ಸುಟ್ಟರೂ ಗರಿಗೆದರಿ ಹಾರಿದ ಭಾರತದ ಫೀನಿಕ್ಸ್ ಹಕ್ಕಿ
ಇಲ್ಲಿಗೆ ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ಸುತ್ತೂರು ಮಠದಲ್ಲಿ ಒಂದು ರಾಷ್ಟ್ರೀಯ ಯುವ ಸಮ್ಮೇಳನ ಏರ್ಪಾಡಾಗಿತ್ತು. ವಿಶಾಲವಾದ ಪೆಂಡಾಲು, ಎತ್ತರವಾದ ವೇದಿಕೆ. ಎತ್ತ ನೋಡಿದರೂ ವಿದ್ಯಾರ್ಥಿಗಳು. ಏನಿಲ್ಲವೆಂದರೂ ಹತ್ತಾರು ಸಾವಿರ ಹದಿಹರೆಯದ ವಯಸ್ಸಿನ ವಿದ್ಯಾರ್ಥಿಗಳ ದೊಡ್ಡ ಸಮೂಹವದು. ಸಮ್ಮೇಳನದ ವಿಷಯ: "Unity of Minds.. A Pathway to Harmony of Religions". ಅಂದಿನ ವಿಶೇಷ ಅತಿಥಿಗಳು ತಮ್ಮ ಭಾಷಣವನ್ನು ಪೂರೈಸಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ಮಾಡಿಕೊಟ್ಟರು. ವಿದ್ಯಾರ್ಥಿಗಳು ಯಾವ ಭಯವೂ ಇಲ್ಲದೆ ಧೈರ್ಯವಾಗಿ ಎದ್ದು ನಿಂತು ಪ್ರಶ್ನೆಗಳ ಸುರಿಮಳೆಗರೆದರು. ಅವರ ಪ್ರತಿಯೊಂದು ಪ್ರಶ್ನೆಗೂ ಅತಿಥಿಗಳು ತಮ್ಮ ಸ್ಥಾನಮಾನದ ಹಮ್ಮುಬಿಮ್ಮುಗಳಿಲ್ಲದೆ ಸಮಾಧಾನಚಿತ್ತರಾಗಿ ಉತ್ತರಿಸಿದರು. ಅತಿಥಿಗಳು ಮತ್ತು ವಿದ್ಯಾರ್ಥಿಗಳ ಮಧ್ಯೆ ನಡೆದ ಸುಮಾರು 15-20 ನಿಮಿಷಗಳ ಆ ಪ್ರಶ್ನೋತ್ತರ ಕಾರ್ಯಕ್ರಮ ಇಡೀ ಸಮ್ಮೇಳನವನ್ನು ಒಂದು ಪ್ರೌಢ ತರಗತಿಯನ್ನಾಗಿಸಿತ್ತು. ಅತಿಥಿಗಳು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕರಂತೆ ಕಂಗೊಳಿಸಿದರು. ಅಧಿಕಾರದಿಂದ ನಿವೃತ್ತರಾದ ಮೇಲೆ ಏನು ಮಾಡಬಯಸುತ್ತೀರೆಂದು ಕೇಳಿದ ಪ್ರಶ್ನೆಗೆ ಅವರು ಕೊಟ್ಟ ಉತ್ತರವೂ ಅದೇ ಆಗಿತ್ತು. ನಿವೃತ್ತನಾದ ಮೇಲೆ ಅಧ್ಯಾಪಕನಾಗಬಯಸುತ್ತೇನೆಂದು ಉತ್ತರಿಸಿದ ಆ ಅತಿಥಿಗಳು ಮತ್ತಾರೂ ಅಲ್ಲ, ಭಾರತದ ಅಚ್ಚುಮೆಚ್ಚಿನ ರಾಷ್ಟ್ರಪತಿಗಳಾಗಿದ್ದ ಹೆಸರಾಂತ ವಿಜ್ಞಾನಿ ಭಾರತ ರತ್ನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು. 77 ವರ್ಷಗಳ ಹಿಂದೆ ಅವರು ಹುಟ್ಟಿದ ದಿನ ಇದೇ ಅಕ್ಟೋಬರ್ 15 ರಂದು.
ಪ್ರಶ್ನೋತ್ತರ ಮುಗಿಸಿಕೊಂಡು ವೇದಿಕೆಯ ಮೇಲೆ ಬಂದು ಕುಳಿತ ಕಲಾಂ ಅವರು ಅಕ್ಕಪಕ್ಕದಲ್ಲಿ ಆಸೀನರಾಗಿದ್ದ ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಶ್ರೀಗಳು ಮತ್ತು ನಮ್ಮೊಂದಿಗೆ ಲೋಕಾಭಿರಾಮವಾಗಿ ಮಾತನಾಡುವಾಗ "You are surrounded by Swamijis" ಎಂದು ನಾವು ಹೇಳಿದ್ದಕ್ಕೆ "I am also a Brahmacharin" ಎಂದು ಮುಗುಳು ನಗೆ ಬೀರಿದರು. "ಸದುವಿನಯವೇ ಸದಾಶಿವನ ಒಲುಮೆಯಯ್ಯಾ" ಎನ್ನುವ ಬಸವಣ್ಣನವರ ಮಾತಿಗೆ ಜೀವಂತ ಉದಾಹರಣೆಯಾಗಿರುವ ಕಲಾಂ ಸರಳ ಸಜ್ಜನಿಕೆಯ ಸಾಕಾರಮೂರ್ತಿ. ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದರೂ ಏಳುಸುತ್ತಿನ ಕೋಟೆಯಂತಿರುವ ರಾಷ್ಟ್ರಪತಿ ಭವನದಲ್ಲಿ ಬಂಧಿತರಾಗದೆ ಜನಸಾಮಾನ್ಯರ ರಾಷ್ಟ್ರಪತಿ ಎನಿಸಿ, ಯುವಪೀಳಿಗೆಗೆ Missile Man ಆಗಿ ಸ್ಫೂರ್ತಿಯ ಸೆಲೆಯಾದ ಅವರು "ಅಧಿಕಾರದಿಂದ ದೊಡ್ಡವರಾಗದೆ ಹೃದಯಶ್ರೀಮಂತಿಕೆಯಿಂದ ದೊಡ್ಡವರಾಗಿದ್ದರು". ಹೀಗಾಗಿ ಅವರು ಈಗ ಅಧಿಕಾರದಲ್ಲಿಲ್ಲದಿದ್ದರೂ ಸಾರ್ವಜನಿಕ ಜೀವನದಲ್ಲಿ ಎಲ್ಲರ ಪ್ರೀತಿಗೂ ಪಾತ್ರರಾದ ಮುತ್ಸದ್ದಿಗಳಾಗಿದ್ದಾರೆ. ಮತ್ತೊಮ್ಮೆ ಅವರ ಭೇಟಿ ಆದಿಚುಂಚನಗಿರಿ ಮಠದ ಕಾಲಭೈರವೇಶ್ವರ ಗುಡಿಯಲ್ಲಿ ಆದಾಗ ಜೊತೆಗೂಡಿ ಮಾತನಾಡುತ್ತಾ ನಡೆಯುವ ವೇಳೆ ಕಲಾಂರವರು ರಂಜಾನ್ ಹಬ್ಬದ ನಿಮಿತ್ತ ಉಪವಾಸವ್ರತದಲ್ಲಿದ್ದರು. ಆದರೂ ತಮ್ಮ ಹಸಿವಿನ ಕಡೆಗೆ ಗಮನ ಕೊಡದೆ ತಮ್ಮನ್ನು ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಬಂದಿದ್ದ ಪೈಲೆಟ್ ಮತ್ತಿತರ ಸಿಬ್ಬಂದಿಯ ಹಸಿವಿನ ಬಗ್ಗೆ ವಿಚಾರಿಸಿಕೊಂಡದ್ದನ್ನು ಸ್ವತಃ ಕಿವಿಯಾರೆ ಕೇಳಿದಾಗ ಮಾನವೀಯತೆಯನ್ನು ಮೈಗೂಡಿಸಿಕೊಂಡ ಮಹಂತನಾಗಿ ಅವರು ನಮಗೆ ಕಾಣಿಸಿದರು. "Some are born great, some achieve greatness and greatness is thrust upon some" (ಕೆಲವರು ಹುಟ್ಟಿನಿಂದ ದೊಡ್ಡವರಾಗಿರುತ್ತಾರೆ, ಇನ್ನು ಕೆಲವರು ಜೀವನದಲ್ಲಿ ಸ್ವತಃ ಏನನ್ನಾದರೂ ಸಾಧಿಸಿ ದೊಡ್ಡವರಾಗುತ್ತಾರೆ ಮತ್ತೆ ಕೆಲವರು ಸ್ಥಾನ ಬಲದಿಂದ ದೊಡ್ಡವರಂತೆ ಕಾಣಿಸಿಕೊಳ್ಳುತ್ತಾರೆ!) ಎಂಬ ಮಾತೊಂದಿದೆ. ಅಬ್ದುಲ್ ಕಲಾಂ ಅವರು ನಿರ್ವಿವಾದವಾಗಿ ಎರಡನೆಯ ವರ್ಗಕ್ಕೆ ಸೇರಿದವರು; ಹುಟ್ಟುತ್ತಲೇ ಬಾಯಲ್ಲಿ ಬಂಗಾರದ ಚಮಚವನ್ನಿರಿಸಿಕೊಂಡು ಹುಟ್ಟಿದ ವರ್ಗಕ್ಕೆ ಸೇರಿದವರಲ್ಲ.
ಕಲಾಂ ಅವರು ಹುಟ್ಟಿದ್ದು 1931ರಲ್ಲಿ; ನೆರೆಯ ರಾಜ್ಯವಾದ ತಮಿಳುನಾಡಿನಲ್ಲಿ ಹಿಂದೂಗಳ ಪ್ರಸಿದ್ಧ ತೀರ್ಥಕ್ಷೇತ್ರವಾದ ರಾಮೇಶ್ವರದ ಒಂದು ಮಧ್ಯಮ ವರ್ಗದ ಮುಸ್ಲಿಂ ಕುಟುಂಬದಲ್ಲಿ. ತಂದೆ ಜೈನುಲ್ಲಾಬ್ದೀನ್ ತಾಯಿ ಆಶಿಯಮ್ಮ ಅಷ್ಟೇನೂ ಧನಿಕರಲ್ಲ ಮತ್ತು ವಿದ್ಯಾವಂತರೂ ಆಗಿರಲಿಲ್ಲ. ದೋಣಿ ತಯಾರು ಮಾಡಿ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಸಾಧಾರಣ ವೃತ್ತಿಯಲ್ಲಿ ನಿರತರಾಗಿದ್ದ ಅವರ ತಂದೆಯ ಬಗ್ಗೆ ನೆರೆಹೊರೆಯವರಿಗೆ ಬಹಳ ಗೌರವ ಭಾವನೆ ಇತ್ತು. ಅವರು ತಮ್ಮ ಮುದ್ದಿನ ಮಗ ವಿದ್ಯಾವಂತನಾಗಿ ಬಾನೆತ್ತರಕ್ಕೆ ಬೆಳೆಯಲಿ ಎಂಬ ಬಲವತ್ತರವಾದ ಬಯಕೆಯನ್ನು ಹೊಂದಿದವರಾಗಿದ್ದರು. ಅದನ್ನು ಸಾಧಿಸಲು ತಂದೆತಾಯಿಗಳಾಗಿ ತಮ್ಮ ಪ್ರೀತಿಯು ಎಂದೂ ಅಡ್ಡಿಬರುವುದಿಲ್ಲವೆಂದೂ ಮತ್ತು ತಮ್ಮ ಕಷ್ಟಸುಖಗಳಿಗೆ ಆಸರೆಯಾಗಬೇಕೆಂಬ ಸ್ವಾರ್ಥದಿಂದ ಮುಂದೆ ಓದಲು ಹೋಗದಂತೆ ತಡೆಗಟ್ಟುವುದಿಲ್ಲವೆಂದೂ ಬಾಲಕ ಕಲಾಂಗೆ ಸ್ಪಷ್ಟಪಡಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಪರಿಮಿತ ಪ್ರೋತ್ಸಾಹ ನೀಡಿದರು. ಮದ್ರಾಸಿನ ಆಗಿನ ಪ್ರತಿಷ್ಠಿತ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಕಟ್ಟಬೇಕಾಗಿದ್ದ ಒಂದು ಸಾವಿರ ರೂ. ಗಳನ್ನು ಅವರ ಸಹೋದರಿ ಜೊಹರಾ ತನ್ನ ಬಂಗಾರದ ಸರ ಮತ್ತು ಒಡವೆಗಳನ್ನು ಒತ್ತೆಯಿಟ್ಟು ಒದಗಿಸಿದ್ದರು. ಆ ಹಣವನ್ನು ಹೇಗಾದರೂ ಮಾಡಿ ಓದುವಾಗಲೇ ದುಡಿದು ತೀರಿಸಬೇಕೆಂಬ ಭಾವನಾತ್ಮಕ ತುಡಿತ ಕಲಾಂ ಅವರದಾಗಿತ್ತು. ಚಿಕ್ಕಂದಿನಲ್ಲಿ ತಂದೆಯಿಂದ ಶಿಸ್ತು ಮತ್ತು ಪ್ರಾಮಾಣಿಕತೆಯನ್ನೂ, ತಾಯಿಯಿಂದ ಶ್ರದ್ಧೆ ಮತ್ತು ಕರುಣೆಯನ್ನೂ ಮೈಗೂಡಿಸಿಕೊಂಡಿದ್ದಾಗಿ ಸ್ವತಃ ಕಲಾಂ ಬರೆಯುತ್ತಾರೆ. ಈ ಜಗತ್ತಿನಲ್ಲಿ ಹುಟ್ಟುವ ಪ್ರತಿಯೊಂದು ಮಗುವೂ ಹುಟ್ಟುತ್ತಲೇ ಕೆಲವೊಂದು ಗುಣವಿಶೇಷಗಳನ್ನು ಹೊಂದಿದ್ದು, ಒಂದು ವಿಶಿಷ್ಟ ಸಾಮಾಜಿಕ-ಆರ್ಥಿಕ ಮತ್ತು ಭಾವನಾತ್ಮಕ ಪರಿಸರದಲ್ಲಿ ಬೆಳೆದು, ಇನ್ನು ಕೆಲವು ವಿಚಾರಗಳಲ್ಲಿ ಹಿರಿಯರಿಂದ ಪ್ರಭಾವಿತಗೊಂಡು ಅದರ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹೇಳುತ್ತಾರೆ. Wings of Fire (ಬೆಂಕಿಯ ರೆಕ್ಕೆಗಳು) ಎಂಬ ಅವರ ಆತ್ಮಕಥನದ ಆರಂಭದ ಪುಟಗಳಲ್ಲಿ ಬಾಲ್ಯದ ನೆನಪಿನ ಬುತ್ತಿಯನ್ನು ಬಿಚ್ಚಿ ಹಂಚಿಕೊಂಡಿರುವ ಅವರ ಬಾಲ್ಯಜೀವನದ ಕೆಲವೊಂದು ಘಟನೆಗಳು ಎಂತಹ ಕಲ್ಲುಹೃದಯವನ್ನೂ ಕರಗಿಸಬಲ್ಲವು.
1939ರಲ್ಲಿ ಎರಡನೇ ಮಹಾಯುದ್ಧ ಆರಂಭವಾದಾಗ ಕಲಾಂ 8 ವರ್ಷದ ಹುಡುಗ. ಅದೇಕೋ ಏನೋ ಮಾರುಕಟ್ಟೆಯಲ್ಲಿ ಹುಣಿಸೇಹಣ್ಣಿನ ಬೀಜಗಳಿಗೆ ಬಹಳ ಬೇಡಿಕೆ ಬಂದಿತ್ತು. ಬಾಲಕ ಕಲಾಂ ನಿತ್ಯವೂ ಬೆಳಗಿನಿಂದ ಸಂಜೆಯವರೆಗೆ ಹುಣಿಸೇಬೀಜಗಳನ್ನು ಆಯ್ದು ಅಂಗಡಿಗೆ ಮಾರಾಟ ಮಾಡಿದಾಗ ಸಿಕ್ಕುತ್ತಿದ್ದ ಹಣ ಕೇವಲ ಒಂದು ಆಣೆ. ಅದರ ಜೊತೆಗೆ ದಿನಪತ್ರಿಕೆಗಳನ್ನು ವಿತರಣೆ ಮಾಡಿ ಗಳಿಸುತ್ತಿದ್ದ ಹಣ ಎಷ್ಟೇ ಅತ್ಯಲ್ಪವಾಗಿದ್ದರೂ ಸ್ವಂತ ದುಡಿಮೆಯಿಂದ ಬಂದ ಹಣದ ಬೆಲೆ ಏನೆಂಬುದರ ಅರಿವು ಎಳೆಯ ವಯಸ್ಸಿನಲ್ಲಿಯೇ ಅವರ ಮನಸ್ಸಿನಲ್ಲಿ ಮೂಡಿತ್ತು. ರಾಮೇಶ್ವರದಲ್ಲಿರುವ ಶಿವನ ಗುಡಿ ಅವರ ಮನೆಯಿಂದ ಕಾಲ್ನಡಿಗೆಯಲ್ಲಿ ಕೇವಲ ಹತ್ತೇ ನಿಮಿಷದ ದಾರಿ. ಸುತ್ತಲೂ ಅಧಿಕ ಸಂಖ್ಯೆಯಲ್ಲಿ ಮುಸ್ಲಿಂ ಜನಾಂಗದವರೇ ವಾಸವಾಗಿದ್ದರೂ ಅಕ್ಕಪಕ್ಕದಲ್ಲಿ ಹಿಂದೂಗಳೂ ಸಹ ವಾಸವಾಗಿದ್ದು ಪರಸ್ಪರ ಅನ್ಯೋನ್ಯವಾಗಿದ್ದರು. ರಾಮೇಶ್ವರ ಗುಡಿಯ ಪ್ರಧಾನ ಅರ್ಚಕರಾಗಿದ್ದ ಪಕ್ಷಿ ಲಕ್ಷ್ಮಣಶಾಸ್ತ್ರಿ ಮತ್ತು ಕಲಾಂ ಅವರ ತಂದೆ ಜೈನುಲ್ಲಾಬ್ದೀನ್ ಇಬ್ಬರೂ ಆತ್ಮೀಯ ಸ್ನೇಹಿತರು. ಇಬ್ಬರೂ ವಿಭಿನ್ನ ಸಾಂಪ್ರದಾಯಿಕ ಉಡುಗೆತೊಡಿಗೆಗಳನ್ನು ಧರಿಸಿದ್ದರೂ ಮತೀಯ ಚೌಕಟ್ಟನ್ನು ಮೀರಿ ಆಧ್ಯಾತ್ಮಿಕ ವಿಚಾರಗಳನ್ನು ಕುರಿತು ಅವರು ಮಾಡುತ್ತಿದ್ದ ಸಂಭಾಷಣೆ ಬಾಲಕ ಕಲಾಂನ ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರಿತ್ತು. ಹತ್ತಿರದಲ್ಲಿಯೇ ಇದ್ದ ಮಸೀದಿಗೆ ತಂದೆ ನಿತ್ಯವೂ ಸಂಜೆ ನಮಾಜು ಮಾಡಲು ಮಗನನ್ನು ಕರೆದುಕೊಂಡು ಹೋಗುತ್ತಿದ್ದರು. ಬಾಲಕ ಕಲಾಂ ಮಸೀದಿಗೆ ಹೋದಂತೆ ರಾಮೇಶ್ವರ ಗುಡಿಗೂ ತನ್ನ ಸಂಬಂಧಿ ಅಹಮದ್ ಜಲಾಲುದ್ದೀನ್ ಜೊತೆಗೆ ಹೋಗಿ ಎಲ್ಲ ಭಕ್ತರಂತೆ ಗುಡಿಯ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದರು.ಗುಡಿಯಲ್ಲಿ ಮಾಡುವ ಪ್ರಾರ್ಥನೆ, ಮಸೀದಿಯಲ್ಲಿ ಮಾಡುವ ನಮಾಜು ಎರಡೂ ಒಬ್ಬನೇ ದೇವರಿಗೆ ಸಲ್ಲುತ್ತದೆಯೆಂಬ ಬಲವಾದ ನಂಬಿಕೆ ಎಳೆಯ ಹೃದಯದಲ್ಲಿಯೇ ಬೇರೂರಿತ್ತು.
ಕಲಾಂ ರಾಮೇಶ್ವರದ ಪ್ರಾಥಮಿಕ ಶಾಲೆಯಲ್ಲಿ ಐದನೆಯ ತರಗತಿಯಲ್ಲಿ ಓದುತ್ತಿದ್ದಾಗ ಅವರಿಗೆ ಆತ್ಮೀಯರಾಗಿದ್ದ ಬಾಲ್ಯಸ್ನೇಹಿತರೆಂದರೆ ರಾಮನಾಥ ಶಾಸ್ತ್ರಿ, ಅರವಿಂದನ್ ಮತ್ತು ಶಿವಪ್ರಕಾಶನ್. ಈ ಮೂವರೂ ಹಿಂದೂ ಬ್ರಾಹ್ಮಣ ಸಂಪ್ರದಾಯದವರಾಗಿದ್ದು ಕಲಾಂ ಮುಸ್ಲಿಮರಾಗಿದ್ದರೂ ಎಳೆ ವಯಸ್ಸಿನವರಾದ ಆ ಬಾಲಕರಲ್ಲಿ ಯಾವ ಭೇದ ಭಾವವೂ ಇರಲಿಲ್ಲ. ತರಗತಿಯಲ್ಲಿ ಕಲಾಂ ಯಾವಾಗಲೂ ಮುಂದಿನ ಬೆಂಚಿನಲ್ಲಿ ರಾಮನಾಥ ಶಾಸ್ತ್ರಿಯ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದರು. ಬ್ರಾಹ್ಮಣ ಹುಡುಗನಾದ ರಾಮನಾಥ ಶಾಸ್ತ್ರಿಯ ಎದೆಯ ಮೇಲೆ ಜನಿವಾರ, ಮುಸ್ಲಿಂ ಹುಡುಗನಾದ ಕಲಾಂ ತಲೆಯ ಮೇಲೆ ಟೋಪಿ. ಹೊಸದಾಗಿ ಬಂದ ಸಂಪ್ರದಾಯಸ್ಥ ಯುವ ಅಧ್ಯಾಪಕರೊಬ್ಬರು ತರಗತಿಯನ್ನು ಪ್ರವೇಶಿಸುತ್ತಿದ್ದಂತೆಯೇ ಮೊದಲನೆಯ ಬೆಂಚಿನಲ್ಲಿ ಬ್ರಾಹ್ಮಣ ಹುಡುಗನ ಪಕ್ಕದಲ್ಲಿ ಮುಸ್ಲಿಂ ಹುಡುಗ ಕುಳಿತಿರುವುದನ್ನು ನೋಡಿ ಅಸಹನೆಯಿಂದ ಕೆಂಡಾಮಂಡಲವಾದರು. ಕೂಡಲೇ ಹಿಂದಿನ ಬೆಂಚಿಗೆ ಹೋಗಿ ಕುಳಿತುಕೊಳ್ಳಬೇಕೆಂದು ಕಿಡಿಕಾರಿದರು. ಬಾಲಕ ಕಲಾಂ ಮರುಮಾತನಾಡದೆ ದುಃಖಿತನಾಗಿ ಮೇಲೆದ್ದು ಹಿಂದಿನ ಬೆಂಚಿಗೆ ಹೋಗುವಾಗ ಗೆಳೆಯ ರಾಮನಾಥ ಶಾಸ್ತ್ರಿಯ ಕಣ್ಣಲ್ಲಿ ನೀರು! ತನಗಾಗಿ ಕಣ್ಣೀರು ಸುರಿಸುತ್ತಿದ್ದ ಆ ಗೆಳೆಯನ ಮುಖವನ್ನು ನೋಡಿ ಕಲಾಂರವರ ಹೃದಯ ಆರ್ದ್ರಗೊಂಡಿತ್ತು!
ಶಾಲೆಯಿಂದ ಸಂಜೆ ಮನೆಗೆ ಹಿಂದಿರುಗಿದ ಮೇಲೆ ಇಬ್ಬರೂ ನಡೆದ ಘಟನೆಯನ್ನು ಅವರವರ ತಂದೆಗೆ ವಿವರಿಸಿದರು. ರಾಮನಾಥ ಶಾಸ್ತ್ರಿಯ ತಂದೆ ಬೇರೆ ಯಾರೂ ಅಲ್ಲ - ರಾಮೇಶ್ವರದ ಪ್ರಧಾನ ಅರ್ಚಕರಾಗಿದ್ದ ಲಕ್ಷ್ಮಣ ಶಾಸ್ತ್ರಿಯವರು. ಅವರು ಕೂಡಲೇ ಆ ಅಧ್ಯಾಪಕನನ್ನು ತಮ್ಮ ಮನೆಗೆ ಕರೆಸಿದರು. ಇಬ್ಬರೂ ಮಕ್ಕಳ ಎದುರಿನಲ್ಲಿ ವಿಚಾರಣೆ ನಡೆಸಿದರು. ಈ ರೀತಿ ಸಾಮಾಜಿಕ ಅಸಮಾನತೆ ಮತ್ತು ಮತೀಯ ದುರ್ಭಾವನೆಗಳ ವಿಷಬೀಜವನ್ನು ಎಳೆಯ ಮಕ್ಕಳ ಮನಸ್ಸಿನಲ್ಲಿ ಬಿತ್ತಬಾರದೆಂದು ತರಾಟೆಗೆ ತೆಗೆದುಕೊಂಡರು. ಹೀಗೆ ಮಾಡಿದ ತಪ್ಪಿಗೆ ಕ್ಷಮಾಪಣೆ ಕೇಳಿರಿ ಇಲ್ಲವೇ ರಾಜಿನಾಮೆ ಕೊಟ್ಟು ಹೊರಟುಹೋಗಿ ಎಂದು ಗದರಿಸಿದರು! ಯುವ ಅಧ್ಯಾಪಕ ವಿಷಾದ ವ್ಯಕ್ತಪಡಿಸಿದ. ಅಂತಹ ತಪ್ಪನ್ನು ಮುಂದೆಂದೂ ಮಾಡುವುದಿಲ್ಲವೆಂದು ಹೇಳಿ ಪರಿವರ್ತನೆಗೊಂಡ.
ಕಲಾಂ ಅವರ ಬಾಲ್ಯದಲ್ಲಿ ನಡೆದ ಈ ಕಹಿ ಘಟನೆ ರಾಷ್ಟ್ರಪತಿಯಾದರೂ ಮರೆಯಲಾಗದಷ್ಟು ಮನಸ್ಸಿನ ಮೇಲೆ ಉಂಟಾದ ಬಲವಾದ ಗಾಯ! ಬದುಕಿನ ಕೆಳಸ್ತರದಿಂದ ಬಂದು ಸಾಮಾಜಿಕ ಅಸಮಾನತೆಯ ಬೆಂಕಿಯಲ್ಲಿ ಜೀವನೋತ್ಸಾಹದ ರೆಕ್ಕೆ ಸುಟ್ಟರೂ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಗರಿಗೆದರಿ ಗಗನದಾಚೆಗೆ ಹಾರಿ ಭಾರತ ರತ್ನ ಎನಿಸಿಕೊಂಡ ಡಾ|| ಅಬ್ದುಲ್ ಕಲಾಂರವರ ಜೀವನ ಅತ್ಯಂತ ರೋಮಾಂಚನಕಾರಿ. ಎಳೆಯ ವಯಸ್ಸಿನಲ್ಲಿ ನಡೆದ ಈ ಅವಮಾನಕರ ಪ್ರಸಂಗ ಕಲಾಂ ಅವರ ಮನಸ್ಸಿನಲ್ಲಿ ಪ್ರತೀಕಾರ ಭಾವನೆಯನ್ನು ಬೆಳೆಸದೆ ಭಾರತವನ್ನು ವೈಜ್ಞಾನಿಕ ಪ್ರಗತಿಪಥದಲ್ಲಿ ಕೊಂಡೊಯ್ಯಲು ಮಾಡಿದ ಅವರ ಸಾಧನೆ ನಿಜಕ್ಕೂ ಅವರ ಸಾತ್ವಿಕತೆ ಮತ್ತು ಅವರು ತಂದೆತಾಯಿಗಳಿಂದ ಪಡೆದ ಉತ್ತಮ ಸಂಸ್ಕಾರದ ಪ್ರತೀಕವಲ್ಲದೆ ಬೇರೆಯಲ್ಲ!
ಕಲಾಂ ಅವರ ಬಾಲ್ಯಜೀವನದ ಈ ಘಟನೆ ನಮಗೆ ಛಾಂದೋಗ್ಯ ಉಪನಿಷತ್ತಿನ ನಾಲ್ಕನೆಯ ಅಧ್ಯಾಯದ ನಾಲ್ಕನೆಯ ಖಂಡದಲ್ಲಿ ಬರುವ ಒಂದು ಅಪರೂಪದ ಪ್ರಸಂಗವನ್ನು ನೆನಪಿಗೆ ತಂದುಕೊಡುತ್ತದೆ. ಸತ್ಯಕಾಮ ಎಂಬ ಹೆಸರಿನ ಒಬ್ಬ ಹುಡುಗನಿದ್ದ. ಅವನಿಗೆ ಓದಬೇಕೆಂಬ ಆಸೆ ಇತ್ತು. ಅದಕ್ಕಾಗಿ ಗೌತಮ ಎಂಬ ಗುರುವಿನ ಹತ್ತಿರ ಹೋಗುತ್ತಾನೆ. ಆ ಗುರುವು ನಿನ್ನ ತಂದೆ ಯಾರು, ನಿನ್ನ ಗೋತ್ರ ಯಾವುದೆಂದು ಕೇಳುತ್ತಾನೆ. ತಾಯಿಯ ಹೆಸರನ್ನು ಹೇಳಿ ತಂದೆ ಇಲ್ಲ ಎಂದು ಹೇಳುತ್ತಾನೆ. ಹಾಗಾದರೆ ವಾಪಾಸ್ಸು ಹೋಗಿ ನಿನ್ನ ತಾಯಿಯನ್ನು ಕೇಳಿ ತಿಳಿದುಕೊಂಡು ಬಾ ಎಂದು ಗೌತಮ ಹೇಳುತ್ತಾನೆ. ಅದರಂತೆ ಸತ್ಯಕಾಮ ತನ್ನ ತಾಯಿಯ ಹತ್ತಿರ ಬಂದು ತನ್ನ ತಂದೆ ಯಾರು? ತನ್ನ ಗೋತ್ರ ಯಾವುದೆಂದು ಕೇಳುತ್ತಾನೆ. ತಾಯಿ ಕಣ್ತುಂಬ ನೀರು ತಂದುಕೊಳ್ಳುತ್ತಾಳೆ. ಯಾವ ವಿಷಯವನ್ನು ಇದುವರೆವಿಗೂ ಮಗನಿಂದ ಮುಚ್ಚಿಟ್ಟಿದ್ದಳೋ ಅದನ್ನು ಹೇಳಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತದೆ. ನಡೆದ ಸಂಗತಿಯನ್ನು ಹೇಳುತ್ತಾಳೆ. ನಿನ್ನ ತಂದೆ ಯಾರೆಂದು ನನಗೂ ಗೊತ್ತಿಲ್ಲ. ನಾನು ನನ್ನ ಯೌವನದಲ್ಲಿ ಅವರಿವರ ಮನೆಗಳಲ್ಲಿ ಪರಿಚಾರಿಕೆಯಾಗಿ ಕೆಲಸಮಾಡುತ್ತಿದ್ದೆ. ಆಗ ನೀನು ಹುಟ್ಟಿದೆ. ಇದರಿಂದ ವಿಚಲಿತನಾಗದ ಸತ್ಯಕಾಮ ಗುರು ಗೌತಮರ ಹತ್ತಿರ ಹೋಗಿ ನಿಜ ಸಂಗತಿಯನ್ನು ಮರೆಮಾಚದೆ ತಾಯಿ ಹೇಳಿದಂತೆ ನನ್ನ ತಂದೆ ಯಾರೆಂದು ನನ್ನ ತಾಯಿಗೂ ಗೊತ್ತಿಲ್ಲವೆಂದು ಹೇಳುತ್ತಾನೆ. ನನ್ನ ಹೆಸರು ಸತ್ಯಕಾಮ, ನನ್ನ ತಾಯಿಯ ಹೆಸರು ಜಬಾಲಾ. ಆದ್ದರಿಂದ ನನ್ನ ಹೆಸರು ಸತ್ಯಕಾಮ ಜಾಬಾಲಾ ಎಂದು ಹೇಳುತ್ತಾನೆ. ಅದಕ್ಕೆ ಗುರು ಗೌತಮ ಸಂತೋಷಪಟ್ಟು ಹೇಳುತ್ತಾನೆ: ಮಗು, ನೀನೇ ನಿಜವಾದ ಬ್ರಾಹ್ಮಣ! ನಿನ್ನ ತಂದೆ ಯಾರೆಂದು ತಿಳಿಯದೆ ಅವಮಾನವಾಗುತ್ತದೆಯೆಂದು ಮರ್ಯಾದೆಗೆ ಅಂಜಿ ನೀನು ಸುಳ್ಳು ಹೇಳಲಿಲ್ಲ. ಸತ್ಯ ಸಂಗತಿಯನ್ನು ಮುಚ್ಚಿಡದೆ ಎಲ್ಲವನ್ನೂ ಹೇಳಿದ್ದೀಯಾ ದರ್ಭೆಯನ್ನು ತೆಗೆದುಕೊಂಡು ಬಾ. ನಾನು ನಿನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ನಿನಗೆ ಪಾಠ ಹೇಳುತ್ತೇನೆ ಎನ್ನುತ್ತಾನೆ ಗುರು ಗೌತಮ (ನೈತದಬ್ರಾಹ್ಮಣೋ ವಿವಕ್ತುಂ ಅರ್ಹತಿ. ಸಮಿಧಂ ಸೌಮ್ಯ ಆಹರ. ಉಪ ತ್ವಾ ನೇಷ್ಯೇ. ನ ಸತ್ಯಾಧ್ ಅಗಾ ಇತಿ). ಮದುವೆಯಾಗದ ಮಹಿಳೆಯ ಮಗನ ಸಾಮಾಜಿಕ ಸ್ಥಾನಮಾನ ಈಗಲೂ ಏನೆಂಬುದನ್ನು ಬೇರೆ ಹೇಳಬೇಕಾಗಿಲ್ಲ. ನೀನು ಮುಸ್ಲಿಂ ಜಾತಿಯವನು ಬ್ರಾಹ್ಮಣ ಹುಡುಗರ ಪಕ್ಕದಲ್ಲಿ ಕುಳಿತುಕೊಳ್ಳಬೇಡ. ಹಿಂದಿನ ಬೆಂಚಿಗೆ ಹೋಗು ಎಂದು ಓಡಿಸಿದ ಆಧುನಿಕ ಕಾಲದ ಮೇಷ್ಟು ಎತ್ತ! ನೀನು ಸುಳ್ಳನ್ನು ಹೇಳದೆ ಸತ್ಯವನ್ನೇ ಹೇಳಿದ್ದೀಯ. ಆದ್ದರಿಂದ ನೀನೇ ನಿಜವಾದ ಬ್ರಾಹ್ಮಣ, ಬಾ ಮಗು ನಿನಗೆ ಪಾಠ ಹೇಳುತ್ತೇನೆ ಎಂದು ಸಂತೋಷದಿಂದ ಶಿಷ್ಯನನ್ನಾಗಿ ಸ್ವೀಕರಿಸಿದ ಪ್ರಾಚೀನ ಕಾಲದ ವೇದೋಪನಿಷತ್ತುಗಳ ಗುರು ಗೌತಮನೆತ್ತ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 15.10.2008.