ಹೂವರಳಿ ಕಲ್ಲಾಗಿ....
ಇದೇನಿದು! ಸರ್ವಜ್ಞನ ಒಗಟಿನ ವಚನವನ್ನು ತಿರುವುಮುರುವಾಗಿ ಹೇಳಿದ್ದೀರೆಂದು ನೀವು ಕೇಳಬಹುದು. ಒಂದು ವಸ್ತುವಿನಲ್ಲಿರುವ ಕಾಠಿಣ್ಯ ಹೋಗಿ ಅದರಲ್ಲಿ ಮೃದುತ್ವ ಹೇಗೆ ಉಂಟಾಗಬಹುದು ಎಂಬುದಕ್ಕೆ ಸರ್ವಜ್ಞ ಕೊಟ್ಟಿರುವ ಉದಾಹರಣೆ ಕಲ್ಲರಳಿ ಹೂವಾಗಿ ಅಂದರೆ ಸುಣ್ಣದ ಕಲ್ಲು. ಆದರೆ ನಾವಿಲ್ಲಿ ಹೇಳಬಯಸಿರುವುದು ಅದರ ತದ್ವಿರುದ್ಧವಾದ ಪ್ರಕ್ರಿಯೆಯನ್ನು ಕುರಿತು. ತೊಟ್ಟಿಲಲ್ಲಿ ಕಿಲಕಿಲನೆ ನಗುತ್ತ ಕ್ಷಣಾರ್ಧದಲ್ಲಿ ನಿದ್ದೆ ಹೋದ ಆ ಮುಗ್ಧ ಮಗುವಿನ ಕೋಮಲ ಮನಸ್ಸು ವಯಸ್ಸು ಕಳೆದಂತೆ ಹೇಗೆ ನಿದ್ದೆಕೆಡಿಸಿಕೊಂಡು ಕಲುಷಿತಗೊಳ್ಳುತ್ತದೆ ಎಂಬ ಜೀವನದ ಒಗಟನ್ನು ಕುರಿತು. ಉದಾಹರಣೆಗೆ ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳ ಮನೋಧರ್ಮ ವಿಭಿನ್ನ ವಯಸ್ಸಿನಲ್ಲಿ ವಿಭಿನ್ನ ತೆರನಾಗಿರುತ್ತದೆ. ವಿಶೇಷವಾಗಿ ನರ್ಸರಿ ಮತ್ತು ಪೈಮರಿ ಶಾಲೆಯ ಮಕ್ಕಳಿಗಂತೂ ಶಿಕ್ಷಕ/ಶಿಕ್ಷಕಿಯರು ಸಾಕ್ಷಾತ್ ವಿದ್ಯಾಧಿದೇವತೆ ಸರಸ್ವತಿಯ ಪ್ರತಿರೂಪವಾಗಿರುತ್ತಾರೆ. ಶಿಕ್ಷಕರ ಮಾತೇ ಮಕ್ಕಳಿಗೆ ವೇದವಾಕ್ಯ. ಅವರು ಎಷ್ಟೇ ತಪ್ಪು ಪಾಠ ಮಾಡಿದರೂ ಅದನ್ನು ಪ್ರಶ್ನಿಸಲು ಹೋಗುವುದಿಲ್ಲ. ನೀವು ಕಾಲೇಜಿನಲ್ಲಿ ಗಣಿತದ ಹೆಸರಾಂತ ಪ್ರೊಫೆಸರ್ ಆಗಿರಬಹುದು. ತರಗತಿಯಲ್ಲಿ ಶಿಕ್ಷಕರು ತಪ್ಪಾಗಿ ಹೇಳಿಕೊಟ್ಟಿರುವ ಲೆಕ್ಕವನ್ನು ಗಮನಿಸಿ ನೀವು ತಿದ್ದಲು ಮುಂದಾದರೆ ನಿಮ್ಮ ಮಗು ನಿಮ್ಮನ್ನೇ ಪ್ರತಿಭಟಿಸುತ್ತದೆ. ನಮ್ಮ ಮಿಸ್ ಹೇಳಿಕೊಟ್ಟಿರುವುದೇ ಸರಿ ಎಂದು ವಾದಿಸುತ್ತದೆ. ಯಾವ ಕಾರಣಕ್ಕೂ ತನ್ನ ಮಿಸ್ ತಪ್ಪು ಹೇಳಿಕೊಟ್ಟಿದ್ದಾಳೆಂದು ಸುತರಾಂ ಒಪ್ಪುವುದಿಲ್ಲ. ಎಲ್ಲಿಯೋ ಕೇಳಿದ ನೆನಪು. ಶಾಲೆಯಿಂದ ಮನೆಗೆ ಹಿಂದಿರುಗಿದಾಗ ಮಗು ಮಾತು ಮಾತಿಗೂ “You know what our Miss says? ಎಂದು ನೀವು ಕಿವಿಗೊಟ್ಟು ಆಲಿಸುವವರೆಗೂ ಬಿಡುವುದಿಲ್ಲ. ಈ ವಯಸ್ಸಿನಲ್ಲಿ ಮಗುವಿನ ಮನಸ್ಸು ಕೋಮಲವೂ, ನಿರ್ಮಲವೂ ಆಗಿರುತ್ತದೆ. ಅದೇ ಮಗು ನಿಮ್ಮ ಮುದ್ದಿನ ಮಗ/ಮಗಳಾಗಿ ಬೆಳೆಯುತ್ತಾ ಪ್ರೌಢಶಾಲೆಯ ಹಂತಕ್ಕೆ ಬಂದಾಗ ನಿಮ್ಮೊಂದಿಗೆ ಮಾತನಾಡುವ ರೀತಿಯೇ ಬೇರೆ. You know what my friend says? ಎನ್ನುತ್ತಾನೆ/ಳೆ. ಶಿಕ್ಷಕರ ಮೇಲಿದ್ದ ಮಮಕಾರ ಸ್ನೇಹಿತರತ್ತ ತಿರುಗುತ್ತದೆ. ಅಲ್ಲಿ ಸ್ವಾರ್ಥ ಎಂಬುದಿರುವುದಿಲ್ಲ, ಅದೇ ಮಗ/ಮಗಳು ಯುವಕ/ಯುವತಿಯರಾಗಿ ಬೆಳೆದು ಕಾಲೇಜು ಮೆಟ್ಟಿಲು ಹತ್ತಿದಾಗ ಮಾತನಾಡುವ ಧಾಟಿಯೇ ಬೇರೆ: “You know what I say?, ಇಂಗ್ಲೀಷ್ ಲಿಪಿಯಲ್ಲಿ ಕನ್ನಡದಂತೆ ಒತ್ತಕ್ಷರವಿಲ್ಲದಿದ್ದರೂ ಇಲ್ಲಿರುವ ಐ ಅಕ್ಷರವನ್ನು ಮಾತ್ರ ಒಂದು ದೃಷ್ಟಿಯಿಂದ ಒತ್ತಕ್ಷರವೆಂದೇ ಹೇಳಬೇಕು. ಸ್ನೇಹಿತರ ಮೇಲಿದ್ದ ಮಮಕಾರ ತನ್ನತ್ತ ತಿರುಗಿ ತನ್ನೊಳಗೆ ಹುದುಗಿರುವ ಅಹಂಕಾರದಲ್ಲಿ ಗೂಡುಕಟ್ಟಿಕೊಳ್ಳುತ್ತದೆ. ಇಲ್ಲಿಂದ ಮುಂದಕ್ಕೆ ಈ ಅಹಂಕಾರ (I-ness = ego) ಹೆಚ್ಚು ಹೆಚ್ಚು ಬೆಳೆಯುತ್ತಾ ಹೋಗುತ್ತದೆ. ಯಾರ ಮಾತನ್ನೂ ಕೇಳದ, ತನಗೆ ತಿಳಿದಂತೆ ಮಾಡುವ, ತನ್ನದೇ ಸರಿ ಎಂದು ವಾದಿಸುವ ಪ್ರವೃತ್ತಿ ಮೇರೆ ಮೀರಿ ಬೆಳೆಯುತ್ತದೆ. ಪ್ರತಿಭಟನಾ ಮನೋಭಾವವೂ ಹೆಚ್ಚುತ್ತದೆ. ಮನಸ್ಸಿನಲ್ಲಿ ಕುಟಿಲತೆ ಮನೆಮಾಡುತ್ತದೆ. ಮುಂದೆ ಮದುವೆಯಾಗಿ ಮಡದಿ ಮನೆಗೆ ಬಂದಾಗ ಎರಡೂ ಐ-ಗಳು ಸಮಸ್ಪರ್ಧಿಯಾಗಿದ್ದರೆ ದೇವರೇ ಕಾಪಾಡಬೇಕು. ಗಂಡ ಹೆಂಡತಿ ಹಣಾಹಣಿ ಸೆಣಸಾಡುವ ಟ(ಟೈ)ಗರುಗಳಂತಾಗುತ್ತಾರೆ! ಯಾರೂ ಸೋಲನ್ನೊಪ್ಪಲು ತಯಾರಾಗದೆ ಜಿದ್ದಿನ ಮನೋಭಾವ ಬೆಳೆಸಿಕೊಂಡು ಜೀವನದಲ್ಲಿ ಸುಖವನ್ನು ಕಳೆದುಕೊಳ್ಳುತ್ತಾರೆ. ಇಬ್ಬರ ಮಧ್ಯೆ ಗಾಢವಾದ ಪ್ರೀತಿಯ ಬೆಸುಗೆ ಇದ್ದರೆ ಅವೆರಡು ಐ-ಗಳು ಒಂದಾಗಿ ಸ್ನೇಹಿತರೊಂದಿಗೆ ಮಾತನಾಡುವಾಗ “You know what my wife says?” ಎಂಬ ಒಲುಮೆಯ ಉದ್ಘಾರಕ್ಕೆ ದಾರಿಮಾಡಿಕೊಡುತ್ತದೆ. ಕಾಲಘಟ್ಟ ಸರಿದಂತೆ ಶರೀರ ದುರ್ಬಲವಾಗಿ ಜೀವನಸಂಧ್ಯೆಯಲ್ಲಿ ಮಕ್ಕಳ ಮೇಲೆ ಅವಲಂಬಿತರಾಗಿರುವ ವೃದ್ಧ ತಂದೆ-ತಾಯಿಗಳ ಬಾಯಿಂದ ಕೇಳಿಬರುವ ಮಾತೆಂದರೆ: “You know what my son says?" ವೈದ್ಯಕೀಯಶಾಸ್ತ್ರದಲ್ಲಿ ಪೀಡಿಯಾಟ್ರಿಕ್ಸ್ ಮತ್ತು ಜೀರಿಯಾಟ್ರಿಕ್ಸ್ ಸಮಸ್ಯೆಗಳು ಒಂದೇ ತೆರನಾಗಿರುತ್ತವೆ ಎಂದು ಹೇಳುತ್ತಾರೆ. ಶರೀರದ ಇತಿಬಾಧೆಗಳನ್ನು ಕುರಿತು ಈ ಮಾತನ್ನು ಹೇಳಿದರೆ ವಿಭಿನ್ನ ವಯಸ್ಸಿನಲ್ಲಿ ತಂದೆತಾಯಿಗಳ ಮತ್ತು ಮಕ್ಕಳ ಸಂಬಂಧಕ್ಕೂ ಸಹ ಈ ಮಾತನ್ನು ವಿಸ್ತರಿಸಿ ಹೇಳಬಹುದೇನೋ. ಬಾಲ್ಯದಲ್ಲಿ ತಂದೆತಾಯಿಗಳು ಮಕ್ಕಳನ್ನು ಹೊಡೆದು ಬಡಿದು ಗದರಿಸಿದಂತೆ ಮಕ್ಕಳು ದೊಡ್ಡವರಾದ ಮೇಲೆ ವಯಸ್ಸಾದ ತಂದೆತಾಯಿಗಳನ್ನು ಗದರಿಸಿ, ಬೆದರಿಸಿ, ಹೊಡೆಯುವುದನ್ನೂ ನೀವು ನೋಡಿರಬಹುದಲ್ಲವೇ! ಗಂಡು ಮಕ್ಕಳಿಲ್ಲವೆಂದು ಕಂಡ ಕಂಡ ದೇವರಿಗೆ ಹರಕೆ ಹೊತ್ತು ಹಡೆದ ತಾಯಿ ತನ್ನ ಮಗನಿಂದ ಹೊಟ್ಟೆಯಲ್ಲಿದ್ದಾಗಲೂ ಒದೆಸಿಕೊಳ್ಳುತ್ತಾಳೆ; ಹುಟ್ಟಿದ ಮೇಲೂ ಒದೆಸಿಕೊಳ್ಳುತ್ತಾಳೆ. ಒಂದು ವ್ಯತ್ಯಾಸವೆಂದರೆ ಹೊಟ್ಟೆಯೊಳಗೆ ತಿಂದ ಒದೆತ ಸ್ವರ್ಗಸುಖ; ಹುಟ್ಟಿದ ಮೇಲೆ ತಿಂದ ಒದೆತ ನರಕಯಾತನೆ!
ಬಾಲ್ಯದಲ್ಲಿ ಮುಗ್ಧತೆಯಿಂದ ಅಥವಾ ಕುತೂಹಲದಿಂದ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ವ್ಯವಧಾನ ತಂದೆತಾಯಿಗಳಿಗೆ ಇರುವುದಿಲ್ಲ. ನಮ್ಮ ಭಾರತೀಯ ಸಮಾಜದಲ್ಲಿ ಮಕ್ಕಳು ಪ್ರಶ್ನೆಗಳನ್ನು ಕೇಳುವುದೇ ಒಂದು ಅಪರಾಧ ಅಥವಾ ಹಿರಿಯರಿಗೆ ತೋರಿಸುವ ಅಗೌರವವೆಂದು ಪರಿಗಣಿಸಲಾಗಿದೆ. ಪ್ರಶ್ನಿಸಿದರೆ ತಲೆಹರಟೆ, ಎದುರಾಡುತ್ತಾನೆ ಎಂಬ ಹಣೆ ಪಟ್ಟಿ ಹಚ್ಚುತ್ತಾರೆ. ಭಾರತೀಯ ಸಮಾಜ ಮಕ್ಕಳಿಗೆ ಚಿಕ್ಕಂದಿನಿಂದಲೂ ಹಿರಿಯರನ್ನು ಪ್ರಶ್ನಿಸಬಾರದು ಎಂಬ ಶಿಷ್ಟಾಚಾರವನ್ನು ಕಲಿಸಿಕೊಡುತ್ತದೆ. ಅಪ್ಪಿತಪ್ಪಿ ಈ ರಿವಾಜಿಗೆ ವ್ಯತಿರಿಕ್ತವಾಗಿ ನಡೆದುಕೊಂಡು ಅವರೇನಾದರೂ ಹಿರಿಯರನ್ನು ಪ್ರಶ್ನಿಸಿದರೆ: ಚೋಟುದ್ದ ಇಲ್ಲ ಪ್ರಶ್ನೆ ಮಾಡುತ್ತೀಯಾ, ತಲೆಪ್ರತಿಷ್ಟೆ?” ಎಂದು ಜೋರುಮಾಡಿ ಕೆನ್ನೆಗೆ ತಟ್ಟುತ್ತಾರೆ. ಪರಿಣಾಮವಾಗಿ ಇನ್ನೆಂದೂ ಯಾರನ್ನೂ ಏನನ್ನೂ ಕೇಳಬಾರದು ಅಂತಹ ಮೌನದೀಕ್ಷೆಯನ್ನು ಮಕ್ಕಳು ಪಡೆಯುತ್ತವೆ. ಅವರ ಬುದ್ದಿಯ ವಿಕಾಸಕ್ಕೆ ತಡೆಗೋಡೆಯುಂಟಾಗುತ್ತದೆ. ವಾಸ್ತವವಾಗಿ ಮಕ್ಕಳು ಕುತೂಹಲದಿಂದ ಕೇಳುವ ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲದೆ ಹಿರಿಯರು ತಬ್ಬಿಬ್ಬಾಗುವುದರಿಂದ ಅವರ ಪ್ರತಿಷ್ಠೆಗೆ ಕೊಡಲಿ ಪೆಟ್ಟು ಬೀಳುತ್ತದೆ. ಹಿರಿಯರು ಹೇಳಿದ್ದನ್ನು ಕೇಳಿ ಸುಮ್ಮನಿದ್ದರೆ ವಿಧೇಯತೆ. ಆದರೆ ಆ ವಿಧೇಯತೆಯ ಮೂಲ ಭಯವಾಗಿದ್ದರೆ ಅಪಾಯಕಾರಿ. ಭಯ ಇರುವವರೆಗೂ ವಿಧೇಯತೆ ಇರುತ್ತದೆ. ಭಯ ಹೊರಟುಹೋದ ಮರುಗಳಿಗೆಯಲ್ಲಿಯೇ ಅವಿಧೇಯತೆ ಆರಂಭವಾಗುತ್ತದೆ. ಆದಕಾರಣ ಗುರುಹಿರಿಯರಲ್ಲಿ ಭಯಭಕ್ತಿ ಇರಬೇಕು ಎಂದು ಹೇಳುವುದಕ್ಕಿಂತ ಶ್ರದ್ಧಾಭಕ್ತಿ ಇರಬೇಕು ಎಂದು ಹೇಳುವುದು ಹೆಚ್ಚು ಸೂಕ್ತ. ಭಕ್ತಿಯ ಮೂಲ ಶ್ರದ್ದೆಯಾಗಬೇಕೇ ಹೊರತು ಭಯ ಆಗಬಾರದು. ಶ್ರದ್ದೆಯಿಂದ ಕೂಡಿದ ಭಕ್ತಿ ಶಾಶ್ವತ, ಭಯದಿಂದ ಕೂಡಿದ ಭಕ್ತಿ ನಶ್ವರ. ಹಿರಿಯರಲ್ಲಿ ವಿಧೇಯತೆ ಇರಬೇಕು, ನಿಜ. ಆದರೆ ಪ್ರಶ್ನೆ ಮಾಡಬಾರದು ಎಂದು ನಿರೀಕ್ಷಿಸುವುದು ತಪ್ಪು.
ಈ ವಿಚಾರದಲ್ಲಿ ಭಗವದ್ಗೀತೆಯು ಹೇಳುವ ಮಾತು ತುಂಬಾ ಅರ್ಥಪೂರ್ಣವಾಗಿದೆ: ತದ್ವಿದ್ದಿ ಪ್ರಣಿಪಾತೇನ ಪರಿಪ್ರಶ್ನೆನ ಸೇವಯಾ (4.34), ಗುರುಹಿರಿಯರ ಸೇವೆಯನ್ನು ಮಾಡು. ಅವರು ಹೇಳುವ ಮಾತನ್ನು ಶ್ರದ್ದೆಯಿಂದ ಕೇಳು, ಹಿರಿಯರು ಹೇಳುತ್ತಾರೆಂಬ ಒಂದೇ ಕಾರಣಕ್ಕಾಗಿ ಅವರು ಹೇಳಿದ್ದೆಲ್ಲವನ್ನೂ ಸರಿ ಎಂದು ವಿಚಾರಮಾಡದೆ ನಂಬಬೇಡ. ಪ್ರಶ್ನೆ, ಪ್ರತಿಪ್ರಶ್ನೆಗಳನ್ನು ಕೇಳಿ ನಿನ್ನ ಮನಸ್ಸಿನ ಅನುಮಾನಗಳನ್ನು ಬಗೆಹರಿಸಿಕೋ ಎಂಬುದು ಇದರ ತಾತ್ಪರ್ಯ.
ಮಕ್ಕಳು ಎಷ್ಟೇ ದೊಡ್ಡವರಾದರೂ ಭಾರತೀಯ ತಂದೆತಾಯಿಗಳು ಅವರನ್ನು ನೋಡುವ ದೃಷ್ಟಿ ಬದಲಾಗುವುದಿಲ್ಲ. ಎಷ್ಟೇ ವಯಸ್ಸಾದರೂ ಅವರಿಗೆ ಮಕ್ಕಳು ಮಕ್ಕಳೇ. ತಾವು ಹೇಳಿದಂತೆ ನಡೆಯಬೇಕೆಂದು ಅವರ ನಿರೀಕ್ಷೆ, ಮಕ್ಕಳು ಬೆಳೆದಂತೆ ಅವರೊಂದಿಗೆ ತಂದೆ-ತಾಯಿಗಳು ಹೇಗೆ ವರ್ತಿಸಬೇಕೆಂದು ಬೋಧಿಸುವ ಅತ್ಯಂತ ಲೋಕಾನುಭವವುಳ, ಸೂಕ್ತಿಯೊಂದು ಹೀಗಿದೆ:
ಲಾಲಯೇತ್ ಪಂಚ ವರ್ಷಾಣಿ ದಶ ವರ್ಷಾಣಿ ತಾಡಯೇತ್ |
ಪ್ರಾಪ್ತೆ ತು ಷೋಡಶೇ ವರ್ಷೇ ಪುತ್ರಂ ಮಿತ್ರವದಾಚರೇತ್ ||
ಇದರ ತಾತ್ಪರ್ಯವಿಷ್ಟು: ತಂದೆತಾಯಂದಿರು ತಮ್ಮ ಮಕ್ಕಳನ್ನು ಮೊದಲ ಐದು ವರ್ಷಗಳ ಕಾಲ ಮುದ್ದುಮಾಡಬೇಕು. ಮುಂದಿನ ಹತ್ತು ವರ್ಷಗಳ ಕಾಲ ತಪ್ಪು ಮಾಡಿದರೆ ಸರಿದಾರಿಗೆ ತರಲು ಹೊಡೆದು ಬಡಿದು ದಂಡಿಸಬೇಕು. ಹದಿನಾರನೇ ವರ್ಷಗಳು ತುಂಬುತ್ತಲೇ ಮಗನನ್ನು ಸ್ನೇಹಿತನಂತೆ ಕಾಣಬೇಕು. ಅನೇಕ ತಂದೆ-ತಾಯಂದಿರು ತಪ್ಪುವುದೇ ಇಲ್ಲಿ ತಮ್ಮ ಮಕ್ಕಳು ಚಿಕ್ಕಂದಿನಲ್ಲಿ ತಮ್ಮ ಆಜ್ಞಾಪಾಲಕರಾಗಿ ನಡೆದುಕೊಂಡಂತೆ ಬೆಳೆದು ದೊಡ್ಡವರಾದ ಮೇಲೂ ತಾವು ಹಾಕಿದ ಗೆರೆ ದಾಟಬಾರದೆಂದು ನಿರೀಕ್ಷಿಸುತ್ತಾರೆ. ಸ್ವತಂತ್ರ ಅಭಿರುಚಿ, ಅಭಿಲಾಷೆಗಳನ್ನು ಮಕ್ಕಳು ಕೇಳದಿದ್ದಾಗ ತಮ್ಮ ವಿರುದ್ದ ತಿರುಗಿಬಿದ್ದಿದ್ದಾರೆಂದು ತಪ್ಪು ತಿಳಿದುಕೊಳ್ಳುತ್ತಾರೆ. ಅವರನ್ನು ಬೆಳೆಸಲು ವಿದ್ಯಾವಂತರನ್ನಾಗಿ ಮಾಡಲು ಎಷ್ಟು ಕಷ್ಟಪಟ್ಟಿದ್ದೇವೆಂದು ಪ್ರಲಾಪಿಸುತ್ತಾರೆ. ತಮ್ಮ ಕಷ್ಟಕೋಟಲೆಗಳನ್ನು ಲೆಕ್ಕಿಸದೆ ತಾವು ಮಾಡಿದ ಲಾಲನೆ ಪೋಷಣೆಯ ಆ ದಿನಗಳನ್ನು ನೆನಪುಮಾಡಿಕೊಟ್ಟು ಅವರನ್ನು ಹಂಗಿಸುತ್ತಾರೆ. ಭಾವನಾತ್ಮಕ ಶೋಷಣೆಯನ್ನು (Emotional Blackmail) ಮಾಡಲು ಮುಂದಾಗುತ್ತಾರೆ.
ವಿದ್ಯಾರ್ಥಿಗಳಿಗೆ ಪ್ರೌಢಶಾಲೆಯ ಹಂತದವರೆಗೆ ಶಿಕ್ಷಕರೊಂದಿಗೆ ಇರುವ ಭಾವನಾತ್ಮಕ ಸಂಬಂಧ ಕಾಲೇಜಿನ ಅಧ್ಯಾಪಕರ ಬಗ್ಗೆ ಅಷ್ಟೊಂದು ಇರುವುದಿಲ್ಲ. ವಿದ್ಯಾವಂತರಾದವರು ಯಾರು ಎಷ್ಟೇ ಉನ್ನತ ಸ್ಥಾನವನ್ನು ಅಲಂಕರಿಸಿದ್ದರೂ ಅವರು ಚಿಕ್ಕವರಾಗಿದ್ದಾಗ ಕಿವಿಹಿಂಡಿ ಪಾಠ ಹೇಳಿದ್ದ ಶಿಕ್ಷಕರ ಮತ್ತು ಓರಿಗೆಯ ಸಹಪಾಠಿಗಳ ನೆನಪು ಅವರಿಗೆ ತುಂಬಾ ಮಧುರ. ಶಾಲೆಯಲ್ಲಿದ್ದಾಗ ಶಿಕ್ಷಕರನ್ನು ಗೌರವಿಸಿದಂತೆ ಕಾಲೇಜಿಗೆ ಹೋದಾಗ ಅಧ್ಯಾಪಕರನ್ನು ಗೌರವದಿಂದ ನೋಡುವ ದೃಷ್ಟಿ ಆರಂಭದಲ್ಲಿ ಇರುವುದಿಲ್ಲ. ಹೊಸ ಅಧ್ಯಾಪಕರನ್ನು ನೋಡಿದಾಗ ವಯಸ್ಸಿಗೆ ಸಹಜವಾದ ಕೀಟಲೆ ಮಾಡುವ ಮನೋಧರ್ಮ ಬೆಳೆದಿರುತ್ತದೆ. ಆ ಕೀಟಲೆಯಲ್ಲಿ ಅಧ್ಯಾಪಕರು ಪಾಸಾದರೆ ಆನಂತರ ಗೌರವದಿಂದ ಕಾಣುತ್ತಾರೆ. ಅವರ ತೋರು ಬೆರಳಿನ ಸನ್ನೆಗೆ ಕುಣಿಯುತ್ತಾರೆ. ಬೆನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಕರಾಗಿ ನಮ್ಮ ಅನುಭವಕ್ಕೆ ಬಂದ ಒಂದೆರಡು ಘಟನೆಗಳು ಹೀಗಿವೆ: ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಅದೇ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪದವಿಗಾಗಿ ಸಂಶೋಧನೆಯನ್ನು ಮಾಡಲು ಆರಂಭಿಸಿದಾಗ ನಮಗೆ ಯು.ಜಿ.ಸಿ ಇಂದ ಜೂನಿಯರ್ ರಿಸರ್ಚ್ ಫೆಲೋಷಿಪ್ ಮಂಜೂರಾಗಿತ್ತು. ಆಗ ನಮ್ಮ ಪ್ರೊಫೆಸರ್ ಆಗಿದ್ದ ಡಾ|| ಸಿದ್ದೇಶ್ವರ ಭಟ್ಟಾಚಾರ್ಯ ಅವರು ನಮ್ಮನ್ನು ಅವರ ಛೇಂಬರ್ ಗೆ ಕರೆಸಿ ಫೆಲೋಷಿಪ್ ಮಂಜೂರಾದ ವಿಷಯವನ್ನು ತಿಳಿಸಿ ಅಭಿನಂದಿಸಿ ಫೆಲೋಷಿಪ್ ನಿಯಮಾನುಸಾರ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ವಾರದಲ್ಲಿ ಕೆಲವಾರು ಗಂಟೆ ಪಾಠ ಮಾಡಬೇಕೆಂದು ತಿಳಿಸಿದರು. ನಮಗೆ ತುಂಬಾ ಸಂತೋಷವಾಯಿತು. “The new broom sweeps well” (ಹೊಸ ಕಸಬರಿಕೆ ಚೆನ್ನಾಗಿ ಗುಡಿಸುತ್ತದೆ) ಎಂಬಂತೆ ಅಧ್ಯಾಪಕರೆನಿಸಿದ ಹೊಸ ಹುರುಪಿನಲ್ಲಿ ಪಾಠ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ತರಗತಿಯನ್ನು ಪ್ರವೇಶಿಸಿದೆವು. ವಿದ್ಯಾರ್ಥಿಗಳಿಗೆ ಹೊಸ ಅಧ್ಯಾಪಕರ ಹೆಸರನ್ನು ತಿಳಿದುಕೊಳ್ಳಬೇಕೆಂಬ ಸಹಜವಾದ ಕುತೂಹಲವಿರುತ್ತದೆ. ಅದನ್ನು ಗಮನದಲ್ಲಿರಿಸಿಕೊಂಡು ನಮ್ಮ ಪರಿಚಯವನ್ನು ಮಾಡಿಕೊಂಡೆವು. ಉತ್ತರಭಾರತೀಯರಿಗೆ ದಕ್ಷಿಣಭಾರತೀಯರ ಹೆಸರುಗಳು ವಿಲಕ್ಷಣವಾಗಿ ಕಾಣಿಸುವುದರಿಂದ ಬೋರ್ಡ್ ಮೇಲೆ ನಮ್ಮ ಹೆಸರನ್ನು ಶಿವಮೂರ್ತಿ ಎಂದು ದೇವನಾಗರಿಯಲ್ಲಿ ಸ್ಪುಟವಾಗಿ ಬರೆದೆವು. ನಂತರ ವಿದ್ಯಾರ್ಥಿಗಳ ಕಡೆ ತಿರುಗುತ್ತಿದ್ದಂತೆಯೇ ಒಬ್ಬ ಹುಡುಗ ಎದ್ದು ನಿಂತು ಸಾರ್, ಆಗೇ ಕ್ಯಾ ಹೈಂ? (ತಮ್ಮ ಹೆಸರಿನ ಮುಂದೆ ಏನಿದೆ?) ಎಂದು ಕೇಳಿದ. ನಾವು ಏನು ಉತ್ತರ ಹೇಳುತ್ತೇವೆಂದು ವಿದ್ಯಾರ್ಥಿಗಳು ಕುತೂಹಲದಿಂದ ನೋಡುತ್ತಿದ್ದರು. ಆ ಹುಡುಗನ ಕೀಟಲೆ ಏನೆಂದು ನಮಗೆ ಅರ್ಥವಾಗಿತ್ತು. ಉತ್ತರಭಾರತೀಯರ ಹೆಸರುಗಳ ಮುಂದೆ ಅವರವರ ಜಾತಿಸೂಚಕವಾದ ಮನೆತನದ ಹೆಸರುಗಳು (Sur Name or Family Name) ಇರುತ್ತವೆ. ಚತುರ್ವೇದೀ, ತ್ರಿವೇದೀ, ದ್ವಿವೇದೀ ಎಂದಿದ್ದರೆ ಅವರು ಬ್ರಾಹ್ಮಣರು, ಸಿಂಹ್, ಠಾಕೂರ್ ಎಂದಿದ್ದರೆ ಅವರು ಕ್ಷತ್ರಿಯರು, ಅಗರ್ ವಾಲ್, ಗುಪ್ತಾ ಎಂದಿದ್ದರೆ ಅವರು ವೈಶ್ಯರು, ರಾಂ, ಯಾದವ್ ಎಂದಿದ್ದರೆ ಅವರು ಶೂದ್ರರು. ಭಾರತೀಯ ಸಮಾಜದಲ್ಲಿ ನಿಮ್ಮ ಜಾತಿ ಯಾವುದೆಂದು ಕೇಳುವುದು ಅಸಭ್ಯತನ. ಹೀಗಾಗಿ ಅಪರಿಚಿತರು ಪರಸ್ಪರ ಸಂಧಿಸಿದಾಗ ಯಾರೂ ನೇರವಾಗಿ ಜಾತಿಯನ್ನು ಕೇಳುವುದಿಲ್ಲ. ಆದರೆ ಮನಸ್ಸಿನಲ್ಲಿ ಇಬ್ಬರೂ ಜಾತಿಯ ಲೆಕ್ಕಾಚಾರ ಹಾಕುತ್ತಿರುತ್ತಾರೆ. ಎದುರಿಗಿರುವ ವ್ಯಕ್ತಿ ಸಂಭಾಷಣೆಯ ಸಂದರ್ಭದಲ್ಲಿ ತಮ್ಮ ಜಾತಿಯವನೇ ಎಂದು ಗೊತ್ತಾದಾಗ ಓ, ನೀವೂ ನಮ್ಮವರೇ, ಬೇರೆ ಯಾರೋ ಎಂದು ತಿಳಿದುಕೊಂಡಿದ್ದೆ ಎಂದು ಉದ್ಗರಿಸುತ್ತಾರೆ. ಆನಂತರ ಮೈಚಳಿ ಬಿಟ್ಟು ತುಂಬಾ ಆತ್ಮೀಯರಾಗಿ ಬಿಡುತ್ತಾರೆ. ನಮ್ಮನ್ನು ಯಾವ ಜಾತಿಯವರೆಂದು ನೇರವಾಗಿ ಕೇಳಲಾಗದೆ ಆ ಹುಡುಗ ತುಂಬಾ ಜಾಣ್ಮೆಯ ಪ್ರಶ್ನೆಯನ್ನು ಕೇಳಿದ್ದ. ಚೆಸ್ ಆಟದಲ್ಲಿ ಅತ್ತಿತ್ತ ಸರಿಯದ ಹಾಗೆ ಚೆಕ್ ಮೇಟ್ ಮಾಡಿದ್ದ. ನಾವು ಧೃತಿಗೆಡದೆ ಆತನನ್ನೇ ದುರುಗುಟ್ಟಿಕೊಂಡು ನೋಡುತ್ತಾ ಹೀಗೆ ಉತ್ತರಿಸಿದೆವು: ದೇಖೋ, ಆಗೆ ಪೀಛೇ ಕುಚ್ ನಹೀಂ ಹೈಂ, ಆಗೆ ಆಪ್ ಲೋಗ್ ಹೈಂ, ಪೀಛೇ Black Board ಹೈಂ!” (ನೋಡೊ, ಹಿಂದೆ ಮುಂದೆ ಏನೂ ಇಲ್ಲ, ಮುಂದೆ ನೀವು ವಿದ್ಯಾರ್ಥಿಗಳು ಇದ್ದೀರಿ, ಹಿಂದೆ ಕಪ್ಪು ಹಲಗೆ ಇದೆ). ಇಡೀ ತರಗತಿಯ ವಿದ್ಯಾರ್ಥಿಗಳು ಅವನತ್ತ ತಿರುಗಿ ಗೊಳ್ಳೆಂದು ನಕ್ಕರು. ಪ್ರಶ್ನೆ ಕೇಳಿದ ಹುಡುಗ ಇಂಗು ತಿಂದ ಮಂಗನಂತಾಗಿದ್ದ! ಮಾರನೆಯ ದಿನ ತರಗತಿಗೆ ಹೋದಾಗ ಮತ್ತೊಂದು ಇರುಸುಮುರಿಸಿನ ಪ್ರಸಂಗ ಎದುರಾಯಿತು. ತರಗತಿಯ ಆರಂಭದಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ತೆಗೆದುಕೊಳ್ಳುವಾಗ ಸಮಯದ ಉಳಿತಾಯದ ದೃಷ್ಟಿಯಿಂದ ಅವರ ಹೆಸರನ್ನು ಓದುವ ಬದಲು ಅಧ್ಯಾಪಕರು ಕ್ರಮ ಸಂಖ್ಯೆಯನ್ನು ಕೂಗಿ ಕರೆಯುವುದು ವಾಡಿಕೆ. ಅದರಂತೆ ನಾವು ವಿದ್ಯಾರ್ಥಿಗಳ ಕ್ರಮ ಸಂಖ್ಯೆಯನ್ನು ಇಂಗ್ಲೀಷಿನಲ್ಲಿ ಕೂಗಿ ಕರೆಯುತ್ತಿರುವಾಗ ಹಿಂದಿನ ಬೆಂಚಿನಲ್ಲಿ ಕುಳಿತಿದ್ದ ಒಬ್ಬ ಕೀಟಲೆ ಹುಡುಗ ಆಪ್ ಹಿಂದೀ ಮೇಂ ಕಹಿಏ ಎಂದು ಏರಿದ ದನಿಯಲ್ಲಿ ಕೂಗಿದ. ಹತ್ತಾರು ಸಂಖ್ಯೆಗಳನ್ನು ಆಗಲೇ ಕರೆದಾಗಿತ್ತು. ಅವನತ್ತ ದುರುಗುಟ್ಟಿಕೊಂಡು ನೋಡಿ ನಂತರ ಮುಂದಿನ ಸಂಖ್ಯೆಗಳಾದ ಅಟಾರಾ, ಉನ್ನೀಸ್, ಬೀಸ್ ಎಂದು ಹಿಂದಿಯಲ್ಲಿ ಹೇಳಿ ನಂತರ ಸಿಟ್ಟಿನಿಂದ “ಆಪ್ ಲೋಗ್ ವಿಶ್ವವಿದ್ಯಾಲಯ್ ಮೇಂ ಪಡನೇ ಆತೇ ಹೈಂ, ಇತನೀ ಸೀ ಅಂಗ್ರೇಜೀ ನಹೀಂ ಆತೀ ಹೈಂ, ಶರ್ಮ್ ಆನಾ ಚಾಹಿಯೇ ಆಪ್ ಲೋಗೋಂ ಕೋ(ವಿಶ್ವವಿದ್ಯಾಲಯದಲ್ಲಿ ಒದಲು ಬಂದಿರುವ ನಿಮಗೆ ಇಷ್ಟೂ ಇಂಗ್ಲೀಷ್ ಬರುವುದಿಲ್ಲವೆಂದರೆ ನಾಚಿಕೆಯಾಗಬೇಕು) ಎಂದು ಜೋರು ಮಾಡಿ ಮತ್ತೆ ಇಂಗ್ಲೀಷಿನಲ್ಲಿ ಕರೆಯಲು ಶುರುಮಾಡಿದೆವು. ವಾಸ್ತವವಾಗಿ ನಮಗೆ 21ರ ಸಂಖ್ಯೆಯ ನಂತರ ಹಿಂದಿಯಲ್ಲಿ ಸಂಖ್ಯೆಗಳನ್ನು ತಡವರಿಸದೆ ಹೇಳುವುದು ಸ್ವಲ್ಪ ಕಷ್ಟವಿತ್ತು! ಮುಂದಿನ ತರಗತಿಗಳಲ್ಲಿ ಯಾರೂ ತುಟಿಪಿಟಕ್ಕೆನ್ನದೆ ಗರಬಡಿದವರಂತೆ ಕುಳಿತು ಪಾಠ ಕೇಳುತ್ತಿದ್ದರು. ಪರೀಕ್ಷೆಯ ಸಂದರ್ಭದಲ್ಲಿ ಕಾಪಿ ಮಾಡುತ್ತಿದ್ದ ಹುಡುಗರಿಗೆ ಎಚ್ಚರಿಕೆ ಕೊಟ್ಟರೂ ಕಾಪಿಹೊಡೆದು ಸಿಕ್ಕಿ ಹಾಕಿಕೊಂಡ ಒಬ್ಬ ಹುಡುಗನನ್ನು ಡಿಬಾರ್ ಮಾಡಿದೆವು. ಈ ವಿಷಯ ತಿಳಿದು ನಮ್ಮ ಪ್ರೊಫೆಸರ್ ಭಟ್ಟಾಚಾರ್ಯರು ನಮ್ಮನ್ನು ಮತ್ತೆ ಅವರ ಛೇಂಬರ್ ಗೆ ಕರೆಸಿ ಕಿವಿ ಮಾತು ಹೇಳಿದರು: “ದೇಖೋ ಬೇಟೇ, ಇಸ್ ವಿಶ್ವವಿದ್ಯಾಲಯ್ ಮೇಂ ಕುಛ್ ಗೂಂಡೇ ವಿದ್ಯಾರ್ಥಿ ಭೀ ಹೈಂ! ತುಮ್ ಕೋ ಜಿಂದಾ ಮೈಸೂರ್ ಜಾನಾ ಹೋ ತೋ ಭವಿಷ್ಯ ಮೇಂ ಇಸ್ ತರಹ್ ಮತ್ ಕರನಾ!” (ನೋಡಪ್ಪಾ, ಈ ವಿಶ್ವವಿದ್ಯಾಲಯದಲ್ಲಿ ಕೆಲವು ಗೂಂಡಾ ವಿದ್ಯಾರ್ಥಿಗಳು ಇದ್ದಾರೆ. ನೀನು ಜೀವಂತವಾಗಿ ಮೈಸೂರಿಗೆ ಹೋಗಬೇಕೆಂದಿದ್ದರೆ ಇನ್ನೂ ಮುಂದೆ ಈ ರೀತಿ ಮಾಡಬೇಡ!)
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 17.9.2008.