“ಅನ್ನದಂತೆ ಗುಣ” ನಿಜವೇ?

  •  
  •  
  •  
  •  
  •    Views  

ಮಸ್ಕಾರ, ಚೆನ್ನಾಗಿದ್ದೀರಾ?” ಇದು ಯಾರಾದರೂ ಭೇಟಿಯಾದಾಗ ಅಥವಾ ಫೋನು ಮಾಡಿದಾಗ ಕೇಳುವ ಮೊದಲ ಪ್ರಶ್ನೆ. ಇದಕ್ಕೆ ಬರುವ ಮಾಮೂಲೀ ಉತ್ತರ “ನಮಸ್ಕಾರ, ಚೆನ್ನಾಗಿದ್ದೀನಿ, ನೀವು ಹೇಗಿದ್ದೀರಾ?” ದೈನಂದಿನ ಜೀವನದಲ್ಲಿ ಹೀಗೆ ಉಭಯಕುಶಲೋಪರಿಯ ಸಂಭಾಷಣೆ ಆರಂಭವಾಗುತ್ತದೆ. ವೈದ್ಯರ ಹತ್ತಿರ ಚಿಕಿತ್ಸೆಗೆಂದು ಹೊರಟಿದ್ದರೂ ಆಕಸ್ಮಿಕವಾಗಿ ದಾರಿಯಲ್ಲಿ ಸಿಕ್ಕು ಮಾತನಾಡಿಸಿದವರಿಗೆ ಚೆನ್ನಾಗಿದ್ದೇನೆಂದು ಹೇಳುತ್ತಲೇ ಆಸ್ಪತ್ರೆಯ ಕಡೆ ಹೊರಡುತ್ತಾರೆ. ಚೆನ್ನಾಗಿಲ್ಲದಿದ್ದರೂ ಚೆನ್ನಾಗಿರುವಂತೆ ತೋರಿಸಿಕೊಳ್ಳುತ್ತಾರೆ. ಆಸ್ಪತ್ರೆಗೆ ಹೊರಟಿದ್ದೇನೆಂದು ಹೇಳಿದರೆ ಏಕೆಂದು ಕೇಳಬಹುದಾದ ಮುಂದಿನ ಪ್ರಶ್ನೆಗಳಿಗೆ ಉತ್ತರಿಸಲು ಇವರಿಗೆ ಮುಜುಗರವಾದರೆ ಕೇಳಿಸಿಕೊಳ್ಳಲು ಅವರಿಗೆ ವ್ಯವಧಾನ ಇರುವುದಿಲ್ಲ. ಕೆಲವರ ಸಂಭಾಷಣೆ ಹೀಗೆ ಔಪಚಾರಿಕತೆಯಲ್ಲಿ ಬೇಗನೆ ಮುಗಿದುಹೋಗುತ್ತದೆ. ಇನ್ನು ಕೆಲವರ ಸಂಭಾಷಣೆ ಅವರವರ ಬದುಕಿನ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಾ ದೀರ್ಘಕಾಲ ಮುಂದುವರಿಯುತ್ತದೆ. ಸಂಭಾಷಣೆಯ ಸ್ವರೂಪದ ಆಧಾರದ ಮೇಲೆ ವ್ಯಕ್ತಿ ವ್ಯಕ್ತಿಗಳ ಮಧ್ಯೆ ಇರುವ ಸ್ನೇಹ-ವಿಶ್ವಾಸ ಮತ್ತು ಆತ್ಮೀಯತೆಯನ್ನು ಸುಲಭವಾಗಿ ಅಳೆಯಬಹುದು. “ಏನೋ ಸತ್ತಿಲ್ಲ, ಬದುಕಿಲ್ಲ ಹೀಗಿದ್ದೀನಿ”, “ಏಕಾದರೂ ಬದುಕಿದ್ದೇನೋ ಎನ್ನಿಸಿಬಿಟ್ಟಿದೆ”, “ಈ ಜೀವನ ಸಾಕಾಗಿಬಿಟ್ಟಿದೆ” ಇತ್ಯಾದಿ ಹತಾಶೆಯ ಮಾತುಗಳೂ ಕೇಳಿಬರುತ್ತವೆ. ಕಳೆದ ವಾರ “ಒಬ್ಬೊಬ್ಬರಿಗೆ ಒಂದೊಂದು ಹುಚ್ಚು” ಎಂದು ಬರೆದ ಅಂಕಣ ಬರಹಕ್ಕೆ ಪ್ರತಿಕ್ರಿಯಿಸುತ್ತಾ ಬೆಂಗಳೂರಿನ ಓದುಗರೊಬ್ಬರಾದ ಡಾ.ಸುಧಾ ಶ್ರೀನಾಥ್ ರವರು ಅವರ ತಂದೆ ತೆಲುಗಿನಲ್ಲಿ ಹಾಡುತ್ತಿದ್ದ ಒಂದು ಕವಿತೆಯನ್ನು ನೆನಪಿಸಿಕೊಂಡು ಬರೆದಿದ್ದಾರೆ. ಅವರೇ ಕನ್ನಡದಲ್ಲಿ ಭಾಷಾಂತರಿಸಿ ಕಳುಹಿಸಿಕೊಟ್ಟ ಆ ತೆಲುಗು ಕವಿತೆ ಹೀಗಿದೆ: 

ಪಿಚ್ಚಿ ಪಿಚ್ಚಿ ಪಿಚ್ಚಿ 
ರಖ ರಖಾಲ ಪಿಚ್ಚಿ 
ಏ ಪಿಚ್ಚಿ ಲೇದನುಕೊಂಟೆ 
ಅದಿ ಚಿತ್ರಮೈನ ಪಿಚ್ಚಿ!

(ಹುಚ್ಚು ಹುಚ್ಚು ಹುಚ್ಚು 
ತರಹೆವಾರಿ ಹುಚ್ಚು 
ಯಾವ ಹುಚೂ ಇಲ್ಲವೆಂದುಕೊಂಡ್ರೆ 
ಅದುವೆ ವಿಚಿತ್ರವಾದ ಹುಚ್ಚು!)

ಬದುಕಿನಲ್ಲಿ ಒಳ್ಳೆಯ ಹುಚ್ಚು ಇರಬೇಕೆಂಬುದು ಈ ಓದುಗರ ವಾದ. ಅದರಲ್ಲಿ ಎರಡು ಮಾತಿಲ್ಲ. ಆದರೆ ಯಾವುದಕ್ಕೂ ಒಂದು ಮಿತಿ ಇರಬೇಕೆನ್ನುತ್ತದೆ ಅವರೇ ಉಲ್ಲೇಖಿಸಿರುವ ಭಗವದ್ಗೀತೆಯ ಈ ಮುಂದಿನ ಶ್ಲೋಕ:

ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು | 
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ ||

ಭಗವದ್ಗೀತೆಯ ಪ್ರಕಾರ ಯೋಗವೆಂದರೆ ಕೇವಲ ಧ್ಯಾನವಲ್ಲ. ಯುಕ್ತವೆಂದರೆ ಮಿತಿ ಅಷ್ಟೇ ಅಲ್ಲ, ನಿತ್ಯವೂ ನಾವು ಸೇವಿಸುವ ಆಹಾರದಲ್ಲಿ ಮಾಡುವ ದೈನಂದಿನ ಕಾರ್ಯಗಳಲ್ಲಿ, ವಿಹಾರ-ವಿಲಾಸಗಳಲ್ಲಿ ಎಚ್ಚರವಾಗಿರಲಿ, ಮಲಗಿರಲಿ ಇರಬೇಕಾದ ಒಳ ಎಚ್ಚರ. ಬೇರೆಡೆ ಹೇಳಿರುವಂತೆ ಅದು ನಿವೃತ್ತಿಯೂ ಅಲ್ಲ, ಪ್ರವೃತ್ತಿಯೂ ಅಲ್ಲ, ಪ್ರವೃತ್ತಿಯಲ್ಲಿರಬೇಕಾದ ನಿವೃತ್ತಿ. “ಯೋಗಃ ಕರ್ಮಸು ಕೌಶಲಂ" ಅಂದರೆ ಮಾಡುವ ಕಾರ್ಯದಲ್ಲಿರಬೇಕಾದ ಕುಶಲತೆ. ಇಲ್ಲಿ ಕುಶಲತೆಯೆಂದರೆ ಯಾವುದೇ ವಿಷಯವನ್ನು ಕುರಿತಾದ ಬೌದ್ಧಿಕ ಜ್ಞಾನದ ಪರಿಣತಿ (expertise) ಖಂಡಿತಾ ಅಲ್ಲ. ಅರಿವು ಆಚಾರದಲ್ಲಿ ಅಳವಡಬೇಕಾದ ಅಂತರಂಗದ ಕಠಿಣ ಸಾಧನೆ. 

ಈ ಪ್ರಪಂಚದಲ್ಲಿ ಎಲ್ಲರೂ ಸುಖವಾಗಿರಲು ಬಯಸುತ್ತಾರೆ. ಆದರೆ ಸುಖದ ಮೂಲವೇನೆಂಬುದೇ ತಿಳಿಯದು. ಸಂಪತ್ತು ಸುಖಕ್ಕೆ ದಾರಿಯಾಗಬಹುದೇ ಹೊರತು ಸಂಪತ್ತೊಂದೇ ಸುಖವಲ್ಲ. “ಅರ್ಥರೇಖೆ ಇದ್ದಲ್ಲಿ ಫಲವೇನು ಆಯುಷ್ಯರೇಖೆ ಇಲ್ಲದನ್ನಕ್ಕ” ಎನ್ನುತ್ತಾರೆ ಬಸವಣ್ಣನವರು. ಈ ವಚನದ ವಿಚಾರದ ಎಳೆಯನ್ನು ಮುಂದುವರಿಸಿ “ಆಯುಷ್ಯರೇಖೆ ಇದ್ದಲ್ಲಿ ಫಲವೇನು ಆರೋಗ್ಯರೇಖೆ ಇಲ್ಲದನ್ನಕ್ಕ” ಎಂದು ಹೇಳಬಹುದು. ಮನುಷ್ಯನಿಗೆ ದುಡ್ಡು ಎಷ್ಟು ಮುಖ್ಯವೋ ಅದಕ್ಕಿಂತ ಮುಖ್ಯ ಶರೀರದ ಆರೋಗ್ಯ. ಅನೇಕರು ಸಂಪತ್ತಿನ ಸಂಗ್ರಹಣೆಯ ಭರದಲ್ಲಿ ಸ್ವಂತ ಆರೋಗ್ಯದ ಕಡೆ ಗಮನವನ್ನೇ ಕೊಡುವುದಿಲ್ಲ. “ಹರಿಕೊಟ್ಟ ಕಾಲಕ್ಕೆ ಉಣಲಿಲ್ಲ, ಹರಿ ಕೊಡದ ಕಾಲಕ್ಕೆ ಬಾಯಿ ಬಿಡುವೆಯಲ್ಲೋ ಪ್ರಾಣಿ” ಎಂದು ಎಚ್ಚರಿಸುತ್ತಾರೆ ಪುರಂದರದಾಸರು. ಶರೀರಮಾದ್ಯಂ ಖಲು ಧರ್ಮಸಾಧನಂ, ಧರ್ಮಸಾಧನೆಗೆ ಶರೀರ ಬಹಳ ಮುಖ್ಯ. ಅಂತೆಯೇ ಶರೀರಧಾರಣೆಗೆ ಆಹಾರವೂ ಬಹಳ ಮುಖ್ಯ. ನಾವು ಸೇವಿಸುವ ಆಹಾರ ಮತ್ತು ಸೇವಿಸುವಾಗಿನ ಮನಃಸ್ಥಿತಿಯಂತೆ ನಮ್ಮ ಬದುಕು ರೂಪುಗೊಳ್ಳುತ್ತದೆ. ಶರಣರು ಅನ್ನಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಆಹಾರಸೇವನೆಯನ್ನು ಅವರು ಊಟ ಎನ್ನುವುದಿಲ್ಲ. ಪ್ರಸಾದವೆಂದು ಕರೆಯುತ್ತಾರೆ. ಅನ್ನವನ್ನು ಕೂಳೆಂದು ಭಾವಿಸದೆ, ಊಟದಲ್ಲಿ ಕೇವಲ ಬಾಯಿ ರುಚಿಯನ್ನು ಕಾಣದೆ ಅದೂ ಸಹ ಶಿವಪೂಜೆಯ ಒಂದು ಭಾಗವನ್ನಾಗಿ ಪರಿಗಣಿಸಿದ್ದಾರೆ ಬಸವಣ್ಣನವರು: 

ಮೌನದಲುಂಬುವುದು ಆಚಾರವಲ್ಲ 
ಲಿಂಗಾರ್ಪಿತವ ಮಾಡಿದ ಬಳಿಕ 
ತುತ್ತಿಗೊಮ್ಮೆ ಶಿವಶರಣು ಎನ್ನುತ್ತಿರಬೇಕು 
ಕರಣವೃತ್ತಿಗಳಡಗುವುವು ಕೂಡಲ ಸಂಗನ 
ನೆನೆಯುತ್ತ ಉಂಡರೆ

ಊಟಕ್ಕೆ ಕುಳಿತಾಗ ಉಣ್ಣುವ ಆಹಾರವನ್ನು ದೇವರ ಪ್ರಸಾದವೆಂದು ಪರಿಭಾವಿಸಿ ದೇವರನ್ನು ನೆನೆಯುತ್ತಾ ಉಂಡರೆ ಕರಣವೃತ್ತಿಗಳಡಗುವುವು ಅಂದರೆ ಮನುಷ್ಯನ ಇಂದ್ರಿಯಗಳ ವಿಕಾರ ಕೊನೆಗೊಂಡು ಮನಃಶಾಂತಿ ದೊರೆಯುತ್ತದೆ ಎಂಬುದು ಬಸವಣ್ಣನವರ ಈ ವಚನದ ಆಶಯ. ಜಗತ್ತಿನ ಎಲ್ಲ ಧರ್ಮಗಳಲ್ಲಿಯೂ ಈ ತಾತ್ವಿಕಬೋಧನೆ ಇರುವುದು ಕಂಡುಬರುತ್ತದೆ. ಸಂಪ್ರದಾಯಸ್ಥ ಕ್ರೈಸ್ತ ಧರ್ಮೀಯರ ಮನೆಗಳಲ್ಲಿ ಊಟಕ್ಕೆ ಕುಳಿತಾಗ ಆರಂಭದಲ್ಲಿ ಎಲ್ಲರೂ ಕಣ್ಮುಚ್ಚಿ ಮಾಡುವ ಈ ಮುಂದಿನ ಪ್ರಾರ್ಥನೆಯನ್ನು ಗಮನಿಸಿ. 

Our Father in heaven 
Give us this day our daily bread 
Forgive us our sins 
Lead us not into temptation 
But deliver us from evil 
The Kindom, the power and the glory are yours 
Now and for ever - Amen!

ದಿನನಿತ್ಯ ದೂರದರ್ಶನದ ಮುಂದೆ ಕುಳಿತು ಉಣ್ಣುವ ಇಂದಿನ ದಿನಮಾನಗಳಲ್ಲಿ ಈ ಪ್ರಾರ್ಥನೆಗಳು ತಮ್ಮ ಮೌಲ್ಯಗಳನ್ನು ಕಳೆದುಕೊಂಡಿವೆಯೆಂದು ಹೇಳಲು ಸಾಧ್ಯವೇ? 

ಭಾರತೀಯರು ಆಹಾರವನ್ನು ಅನ್ನವೆಂದು ಕರೆಯುತ್ತಾರೆ. ಅನ್ನವೆಂದರೆ ಕೇವಲ ಅಕ್ಕಿಯನ್ನು ಬೇಯಿಸಿ ತಯಾರಿಸಿದ ಖಾದ್ಯವಲ್ಲ. ಇಂಗ್ಲೀಷಿನಲ್ಲಿ Bread ಎಂದು ಬಳಸುವಂತೆ ಭಾರತೀಯರು ಆಹಾರವೆಂಬರ್ಥದಲ್ಲಿ ಅನ್ನ ಎಂಬ ಶಬ್ದವನ್ನು ಬಳಸುತ್ತಾರೆ. ಶರೀರದ ಆರೋಗ್ಯಕ್ಕೆ ಹಿತಮಿತವಾದ ಆಹಾರಸೇವನೆ ಮುಖ್ಯ. ಕೆಲವರಿಗೆ ಊಟ ಮಾಡಲೂ ಸಹ ಪುರುಸೊತ್ತು ಇಲ್ಲ. ಇನ್ನು ಕೆಲವರಿಗೆ ಹೇಗೆ ಊಟಮಾಡಬೇಕೆಂಬುದೇ ತಿಳಿಯದು. ಈ ವಿಚಾರದಲ್ಲಿ ಮನುಷ್ಯನಿಗಿಂತಲೂ ಪ್ರಾಣಿಗಳು ಎಷ್ಟೋ ವಾಸಿ ಎನಿಸುತ್ತದೆ. ಮನುಷ್ಯನನ್ನು ಕೂಳುಬಾಕ ಎನ್ನಬಹುದೇ ಹೊರತು ಪ್ರಾಣಿಗಳನ್ನಲ್ಲ. ಹೊಟ್ಟೆ ತುಂಬಿದ ಬಳಿಕ ಯಾವ ಪ್ರಾಣಿಯೂ ಎಷ್ಟೇ ರುಚಿಕರವಾದ ಆಹಾರ ಕಣ್ಮುಂದಿದ್ದರೂ ಮುಟ್ಟುವುದಿಲ್ಲ. “ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ” ಎನ್ನುತ್ತದೆ ಕನ್ನಡದ ಗಾದೆ. ಹೇಗೆ ಊಟ ಮಾಡಬೇಕೆಂಬ ಬಗ್ಗೆ ಜರ್ಮನ್ ಭಾಷೆಯಲ್ಲಿ ಒಂದು ಅಪರೂಪದ ಸೂಕ್ತಿ ಇದೆ: “Frustucken wie ein Konig, Mittagessen wie ein Bauer, Abendessen wie ein Betler”. ಅಂದರೆ ಬೆಳಗಿನ ಉಪಾಹಾರವನ್ನು ರಾಜನಂತೆ ಮಾಡಬೇಕು, ಮಧ್ಯಾಹ್ನದ ಊಟವನ್ನು ರೈತನಂತೆ ಮಾಡಬೇಕು, ರಾತ್ರಿ ಊಟವನ್ನು ಭಿಕ್ಷುಕನಂತೆ ಮಾಡಬೇಕು. ಆಧುನಿಕ ವೈದ್ಯಕೀಯಶಾಸ್ತ್ರಕ್ಕೂ ಒಪ್ಪಿತವಾಗಬಲ್ಲ ಈ ಮಾತಿನ ಆಶಯಕ್ಕೆ ತದ್ವಿರುದ್ದವಾಗಿ ನವನಾಗರೀಕ ಸಮಾಜ ನಡೆಯುತ್ತಿದೆ. ಆರೋಗ್ಯಶಾಸ್ತ್ರದಲ್ಲಿ ವಯೋಮಾನಕ್ಕನುಗುಣವಾಗಿ ಶರೀರದ ತೂಕ ಇಂತಿಷ್ಟೇ ಇರಬೇಕೆಂಬ ನಿಯಮವಿದೆ. ಶರೀರದ ತೂಕ ಹೆಚ್ಚಾದಷ್ಟೂ ಅನಾರೋಗ್ಯಕರ. ಆದರೆ ಶರೀರದ ತೂಕಕ್ಕಿಂತ ವ್ಯಕ್ತಿತ್ವದ ತೂಕ ಹೆಚ್ಚಿಸಿಕೊಳ್ಳುವುದು ಶ್ರೇಯಸ್ಕರ. ನಮ್ಮ ಮುಂದಾಳುಗಳು ಅದನ್ನು ಹೆಚ್ಚಿಸಿಕೊಂಡಷ್ಟೂ ಈ ನಾಡಿಗೆ ಒಳಿತು. 

ಆರೋಗ್ಯ ಕೆಟ್ಟಮೇಲೆ ಔಷಧವನ್ನು ಕಟ್ಟುನಿಟ್ಟಾಗಿ ಸೇವಿಸುವುದಕ್ಕಿಂತ ಯುಕ್ತವಾದ ಆಹಾರವನ್ನೇ ಔಷಧವನ್ನಾಗಿ ಸೇವಿಸುವುದು ಅಪೇಕ್ಷಣೀಯ. ಶರೀರ ಅನೇಕ ರೋಗರುಜಿನಗಳಿಗೆ ತಾಣವಾಗುವುದು ಆಸ್ತಿಕರ ನಂಬುಗೆಯ ಪ್ರಕಾರ ಪೂರ್ವಜನ್ಮದ ಪಾಪಕ್ಕಿಂತ ಹೆಚ್ಚಾಗಿ ಈ ಜನ್ಮದ ಪುಣ್ಯಕಾರ್ಯಗಳೇ ಬಹುಮಟ್ಟಿಗೆ ಕಾರಣ. ಅನೇಕರು ತಮ್ಮ ಹೊಟ್ಟೆಯನ್ನು ಕಸದ ಬುಟ್ಟಿಯನ್ನಾಗಿ ಮಾಡಿಕೊಂಡಿರುತ್ತಾರೆ. ನಾಲಿಗೆಯ ರುಚಿಗೋಸ್ಕರ ಅಪಥ್ಯವಾದ ಆಹಾರ-ಪಾನೀಯ ಸೇವಿಸಿ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಾರೆ. ಹಳ್ಳಿಗಳಲ್ಲಿ ಮೋಟಾರು ಸೈಕಲ್ ಇಟ್ಟುಕೊಂಡಿರುವ ಯುವಕರು ಮಾತಿನ ಪ್ರಸಂಗದಲ್ಲಿ ಇದು ಹೆಚ್ಚು ಮೈಲೇಜ್ (mileage) ಕೊಡುವುದಿಲ್ಲ, ಬಹಳ ಎಣ್ಣೆ ಕುಡಿಯುತ್ತದೆ” ಎಂದು ಹೇಳುವ ಮಾತನ್ನು ನೀವು ಕೇಳಿರಬಹುದು. ಈ ಮಾತು ಅವರ ನಡವಳಿಕೆಗಳನ್ನು ನೋಡಿ ನಮಗೆ ದ್ವಂದ್ವಾರ್ಥವಾಗಿ ತೋರುತ್ತದೆ. ಇದು ಅವರ ಮೋಟಾರು ಸೈಕಲ್ಲಿಗಷ್ಟೇ ಅನ್ವಯಿಸುವುದಿಲ್ಲ, ಅದರ ಮೇಲೆ ಕುಳಿತು ಸವಾರಿಮಾಡುವ ಆ ಯುವಕರಿಗೂ ಅನ್ವಯಿಸುತ್ತದೆ. ಅದರಿಂದ ಅವರ ಆಯುಷ್ಯದ ಮೈಲೇಜ್ ಕಡಿಮೆಯಾಗುತ್ತದೆಯೆಂಬುದನ್ನು ಅವರು ಮನಗಾಣದಿರುವುದು ವಿಷಾದಕರ! 

ಅನ್ನದಂತೆ ಗುಣ ಎಂಬ ಮಾತನ್ನು ನೀವು ಕೇಳಿರಬಹುದು. ಎಲ್ಲಿಯೋ ಓದಿದ ಒಂದು ದಂತಕಥೆ. ಮಹಾಪರಾಕ್ರಮಶಾಲಿಯಾದ ಛತ್ರಪತಿ ಶಿವಾಜಿಯು ಒಮ್ಮೆ ಶತ್ರುವಿನ ಕೋಟೆಗೆ ಮುತ್ತಿಗೆಯನ್ನು ಹಾಕಿದ. ಎದುರಾಳಿಯ ಸೈನ್ಯದೊಂದಿಗೆ ವೀರಾವೇಶದಿಂದ ಹೋರಾಡಿ ಕೋಟೆಯೊಳಕ್ಕೆ ನುಗ್ಗಿದ. ಕೋಟೆಯ ಹೆಬ್ಬಾಗಿಲಿನೊಳಗೆ ಕಾಲಿಡುತ್ತಿದ್ದಂತೆಯೇ ಅದೇಕೋ ಏನೋ ಕ್ಷಣಕಾಲ ಅವನ ಎದೆ “ಝಲ್” ಎಂದು ನಡುಗಿತು. ಸ್ವಲ್ಪದರಲ್ಲಿಯೇ ಸಾವರಿಸಿಕೊಂಡು ಮುನ್ನುಗ್ಗಿ ಶತ್ರುವಿನ ಕೋಟೆಯ ಮೇಲೆ ತನ್ನ ವಿಜಯ ಪತಾಕೆಯನ್ನು ಹಾರಿಸಿದ. ಆದರೂ ಅವನ ಮನಸ್ಸಿನಲ್ಲಿ ಒಂದು ಸಂಶಯವು ಬಲವಾಗಿ ಕಾಡಿಸುತ್ತಿತ್ತು: ರಣರಂಗದಲ್ಲಿ ಹಿಂದೆಂದೂ ತನ್ನ ಎದೆಯು ಈ ರೀತಿ ನಡುಗಿರಲಿಲ್ಲ. ಈ ದಿನ ಹೀಗೇಕೆ ಆಯಿತು? ತಾಯಿ ಜೀಜಾಬಾಯಿಯ ಹತ್ತಿರ ಧಾವಿಸಿದ. ಇದಕ್ಕೆ ಕಾರಣವೇನಿರಬಹುದು ಎಂದು ಕೇಳಿದ. ಜೀಜಾಬಾಯಿಯು ಯೋಚನಾಮಗ್ನಳಾದಳು. ಅವಳಿಗೆ ಶಿವಾಜಿಯ ಬಾಲ್ಯಜೀವನದ ಒಂದು ಘಟನೆ ನೆನಪಾಯಿತು: 

ಅಂತಃಪುರದಲ್ಲಿ ಮಗು ಶಿವಾಜಿಯ ಲಾಲನೆ-ಪಾಲನೆ ಮಾಡಲು ದಾಸಿಯೊಬ್ಬಳನ್ನು ನೇಮಿಸಲಾಗಿತ್ತು. ಒಮ್ಮೆ ಬಹಳವಾಗಿ ಅಳುತ್ತಿದ್ದ ಮಗು ಶಿವಾಜಿಯನ್ನು ಸಂತೈಸಲು ಆ ದಾಸಿಯು ತನ್ನ ಎದೆಯ ಹಾಲನ್ನು ಉಣಿಸುತ್ತಿದ್ದಳು. ಇದನ್ನು ದೂರದಿಂದ ನೋಡಿದ ತಾಯಿ ಜೀಜಾಬಾಯಿಯು ಒಮ್ಮೆಲೇ ಓಡಿಬಂದು ದಾಸಿಯ ಕೈಯಿಂದ ಮಗುವನ್ನು ಕಸಿದುಕೊಂಡು ಮಗುವಿನ ಹೊಟ್ಟೆಯನ್ನು ಸೇರಿದ್ದ ಆಕೆಯ ಎದೆಹಾಲನ್ನು ಕಕ್ಕಿಸಿದಳು. ಆದರೂ ಒಂದೆರಡು ತೊಟ್ಟು ಹೊಟ್ಟೆಯಲ್ಲಿ ಹಾಗೆಯೇ ಉಳಿದುಕೊಂಡುಬಿಟ್ಟಿತು. ಹೀಗೆ ಆ ದಾಸಿಯ ಎದೆಹಾಲನ್ನು ಕುಡಿದ ಪರಿಣಾಮವಾಗಿಯೇ ನಿನಗೆ ಈ ರೀತಿ ಎದೆನಡುಕ ಉಂಟಾಗಿರಬೇಕು ಎಂದು ತಾಯಿ ಜೀಜಾಬಾಯಿಯು ಶಿವಾಜಿಗೆ ಹೇಳಿದಳಂತೆ! 

ದಾಸಿಯ ಎದೆಹಾಲು ದಾಸೀಪುತ್ರನಿಗೇ ಹೊರತು ರಾಜಪುತ್ರನಿಗೆ ಅಲ್ಲ. ದಾಸಿಯ ಹಾಲಿನಿಂದ ದಾಸ್ಯದ ಗುಣಗಳು ಬರುತ್ತವೆಯೇ ಹೊರತು ವೀರಪೌರುಷದ ಗುಣಗಳು ಬರಲು ಸಾಧ್ಯವಿಲ್ಲ. ಆದ್ಧರಿಂದ ಶಿವಾಜಿಯ ಎದೆ ನಡುಕಕ್ಕೆ ದಾಸಿಯ ಎದೆಹಾಲೇ ಕಾರಣ ಎಂದು ಪರಿಭಾವಿಸುವುದು ಎಷ್ಟರಮಟ್ಟಿಗೆ ಸಮಂಜಸ? “ಸೇವಾಧರ್ಮೋ ಪರಮಗಹನೋ ಯೋಗೀನಾಮಪ್ಯಗಮ್ಯಃ!” ಅಂದರೆ ಸೇವಾಧರ್ಮವು ಅಷ್ಟು ಸುಲಭವಾದ ಕಾರ್ಯವಲ್ಲ; ಅದು ಯೋಗಿಗಳಿಗೂ ನಿಲುಕದ್ದು ಎಂದು ಈ ನೀತಿವಾಕ್ಯ ಹೇಳುತ್ತದೆ. ಅಂತಹ ಕ್ಲಿಷ್ಟಕರವಾದ ಸೇವೆಯನ್ನು ಆ ದಾಸಿಯು ಬಹಳ ನಿಷ್ಠೆಯಿಂದ ಮಾಡಿದ್ದಾಳೆ. ತಾನೊಬ್ಬ ದಾಸಿ, ಪರಿಚಾರಿಕೆ, ಸೇವಕಿ ಎಂದಷ್ಟೇ ಭಾವಿಸದೆ ತನ್ನ ಸ್ವಂತ ಮಗನೇನೋ ಎನ್ನುವಂತೆ ಮಗು ಶಿವಾಜಿಯನ್ನು ನೋಡಿಕೊಂಡಿದ್ದಾಳೆ. ಈ ರೀತಿ ಅತ್ಯಂತ ಅಕ್ಕರೆಯಿಂದ, ಮಾತೃವಾತ್ಸಲ್ಯದಿಂದ ಲಾಲನೆ-ಪಾಲನೆ ಮಾಡಿದ ಆ ದಾಸಿಯನ್ನು ಹೀಗೆ ಎತ್ತೆಣಿಸುವುದು ಸರಿಯೇ? ತನ್ನ ಮಗುವಿನ ಮೇಲೆ ಮಮತೆ, ಪ್ರೀತಿ, ವಾತ್ಸಲ್ಯಗಳು ನಿಜವಾದ ತಾಯಿಯಾದವಳಿಗೆ ಇರುವುದು ಪ್ರಕೃತಿಸಹಜವಾದ ಗುಣ. ಅಂತಹ ತಾಯ್ತನವನ್ನು ತನ್ನ ಎದೆಯಲ್ಲಿ ತುಂಬಿಟ್ಟುಕೊಂಡು, ತನ್ನ ಸ್ವಂತ ಮಗುವಿನೋಪಾದಿಯಲ್ಲಿ ಮೈದಡವಿ, ಮುದ್ದಿಸಿ, ತನ್ನ ಎದೆಹಾಲನ್ನು ಉಣಿಸಿದ ಆ ದಾಸಿಯ ಹೃದಯಕ್ಕೆ ಜೀಜಾಬಾಯಿಯ ಈ ಮೂದಲಿಕೆಯ ಮಾತುಗಳಿಂದ ಅದೆಷ್ಟು ನೋವು ಉಂಟಾಗಿರಬಹುದು! ಆಕೆ ಮರೆಯಲ್ಲಿಯೇ ನಿಂತು ಅದೆಷ್ಟು ಕಣ್ಣೀರು ಸುರಿಸಿರಬಹುದು! ಅನ್ನದಂತೆ ಗುಣ ಎಂಬುದೊಂದು ಸಾಮಾನ್ಯ ಗ್ರಹಿಕೆ. ಮಗು ಅಳುವಾಗ ಆ ದಾಸಿಯು ಹಾಲುಣಿಸಿದ್ದು ಮಾನವೀಯ ಸ್ಪಂದನವಲ್ಲವೇ? ರಾಜಮಾತೆಯು ಅದನ್ನು ಕಕ್ಕಿಸಿದ್ದು ಅಮಾನವೀಯ ವರ್ತನೆಯಲ್ಲವೇ? ಅದರ ಮೇಲೆ ಶಿವಾಜಿಯ ಎದೆ ನಡುಕಕ್ಕೆ ದಾಸಿಯ ಎದೆ ಹಾಲೇ ಕಾರಣವಿರಬೇಕೆಂದು ಹೇಳುವುದು ಆ ದಾಸಿಯ ಸೇವಾನಿಷ್ಠೆಗೆ, ಒಟ್ಟಾರೆ ತಾಯ್ತನಕ್ಕೆ ಮಾಡಿದ ಅಪಚಾರವಲ್ಲವೇ? ಅಷ್ಟಕ್ಕೂ ಆ ದಾಸಿಯಾದರೂ ರಾಜಮನೆತನದ ಅನ್ನವನ್ನೇ ಅಲ್ಲವೇ ಉಣ್ಣುತ್ತಿದ್ದುದು!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 11.8.2010.