ಸಂಪತ್ತಿನ ಘೋಷಣೆ ಮಠಾಧಿಪತಿಗಳಿಗೆ ಅನ್ವಯಿಸುತ್ತದೆಯೇ?

  •  
  •  
  •  
  •  
  •    Views  

ಳೆದ ಮೂರು ವಾರಗಳಿಂದ ಬರೆದ ಲೇಖನಗಳಿಗೆ ಸಹೃದಯ ಓದುಗರು ಭಾವಪರವಶರಾಗಿ ಅನೇಕ ಪತ್ರಗಳನ್ನು ಮತ್ತು ಈಮೇಲ್ ಗಳನ್ನು ಬರೆದಿರುತ್ತಾರೆ. ಆ ಲೇಖನಗಳನ್ನು ಓದಿ ಕಂಬನಿ ಮಿಡಿದಿದ್ದಾರೆ. ಅತ್ಯಂತ ಹೃದಯಸ್ಪರ್ಶಿಯಾದ, ಮಾನವೀಯ ಸ್ಪಂದನದಿಂದ ಕೂಡಿದ ಅವರ ಪ್ರತಿಕ್ರಿಯೆಗಳು ಒಂದೊಂದೂ ಸಾಹಿತ್ಯಕ ಗುಣವುಳ್ಳ, ಚಿಕ್ಕ ಚಿಕ್ಕ ಲೇಖನಗಳಂತಿವೆ. "ವಸುದೈವ ಕುಟಂಬಕಂ" ಎಂಬಂತೆ ವಿಶ್ವಕುಟುಂಬಿತ್ವದ ಮಾನವೀಯ ಮೌಲ್ಯಗಳನ್ನು ಮೆರೆಯುವಂತಿವೆ. ದುಃಖಕ್ಕೆ ಯಾವುದು ಕಾರಣವೋ ಅದರಿಂದ ಪರಿತಪಿಸುವುದು ಸಹಜ. ಸುಖಕ್ಕೆ ಯಾವುದು ಕಾರಣವೋ ಅದರಿಂದ ಸಂತೋಷಪಡುವುದೂ ಅಷ್ಟೇ ಸಹಜ. ಆದರೆ ದುಃಖಕ್ಕೆ ಯಾವುದು ಕಾರಣವೋ ಅದರಿಂದ ದುಃಖಿಸುತ್ತಲೇ ಸಂತೋಷಪಡುವುದು ಅಸಾಧಾರಣ ಭಾವ. "ದುಃಖೇನ ಸಾಧೋ ಲಭತೇ ಸುಖಾನಿ" (ದುಃಖದಲ್ಲಿ ಸುಖವನ್ನು ಸದ್ಗೃಹಿಣಿ ಅನುಭವಿಸುತ್ತಾಳೆ ಎಂದು ಮಹಾಭಾರತ (ವನಪರ್ವ 233.4) ಹೇಳುತ್ತದೆ. ಇದು ವಿಕೃತ ಆನಂದವಲ್ಲ, ಸೂಕ್ಷ್ಮಸಂವೇದನೆಯುಳ್ಳ ಮನಸ್ಸಿನ ಮಾನವೀಯ ಸ್ಪಂದನ. ಒಂದು ಸ್ವರದಲ್ಲಿ ಶ್ರುತಿಗೊಂಡ ತಂತಿಯನ್ನು ಸಂಗೀತಗಾರನು ಮೀಟಿದಾಗ ಅದೇ ಸ್ವರದಲ್ಲಿ ಶ್ರುತಿಗೊಂಡ ಮತ್ತೊಂದು ತಂತಿ ಅದು ಎಷ್ಟೇ ದೂರದಲ್ಲಿರಲಿ ಅನುರಣಿಸುತ್ತದೆ (resonance). ಅದೇ ಬೇರೆ ಸ್ವರದಲ್ಲಿ ಶೃತಿಗೊಂಡ ತಂತಿ ಅದು ಎಷ್ಟೇ ಹತ್ತಿರದಲ್ಲಿರಲಿ, ಪಕ್ಕದಲ್ಲಿಯೇ ಇದ್ದರೂ ಸ್ಪಂದಿಸುವುದಿಲ್ಲ,

ಈ ವಿಷಯವನ್ನು ಇಲ್ಲಿಗೇ ನಿಲ್ಲಿಸಿ ಬೇರೆ ವಿಷಯ ಕುರಿತು ಬರೆಯಬೇಕೆಂದು ಆಲೋಚಿಸುತ್ತಿದ್ದಂತೆಯೇ ಒಬ್ಬ ಓದುಗರಿಂದ ಇವೆಲ್ಲ ಪತ್ರಗಳಿಗಿಂತ ವಿಭಿನ್ನವಾದ ಯಾರ ಊಹೆಗೂ ನಿಲುಕದ ಪ್ರತಿಕ್ರಿಯೆ ಬಂದಿರುತ್ತದೆ. ಪೂರ್ವಾಶ್ರಮದ ತಾಯಿಯ ಅಂತ್ಯಸಂಸ್ಕಾರಕ್ಕೆ ನಾವು ಹೋಗದೇ ಇದ್ದುದು ತಪ್ಪು ಎಂದು ತೀವ್ರತರವಾಗಿ ಅವರು ಖಂಡಿಸಿದ್ದಾರೆ. ತಾಯಂದಿರು ಮಗುವಿನ ಗಲ್ಲದ ಮೇಲೆ ಇಡುವ ಕಪ್ಪುಕಾಡಿಗೆಯ ದೃಷ್ಟಿ ಬೊಟ್ಟಿನಂತಿರುವ ಅವರ ತೀಕ್ಷ್ಮವಾದ ಪ್ರತಿಕ್ರಿಯೆ ಹೀಗಿದೆ: "ನಾನು ನಿಮಗೆ ಶಪಿಸಿದ್ದೇನೆ. ಬರುವ ಜನ್ಮದಲ್ಲಿ ತಿರುಗಾಡಿ ನಾಯಿ ಜನ್ಮ ನಿಮಗೆ ಸಿದ್ಧ. ನನ್ನ ಕಣ್ಣೀರು ಆ ತಾಯಿಗೆ!" ಈ ಸಾಲುಗಳನ್ನು ಓದುತ್ತಿರುವಾಗ ನಮಗೆ ನೆನಪಾಗಿದ್ದು ಆದಿಕವಿ ವಾಲ್ಮೀಕಿ ಮಹರ್ಷಿ ಬರೆದ ರಾಮಾಯಣದ ಉತ್ತರಕಾಂಡದಲ್ಲಿ ಬರುವ ಅಪರೂಪದ ಈ ಮುಂದಿನ ಕಥಾಪ್ರಸಂಗ:

ಒಂದು ದಿನ ಬೆಳಗ್ಗೆ ಶ್ರೀರಾಮನು ತನ್ನ ಅರಮನೆಯ ರಾಜಸಭೆಯಲ್ಲಿ ವಶಿಷ್ಠ, ಕಾಶ್ಯಪ ಮೊದಲಾದ ಋಷಿಮುನಿಗಳು, ಮಂತ್ರಿಗಳು, ವ್ಯವಹಾರತಜ್ಞರು, ನೀತಿಜ್ಞರು ಮತ್ತಿತರ ಧರ್ಮದುರಂಧರರೊಂದಿಗೆ ರಾಜಕಾರ್ಯದಲ್ಲಿ ತೊಡಗಿರುತ್ತಾನೆ. ಹತ್ತಿರದಲ್ಲಿಯೇ ಇದ್ದ ಲಕ್ಷ್ಮಣನನ್ನು ಕರೆದು ಅರಮನೆಯ ಪ್ರವೇಶದ್ವಾರದಲ್ಲಿ ಯಾರಾದರೂ ಕಾರ್ಯಾರ್ಥವಾಗಿ ಕಾಯುತ್ತಿದ್ದಾರೆಯೇ ನೋಡಿಕೊಂಡು ಬಾ ಎಂದು ಹೇಳಿ ಕಳುಹಿಸುತ್ತಾನೆ. ಲಕ್ಷ್ಮಣನು ಅಣ್ಣನ ಆದೇಶದಂತೆ ಹೋಗಿ ತಕ್ಷಣವೇ ಹಿಂತಿರುಗಿ ಬಂದು ಯಾರೂ ಇಲ್ಲ ಎಂದು ಹೇಳುತ್ತಾನೆ. ಶ್ರೀರಾಮನ ಆಳ್ವಿಕೆಯಲ್ಲಿ ಆಬಾಲವೃದ್ಧರೆಲ್ಲರೂ ಸುಖಸಂತೋಷಗಳಿಂದ ಇದ್ದಾರೆ, ಯಾರಿಗೂ ಯಾವ ತೊಂದರೆಯೂ ಇಲ್ಲದ ಕಾರಣ ಯಾರೂ ಕಾರ್ಯಾರ್ಥವಾಗಿ ಬಂದಿಲ್ಲವೆಂದು ಲಕ್ಷ್ಮಣ ಶ್ರೀರಾಮನ ಗುಣಗಾನ ಮಾಡುತ್ತಾನೆ. ಇದರಿಂದ ಸಂತುಷ್ಟನಾದ ಶ್ರೀರಾಮ ಆದರೂ ಇನ್ನೊಮ್ಮೆ ಸರಿಯಾಗಿ ನೋಡಿಕೊಂಡು ಬಾ ಎಂದು ಪುನಃ ಲಕ್ಷ್ಮಣನನ್ನು ಕಳುಹಿಸುತ್ತಾನೆ. ಈ ಬಾರಿ ಲಕ್ಷ್ಮಣ ಹೋದಾಗ ಅರಮನೆಯ ಪ್ರವೇಶದ್ವಾರದಲ್ಲಿ ಒಂದು ನಾಯಿ ಒಂದೇ ಸಮನೆ ವೇದನೆಯಿಂದ ಬೊಗಳುತ್ತಿರುವುದು ಕಾಣಿಸುತ್ತದೆ. ಲಕ್ಷ್ಮಣ ಆ ನಾಯಿಯನ್ನು ನೋಡಿ ನಿನ್ನ ಸಮಸ್ಯೆ ಏನು; ನೀರ್ಭಯವಾಗಿ ಒಳಗೆ ಬಂದು ಶ್ರೀರಾಮನ ಮುಂದೆ ಹೇಳು ಎನ್ನುತ್ತಾನೆ.ಅರಮನೆ ಒಳಗೆ ಬರುವ ಯೋಗ್ಯತೆ ತನಗೆ ಇಲ್ಲ ಶ್ರೀರಾಮ ಅನುಮತಿ ನೀಡಿದರೆ ಬರುತ್ತೇನೆಂದು ನಾಯಿ ದೈನ್ಯದಿಂದ ಹೇಳಿ ಅನುಮತಿ ಪಡೆದು ಅರಮನೆಯೊಳಗೆ ಪ್ರವೇಶಿಸಿ ಶ್ರೀರಾಮನ ಮುಂದೆ ನಿಲ್ಲುತ್ತದೆ.ಅದರ ತಲೆ ಗಾಯಗೊಂಡು ರಕ್ತಸಿಕ್ತವಾಗಿರುತ್ತದೆ. ಅದನ್ನು ಲಕ್ಷ್ಮಣ ಒಳಗೆ ಕರೆದುಕೊಂಡು ಹೋದಾಗ ಏನಾಯಿತು ನಿರ್ಭಯವಾಗಿ ಹೇಳು ಎಂದು ಶ್ರೀರಾಮ ನಾಯಿಯನ್ನು ಕೇಳುತ್ತಾನೆ. ಅದಕ್ಕೆ ನಾಯಿಯು ಸರ್ವಾರ್ಥಸಿದ್ಧ ಎಂಬ ಬ್ರಾಹ್ಮಣ ಭಿಕ್ಷುವು ತನ್ನನ್ನು ನಿಷ್ಕಾರಣವಾಗಿ ಕೋಲಿನಿಂದ ಹೊಡೆದು ಗಾಯಗೊಳಿಸಿ ನರಳುವಂತೆ ಮಾಡಿದನೆಂದು ದೂರುತ್ತದೆ. ಶ್ರೀರಾಮ ಆ ಸರ್ವಾರ್ಥಸಿದ್ದನನ್ನು ತನ್ನೆದುರಿಗೆ ಹಾಜರುಪಡಿಸಲು ರಾಜಭಟರಿಗೆ ಆದೇಶಿಸುತ್ತಾನೆ. ರಾಜಭಟರು ಹುಡುಕಿ ಕರೆತರುತ್ತಾರೆ. ಈ ನಾಯಿಯನ್ನು ಕೋಲಿನಿಂದ ಏಕೆ ಹೊಡೆದೆ, ಅದು ನಿನಗೆ ಏನು ತೊಂದರೆಯನ್ನುಂಟುಮಾಡಿತ್ತು? ಎಂದು ಶ್ರೀರಾಮ ಆ ಬ್ರಾಹ್ಮಣಭಿಕ್ಷುವನ್ನು ಪ್ರಶ್ನಿಸುತ್ತಾನೆ. ಅದಕ್ಕೆ ಅವನು ‘ನಾನು ಭಿಕ್ಷಾಟನೆಗೆಂದು ಹೋದ ಕಾಲದಲ್ಲಿ ಈ ನಾಯಿಯು ದಾರಿಯಲ್ಲಿ ಅಡ್ಡಬಂದು ನನಗೆ ಭಿಕ್ಷೆ ಸಿಗದಂತೆ ಮಾಡಿತು. ನನ್ನ ದಾರಿಗೆ ಅಡ್ಡಬರಬೇಡ ಎಂದು ಎಷ್ಟು ಹೇಳಿದರೂ ಕೇಳದೆ ಮಾರ್ಗಮಧ್ಯದಲ್ಲಿಯೇ ನಿಂತು ಅಡ್ಡಿಪಡಿಸಿತು. ಹಸಿವಿನಿಂದ ಕಂಗಾಲಾಗಿದ್ದ ನನಗೆ ಸಿಟ್ಟು ಬಂದು ಕೋಲಿನಿಂದ ಹೊಡೆದೆ. ನನ್ನಿಂದ ತಪ್ಪಾಗಿದ್ದರೆ ದಯಮಾಡಿ ಕ್ಷಮಿಸಿ; ಅದರ ಮೇಲೆ ಶ್ರೀರಾಮನಿಂದ ಶಿಕ್ಷೆಯನ್ನು ಪಡೆದರೆ ನನಗೆ ನರಕದ ಭಯವಿಲ್ಲ’ ಎಂದು ಉತ್ತರಿಸುತ್ತಾನೆ.

ತಪ್ಪಿತಸ್ಥನಾದ ಆತನಿಗೆ ಯಾವ ಶಿಕ್ಷೆಯನ್ನು ವಿಧಿಸಬೇಕೆಂದು ಶ್ರೀರಾಮನು ಸಭಾಸದರನ್ನೆಲ್ಲಾ ಕೇಳುತ್ತಾನೆ. ಅದಕ್ಕೆ ಶಾಸ್ತ್ರಗಳಲ್ಲಿ ಬ್ರಾಹ್ಮಣನನ್ನು ದಂಡಿಸಬಾರದೆಂಬ ನಿಷೇಧವಿದೆಯೆಂದು ಪಂಡಿತೋತ್ತಮರೆಲ್ಲಾ ಶ್ರೀರಾಮನಲ್ಲಿ ನಿವೇದಿಸಿಕೊಳ್ಳುತ್ತಾರೆ. ಅದಕ್ಕೆ ಆ ನಾಯಿಯು ಶ್ರೀರಾಮನತ್ತ ತಿರುಗಿ "ನನಗೆ ನಿಜವಾಗಿಯೂ ನ್ಯಾಯ ಒದಗಿಸಬೇಕೆಂಬ ಅಪೇಕ್ಷೆ ತಮಗೆ ಇದ್ದರೆ ನನ್ನನ್ನು ಹಿಂಸಿಸಿದ ಈ ಬ್ರಾಹ್ಮಣನಿಗೆ ಶಿಕ್ಷೆಯನ್ನು ಕೊಡಲೇಬೇಕು" ಮಹಾಪ್ರಭು ಎಂದು ಒತ್ತಾಯಪೂರ್ವಕವಾಗಿ ಬೇಡಿಕೊಳ್ಳುತ್ತದೆ. ಯಾವ ಶಿಕ್ಷೆಯನ್ನು ಈತನಿಗೆ ಕೊಡಬೇಕೆಂದು ನೀನು ಬಯಸುತ್ತೀಯಾ? ಎಂದು ಶ್ರೀರಾಮ ಕೇಳಿದ್ದಕ್ಕೆ ಆ ನಾಯಿಯು ಈತನನ್ನು ಕಾಲಂಜರ ಮಠದ ಮಹಂತನನ್ನಾಗಿ ಮಾಡಿ ಪಟ್ಟ ಕಟ್ಟಿರಿ ಎಂದು ಕೇಳಿಕೊಳ್ಳುತ್ತದೆ. ಅದರಂತೆಯೇ ಶ್ರೀರಾಮ ಆದೇಶ ಹೊರಡಿಸುತ್ತಾನೆ. ಹೆದರಿಕೊಂಡಿದ್ದ ಬ್ರಾಹ್ಮಣ ಸಂತುಷ್ಟನಾಗಿ ಆನೆಯ ಮೇಲೆ ಅಂಬಾರಿಯಲ್ಲಿ ಕುಳಿತು ರಾಜಮಾರ್ಗದಲ್ಲಿ ಕೇಳಿಬಂದ ಜಯಘೋಷಗಳಿಂದ ಬೀಗುತ್ತಾ ಕಾಲಂಜರ ಮಠದತ್ತ ಸಾಗುತ್ತಾನೆ. ಇದೆಂತಹ ಶಿಕ್ಷೆ! ಇದು ವರವಲ್ಲದೆ ಶಿಕ್ಷೆಯಾಗಲು ಹೇಗೆ ಸಾಧ್ಯ? ಎಂದು ಮುಗಳ್ನಗುತ್ತಾ ಮಂತ್ರಿಗಳು, ಸಭಾಸದರು ಶ್ರೀರಾಮನನ್ನು ಕೇಳುತ್ತಾರೆ. ಶ್ರೀರಾಮನು ಇದಕ್ಕೆ ನಾಯಿಯೇ ಉತ್ತರ ನೀಡಬಲ್ಲುದು ಎಂದು ಅದನ್ನು ಕೇಳುತ್ತಾನೆ. ಎಲ್ಲರೂ ವಿಸ್ಮಯದಿಂದ ಕಣ್ಣರಳಿಸಿ ನಾಯಿಯತ್ತ ನೋಡುತ್ತಾರೆ. ಅದಕ್ಕೆ ಆ ನಾಯಿ ಕೊಟ್ಟ ಉತ್ತರವೆಂದರೆ: ಆ ಬ್ರಾಹ್ಮಣನನ್ನು ಕಾಲಂಜರ ಮಠದ ಮಹಂತನನ್ನಾಗಿ ಮಾಡಬೇಕೆಂದು ನಾನು ಕೇಳಿಕೊಳ್ಳಲು ಕಾರಣ, ನಾನೂ ಸಹ ನನ್ನ ಹಿಂದಿನ ಜನ್ಮದಲ್ಲಿ ಆ ಮಠದ ಮಹಂತನಾಗಿದ್ದೆ! ಇದು ಒಂದು ರೀತಿಯಲ್ಲಿ ತೀರಾ ಒಗಟಾಗಿದ್ದು ಮಠಪೀಠಗಳನ್ನು ಹೀಗಳೆಯುವ, ಲೇವಡಿಮಾಡುವ ಕೊಂಕುನುಡಿಯಂತಿದೆ. ಇದರ ನಿಜವಾದ ಅರ್ಥ ತಿಳಿಯಬೇಕೆಂದರೆ ಮೂಲರಾಮಾಯಣದಲ್ಲಿ ನಾಯಿಯ ಬಾಯಲ್ಲಿ ವಾಲ್ಮೀಕಿ ಮಹರ್ಷಿ ಹೇಳಿಸಿರುವ ಮುಂದಿನ ಶ್ಲೋಕಗಳನ್ನು ಗಮನಿಸಬೇಕು:

"ಅಹಂ ಕುಲಪತಿಸ್ತತ್ರ ಆಸಂ ಶಿಷ್ಟಾನ್ನಭೋಜನಃ |
ದೇವದ್ವಿಜಾತಿಪೂಜಾಯಾಂ ದಾಸೀದಾಸೇಷು ರಾಘವ || 

ವಿನೀತಃ ಶೀಲಸಂಪನ್ನಃ ಸರ್ವಸತ್ವಹಿತೇ ರತಃ ||
ಸೋsಹಂ ಪ್ರಾಪ್ತ ಇಮಾಂ ಘೋರಾಮವಸ್ಸಾಮಧಮಾಂ ಗತಿಂ| 

ಬ್ರಹಸ್ವಂ ದೇವತಾದ್ರವ್ಯಂ ಸ್ತ್ರೀಣಾಂ ಬಾಲಧನಂ ಚ ಯತ್
ದತ್ತಂ ಹರತಿ ಯೋ ಭೂಯಃ ಇಷ್ಟೆ ಸಹ ವಿನಶ್ಯತಿ" 

ಹಿಂದಿನ ಜನ್ಮದಲ್ಲಿ ಮಠದ ಮಹಂತನಾಗಿದ್ದಾಗ ಒಳ್ಳೆಯ ಗುಣಸಂಪನ್ನನಾಗಿದ್ದ. ಎಲ್ಲರ ಹಿತವನ್ನು ಕಾಪಾಡುವ ಉದಾರಭಾವನೆಯನ್ನು ಹೊಂದಿದವನಾಗಿದ್ದ. ಮಠದ ಶಿಷ್ಯರು, ಪರಿಚಾರಕರೂ ಎಲ್ಲರೂ ಉಂಡಾದ ಮೇಲೆ ಉಳಿದುದನ್ನು ತಾನು ಉಣ್ಣುತ್ತಿದ್ದ. ಆದರೆ ಕ್ರಮೇಣ ಸ್ವಾರ್ಥಿಯಾಗಿ, ದುರಾಸೆಗೆ ಬಿದ್ದು ಮಠಕ್ಕೆ ಶಿಷ್ಯರಿಂದ ಬಂದ ಕಾಣಿಕೆಯನ್ನು ಅವರ ಅಭ್ಯುದಯಕ್ಕೆ ಬಳಸದೆ ಕಳವುಮಾಡಿ ಸ್ವಂತಕ್ಕೆ, ತನ್ನ ಪೂರ್ವಾಶ್ರಮದವರಿಗೆ ಬಳಸಿದ್ದರಿಂದ ಆ ಮಹಂತ ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟಿ ದಾರಿಬೀದಿಯಲ್ಲಿ ಜನರಿಂದ ಕಲ್ಲು ಹೊಡೆಸಿಕೊಳ್ಳಬೇಕಾಯಿತು!

ಎಂತಹ ಅದ್ಭುತವಾದ ಆದರ್ಶತತ್ವ ಈ ಕಥಾನಕದಲ್ಲಿದೆ! ಶಿಷ್ಯರ ಅಪಾರ ಗೌರವಾದರಗಳನ್ನು ಪಡೆದು ಮಠಪೀಠಗಳ ಸ್ವಾಮಿಗಳಾಗಿರುವವರು, ಜನರಿಂದ ಓಟನ್ನು ಪಡೆದು ಮಂತ್ರಿಮಹೋದಯರೆನಿಸಿಕೊಂಡ ನಾಡಿನ ರಾಜಕೀಯ ಧುರೀಣರು, ಒಟ್ಟಾರೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿರುವ ಎಲ್ಲ ಮುಂದಾಳುಗಳು ವಾಲ್ಮೀಕಿ ರಾಮಾಯಣದ ಈ ನಾಯಿಯ ಕಥಾನಕದಿಂದ ಪಾಠ ಕಲಿಯಬೇಕು. ಇಲ್ಲದಿದ್ದರೆ ಅವರ ಜೀವನ ನಾಯಿಪಾಡಾಗುತ್ತದೆ! ಇದಾವುದನ್ನೂ ಅರಿಯದ ನಮ್ಮ ಪೂರ್ವಾಶ್ರಮದ ಮುಗ್ದತಾಯಿಯು ಮೊದಲ ಗುರುವಾಗಿ ನಮಗೆ ಕಲಿಸಿದ್ದು ಈ ಪಾಠವನ್ನು, ಈ ಲೇಖನ ಮಾಲೆಯಲ್ಲಿ ಹಿಂದೆ ಬರೆದಂತೆ ಆಸ್ಪತ್ರೆಯ ಖರ್ಚಿಗೆಂದು ಅವರ ಆರೈಕೆಯನ್ನು ಮಾಡುತ್ತಿದ್ದವರು ಮಠದಿಂದ ಮುಂಗಡವಾಗಿ ಪಡೆದಿದ್ದ ಹಣವನ್ನು ಸಾಯುವುದಕ್ಕೆ ಕೆಲವೇ ದಿನಗಳ ಹಿಂದೆ ಖುದ್ದಾಗಿ ನಮ್ಮ ಹತ್ತಿರ ಬಂದು "ಮಠದ ಋಣದಲ್ಲಿ ನಾನು ಸಾಯಬಾರದು, ನಿಮಗೆ ಕೆಟ್ಟ ಹೆಸರು ಬರಬಾರದು, ಇಗೋ ತೆಗೆದುಕೊಳ್ಳಿ" ಎಂದು ಹಿಂತಿರುಗಿಸಿದ್ದು ಈ ಆದರ್ಶ ಪರಿಪಾಲನೆಗಾಗಿ, "Who could say that she was illiterate; she had all the wisdom of the world. Oh, such a humble and noble soul!" ಎಂದು ಓದುಗರು ಉದ್ಧರಿಸಿರುವುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಅಲ್ಲದೆ ಪೂರ್ವಾಶ್ರಮದ ಮೂವರೂ ಸಹೋದರಿಯರು ಪಿತ್ರಾರ್ಜಿತ ಆಸ್ತಿಯನ್ನು ಪಾಲುವಿಭಾಗ ಮಾಡಿಕೊಂಡಾಗ ತಾಯಿಯ ಜೀವನಾಂಶಕ್ಕೆಂದು ತೆಗೆದಿರಿಸಿದ್ದ 3 ಲಕ್ಷ ರೂ.ಗಳು ಶಿವಮೊಗ್ಗದ ಕರ್ನಾಟಕ ಬ್ಯಾಂಕಿನಲ್ಲಿ ಠೇವಣಿಯಾಗಿದ್ದು ಅವರು ಮರಣ ಹೊಂದುವ ಪೂರ್ವದಲ್ಲಿ ನಮ್ಮ ಹೆಸರಿಗೆ ನಾಮಿನಿ ಮಾಡಿದ್ದಾರೆಂದು ತಿಳಿದುಬಂದಿದೆ. "ಸಾಂವಿಧಾನಿಕ ಸ್ಥಾನವನ್ನು ಅಲಂಕರಿಸಿರುವವರೂ ಸೇರಿದಂತೆ ಯಾವುದೇ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ತನ್ನ ಸಂಪತ್ತಿನ ವಿವರಗಳನ್ನು ಬಹಿರಂಗಪಡಿಸಬೇಕು" ಎಂದು ಕರ್ನಾಟಕದ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಡಿ.ವಿ ಶೈಲೇಂದ್ರ ಕುಮಾರ್ ಅವರು ಇದೇ ಪತ್ರಿಕೆಯಲ್ಲಿ ಬರೆದ ಲೇಖನವನ್ನು ಅನುಸರಿಸಿ ಹೇಳುವುದಾದರೆ ಇದು ಸಮಸ್ತ ಶಿಷ್ಯಮಂಡಳಿ ಮತ್ತು ಸಾರ್ವಜನಿಕರ ಮುಂದೆ ನಾವು ಮಾಡುತ್ತಿರುವ ವೈಯಕ್ತಿಕ ಆಸ್ತಿಯ ಘೋಷಣೆ, ತಾತ್ವಿಕವಾಗಿ ನೋಡಿದರೆ ಮಠಾಧೀಶರಿಗೆ ವೈಯಕ್ತಿಕವಾದ ಆಸ್ತಿ ಬರೀ ಸೊನ್ನೆ. ಇದನ್ನು ಎರಡು ಅರ್ಥದಲ್ಲಿ ಗ್ರಹಿಸಬಹುದು. ಒಂದು ಲೌಕಿಕವಾಗಿ ಅವರಿಗೆ ವೈಯಕ್ತಿಕವಾದ ಯಾವ ಆಸ್ತಿಯೂ ಇರುವುದಿಲ್ಲ; ಪಾರಲೌಕಿಕವಾಗಿ ಅವರ ನಿಜವಾದ ಆಸ್ತಿ ಶರಣರ ನುಡಿಗಟ್ಟಿನಲ್ಲಿ ಶೂನ್ಯ ಸಂಪಾದನೆ! ಅವರು ಶಿಷ್ಯಮಂಡಳಿಯು ಕೊಟ್ಟ ಕಾಣಿಕೆಯ ಸಂರಕ್ಷಕರೇ ಹೊರತು, ಅದರ ಮಾಲೀಕರಲ್ಲ! ಅಧ್ಯಾತ್ಮಚಿಂತನೆ ಎಂದರೆ ನಿರಂತರ ಪರಮಾತ್ಮನ ಚಿಂತನೆ ಎಂದು ವ್ಯಾಖ್ಯಾನಿಸುವವರು ಒಂದನ್ನು ನೆನಪಿಟ್ಟುಕೊಳ್ಳಬೇಕು. ಶಿಷ್ಯಸಮುದಾಯದ ಸೇವೆಯೇ ಶಿವನ ಸೇವೆಯೆಂದು ಪರಿಭಾವಿಸುವ ಸ್ವಾಮಿಗಳಿಗೆ ಧ್ಯಾನಿಸಲು ಬೇರೆ ಶಿವನಿಲ್ಲ!

ಸ್ವಾಮಿಗಳು ಸಂಸಾರಿಗಳಲ್ಲ. ಆದರೆ ಮಠದ ಅಧಿಪತಿಗಳಾಗಿ ದೊಡ್ಡ ಸಂಸಾರಿಗಳು. ಒಂದು ಅವಿಭಕ್ತ ಕುಟುಂಬದ ಯಜಮಾನರಿಗೆ ಇರುವ ಲೌಕಿಕ ಜವಾಬ್ದಾರಿಗಿಂತಲೂ ಹೆಚ್ಚಿನ ಜವಾಬ್ದಾರಿ ಮಠಾಧೀಶರಿಗೆ ಇರುತ್ತದೆ. ಅದರಲ್ಲೂ ಸಮಾಜದ ಶ್ರೇಯೋಭಿವೃದ್ಧಿಗಾಗಿ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡವರಿಗೆ ಬೃಹದಾಕಾರವಾದ ಹೊಣೆಗಾರಿಕೆ ಇರುತ್ತದೆ, ಅಷ್ಟೇ ಸಮಸ್ಯೆಗಳೂ ಇರುತ್ತವೆ. ಕೇವಲ ಆಧ್ಯಾತ್ಮಿಕ ಮತ್ತು ಬೌದ್ಧಿಕ ಜ್ಞಾನ ಇದ್ದರೆ ಸಾಲದು. ಇಂದಿನ ಮಠಾಧಿಪತಿಗಳಿಗೆ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ತರಬೇತಿಯೂ ಬೇಕು ಎಂದರೆ ಅತಿಶಯೋಕ್ತಿಯೇನೂ ಆಗಲಾರದು. ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಅತ್ಯವಶ್ಯಕ. ಅಮೇರಿಕೆಯ ಅಧ್ಯಕ್ಷರಾದ ಒಬಾಮಾ ಕಳೆದ ಶುಕ್ರವಾರವಷ್ಟೇ ಒಂದು ವಿನೂತನವಾದ ಘೋಷಣೆಯನ್ನು ಮಾಡಿದ್ದಾರೆ. ಅದೇನೆಂದರೆ ಅವರ ಅಧಿಕೃತ ನಿವಾಸ White House ಗೆ ಪ್ರತಿ ತಿಂಗಳು ಅದರ ಹಿಂದಿನ ಮೂರುತಿಂಗಳಲ್ಲಿ ಬಂದುಹೋದವರೆಲ್ಲರ ಹೆಸರು ಮತ್ತು ಸಮಯವನ್ನು ಅಂತರಜಾಲದಲ್ಲಿ ಪ್ರಕಟಿಸುವುದು. "Americans have a right to know whose voices are being heard in the policy making process" ಎಂಬ ಅವರ ಲಿಖಿತ ಹೇಳಿಕೆ ಶ್ವೇತಭವನದಿಂದ ಇತ್ತೀಚೆಗಷ್ಟೇ ಪ್ರಕಟವಾಗಿದೆ.

ಹಣಕಾಸಿನ ವಿಚಾರದಲ್ಲಿ ನಮ್ಮನ್ನು ಕಟ್ಟುನಿಟ್ಟಾಗಿ ಬೆಳೆಸಿದವರೆಂದರೆ ಬಾಲ್ಯದಲ್ಲಿ ನಮ್ಮ ಪೂರ್ವಾಶ್ರಮದ ತಂದೆಯವರಾದ ಈಶ್ವರಯ್ಯನವರು, ಪ್ರೌಢವಯಸ್ಸಿನಲ್ಲಿ ನಮ್ಮ ಪರಮಾರಾಧ್ಯ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಶಾಲೆಯಲ್ಲಿ ಓದುತ್ತಿರುವಾಗ ಏನೇ ಖರ್ಚು ಮಾಡಿದರೂ ಅದಕ್ಕೆ ಲೆಕ್ಕ ಬರೆದಿಡುವುದನ್ನು ತಂದೆ ಕಲಿಸಿದ್ದರು. ಆಗಾಗ್ಗೆ ಲೆಕ್ಕ ತಪಾಸಣೆ ಮಾಡಿ ಸಹಿ ಹಾಕುತ್ತಿದ್ದರು. ಒಮ್ಮೆ ಲೆಕ್ಕತಪಾಸಣೆಯನ್ನು ಮಾಡುವಾಗ ನಗದು ಶಿಲ್ಕು ಎಂಟಾಣೆ ಕಡಿಮೆ ಬಂದಿತ್ತು. ಸ್ನೇಹಿತನೊಬ್ಬನು ತೊಂದರೆ ಇದೆಯೆಂದು ಕೇಳಿ ಪಡೆದಿದ್ದನು.ಇನ್ನು ಮುಂದೆ ಯಾರಿಗೂ ಸಾಲ ಕೊಡಬಾರದೆಂದೂ, ಯಾರ ಹತ್ತಿರವೂ ಸಾಲ ಮಾಡಬಾರದೆಂದೂ ಎಚ್ಚರಿಸಿದ್ದರು. ಬೆನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಡಾಕ್ಟರೇಟ್ ಪದವಿಗೆಂದು ಸಂಶೋಧನೆಯನ್ನು ಮಾಡುತ್ತಿರುವಾಗ U.G.C ಯಿಂದ ಜೂನಿಯರ್ ರಿಸರ್ಚ್ ಫೆಲೋಷಿಪ್ ಮುಂಜೂರಾಗಿ ಒಮ್ಮೆಲೇ ಅನೇಕತಿಂಗಳ ಬಾಕಿ ಸುಮಾರು ಎಂಟು ಸಾವಿರ ರೂ. ಬಂದಿತ್ತು. ಈ ಸಂತೋಷದ ಸುದ್ದಿಯನ್ನು ಪೂರ್ವಾಶ್ರಮದ ತಂದೆಗೆ ತಿಳಿಸಿದಾಗ ಅವರಿಂದ ಅನಿರೀಕ್ಷಿತವಾದ ಬೇಡಿಕೆಯ ಪತ್ರ ಬಂದಿತು. ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿರುವುದಾಗಿಯೂ ಈಗ ಬಂದಿರುವ ಹಣವನ್ನು ಕಳುಹಿಸಿಕೊಟ್ಟರೆ ಅದಕ್ಕೆ ಬಡ್ಡಿಯನ್ನು ಹಾಕಿ ಕೊಡುವುದಾಗಿ ಅಂಜುತ್ತಲೇ ಬರೆದಿದ್ದರು. ಕೊಡಬೇಕೇ ಬೇಡವೇ ಎಂದು ನಿರ್ಧರಿಸಲಾಗದೆ ನಮ್ಮ ಗುರುವರ್ಯರಿಗೆ ಪತ್ರ ಬರೆದುಕೊಂಡೆವು. ಮರುಟಪಾಲಿನಲ್ಲಿಯೇ ಗುರುವರ್ಯರಿಂದ ಸ್ವಹಸ್ತಾಕ್ಷರಗಳಲ್ಲಿ ಕಟ್ಟುನಿಟ್ಟಾದ ಆದೇಶ ಬಂದಿತು: "ನೀನು ನಿನ್ನ ತಂದೆಗೆ ಹಣ ಕೊಡುವುದರಿಂದ ಶಿಷ್ಯರಲ್ಲಿ ತಪ್ಪು ಅಭಿಪ್ರಾಯಕ್ಕೆ ಕಾರಣವಾಗುತ್ತದೆ. ಖಂಡಿತಾ ಕೊಡಬೇಡ!" ಪೂಜ್ಯ ಗುರುವರ್ಯರ ಆಣತಿ ಹೀಗಾಗಿದೆ, ಅವರ ಆದೇಶವನ್ನು ಮೀರಿ ಕಳುಹಿಸಲು ಆಗುತ್ತಿಲ್ಲವೆಂದು ವಿಷಾದಿಸಿ ತಂದೆಗೆ ಪತ್ರ ಬರೆಯುವಾಗ ಕಣ್ಣಂಚು ಹನಿಗೂಡಿತ್ತು!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 9.9.2009.