ಮರುಭೂಮಿಯ ನಾಡಿನಿಂದ...
ಹೆದ್ದಾರಿ ಬದಿಯ ಉಸುಕಿನಲ್ಲಿ ಒಂದು ಕಾರು ಸಿಕ್ಕಿಕೊಂಡಿತ್ತು. ಅದನ್ನು ಮೇಲಕ್ಕೆ ಎತ್ತಲು ಕಾರಿನ ಚಾಲಕ ಹರಸಾಹಸ ಮಾಡುತ್ತಿದ್ದ. ಅದೇ ಹೆದ್ದಾರಿಯಲ್ಲಿ ಮತ್ತೊಂದು ಕಾರು ಬರುತ್ತಿತ್ತು. ಮರಳಿನಲ್ಲಿ ಕಾರು ಸಿಕ್ಕಿಹಾಕಿಕೊಂಡಿರುವುದನ್ನು ನೋಡಿ ಆ ಕಾರಿನ ಚಾಲಕ ತನ್ನ ಕಾರನ್ನು ನಿಲ್ಲಿಸಿದ. ಕಾರಿನಿಂದ ಕೆಳಗಿಳಿದು ಸಿಕ್ಕಿಕೊಂಡಿದ್ದ ಕಾರನ್ನು ಮೇಲಕ್ಕೆತ್ತಲು ಕೈಜೋಡಿಸಿದ. ಇಬ್ಬರೂ ಜೊತೆಗೂಡಿ ಕಷ್ಟಪಟ್ಟು ಕಾರನ್ನು ಮೇಲಕ್ಕೆತ್ತಿದರು. ಕಾರು ಸಲೀಸಾಗಿ ಮುಂದೆ ಹೋಗುವಂತಾಯಿತು. ತನ್ನ ಕಾರನ್ನು ಮೇಲಕ್ಕೆತ್ತಲು ಸಹಾಯ ಮಾಡಿದ ಅಪರಿಚಿತ ವ್ಯಕ್ತಿಗೆ ಆತ ಧನ್ಯವಾದಗಳನ್ನು ಹೇಳಿದ. ನಂತರ ಅವನು ಯಾರೆಂದು ತಿಳಿದು ಸ್ತಂಭೀಭೂತನಾದ. ಆತನ ಸಹಾಯಕ್ಕೆ ಬಂದ ಎರಡನೇ ಕಾರಿನ ಚಾಲಕ ಬೇರೆ ಯಾರೂ ಅಲ್ಲ. ಸಂಯುಕ್ತ ಅರಬ್ ರಾಷ್ಟ್ರದ (UAE) ಈಗಿನ ಪ್ರಧಾನಿ ಮತ್ತು ದುಬೈನ ಆಳರಸ (Ruler) ಶೇಖ್ ಮೊಹಮ್ಮದ್ ಬಿನ್ ರಶೀದ್!
ಅಧಿಕಾರದ ಹಮ್ಮು-ಬಿಮ್ಮುಗಳಿಲ್ಲದೆ, ಅಂಗರಕ್ಷಕರು ಮತ್ತು ಭದ್ರತಾಸಿಬ್ಬಂದಿಯ ಬೆಂಗಾವಲಿಲ್ಲದೆ ಕೆಲವೊಮ್ಮೆ ತಾನೇ ಕಾರನ್ನು ನಡೆಸಿಕೊಂಡು ಜನರ ಮಧ್ಯೆ ಕಾಣಿಸಿಕೊಳ್ಳುವ ಶೇಖ್ ತುಂಬಾ ಜನಾನುರಾಗಿ. ಐದು ವರ್ಷಗಳ ಹಿಂದೆ ತನ್ನ ಅಣ್ಣ ಶೇಖ್ ಮಕ್ತೋಂ ಮರಣ ಹೊಂದಿದ ಮೇಲೆ ಅಧಿಕಾರಕ್ಕೆ ಬಂದ ಶೇಖ್ ಮೊಹಮ್ಮದ್ ತನ್ನ ದೇಶವನ್ನು ಮುನ್ನಡೆಸುವ ಕನಸುಗಾರ; ಜನಹಿತಕ್ಕಾಗಿ ಕೈಗೊಂಡ ಯಾವುದೇ ಯೋಜನೆಯನ್ನು ನಿಗದಿಪಡಿಸಿದ ಅವಧಿಯೊಳಗೆ ಶತಾಯ ಗತಾಯ ಮಾಡಿ ಮುಗಿಸುವ ಛಲಗಾರ. ತಂದೆತಾಯಂದಿರು ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಎಲ್ಲದರಲ್ಲೂ ಪ್ರಥಮಸ್ಥಾನ ಪಡೆಯಬೇಕೆಂದು ಹೇಗೆ ಬಯಸುತ್ತಾರೋ ಹಾಗೆ ತನ್ನ ದೇಶ ಜಗತ್ತಿನಲ್ಲಿಯೇ ಅಗ್ರಸ್ಥಾನದಲ್ಲಿರಬೇಕೆಂಬುದು ಈತನ ಹಂಬಲ. ದುಬೈನಲ್ಲಿ ಎರಡು ವರ್ಷಗಳ ಹಿಂದೆ ಉದ್ಘಾಟನೆಗೊಂಡ 2723 ಅಡಿ ಎತ್ತರವುಳ್ಳ 163 ಅಂತಸ್ತಿನ ಬುರ್ಜ್ ಖಲೀಫಾ ಜಗತ್ತಿನಲ್ಲಿಯೇ ಅತಿ ಎತ್ತರವಾದ ಗಗನಚುಂಬಿ ಸೌಧ. ಇದರ 76 ನೆಯ ಅಂತಸ್ತಿನಲ್ಲಿರುವ ಈಜುಕೊಳ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದು. 154 ನೇ ಅಂತಸ್ತಿನಲ್ಲಿರುವ ಮಸೀದಿ ಜಗತ್ತಿನಲ್ಲಿಯೇ ದೊಡ್ಡದು. ಸೆಕೆಂಡಿಗೆ 59 ಅಡಿ ವೇಗದಲ್ಲಿ ಚಲಿಸುವ ಇದರ ಎಲಿವೇಟರ್ ಜಗತ್ತಿನಲ್ಲಿಯೇ ಅತಿ ವೇಗವಾಗಿ ಚಲಿಸುವಂಥದು. ಮೋಟಾರ್ ಸಿಟಿ, ಹೆಲ್ತ್ ಕೇರ್ ಸಿಟಿ, ಇಂಟರ್ನೆಟ್ ಸಿಟಿ, ಮೀಡಿಯಾ ಸಿಟಿ ಹೀಗೆ ನಗರದೊಳಗೆ ಅನೇಕ ನಗರಗಳಿರುವ ನಗರವೆಂದರೆ ದುಬೈ, ಡ್ರಾಗನ್ ಆಕಾರದಲ್ಲಿರುವ ಸುಮಾರು 1.2 ಕಿ.ಮೀ ಉದ್ದದ ಡ್ರಾಗನ್ ಮಾರ್ಟ್ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಚೀನೀ ಮಾರುಕಟ್ಟೆ. ಸಮುದ್ರದ ತಡಿಯೊಳೊಂದು ಮನೆಯ ಮಾಡಿ ನೊರೆತೊರೆಗಳಿಗಂಜಿದೊಡೆಂತಯ್ಯಾ? ಎಂದು ಹೇಳುವ ಅಕ್ಕಮಹಾದೇವಿಯ ವಚನಕ್ಕೆ ಅಪವಾದವಾಗಿ ಅದಾವ ಅಂಜಿಕೆಯೂ ಇಲ್ಲದಂತೆ ಸಮುದ್ರದ ಮಧ್ಯದಲ್ಲಿಯೇ ತಾಳೆ ಮರದ ಆಕಾರದಲ್ಲಿ ನೂರಾರು ಮನೆಗಳನ್ನು ನಿರ್ಮಿಸಿರುವ ಸಾಹಸ ಕಾರ್ಯವನ್ನು ಇಲ್ಲಿ ನೋಡಬಹುದಾಗಿದೆ. ಜಗತ್ತಿನಲ್ಲಿ ಭಿಕ್ಷುಕರಿಲ್ಲದ ಏಕೈಕ ನಗರವೆಂದರೆ ದುಬೈ. ಕಳ್ಳತನ, ದರೋಡೆಗಳಿಲ್ಲ: ಭ್ರಷ್ಟಾಚಾರದ ಸುಳಿವಿಲ್ಲ, ಅವೇಳೆಯಲ್ಲಿಯೂ ಹೆಣ್ಣುಮಕ್ಕಳು ನಿರಾತಂಕವಾಗಿ ಓಡಾಡಬಹುದಾದ ನಗರ. ಯುವಕ-ಯುವತಿಯರ ಸ್ವೇಚ್ಛಾಚಾರ ಮತ್ತು ಸ್ವಚ್ಛಂದತೆಗಳಿಗೆ ಇಲ್ಲಿ ಅವಕಾಶವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರೊಂದಿಗೆ ಅಸಭ್ಯತನದಿಂದ ನಡೆದುಕೊಂಡರೆ ಮುಲಾಜಿಲ್ಲದೆ ಜೈಲುಶಿಕ್ಷೆ. ಬಸ್ಸುಗಳಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸೀಟು ಖಾಲಿ ಇಲ್ಲದಿದ್ದರೆ ಕುಳಿತಿದ್ದವರು ಎದ್ದು ತಮ್ಮ ಸೀಟುಗಳನ್ನು ತೆರವು ಮಾಡಿ ಕೊಡುತ್ತಾರೆ. ಬ್ಯಾಂಕುಗಳ ಕೌಂಟರ್ ನಲ್ಲಿ ಕ್ಯೂ ಎಷ್ಟೇ ಉದ್ದವಾಗಿದ್ದರೂ ಮಹಿಳೆಯರಿಗೆ ಮುಂದೆ ಹೋಗಲು ಮುಕ್ತ ಅವಕಾಶ. “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಃ” (ಎಲ್ಲಿ ಮಹಿಳೆಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ಹರ್ಷಿಸುತ್ತಾರೆ) ಎಂಬ ಮನುಸ್ಮೃತಿಯ ಆಶಯವನ್ನು ದುಬೈನಲ್ಲಿ ನೋಡಬಹುದು.
ಇಷ್ಟೆಲ್ಲಾ ದುಬೈ ನಗರದ ಬಗ್ಗೆ ಬರೆಯಲು ಕಾರಣ ಹಿಂದಿನ ವಾರ ಇಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮ. ಕಳೆದ ಎಂಟು ವರ್ಷಗಳಿಂದ ಬಸವಜಯಂತಿಯನ್ನು ನಡೆಸಿಕೊಂಡು ಬಂದಿರುವ ಇಲ್ಲಿಯ ಸಂಘಟಕರಿಗೆ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಇತ್ತೀಚೆಗೆ ಆಶ್ರಯತಾಣವಾಗಿರುವುದು ಇಲ್ಲಿರುವ ಸುತ್ತೂರುಶ್ರೀಗಳವರ ಜೆ.ಎಸ್.ಎಸ್ ಅಂತಾರಾಷ್ಟ್ರೀಯ ಶಾಲೆ. ಶ್ರೀಗಳ ಆಹ್ವಾನದ ಮೇರೆಗೆ ನಾಲ್ಕು ವರ್ಷಗಳ ಹಿಂದೆ ಮೊಟ್ಟಮೊದಲಿಗೆ ಇಲ್ಲಿಗೆ ಬಂದಾಗ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರವರಿಂದ ಉದ್ಘಾಟನೆಗೊಂಡ ಈ ಶಾಲೆಯ ಕಾರ್ಯಕ್ರಮ ಅವಿಸ್ಮರಣೀಯ. ಅಪರೂಪಕ್ಕೆ ಆ ದಿನ ಮಳೆಯ ಸಿಂಚನ! ಈ ಶಾಲೆಯಲ್ಲಿ ಓದುವ ಮಕ್ಕಳು ನೂರಕ್ಕೆ ನೂರು ಇಲ್ಲಿರುವ ಅನಿವಾಸಿ ಭಾರತೀಯರ ಮಕ್ಕಳು. ಪಾಣಿನಿಯ ಸಂಸ್ಕೃತ ವ್ಯಾಕರಣ ಸೂತ್ರಗಳನ್ನು ಆಧರಿಸಿ ನಾವು ಸಿದ್ಧಪಡಿಸಿದ ಗಣಕಾಷ್ಟಾಧ್ಯಾಯಿ ಮತ್ತು ಬಸವಾದಿ ಶಿವಶರಣರ ವಚನಗಳನ್ನು ಅಳವಡಿಸಿದ ಗಣಕವಚನ ಸಂಪುಟವೆಂಬ ಎರಡು ತಂತ್ರಾಂಶ (software) ಗಳ ಒಂದು ಗಂಟೆಯ ಪ್ರಾತ್ಯಕ್ಷಿಕೆಯನ್ನು ಮೊನ್ನೆ ಶಾಲಾ ಮಕ್ಕಳು ಕಣ್ಣರಳಿಸಿ ನೋಡಿದರು.
ಎರಡನೆಯ ಬಾರಿ ಬಸವಜಯಂತಿ ನಿಮಿತ್ತ ಇಲ್ಲಿಗೆ ಬಂದಾಗ ಶಾಲೆಯ ಆವರಣವನ್ನು ಪ್ರವೇಶಿಸುತ್ತಿದ್ದಂತೆಯೇ ಹೆಣ್ಣುಮಕ್ಕಳು ನೀಡಿದ ಪೂರ್ಣಕುಂಭ ಸ್ವಾಗತ ಮರುಭೂಮಿಯ ನಾಡಿನಲ್ಲಿ ನಮ್ಮ ಸಂಸ್ಕೃತಿಯ ಗಂಗಾವತರಣವಾದಂತಿತ್ತು. ವ್ಯಕ್ತಿಯ ಬದುಕಿನಲ್ಲಿ ಧರ್ಮ, ಭಾಷೆ ಮತ್ತು ದೇಶ ಮಹತ್ತರ ಪಾತ್ರವನ್ನು ವಹಿಸುತ್ತವೆ. ಅಯಸ್ಕಾಂತದಂತೆ ಅವುಗಳ ಸೆಳೆತ! ಆದರೆ ಒಂದು ಪ್ರಮುಖ ವ್ಯತ್ಯಾಸ. ಅಯಸ್ಕಾಂತದ ಸೆಳೆತ ಹತ್ತಿರದ ವಸ್ತುಗಳ ಮೇಲೆ ಹೆಚ್ಚು ಶಕ್ತಿಯುತವಾಗಿರುತ್ತದೆ. ಸೆಳೆತಕ್ಕೆ ಒಳಗಾದ ವಸ್ತು ದೂರ ದೂರವಾದಂತೆ ಅಯಸ್ಕಾಂತದ ಸೆಳೆತ ಕಡಿಮೆಯಾಗುತ್ತದೆ. ಆದರೆ ಧರ್ಮ, ಭಾಷೆ ಮತ್ತು ದೇಶದ ಸೆಳೆತ ಮಾತ್ರ ವ್ಯಕ್ತಿ ದೂರ ದೂರ ಹೋದಂತೆ ಹೆಚ್ಚಾಗುತ್ತದೆ!
ಆತಿಥೇಯರ ಮನೆಗಳಲ್ಲಿ ನಡೆದ ಸಂಭಾಷಣೆಯಲ್ಲಿ ಶ್ರೀಮತಿ ಅನಿತಾ ನಿರೂಪಿಸಿದ ಎರಡು ಘಟನೆಗಳು ತುಂಬಾ ಹೃದಯವಿದ್ರಾವಕವಾಗಿವೆ: ತಾಯಿಯೊಬ್ಬಳು ತನ್ನ ಪುಟ್ಟ ಮಗನನ್ನು ಶಾಲೆಗೆ ಕಳುಹಿಸಲು ಕಾರಿನಲ್ಲಿ ಬಸ್ ನಿಲ್ದಾಣಕ್ಕೆ ಕರೆದುಕೊಂಡುಹೋದಳು. ಶಾಲಾವಾಹನದ ನಿರೀಕ್ಷೆಯಲ್ಲಿ ಅನೇಕ ಮಕ್ಕಳು ರಸ್ತೆಬದಿಯಲ್ಲಿ ನಿಂತಿದ್ದರು. ಕೆಲಸಕ್ಕೆ ಹೋಗುವ ಅವಸರದಲ್ಲಿದ್ದ ತಾಯಿ ಬಸ್ಸು ಬರುವುದನ್ನು ಕಾಯದೆ ತನ್ನ ಮಗುವನ್ನು ಆ ಮಕ್ಕಳ ಹತ್ತಿರ ಬಿಟ್ಟು ತನ್ನ ಕಾರನ್ನು ಏರಿದಳು. ಮಗು ಮಕ್ಕಳ ಗುಂಪಿನಲ್ಲಿ ನಿಲ್ಲದೆ ತನ್ನನ್ನು ಹಿಂಬಾಲಿಸಿ ಬರುತ್ತಿದ್ದುದನ್ನು ಆಕೆ ಗಮನಿಸಲಿಲ್ಲ. ಅವಸರದಲ್ಲಿ ತನ್ನ ಕಾರನ್ನು ಹಿಂದಕ್ಕೆ ರಿವರ್ಸ್ ತೆಗೆದುಕೊಳ್ಳುವಾಗ ಹಿಂಬಾಲಿಸಿ ಬರುತ್ತಿದ್ದ ಮಗು ಕಾಣದೆ ಆಗಬಾರದ ಅನಾಹುತ ಆಗಿಯೇ ಹೋಯಿತು. ಕಾರಿನ ಹಿಂಭಾಗದ ಚಕ್ರದಡಿ ಸಿಕ್ಕಿಬಿದ್ದ ಮಗು ಕ್ಷಣಾರ್ಧದಲ್ಲಿ ರಕ್ತದ ಮಡುವಿನಲ್ಲಿ ಮುಳುಗಿಹೋಗಿತ್ತು!
ಇನ್ನೊಂದು ದುರ್ಘಟನೆ: ಗಂಡ ವ್ಯವಹಾರದ ನಿಮಿತ್ತ ಬೇರೆ ದೇಶಕ್ಕೆ ಹೋಗಿದ್ದ. ಹಲವು ಅಂತಸ್ತುಗಳ ಮೇಲಿದ್ದ ಮನೆಯಲ್ಲಿ ಪುಟ್ಟ ಬಾಲಕ ಮಲಗಿದ್ದ. ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಮಗ ಹೇಗೂ ಮಲಗಿದ್ದಾನೆ, ಬೇಗನೆ ಬಂದರಾಯಿತು ಎಂದು ಆಲೋಚಿಸಿ ತಾಯಿ ತನ್ನ ಮಗಳನ್ನು ಶಾಲೆಗೆ ಬಿಟ್ಟು ಬರಲು ಮಹಡಿಯ ಮನೆಯಿಂದ ಕೆಳಗೆ ಇಳಿದು ಬಂದಳು. ಬೀದಿಗೆ ಕಾಲಿಡುತ್ತಿದ್ದಂತೆಯೇ ಪುಟ್ಟಬಾಲಕ ಎಚ್ಚರಗೊಂಡು ಕಿಟಕಿಯಿಂದ ಬಗ್ಗಿ ಅಮ್ಮಾ ಎಂದು ಕೂಗಿ ಕರೆಯುತ್ತಿರುವುದು ತಾಯಿಗೆ ಕೇಳಿಸಿತು. ಕಿಟಕಿಗೆ ಜಾಲರಿ ಇರಲಿಲ್ಲ. ಗಾಬರಿಯಿಂದ ತಾಯಿ ಮೆಟ್ಟಿಲು ಹತ್ತಿ ಹೋಗುವುದರೊಳಗೆ ಮಗು ಆಯತಪ್ಪಿ ಬಿದ್ದು ರಕ್ತದ ಮಡುವಿನಲ್ಲಿ ಮುಳುಗಿತ್ತು. ಕೆಳಗೆ ಓಡೋಡಿ ಬಂದ ತಾಯಿ ರಕ್ತಸಿಕ್ತವಾದ ಮಗುವನ್ನು ಅಪ್ಪಿಕೊಂಡು ರೋದಿಸಿದಳು. ತನ್ನ ಮುದ್ದು ಮಗು ತನ್ನ ಕಣ್ಣೆದುರಿಗೇ ಸತ್ತುಹೋದ ದಾರುಣ ದೃಶ್ಯದಿಂದ ಆಕೆಯ ಹೃದಯ ಜರ್ಝರಿತವಾಗಿತ್ತು. ತನ್ನ ಮಗುವಿನ ಸಾವಿಗೆ ತಾನೇ ಕಾರಣಳಾದೆನೆಂದು ಪ್ರಲಾಪಿಸುತ್ತಾ ಮಹಡಿಯ ಮೆಟ್ಟಿಲುಗಳನ್ನು ಮತ್ತೆ ಮೇಲೇರಿ ಮಗು ಬಿದ್ದ ಕಿಟಕಿಯಿಂದಲೇ ತಾನೂ ಬಿದ್ದು ಪ್ರಾಣಕಳೆದುಕೊಂಡಳು! ತಾನೊಂದು ಬಗೆದರೆ ದೈವವೊಂದು ಬಗೆದಿತ್ತು!
ಸಹೃದಯ ಓದುಗರೇ! ಇಂತಹ ದುರ್ಘಟನೆಗಳಿಗೆ ಯಾರು ಹೊಣೆ? ಇದು ವಿಧಿಯ ಅಟ್ಟಹಾಸವೋ ಅಥವಾ ಆಧುನಿಕ ಜೀವನದ ಅವಸರಪ್ರವೃತ್ತಿಯೋ?
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 3.5.2012