆ ಅಷ್ಟೂ ಬುದ್ದಿ ಬೇಡವೇ: ಒಬ್ಬ ಕುಡುಕನ ಮಾತನ್ನು ನಂಬಬಾರದೆಂದು!” 

ಸಹೃದಯ ಓದುಗರೇ! ಪಾನನಿಷೇಧವನ್ನು ಜಾರಿಗೆ ತರುವುದಾಗಿ ಪುಂಖಾನುಪುಂಖವಾಗಿ ಭರವಸೆ ಕೊಟ್ಟ ಕೆಲವರು ರಾಜಕಾರಣಿಗಳನ್ನು ನಂಬಿ ಮೋಸಹೋದ ನಮ್ಮ ಪರಿಸ್ಥಿತಿಯೂ ಆ ದುರ್ಗಾದೇವಿಯಂತಾಗಿದೆ! ಇಲ್ಲಿಗೆ ಸುಮಾರು 20 ವರ್ಷಗಳ ಹಿಂದೆ ನಾವು ಕೈಗೊಂಡಿದ್ದ ಪಾನನಿಷೇಧ ಆಂದೋಲನಕ್ಕೆ ನಾಡಿನ ಎಲ್ಲಾ ಮಠಾಧೀಶರು ಮತ್ತು ಸಾಮಾಜಿಕ ಸಂಘಟನೆಗಳಿಂದ ಬೆಂಬಲ ದೊರಕಿತ್ತು. 90 ರ ದಶಕದಲ್ಲಿ ನಡೆದ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಿದ್ದ ಗಣ್ಯಮಾನ್ಯ ವ್ಯಕ್ತಿಗಳೆಲ್ಲಾ ನಮ್ಮನ್ನು ಕುರಿತು ಪ್ರಶಂಸೆಯ ಮಾತುಗಳನ್ನು ಆಡಿದ್ದೇ ಆಡಿದ್ದು. ಆದು ಫಲಪ್ರದವಾಗಿ ಜೆ. ಎಚ್. ಪಟೇಲರು ಮುಖ್ಯಮಂತ್ರಿಗಳಾಗಿದ್ದಾಗ ಇನ್ನೇನು ಪಾನನಿಷೇಧ ಕಾಯಿದೆ ಜಾರಿಗೆ ಬರುತ್ತದೆಯೆಂಬ ನಿರೀಕ್ಷೆ ಇತ್ತು. ನಾಡಿನ ಪ್ರಮುಖ ಮಠಾಧೀಶರನ್ನೂ, ಸಮಾಜಪ್ರಮುಖರನ್ನೂ, ಅನೇಕ ಶಾಸಕರನ್ನೂ ಸಂಘಟಿಸಿ ಬೆಂಗಳೂರಿನ ನಮ್ಮ ತರಳಬಾಳು ಕೇಂದ್ರದಲ್ಲಿ ಕರೆದಿದ್ದ ಆಂದೋಲನದ ಸಭೆ ವಿಧಾನಮಂಡಲದ ಸಭೆಯನ್ನು ಮಂಕುಗೊಳಿಸಿತ್ತು. ಆಗ ಮುಖ್ಯಮಂತ್ರಿ ಪಟೇಲರು ಮತ್ತು ನಮ್ಮ ಮಧ್ಯೆ ಸಂಧಾನಕಾರರಾಗಿ ಕಾರ್ಯನಿರ್ವಸಿದ ಕೆಲವಾರು ರಾಜಕಾರಣಿಗಳು ನಮ್ಮನ್ನು ನಂಬಿಸಿ ಮೋಸಗೊಳಿಸಿದರು. ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದ ಮೇಲೆ ಪಟೇಲರು ಖಾಸಗಿಯಾಗಿ ಭೇಟಿಯಾದಾಗ ಹೇಳಿದ ಮಾತು: “ತಮ್ಮನ್ನು ನೋಡಿದಾಗಲೆಲ್ಲಾ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಆಗಲಿಲ್ಲವಲ್ಲಾ ಎಂಬ ಅಪರಾಧಿಪ್ರಜ್ಞೆ ನನ್ನನ್ನು ಬಲವಾಗಿ ಕಾಡಿಸುತ್ತಿದೆ!” 

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 10.2.2010.