ಕಿಟಕಿ-ಬಾಗಿಲುಗಳ ಹಂಗಿಲ್ಲದ ಮನಸ್ಸು!....
ಈಗಿನ ಸಂನ್ಯಾಸಿಗಳಿಂದ ಜಗತ್ತಿಗೆ ಭಯಂಕರವಾದ ಹಾನಿಯಾಗಿದೆ. ಸಂನ್ಯಾಸಿಗಳು ಕೆಡಲು ಭಕ್ತರಲ್ಲಿರುವ ಅಜ್ಞಾನವೇ ಕಾರಣ. ಅಜ್ಞಾನವಿದ್ದಲ್ಲಿ ಸತ್ಯಕ್ಕೆ ಬೆಲೆಯಿಲ್ಲ. ಕಂದಾಚಾರಕ್ಕೆ ಬೆಲೆಯಿರುವವರೆಗೆ ಜಗತ್ತಿಗೆ ಸುಖವಿಲ್ಲ. ನಿರಕ್ಷರಕುಕ್ಷಿಗಳೂ ವಿಷಯಕೂಪದಲ್ಲಿ ಬೆಳೆದವರೂ ಮತ್ತು ವಿಷಯದಲ್ಲೇ ತೊಳಲಿ ಬಳಲಿದವರೂ ಗುರುಗಳಾದರೆ ಯಾವ ಜಗತ್ತು ಉದ್ಧಾರವಾಗುತ್ತದೆ? ಗುರುಗಳಾಗುವುದೆಂದರೆ ನಾಟಕದಲ್ಲಿ ವೇಷ ಹಾಕಿಕೊಂಡು ಪಾರ್ಟು ಮಾಡುವುದೆಂದು ಜನರು ಭಾವಿಸಿರುವಂತೆ ತೋರುತ್ತದೆ. ಶಿವ ಶಿವ! ದನ ಕಾಯುವವರೆಲ್ಲಾ, ಸುಳ್ಳು ಹೇಳುವವರೆಲ್ಲಾ, ವಿಧವಾಪ್ರಿಯರೆಲ್ಲಾ ನಿನ್ನ ಹೆಸರಿನಿಂದ ದೇಶದಲ್ಲಿ ಮೆರೆಯುತ್ತಾರಲ್ಲ!
ಅಯ್ಯೋ ಮೂಢಭಕ್ತರೇ! ನಿಮ್ಮ ಭಕ್ತಿಗೆ ಸರಿಯಾದ ಗುರುಗಳನ್ನು ಪಡೆದಿರುವಿರಿ. ಅಯ್ಯೋ ನಿರ್ದಯಿ ಗುರುವರ್ಗವೇ! ನಿಮಗಾದರೂ ಪಾಪವನ್ನು ಮಾಡಿ ಜಗತ್ತನ್ನು ಹಾಳು ಮಾಡುತ್ತಿರುವಿರಲ್ಲಾ ದಯೆ ಬೇಡವೇ? ಶಿವ ಶಿವ! ಜಗತ್ತಿನ ಸೂತ್ರವೆಲ್ಲಾ ವ್ಯಭಿಚಾರಿಗಳ ಕೈಯಲ್ಲಿದೆ. ವ್ಯಭಿಚಾರಿಗಳು ಗುರುಗಳೆಂದು ಹೇಳಿಸಿಕೊಳ್ಳಲು ನಾಚಿಕೆಗೊಳ್ಳುವುದಿಲ್ಲವಲ್ಲಾ! ಹರ ಹರ! ಶಿವ ಶಿವ!
ಶಿಷ್ಯರ ಹಣವನ್ನು ತೆಗೆದುಕೊಂಡು ಹೋಗಿ ಮಠದಲ್ಲಿರುವ ತಮ್ಮ ಅಣ್ಣ ತಮ್ಮಂದಿರ ಹೆಂಡಿರು ಮಕ್ಕಳುಗಳಿಗೆ ಹಾಕುವ ನಾಮಧಾರಿ ಗುರುಗಳು ಸಮಾಜದಿಂದ ತೊಲಗದವರೆಗೆ ನಮಗೆ ಕಲ್ಯಾಣವಿಲ್ಲ. ಇವರು ಅಣ್ಣ ತಮ್ಮ೦ದಿರ ಹೆಂಡತಿಯರಲ್ಲಿ ಪ್ರೇಮವನ್ನು ಬೆಳಸಿಕೊಂಡು ಅವರ ಗಂಡಂದಿರಿಗೆ ದುಡಿಯುವುದನ್ನಾದರೂ ತಪ್ಪಿಸುತ್ತಾರೆಂಬುದೊಂದು ಮಹೋಪಕಾರವೆಂದು ಭಾವಿಸಬೇಕಾಗಿದೆ. ಮಠಗಳಲ್ಲಿ ಸಂಭೋಗ, ತೊಟ್ಟಿಲು ಕಟ್ಟುವುದು ಇತ್ಯಾದಿ ಗೃಹಸ್ಥಧರ್ಮ ಕಾರ್ಯಗಳು ನಡೆಯುವಾಗ ಆ ಮಠಗಳು ಪಾಪಕ್ಷೇತ್ರವಾಗುವುದರಲ್ಲಿ ಸಂದೇಹವಿಲ್ಲ. ಆ ಪಾಪಕ್ಷೇತ್ರಗಳಲ್ಲಿ ಬಂದು ನಮಸ್ಕರಿಸುವ ಶಿಷ್ಯವರ್ಗಕ್ಕೆ ಕಲ್ಯಾಣವಾಗುತ್ತೆಂಬುದು ಶುದ್ಧ ಅಸಂಗತ. ಅಕ್ಕ-ತಂಗಿಯರನ್ನು ಸಾಕಲು ಮಠವನ್ನು ಮಾಡಬೇಕೆ? ತಿಳಿಯದು. ಸಾಮಾಜಿಕರು ಇಂತಹ ನೀಚ ಪದ್ಧತಿಯನ್ನು ತೊಲಗಿಸದಿದ್ದರೆ ಖಂಡಿತವಾಗಿಯೂ ಕಲ್ಯಾಣವಿಲ್ಲ.
"ಗುರುವಿಗಿಂ ಪರವಿಲ್ಲವೋ, ಸದ್ಗುರುವಿಗಿಂ ಮಿಗಿಲಿಲ್ಲವೋ" ಎನ್ನುವ ಕಾಲವು ಹೋಯಿತು. ಗುರು ಎಂಬುದೊಂದು ಶಬ್ದ ಮಾತ್ರ ಉಳಿಯಿತು. ಗುರುವಿನ ಅಂತಸ್ತು ಹೋಯಿತು. ಗುರುಗಳು ಸ್ತ್ರೀಯರ ಪದತಳದಲ್ಲಿ ಬಿದ್ದರು. ಯಾರು ಯಾರೆಂದು ಹೇಳೋಣ? ಎಲ್ಲರೂ ವ್ಯಭಿಚಾರಿಗಳು. ನಾನು ಕಂಡ ಹಾಗೆ ಎಲ್ಲರೂ ದುರಾಚಾರಿಗಳು. ನನಗೆ ಬಹಳ ದುಃಖವಾಗುತ್ತಿದೆ.
ಈಗಿನ ಗುರುಗಳು ಮಾಡಿದಷ್ಟು ಪಾಪವನ್ನು ಮತ್ತಾರೂ ಮಾಡುತ್ತಾ ಇಲ್ಲ. ಎಲೈ ಮೂರ್ಖ ಶಿಷ್ಯ ಸಮುದಾಯವೇ! ನಿಮಗೇನು ಹುಚ್ಚು ಹಿಡಿದಿದೆ. ಭ್ರಷ್ಟರನ್ನು ಪೂಜಿಸಿ ಪರಮೇಶ್ವರನ ರಾಜ್ಯದಲ್ಲಿ ಅಸತ್ಯಕ್ಕೆ ಬೆಲೆಯನ್ನೇರಿಸುತ್ತಿರುವಿರಲ್ಲಾ! ಸತ್ಯವನ್ನು ಜೀವಸಹಿತ ಹೂಳುತ್ತಿರುವಿರಲ್ಲಾ! ನೀವು ಭ್ರಾಂತರಾಗಿರುವಿರಿ. ನೀಚ ಗುರುವರ್ಗ! ಅಧಮ ಗುರುವರ್ಗ! ಜಗದ್ರೋಹಿ! ನಿನಗೆ ಧಿಕ್ಕಾರ! ಪತಿತ ಗುರುವರ್ಗ! ನಿನಗೆ ಧಿಕ್ಕಾರ! ಧಿಕ್ಕಾರ! ನಿಮಗೇನು ಮಾಡಿದರೂ ನಿಮ್ಮ ಪಾಪಕ್ಕೆ ಪ್ರಾಯಶ್ಚಿತ್ತವಾಗುವುದಿಲ್ಲ. ಅಘೋರ ನಾಯಕ ನರಕದಲ್ಲಿ ಬೀಳುವಿರಿ. ಅಧಮರೇ ಶೀಘ್ರವಾಗಿ ತೊಲಗಿರಿ.
ಇಷ್ಟು ಕಟುವಾಗಿ ಹಾಗೂ ಹರಿತವಾಗಿ ಮಠ ಮತ್ತು ಮಠಾಧೀಶರ ತೆರೆಮರೆಯ ಅನೈತಿಕ ಜೀವನವನ್ನು ಕುರಿತು ಬರೆದ ಬಂಡಾಯ ಲೇಖಕ ಯಾರಿರಬಹುದೆಂದು ನೀವು ತಲೆಕೆಡಿಸಿಕೊಳ್ಳುತ್ತೀರಲ್ಲವೇ? ಲಂಕೇಶ್ ಪತ್ರಿಕೆ, ಹಾಯ್ ಬೆಂಗಳೂರು ಇತ್ಯಾದಿ ಪತ್ರಿಕೆಗಳಲ್ಲಿ ಬಂದ ಲೇಖನಗಳೇನಾದರೂ ಇರಬಹುದೇ ಎಂದು ನೀವು ಊಹೆ ಮಾಡಿದರೆ ಆಶ್ಚರ್ಯವೇನೂ ಇಲ್ಲ. ಆದರೆ ಇದು ಈ ಯಾವ ಪತ್ರಿಕೆಗಳೂ ಇಲ್ಲದ ಕಾಲದಲ್ಲಿ ಅಂದರೆ ಇಲ್ಲಿಗೆ ಸರಿಯಾಗಿ 70 ವರ್ಷಗಳ ಹಿಂದೆ 1938 ರಲ್ಲಿ ನಮ್ಮ ಗುರುವರ್ಯರಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ತಮ್ಮ ದಿನಚರಿಯಲ್ಲಿ ಸ್ವತಃ ಬರೆದ ಮಾತುಗಳೆಂದರೆ ನೀವೇ ಏಕೆ ಬಂಡಾಯ ಸಾಹಿತಿಗಳೂ ನಂಬುವುದು ಕಷ್ಟ. ಒಬ್ಬ ಮಠಾಧೀಶರಾಗಿ ಮಠಗಳ ಅಂದಿನ ಅನೈತಿಕ ನಡವಳಿಕೆಗಳನ್ನು ಕಂಡು ಬೇಸತ್ತು, ಕುದಿದು, ಸೆಟೆದು ನಿಂತು ಅದರ ವಿರುದ್ಧ ಝಳಪಿಸಿದ ಹರಿತವಾದ ಲೇಖನಿ ಇದು. ಮನಸ್ಸಿಗೆ ಯಾವ ಕಿಟಕಿ ಬಾಗಿಲುಗಳಿಲ್ಲದ ನಿರ್ವಯಲ ಸ್ಥಿತಿಯಲ್ಲಿ ಬರೆದ ಪವಿತ್ರಾತ್ಮವೊಂದರ ವೇದನೆ ಇದು. ಆ ದಿವ್ಯ ಚೇತನ ಲಿಂಗೈಕ್ಯರಾಗಿದ್ದು ಇಲ್ಲಿಗೆ 16 ವರ್ಷಗಳ ಹಿಂದೆ ಇದೇ ಸೆಪ್ಟೆಂಬರ್ 24 ರಂದು. ಆದಕಾರಣ ಈ ಲೇಖನ. ಎರಡು ದಶಕಗಳ ಹಿಂದೆ ಪ್ರಸಿದ್ಧ ಸಾಹಿತಿ ಹಾ.ಮಾ. ನಾಯಕರು ಪ್ರಜಾವಾಣಿಯ "ಸಂಪ್ರತಿ" ಎಂಬ ಅಂಕಣದಲ್ಲಿ (27.5.1986) ಮೇಲಿನ ಕೆಲವು ವಾಕ್ಯಗಳನ್ನು ಉದ್ಧರಿಸಿ ಬರೆದ ಲೇಖನದ ಧಾಟಿಯಲ್ಲಿಯೇ ನಮ್ಮ ಈ ಲೇಖನವನ್ನು ಆರಂಭಿಸಿ ಇನ್ನೂ ಹೆಚ್ಚಿನ ಸಂಗತಿಗಳನ್ನು ಇಲ್ಲಿ ನೀಡಬಯಸುತ್ತೇವೆ.
ಇದು ಮಠಗಳೆಂದರೆ ಉರಿದು ಬೀಳುವ ಬಂಡಾಯ ಲೇಖಕರಂತೆ ಯಾವದೇ ಪತ್ರಿಕೆಗೆ ಬರೆದ ಲೇಖನವಲ್ಲ. ನಮ್ಮ ಗುರುವರ್ಯರು ಬರೆದ ಈ ತೀಕ್ಷ್ಣವಾದ ಮಾತುಗಳು ನಮಗೆ ಓದಲು ಸಿಕ್ಕಿದ್ದು ಮಠದ ಮೂಲೆಯಲ್ಲಿ ಧೂಳುತಿಂದು ಬಿದ್ದಿದ್ದ 1938ನೇ ಇಸವಿಯ ಅವರ ಡೈರಿಯಲ್ಲಿ. 1976ರ ಡಿಸೆಂಬರ್ ನಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಸಂಶೋಧನೆಯನ್ನು ಮುಗಿಸಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡು ಸಿರಿಗೆರೆಗೆ ಹಿಂತಿರುಗಿದ್ದೆವು. ಉನ್ನತ ಅಧ್ಯಯನಕ್ಕಾಗಿ ವಿಯೆನ್ನಾ ವಿಶ್ವವಿದ್ಯಾನಿಲಯದಿಂದ ಫೆಲೋಷಿಪ್ ಮುಂಜೂರಾಗಿ ಬಂದಿದ್ದು ಅಲ್ಲಿಗೆ ಹೋಗುವ ಸಿದ್ಧತೆಯಲ್ಲಿದ್ದೆವು. ಆಗ ತಾನೇ ಕಾಶಿಯಿಂದ ಸಿರಿಗೆರೆಗೆ ಹಿಂದಿರುಗಿದ್ದ ನಮಗೆ ಸಂಶೋಧನೆಯ ಗುಂಗು ಇನ್ನೂ ಹೋಗಿರಲಿಲ್ಲ. ಮಠದಲ್ಲಿದ್ದ ಹಳೆಯ ಕಾಗದ ಪತ್ರದ ಕಡತಗಳನ್ನು ಕೋಳಿಯಂತೆ ಕೆದಕಿ ನೋಡತೊಡಗಿದೆವು. ಜೋಪಾನವಾಗಿ ಒಂದೆಡೆ ಗಂಟು ಕಟ್ಟಿ ಸುತ್ತಿಟ್ಟಿದ್ದ ಕೆಲವು ಬಟ್ಟೆಯ ಗಂಟುಗಳು ಕಣ್ಣಿಗೆ ಬಿದ್ದು ಇತಿಹಾಸದ ಬುತ್ತಿಯ ಗಂಟಿನಂತೆ ತೋರಿದವು. ಒಂದೊಂದು ಗಂಟನ್ನು ಬಿಚ್ಚಿ ಅವುಗಳಲ್ಲಿದ್ದ ಹಳೆಯ ಕಾಗದಪತ್ರಗಳನ್ನು ಹರಡಿಕೊಂಡು ಕುಳಿತೆವು. ಕಾಲಾನುಕ್ರಮದಲ್ಲಿ ಕ್ರಮಬದ್ಧವಾಗಿ ಜೋಡಿಸತೊಡಗಿದೆವು. ಮೊದಲು ಇಸವಿಗೆ ಅನುಗುಣವಾಗಿ ವರ್ಗೀಕರಣ ನಂತರ ಆಯಾಯ ವರ್ಷದ ತಿಂಗಳು ಮತ್ತು ದಿನ ಹೀಗೆ ವಿಭಾಗ ಸಿದ್ಧವಾಯಿತು ಒಂದೊಂದನ್ನೇ ಪಂಚ್ ಮಾಡಿ ಫೈಲ್ ಮಾಡಿದೆವು. ಗಂಟುಗಳಲ್ಲಿದ್ದ ತೀರಾ ಹಳೆಯ, ಜೀರ್ಣವಾದ ಮತ್ತು ಮಹತ್ಪೂರ್ಣವಾದ ಕೆಲವು ದಾಖಲೆಗಳನ್ನು ಪಂಚ್ ಮಾಡಿದರೆ ಅಕ್ಷರಗಳು ಕತ್ತರಿಸಿ ಹೋಗಬಹುದೆಂಬ ಭೀತಿಯಿಂದ ಹಾಗೆಯೇ ಪಾರದರ್ಶಕ ಪ್ಲಾಸ್ಟಿಕ್ ಕವರ್ ಗಳಲ್ಲಿ ಸುರಕ್ಷಿತವಾಗಿ ಸೇರಿಸಿ ಭದ್ರಪಡಿಸಿದೆವು.
ಮಠದ ಒಂದೊಂದು ಮೂಲೆಯಿಂದಲೂ ಕಸಗುಡಿಸುತ್ತಾ ಹಳೆಯ ಪತ್ರಗಳನ್ನು ಹೀಗೆ ಹುಡುಕಿಕೊಂಡು ಹೊರಟ ನಮ್ಮ ಶೋಧನೆಯ ಜಾಡು ಮಠದ ಮಹಾದ್ವಾರದ ಮೇಲೆ ಬೆಳ್ಳಿಯ ರೂಮೆಂದೇ ಪ್ರಸಿದ್ಧವಾಗಿರುವ ಒಂದು ರೂಮಿಗೆ ನಮ್ಮನ್ನು ಕರೆದೊಯ್ಯಿತು. ಸುತ್ತಲೂ ಅಸ್ತವ್ಯಸ್ತವಾಗಿ ಬಿದ್ದಿದ್ದ ಮಠಕ್ಕೆ ಭಕ್ತಿಕಾಣಿಕೆಯಾಗಿ ಬಂದ ಅನೇಕ ಬೆಳ್ಳಿಯ ತಟ್ಟೆಗಳು, ಲೋಟಗಳು, ತಂಬಿಗೆಗಳು, ಕರಂಡಕಗಳು, ದೀಪಗಳು, ನಿರಾಂಜನ ಇತ್ಯಾದಿ ಇತ್ಯಾದಿ ಹಿಂದಿನ ಕಾಲದ ಭಕ್ತಾದಿಗಳ ನರ್ಮಲ ಭಕ್ತಿಯ ಪ್ರತೀಕವಾಗಿದ್ದವು. ಅವುಗಳ ಮಧ್ಯೆ ಒಂದು ಗೋಡೆಯ ಬೀರುವಿನ ಕೆಳಗಿನ ಖಾನಿಯಲ್ಲಿ ಧೂಳು ತಿಂದು ಬಿದ್ದಿದ್ದ ಹಳೆಯ ಕಾಲದ ಅನೇಕ ಡೈರಿಗಳು ನಮ್ಮ ಕಣ್ಣಿಗೆ ಗೋಚರಿಸಿದವು. ಅವುಗಳೆಲ್ಲವನ್ನು ಧೂಳು ಕೊಡವಿ ಇಸವಿಯ ಕ್ರಮದಲ್ಲಿ ಜೋಡಿಸಿದೆವು. ಕುತೂಹಲದಿಂದ ಅವುಗಳಲ್ಲಿ ಒಂದೆರಡನ್ನು ತೆಗೆದು ನೋಡಿದಾಗ ಆಗಿನ ಕಾಲದಲ್ಲಿ ಗುರುಗಳ ಕಾಣಿಕೆಯ ಜಮಾ-ಖರ್ಚಿನ ಲೆಕ್ಕಗಳು ಮಾತ್ರ ಕಂಡುಬಂದವು. ಉದಾಹರಣೆಗೆ ಈಗ ಪೆಟ್ರೋಲ್ ಧಾರಣೆ ಲೀಟರ್ ಗೆ 57 ರೂ. ಗಳು. ಆದರೆ ದಿನಾಂಕ 11.9.1938 ರಂದು ಈ ಡೈರಿಯಲ್ಲಿ ದಾಖಲಾಗಿರುವ ಪ್ರಕಾರ ಆಗ ಪೆಟ್ರೋಲು "2 ಗ್ಯಾಲನ್ನಿಗೆ ಅಂದರೆ 10 ಲೀಟರುಗಳಿಗೆ 2 ರೂ. 14 ಆಣೆ!" ಅಂದರೆ ಆಗ ಒಂದು ಲೀಟರ್ ಪೆಟ್ರೋಲಿಗೆ ಕೇವಲ ನಾಲ್ಕೂವರೆ ಆಣೆ ಅಂದರೆ ಸುಮಾರು 25 ಪೈಸೆ ಮಾತ್ರ.
ಹೀಗೆ ಉಳಿದ ಡೈರಿಗಳಲ್ಲೇನಿರಬಹುದೆಂದು ಮತ್ತೊಂದನ್ನು ಕೈಗೆತ್ತಿಕೊಂಡಾಗ ಆಮೇಲೆ ವಿವರವಾಗಿ ನೋಡಿದರಾಯಿತು ಎಂದು ಅನಿಸಿದರೂ ಕೈಗೆತ್ತಿಕೊಂಡ ಡೈರಿಯ ಪುಟಗಳನ್ನು ತಿರುವಿ ಹಾಕದೆ ಹಾಗೆಯೇ ತೆಗೆದಿಡಲು ಕುತೂಹಲ ತಡೆಯಲಿಲ್ಲ. ಸಹಜವಾಗಿ ಅದರ ಒಂದು ಪುಟವನ್ನು ತೆರೆದೆವು. ಆಶ್ಚರ್ಯ ಕಾದಿತ್ತು! ಜ್ಯೋತಿಷಿಯ ಗಿಳಿಯು ಪಂಜರದಿಂದ ಹೊರಬಿಟ್ಟೊಡನೆಯೇ ತೊನೆದಾಡುತ್ತಾ ನಾಲ್ಕು ಹೆಜ್ಜೆ ಮುಂದಕ್ಕೆ ಹೋಗಿ ಹರಡಿದ ಅನೇಕ ಓಲೆಗರಿಗಳಲ್ಲಿ ಒಂದನ್ನು ಕೊಕ್ಕಿನಿಂದ ಹೆಕ್ಕಿ ತಂದು ಭವಿಷ್ಯ ನುಡಿದಂತಾಗಿತ್ತು! ಓದುತ್ತಲೇ ಕಂಠ ಗದ್ಗದಿತವಾಯಿತು, ಕಣ್ಣೆವೆಯು ಹನಿಗೂಡಿತು. ಡೈರಿಯ ಆ ಪುಟದಲ್ಲಿ ಹೀಗೆ ಬರೆದಿತ್ತು: ದೇವ! ನಿನ್ನ ವಿರಹವು ನನ್ನ ಮನಸ್ಸನ್ನು ಬಾಡಿಸಿತು. ಇಂದು ನಿನ್ನ ದರ್ಶನದಿಂದ ಎನ್ನ ಮನಃಕುಸುಮವು ಅರಳಿ ತನ್ನ ಸೌಗಂಧವನ್ನು ಎಲ್ಲಾ ಕಡೆಗೂ ಬೀರುತ್ತಾ ಇದೆ. ನಾನು ಧನ್ಯನಾದೆನು. ನನ್ನ ಆನಂದಕ್ಕೆ ಪಾರವಿಲ್ಲ. ಆನಂದವೇ ಆನಂದ! "ನನ್ನ ಡೈರಿಯನ್ನು ಯಾವ ಪುಣ್ಯಾತ್ಮನು ಓದುತ್ತಾನೋ ಅವನೇ ಧನ್ಯನು!" (4.4.1938 ಪು. 90). ಆಗಿನ್ನೂ ನಾವು ಹುಟ್ಟಿರಲಿಲ್ಲ! ಜ್ಯೋತಿಷಿಗಳ ನಕ್ಷತ್ರಬಲ, ಗ್ರಹಬಲಗಳಲ್ಲಿ ನಂಬಿಕೆಯಿಲ್ಲದ ನಮಗೆ ಸೃಷ್ಟಿಯ ಹಿಂದಿರುವ ಕಾಣದ ಕೈಯೊಂದರ ಈ ಆಶ್ಚರ್ಯಕರ ಲೀಲೆಯ ಸ್ವಾನುಭವದಿಂದ ಮೈ ಪುಳಕಿತವಾಯಿತು. 1938 ರಷ್ಟು ಹಿಂದೆ ನಮ್ಮ ಪರಮಾರಾಧ್ಯ ಗುರುಗಳು ಬರೆದ ಈ ಡೈರಿಯು 38ವರ್ಷಗಳ ನಂತರ ನಮ್ಮ ಕೈಗೇ ಸಿಗಲು ಯಾವ ದೈವನಿಯಾಮಕವಿತ್ತೋ ಹೇಳಲಾರೆವು. ಡೈರಿಯ ಉಳಿದ ಪುಟಗಳನ್ನು ಓದುತ್ತಾ ಹೋದಂತೆ ಹೃದಯದಲ್ಲಿ ಧನ್ಯತೆಯ ಭಾವ ಮಿಡಿಯಿತು.
ಇಲ್ಲಿ ಓದುಗರು ಗಮನಿಸಬೇಕಾದ ಒಂದು ಮುಖ್ಯ ಸಂಗತಿಯೆಂದರೆ ಇದು ಪ್ರಜ್ಞಾಪೂರ್ವಕವಾಗಿ ಒಂದು ಪುಸ್ತಕವನ್ನು ಬರೆಯಬೇಕೆಂಬ ಉದ್ದೇಶದಿಂದ ಬರೆದ ಗ್ರಂಥವಲ್ಲ. ಜೀವನದಲ್ಲಿ ಎಲ್ಲ ಲೌಕಿಕ ಸುಖಾನುಭವಗಳನ್ನು ಅನುಭವಿಸಿ ನಿರಾಸಕ್ತಿ ಹೊಂದಿ ಒಂದು ಕಾಲು ಈ ಲೋಕದಲ್ಲಿಯೂ ಮತ್ತೊಂದು ಕಾಲು ಪರಲೋಕದಲ್ಲಿಯೂ ಇರುವ ಇಳಿವಯಸ್ಸಿನವರು ಬರೆದ ಆತ್ಮಕಥೆಯೂ ಇದಲ್ಲ. 23-24ರ ಹರೆಯದಲ್ಲಿ ಬರೆದ ಈ ಬರವಣಿಗೆಯಲ್ಲಿ ವಯಸ್ಸಿಗೆ ಸಹಜವಾದ ಆಸೆ ಆಕಾಂಕ್ಷೆಗಳ ಸೆಳೆತವಿದೆ; ಅದನ್ನು ಮೆಟ್ಟಿನಿಂತ ಆಧ್ಯಾತ್ಮಿಕ ಸಾಧನಾಕಾಂಕ್ಷೆಯ ಅಂತರಂಗದ ತುಡಿತವಿದೆ. ನಡೆ-ನುಡಿಯ ಪಾರದರ್ಶಕತೆಯನ್ನು ಪ್ರತಿಬಿಂಬಿಸುವ ಈ ಬರಹವು ಬಸವಣ್ಣನವರ ಭಕ್ತಸ್ಥಲದ ವಚನಗಳ ಗದ್ಯರೂಪವೇನೋ ಎನ್ನುವಂತಿದೆ. ಕಾಲದ ಕರಾಳ ಗರ್ಭದಲ್ಲಿ ಅಡಗಿ ಹೋಗಬಹುದಾಗಿದ್ದ ಈ ಅಮೂಲ್ಯ ಡೈರಿಯು ನಮ್ಮ ಕೈಗೆ 1976 ರಷ್ಟು ಹಿಂದೆಯೇ ಸಿಕ್ಕಿದ್ದರೂ, ಈ ಮಧ್ಯೆ ಎರಡು ವರ್ಷಗಳ ಕಾಲ ವಿಯೆನ್ನಾಕ್ಕೆ ಓದಲು ಹೋಗಿದ್ದರಿಂದಲೂ, ಅಲ್ಲಿಂದ ಹಿಂದಿರುಗಿದೊಡನೆಯೇ ಮಠದ ಸಂಘ-ಸಂಸ್ಥೆಗಳ ಆಡಳಿತ ನಿರ್ವಣೆಯ ಜವಾಬ್ದಾರಿಯು ಒಮ್ಮೆಲೇ ಹೆಗಲ ಮೇಲೆ ಬಿದ್ದಿದ್ದರಿಂದಲೂ ನಮಗೆ ಗೊತ್ತಿರುವಂತೆಯೇ 9 ವರ್ಷಗಳು ಗತಿಸಿಯೇ ಬಿಟ್ಟವು. ತಾಯಗರ್ಭದಲ್ಲಿನ ನವಮಾಸ ತುಂಬಿದ ಶಿಶುವಿನಂತೆ ಈ ಡೈರಿಯನ್ನು 9 ವರ್ಷಗಳ ನಂತರ ಸ್ವತಃ ಪ್ರತಿಲಿಪಿ ಮಾಡಿ ಡೈರಿಯ ಉದ್ದಕ್ಕೂ ಹರಡಿರುವ ವಿಚಾರಗಳನ್ನು ಆಯಾಯ ವಿಷಯಕ್ಕನುಗುಣವಾಗಿ ವಿಭಾಗಿಸಿ ಅಧ್ಯಾಯಗಳನ್ನು ಮಾಡಿ ಸಂಪಾದಿಸಿ "ಆತ್ಮನಿವೇದನೆ" ಎಂಬ ಹೆಸರಿನಲ್ಲಿ 1985 ರಲ್ಲಿ ಪ್ರಕಟಿಸಿದೆವು. ಇದನ್ನು ಓದಿದ ಹಾ.ಮಾ. ನಾಯಕರು ಇದಕ್ಕೆ "ಆತ್ಮ ನಿವೇದನೆ" ಎಂಬುದಕ್ಕಿಂತಲೂ ಉತ್ತಮವಾದ ಹೆಸರಿಡುವುದು ಸಾಧ್ಯವಿಲ್ಲ. ದಿನಚರಿ ಮನಸ್ಸಿನ ಕಿಟಕಿ. ಆ ಕಿಟಕಿಯ ಮೂಲಕ ವ್ಯಕ್ತಿತ್ವವನ್ನು ಅಳೆಯಬಹುದು. ಆದರೆ ಉನ್ನತ ಮನಸ್ಸುಗಳ ದಿನಚರಿಗೆ ರಹಸ್ಯದ ಬೇಲಿ ಬೇಕಿರುವುದಿಲ್ಲ... ಕನ್ನಡದ ಆಧ್ಯಾತ್ಮಿಕ ಸಾಹಿತ್ಯಕ್ಕೆ ಇದೊಂದು ಸ್ವೋಪಜ್ಞ ಕೊಡುಗೆ ಎಂದು ಮನಸಾರೆ ಮೆಚ್ಚಿ ಪುಸ್ತಕ ವಿಮರ್ಶೆ ಬರೆದರು. ಪೂಜ್ಯ ಗುರುಗಳ ಪ್ರತಿಭಾ ಸಂಪನ್ನ ವಿದ್ಯಾರ್ಥಿ ಜೀವನವನ್ನು ಕುರಿತು ಬರೆಯಲು ಹೋದರೆ ಒಂದು ವಾರದ ಅಂಕಣ ಸಾಕಾಗುವುದಿಲ್ಲ. ಕಾಶಿಯಲ್ಲಿ ಓದುತ್ತಿದ್ದಾಗ ಅಲ್ಲಿಯ ಮಾಸಪತ್ರಿಕೆಗಳಲ್ಲಿ ಅವರು ಸಂಸ್ಕೃತದಲ್ಲಿ ಬರೆದ ಶ್ಲೋಕಗಳು ಮತ್ತು ಲೇಖನಗಳು ಕಾಳಿದಾಸನ ಕಾವ್ಯವನ್ನು ಸರಿಗಟ್ಟುವಂತಿವೆ. ಸಿರಿಗೆರೆಯ ಮಠದ ಆಡಳಿತದ ಚುಕ್ಕಾಣಿಯನ್ನು ಹಿಡಿದ ಮೇಲೆ ಅವರ ಸಾಹಿತ್ಯ ಕೃಷಿ ಕಮರಿಹೋಗಿರುವುದನ್ನು ಕಾಣಬಹುದು. ಅವರು ತಮ್ಮ ಜೀವನದುದ್ದಕ್ಕೂ ಜಾತಿಮತಭೇದವಿಲ್ಲದೆ ಗ್ರಾಮೀಣ ಜನರ ಸರ್ವಾಂಗೀಣ ಅಭಿವೃದ್ಧಿಗೆ ಅಹರ್ನಿಶಿ ನಾಲ್ಕು ದಶಕಗಳ ಕಾಲ ಮಾಡಿದ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆ ಅನುಪಮವಾದುದು. ಇದರಿಂದ ಸಮಾಜಕ್ಕೆ ಲಾಭವಾಯಿತು, ಸಾಹಿತ್ಯಕ್ಕೆ ನಷ್ಟವಾಯಿತು. ಆದರೆ ಸಮಾಜಕ್ಕೆ ಆದ ಲಾಭ ದೊಡ್ಡದೋ, ಸಾಹಿತ್ಯಕ್ಕೆ ಆದ ನಷ್ಟ ದೊಡ್ಡದೋ ತೂಗಿ ಹೇಳುವುದು ಕಷ್ಟ. ಬಸವಣ್ಣನವರಂತೆ ನಮ್ಮ ಗುರುವರ್ಯರಿಗೂ ಸಾಹಿತ್ಯ ನಿರ್ಮಾಣ ಗೌಣವಾಗಿತ್ತು. ಕರ್ತಾರನಬ ಕಮ್ಮಟವಾದ ಜನರ ಐಹಿಕ ಬದುಕನ್ನು ಹಸನುಗೊಳಿಸುವುದೇ ಅವರಿಗೆ ಮುಖ್ಯವಾಗಿತ್ತು. ಹೊಳಲ್ಕೆರೆ ತಾಲ್ಲೂಕು ಮುತ್ತುಗದೂರಿನ ಶ್ರೀ ಮಹಾದೇವಯ್ಯ ಮತ್ತು ಬಸಮ್ಮ ಇವರ ಪುಣ್ಯ ಗರ್ಭಾಂಬುಧಿಯಲ್ಲಿ ಮೂರನೆಯ ಮಗನಾಗಿ 1914ನೆಯ ಇಸವಿ ರೋಹಿಣಿ ನಕ್ಷತ್ರದಲ್ಲಿ ಬಸವ ಜಯಂತಿಯ ದಿನದಂದೇ ಜನಿಸಿದ್ದ ನಮ್ಮ ಪರಮಾರಾಧ್ಯ ಗುರುವರ್ಯರು ಬಸವಣ್ಣನವರ ನಡೆನುಡಿಗಳ ಪಡಿಯಚ್ಚಿನಂತೆಯೇ ಹತ್ತಿರದಿಂದ ಬಲ್ಲವರಿಗೆ ಕಾಣಿಸುತ್ತಿದ್ದರು.
ದೈನಂದಿನ ಖರ್ಚು ವೆಚ್ಚಗಳನ್ನು ಬರೆಯಲು ಡೈರಿಯ ಕೊನೆಯ ಪುಟಗಳಲ್ಲಿ ಜಮಾ- ಖರ್ಚು ಕಾಲಂಗಳು ಇರುತ್ತವೆ. ನಮ್ಮ ಗುರುವರ್ಯರು ಅದರಲ್ಲಿ ಹಣಕಾಸಿನ ಜಮಾ- ಖರ್ಚು ಬರೆಯದೆ ಆಧ್ಯಾತ್ಮಿಕ ಸಾಧನೆಯ ಜಮಾ ಖರ್ಚು ಬರೆದಿರುತ್ತಾರೆ. ಜಮಾ ಕಾಲಂನಲ್ಲಿ ಪುಣ್ಯ, ಜ್ಞಾನ, ವೈರಾಗ್ಯ, ಅಹಿಂಸಾ, ಸತ್ಯ, ಗುರುಭಕ್ತಿ, ಸೌಭಾಗ್ಯ, ಈಶ್ವರನಲ್ಲಿ ವಿಶ್ವಾಸ ಎಂದು ಬರೆದಿದ್ದರೆ, ಖರ್ಚು ಕಾಲಂನಲ್ಲಿ ಅನುಕ್ರಮವಾಗಿ ಪಾಪ, ಅಜ್ಞಾನ, ಲಾಲಸೆ, ಹಿಂಸಾ, ಅಸತ್ಯ, ಕಾಮಭುಕ್ತಿ, ಧರ್ಮಭಾಗ್ಯ, ಈಶ್ವರನಲ್ಲಿ ಅವಿಶ್ವಾಸ ಎಂದು ಬರೆದಿರುತ್ತಾರೆ. ಮುಮುಕ್ಷುವಿನ ಆಧ್ಯಾತ್ಮಿಕ ಸಾಧನೆಯ ಈ ಜಮಾ ಖರ್ಚನ್ನು ತಪಾಸಣೆ ಮಾಡುವ ಲೆಕ್ಕಪರಿಶೋಧಕನು (Auditor) ದೇವರು ಎಂಬ ಅರ್ಥ ಬರುವಂತೆ ತಪ್ಸೀಲು ಕಾಲಂನಲ್ಲಿ ಪರಮೇಶ್ವರ, ಜಗದೀಶ್ವರ, ಲೋಕೇಶ್ವರ, ಭುವನೇಶ್ವರ ಎಂದು ಬರೆದಿರುತ್ತಾರೆ. ಇನ್ನು ಕೆಲವೊಂದು ಮುಖ್ಯವಾದ ಸಂಗತಿಗಳನ್ನು ಬರೆದಿಟ್ಟುಕೊಳ್ಳಲು ಡೈರಿಯ ಕೊನೆಯಲ್ಲಿ "ಜ್ಞಾಪಕ ಪತ್ರ" (Memorandum) ಎಂಬ ಒಂದೆರಡು ಪುಟಗಳು ಇರುತ್ತವೆ. ಅವುಗಳಲ್ಲಿ ಸಾಮಾನ್ಯ ಜನರು ತಮ್ಮ ಸ್ನೇಹಿತರ ವಿಳಾಸವನ್ನೋ, ಫೋನ್ ನಂಬರನ್ನೋ, ಮತ್ತೇನನ್ನೋ ಅವರವರ ದೃಷ್ಟಿಯಿಂದ ಮುಖ್ಯವಾದ ವಿಚಾರಗಳನ್ನು ಬರೆಯುತ್ತಾರೆ. ಆದರೆ ನಮ್ಮ ಲಿಂಗೈಕ್ಯ ಗುರುವರ್ಯರು ಆ ಪುಟದಲ್ಲಿ ಬರೆದಿರುವ ಎರಡೇ ಎರಡು ಸಾಲುಗಳು ಜೀವನದಲ್ಲಿ ಎಲ್ಲರೂ ಸದಾ ಕಾಲ ಮರೆಯದೆ ನೆನಪಿಟ್ಟುಕೊಳ್ಳಬೇಕಾದ ವಿಚಾರ:
"ದೇವ! ನಿನ್ನನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕಾಗಿದೆಯೇ ವಿನಾ ಈ
ಸಂಸಾರದಲ್ಲಿ ಜ್ಞಾಪಕದಲ್ಲಿಟ್ಟುಕೊಳ್ಳುವ ವಸ್ತು ಯಾವುದೂ ಇಲ್ಲ!"
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 24.9.2008.