ಜನಪ್ರತಿನಿಧಿಗಳ ಪಾಳೆಗಾರಿಕೆ

  •  
  •  
  •  
  •  
  •    Views  

ದೇವರು ಮನುಷ್ಯನಿಗೆ ಕೊಟ್ಟಿರುವ ವರಗಳಲ್ಲಿ ನೆನಪು ಪರಮೋತ್ತಮವಾದುದು. ಯುಗಯುಗಗಳ ಜೀವನವನ್ನೂ, ಸನ್ನಿವೇಶಗಳನ್ನೂ, ಪಾತ್ರಗಳನ್ನೂ ನೆನಪು ಕ್ಷಣಮಾತ್ರದಲ್ಲಿ ಕಣ್ಣೆದುರಿಗೆ ತಂದು ನಿಲ್ಲಿಸುತ್ತದೆ. ಕಾಲವಶರಾದ ಪರಮಾಪ್ತರೊಂದಿಗೆ ಮತ್ತೆ ಮತ್ತೆ ಚಲಿಸುವಂತೆ, ನುಡಿಯುವಂತೆ ಮಾಡುತ್ತದೆ. ಜೀವನಯಾತ್ರೆಯ ಅಖಂಡಾನುಭವವನ್ನು ಹೊಸದಾಗಿ ಮಾಡಿಕೊಡುತ್ತದೆ. ನೆನಪಿಲ್ಲದವನು ಮನುಷ್ಯನೇ ಅಲ್ಲ; ಸ್ಮರಣಶಕ್ತಿ ಚೆನ್ನಾಗಿ ಉಳ್ಳವನೇ ಪುಣ್ಯವಂತ. ಅವನನ್ನು ಮೀರಿಸಿದ ಧೀರ ಇನ್ನೊಬ್ಬನಿಲ್ಲ. ನೆನಪುಳ್ಳವನೇ ಸುಖಿ. ನೆನಪೊಂದಿದ್ದರೆ ಅವನಿಗೆ ಹಿಂದಿನ, ಇಂದಿನ, ಮುಂದಿನ ಮಾನವಕುಲದ ನಿಕಟಬಾಂಧವ್ಯವುಂಟು. ಅದರಿಂದವನು ಸಂತೋಷವಾಗಿ ಜೀವನ ನಡೆಸಲು ಸಾಧ್ಯ. ನೆನಪು ಮೇರೆ ಮೀರಿದುದು; ಶಾಶ್ವತವಾದುದು. ಪ್ರತಿಯೊಬ್ಬರೂ ಇತರರ ನೆನಪುಗಳ ಮೇಲೆ ಅಚ್ಚಳಿಯದ ಮುದ್ರೆಯನ್ನೊತ್ತಬಹುದು. ನೆನಪು ಪ್ರೀತಿಯ, ಪ್ರೇಮದ ಮತ್ತೊಂದು ಹೆಸರೆಂದು ಹೇಳಿದರೂ ಒಪ್ಪುತ್ತದೆ. ಎಂದಿನ ತಾಯಿಯೋ, ಎಂದಿನ ಅಜ್ಜಿಯೋ, ಎಂದಿನ ಅಣ್ಣನೋ, ಎಂದಿನ ಗೆಳೆಯನೋ, ಎಂದಿನ ಗುರುವೋ ನೆನಪಾದರೆ ಸಾಕು! ಅದೆಂತಹ ದಿವ್ಯ ಸನ್ನಿಧಿ! ಅದೆಂತಹ ಆನಂದ ಹರ್ಷ!" ಹೀಗೆ ನೆನಪುಗಳನ್ನು ಕುರಿತು ಭಾವಪರವಶರಾಗಿ ಬರೆದವರು ತಿ.ತಾ.ಶರ್ಮರು. ಈ ಮಾತುಗಳನ್ನು ಅವರು ಬರೆದದ್ದು 50 ವರ್ಷಗಳ ಹಿಂದೆ; ಕಳೆದ ವಾರದ ಅಂಕಣದಲ್ಲಿ ಪ್ರಸ್ತಾಪಿಸಿದ ನವರತ್ನರಾಮರಾವ್ ಅವರ “ಕೆಲವು ನೆನಪುಗಳು” ಎಂಬ ಗ್ರಂಥವನ್ನು ಕುರಿತು. ಅವರ ಈ ಮಾತುಗಳು ಅಕ್ಷರಶಃ ನಿಜ. ಎಲ್ಲ ಕಾಲಕ್ಕೂ ಅನ್ವಯಿಸುವ ಸಾರ್ವಕಾಲಿಕ ಸತ್ಯ. ಪುಸ್ತಕದ ಕೊನೆಯಲ್ಲಿ “ಮೆಚ್ಚುನುಡಿ” ಎಂಬ ಶೀರ್ಷಿಕೆಯಡಿಯಲ್ಲಿ ಬರುವ ಈ ಅರ್ಥಪೂರ್ಣ ಮಾತುಗಳಿಗೆ ಪ್ರತ್ಯಕ್ಷ ಸಾಕ್ಷಿಯೋ ಎಂಬಂತಿತ್ತು ಲೇಖನ ಪ್ರಕಟವಾದ ದಿನವೇ ನಮಗೆ ಅನಿರೀಕ್ಷಿತವಾಗಿ ಬಂದ ಒಂದು ಭಾವಪೂರ್ಣವಾದ ಇ-ಮೇಲ್. ಅದನ್ನು ಬರೆದವರು ಬೇರೆ ಯಾರೂ ಅಲ್ಲ: ರಾಯರ ಮಗನಾದ ನವರತ್ನ ಲಕ್ಷ್ಮಣ್. ತಮ್ಮ ತಂದೆಯ ಜೀವನಾದರ್ಶಗಳನ್ನು ನೆನೆಸಿಕೊಂಡು ಗದ್ಗದಿತರಾಗಿ ಬರೆದಿರುತ್ತಾರೆ.

“Coming from a person of your stature and learning, I am sure your voice will make a definite impact on the portals of power in the present administration” ಎಂದು ಸಮಕಾಲೀನ ಸಮಾಜದಲ್ಲಿ ಮೌಲ್ಯಾಧಾರಿತ ಆಡಳಿತವನ್ನು ಹಾರೈಸಿ ಬರೆದಿರುತ್ತಾರೆ.

ತಿ.ತಾ.ಶರ್ಮಾ ಅವರು ರಾಯರ ಈ ಪುಸ್ತಕವನ್ನು ಅನೇಕ ಬಾರಿ ಓದಿರುವುದಾಗಿ ಹೇಳಿಕೊಂಡಿದ್ದಾರೆ. “ನಾನು ಮೇಲಿಂದ ಮೇಲೆ ಓದಿ ಆನಂದಪಟ್ಟಿದ್ದೇನೆ. ಓದಿದ ಒಂದೊಂದು ಸಲವೂ ಒಂದೇ ಪ್ರಮಾಣದ ಸುಖವನ್ನು ಅನುಭವಿಸಿದ್ದೇನೆ. ಅದೇನು ಸುಖವೆಂದರೆ ವಿವರಿಸಿ ಹೇಳಲಾರೆ. ಆ ಸುಖ ಕಿವಿ ತಾಕುವುದಲ್ಲ; ನಾಲಿಗೆ ನುಡಿಯುವುದಲ್ಲ, ಹೃದಯ ಸೋಕುವುದು” ಎಂದು ಶರ್ಮ ಮೆಚ್ಚುಗೆ ಸೂಚಿಸಿದ್ದಾರೆ. ರಾಯರ ನೆನಪುಗಳ ಹಲ ಕೆಲವು ಭಾಗಗಳನ್ನು ವಿದ್ಯಾವಂತರಿಗೆ, ಹಳ್ಳಿಗಾಡಿನವರಿಗೆ, ಹೆಂಗಸರಿಗೆ, ಹುಡುಗರಿಗೆ, ಶಾನುಭೋಗರಿಗೆ, ಪಟೇಲರಿಗೆ ಓದಿ ಹೇಳಿರುವುದಾಗಿಯೂ “ನಾನು ಓದಿ ಆನಂದಪಟ್ಟ ಹಾಗೆಯೇ ಅವರೆಲ್ಲರೂ ಕೇಳಿ ಆನಂದಪಟ್ಟಿದ್ದಾರೆ” ಎಂದೂ ಸಂತೋಷ ವ್ಯಕ್ತಪಡಿಸಿದ್ದಾರೆ.

ರಾಯರು ಬರೆದ ಈ ಪುಸ್ತಕ ನಮ್ಮ ಹೃದಯವನ್ನು ತಟ್ಟಲು ಮುಖ್ಯ ಕಾರಣ ಅವರು ನೈಜವಾಗಿ ಚಿತ್ರಿಸಿರುವ ಅಂದಿನ ಆಡಳಿತದ ವೈಖರಿ, ಹಳ್ಳಿಯ ಬದುಕು ಮತ್ತು ಹಳ್ಳಿಯ ಜನರ ಬಗ್ಗೆ ಅವರಿಗಿದ್ದ ಕಾಳಜಿ. ಅವರು ದೊಡ್ಡ ಸಾಹಿತಿಗಳೇನೂ ಆಗಿರಲಿಲ್ಲ. ಅವರ ಈ ಬರಹದಲ್ಲಿ ಸಾಹಿತ್ಯಕೃತಿಗಳಲ್ಲಿರುವ ಕಲ್ಪನಾವಿಲಾಸವಿಲ್ಲ, ಆದರೆ ಗ್ರಾಮೀಣ ಬದುಕು ಮತ್ತು ಭಾಷೆಯ ಸೊಗಡು ಇದೆ. ಅವರು ಬದುಕಿ ಬಾಳಿದ ಕಾಲದ ಘಟನೆಗಳನ್ನು ಯಥಾವತ್ತಾಗಿ ನಿರೂಪಿಸಿರುವ ಜೀವನಸಾಹಿತ್ಯ ಇದೆ. ಅಂದಿನ ಆಡಳಿತ ಕುರಿತು ನಿರೂಪಿಸಿದ ಒಂದು ರಸವತ್ತಾದ ಘಟನೆ ಹೀಗಿದೆ:

ರಾಯರು ಅಮಲ್ದಾರರಾಗಿ ಕೆಲಸಕ್ಕೆ ಸೇರಿದ ಮೊದಲನೆಯ ದಿನ ನಡೆದ ಘಟನೆ ಇದು. ಆಗಿನ ಡೆಪ್ಯುಟಿಕಮಿಷನರ್ ಆದ ಬಿ.ಕೆ.ವೆಂಕಟವರದ ಅಯ್ಯಂಗಾರ್ ರವರ ಕಛೇರಿಯಲ್ಲಿ ಪ್ರೊಬೇಷನರಾಗಿ ಸೇರಿಕೊಂಡು ಕೆಲಸ ಕಲಿಯಲಾರಂಭಿಸಿದರು. “ಕಛೇರಿಯ ಕಾಗದಪತ್ರಗಳ ಸರಣಿಯನ್ನೂ, ಅಧಿಕಾರದ ಮರ್ಯಾದೆ, ಜಬರ್ದಸ್ತಿಗಳನ್ನೂ ಅಯ್ಯಂಗಾರರು ಪಾಠಪ್ರವಚನಗಳ ಮೂಲಕ ಬೋಧಿಸಿದರೆಂದು ಅಲ್ಲ. ಕೆಲಸದ ತಪಸೀಲುಗಳನ್ನು, ಬರವಣಿಗೆಯ ಧಾಟಿ ಮತ್ತು ಬಿಗುವು, ಮೇಲಿನಿಂದ ಕೆಳಗೆ, ಕೆಳಗಿನಿಂದ ಮೇಲೆ, ಪತ್ರವ್ಯವಹಾರಗಳ ಆರೋಹಣ, ಅವರೋಹಣ, ಸಾಂಗತ್ಯಗಳ ಮರ್ಮಗಳನ್ನು ನಾನು ರೆಕಾರ್ಡುಗಳಿಂದಲೂ, ಹಳಬರಾದ ಪಳಗಿದ ಗುಮಾಸ್ತರುಗಳಿಂದಲೂ ಕಲಿತೆ” ಎಂದು ರಾಯರು ಹೇಳಿಕೊಂಡಿದ್ದಾರೆ. ಒಮ್ಮೆ ಒಂದು ಕೇಸಿನ ತೀರ್ಮಾನದ ಆದೇಶವನ್ನು ಹೆಡ್‌ ಮುನ್ಷಿಯು ಡೆಪ್ಯುಟಿ ಕಮಿಷನರ್ ಸಾಹೇಬರ ಸಹಿ ಇಲ್ಲದೆಯೇ ಅಮಲ್ದಾರರಿಗೆ ಕಳಹಿಸಿದ್ದನಂತೆ. ಸಾಹೇಬರ ಸಹಿ ಇಲ್ಲದ ಆದೇಶವನ್ನು ಜಾರಿಗೊಳಿಸುವುದು ಹೇಗೆಂದು ಅನುಮಾನಪಟ್ಟು ಅಮಲ್ದಾರರು ಅತ್ಯಂತ ವಿನಯದಿಂದ ಪತ್ರ ಬರೆದು ವಾಪಾಸು ಕಳುಹಿಸಿದರು. ಇದರಿಂದ ಕೋಪಗೊಂಡ ಹೆಡ್‌ ಮುನ್ಷಿ “ಈ ಅಮಲ್ದಾರನಿಗೆ ಎಷ್ಟು ಪೊಗರು, ಇವನಿಗೆ ಒಂದು ಕೈತೋರಿಸುತ್ತೇನೆ, ನೋಡುತ್ತಿರಿ” ಎಂದು ಹೇಳಿ ಸಾಹೇಬರ ಸಹಿ ಮಾಡಿಸಿ ಒಂದು ವಾರದ ನಂತರ ಅಮಲ್ದಾರರಿಗೆ ಮತ್ತೆ ಕಳುಹಿಸಿದನಂತೆ. ಅದರ ಜೊತೆಗೆ ಒಂದು ಎಚ್ಚರಿಕೆಯ ನೋಟೀಸನ್ನೂ ಸಾಹೇಬರಿಂದ ಸಹಿ ಮಾಡಿಸಿ ಕಳುಹಿಸಿದನಂತೆ. ಅದರಲ್ಲಿ “ನಮ್ಮ ಸೈನಾಗಿರುವ ಕಾಗದ ಸೈನಾಗಿಲ್ಲವೆಂದು ನೋಡದೆ ಬರೆದಿರುವುದು ಬಹಳ ಆಶ್ಚರ್ಯಕರವಾಗಿದೆ. ಅದನ್ನು ಬರೆದ ಗುಮಾಸ್ತನಿಗೆ 2 ರೂ. ಜುಲ್ಮಾನೆ ವಿಧಿಸಲಾಗಿದೆ” ಎಂದು ಆ ನೋಟೀಸಿನಲ್ಲಿ ತಿಳಿಸಿ ಸಾಹೇಬರಿಗೆ ಇನ್ನು ಮುಂದೆ ಬರೆಯುವಾಗ ಸರಿಯಾಗಿ ನಿಗಾ ವಹಿಸಬೇಕೆಂದು ಅಮಲ್ದಾರರಿಗೆ ಎಚ್ಚರಿಕೆ ಕೊಡಿಸಿದನಂತೆ! ಹಿಂದಿನ ವಾರದ ಅಂಕಣದಲ್ಲಿ ಪ್ರಸ್ತಾಪಿಸಿದ ಬೇರೊಂದು ಪ್ರಕರಣದಲ್ಲಿ ಆಗಿನ ಡೆಪ್ಯುಟಿಕಮಿಷನರ್ ಆಗಿದ್ದ ಬ್ರಿಟಿಷ್ ಅಧಿಕಾರಿ ತನ್ನ ತಪ್ಪನ್ನು ಮನಗಂಡು ಅಮಲ್ದಾರರಾಗಿದ್ದ ರಾಯರ ಸತ್ಯಸಂಧತೆಯನ್ನು ಗೌರವಿಸಿ ಕ್ಷಮಾಪಣೆ ಕೇಳಿದ ಹಿನ್ನೆಲೆಯಲ್ಲಿ ದೇಶೀಯ ಅಧಿಕಾರಿಗಳ ಈ ನಡವಳಿಕೆ ಅಸಹ್ಯಕರವಾಗಿ ಕಾಣಿಸುತ್ತದೆ.

ಇಂದಿನ ಆಡಳಿತದಲ್ಲಿ ಪ್ರಾಮಾಣಿಕತೆ ಎಂಬುದು ಕೈಗೆ ಎಟುಕಲಾರದ ಅಪರೂಪದ ವಸ್ತುವಾಗಿದೆ (Honesty is a very scarce material) ಎಂದು ಕೆ.ವಿ. ಕಾರಂತ ಎಂಬ ಮತ್ತೊಬ್ಬ ಓದುಗರು ಪ್ರತಿಕ್ರಿಯಿಸಿದ್ದಾರೆ. ಹಿಂದಿನ ಕಾಲದಲ್ಲಿ ಬ್ರಿಟಿಷರು ತಾಲ್ಲೂಕಿನಲ್ಲಿ ಒಬ್ಬ ಅಮಲ್ದಾರನಿಂದ ಹೇಗೆ ಆಡಳಿತ ನಿರ್ವಹಿಸುತ್ತಿದ್ದರು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರರೂಪವಾಗಿಯೋ ಎಂಬಂತೆ ನಿವೃತ್ತರಾದ ಮೇಲೆ ಸಮಕಾಲೀನ ಸ್ಥಿತಿಗತಿಗಳನ್ನು ಬಲ್ಲವರಾಗಿದ್ದ ನವರತ್ನ ರಾಮರಾಯರು ತಮ್ಮ ಗ್ರಂಥದಲ್ಲಿ ಹೀಗೆ ಬರೆದಿರುತ್ತಾರೆ: “ಈಗ ಅಮಲ್ದಾರರು ಪುಕ್ಕ ತರಿದ ಹುಂಜದಂತೆ ಅಧಿಕಾರವನ್ನೆಲ್ಲಾ ತೊರೆದು ಆಕ್ಷೇಪಣೆಗೆ ಮಾತ್ರ ಗುರಿಯಾದ ಕರುಣಾಮೂರ್ತಿ. ಪ್ರತಿಯೊಂದು ಗ್ರಾಮದಲ್ಲೂ ಮೈಸೂರು, ಬೆಂಗಳೂರು, ಮಂತ್ರಿಮಂಡಲಗಳನ್ನು ಬಲ್ಲ ಮುಖಂಡರಿದ್ದಾರೆ. ಮೊದಲು ಅಮಲ್ದಾರರು ಒಬ್ಬ ಡೆಪ್ಯುಟಿ ಕಮಿಷನರ್ ಸಾಹೇಬರನ್ನು ಮೆಚ್ಚಿಸಿ ತಮ್ಮ ಕೆಲಸವನ್ನು ದಕ್ಷತೆಯಿಂದ ಮಾಡಿಕೊಂಡು ಹೋದರೆ ಸಾಕಾಗಿತ್ತು. ಈಗ ಗ್ರಾಮ ಮುಖಂಡರುಗಳ, ಪಾರ್ಟಿ ಮುಖಂಡರುಗಳ ಶಿಫಾರಸ್ಸಿಲ್ಲದಿದ್ದರೆ ಅಮಲ್ದಾರಿ ಮಾಡುವುದೇ ಕಷ್ಟವೆಂದು ನನ್ನ ಅಭಿಪ್ರಾಯ”. ರಾಯರ ಈ ಮಾತು ಕೇವಲ ಅಮಲ್ದಾರರಿಗೆ ಅನ್ವಯಿಸದೆ ಎಲ್ಲ ಹುದ್ದೆಗಳಿಗೂ ಅನ್ವಯಿಸುತ್ತದೆ. ಬದಲಾದ ಇಂದಿನ ಕಾಲಮಾನದಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ತನ್ನ ಮೇಲಧಿಕಾರಿಯನ್ನು ಮೆಚ್ಚಿಸುವ ಬದಲು ಆಯಾಯ ಕ್ಷೇತ್ರದ ಶಾಸಕರು ಮತ್ತು ಸಂಸದರನ್ನು ಮೆಚ್ಚಿಸಬೇಕಾದ ಅನಿವಾರ್ಯತೆ ಇದೆಯೆಂದು ಹೇಳಿದರೆ ತಪ್ಪಾಗಲಾರದು.

ಚುನಾವಣೆಯಲ್ಲಿ ಏನಕೇನ ಪ್ರಕಾರೇಣ ಆರಿಸಿ ಬಂದರೆ ಮುಗಿಯಿತು, ಅವನೊಬ್ಬ ಪಾಳೇಗಾರ. ಸಂವಿಧಾನದ ದೃಷ್ಟಿಯಿಂದ ಇಂದಿನ ಆಡಳಿತ ಎಷ್ಟೇ ಪ್ರಜಾಸತ್ತಾತ್ಮಕವೆನಿಸಿದರೂ ವ್ಯವಹಾರದಲ್ಲಿ ಜನಪ್ರತಿನಿಧಿಯೆನಿಸಿದ ರಾಜಕಾರಣಿಗಳು ಆಯಾಯ ಕ್ಷೇತ್ರದಲ್ಲಿ ತಮ್ಮ ತಮ್ಮ ಜಾತಿಯ ಅಧಿಕಾರಿಗಳನ್ನು ಹಾಕಿಸಿಕೊಂಡು ಪಾಳೆಯಗಾರರಂತೆ ವರ್ತಿಸುತ್ತಿದ್ದಾರೆ. ತಮ್ಮ ಅಧಿಕಾರದ ಪಾರುಪತ್ಯೆ ನಡೆಸಲು ಅಧಿಕಾರಿಗಳನ್ನು ಊಳಿಗದವರಂತೆ ಮಾಡಿಕೊಂಡಿದ್ದಾರೆ. ತನ್ನ ಪಾಳೇಪಟ್ಟಿನ ಬಲವರ್ಧನೆಗೆ ಬಳಸುವ ದಾಳಗಳೇ ಸರಕಾರಿ ಅಧಿಕಾರಿಗಳು. ಆಯಕಟ್ಟಿನ ಎಲ್ಲ ಸ್ಥಳಗಳಲ್ಲೂ ತನಗೆ ಬೇಕಾದ ಅಧಿಕಾರಿಗಳನ್ನೇ ಆತ ಬಯಸುತ್ತಾನೆ. ಆತನಿಗೆ ನಿಷ್ಠನಾಗಿ ಕಾಲಕಾಲಕ್ಕೆ ಕಪ್ಪ ಕಾಣಿಕೆ ಸಲ್ಲಿಸುತ್ತಾ ಇರುವುದಷ್ಟೇ ಅಧಿಕಾರಿಗಳ ಕೆಲಸ. ಜನರ ಹಿತಕ್ಕಿಂತ ಶಾಸಕರ ಹಿತವೇ ಮುಖ್ಯ ಎಂದು ಭಾವಿಸುವವನು ಸುಖವಾಗಿ ಬದುಕುತ್ತಾನೆ ಎಂಬುದು ಗೊತ್ತಿರುವ ಸಂಗತಿಯಾಗಿರುವುದರಿಂದ ಅಧಿಕಾರಿಗಳೂ ಸಹ ಹಾಗೆಯೇ ನಡೆದುಕೊಳ್ಳುತ್ತಾರೆ. ಪೊಲೀಸ್ ಇಲಾಖೆಯ ಅಧಿಕಾರಿಗಳದೂ ಇದೇ ಪಾಡು. ಶಾಸಕರ ಎಲ್ಲ ಕಾನೂನು ವಿರೋಧಿ ಕೆಲಸಗಳಿಗೂ ಪೊಲೀಸರು ಶ್ರೀರಕ್ಷೆ ನೀಡಬೇಕಾದ ಅನಿವಾರ್ಯತೆ ಒದಗಿ ಬಂದಿರುವುದು ಪ್ರಜಾಪ್ರಭುತ್ವದ ದೊಡ್ಡ ವ್ಯಂಗ್ಯ. ಮಾತು ಕೇಳದ ಪೊಲೀಸು ಅಧಿಕಾರಿಯನ್ನು ತನ್ನೆಲ್ಲ ಪ್ರಭಾವ ಬಳಸಿ, ಮುಖ್ಯಮಂತ್ರಿಯ ಮೇಲೆ ಇನ್ನಿಲ್ಲದ ಒತ್ತಡ ತಂದು ಶಿಕ್ಷೆಯ ವರ್ಗ ಮಾಡಿಸಿರುವ ಉದಾಹರಣೆ ಎಷ್ಟಿಲ್ಲ? ಜನರೂ ಸಹ ಶಾಸಕರಿಂದ ಅದನ್ನೇ ನಿರೀಕ್ಷಿಸುತ್ತಾರೆ. ಅವರ ನಿರೀಕ್ಷೆಯಂತೆ ಪೋಲೀಸರಿಗೆ ಹೇಳದಿದ್ದರೆ ನಿಮ್ಮನ್ನು ಶಾಸಕರಾಗಿ ಆಯ್ಕೆ ಮಾಡಿದ್ದು ಏತಕ್ಕಾಗಿ? ಎಂದು ಅಸಮಾಧಾನದಿಂದ ಕೇಳುವ ಜನರಿದ್ದಾರೆ.

ಶಾಸಕರ ಅವಕೃಪೆಗೆ ಒಳಗಾದ ಯಾವ ಅಧಿಕಾರಿಯೂ ಎತ್ತಂಗಡಿಯಾಗದೆ ಹೆಚ್ಚುಕಾಲ ಉಳಿಯುವಂತಿಲ್ಲ. ಪ್ರಾಮಾಣಿಕ ಅಧಿಕಾರಿ ಯಾರಿಗೂ ಬೇಡದವನಾಗಿ ಫುಟ್‌ ಬಾಲಿನಂತೆ ಒದೆ ತಿನ್ನುತ್ತಾ ವರ್ಗಾವಣೆ ಅನುಭವಿಸುತ್ತಾ ಇರಬೇಕಾಗುತ್ತದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗವಾಗಿ ಹೋದ ಅಧಿಕಾರಿಗೆ ಹೊಸ ಸ್ಥಳದಲ್ಲಿ ಸೇವೆಗೆ ಸೇರಲು ಹೋಗುವಷ್ಟರಲ್ಲಿ ಮತ್ತೊಂದು ಸ್ಥಳಕ್ಕೆ ಮರುವರ್ಗಾವಣೆ ಆಗಿರುತ್ತದೆ! ಎಷ್ಟೋ ವೇಳೆ ಅಂಥ ಅಧಿಕಾರಿಗೆ ಸ್ಥಳವನ್ನೇ ತೋರಿಸದೆ ವರ್ಷಗಟ್ಟಲೆ ಮನೆಯಲ್ಲಿ ಕೂರಿಸಿ ಸಂಬಳ ಕೊಡುವುದೂ ಉಂಟು. ದಕ್ಷ ಹಾಗೂ ಒಳ್ಳೆಯ ಅಧಿಕಾರಿಗಳು ಈಗಲೂ ಕೆಲವರಾದರೂ ಇರುವುದು ನಿಜವಾದರೂ ಅಂಥವರನ್ನು ಇಂದಿನ ಕೊಳಕು ರಾಜಕಾರಣದಲ್ಲಿ ಕೆಲಸಕ್ಕೆ ಬಾರದ ತಾಣಗಳಿಗೆ ಹಾಕುತ್ತಾರೆಂಬುದು ರಹಸ್ಯದ ಸಂಗತಿಯೇನೂ ಅಲ್ಲ. ಮುಖ್ಯಮಂತ್ರಿಯೂ ಸಹ ಶಾಸಕರ ಕೃಪೆ ಇಲ್ಲದೆ ಕಾರ್ಯನಿರ್ವಹಿಸುವಂತಿಲ್ಲ. ಇಂತಹ ವಿಲಕ್ಷಣ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ತಮ್ಮ legitimate ಕಷ್ಟಗಳನ್ನು ಯಾರ ಹತ್ತಿರ ಹೇಳಿಕೊಳ್ಳಬೇಕು?

ಮೊನ್ನೆ ಮೊನ್ನೆ ಅಮೇರಿಕೆಯ ನ್ಯೂಜೆರ್ಸಿಯಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಊಟಕ್ಕೆ ಪರದಾಡಿ ಬ್ರೆಡ್ ತಿನ್ನುವ ದುಃಸ್ಥಿತಿಗೆ ಒಳಗಾದ ನಮ್ಮ ಶಾಸಕರಿಗೆ ಅವರ ಕ್ಷೇತ್ರದ ಬಡಜನರು ನಿತ್ಯವೂ ಹೊಟ್ಟೆಯ ಪಾಡಿಗಾಗಿ ಪಡುವ ಕಷ್ಟದ ಅರಿವು ಉಂಟಾಗಿರುವಂತೆ ತೋರುವುದಿಲ್ಲ. ಜನರ ಕಷ್ಟ ಸುಖಗಳಿಗೆ ಸ್ಪಂದಿಸದೆ ಅಮೇರಿಕೆಗೆ ಹಾರುವ ಈ ಶಾಸಕರ ನಡವಳಿಕೆ “ಬೆಕ್ಕಿಗೆ ಚಿನ್ನಾಟ ಇಲಿಗೆ ಪ್ರಾಣಸಂಕಟ” ಎಂಬ ಗಾದೆಮಾತಿನಂತಾಗಿದೆ. ಇತ್ತೀಚೆಗೆ ನಮ್ಮ “ಸದ್ಧರ್ಮ ನ್ಯಾಯಪೀಠ”ದ ಮುಂದೆ ದಾಖಲಾದ ಒಂದು ಮನಕರಗುವ ಪ್ರಕರಣ. ನೂರಾರು ಬಡಜನರು ತಮ್ಮ ಮಡದಿ-ಮಕ್ಕಳೊಂದಿಗೆ ಹಾಜರಾಗಿದ್ದರು. ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಅವರು ಬರಿಗೈಯಲ್ಲಿ ಬರದೆ ದೊಡ್ಡ ಹಾರ ಹಣ್ಣುಹಂಪಲು ತಂದು ಭಕ್ತಿಯಿಂದ ಸಮರ್ಪಿಸಿ ತಮ್ಮ ಗೋಳಿನ ಕಥೆಯನ್ನು ನಿವೇದಿಸಿಕೊಂಡರು. ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛಿತಿ ಎನ್ನುವ ಭಗವದ್ಗೀತೆಯ ಸಾಲು ನೆನಪಾಯಿತು. ಮುಂದಿನ ಸಾರಿ ಬರುವಾಗ ಬಡವರಾದ ನೀವು ದುಬಾರಿ ಬೆಲೆಯ ಹಾರವನ್ನು ತರುವುದು ಬೇಡವೆಂದು ಹೇಳಿ ಅವರ ಕಷ್ಟಸುಖ ಕೇಳತೊಡಗಿದೆವು. ಅವರದು ಚಿತ್ರದುರ್ಗ ಸಮೀಪದ ಒಂದು ಹಳ್ಳಿ. ಅದರ ಹೆಸರು ಗೂಳಯ್ಯನಹಟ್ಟಿ. ಅಲ್ಲಿರುವ ಬಹುಪಾಲು ಜನರು ತಲೆತಲಾಂತರಗಳಿಂದ ಸಮೀಪದ ಎರಡು ಎಕರೆ ಪ್ರದೇಶದಲ್ಲಿರುವ ಒಂದು ದೊಡ್ಡ ಕಲ್ಲುಬಂಡೆಯನ್ನು ಒಡೆದು ಕಲ್ಲುಚಪ್ಪಡಿಗಳನ್ನು ಮಾರಿ ತಮ್ಮ ಜೀವನ ನಿರ್ವಹಣೆಯನ್ನು ಮಾಡಿಕೊಂಡು ಬಂದ ಬಡಪಾಯಿ ಜನ. ಈ ಜನ ಇನ್ನೊಬ್ಬರ ತಲೆಯನ್ನು ಹೊಡೆದು ಬದುಕುವ ಪುಂಡು-ಪೋಕರಿಗಳಲ್ಲ; ಕಲ್ಲು ಒಡೆದು ತಮ್ಮ ಮಡದಿ ಮಕ್ಕಳ ಹೊಟ್ಟೆಹೊರೆಯುವ ಅಮಾಯಕರು. ಈಗ ಅವರ ಜೀವನಕ್ಕೇ ಕುತ್ತು ಬಂದಿದೆ. ಬೆಂಗಳೂರಿನಲ್ಲಿ ಭಿಕ್ಷುಕರು ಸಾಯುವವರೆಗೂ ಅವರ ನರಕಯಾತನೆಯ ಅರಿವು ಸರ್ಕಾರದ ಗಮನಕ್ಕೆ ಬರಲಿಲ್ಲ. ಅಂಥದೇ ದುಃಸ್ಥಿತಿ ಈ ಬಡಜನರದು. ಇವರ ಹತ್ತಿರ ಕಲ್ಲು ಒಡೆಯಲು ಕೈಯಲ್ಲಿ ಚಾಣ ಇದೆಯೇ ಹೊರತು ಕಾಂಚಾಣವಿಲ್ಲ! ಕಾನೂನಿನ ರಕ್ಷಣೆ ಇವರಿಗಿಲ್ಲ. ಕಾಂಚಾಣ ಉಳ್ಳ ಜನ ಲೈಸೆನ್ಸ್ ತೆಗೆದುಕೊಂಡು ದೊಡ್ಡ ದೊಡ್ಡ ಯಂತ್ರಗಳಿಂದ ಹತ್ತಾರು ಅಡಿ ಆಳದವರೆಗೆ ಬಂಡೆಗಳನ್ನು ಕೊರೆದು ಡೈನಮೈಟ್ ಹಾಕಿ ಕಲ್ಲುಬಂಡೆಗಳನ್ನು ಸಿಡಿಸುತ್ತಿದ್ದಾರೆ. ಅವರು ವಾಸ್ತವವಾಗಿ ಡೈನಮೈಟ್ ಹಾಕುತ್ತಿರುವುದು ಕಲ್ಲುಬಂಡೆಗಳಿಗಲ್ಲ; ಈ ಬಡಜನರ ಹಸಿದ ಹೊಟ್ಟೆಗಳಿಗೆ! ಜಿಲ್ಲಾಡಳಿತವಾಗಲೀ, ಕೋರ್ಟುಗಳಾಗಲೀ ಲೈಸೆನ್ಸ್ ಪಡೆದ ಕಾಂಚಾಣಪುರುಷರಿಗೆ ಕಾನೂನು ಪ್ರಕಾರ ರಕ್ಷಣೆ ನೀಡುತ್ತದೆಯೇ ಹೊರತು ಬಡಜನರ ಗೋಳನ್ನು ಕೇಳುವವರಾರು?

ಅರಸು ರಾಕ್ಷಸ, ಮಂತ್ರಿಯೆಂಬುವ
ಮೊರೆವ ಹುಲಿ, ಪರಿವಾರ ಹದ್ದಿನ
ನೆರವಿ, ಬಡವರ ಬಿನ್ನಪವನಿನ್ನಾರು ಕೇಳುವರು
ಉರಿವುರಿವುತಿದೆ ದೇಶ!..... 
(ಗದುಗಿನ ಭಾರತ, ಸಭಾಪರ್ವ 1.62)

ಆಳರಸನು ರಾಕ್ಷಸನಾದರೆ, ಅವನ ಮಂತ್ರಿಗಳು ಘರ್ಜಿಸುವ ಹುಲಿಯಾದರೆ, ರಾಜಪರಿವಾರದವರು ಕಿತ್ತು ತಿನ್ನುವ ರಣಹದ್ದುಗಳಾದರೆ ಬಡವರ ಬವಣೆಯನ್ನು ಕೇಳುವವರಾರು! ಎನ್ನುತ್ತಾನೆ ಕುಮಾರವ್ಯಾಸ. ಗದುಗಿನ ಭಾರತದ ಸಭಾಪರ್ವದಲ್ಲಿ ಬರುವ ಈ ಮೇಲಿನ ಪದ್ಯ ಇಂದಿನ ಕೊಳಕು ರಾಜಕಾರಣಕ್ಕೆ ಹಿಡಿದ ಕನ್ನಡಿಯಂತಿದೆ.

ಸತ್ತ ಮೇಲೆ ಲಕ್ಷಾಂತರ ರೂ. ಪರಿಹಾರಧನವನ್ನು ಮುಂಜೂರು ಮಾಡುವ ಸರಕಾರ, ದುಡಿಮೆಗೆ ದಾರಿ ಮಾಡಿಕೊಟ್ಟು ಜನರು ಬದುಕುವಂತೆ ಮಾಡಲು ಏಕೆ ಸಾಧ್ಯವಿಲ್ಲ?

ಬಲುದೂರ ನಡೆದಿಹೆನು; ಬೆಂಡಾಗಿ ಬಳಲಿಹೆನು 
ಹಸಿವು ದಾಹಕು ಕೂಡ ಉಸಿರಿಲ್ಲವೆನಗೆ 
ಕೈಕಾಲುಗಳು ಸವೆದು ಕಡ್ಡಿಯಾಗುಳಿದಿಹವು 
ತುಸು ಹೊತ್ತು ತಾಳಪ್ಪ, ಬರುವೆ ನನ್ನೊಡೆಯ
ಮಳೆ ಸುರಿಯುತಲಿಹುದು; ಜಗಕೆ ಬೆಳೆ ಬೇಕು
ಚಳಿಗಾಳಿಗಳ ತಡೆವ ಶಕ್ತಿ ಎನಗೆಲ್ಲಿ?
ಶಾಲು ಕಂಬಳಿ ಹೊದೆಯಬಲ್ಲರಿಗೆ ಅವನು ಕೊಡು: 
ನಿನ್ನಡಿಯ ಭಕ್ತಿಯನೆ ಹೊದಿಸು ನನಗೆ!
ಬಡ ಮುದುಕ ನಾ ನಿನ್ನ ಆಲಯಕೆ ಬರಲಾರೆ 
ಇರುವಲ್ಲೆ ಕರುಣಾಳು ಊಳಿಗವ ಸ್ವೀಕರಿಸು. 
ನಿನ್ನ ದೇಗುಲ ಪೂಜೆ ಘೋಷವನು ಕೇಳಿಸೆನಗೆ 
ಎದ್ದು ಒಡನೆಯೆ ಎಲ್ಲ ಚಿಂತೆಯನ್ನು ಬದಿಗಿಟ್ಟು 
ಆತ್ಮಭಾವದಿ ಬಂದು ಕಾಲ ಪಿಡಿವೆ!

ಜನಪರಕಾಳಜಿಯಿಂದ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತರಾಗಿ ಬಾಳಸಂಜೆಯಲ್ಲಿ ರಾಯರು ಹೀಗೆ ದೇವರನ್ನು ಪ್ರಾರ್ಥಿಸಿದ್ದಾರೆ. ಅಮಲ್ದಾರರಾಗಿದ್ದರೂ ಅಧಿಕಾರದ ಅಮಲು ಅವರಿಗಿರಲಿಲ್ಲ. ಅವರು ಪಡೆಯುತ್ತಿದ್ದ ಸಂಬಳ ಜನರ ಸೇವೆಗೆ ಸರಕಾರ ಕೊಡುತ್ತಿದ್ದ ಭಕ್ಷೀಸು ಎಂದು ಅವರು ಭಾವಿಸಿದ್ದರು. ಇಂದು ಜನ ಬದುಕಲು ರಾಯರಂತಹ ಅಧಿಕಾರಿಗಳು ಬೇಕು. ಅಂಥವರು ಈಗ ಎಲ್ಲಿದ್ದಾರೆ? ಹುಡುಕಿ ತನ್ನಿ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 8.9.2010.