ಮೇ ತಿಂಗಳ ಸುಂದರ ಹೂವುಗಳು!

  •  
  •  
  •  
  •  
  •    Views  

ವಾರದ ಅಂಕಣದ ಶಿರೋನಾಮೆಯನ್ನು ನೋಡಿ ಯಾವುದೋ ಉದ್ಯಾನವನದ ಹೂಗಳನ್ನು ಕುರಿತು ಬರೆದಿರಬಹುದೆಂದು ನೀವು ಕಲ್ಪಿಸಿಕೊಂಡರೆ ನಿಮ್ಮ ಊಹೆ ತಪ್ಪು. ಈಗ ನಾವು ಬರೆಯಹೊರಟಿರುವುದು ಬೆಂಗಳೂರಿನ ಲಾಲ್‌ಬಾಗ್, ಲಂಡನ್ನಿನ ಹೈಡ್ಪಾರ್ಕ್ ಅಥವಾ ಇನ್ನಾವುದೋ ಪ್ರಸಿದ್ಧ ಉದ್ಯಾನವನದಲ್ಲಿ ಕಂಗೊಳಿಸುವ ಸುಂದರ ಹೂಗಳನ್ನು ಕುರಿತು ಅಲ್ಲ; ವರ್ಷದುದ್ದಕ್ಕೂ ಕಷ್ಟಪಟ್ಟು ಓದಿ ಪರೀಕ್ಷೆ ಬರೆದು ಮೇ ತಿಂಗಳಲ್ಲಿ ಕಾತುರತೆಯಿಂದ ಪರೀಕ್ಷಾ ಫಲಿತಾಂಶದ ನಿರೀಕ್ಷೆಯಲ್ಲಿರುವ ಹದಿಹರೆಯದ ಕುಸುಮಬಾಲೆಯರನ್ನು ಕುರಿತು! ಅವರನ್ನು ಪೋಷಿಸುವ ಹೊಣೆ ಹೊತ್ತ ಮಾಲಿಗಳಾದ ಪೋಷಕರನ್ನು ಕುರಿತು. ಮೇ ತಿಂಗಳು ಕಾಲಿಟ್ಟೊಡನೆ ಗುಲ್ಮೊಹರ್ ಪುಷ್ಪೋತ್ಸವ ಶುರುವಾಗುತ್ತದೆ. ರಸ್ತೆ ಬದಿಯಲ್ಲಿ, ಕಾಡಿನಲ್ಲಿ ಮರಗಿಡಗಳಲ್ಲಿ ಉರಿಯುವ ಕೆಂಡವೇ ಹೂಗಳಾಗಿ ಅರಳಿದಂತೆ ಮನಮೋಹಕ ಹೂವುಗಳು ಅರಳಿ ನಿಲ್ಲುತ್ತವೆ. ಮೇ ಫ್ಲವರ್ ಎಂದೇ ಅವು ಕರೆಸಿಕೊಳ್ಳುತ್ತವೆ. ಈ ಹೂಗಳಂತೆಯೇ ಶಾಲಾ ಬಾಲಕ/ಬಾಲಕಿಯರು ಬೌದ್ಧಿಕವಾಗಿ ಇದೇ ಮೇ ತಿಂಗಳಲ್ಲಿ ಅರಳಿ ನಿಲ್ಲುತ್ತಾರೆ. 

ಪ್ರಾಥಮಿಕ ಹಂತದಿಂದ ಪದವಿಪೂರ್ವ ಕಾಲೇಜಿನವರೆಗೆ ನಾಡಿನಾದ್ಯಂತ ಹುಡುಗರಿಗಿಂತ ಹುಡುಗಿಯರೇ ಹೆಚ್ಚಿನ ಅಂಕಗಳನ್ನು ಗಳಿಸುತ್ತಾರೆಂಬುದು ಸರ್ವವಿದಿತ. ಪ್ರತಿವರ್ಷವೂ ಮೇ ತಿಂಗಳ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾಗುವ ಶಾಲಾಕಾಲೇಜುಗಳ ಪರೀಕ್ಷಾ ಫಲಿತಾಂಶದಲ್ಲಿ ಹುಡುಗರ ಕಣ್ಣುಕುಕ್ಕುವಂತೆ ಹುಡುಗಿಯರದೇ ಮೇಲುಗೈ! ಶಾರೀರಿಕವಾಗಿ “ಅಬಲೆ ಎನಿಸಿಕೊಂಡರೂ ಬೌದ್ಧಿಕವಾಗಿ ಹೆಚ್ಚು ಶಕ್ತಿಶಾಲಿ ಎಂಬುದಕ್ಕೆ ಇಂದಿನ ಪರೀಕ್ಷಾ ಫಲಿತಾಂಶವೇ ಸಾಕ್ಷಿ. ತೇಜೋ ಯಸ್ಯ ವಿರಾಜತೇ ಸ ಬಲವಾನ್ ಸ್ಥೂಲೇಷು ಕಃ ಪ್ರತ್ಯಯಃ ಎನ್ನುವ ಸಂಸ್ಕೃತ ಸುಭಾಷಿತಕಾರನು ಬಲವಾನ್ ಎಂದು ಹೇಳಿ ಬಲವತೀ ಎಂದು ಹೇಳದೆ ಪುರುಷ ಪಕ್ಷಪಾತಿ ಧೋರಣೆ ಮೆರೆದಿದ್ದಾನೆ. 

ಹೀಗೆ ಹುಡುಗರಿಗಿಂತ ಹುಡುಗಿಯರೇ ಏಕೆ ಹೆಚ್ಚಿನ ಅಂಕಗಳನ್ನು ಪಡೆಯುತ್ತಾರೆ? ಪರೀಕ್ಷಾಮೌಲ್ಯಮಾಪಕರು ಏನಾದರೂ ತಾರತಮ್ಯ ಮಾಡುತ್ತಾರೆಯೇ ಎಂದರೆ ಅವರು ಈ ಸಂದರ್ಭದಲ್ಲಿ ತಮ್ಮ ವೇತನ ತಾರತಮ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆಯೇ ಹೊರತು ಲಿಂಗಭೇದ ಮಾಡುವಷ್ಟು ಸಣ್ಣ ಮನಸ್ಸಿನವರಲ್ಲವೆಂಬುದು ಪೋಷಕರೆಲ್ಲರಿಗೂ ಗೊತ್ತಿರುವ ಸಂಗತಿ. ಲಿಂಗಭೇದ ಮಾಡಲು ಅವರಿಗೆ ಉತ್ತರಪತ್ರಿಕೆಗಳಲ್ಲಿ ಸುಳಿವಾದರೂ ಹೇಗೆ ಸಿಗಲು ಸಾಧ್ಯ? ಇನ್ನು ಸಮಾನ ವಯಸ್ಕರಾದ ಬಾಲಕ ಮತ್ತು ಬಾಲಕಿಯರ ಮೆದುಳಿನ ರಚನೆಯಲ್ಲಿ ದೇವರೇನಾದರೂ ವ್ಯತ್ಯಾಸವುಂಟುಮಾಡಿದ್ದಾನೆಯೇ? ಲಿಂಗಭೇದದಿಂದ ಅವರ ಬುದ್ಧಿಮತ್ತೆಯಲ್ಲಿ ಏನಾದರೂ ವ್ಯತ್ಯಾಸವಿದೆಯೇ? ಒಂದು ಅಧ್ಯಯನದ ಪ್ರಕಾರ ಹುಡುಗಿಯರು ಹುಡುಗರಿಗಿಂತ ಹೆಚ್ಚು ಬುದ್ದಿವಂತರಾದರೆ, ಪುರುಷರು ಮಹಿಳೆಯರಿಗಿಂತ ಹೆಚ್ಚು ಬುದ್ಧಿವಂತರು (Girls are more intelligent than boys, but men are more intelligent than women).

ಶಾರೀರಿಕ ರಚನೆಯಲ್ಲಿ ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸವಿದ್ದರೂ ಇಬ್ಬರಲ್ಲೂ ಬುದ್ಧಿಶಕ್ತಿಯು ಸಮಾನವಾಗಿರುತ್ತದೆ. ಮಾರ್ದವತೆ ಮತ್ತು ಕೋಮಲತೆ ಸ್ತ್ರೀಸಹಜ ಗುಣಗಳಾದರೆ ಕಾಠಿಣ್ಯ ಮತ್ತು ಉಡಾಫೆಗಳು ಗಂಡಿನ ರಕ್ತದಲ್ಲೇ ಸಮಾಗಮವಾಗಿವೆ. ಗಂಡು ದೈಹಿಕವಾಗಿ ಹೆಚ್ಚು ಬಲಶಾಲಿ ಎಂಬುದನ್ನು ಒಪ್ಪುವುದಾದರೆ ಹೆಣ್ಣು ಬೌದ್ಧಿಕವಾಗಿ ಹೆಚ್ಚು ಶಕ್ತಿಶಾಲಿ ಎಂದು ಒಪ್ಪಬೇಕಾಗುತ್ತದೆ. ಆದರೆ ಅದು ಹಾಗಲ್ಲ, ಬೌದ್ಧಿಕವಾಗಿ ಇಬ್ಬರ ಕ್ಷಮತೆಯು ಒಂದೇ ಆಗಿದ್ದರೂ ಬಾಲ್ಯದಲ್ಲಿ ಅದರ ವಿಕಾಸಕ್ಕೆ ಹುಡುಗಿಯರು ಕಷ್ಟಪಟ್ಟಷ್ಟು ಹುಡುಗರು ಕಷ್ಟಪಡುವುದಿಲ್ಲ. ಹುಡುಗರು ಬೀದಿ ಸುತ್ತಿದಂತೆ ಹುಡುಗಿಯರು ಸುತ್ತುವುದಿಲ್ಲ. ಹಾಗೆ ಹುಡುಗಿಯರು ಸುತ್ತಾಡಲು ಪೋಷಕರು ಬಿಡುವುದಿಲ್ಲ. ಚೆನ್ನಾಗಿ ಓದಿದರೆ ಮಾತ್ರ ನಿನ್ನ ಉದ್ಧಾರ ಎಂಬುದನ್ನು ತಂದೆ ತಾಯಿಗಳು ಹೆಣ್ಣುಮಕ್ಕಳ ಮನಸ್ಸಿನಲ್ಲಿ ಚೆನ್ನಾಗಿಯೇ ತುಂಬುತ್ತಾರೆ. ಪಾಸಾದರೆ ಕಾಲೇಜು, ಫೇಲಾದರೆ ಮ್ಯಾರೇಜು! ಎಂಬ ಗುಮ್ಮ ಅವರನ್ನು ಚೆನ್ನಾಗಿ ಓದುವಂತೆ ಪ್ರೇರೇಪಿಸುತ್ತದೆ. ಹುಡುಗರು ಅನೀತಿಯ ಮಾರ್ಗವನ್ನು ಅನುಸರಿಸಿ ಹೇಗೋ ದಾಟಿಕೊಂಡು ಹೋಗಿಬಿಡಬಹುದು. ಆದರೆ ಬಾಲಕಿಯರ ಸ್ಥಿತಿ ಹಾಗಲ್ಲ. ನಮ್ಮ ಕೌಟುಂಬಿಕ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಅಂತಹ ಅನೀತಿ ಮಾರ್ಗ ಹಿಡಿದರೆ ತನ್ನ ಬಾಳು ನಗೆಪಾಟಲಿಗೆ ಗುರಿಯಾಗಬೇಕಾಗುತ್ತದೆ ಎಂಬ ಒಳ ಎಚ್ಚರ ಪ್ರತಿಯೊಬ್ಬ ಬಾಲಕಿಗೂ ಇರುತ್ತದೆ. 

ಹುಡುಗರ ಮನಸ್ಸು ಬಹಳ ಚಂಚಲ. ಅವರು ಕೆಡಲು ನೂರಾರು ಮಾರ್ಗಗಳಿವೆ. ಸಮಾನ ಬುದ್ಧಿಶಕ್ತಿ ಇಬ್ಬರಲ್ಲಿದ್ದರೂ ಹುಡುಗರಲ್ಲಿ ಏಕಾಗ್ರತೆ ಕಡಿಮೆ, ಅವರನ್ನು ಚಂಚಲಗೊಳಿಸುವ ವಿದ್ಯಮಾನಗಳು ತುಂಬಾ ಹೆಚ್ಚು. ಆದರೆ ಬಾಲಕಿಯರು ಇದಕ್ಕೆ ತದ್ ವಿರುದ್ಧ. ಅವರು ಮನಸ್ಸನ್ನು ಹರಿಯಬಿಡದೆ ಏಕಾಗ್ರತೆಯಿಂದ ಅಧ್ಯಯನ ಮಾಡುತ್ತಾರೆ. ಅಂತಹ ಮಾನಸಿಕ ಶಿಸ್ತು ಅವರಲ್ಲಿ ಬರಲು ಕಾರಣ ನಮ್ಮ ದೇಶದ ಕೌಟುಂಬಿಕ ಹಾಗೂ ಸಾಮಾಜಿಕ ಪರಿಸರ. Frailty, thy name is woman ಎಂದು ಶೇಕ್ಸ್‌ ಪಿಯರ್ ಹೇಳುತ್ತಾನೆ. (ದುರ್ಬಲತೆಯೇ! ನಿನ್ನ ಪೆಸರೇ ಪೆಣ್ಣಲ್ತೆ? - ಕುವೆಂಪು: ರಕ್ತಾಕ್ಷಿ). ಚಂಚಲ ಸ್ವಭಾವವನ್ನು ಅವಳಿಗೆ ಎಷ್ಟೇ ಆರೋಪಿಸಿದರೂ ಆಕೆಯಲ್ಲಿ ಧೃಡತೆಯಿದೆ. ಜೊತೆಗೆ ನಮ್ಮ ದೇಶದ ಸಾಮಾಜಿಕ ಕಟ್ಟಳೆಯೇ ಹಾಗಿದೆ. ಹುಡುಗರು ಕ್ರಿಕೆಟ್, ಸಿನೆಮಾ, ಮೋಜು-ಮಸ್ತಿಯಲ್ಲಿ ಬಹುಪಾಲು ಸಮಯವನ್ನು ವ್ಯರ್ಥವಾಗಿ ಕಳೆದರೆ ಬಾಲಕಿಯರು ಅವುಗಳಿಗೆ ಅವಕಾಶವಿಲ್ಲದ್ದರಿಂದ ಅದನ್ನು ಅಧ್ಯಯನಕ್ಕೆ ಬಳಸಿಕೊಳ್ಳುತ್ತಾರೆ. 

ಪೋಷಕರೂ ಸಹ ತಮ್ಮ ಮಗಳ ವಿಷಯದಲ್ಲಿ ಕಾಳಜಿ ವಹಿಸಿದಂತೆ ತಮ್ಮ ಮಗ ಹೇಗೆ ಕಾಲ ಕಳೆಯುತ್ತಾನೆಂದು ಪರೀಕ್ಷಿಸುವ ಗೊಡವೆಗೆ ಹೋಗುವುದಿಲ್ಲ. ಸಂಜೆಯಾಯಿತೆಂದರೆ ಕ್ಲುಪ್ತ ಕಾಲಕ್ಕೆ ಮಗಳು ಮನೆಗೆ ಬರಲೇಬೇಕು. ಒಂದು ನಿಮಿಷ ತಡವಾದರೂ ಆತಂಕ! ಏನೆ, ಎಲ್ಲಿಗೆ ಹೋಗಿದ್ದೆ? ನಿನಗೆ ಬುದ್ಧಿ-ಗಿದ್ದಿ ಇದೆಯಾ? ಬೆಳೆದ ಹುಡುಗಿ, ಮೈಮೇಲೆ ಪ್ರಜ್ಞೆ ಇರಬೇಡವಾ? ಎಂದು ತಾಯಿ ಗದರಿಸುತ್ತಾಳೆ. ಅದೇ ತಾಯಿಯ ನಿತ್ಯ ದಿನಚರಿಯಲ್ಲಿ ಮಧ್ಯಾಹ್ನ ಬದುಕು ಶುರುವಾದಾಗ ಹೋದ ಮಗ ರಾತ್ರಿ ಮುಕ್ತ, ಮುಕ್ತ ಮುಗಿದರೂ ಬರದಿದ್ದಾಗ ಮಗಳು ಆಕ್ಷೇಪಿಸಿದರೆ ಅವನು ಗಂಡು ಹುಡುಗ ಕಣೆ, ಎಲ್ಲೋ ಗೆಳೆಯರ ಜೊತೆ ಇರಬಹುದು, ಬರ್ತಾನೆ ಬಿಡು ಎಂದು ಅವನ ಉನ್ಮತ್ತತೆಗೆ ಮುಕ್ತ ರಹದಾರಿ ಕೊಡುತ್ತಾಳೆ! ಹಳ್ಳಿಯ ರೈತರು ತಮ್ಮ ಮನೆಯ ದನಕರುಗಳು ಸಂಜೆ ಮನೆಗೆ ಬಾರದಿದ್ದರೆ ಲಾಟೀನು ಹಿಡಿದುಕೊಂಡು ಹೊರಗೆ ಹುಡುಕಲು ಹೋಗುತ್ತಾರೆ. ಹೊಲಗದ್ದೆಗಳಲ್ಲಿ ಕಾಲುಸಿಕ್ಕಿಕೊಂಡಿದೆಯೇನೋ ಎಂದು ಆತಂಕಪಟ್ಟುಕೊಳ್ಳುತ್ತಾರೆ. ಆದರೆ ಮಧ್ಯರಾತ್ರಿಯಾದರೂ ಮಗ ಮನೆಗೆ ಬರದಿದ್ದರೆ ಬರ್ತಾನೆ ಬಿಡು, ಎಲ್ಲಿ ಹೋಗ್ತಾನೆ ಎಂದು ಅಲಕ್ಷಿಸುತ್ತಾರೆ. ಕೊಟ್ಟಿಗೆಯ ದನಗಳ ಬಗೆಗೆ ಇರುವ ಕನಿಷ್ಠ ಕಾಳಜಿಯೂ ಮನೆಯ ಮಗನ ಬಗೆಗೆ ಇಲ್ಲದಿದ್ದರೆ ಅವನು ದಾರಿತಪ್ಪಿದ ಮಗನಾಗದೇ ಇರುತ್ತಾನೆಯೇ? 

ತಂದೆ-ತಾಯಂದಿರು ಹೆಣ್ಣುಮಕ್ಕಳ ಬೆಳವಣಿಗೆಯಲ್ಲಿ ವಹಿಸುವ ಕಾಳಜಿಯನ್ನು ಗಂಡುಮಕ್ಕಳ ಬೆಳವಣಿಗೆಯಲ್ಲಿ ವಹಿಸುವುದಿಲ್ಲ. ಇದರಿಂದಾಗಿ ಒಂದೇ ತಾಯಿ ತಂದೆಗಳ ಮಕ್ಕಳಾದರೂ, ಒಂದೇ ಸೂರಿನಡಿಯಲ್ಲಿದ್ದರೂ ಬಾಲಕ-ಬಾಲಕಿಯರ ಮಾನಸಿಕ ಬೆಳವಣಿಗೆಗಳಲ್ಲಿ ಅಜಗಜಾಂತರ ವ್ಯತ್ಯಾಸ ಕಂಡು ಬರುತ್ತದೆ. ಮಕ್ಕಳ ಮುಖಚರ್ಯೆ ತಂದೆ-ತಾಯಿಗಳಂತೆ ಇರಬಹುದು. ಅವರ ವರ್ತನೆ ಅದೇ ತೆರನಾಗಿರುತ್ತದೆಯೆಂದು ಹೇಳಲಾಗದು. ಒಂದೇ ವಂಶದ ಕುಡಿಗಳಾದರೂ ಅವರ ಸ್ವಭಾವಗಳಲ್ಲಿ ಭಿನ್ನತೆ ಕಂಡುಬರುತ್ತದೆ; ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಯ ಸ್ತರಗಳಲ್ಲಿ ಅಂತರ ಕಂಡುಬರುತ್ತದೆ.

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 31.5.2012