ಅರಿದಡೆ ಶರಣ ಮರೆದಡೆ ಮಾನವ!

  •  
  •  
  •  
  •  
  •    Views  

ವನಾಗರೀಕತೆಯ ಸೋಂಕಿಲ್ಲದ ಒಂದು ಊರು. ಆ ಊರಿನವರು ಯಾರೂ ಕನ್ನಡಿಯನ್ನು ಕಂಡರಿಯರು, ಕೇಳರಿಯರು. ಒಬ್ಬನಿಗೆ ದಾರಿಯಲ್ಲಿ ಹೋಗುವಾಗ ಒಂದು ಕನ್ನಡಿ ಸಿಕ್ಕಿತು. ಕನ್ನಡಿ ಏನೆಂದು ಗೊತ್ತಿರದ ಅವನಿಗೆ ಅದರಲ್ಲಿ ಕಾಣಿಸುತ್ತಿರುವುದು ತನ್ನ ಪ್ರತಿಬಿಂಬ ಎಂದು ತಿಳಿಯದೆ ಯಾರದೋ ಚಿತ್ರವಿರಬೇಕೆಂದು ಭ್ರಮಿಸುತ್ತಾನೆ. ಮನೆಗೆ ಬಂದ ಮೇಲೆ ಅದನ್ನು ತನ್ನ ಕಪಾಟಿನಲ್ಲಿ ಭದ್ರವಾಗಿ ಇಡುತ್ತಾನೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಕಪಾಟಿನ ಬೀಗ ತೆಗೆದು ಅದನ್ನು ಕುತೂಹಲದಿಂದ ನೋಡುತ್ತಿರುತ್ತಾನೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಆತನ ಹೆಂಡತಿ ಅದು ಏನೆಂದು ಕೇಳಿದಾಗ ಗದರಿಸುತ್ತಾನೆ. ಕುತೂಹಲ ತಡೆಯಲಾರದೆ ತನ್ನಿಂದ ಗಂಡ ಮುಚ್ಚಿಡುತ್ತಿರುವುದು ಏನಿರಬಹುದೆಂದು ನೋಡಲು ಹೆಂಡತಿ ನಿರ್ಧರಿಸುತ್ತಾಳೆ. ಒಂದು ದಿನ ರಾತ್ರಿ ಗಂಡ ಮಲಗಿ ಗಾಢ ನಿದ್ರೆಯಲ್ಲಿದ್ದಾಗ ಅವನ ಸೊಂಟದಲ್ಲಿದ್ದ ಬೀಗದ ಕೈಯನ್ನು ತೆಗೆದುಕೊಂಡು ನಿಶ್ಯಬ್ದವಾಗಿ ಕಪಾಟನ್ನು ತೆರೆಯುತ್ತಾಳೆ. ಕನ್ನಡಿಯನ್ನು ಕೈಗೆತ್ತಿಕೊಂಡು ನೋಡಿದಾಗ ಅದರಲ್ಲಿ ಆಕೆಯ ಅನುಮಾನದ ಕಣ್ಣುಗಳಿಗೆ ಕಾಣಿಸಿದ್ದು ಒಬ್ಬ ಸುಂದರಿಯ ಫೋಟೋ! ಅದರಲ್ಲಿ ಕಾಣಿಸುತ್ತಿರುವುದು ತನ್ನದೇ ಪ್ರತಿಬಿಂಬ ಎಂದು ತಿಳಿಯದೆ ಆಕೆ ತನ್ನ ಗಂಡ ಬೇರೊಬ್ಬಳ ಪ್ರೇಮಪಾಶಕ್ಕೆ ಸಿಲುಕಿದ್ದಾನೆಂದು ಪರಿತಪಿಸುತ್ತಾಳೆ. ಪ್ರತಿದಿನ ರಾತ್ರಿ ಮಲಗುವ ಮೊದಲು ತನ್ನ ಪ್ರೇಯಸಿಯ ಫೋಟೋ ನೋಡುತ್ತಾನೆಂಬ ತನ್ನ ಅನುಮಾನವನ್ನು ಅತ್ತೆಯ ಹತ್ತಿರ ಹೇಳುತ್ತಾಳೆ. ಅತ್ತೆಯೂ ಸಹ ಮಗನ ಕಣ್ಣು ತಪ್ಪಿಸಿ ಕನ್ನಡಿ ನೋಡುತ್ತಾಳೆ. ಅವಳಿಗೂ ಕನ್ನಡಿ ಏನೆಂದು ಗೊತ್ತಿರುವುದಿಲ್ಲ ಅದರಲ್ಲಿ ಕಾಣಿಸುತ್ತಿರುವುದು ತನ್ನದೇ ಪ್ರತಿಬಿಂಬ ಎಂದು ತಿಳಿಯದ ಆಕೆ “ಅಯ್ಯೋ ನನ್ನ ಮಗ ಎಂಥ ಕಡುಮೂರ್ಖನಿದ್ದಾನೆ, ಹೋಗಿ ಹೋಗಿ ಮುದುಕಿಯನ್ನು ಪ್ರೀತಿಸುತ್ತಿದ್ದಾನಲ್ಲಾ ಎಂದು ಹಲುಬುತ್ತಾಳೆ. ಇದು ಸಂಸಾರದಲ್ಲಿ ಕೋಲಾಹಲಕ್ಕೆ ಕಾರಣವಾಗುತ್ತದೆ. ಈ ರೋಚಕ ಕಥಾನಕವನ್ನು ನಿರೂಪಿಸಿದವರು ಕಾಗಿನೆಲೆಯ ಕನಕಪೀಠದ ಶ್ರೀಗಳವರು. ಸಂದರ್ಭ: ಕಳೆದ ವಾರ ಶಿಗ್ಗಾಂವಿನಲ್ಲಿ ನಡೆದ ನಮ್ಮ ಮಠದ ತರಳಬಾಳು ಹುಣ್ಣಿಮೆ ಮಹೋತ್ಸವ. ಕಥಾನಿರೂಪಣೆಯನ್ನು ಮುಂದುವರಿಸಿದ ಶ್ರೀಗಳು ಜಗಳ ಮಾಡಿಕೊಂಡ ಆ ಗಂಡ-ಹೆಂಡತಿ ಸಿರಿಗೆರೆಯ ಗುರುಗಳ ಸದ್ಧರ್ಮ ನ್ಯಾಯಪೀಠಕ್ಕೆ ಅಹವಾಲು ಸಲ್ಲಿಸಿದರು ಎಂದು ಮುಗುಳು ನಗುತ್ತಾ ನುಡಿದರು. ಸಿರಿಗೆರೆಯ ಶ್ರೀಗಳು ಗಂಡ-ಹೆಂಡತಿಯ ವಿರಸಕ್ಕೆ ಕಾರಣವಾದ ಆ ಕನ್ನಡಿಯನ್ನು ತರಿಸಿ ಅದರಲ್ಲಿ ಕಾಣಿಸುವುದು ಯಾರ ಫೋಟೋನೂ ಅಲ್ಲ, ನೋಡುವವರ ಪ್ರತಿಬಿಂಬ ಎಂದು ಮನದಟ್ಟುಮಾಡಿಕೊಟ್ಟು ದಂಪತಿಗಳ ಮನಸ್ಸಿನಲ್ಲಿ ಮೂಡಿದ್ದ ಅನುಮಾನವನ್ನು ಬಗೆಹರಿಸಿ ಕಳುಹಿಸಿದರು ಎಂದು ನಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀಗಳವರ ಆ ಮಾತಿನ ಎಳೆಯನ್ನೇ ಹಿಡಿದು ನಮ್ಮ ಭಾಷಣದ ಸಂದರ್ಭದಲ್ಲಿ ಆ ದಂಪತಿಗಳಂತೆ ಸಿರಿಗೆರೆಯ ಗುರುಗಳಿಗೂ ಕನ್ನಡಿಯ ಪರಿಚಯ ಇಲ್ಲದಿದ್ದರೆ ಏನಾಗುತ್ತಿತ್ತು? ಎಂದು ಎತ್ತಿದ ಪ್ರಶ್ನೆಯಿಂದ ಸಭಿಕರ ಕುತೂಹಲ ಗರಿಗೆದರಿತ್ತು! ಕನ್ನಡಿಯಲ್ಲಿ ನಮ್ಮದೇ ಪ್ರತಿಬಿಂಬ ಕಂಡರೂ ಅದು ಬೇರೊಬ್ಬ ಧರ್ಮಗುರುಗಳ ಭಾವಚಿತ್ರವೆಂದು ತಿಳಿದು ಅರ್ಜಿದಾರರಾದ ಅತ್ತೆ-ಸೊಸೆಯನ್ನು ಕುರಿತು “ಅಮ್ಮಾ, ನೀವಿಬ್ಬರೂ ತಪ್ಪು ತಿಳಿದಿದ್ದೀರಿ. ಈತ ಎಂಥ ಸದ್ಭಕ್ತನೆಂದರೆ ಪ್ರತಿದಿನವೂ ಮಲಗುವ ಮೊದಲು ತನ್ನ ಗುರುವಿನ ಫೋಟೋ ನೋಡಿಯೇ ಮಲಗುತ್ತಾನೆ. ಸುಮ್ಮನೇ ಅನುಮಾನ ಪಟ್ಟು ಸಂಸಾರವನ್ನು ನರಕ ಮಾಡಿಕೊಳ್ಳಬೇಡಿ. ಮಠದಲ್ಲಿ ಪ್ರಸಾದ ಸ್ವೀಕರಿಸಿ ನಿರುಮ್ಮಳವಾಗಿ ಊರಿಗೆ ಹೋಗಿ ಸುಖವಾಗಿರಿ!” ಎಂದು ತಿಳಿ ಹೇಳಿ ಕಳುಹಿಸಿರಬೇಕು ಎಂದಾಗ ಸಭೆ ನಗೆಗಡಲಲ್ಲಿ ತೇಲಿತು.

ಕನ್ನಡಿಯನ್ನು ಗಂಡ ಹೆಂಡತಿ ಮತ್ತು ತಾಯಿ ಮೂರು ಜನ ನೋಡಿದರೂ ತಮ್ಮನ್ನು ತಾವು ಗುರುತಿಸಿಕೊಳದೆ ತಮ್ಮದೇ ಮುಖದ ಪ್ರತಿಬಿಂಬ ಎಂಬುದನ್ನು ಅವರು ಅರಿಯದೇ ಹೋದರು. ಹಾಗೆಯೇ ಮನುಷ್ಯ ತನ್ನಲ್ಲಿರುವ ಚೈತನ್ಯವನ್ನು ಗುರುತಿಸಿಕೊಳ್ಳುವಲ್ಲಿ ಅಸಮರ್ಥನಾಗಿದ್ದಾನೆ. ತನ್ನ ತಾನರಿದು ತಾನಾರೆಂದು ತಿಳಿಯಬಲ್ಲಡೆ ತಾನೇ ದೇವ ಕಾಣಾ ಗುಹೇಶ್ವರಾ ಎನ್ನುತ್ತಾರೆ ಅಲ್ಲಮ ಪ್ರಭುದೇವರು. ಅಗಸ ನೀರೊಳಗಿದ್ದು ಬಾಯಾರಿ ಸತ್ತಂತೆ, ತನ್ನೊಳಗಿರ್ದ ಮಹಾಘನವನರಿಯರು ಚೆನ್ನಮಲ್ಲಿಕಾರ್ಜುನಾ! ಅಂದರೆ ಅಗಸ ಬಟ್ಟೆ ತೊಳೆಯುವಾಗ ನೀರಿನಲ್ಲೇ ನಿಂತಿದ್ದರೂ ಬಾಯಾರಿಕೆಯಿಂದ ಸತ್ತನೆಂದರೆ ಹೇಗೆ ನಗೆಪಾಟಲಿಗೆ ಕಾರಣವಾಗುತ್ತದೆಯೋ ಹಾಗೇನೆ ಮನುಷ್ಯ ತನ್ನೊಳಗೇ ಇರುವ ಚೈತನ್ಯವನ್ನು ಕಂಡುಕೊಳದಿರುವುದೂ ಸಹ ಇನ್ನೊಂದು ರೀತಿಯ ನಗೆಪಾಟಲು ಎನ್ನುತ್ತಾಳೆ ವೈರಾಗ್ಯನಿಧಿ ಅಕ್ಕಮಹಾದೇವಿ. ಇದಕ್ಕೆ ಕಾರಣವೇನೆಂಬುದನ್ನು ಬಸವಣ್ಣನವರು ಹೀಗೆ ವಿಶ್ಲೇಷಿಸಿದ್ದಾರೆ:

ಎನ್ನ ಮನವು ನಿಧಾನವನೊಲ್ಲದೆ 
ಜಲಗ ಮಚ್ಚಿತ್ತು ನೋಡಾ!

ಸಿಕ್ಕಿದ ಅಮೂಲ್ಯ ನಿಧಿಯನ್ನು (ನಿಧಾನವನ್ನು) ತಿರಸ್ಕರಿಸಿ ಮರಳಲ್ಲಿ ಥಳಥಳ ಹೊಳೆಯುವ ಕಾಗೆಬಂಗಾರದ ಕಣಕ್ಕೆ (ಜಲಗು) ಮನಸ್ಸು ಮಾರುಹೋದಂತೆ. ಮನಸ್ಸು ಐಹಿಕ ಸುಖ ಭೋಗೋಪಭೋಗಗಳಲ್ಲಿ ಮೈಮರೆತು ಜೀವಿಯು ಮೋಹಕ್ಕೆ ಒಳಗಾಗುತ್ತದೆ. ಮಡದಿ ಬಾರಳು, ಮಂಚ ಬಾರದು, ಕಂಚು ಕನ್ನಡಿ ಬಾರದು! ಎಂದು ಪುರಂದರ ದಾಸರು ಹೇಳುವಂತೆ ಇವಾವೂ ಇಹಲೋಕ ತೊರೆಯುವಾಗ ಹಿಂದೆ ಬರುವುದಿಲ್ಲ, ಆಳು ಮನೆಯಲ್ಲಿರುವ ಎಲ್ಲ ವಸ್ತುಗಳೂ ಮನೆಯೊಡೆಯನಿಗೆ ಸೇರಿದವುಗಳೆಂದು ಪರಿಭಾವಿಸದೆ ತನ್ನವೆಂದು ತಿಳಿದುಕೊಳವುದು ಹೇಗೆ ಭ್ರಮೆಯೋ ಹಾಗೆಯೇ ಮನುಷ್ಯ ಜಗತ್ತಿನ ಎಲ್ಲ ಐಹಿಕ ಭೋಗಗಳಿಗೆ ಒಡೆಯ ನೊಬ್ಬನಿದ್ದಾನೆಂಬುದನ್ನು ಮರೆತು ಅವು ತನ್ನವೇ ಎಂದು ಭ್ರಮೆಗೆ ಒಳಗಾಗುವುದರಿಂದ ಈ ಲೋಕದಿಂದ ಅಗಲುವಾಗ ದುಃಖಿತನಾಗುತ್ತಾನೆ. ಕೊಯ್ದ ಮೂಗಿಂಗೆ ಕನ್ನಡಿ ಹಿಡಿದು ತೋರಿದಂತೆ ವಿಹ್ವಲನಾಗುತ್ತಾನೆ. ಬಸವಣ್ಣನವರು ತಮ್ಮ ಇನ್ನೊಂದು ವಚನದಲ್ಲಿ ಹೀಗೆ ಹೇಳುತ್ತಾರೆ:

ಉಂಬ ಬಟ್ಟಲು ಬೇರೆ ಕಂಚಲ್ಲ, ನೋಡುವ ದರ್ಪಣ
ಬೇರೆ ಕಂಚಲ್ಲ
ಭಾಂಡ ಒಂದೇ ಭಾಜನ ಒಂದೇ; ಬೆಳಗೆ 
ಕನ್ನಡಿಯೆನಿಸಿತ್ತಯ್ಯಾ 
ಅರಿದಡೆ ಶರಣ, ಮರೆದಡೆ ಮಾನವ
ಮರೆಯದೆ ಪೂಜಿಸು ಕೂಡಲಸಂಗಮದೇವನ

ಉಣ್ಣುವ ತಟ್ಟೆ ಮತ್ತು ದರ್ಪಣ ಎರಡೂ ಕಂಚಿನವೇ. ಕನ್ನಡಿಯು ಥಳಥಳ ಹೊಳೆಯುತ್ತದೆ, ಪ್ರತಿಫಲಿಸುತ್ತದೆ. ಕಂಚಿನ ತಳಿಗೆ ಕಿಲುಬುಗಟ್ಟಿದ್ದರೆ ಪ್ರತಿಬಿಂಬವನ್ನು ಕಾಣಲಾಗದು. ಜನ್ನಕವಿಯು ತನ್ನ ಯಶೋಧರ ಚರಿತೆ ಕಾವದಲ್ಲಿ `ತುಪ್ಪೇರಿದ ದರ್ಪಣದೊಳ್ ಪಜ್ಜಳಿಲಾರ್ಪುದೆ ಪ್ರತಿಬಿಂಬಂ? ಎಂದು ಹೇಳುವುದು ಇದನ್ನೇ. ಕನ್ನಡಿಯಲ್ಲಿ ವ್ಯಕ್ತಿಯ ಮುಖವು ಕಾಣಿಸಬೇಕೆಂದರೆ ಅದು ಪರಿಶುಭ್ರವಾಗಿರಬೇಕು. ಮನಸ್ಸು ಶುದ್ಧವಿಲ್ಲದಿದ್ದರೆ ಅದು ಕಿಲುಬುಗಟ್ಟಿದ ಕನ್ನಡಿಯಂತೆ. ಅದರಲ್ಲಿ ಸ್ವರೂಪವನ್ನು ಕಾಣುವುದು ಅಸಾಧ್ಯ.

ಎನ್ನ ನಾನು ಮರೆತು ನಿಮ್ಮನರಿದಡೆ
ಅದು ನಿಮ್ಮ ರೂಪೆಂಬೆ
ಎನ್ನ ನಿನ್ನೊಳು ಮರೆತಡೆ
ಕನ್ನಡಿಯ ಪ್ರತಿಬಿಂಬದಂತೆ
ಭಿನ್ನವಿಲ್ಲದೆ ಇದ್ದೆನು ಕಾಣಾ ಗುಹೇಶ್ವರಾ!

ಕನ್ನಡಿಯಲ್ಲಿ ತನ್ನ ಬಹಿರಂಗದ ರೂಪವನ್ನು ನೋಡಿಕೊಂಡ ಹಾಗೆಯೇ ಅರಿವೆಂಬ ಅಂತರಂಗದ ಕನ್ನಡಿಯಲ್ಲಿ ಸ್ವಸ್ವರೂಪ ದರ್ಶನ ಮಾಡಿಕೊಳ್ಳಬೇಕು. ವ್ಯಕ್ತಿ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಳ್ಳುವಾಗ ತಾನು ಬೇರೆ ತನ್ನ ಪ್ರತಿಬಿಂಬ ಬೇರೆ ಎಂಬ ಭಿನ್ನತೆ ಇರುವುದಿಲ್ಲ. ಕನ್ನಡಿಯಾಚೆ ಇರುವ ತನ್ನನ್ನು ಮರೆತು ಪ್ರತಿಬಿಂಬದಲ್ಲಿಯೇ ತನ್ನನ್ನು ಕಾಣುತ್ತಾನೆ. ಪ್ರತಿಫಲಿಸಿದ ಮುಖವನ್ನೇ ತನ್ನ ಮುಖವೆಂದು ಪರಿಭಾವಿಸಿ ಅದರಲ್ಲಿ ಕಂಡುಬರುವ ಕುರೂಪವನ್ನು ಸೌಂದರ್ಯಪ್ರಸಾಧನಗಳಿಂದ ನಿವಾರಿಸಿಕೊಳ್ಳಲು ಯತ್ನಿಸುತ್ತಾನೆ.

ಕನ್ನಡಿಯಲ್ಲಿ ಕಾಣುವ ತನ್ನ ಮುಖ ಅಂದವಾಗಿಲ್ಲವೆಂದು ಪರಿತಪಿಸಿ ಸುಂದರವಾಗಿ ಕಾಣಿಸಿಕೊಳ್ಳಲು ಹಪಹಪಿಸುವಂತೆ ತನ್ನ ಆತ್ಮಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಶೀಲನಾಗುವುದೇ ಅಧ್ಯಾತ್ಮ ಸಾಧನೆ. “The man inside the mirror does not stare back!” ಈ ಹಿನ್ನೆಲೆಯಲ್ಲಿ ಬರೆದ ನಮ್ಮದೊಂದು ವಚನ:

ದೂರದ ಮಂಗಳ ಗ್ರಹದಿಂದ ನೋಡಿದರೆ
ಭೂಮುಯೊಂದು ಚುಕ್ಕೆ,ಸಪ್ತಸಾಗರಗಳು ಒಂದು ಬಿಂದು !
ಕೀರ್ತಿ ವಾರ್ತೆಗೆ ಜೋತು ಬಿದ್ದ ನೀನು ನಾಪತ್ತೆ !

ಎನೋ ಸಾಧಿಸಿಹೆನೆಂಬ ಹಮ್ಮುಬಿಮ್ಮುಗಳ ಬಿಡು
ಮಾನಸಂಮಾನಗಳ ಬಿಸಿಲುಗುದುರೆಯನೇರದಿರು
ನಿಲ್ಲು ಕನ್ನಡಿಯ ಮುಂದೆ ನೋಡು ದಿಟ್ಟಿಸಿ ನಿನ್ನನು!

ನಿನ್ನಂತರಂಗದ ಕುರೂಪವ ಕಳೆದುಕೋ !
ಕನ್ನಡಿಯೊಳಗಣ ನಿನ್ನಾತ್ಮ ಮೆಚ್ಚಿದರೆ ನೀನೇ ಧನ್ಯ 
ಸದ್ಧರ್ಮಸಿಂಹಾಸನಾಧೀಶ್ವರಾ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 20.2.2014