ಮಾಡಿದವರ ಪಾಪ ಆಡಿದವರ ಬಾಯಲ್ಲಿ!
ಮಾರ್ಚ್ ಕಳೆದು ಈಗ ಏಪ್ರಿಲ್ ಕಾಲಿಟ್ಟಿದೆ. ರಾಜನಾದ ವಸಂತನ ಸ್ವಾಗತಕ್ಕೆ ಸಿದ್ಧವಾಗಿ ನಿಂತಿವೆ. ಬೇಸಗೆಯ ಧಗೆ ಏರುತ್ತಿದೆ. ಯುಗಾದಿ ಹಬ್ಬದ ಬೇವು ಬೆಲ್ಲವನ್ನು ಸವಿದ ಜನರು ಬೆವರಿಳಿಸುವ ಬೇಸಗೆಗೆ ಮಾನಸಿಕವಾಗಿ ಸಜ್ಜಾಗಿದ್ದಾರೆ. ದೇಶದ ಸಂಸತ್ಗೆ ಪ್ರತಿನಿಧಿಗಳನ್ನಾರಿಸಲು ಚುನಾವಣೆಯ ಜ್ವರವೂ ದಿನೇ ದಿನೇ ಏರುತ್ತಿದೆ. ಈ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಭಾರತದ ಮುಂದಿನ 5 ವರ್ಷಗಳ ಹಣೆಯ ಬರೆಹವನ್ನು ಮತದಾರರು ಬರೆಯಲಿದ್ದಾರೆ. ಯುಗಾದಿಯಂದು ಪಡುವಣ ದಿಕ್ಕಿನಲ್ಲಿ ಮುಳುಗುವ ಸೂರ್ಯನನ್ನು ನೋಡುವುದಕ್ಕಿಂತ ಬಿದಿಗೆಯ ಚಂದ್ರನನ್ನು (ಮುಂದಿನ ಪ್ರಧಾನಿಯನ್ನು) ನೋಡುವ ತವಕ!
ಚುನಾವಣೆಗಳನ್ನು ಕುರಿತು ಈ ಹಿಂದೆ ನಮ್ಮ ಅಂಕಣದಲ್ಲಿ ಸಾಕಷ್ಟು ಬರೆಯಲಾಗಿದೆ: ಸ್ವಾತಂತ್ರ್ಯ ಹೋರಾಟಗಾರರು v/s ಟಿಕೆಟ್ಟು ಹೋರಾಟಗಾರರು, ರಾಜಕೀಯ ದೊಂಬರಾಟ, ಸ್ವತಃ ದೇವರೇ ಚುನಾವಣೆಗೆ ನಿಂತರೂ ಗೆಲ್ಲುವುದಿಲ್ಲ, ಬೆಕ್ಕಿನ ಮರಿಗಳೂ ಚುನಾವಣಾ ನೀತಿಸಂಹಿತೆಯೂ, ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ, ರಾಜಕೀಯದ ರಾಡಿ ತೊಳೆಯುವುದು ಹೇಗೆ?, ಭ್ರಷ್ಟಾಚಾರದ ಮೊದಲ ಹೆಜ್ಜೆ, ಮಾರಿಹಬ್ಬವಾಗುತ್ತಿರುವ ಚುನಾವಣೆಗಳು ಇತ್ಯಾದಿ, ಇತ್ಯಾದಿ. ಆದರೆ ಯಾವ ಬದಲಾವಣೆಯೂ ಕಾಣದೆ ಅರಣ್ಯರೋಧನವಾಗಿದೆ. ಬರಹದೊಂದಿಗೆ ಸಕ್ರಿಯವಾಗಿ ಮಾಡಿದ ಪ್ರಯತ್ನಗಳೆಲ್ಲವೂ ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎಂಬಂತಾಗಿದೆ.
ಲೌಕಿಕ ಜೀವನ ಮತ್ತು ಕೌಟುಂಬಿಕ ಜೀವನದಲ್ಲಿ ಗುರುಗಳು ಶಿಷ್ಯರಿಗೆ ಮಾರ್ಗದರ್ಶನ ಮಾಡಿದರೆ ತಪ್ಪೇನೂ ಇಲ್ಲ. ರಾಜಕೀಯ ಮಾಡಬಾರದು ಅಷ್ಟೇ! ರಾಜಕೀಯವೇ ಬೇರೆ, ರಾಜಕೀಯ ಮಾರ್ಗದರ್ಶನವೇ ಬೇರೆ. ಈ ಹಿಂದೆ ರಾಜಕೀಯ ಶುದ್ದೀಕರಣಕ್ಕಾಗಿ ಜಾತ್ಯತೀತ ಮತ್ತು ಪಕ್ಷಾತೀತ ಧೋರಣೆಯನ್ನು ಅನುಸರಿಸಿ ಮಾಡಿದ ನಮ್ಮ ಪ್ರಾಮಾಣಿಕ ಮತ್ತು ನಿಸ್ವಾರ್ಥ ಪ್ರಯತ್ನವನ್ನು ಅರ್ಥೈಸಿಕೊಳದೆ ಕೆಲವು ಮಾಧ್ಯಮಗಳಲ್ಲಿ ಸಿರಿಗೆರೆ ಗುರುಗಳ ಫರ್ಮಾನ್ ಎಂದು ಬಿಂಬಿಸಲಾಗುತ್ತಿರುವುದು ಖೇದಕರ. ನಾವಿರುವುದು ಪ್ರಜಾಪ್ರಭುತ್ವ ಕಾಲದಲ್ಲಿ, ಯಾವ ಬಾದಷಾಹರ ಹುಕುಮತ್ತು ಈಗ ನಡೆಯುವುದಿಲ್ಲ,
ಇವತ್ತಿನ ಚುನಾವಣೆಯನ್ನು ತಂದೆ ತಾಯಿಗಳು ತಮ್ಮ ಮಗಳಿಗೆ ಗಂಡು ಯಾರೆಂದು ನಿಶ್ಚಯ ಮಾಡಿದ ಮದುವೆಗೆ (arranged marriage) ಹೋಲಿಸಬಹುದಾಗಿದೆ. ಅಪ್ಪ ಅಮ್ಮ ಆರಿಸಿದ ಗಂಡಿನಲ್ಲಿ ಏನೇ ಐಬಿರಲಿ ಪಾಲಿಗೆ ಬಂದದ್ದು ಪಂಚಾಮೃತವೆಂದು ಭಾವಿಸುವ ಹಾಗೆ ಪಕ್ಷದ ಕಾರ್ಯಕರ್ತ ನಡೆದುಕೊಳ್ಳಬೇಕಾಗಿದೆ. ಸಾಂವಿಧಾನಿಕವಾಗಿ ತಮಗೆ ಇಷ್ಟವಿದ್ದವರಿಗೆ ಮತದಾನ ಮಾಡಲು ಸ್ವಾತಂತ್ರವಿದ್ದರೂ ಸಹ ವ್ಯಾವಹಾರಿಕವಾಗಿ ಪಕ್ಷೇತರರು ಗೆಲ್ಲುವುದು ಕಷ್ಟ. ಪಕ್ಷದ ಕಾರ್ಯಕರ್ತರು ತಮ್ಮ ಕ್ಷೇತ್ರದಲ್ಲಿ ಚೆನ್ನಾಗಿ ಕೆಲಸ ಮಾಡಬಲ್ಲವರಾರು, ಪ್ರತಿನಿಧಿಯಾಗಲು ಯೋಗ್ಯರು ಯಾರು ಎಂದು ಆಯ್ಕೆ ಮಾಡುವ ಮುಕ್ತ ವಾತಾವರಣ ಸದ್ಯದ ಸ್ಥಿತಿಯಲ್ಲಂತೂ ಇಲ್ಲ, ಪಕ್ಷನಿಷ್ಠೆಯೇ ಪ್ರಧಾನವಾಗಿಬಿಟ್ಟಿದೆ. ಪಕ್ಷನಿಷ್ಠೆ ಎಂದರೆ ತಂದೆ ತಾಯಿಯರ ಮೇಲಿನ ವಿಧೇಯತೆ ಇದ್ದಂತೆ. ಅವರು ನೋಡುವ ಗಂಡು ಎಂಥವನೇ ಆಗಿರಲಿ ಅವನ ಕೈಲಿ ತಾಳಿಕಟ್ಟಿಸಿಕೊಂಡು ಬಾಳುವ ಮಗಳಂತೆ ಪಕ್ಷದ ಕಾರ್ಯಕರ್ತ ಹೈಕಮಾಂಡ್ ನಿಲಿಸಿದ ಅಭ್ಯರ್ಥಿಯನ್ನು ಒಪ್ಪಿಕೊಳ್ಳಬೇಕಾಗಿದೆ. ಒಂದು ವ್ಯತ್ಯಾಸವೆಂದರೆ ತಂದೆ ತಾಯಿಗಳಿಗೆ ವರನ ಹಿನ್ನೆಲೆ ಗೊತ್ತಿರುತ್ತದೆ. ಯೋಗ್ಯ ವರ ಯಾರು ಎಂಬ ನಿಟ್ಟಿನಲ್ಲಿ ಅವರ ಆಲೋಚನೆ ಪ್ರಬುದ್ಧವಾಗಿರುತ್ತದೆ. ಇಲ್ಲಿ ಹಾಗಲ್ಲ, ಕ್ಷೇತ್ರದ ಆಶೋತ್ತರ ಗೊತ್ತಿಲ್ಲದ ವರಿಷ್ಠರು ಅಭ್ಯರ್ಥಿಯನ್ನು ಹೇರುತ್ತಾರೆ. ಟಿಕೆಟ್ ಗಿಟ್ಟಿಸಿದ ಅಭ್ಯರ್ಥಿ ಇಷ್ಟವಿರಲಿ, ಬಿಡಲಿ ಪಕ್ಷ ನಿಷ್ಠೆಯಿಂದ ಕಾರ್ಯಕರ್ತರು ಬೆಂಬಲಿಸಬೇಕಾಗುತ್ತದೆ. ಪಕ್ಷನಿಷ್ಠೆಯ ಹಿಂದೆ ಸ್ವಾರ್ಥ ಅಡಗಿರುತ್ತದೆ. ಅಲ್ಲಿ ದೇಶನಿಷ್ಠೆಯೂ ಇಲ್ಲ, ದೇಶಪ್ರೇಮವೂ ಇಲ್ಲ; ತನ್ನ ಸ್ವಾರ್ಥಕ್ಕಾಗಿ ಯಾರನ್ನೋ ತುಳಿಯುವ, ಯಾರನ್ನೋ ಎತ್ತಿಕಟ್ಟುವ ಹುನ್ನಾರಗಳೇ ಎದ್ದು ಕಾಣಿಸುತ್ತಿವೆ.
ಇತ್ತೀಚೆಗೆ ಮಠಾಧಿಪತಿಗಳು ಚುನಾವಣೆಗೆ ನಿಲ್ಲಬಹುದೆ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ನಮ್ಮ ಪ್ರಕಾರ ಮಠಾಧಿಪತಿಗಳು ರಾಜಕೀಯ ಮಾರ್ಗದರ್ಶನ ಮಾಡಬಹುದೇ ಹೊರತು ಅಭ್ಯರ್ಥಿಗಳಾಗಿ ಚುನಾವಣೆಗೆ ನಿಲ್ಲುವುದು ಸರಿಯಲ್ಲ. ಮಠಾಧಿಪತಿಗಳು ತಂತಮ್ಮ ಸಮುದಾಯಗಳಿಗೆ ತಂದೆ ತಾಯಿ ಇದ್ದಂತೆ. ತಂದೆ ತಾಯಿಗಳಾದವರು ಮಕ್ಕಳಿಗೆ ಮದುವೆ ಮಾಡಬೇಕೇ ಹೊರತು ತಾವೇ ಮದುಮಕ್ಕಳಾಗಿ ಹಸೆಮಣೆ ಏರುವುದು ವಿಹಿತವಲ್ಲ. ಮಠಾಧಿಪತಿಗಳು ರಾಜಕೀಯ ತಾಟಸ್ಥ ನೀತಿ ಅನುಸರಿಸಬೇಕು. ರಾಜಕಾರಣಿ ಜನತೆಯಿಂದ ಆಯ್ಕೆಯಾದ ಪ್ರತಿನಿಧಿ. ಅದು ಅವನ ರಾಜಕೀಯ ಸ್ಥಾನಮಾನ. ಮಠಾಧೀಶರೂ ಸಹ ಸಾರ್ವಜನಿಕ ಸ್ಥಾನಮಾನ ಪಡೆದಿರುತ್ತಾರೆ. ಅದು ಚುನಾವಣೆ ಮೂಲಕ ಪಡೆದ ಸ್ಥಾನಮಾನವಲ್ಲ. ಶಿಷ್ಯಸಮುದಾಯದ ಶ್ರದ್ಧಾಭಕ್ತಿಯಿಂದ ಪಡೆದ ವಿಶೇಷ ಗೌರವದ ಸ್ಥಾನ. ಧಾರ್ಮಿಕ ಮಾರ್ಗದರ್ಶನ ಮಾಡುತ್ತಾರೆಂಬ ಕಾರಣಕ್ಕೆ ಶಿಷ್ಯರು ಗೌರವವನ್ನು ಸಲ್ಲಿಸುತ್ತಾರೆ. ಪ್ರಧಾನವಾಗಿ ಪಾರಲೌಕಿಕ ಜೀವನದ ಮಾರ್ಗದರ್ಶಕರಾಗಿರುವ ಮಠಾಧೀಶರು ಶಿಷ್ಯರಿಗೆ ಐಹಿಕ ಜೀವನದ ಮಾರ್ಗದರ್ಶಕರೂ ಆಗಬಹುದೇ ಹೊರತು ರಾಜಕೀಯ ಚುನಾವಣಾ ಕಣದಲ್ಲಿ ಧುಮುಕಬಾರದು. ಮಠಾಧಿಪತಿಗಳೇ ಚುನಾವಣೆಗೆ ನಿಂತರೆ ಶಿಷ್ಯರು ಸಂದಿಗ್ಧತೆಗೆ ಸಿಲುಕುತ್ತಾರೆ. ಒಂದು ಕಡೆ ತಂತಮ್ಮ ರಾಜಕೀಯ ಪಕ್ಷ ನಿಷ್ಠೆ, ಮತ್ತೊಂದು ಕಡೆ ಧಾರ್ಮಿಕ ಶ್ರದ್ದೆ. ಇವುಗಳ ಅಡಕತ್ತರಿಯಲ್ಲಿ ಶಿಷ್ಯರು ಸಿಕ್ಕಿಹಾಕಿಕೊಳುತ್ತಾರೆ.
ಬಹುಪಾಲು ವಿದ್ಯಾವಂತರು, ಬುದ್ದಿಜೀವಿಗಳು ಚುನಾವಣೆಯಲ್ಲಿ ತಮ್ಮ ಮತವನ್ನು ಚಲಾವಣೆ ಮಾಡುವುದಿಲ್ಲ, ಅವರು ತುಂಬಾ ಉತ್ತಮವಾಗಿ ಯೋಚಿಸಬಲ್ಲರು. ದೇಶ ವಿದೇಶಗಳ ವಿದ್ಯಮಾನಗಳು ಅವರಿಗೆ ಕರತಲಾಮಲಕ. ದೇಶದ ನಾಡಿ ಮಿಡಿತವನ್ನು ಅವರು ಚೆನ್ನಾಗಿ ಬಲ್ಲರು; ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಿಷಯಗಳನ್ನು ಕೂಲಂಕಷವಾಗಿ ಚರ್ಚಿಸಬಲ್ಲರು. ಆದರೆ ಅವರಲ್ಲಿ ಬಹುಪಾಲು ಜನರು ಚುನಾವಣೆಯ ದಿನ ಮತವನ್ನೇ ಹಾಕುವುದಿಲ್ಲ. ಆ ದಿನದ ರಜೆಯ ಮೋಜನ್ನು ಅನುಭವಿಸಲು ಮುಂದಾಗುತ್ತಾರೆಯೇ ಹೊರತು ತಮ್ಮ ಆದ್ಯ ಕರ್ತವ್ಯವಾದ ಮತದಾನವನ್ನು ಮಾಡದೆ ದೇಶದ ಪ್ರಮುಖ ಆಗುಹೋಗಿನಲ್ಲಿ ಭಾಗಿದಾರರಾಗದೆ ಹೊರಗುಳಿಯುತ್ತಾರೆ. ಮತದಾನವನ್ನೇ ಮಾಡದವರು ಚುನಾವಣೆಯ ನಂತರ ಕೂದಲು ಸೀಳುವ ತರ್ಕ ಮಾಡಿ ಏನು ಪ್ರಯೋಜನ! ನಾವಂತೂ ಮತದಾನವನ್ನು ಪೂಜೆಯಷ್ಟೇ ಪವಿತ್ರಕಾರ್ಯವೆಂದು ಭಾವಿಸಿ ಪ್ರತಿಚುನಾವಣೆಯಲ್ಲಿಯೂ ತಪ್ಪದೆ ಮತಹಾಕುತ್ತಾ ಬಂದಿದ್ದೇವೆ.
ಮದುವೆ ವಯಸ್ಸಿಗೆ ಬಂದಿರುವ ಹೆಣ್ಣು ಮಗಳಿರುವ ತಂದೆ ತಾಯಿಗಳಿಗೆ ಯೋಗ್ಯ ವರನನ್ನು ಹುಡುಕುವುದು ತುಂಬಾ ಕಷ್ಟದ ಕೆಲಸ. ಕುಡಿಯದ ಗಂಡಿಗೆ ಮಗಳನ್ನು ಕೊಡಬೇಕೆಂದು ನಿರ್ಧರಿಸಿದರೆ ಅಂತಹ ಗಂಡು ಸಿಗುವುದು ತೀರಾ ಅಪರೂಪ. ಆದಕಾರಣ ಇರುವ ಗಂಡುಗಳ ಪೈಕಿ ಕಡಿಮೆ ಗುಂಡು ಹಾಕುವವನಿಗೆ ಕೊಡದೆ ಗತ್ಯಂತರವಿಲ್ಲ! ಹಾಗೆಯೇ ಭ್ರಷ್ಟನಲ್ಲದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇನೆಂದು ಮತದಾರ ಹೊರಟರೆ ಕಷ್ಟ, ನಿಂತವರೆಲ್ಲರೂ ಭ್ರಷ್ಟರೇ ಆಗಿರುವಾಗ ಅವನೇನು ಮಾಡಬೇಕು! ಅವರಲ್ಲಿ ಕಡಿಮೆ ಭ್ರಷ್ಟನಾರು ಎಂಬುದನ್ನು ನಿರ್ಧರಿಸಿ ಅಂಥವನಿಗೆ ಮತ ಹಾಕದೆ ಬೇರೆ ವಿಧಿಯಿಲ್ಲ.
ನಮ್ಮ ಜನರ ಮನೋಭಾವವೇ ವಿಚಿತ್ರವಾಗಿದೆ. ಭ್ರಷ್ಟಾಚಾರ ಮುಕ್ತವಾದ ವ್ಯವಸ್ಥೆಯನ್ನು ಎಲ್ಲರೂ ಬಯಸುತ್ತಾರೆ. ಆದರೆ ಚುನಾವಣೆಯಲ್ಲಿ ಮಾತ್ರ ಹಣವನ್ನು ಚೆಲ್ಲದಿದ್ದರೆ ಹೇಗೆ ಗೆಲ್ಲುತ್ತೀರಿ ಎಂದು ಅಭ್ಯರ್ಥಿಗಳನ್ನು ಕೇಳುತ್ತಾರೆ. ಅಪಾರ ಹಣವನ್ನು ಖರ್ಚುಮಾಡಬೇಕೆಂದು ನಿರೀಕ್ಷೆ ಮಾಡುತ್ತಾರೆ. ಅಭ್ಯರ್ಥಿಯಾದರೂ ಏನು ಮಾಡಬೇಕು? ಭ್ರಷ್ಟತನದಿಂದ ಗಳಿಸಿದ ಹಣವನ್ನು ನೀರಿನಂತೆ ವೆಚ್ಚ ಮಾಡುತ್ತಾನೆ. ಕೆರೆಯ ನೀರನು ಕೆರೆಗೆ ಚೆಲ್ಲಿದಂತೆ! ಗೆದ್ದ ನಂತರ ಅವನು ಮಾಡುವುದಾದರೂ ಏನು? ಐದು ವರ್ಷಗಳ ನಂತರ ಮತ್ತೆ ಬರುವ ಚುನಾವಣೆ ವೆಚ್ಚಕ್ಕೆ ವಸೂಲಿಬಾಜಿ. ಈ ವಿಷ ವರ್ತುಲದಿಂದ ಹೊರಬಂದಾಗ ಮಾತ್ರ ಭ್ರಷ್ಟಾಚಾರಮುಕ್ತ ರಾಷ್ಟ್ರವನ್ನು ಕಾಣಲು ಸಾಧ್ಯವಾದೀತು! ಅಂತಹ ಪ್ರಬುದ್ಧ ಮತದಾರರು ನೀವಾಗಿರಿ.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 3.4.2014