ಭಾವನೆಗಳಿಗಿಂತ ಕರ್ತವ್ಯ ಮುಖ್ಯ
ಒಂದು ಕಾಲ್ಪನಿಕ ಕಥೆ: ಇಬ್ಬರು ಆತ್ಮೀಯ ಸ್ನೇಹಿತರಿದ್ದರು. ಅವರಲ್ಲಿ ಒಬ್ಬನು ದೊಡ್ಡ ವೇದಾಂತಿ. ವೇದಾಂತ ತತ್ವಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದವನು. ಒಮ್ಮೆ ಅವನ ಸ್ನೇಹಿತನ ತಂದೆ ತೀರಿಕೊಂಡನು. ವೇದಾಂತಿಯು ಸ್ನೇಹಿತನ ಮನೆಗೆ ಹೋಗಿ ಅಳುತ್ತಿದ್ದ ಅವನನ್ನು ಕಂಡು "ಆತ್ಮಕ್ಕೆ ಹುಟ್ಟಿಲ್ಲ, ಸಾವಿಲ್ಲ; ಅದು ನಿತ್ಯ, ಶಾಶ್ವತ. ಮನುಷ್ಯ ಹಳೆಯ ಬಟ್ಟೆಗಳನ್ನು ಬಿಟ್ಟು ಹೊಸ ಹೊಸ ಬಟ್ಟೆಗಳನ್ನು ಧರಿಸುವಂತೆ ಆತ್ಮವೂ ಜನ್ಮಜನ್ಮಾಂತರಗಳಲ್ಲಿ ಹೊಸ ಹೊಸ ಶರೀರವನ್ನು ಬದಲಿಸುತ್ತಾ ಹೋಗುತ್ತದೆ. ಆದಕಾರಣ ನೀನು ಹೀಗೆ ಅಳುವುದು ಸರಿಯಲ್ಲ" ಎಂದೆಲ್ಲಾ ವೇದಾಂತದ ಮಾತುಗಳನ್ನಾಡಿ ಸಂತೈಸಿದ. ಇದಾದ ಒಂದು ತಿಂಗಳಲ್ಲಿ ವೇದಾಂತಿಯ ತಂದೆ ತೀರಿಕೊಂಡ. ಆತನ ಸ್ನೇಹಿತ ವೇದಾಂತಿಯ ಮನೆಗೆ ಹೋದಾಗ ಅವನ ನಿರೀಕ್ಷೆ ಹುಸಿಯಾಗಿತ್ತು. ಆ ವೇದಾಂತಿಯು ಇವನಿಗಿಂತ ಹೆಚ್ಚಾಗಿ ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದ! ಸ್ನೇಹಿತನಿಗೆ ಆಶ್ಚರ್ಯವಾಯಿತು. ತಿಂಗಳ ಹಿಂದೆ ನಮ್ಮಪ್ಪ ಸತ್ತಾಗ ಬಂದು ನನ್ನನ್ನು ಸಂತೈಸಿ ಹೇಳಿದ ವೇದಾಂತದ ಮಾತುಗಳನ್ನು ಅಷ್ಟು ಬೇಗ ಮರೆತೆಯಾ ಎಂದು ಕೇಳಿದ. ಅದಕ್ಕೆ ಆ ವೇದಾಂತಿಯು ಕೊಟ್ಟ ಸಮರ್ಥನೆಯೆಂದರೆ: "ಅಂದು ಸತ್ತವನು ನಿಮ್ಮಪ್ಪ, ಇಂದು ಸತ್ತವನು ನಮ್ಮಪ್ಪ!"
ಈ ಮುಂದಿನದು ಸತ್ಯ ಕಥೆ: ಒಮ್ಮೆ ಅಮೇರಿಕಾ ಪ್ರವಾಸದಲ್ಲಿದ್ದಾಗ ಶಿಷ್ಯರೊಬ್ಬರ ಮನೆಯಲ್ಲಿ ಪೂಜೆ ಇತ್ತು. ಅಪರೂಪಕ್ಕೆ ಅವರ ಮನೆಗೆ ಹೋಗಿದ್ದರಿಂದ ಆ ಶಿಷ್ಯರು ಸಂತೋಷಪಟ್ಟು ತಮ್ಮ ಸ್ನೇಹಿತರನ್ನೆಲ್ಲಾ ಆಹ್ವಾನಿಸಿದ್ದರು. ಪೂಜೆ ಮತ್ತು ಪ್ರಸಾದ ಆದಮೇಲೆ ಎಲ್ಲರೂ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತಿದ್ದರು. ಕೆಲವರು ನಮ್ಮೊಂದಿಗೆ ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳನ್ನು ಕುರಿತು ಚರ್ಚೆಮಾಡುತ್ತಿದ್ದರು. ಮಧ್ಯರಾತ್ರಿ ಸಮೀಪಿಸಿತು. ಎಲ್ಲ ಅತಿಥಿ ದಂಪತಿಗಳು ತಮ್ಮ ಮಕ್ಕಳೊಂದಿಗೆ ಒಬ್ಬೊಬ್ಬರೇ ಬಂದು ಕಾಣಿಕೆ ಕೊಟ್ಟು ನಮಸ್ಕರಿಸಿ ಅವರವರ ಮನೆಗೆ ಹಿಂದಿರುಗತೊಡಗಿದರು. ಎಲ್ಲರೂ ಹೋಗುವುದನ್ನೇ ಕಾಯ್ದು ಕುಳಿತಿದ್ದ ಒಬ್ಬರು ಮಧ್ಯವಯಸ್ಸಿನ ವೈದ್ಯರು ನಮ್ಮ ಹತ್ತಿರ ಬಂದು ಅವರ ಪರಿಚಯವನ್ನು ಮಾಡಿಕೊಂಡರು. ಅವರು ಧಾರವಾಡದ ಕಡೆಯವರು. ಕೆಲವೊಂದು ವೈಯಕ್ತಿಕ ವಿಚಾರಗಳನ್ನು ಹೇಳಿಕೊಳ್ಳತೊಡಗಿದರು. ಮುಖ ಪೇಲವವಾಗಿತ್ತು. ಕಂಠ ಬಿಗಿದಿತ್ತು. ಅವರು ತಂದೆಗೆ ಒಬ್ಬನೇ ಮಗ. ತಂದೆತಾಯಿಗಳು ಬಡತನದ ಬೇಗೆಯಲ್ಲಿ ಬಹಳ ಕಷ್ಟಪಟ್ಟು ಅವರನ್ನು ಓದಿಸಿದ್ದರು. ಅಮೇರಿಕಾದಲ್ಲಿ ನೆಲೆಸಿದ ಮೇಲೆ ಎಷ್ಟೇ ಒತ್ತಾಯಪಡಿಸಿದರೂ ವಯಸ್ಸಾದ ಅವರ ತಂದೆತಾಯಿಗಳು ಹುಟ್ಟಿದೂರನ್ನು ಬಿಟ್ಟು ಬರಲು ಒಪ್ಪಲಿಲ್ಲ. ಧಾರವಾಡದಲ್ಲಿಯೇ ಒಂದು ಮನೆಯನ್ನು ಮಾಡಿ ಅವರ ವಾಸಕ್ಕೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದರು. ಸಮೀಪದಲ್ಲಿದ್ದ ಕಾಲೇಜಿನ ವಿದ್ಯಾರ್ಥಿಗಳು ಒಬ್ಬಿಬ್ಬರು ವಯಸ್ಸಾದ ಆ ತಂದೆತಾಯಿಗಳ ಮನೆಗೆ ಆಗಾಗ್ಗೆ ಬರುತ್ತಿದ್ದು ತುಂಬಾ ವಿಶ್ವಾಸಿಕರಾದರು. ಮಗ ದೂರದ ದೇಶದಲ್ಲಿದ್ದುದರಿಂದ ಹತ್ತಿರದ ಒಡನಾಟವಿಟ್ಟುಕೊಂಡಿದ್ದ ಆ ವಿದ್ಯಾರ್ಥಿಗಳೇ ವೃದ್ಧ ತಂದೆತಾಯಿಗಳಿಗೆ ಅಕ್ಕರೆಯ ಮಕ್ಕಳಾಗಿದ್ದರು. ಆದರೆ ಆ ವಿದ್ಯಾರ್ಥಿಗಳು ಧೂರ್ತರಾಗಿದ್ದರು. ಒಂದು ರಾತ್ರಿ ಹೊಂಚುಹಾಕಿ ಆ ವೃದ್ಧರನ್ನು ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ದೋಚಿಕೊಂಡು ಹೋದರು. ಅನಿರೀಕ್ಷಿತವಾಗಿ ನಡೆದ ಈ ದುರ್ಘಟನೆ ದೂರದ ದೇಶದಲ್ಲಿ ನೆಲೆಸಿದ್ದ ಮಗನ ಮನಸ್ಸಿಗೆ ಆಘಾತವನ್ನುಂಟುಮಾಡಿತು. ತನ್ನನ್ನು ಕಷ್ಟಪಟ್ಟು ಓದಿಸಿ ಬೆಳೆಸಿದ ತಂದೆತಾಯಿಗಳನ್ನು ಅವರ ಇಳಿ ವಯಸ್ಸಿನಲ್ಲಿ ತನ್ನಿಂದ ನೋಡಿಕೊಳ್ಳಲು ಆಗಲಿಲ್ಲವಲ್ಲಾ, ತಂದೆತಾಯಿಗಳೊಂದಿಗೆ ಧಾರವಾಡದಲ್ಲಿಯೇ ವಾಸವಾಗಿದ್ದಿದ್ದರೆ ಈ ಘಟನೆ ಘಟಿಸುತ್ತಿರಲಿಲ್ಲ. ತನ್ನ ವೈಯಕ್ತಿಕ ಸುಖಕ್ಕಾಗಿ ತಂದೆತಾಯಿಗಳನ್ನು ಬಲಿ ಕೊಟ್ಟಂತಾಯಿತಲ್ಲಾ ಎಂಬ ಕೊರಗು ಆ ವೈದ್ಯರನ್ನು ಬಲವಾಗಿ ಕಾಡಿಸುತ್ತಿತ್ತು. ಅಮೇರಿಕಾ ದೇಶವೇ ಏಕೆ ಬೆಂಗಳೂರಿನಲ್ಲಿಯೇ ಕೆಲಸಮಾಡಿಕೊಂಡಿದ್ದು ಸ್ವಂತ ಮನೆಯಲ್ಲಿಯೇ ತಂದೆತಾಯಿಗಳು ವಾಸವಾಗಿದ್ದರೂ ಆಸ್ಪತ್ರೆಗೆ ಕೆಲಸಕ್ಕೆಂದು ಹೋಗಿದ್ದಾಗ ನಯವಂಚಕರು ಬಂದು ಮನೆಯಲ್ಲಿದ್ದವರ ಕತ್ತುಕೊಯ್ದು ಹಾಕಿದ ದಾರುಣ ಪ್ರಸಂಗಗಳನ್ನು ಅವರಿಗೆ ವಿವರಿಸಿ ಸಮಾಧಾನಪಡಿಸಲು ಯತ್ನಿಸಿದರೂ ಅವರ ಮನಸ್ಸಿನೊಳಗೆ ಆಳವಾಗಿ ಬೇರೂರಿದ್ದ ಅಪರಾಧಿ ಪ್ರಜ್ಞೆಯನ್ನು ಹೋಗಲಾಡಿಸುವುದು ಬಹಳ ಕಷ್ಟವಾಯಿತು.
ಹೃದಯ ಭಾವನೆಗಳ ಮಹಾಸ್ರೋತ. ಶರೀರದ ಸ್ವಾಸಕ್ಕೆ ನಾಡಿಯ ಮಿಡಿತ ಎಷ್ಟು ಆವಶ್ಯಕವೋ ಹಾಗೆಯೇ ಬದುಕಿಗೆ ಭಾವನೆಗಳ ಮಿಡಿತವೂ ಅಷ್ಟೇ ಆವಶ್ಯಕ. ನಾಡಿಯ ಮಿಡಿತ ನಿಂತುಹೋದರೆ ಅಂತಹ ಶರೀರದಲ್ಲಿ ಜೀವತಂತು ಇರುವುದಿಲ್ಲ. ಹಾಗೆಯೇ ಭಾವನೆಗಳಿಲ್ಲದ ಬದುಕು ಬರಡು; ಮರುಭೂಮಿ ಇದ್ದಂತೆ. ಭೂಮಿಯ ಉದರದೊಳಗೆ ಧಗಧಗಿಸಿ ಉರಿಯುವ ದಾವಾಗ್ನಿಯೂ ಇದೆ, ತಂಪಾದ ಚೇತೋಹಾರಿ ಜಲವೂ ಇದೆ. ಭೂಮಿಯ ಮೇಲೈಯಲ್ಲಿ ಕಠಿಣವಾದ ಕಲ್ಲುಬಂಡೆಯೂ ಇದೆ, ಕರಗಿನೀರಾಗುವ ಮಂಜುಗಡ್ಡೆಯೂ ಇದೆ. ಸೃಷ್ಟಿಯ ಈ ಎಲ್ಲ ವೈರುಧ್ಯಗಳನ್ನೂ ಭೂಮಿ ತನ್ನುದರದೊಳಗೆ ಹದವರಿತು ಇರಿಸಿಕೊಂಡು ನಿರಂತರ ಗತಿಶೀಲವಾಗಿ ನಭೋಮಂಡಲದಲ್ಲಿ ನಿರ್ದಿಷ್ಟವಾದ ಕಕ್ಷೆಯಲ್ಲಿ ಸೂರ್ಯನ ಸುತ್ತ ತಿರುಗುತ್ತಲೇ ಇದೆ. ಸೃಷ್ಟಿಯ ಆರಂಭದಲ್ಲಿ ಕಾಣದ ಕೈಗಳಿಂದ ಉಡಾವಣೆಗೊಂಡ ಈ ಭೂಮಿ ಇದುವರೆಗೂ ಬೀಳದ ಒಂದು ಸುಂದರವಾದ ಆಕಾಶನೌಕೆ. ಆಕಾಶದಲ್ಲಿ ನಿರ್ದಿಷ್ಟವಾದ ಕಕ್ಷೆಯಲ್ಲಿ ಸಂಚರಿಸುವ ಗ್ರಹನಕ್ಷತ್ರಗಳನ್ನು ನೋಡಿ ಮನುಷ್ಯ ಬದುಕುವುದನ್ನು ಕಲಿಯಬೇಕು. ಅವುಗಳೇನಾದರೂ ಮನುಷ್ಯನಂತೆ ಅಡ್ಡಾದಿಡ್ಡಿ ತಿರುಗಾಡಿಕೊಂಡಿದ್ದರೆ ಪರಸ್ಪರ ಡಿಕ್ಕಿ ಹೊಡೆದು ಕಣ್ಣಿಗೆ ಸುಂದರವಾಗಿ ಕಾಣುವ ಈ ಬ್ರಹ್ಮಾಂಡವು ಎಂದೋ ನುಚ್ಚುನೂರಾಗಿ ನೋಡುವವರೇ ಇಲ್ಲದ ದುರ್ಗತಿಯನ್ನು ಪಡೆಯುತ್ತಿತ್ತು! ಅಂತಹ ಪ್ರಳಯ ಸಂಭವಿಸಿದರೂ ಅದೂ ಸಹ ಸೃಷ್ಟಿಪ್ರಕ್ರಿಯೆಯ ಒಂದು ಭಾಗವೇ ಹೊರತು ಬೇರೆಯಲ್ಲ, ಲಯವೆಂಬುದು ಸ್ಥಿತ್ಯಂತರ; ಶಾಶ್ವತ ನಾಶವಲ್ಲ. ಪುಷ್ಪದಂತನ ಶಿವಮಹಿಮ್ನಸ್ತೋತ್ರವನ್ನು ಆಧರಿಸಿ ಬಸವಣ್ಣನವರು ಬರೆದ ಈ ಮುಂದಿನ ವಚನವನ್ನು ಗಮನಿಸಿ:
ಅದುರಿತು ಪಾದಾಘಾತದಿಂದ ಧರೆ,
ಬಿದಿರಿದುವು ಮುಕುಟ ತಾಗಿ ತಾರಕೆಗಳು,
ಉದುರಿದವು ಕೈ ತಾಗಿ ಲೋಕಂಗಳೆಲ್ಲಾ!
"ಮಹೀ ಪಾದಾಘಾತಾದ್ ವ್ರಜತಿ ಸಹಸಾ ಸಂಶಯ-ಪದಮ್!
ಪದಂ ವಿಷ್ಟೋರ್ಭ್ರಾಮ್ಯದ್ ಭುಜ-ಪರಿಘರುಗ್ಧಗ್ರಹಗಣಮ್
ಮುಹುರ್ದ್ಯೌದೌಸ್ಥ್ಯಮ್ ಯಾತ್ಯನಿಭೃತ-ಜಟಾ-ತಾಡಿತ-ತಟಾ!
ಜಗದ್ರಕ್ಷಾಯೈತ್ವಂ ನಟಸಿ ನನು ವಾಮೈವ ವಿಭುತಾ!"
ನಮ್ಮ ಕೂಡಲಸಂಗಮ ದೇವ ನಿಂದು ನಾಟ್ಯವನಾಡೆ!
ಶಿವನು ಪ್ರಳಯಕಾಲದಲ್ಲಿ ಭೂಮಿಯ ಮೇಲೆ ನಿಂತು ತಾಂಡವ ನೃತ್ಯ ಮಾಡುವ ಸಂದರ್ಭದಲ್ಲಿ ಅವನ ಪಾದಗಳ ಹೊಡೆತದಿಂದ ಭೂಮಿಯು ಜರ್ಝರಿತವಾಗಿ ನಡುಗಿತಂತೆ! ಶಿವನ ತಲೆಯ ಮೇಲಿರುವ ಜಟೆಯು ತಾಗಿ ಆಕಾಶದಲ್ಲಿರುವ ಗ್ರಹನಕ್ಷತ್ರಗಳು ಸಿಡಿದುವಂತೆ! ನಾಟ್ಯದ ಅಧಿದೇವತೆಯೆನಿಸಿದ ಆ ನಟರಾಜನು ನಾಟ್ಯದ ವಿವಿಧ ಭಂಗಿಗಳನ್ನು ಅಭಿನಯಿಸುವಾಗ ಮಿಂಚಿನ ವೇಗದಿಂದ ಸಂಚರಿಸಿದ ಅವನ ಕೈಗಳು ತಾಗಿ ಬ್ರಹ್ಮಾಂಡದಲ್ಲಿರುವ ಲೋಕಗಳೆಲ್ಲವೂ ಉರುಳಿ ಬಿದ್ದುವಂತೆ! ಆದರೂ ಶಿವನ ಆ ರುದ್ರಭೀಕರವಾದ ನಾಟ್ಯವು ಈ ಜಗತ್ತನ್ನು ರಕ್ಷಣೆ ಮಾಡುವ ಉದ್ದೇಶವನ್ನು ಹೊಂದಿತ್ತೇ ಹೊರತು (ಜಗದ್ರಕ್ಷಾಯೈ ತ್ವಂ ನಟಸಿ) ಈ ಜಗತ್ತನ್ನು ನಾಶಪಡಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎನ್ನುತ್ತದೆ ಮೇಲೆ ಉದ್ಧರಿಸಿದ ಶಿವಮಹಿಮ್ನಸ್ತೋತ್ರ! ಲಯಕರ್ತನಾದ ನೀನು ಜಗದ್ರಕ್ಷಕನಾಗಿ ಮೆರೆದುದು ನಿನ್ನ ಮಹಿಮೆಯಲ್ಲದೆ ಮತ್ತೇನು ಎಂದು ಪುಷ್ಪದಂತ ಶಿವನ ಗುಣಗಾನ ಮಾಡುತ್ತಾನೆ (ನನು ವಾಮೈವ ವಿಭುತಾ!).
ಜೀವನದಲ್ಲಿ ನಿಮ್ಮನ್ನು ರಸಾತಳಕ್ಕೆ ತುಳಿಯುವ ಎಂತಹ ಘಟನೆಗಳೇ ಘಟಿಸಲಿ ಅವುಗಳನ್ನು ಎದುರಿಸಿ ಮುನ್ನಡೆಯುವ ಎದೆಗಾರಿಕೆ ಇರಬೇಕು.
ಅಂಕ ಓಡಿದರೆ ತೆಗಂಗೆ ಭಂಗವಯ್ಯಾ
ಕಾದಿ ಗೆಲಿಸಯ್ಯಾ ಎನ್ನನು ಕಾದಿ ಗೆಲಿಸಯ್ಯಾ!
ಎನ್ನುತ್ತಾರೆ ಬಸವಣ್ಣನವರು. ಸೈನಿಕ ರಣರಂಗದಿಂದ ಹಿಮ್ಮೆಟ್ಟಿದರೆ ರಾಜನಿಗೆ ಕೆಟ್ಟಹೆಸರು ಬರುತ್ತದೆ. ಈ ಬದುಕು ಒಂದು ರಣರಂಗ, ಜೀವನದಲ್ಲಿ ಬರುವ ಸವಾಲುಗಳಿಗೆ ಹೆದರಿ ಓಡಿಹೋಗಬಾರದು. ಅವುಗಳನ್ನು ಎದುರಿಸಿ ಗೆಲ್ಲುವ ಭರವಸೆ ಇರಬೇಕು. ಅದಕ್ಕಾಗಿ ದೇವರ ಮೊರೆಹೋಗಬೇಕು. ಅಂತಹ ಆತ್ಮಸ್ಥೆರ್ಯವನ್ನು ತುಂಬಿ ನನ್ನನ್ನು ಗೆಲ್ಲಿಸು, ಇಲ್ಲದಿದ್ದರೆ ನನ್ನ ಮಾಲೀಕನಾದ ನಿನಗೆ ಕೆಟ್ಟಹೆಸರು ಬರುತ್ತದೆ ಎಂದು ದೇವರನ್ನು ಕುರಿತು ಮಾರ್ಮಿಕವಾಗಿ ಬಸವಣ್ಣನವರು ನುಡಿದಿದ್ದಾರೆ. ಇದನ್ನೇ "ಈಸಬೇಕು, ಇದ್ದು ಜೈಸಬೇಕು" ಎಂದು ಪುರಂದರ ದಾಸರು ಹೇಳಿದ್ದು,ಬಾಲ್ಯದ ಸಹಪಾಠಿ ಸತ್ಯಮೂರ್ತಿ ಇತ್ತೀಚೆಗೆ ನಮ್ಮ ಮೊಬೈಲ್ ಗೆ ಕಳುಹಿಸಿದ ಒಂದು SMS ತುಂಬಾ ಅರ್ಥಪೂರ್ಣವಾಗಿದೆ: Life is like ridinga bicycle. in order to keep your balance, we must keep on moving! ಬದುಕು ಒಂದು ಬೈಸಿಕಲ್ ಸವಾರಿ ಇದ್ದಂತೆ. ಚಕ್ರಗಳು ತಿರುಗದಿದ್ದರೆ ಕೆಳಗೆ ಬೀಳುತ್ತೀರಿ. ಬೀಳದಂತಿರಬೇಕಾದರೆ ನಿರಂತರ ಗತಿಶೀಲರಾಗಬೇಕಾಗುತ್ತದೆ. ಅಂತೆಯೇ ಜೀವನ ಚಕ್ರತಿರುಗುವುದು ಅನಿವಾರ್ಯ.
ವ್ಯಕ್ತಿ ಬದುಕಿನಲ್ಲಿ ಅನೇಕ ಧರ್ಮಸಂಕಟಗಳಿಗೆ ಸಿಲುಕಿಕೊಳ್ಳುತ್ತಾನೆ. ಆಗ ಏನು ಮಾಡಬೇಕೆಂದು ತಿಳಿಯದೆ ತಬ್ಬಿಬ್ಬಾಗುತ್ತಾನೆ. ಅಂತಹ ಒಂದು ಕಠಿಣಪ್ರಸಂಗವೇ ಭಗವದ್ಗೀತೆಯಲ್ಲಿ ಬರುವ ಅರ್ಜುನವಿಷಾದಯೋಗ, ಪಾಂಡವರು ಮತ್ತು ಕೌರವರು ಕಾದಾಡಲು ಸಜ್ಜಾಗಿ ರಣರಂಗದಲ್ಲಿ ನಿಂತಿರುತ್ತಾರೆ. ಶತ್ರುಸೈನ್ಯದಲ್ಲಿ ನಿಂತಿರುವ ಆಚಾರ್ಯರಾದ ದ್ರೋಣ, ಪಿತಾಮಹನಾದ ಭೀಷ್ಮ ಮತ್ತಿತರ ಬಂಧುಗಳನ್ನು ಅರ್ಜುನ ನೋಡುತ್ತಾನೆ. ಅವರ ಬಗ್ಗೆ ಅವನ ಹೃದಯಲ್ಲಿದ್ದ ಮಧುರ ಭಾವನೆಗಳು ಜಾಗೃತಗೊಳ್ಳುತ್ತವೆ. ಅವರನ್ನು ಕೊಂದು ತನಗೆ ಬರುವ ಭಾಗ್ಯವಾದರೂ ಏನು ಎಂದು ಹತಾಶನಾಗಿ ಯುದ್ಧಮಾಡಲು ಮನಸ್ಸು ಬಾರದೆ ತನ್ನ ಗಾಂಡೀವವನ್ನು ಕೆಳಗೆಸೆಯುತ್ತಾನೆ. ಎರಡೂ ಸೇನೆಗಳು ಯುದ್ಧಮಾಡಲು ಸನ್ನದ್ಧರಾಗಿ ನಿಂತಿರುವಾಗ ಶಸ್ತ್ರತ್ಯಾಗಮಾಡಿದ ಅರ್ಜುನನಿಗೆ ಶ್ರೀಕೃಷ್ಣನು ಭಗವದ್ಗೀತೆಯ 18 ಅಧ್ಯಾಯಗಳು ಅದರಲ್ಲಿ ಬರುವ 700 ಶ್ಲೋಕಗಳನ್ನು ಹೇಳುವವರೆಗೂ ಎದುರಾಳಿಯಾದ ದುರ್ಯೋಧನ ತನ್ನ ಹನ್ನೊಂದು ಅಕ್ಷೌಹಿಣೀ ಸೈನ್ಯದೊಂದಿಗೆ ಸುಮ್ಮನೆ ಕಾಯುತ್ತಾ ಕುಳಿತುಕೊಂಡಿದ್ದನೇ? ಇದು ಸಾಹಿತ್ಯರಚನೆಯ ಪರಿಚಯವಿಲ್ಲದವರು ಕೇಳುವ ಪ್ರಶ್ನೆ. ಯಾವುದೇ ಗಹನವಾದ ವಿಚಾರವನ್ನು ನೇರವಾಗಿ ಹೇಳಲು ಹೋದರೆ ಮನಸ್ಸಿಗೆ ನಾಟುವುದಿಲ್ಲ. ಒಂದು ಸಂದರ್ಭವನ್ನು ಮುಂದಿಟ್ಟುಕೊಂಡು ಕೇಳುಗರ ಮನಸ್ಸಿನಲ್ಲಿ ತಾಕಲಾಟ ಉಂಟಾಗುವಂತೆ ಮಾಡಿ, ಅವರು ಉತ್ತರಕ್ಕೆ ಹಾತೊರೆಯುವಂತಾದಾಗ ಹೇಳಿದರೆ ಮಾತ್ರ ಹೇಳಿದ ವಿಚಾರಗಳು ಮನಸ್ಸಿಗೆ ನಾಟುತ್ತವೆ. ಶಾಲಾಮಕ್ಕಳಿಗೆ ಪರಿಣಾಮಕಾರಿಯಾಗಿ ಪಾಠಮಾಡಲು ಈ ತಂತ್ರಗಾರಿಕೆಯನ್ನು (technique) ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಅಧ್ಯಾಪಕರಿಗೆ ಹೇಳಿಕೊಡಲಾಗುತ್ತದೆ. ಭಗವದ್ಗೀತಾಕಾರನು ಈ ಪ್ರಸಂಗವನ್ನು ಬಹಳ ಜಾಣ್ಮೆಯಿಂದ ಬಳಸಿಕೊಂಡಿದ್ದಾನೆ. ಅರ್ಜುನ ಹೇಡಿಯೇನಲ್ಲ, ಆ ಮೊದಲು ಎಷ್ಟೋ ಯುದ್ಧಗಳನ್ನು ಮಾಡಿ ಅಪ್ರತಿಮ ವೀರನೆನಿಸಿಕೊಂಡವನು. ಕುರುಕ್ಷೇತ್ರಕ್ಕೆ ವೀರಾವೇಶದಿಂದಲೇ ಗಾಂಡೀವಧಾರಿಯಾಗಿ ಯುದ್ದಮಾಡಲು ಬಂದಿರುತ್ತಾನೆ. "ಸೇನಯೋರುಭಯೋರ್ಮಧೈ ರಥಂ ಸ್ಥಾಪಯ ಮೇಚ್ಯುತ....ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ ರಣಸಮುದ್ಯವೇ?" ಅಂದರೆ ಈ ರಣರಂಗದಲ್ಲಿ ನನ್ನೊಂದಿಗೆ ಯುದ್ಧಮಾಡಲು ಯಾರು ನನಗೆ ಸರಿಸಮಾನರು ಎಂದು ಮೊದಲು ನೋಡುತ್ತೇನೆ, ಎರಡೂ ಸೇನೆಗಳ ಮಧ್ಯೆ ನನ್ನ ರಥವನ್ನು ನಿಲ್ಲಿಸು ಎಂದು ಶ್ರೀಕೃಷ್ಣನನ್ನು ಕೇಳಿಕೊಳ್ಳುತ್ತಾನೆ. ಆಗ ಸಾರಥಿಯಾದ ಶ್ರೀಕೃಷ್ಣನು ಸೀದಾ ದುರ್ಯೋಧನನ ಎದುರಿಗೆ ರಥವನ್ನು ನಿಲ್ಲಿಸಿದ್ದರೆ ಭಗವದ್ಗೀತೆಯು ಹುಟ್ಟುತ್ತಲೇ ಇರಲಿಲ್ಲ! ಭಗವದ್ಗೀತಾಕಾರನು ರಥವನ್ನು ಅರ್ಜುನನ ಕಡುವೈರಿಯಾದ ದುರ್ಯೋಧನನ ಮುಂದೆ ನಿಲ್ಲಿಸದೆ ಭೀಷ್ಮದ್ರೋಣರ ಎದುರಿಗೆ ನಿಲ್ಲಿಸುವಂತೆ ಮಾಡುತ್ತಾನೆ. ಆಗ ಗುರುಹಿರಿಯರನ್ನೂ, ಬಂಧುಬಾಂಧವರನ್ನೂ ನೋಡಿ ಅರ್ಜುನನ ಹೃದಯದಲ್ಲಿ ಉಂಟಾಗುವ ಹತಾಶ ಭಾವನೆಯೇ: ಕಳೆದುಕೊಂಡ ರಾಜ್ಯವೇ ಏಕೆ, ಮೂರು ಲೋಕಗಳ ಒಡೆತನ ಸಿಕ್ಕುತ್ತದೆಯೆಂದರೂ ನಾನು ಇವರನ್ನು ಕೊಲ್ಲಲಾರೆ ನಾನು ಸತ್ತರೂ ಪರವಾಗಿಲ್ಲ ಎಂಬ ಪ್ರತಿಕ್ರಿಯೆ (ಏತಾನ್ನ ಹಂತುಮಿಚ್ಛಾಮಿ ಮಧುಸೂದನ | ಅಪಿ ತೈಲೋಕ್ಯರಾಜ್ಯ ಹೇತೋಃ ಕಿಂ ನು ಮಹೀಕೃತೆ). ಅವನ ಗಾಂಢೀವ ನಡುಗಿದ್ದು ಹೇಡಿತನದಿಂದ ಅಲ್ಲ; ತನಗೆ ಬಿಲ್ಲುವಿದ್ಯೆ ಕಲಿಸಿದ ಗುರುವನ್ನೂ, ಪಾಲನೆ ಪೋಷಣೆ ಮಾಡಿದ ಹಿರಿಯರನ್ನೂ, ಒಡಹುಟ್ಟಿದವರನ್ನೂ ಕೊಂದು ಯಾವ ಪಾಪ ಕಟ್ಟಿಕೊಳ್ಳಲಿ ಎಂಬ ಪಾಪಭೀರುತ್ವದಿಂದ. ಇವರನ್ನು ಕೊಲ್ಲುವುದಕ್ಕಿಂತ ಭಿಕ್ಷೆ ಬೇಡಿಯಾದರೂ ಜೀವನ ನಡೆಸುವುದು ಎಷ್ಟೋ ವಾಸಿ ಎಂಬ ತೀರ್ಮಾನಕ್ಕೆ ಬರುತ್ತಾನೆ. ಬಂಧುತ್ವದ ಮೋಹ ಅವನನ್ನು ಕ್ಷಾತ್ರಧರ್ಮದಿಂದ ವಿಚಲಿತನನ್ನಾಗಿ ಮಾಡುತ್ತದೆ. ಕ್ಷತ್ರಿಯನಾಗಿ ಯುದ್ಧ ಮಾಡುವುದು ಅವನ ಧರ್ಮ, ಕರ್ತವ್ಯವೂ ಕೂಡ. ಇದಕ್ಕೆ ಉತ್ತರರೂಪವಾಗಿ ಯಾರೂ ಆತ್ಮವನ್ನು ಕೊಲ್ಲಲು ಸಾಧ್ಯವಿಲ್ಲ, ಆತ್ಮ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ ಎಂದು ಹೇಳಿದ ಮಾತಿಗಿಂತ ಪ್ರಸ್ತುತ ಸಂದರ್ಭದಲ್ಲಿ ಮುಂದುವರಿದು "ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ" ಎಂದು ಹೇಳಿದ ಶ್ರೀಕೃಷ್ಣನ ಮಾತು ಹೆಚ್ಚು ಪ್ರಸ್ತುತ, ಭಗವದ್ಗೀತೆಯ ಈ ಶ್ಲೋಕವನ್ನೂ ಸಹ ಅನೇಕರು ತಪ್ಪಾಗಿ ಗ್ರಹಿಸಿದ್ದಾರೆ. ಕೆಲಸ ಮಾಡುವುದಕ್ಕೆ ಮಾತ್ರ ನಿನಗೆ ಅಧಿಕಾರ, ಅದರ ಫಲಕ್ಕೆ ನೀನು ಹಕ್ಕುದಾರನಲ್ಲ ಎಂಬ ಅಪಾರ್ಥವನ್ನು ಕಲ್ಪಿಸುವುದು ತಪ್ಪು: ಬಸವ ಎಂದರೆ ಪಾಪ ಎಂದಷ್ಟೇ ಓದಿಕೊಂಡು ದೆಸೆಗೆಟ್ಟು ಪೋಪುದು ಎಂಬ ಅದರ ಮುಂದಿನ ಸಾಲನ್ನು ಓದಿಕೊಳ್ಳದೇ ಹೋದರೆ ಯಾವ ಅನರ್ಥ ಉಂಟಾಗುತ್ತದೆಯೋ ಅದೇ ಇಲ್ಲಿ ಆಗಿರುವುದು. ಗೀತೆಯ ಮುಂದಿನ ಸಾಲು ಹೀಗಿದೆ: ಮಾ ಕರ್ಮಫಲಹೇತುರ್ಭೂಃ , ಮಾ ತೇ ಸಂಗೋsಸ್ತ್ರ ಕರ್ಮಣಿ.ಕರ್ಮದಿಂದ ನಿರೀಕ್ಷಿಸಿದ ಫಲವು ಅಂದರೆ ವ್ಯಕ್ತಿ ಯಾವುದೇ ಕೆಲಸ ಮಾಡುವಾಗ ಅದರಿಂದ ತನಗೆ ಏನು ಸಿಗುತ್ತದೆಯೆಂದು ಲೆಕ್ಕಾಚಾರ ಮಾಡುತ್ತಾ ಕರ್ಮವನ್ನು ಮಾಡಲೂ ಕಾರಣವಾಗದಿರಲಿ. (ಕರ್ಮಣಃ ಫಲಂ ಕರ್ಮಫಲಂ, ಕರ್ಮಫಲಂ, ಹೇತುಃ ಯಸ್ಯ ಸಃ ಕರ್ಮಫಲ ಹೇತುಃ) ಅಂದರೆ ವ್ಯಕ್ತಿ ಯಾವುದೇ ಕೆಲಸ ಮಾಡುವಾಗ ಅಂದರಿಂದ ತನಗೆ ಏನು ಸಿಗುತ್ತದೆಯೆಂದು ಲೆಕ್ಕಚಾರ ಮಾಡುತ್ತಾ ಕುಳಿತರೆ ಹೆಚ್ಚಿನ ಲಾಭವಾಗುವುದಾದರೆ ಮಾತ್ರ ಆ ಕೆಲಸದಲ್ಲಿ ಪ್ರವೃತ್ತನಾಗುತ್ತಾನೆಯೇ ಹೊರತು ಅದರಿಂದ ಏನೂ ಲಾಭವಿಲ್ಲದಿದ್ದರೆ ಅಂತಹ ಕೆಲಸವನ್ನು ಮಾಡಲು ಮುಂದಾಗುವುದಿಲ್ಲ "ಪ್ರಯೋಜನಮನುದ್ದಿಶ್ಯ ನ ಮಂದೋಪಿ ಪ್ರವರ್ತತೇ". ಲಾಭವಿಲ್ಲದ ಕಾರ್ಯದಲ್ಲಿ ಯಾವ ದಡ್ಡನೂ ತೊಡಗುವುದಿಲ್ಲ. ಲಾಭವಿರಲಿ, ಇಲ್ಲದಿರಲಿ ಅದು ತಾನು ಮಾಡಬೇಕಾದ ಕರ್ತವ್ಯವಾಗಿದ್ದರೆ ಅದನ್ನು ಖಂಡಿತಾ ಮಾಡಬೇಕು. ತನಗೆ ಏನೂ ಲಾಭವಿಲ್ಲವೆಂದು ನಿಷ್ರ್ಕಿಯನಾಗಬಾರದು(ಮಾ ತೇ ಸಂಗೋsಸ್ತ್ವ ಕರ್ಮಣಿ).ಏನೂ ಮಾಡದೆ ಸುಮ್ಮನೆ ಕುಳಿತುಕೊಂಡು ಕರ್ತವ್ಯವಿಮುಖನಾಗಬಾರದೆಂಬುದೇ ಗೀತೆಯ ಸಂದೇಶ! ಈ ಅರ್ಥದಲ್ಲಿಯೇ ಬಸವಣ್ಣನವರು ಹೇಳಿದ್ದು:
"ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು!"
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 16.9.2009.