ಮತಾಂತರ ಮತ್ತೊಂದು ಧರ್ಮಕ್ಕೆ ತೋರುವ ಅಗೌರವ

  •  
  •  
  •  
  •  
  •    Views  

ಮ್ಮೆ ಅಮೇರಿಕಾ ದೇಶದೊಳಗೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವಾಗ ನಮ್ಮ ಪಕ್ಕದಲ್ಲಿ ಒಬ್ಬ ಮಧ್ಯ ವಯಸ್ಕ ಕುಳಿತಿದ್ದ. ಕೊರಳಲ್ಲಿದ್ದ ಶಿಲುಬೆಯ ಚಿಹ್ನೆಯಿಂದ ಆತ ಕ್ರೈಸ್ತ ಧರ್ಮದವನಿರಬೇಕೆಂದು ತೋರಿತು. ನಮ್ಮ ವೇಷಭೂಷಣವನ್ನು ನೋಡಿ ಆಕರ್ಷಿತನಾದ ಆ ಬಿಳಿಯ ವ್ಯಕ್ತಿ ಕುತೂಹಲದಿಂದ ನಮ್ಮ ಪರಿಚಯವನ್ನು ಮಾಡಿಕೊಂಡ. ನಂತರ ನಮೀರ್ವರ ಸಂಭಾಷಣೆ ಪತ್ರಿಕಾ ಸಂದರ್ಶನದಂತೆ ಹೀಗೆ ಸಾಗಿತು:

Q: Do you believe in Christ? 
A: I honour him to be a great Saint? 
Q: Do you know that he is the Son of God?
A: We believe that all are children of God. 
Q: Do you know that Adam and Eve are the first parents of mankind? 
A: We believe that God is our true parent. 
Q: Do you know that if you do not believe in Christ, you cannot go to Heaven? 
A: Do you mean to say that all those who were born earlier to Christ are in hell?

ಸಹಪ್ರಯಾಣಿಕ ನಿರುತ್ತರನಾದ. ಸಂಭಾಷಣೆ ಮುಂದುವರಿಯಲಿಲ್ಲ. ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ, ಸತ್ಯವ ನುಡಿವುದೇ ಸ್ವರ್ಗಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ, ಆಚಾರವೇ ಸ್ವರ್ಗ, ಅನಾಚಾರವೇ ನರಕ, ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂಬ ಬಸವಣ್ಣನವರ ವಿಚಾರಧಾರೆಯನ್ನು ಆತನಿಗೆ ತಿಳಿಯಹೇಳಬೇಕೆನಿಸಿತ್ತು. ಆದರೆ ಬೇರೆ ಧರ್ಮಗಳ ಬೋಧನೆಯನ್ನು ಕೇಳುವಷ್ಟು ತೆರೆದ ಮನಸ್ಸಿನ ವ್ಯಕ್ತಿ ಆತನಲ್ಲವೆಂದು ಕಂಡುಬಂದಿದ್ದರಿಂದ ಹೇಳಲು ಮುಂದಾಗಲಿಲ್ಲ. ವಿಮಾನ ಕೆಳಗಿಳಿದಾಗ ಆತನಿಗೆ ಶುಭ ಹಾರೈಸಿ ಮುಂದೆ ಸಾಗಿದೆವು. ಕ್ರೈಸ್ತರ ಸ್ವರ್ಗ-ನರಕಗಳ ಪರಿಕಲ್ಪನೆಗೂ ಹಿಂದೂಗಳ ಸ್ವರ್ಗ-ನರಕಗಳ ಪರಿಕಲ್ಪನೆಗೂ ಬಹಳ ವ್ಯತ್ಯಾಸವಿದೆ. ಕ್ರೈಸ್ತ ಧರ್ಮೀಯರಲ್ಲೂ ಸ್ವರ್ಗ-ನರಕಗಳ ಪರಿಕಲ್ಪನೆ ವಿಭಿನ್ನ ತೆರನಾಗಿದೆ. ಅಲ್ಲಿಗೆ ಹೋಗುವ ಮುನ್ನ ಪರ್ಗಟೊರಿ (purgatory) ಎಂಬ ಮಧ್ಯಂತರ ಅವಸ್ಥೆಯ ವಿನೂತನ ಪರಿಕಲ್ಪನೆ ಇದೆ. ಒಟ್ಟಾರೆ ಅವು ಮನುಷ್ಯ ಸತ್ತ ಮೇಲೆ ಹೋಗುವ ತಾಣಗಳು ಅಥವಾ ಅನುಭವಿಸುವ ಸ್ಥಿತ್ಯಂತರಗಳು, ಕ್ರೈಸ್ತರಿಗೆ ಪುನರ್ಜನ್ಮದಲ್ಲಿ ನಂಬಿಕೆ ಇಲ್ಲ. ಈ ಜನ್ಮವೇ ಕೊನೆ. ಆದರೆ ಹಿಂದೂಗಳಿಗೆ ಜನ್ಮಜನ್ಮಾಂತರಗಳಲ್ಲಿ ನಂಬಿಕೆ ಇದೆ. ಪುನರಪಿ ಜನನಂ, ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ. ನಿತ್ಯಜೀವನದಲ್ಲಿ ಕಷ್ಟಕಾರ್ಪಣ್ಯಗಳು ಬಂದಾಗ ಹಣೆ ಹಣೆ ಚಚ್ಚಿಕೊಂಡು ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದೆನೋ ಅನುಭವಿಸಬೇಕಾಗಿದೆ ಎಂದು ಉದ್ಗರಿಸುತ್ತಾರೆ. ಪುರಾಣಗಳ ಪ್ರಕಾರ ಪುಣ್ಯ ಮಾಡಿದವರು ಸ್ವರ್ಗಕ್ಕೆ ಹೋಗಿ ಸುಖವನ್ನು ಅನುಭವಿಸುತ್ತಾರೆ; ಪಾಪ ಮಾಡಿದವರು ನರಕಕ್ಕೆ ಹೋಗಿ ಮಾಡಿದ ಪಾಪಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸುತ್ತಾರೆ. ಕ್ರೈಸ್ತರಂತೆ ಹಿಂದೂಗಳ ನಂಬಿಕೆಯ ಪ್ರಕಾರ ಈ ಸ್ವರ್ಗ-ನರಕಗಳು ಮನುಷ್ಯ ಸತ್ತ ಮೇಲೆ ಹೋಗಿ ಸೇರುವ ತಾಣಗಳಾದರೂ ಅವು ಶಾಶ್ವತ ತಾಣಗಳಲ್ಲ. ಮನುಷ್ಯ ತಾನು ಗಳಿಸಿದ ಪುಣ್ಯ-ಪಾಪಗಳು ಮುಗಿದ ಮೇಲೆ ಮತ್ತೆ ಭೂಮಿಯ ಮೇಲೆ ಹುಟ್ಟಬೇಕಾಗುತ್ತದೆ. ಆದಕಾರಣ ಅಶಾಶ್ವತವಾದ ಸ್ವರ್ಗಸುಖವನ್ನು ಪಡೆಯ ಬಯಸದೆ ನಿತ್ಯಸುಖವನ್ನು ಪಡೆಯಲು ಪ್ರಯತ್ನಿಸಬೇಕು. ಅದುವೇ ಸಚ್ಚಿದಾನಂದ ಸ್ವರೂಪನಾದ ದೇವರ ಸಾಕ್ಷಾತ್ಕಾರ ಅಥವಾ ಮುಕ್ತಿ. ಆ ಆತ್ಯಂತಿಕ ಸ್ಥಿತಿಯನ್ನು ಮುಟ್ಟುವುದೇ ಜೀವನದ ಪರಮ ಗುರಿ.

ಜಗತ್ತಿನ ಯಾವುದೇ ಧರ್ಮವಿರಲಿ ಜೀವ, ಜಗತ್ತು ಮತ್ತು ದೇವರು ಈ ಮೂರರ ಪರಸ್ಪರ ಸಂಬಂಧಗಳ ವಿಶ್ಲೇಷಣೆಯನ್ನು ಮಾಡುತ್ತದೆ. ಈ ತ್ರಿಕೋಣ ಸಂಬಂಧವನ್ನು ಕುರಿತು ವಿಭಿನ್ನ ಧರ್ಮಗಳು ವಿಭಿನ್ನ ಸಿದ್ಧಾಂತಗಳನ್ನು ಹೊಂದಿವೆ. ಆ ವಿಭಿನ್ನತೆಯಲ್ಲಿ ಏಕತೆಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕೇ ಹೊರತು ತಾನು ನಂಬಿದ ಧರ್ಮವೇ ಶ್ರೇಷ್ಠ ಎಂದು ಪ್ರಪಂಚದಲ್ಲಿ ತನ್ನ ಧರ್ಮದ ಏಕಚಕ್ರಾಧಿಪತ್ಯವನ್ನು ಸಾಧಿಸಲು ಹೊರಡುವುದು ಸರಿಯಲ್ಲ. ಇಂದು ವಿಭಿನ್ನ ಧರ್ಮೀಯರ ಮಧ್ಯೆ ನಡೆಯುತ್ತಿರುವ ಸಂಘರ್ಷ ಒಂದೇ ವಸ್ತುವಿನ ಉತ್ಪಾದನೆಯಲ್ಲಿ ತೊಡಗಿರುವ ವಿಭಿನ್ನ ಕಂಪನಿಗಳು ನಡೆಸುವ ಮಾರುಕಟ್ಟೆಯ ಪೈಪೋಟಿಯಂತಿದೆ. ಜೇನುತುಪ್ಪದ ಬಾಟಲಿಯ ಮೇಲೆ ಅಂಟಿಸಿರುವ ವಿವಿಧಕಂಪನಿಗಳ ಲೇಬಲ್‌ಗಳ ಬಗ್ಗೆ ತರ್ಕವಿತರ್ಕ ಮಾಡುವ ಬದಲು ಜೇನುತುಪ್ಪವನ್ನು ಸವಿಯುವ ಪ್ರಯತ್ನ ಮಾಡಬೇಕಾಗಿದೆ. 

ಯಾವ ವ್ಯಕ್ತಿಯೂ ತನ್ನ ಮತ್ತು ತನ್ನ ಮನೆತನದ ಬಗ್ಗೆ ಮತ್ತೊಬ್ಬರು ಮಾಡುವ ಅವಹೇಳನದ ಮಾತುಗಳನ್ನು ಕೇಳಲು ಇಷ್ಟಪಡುವುದಿಲ್ಲ ಮತ್ತು ಸಹಿಸಿಕೊಳ್ಳುವುದೂ ಇಲ್ಲ. ಇಲ್ಲಿ ವ್ಯಕ್ತಿಗೌರವದ ಪ್ರಶ್ನೆ ಉದ್ಭವಿಸುತ್ತದೆ. ವ್ಯಕ್ತಿನಿಂದನೆಯ ಮಾತುಗಳು ಕಲಹಕ್ಕೆ ಕಾರಣವಾಗುತ್ತವೆ. ಹಾಗೇನೆ ಒಂದು ಧರ್ಮದವರ ನಂಬಿಕೆಗಳ ಬಗ್ಗೆ ಅವಹೇಳನಕಾರಿಯಾಗಿ ಇನ್ನೊಂದು ಧರ್ಮದವರು ಮಾತನಾಡಲು ಹೊರಟರೆ ಅದು ಕೋಮುಘರ್ಷಣೆಗೆ ಇಂಬುಗೊಡುತ್ತದೆ. ಹಿಂದು ಮಠಗಳು ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜುಗಳನ್ನು ನಡೆಸಿ ದುಡ್ಡು ಮಾಡುವುದರಲ್ಲಿ ತೊಡಗಿವೆಯೆಂದು ಆಪಾದಿಸುವ ಜಾನ್ ಸಿಕ್ವೆರಾ ಅವರ ಕಣ್ಣಿಗೆ ಸ್ವಾತಂತ್ರ್ಯಪೂರ್ವದಿಂದಲೂ ಜಾತಿ-ಮತ ಭೇದವಿಲ್ಲದೆ ಸಮಾನವಾಗಿ ಸಹಪಂಕ್ತಿ ಭೋಜನ ಮಾಡುವ ವ್ಯವಸ್ಥೆಯನ್ನು ತಂದು ಕ್ರೈಸ್ತ ಮಕ್ಕಳನ್ನೂ ಒಳಗೊಂಡಂತೆ ಎಲ್ಲ ವರ್ಗದ ಮಕ್ಕಳಿಗೆ ಅನ್ನವಸತಿ ಕೊಟ್ಟು ಬೆಳೆಸಿರುವ ಮಠಗಳು ಗೋಚರಿಸದಿರುವುದು ಮತ್ತು ಅವರನ್ನು ಮತಾಂತರಗೊಳಿಸಬೇಕೆಂಬ ದೃಷ್ಟಿಯಿಂದ ಮಾಡಿಲ್ಲವೆಂದು ತಿಳಿಯದಿರುವುದು ವಿಷಾದನೀಯ. ಅಂತಾರಾಷ್ಟ್ರೀಯ ಸಮಾಜಶಾಸ್ತ್ರಜ್ಞ ವಲಸೆಹೋದ ಕನ್ನಡಿಗನ ಕಥೆಯ ಹಿರೇಮಲ್ಲೂರ್ ಈಶ್ವರನ್‌ರವರು ಮದುವೆಯಾಗಿದ್ದು ನಮ್ಮ ಮಠದಲ್ಲಿ. ಕನ್ಯೆ ಹಾಲೆಂಡ್ ದೇಶದ ಕ್ರೈಸ್ತಧರ್ಮೀಯಳಾದ ಓಬಿನ್ ಸಿಟ್ಟರ್ (Obine Sitter). ಧಾರೆ ಎರೆದುಕೊಟ್ಟವರು ಪ್ರಪಂಚದ ಪಾಪು. ಶೈಲಜಾ ಎಂಬ ಹೆಸರಿಟ್ಟು ಹರಸಿದವರು ನಮ್ಮ ಲಿಂಗೈಕ್ಯ ಗುರುವರ್ಯರು. ಈಗಲೂ ಶ್ರೀಮತಿ ಶೈಲಜಾ ಅವರಿಗೆ ಸಿರಿಗೆರೆಯ ಮಠವೇ ತವರು ಮನೆ. ಇಂತಹ ಎಷ್ಟೋ ಸ್ವದೇಶೀಯ ಮತ್ತು ಪರದೇಶಿಯರ ಮದುವೆಗಳು ವಿಭಿನ್ನ ಜಾತಿಯವರ ಮಧ್ಯೆ ನಮ್ಮ ಸಮ್ಮುಖದಲ್ಲಿಯೂ ಆಗಿವೆ. ಅವೆಲ್ಲಾ ಪ್ರೀತಿಯಿಂದ ಆದ ಮದುವೆಗಳೇ ಹೊರತು ಮತಾಂತರದಿಂದ ಆದವುಗಳಲ್ಲ.

ಒರಿಸ್ಸಾದಲ್ಲಿ ಕ್ರೈಸ್ತ ಸಂನ್ಯಾಸಿನಿಯ ಮೇಲೆ ಹಿಂದೂಗಳಿಂದ ಅತ್ಯಾಚಾರವಾಗಿದ್ದರೆ ಕೇರಳದಲ್ಲಿ ಸ್ವಧರ್ಮೀಯ ಪಾದ್ರಿಗಳಿಂದಲೇ ಅತ್ಯಾಚಾರವಾಗಿದೆಯೆಂಬ ವರದಿ ಪತ್ರಿಕೆಗಳಲ್ಲಿ ಬಂದಿದೆ. ಅತ್ಯಾಚಾರ ಅತ್ಯಾಚಾರವೇ. ಹಿಂದೂಗಳು ಮಾಡಿದರೇನು, ಕ್ರೈಸ್ತರು ಮಾಡಿದರೇನು ಮತ್ತೊಂದು ಧರ್ಮದವರು ಮಾಡಿದರೇನು. ಇಂತಹ ಘಟನೆಗಳನ್ನು ಧರ್ಮಭೇದವಿಲ್ಲದೆ ಎಲ್ಲರೂ ಖಂಡಿಸಬೇಕೇ ಹೊರತು ಮತೀಯದಾವಾಗ್ನಿ ಹತ್ತಿ ಉರಿಯಲು ತುಪ್ಪ ಸುರಿಯಬಾರದು. ಹಿಂದೂ ಧರ್ಮದಲ್ಲಿ ಎಲ್ಲವೂ ಸರಿಯಾಗಿದ್ದರೆ ಏಕೆ ಜನ ಮತಾಂತರಗೊಳ್ಳುತ್ತಿದ್ದರು? ಎಂಬ ಜಾನ್ ಸಿಕ್ವೆರಾ ಅವರ ಪ್ರಶ್ನೆ ನಿಮ್ಮ ಮನೆಯ ಮಗಳು ನೆಟ್ಟಗಿದ್ದರೆ ನಮ್ಮ ಮನೆಯ ಹುಡುಗ ಏಕೆ ಓಡಿಸಿಕೊಂಡು ಹೋಗುತ್ತಿದ್ದ ಎಂದು ಕೇಳಿದಂತಾಗುತ್ತದೆ. ನಮ್ಮ ಮನೆಯ ಮಗಳನ್ನು ಎಷ್ಟೇ ಹದ್ದುಬಸ್ತಿನಲ್ಲಿಟ್ಟುಕೊಂಡಿದ್ದರೂ ಅಂಥವಳನ್ನೂ ನಿಮ್ಮ ಮನೆಯ ಹುಡುಗ ಮರುಳು ಮಾಡಿ ಓಡಿಸಿಕೊಂಡು ಹೋಗಿದ್ದಾನೆ ಎಂದು ಹೇಳಲು ಹೆಣ್ಣುಹೆತ್ತವರಿಗೆ ಬರುತ್ತದೆಯಲ್ಲವೇ? ಇಲ್ಲಿ, ಓಡಿಹೋಗುವುದೂ ತಪ್ಪು, ಓಡಿಸಿಕೊಂಡು ಹೋಗುವುದೂ ತಪ್ಪು. ಅದಕ್ಕೆ ಕಾರಣವೇನೆಂಬ ಎಚ್ಚರ ಇಬ್ಬರೂ ತಂದೆತಾಯಿಗಳಿಗೆ ಇದ್ದರೆ ಇಂತಹ ಪ್ರಕರಣಗಳು ಘಟಿಸುವುದಿಲ್ಲ. ಮನಸೋತು ಮತಾಂತರಗೊಳ್ಳುತ್ತಿದ್ದಾರೆಂದರೆ ಕೆಳವರ್ಗದವರೇ ಏಕೆ ಮನಸೋಲುತ್ತಿದ್ದಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. If you must share the Gospel with the Harijans, why don’t you share it with Takkar Bapa and Mahadev? Why should you go to the untouchables and try to exploit this upheavel? ಎಂದು ಬಹಳ ಹಿಂದೆಯೇ ಗಾಂಧೀಜಿ ತಮ್ಮ ಹರಿಜನ ಪತ್ರಿಕೆಯಲ್ಲಿ ಪ್ರಶ್ನಿಸಿದ್ದರು (19, 26 ಡಿಸೆಂಬರ್ 1936). ಮತಾಂತರದಿಂದ ಪ್ರಪಂಚದಲ್ಲಿ ಕ್ಷೋಭೆಯುಂಟಾಗುತ್ತದೆಯೇ ಹೊರತು ಶಾಂತಿ ನೆಲೆಸುವುದಿಲ್ಲ ಎಂದು ಗಾಂಧೀಜಿ ಪ್ರತಿಪಾದಿಸುತ್ತಿದ್ದರು. ಧರ್ಮ ವ್ಯಕ್ತಿಯ ಖಾಸಗಿ ವಿಷಯ. ಪ್ರತಿಯೊಬ್ಬರೂ ತಂತಮ್ಮ ಧರ್ಮಗಳಲ್ಲಿರುವ ಒಳ್ಳೆಯ ವಿಚಾರಗಳನ್ನು ಇನ್ನೊಬ್ಬ ಧರ್ಮೀಯರೊಂದಿಗೆ ಹಂಚಿಕೊಳ್ಳಬೇಕೇ ಹೊರತು ಇನ್ನೊಂದು ಧರ್ಮದವರು ಕಗ್ಗತ್ತಲಲ್ಲಿ ಇದ್ದಾರೆಂದು ಹೀಗಳೆಯುವುದು, ಟೀಕಿಸುವುದು, ತನ್ನ ಧರ್ಮದಿಂದ ಮಾತ್ರ ಬೆಳಕು ಕಾಣಲು ಸಾಧ್ಯ ಎಂದು ಜಂಬ ಕೊಚ್ಚಿಕೊಳ್ಳುವುದು ಸರಿಯಲ್ಲ. ನೀನು ಕ್ರೈಸ್ತನಾಗಿದ್ದರೆ ಒಳ್ಳೆಯ ಕ್ರೈಸ್ತನಾಗು, ಮುಸಲ್ಮಾನನಾಗಿದ್ದರೆ ಒಳ್ಳೆಯ ಮುಸಲ್ಮಾನನಾಗು, ಹಿಂದೂ ಆಗಿದ್ದರೆ ಒಳ್ಳೆಯ ಹಿಂದೂ ಆಗು ಎಂದು ಗಾಂಧೀಜಿ ಹೇಳುತ್ತಿದ್ದರು. ಯಾರು ಯಾವ ಧರ್ಮದವರೇ ಆಗಿರಲಿ ಇಂದು ಮನುಷ್ಯನಿಗೆ ನೈತಿಕ ನಡವಳಿಕೆಗಳು ಮುಖ್ಯವಾಗಬೇಕು. ಅದನ್ನು ಬಿಟ್ಟು ಮಂದಿರ-ಮಸೀದಿ-ಚರ್ಚುಗಳಲ್ಲಿ ನಡೆಯುವ ವಿಶಿಷ್ಟ ಪೂಜಾಪದ್ಧತಿಗಳೇ ಪ್ರಮುಖವೆಂದು ಭಾವಿಸಿ ಹೊರಟರೆ ಇಂತಹ ಘರ್ಷಣೆಗಳು ತಪ್ಪಿದ್ದಲ್ಲ, ಅವು ರಕ್ತಪಾತಕ್ಕೆ ಎಡೆಮಾಡಿಕೊಡುತ್ತವೆ. ಇದೆಲ್ಲಕ್ಕೂ ಮಿಗಿಲಾಗಿ ಧರ್ಮ ಮತ್ತು ದೇವರ ನಂಬಿಕೆಗಳನ್ನೇ ಬುಡಮೇಲುಗೊಳಿಸುತ್ತವೆ ಎಂದು ಗಾಂಧೀಜಿ ಬಹಳ ಹಿಂದೆಯೇ ಎಚ್ಚರಿಸಿದ್ದರು. (ಹರಿಜನ 30.1.1937) ಗಾಂಧೀಜಿಯವರ ಆಶ್ರಮದಲ್ಲಿ ಹಿಂದೂಗಳಲ್ಲದೆ ಕ್ರೈಸ್ತ, ಮುಸಲ್ಮಾನ್, ಪಾರ್ಸಿ ಮೊದಲಾದ ಅನೇಕ ಧರ್ಮದವರೂ ಇದ್ದರು. ಯಾವ ಮತಾಂತರಕ್ಕೂ ಅಲ್ಲಿ ಅವಕಾಶವಿರಲಿಲ್ಲ. ಎಲ್ಲ ಧರ್ಮಗಳೂ ಸಮಾನ, ದೈವೀಪ್ರೇರಿತ ಎಂದು ನಂಬಿದ್ದು, ಯಾವುದೇ ಧರ್ಮ ಶ್ರೇಷ್ಠ, ಕನಿಷ್ಠ ಎಂಬ ಭಾವನೆ ಆಶ್ರಮವಾಸಿಗಳಲ್ಲಿ ಇರಲಿಲ್ಲ. ಯಾರ ಮೇಲೂ ಹಿಂದೂ ಧರ್ಮವನ್ನು ಹೇರಿದ್ದಿಲ್ಲ. ತಂತಮ್ಮ ಧರ್ಮಗ್ರಂಥಗಳನ್ನು ಓದಲು ಮತ್ತು ಇತರೆ ಧರ್ಮಗಳ ಬಗ್ಗೆ ತಿಳಿದುಕೊಳ್ಳಲು ಪ್ರೋತ್ಸಾಹಿಸಲಾಗುತ್ತಿತ್ತು. ಇದರಿಂದ ಅವರು ಆಶ್ರಮಕ್ಕೆ ಬರುವುದಕ್ಕೆ ಮುಂಚೆ ತಂತಮ್ಮ ಧರ್ಮಗಳ ಬಗ್ಗೆ ಎಷ್ಟು ತಿಳಿದುಕೊಂಡಿದ್ದರೋ ಅದಕ್ಕಿಂತ ಹೆಚ್ಚಿಗೆ ತಿಳಿದುಕೊಳ್ಳಲು ಮತ್ತು ಇತರೆ ಧರ್ಮಗಳ ಬಗ್ಗೆ ಗೌರವ ಭಾವನೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು ಎಂದು ಗಾಂಧೀಜಿ ಬರೆಯುತ್ತಾರೆ.

ಹಿಂದೂಗಳಲ್ಲಿರುವಂತೆ ಕ್ರೈಸ್ತರಲ್ಲಿಯೂ ಅನೇಕ ಪಂಥಗಳಿವೆ. ವಿಭಿನ್ನ ವಿಚಾರಧಾರೆಗಳಿವೆ. ಅವುಗಳನ್ನು ಪ್ರತಿನಿಧಿಸುವ ವಿಭಿನ್ನ ಚರ್ಚುಗಳಿವೆ. ವಿಭಿನ್ನ ಪಂಥದವರು ಒಂದೆಡೆ ಸೇರಿ ಪರಸ್ಪರ ನಡೆಸುವ ಸಂವಾದಕ್ಕೆ Ecumenism ಎಂದು ಕರೆಯುತ್ತಾರೆ. ಅಂತಹ ಒಂದು ಧಾರ್ಮಿಕ ಸಂವಾದ 1978ರ ಆಗಸ್ಟ್‌ ತಿಂಗಳಲ್ಲಿ ಜರ್ಮನಿಯ ಬಯರ್ನ್ (Bayern) ಪ್ರಾಂತ್ಯದಲ್ಲಿರುವ ನೀಡರ್ ಆಲ್ ಟೈಕ್ (Niederaltaich) ಎಂಬ ನಗರದಲ್ಲಿ ಏರ್ಪಾಡಾಗಿತ್ತು. ಆಗ ನೆರೆಯ ದೇಶವಾದ ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ನಾವು ಕ್ರೈಸ್ತ ಸ್ನೇಹಿತರೊಂದಿಗೆ ಅಲ್ಲಿಗೆ ಹೋಗಿದ್ದೆವು. ಸಂವಾದ ನಡೆದ ಸ್ಥಳ ಬೆನೆಡಿಕ್ಟಿನ್ ಪರಂಪರೆಗೆ ಸೇರಿದ ಕ್ರೈಸ್ತಸಂನ್ಯಾಸಿಗಳ ಒಂದು ಸಂಸ್ಥೆ(okumenisehes Institut). ಆ ಸಂವಾದದಲ್ಲಿ ಭಾಗವಹಿಸಿದವರೆಲ್ಲರೂ ನಮ್ಮನ್ನು ಹೊರತುಪಡಿಸಿ ಕ್ರೈಸ್ತಧರ್ಮದವರೇ ಆಗಿದ್ದರು. ನಮಗೆ ಅವರು ವಿದೇಶೀಯರಾಗಿ ಕಂಡರೆ ಅವರಿಗೆ ನಾವು ವಿದೇಶೀಯರಾಗಿದ್ದೆವು. ಅವರ ಮಾತೃಭಾಷೆಯಾದ ಜರ್ಮನ್ನಲ್ಲಿ ನಾವು ಮಾತನಾಡುವುದನ್ನು ಕಂಡು ಸಹಜವಾಗಿಯೇ ಅವರಿಗೆ ನಮ್ಮ ಬಗ್ಗೆ ಕುತೂಹಲ ಉಂಟಾಯಿತು. ಎಂದೂ ಭಾರತವನ್ನು ನೋಡರಿಯದ ಅವರು ನಮ್ಮ ಧರ್ಮದಲ್ಲಿ ಪ್ರಾರ್ಥನಾ ಪದ್ಧತಿ ಹೇಗಿದೆಯೆಂದು ತಿಳಿದುಕೊಳ್ಳಬೇಕೆಂಬ ತೀವ್ರ ಆಸಕ್ತಿಯನ್ನು ವ್ಯಕ್ತಪಡಿಸಿದರು. ಅದರ ವಿವರಣೆಯನ್ನು ಪಡೆದ ಮೇಲೆ ನಾವು ನಿತ್ಯವೂ ಮಾಡುವ ಇಷ್ಟಲಿಂಗಪೂಜೆಯನ್ನು ಮಾಡಿ ತೋರಿಸಬೇಕೆಂದು ಬಯಸಿದರು. ಅವರ ಒತ್ತಾಯ ನಮ್ಮನ್ನು ಸಂದಿಗ್ಧತೆಗೆ ಎಡೆಮಾಡಿಕೊಟ್ಟಿತು. ಎಲ್ಲರೆದುರಿಗೆ ವೇದಿಕೆಯ ಮೇಲೆ ಕುಳಿತು ಲಿಂಗಪೂಜೆಯಲ್ಲಿ ತೊಡಗಿದರೆ ಅದೊಂದು ಪ್ರದರ್ಶನವಾಗುತ್ತದೆ. ಸಹಜವಾದ ಪೂಜೆ ಎನಿಸುವುದಿಲ್ಲ. ಹಾಗೆಂದು ನಿರಾಕರಿಸುವುದೂ ನಮಗೆ ಕಷ್ಟವಾಗಿತ್ತು. ಎಲ್ಲಿ ಹೇಳಿದರಲ್ಲಿ ವ್ಯವಸ್ಥೆ ಮಾಡುವುದಾಗಿ ಬೆನೆಡಿಕ್ಟಿನ್ ಸಂನ್ಯಾಸಿ ಹೇಳಿದರು. ತುಂಬಾ ಆಲೋಚನೆ ಮಾಡಿ ಸಂವಾದ ನಡೆಯುವ ಸಭೆಯಲ್ಲಿ ಮಾಡಲು ಒಪ್ಪದೆ ಅವರ ಚರ್ಚಿನೊಳಗಿದ್ದ ಒಂದು ಪುಟ್ಟ ಪ್ರಾರ್ಥನಾ ಕೊಠಡಿ (Chapel) ಒಳಗೆ ಮಾಡಲು ಸಮ್ಮತಿಸಿದೆವು. ಮಾರನೆಯ ದಿನ ಬೆಳಿಗ್ಗೆ ನಿತ್ಯ ಪೂಜೆ ಮಾಡುವ ವೇಳೆಯಲ್ಲಿ ಮಾಡುವುದಾಗಿಯೂ ಆಸಕ್ತರು ಸ್ನಾನಮಾಡಿಕೊಂಡು ಬಂದು ಪೂಜೆಯಲ್ಲಿ ಭಾಗವಹಿಸಬಹುದೆಂದು ಸೂಚಿಸಿದೆವು. ಪ್ರಾರ್ಥನಾ ಕೊಠಡಿಯಲ್ಲಿ ನಾವು ಪೂಜೆಗೆ ಕುಳಿತುಕೊಳ್ಳಲು ಆಯ್ಕೆ ಮಾಡಿಕೊಂಡ ಸ್ಥಳದ ಹಿಂಭಾಗದ ಕಟ್ಟೆಯ ಮೇಲೆ ಒಂದು ಶಿಲುಬೆ ಇತ್ತು. ಅದರಿಂದ ತಮ್ಮ ಪೂಜೆಗೆ ಏನೂ ತೊಂದರೆಯುಂಟಾಗುವುದಿಲ್ಲವೇ ಎಂದು ಬೆನೆಡಿಕ್ಟಿನ್ ಸಂನ್ಯಾಸಿ ನಮ್ಮನ್ನು ಕೇಳಿದರು. ಆಗ ತಟ್ಟನೆ ನಮ್ಮ ನೆನಪಿಗೆ ಬಂದದ್ದು ನಿನ್ನ ವಿಷ್ಣು ಅರಮನೆಯ ಈ ಕಂಬದಲ್ಲಿ ಇದ್ದಾನೆಯೇ? ಎಂದು ಹಿರಣ್ಯಕಶಿಪು ಬಾಲಕ ಪ್ರಹ್ಲಾದನನ್ನು ಕೇಳಿದ ಪ್ರಶ್ನೆ. ದೈವಭಕ್ತ ಪ್ರಹ್ಲಾದನ ಕಥೆಯನ್ನು ಆ ಪಾದ್ರಿಗೆ ವಿವರಿಸಿ ನಂಬಿದ ಭಕ್ತನಿಗೆ ಅರಮನೆಯ ಕಂಬದಲ್ಲಿ ದೇವರು ಕಾಣಬಹುದಾದರೆ ಚರ್ಚಿನ ಶಿಲುಬೆಯಲ್ಲಿಯೂ ಇರಲೇಬೇಕಲ್ಲವೇ? ಆದಕಾರಣ ನಮಗೆ ಯಾವ ತೊಂದರೆಯೂ ಇಲ್ಲವೆಂದು ಸ್ಪಷ್ಟವಾಗಿ ಹೇಳಿದೆವು. ಆದರೆ ವಾಸ್ತವವಾಗಿ ತೊಂದರೆ ಇದ್ದದ್ದು ಆ ಬೆನೆಡಿಕ್ಟಿನ್ ಸಂನ್ಯಾಸಿಗೆ. ಮಾರನೆಯ ದಿನ ಬೆಳಿಗ್ಗೆ ಸ್ನಾನ ಮಾಡಿ ಮಡಿಯುಟ್ಟು ಆ ಪ್ರಾರ್ಥನಾ ಕೊಠಡಿಗೆ ಲಿಂಗಪೂಜೆಗೆಂದು ಬಂದಾಗ ಸುತ್ತಲೂ ಅನೇಕ ಕ್ರೈಸ್ತಧರ್ಮೀಯರು ಕುಳಿತಿದ್ದರು. ಆದರೆ ಅಲ್ಲಿ ನಿನ್ನೆ ಇದ್ದ ಶಿಲುಬೆಯೇ ಇರಲಿಲ್ಲ! ಪೂಜೆ ಮುಗಿದ ಮೇಲೆ ಖಾಸಗಿಯಾಗಿ ಕೇಳಿದಾಗ ಆ ಬೆನೆಡಿಕ್ಟಿನ್ ಸಂನ್ಯಾಸಿ ಕೊಟ್ಟ ಉತ್ತರ: ನಮ್ಮ ಧರ್ಮದವರು ಅನೇಕರು ಈ ಶಿಲುಬೆಯನ್ನು ತುಂಬಾ ಭಕ್ತಿಯಿಂದ ಆರಾಧಿಸುತ್ತಾರೆ ಹರಕೆಯನ್ನು ಮಾಡಿಕೊಳ್ಳುತ್ತಾರೆ. ಇದರಿಂದ ಅವರ ಇಚ್ಟಾರ್ಥಸಿದ್ಧಿಗಳು ನೆರವೇರಿವೆ. ಅದರ ಮುಂದೆ ಅನ್ಯಧರ್ಮೀಯರಾದ ತಾವು ಕುಳಿತು ಮಾಡುವ ಲಿಂಗಪೂಜೆಯಿಂದ ನಮ್ಮ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಬಾರದೆಂಬ ಕಾರಣದಿಂದ ಅದನ್ನು ಪಕ್ಕದ ಕೊಠಡಿಗೆ ಸ್ಥಳಾಂತರಿಸಿದೆ. ಆ ಪಾದ್ರಿಯ ಪ್ರಾಮಾಣಿಕ ಉತ್ತರನಮ್ಮನ್ನು ಆಲೋಚನಾಪರರನ್ನಾಗಿಸಿತು. ಈ ಪ್ರಕರಣವನ್ನು ಕುರಿತು ಪರ ಮತ್ತು ವಿರೋಧವಾಗಿ ಎರಡೂ ರೀತಿಯಿಂದಲೂ ವಾದ-ವಿವಾದ ಮಂಡಿಸಲು ಬರುತ್ತದೆ. ನಮ್ಮ ಭಾವನೆಗಳನ್ನು ಗೌರವಿಸಿ ನಾವು ಬಯಸಿದ ಜಾಗದಲ್ಲಿ ಪೂಜೆಗೆ ಅನುವು ಮಾಡಿಕೊಟ್ಟ ಪಾದ್ರಿ ವಿಶಾಲಹೃದಯಿ ಎಂದು ಹೊಗಳಲೂ ಬರುತ್ತದೆ; ಶಿಲುಬೆಯನ್ನು ಸ್ಥಳಾಂತರಗೊಳಿಸಿ ಸಣ್ಣತನವನ್ನು ಪ್ರದರ್ಶಿಸಿದನೆಂದು ತೆಗಳಲೂ ಬರುತ್ತದೆ. ಆದರೆ ಮುಪ್ಪಿನ ಷಡಕ್ಷರಿಯವರ ಕೈವಲ್ಯ ಪದ್ಧತಿಯ ಈ ಕೆಳಗಿನ ಪದ್ಯವನ್ನು ಓದಿ ಮನದಟ್ಟು ಮಾಡಿಕೊಂಡರೆ ಯಾರಿಗೂ ಯಾವ ಗೊಂದಲವೂ ಇರಲಾರದು:

ಸಕಲಕ್ಕೆಲ್ಲಕೆ ನೀನೆ ಅಕಳಂಕ ಗುರುವೆಂದು 
ನಿಖಿಳಶಾಸ್ತ್ರವು ಪೇಳುತಿರಲರಿದೆನು.
ಅವರವರ ದರುಶನಕೆ ಅವರವರ ವೇಷದಲಿ 
ಅವರವರಿಗೆಲ್ಲ ಗುರು ನೀನೊಬ್ಬನೆ 
ಅವರವರ ಭಾವಕ್ಕೆ ಅವರವರ ಪೂಜೆಗಂ 
ಅವರವರಿಗೆಲ್ಲ ಶಿವ ನೀನೊಬ್ಬನೆ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 22.10.2008.