ದ್ವೇಷ-ವೈಷಮ್ಯಗಳ ಅಡ್ಡಗೋಡೆಗಳನ್ನು ಕೆಡವಿಹಾಕಿರಿ!
ಪೃಥ್ವಿ ಶಾಂತಿಃ, ಅಂತರಿಕ್ಷಗ್ಂ ಶಾಂತಿಃ
ದ್ಯೌಃ ಶಾಂತಿಃ, ದಿಶಃ ಶಾಂತಿಃ, ಅವಾಂತರದಿಶಾಃ ಶಾಂತಿಃ
ಅಗ್ನಿಃ ಶಾಂತಿಃ, ವಾಯುಃ ಶಾಂತಿಃ,
ಆದಿತ್ಯಃ ಶಾಂತಿಃ, ಚಂದ್ರಮಾಃ ಶಾಂತಿಃ, ನಕ್ಷತ್ರಾಣಿ ಶಾಂತಿಃ
ಆಪಃ ಶಾಂತಿಃ, ಓಷಧಯಃ ಶಾಂತಿಃ, ವನಸ್ಪತಯಃ ಶಾಂತಿಃ
ಗೌಃ ಶಾಂತಿಃ, ಅಜಾಃ ಶಾಂತಿಃ, ಅಶ್ವಃ ಶಾಂತಿಃ,
ದ್ವಿಪದೇ ಚತುಷ್ಪದೇ ಚ ಶಾಂತಿಂ ಕರೋಮಿ
ಶಾಂತಿರ್ಮೇsಸ್ತು ಶಾಂತಿಃ!
(ನೆಲೆಸಲಿ ಶಾಂತಿ ಭೂಮಂಡಲದಲ್ಲಿ,
ಮುಗಿಲು ಆಕಾಶಗಳಲ್ಲಿ, ದಶದಿಕ್ಕುಗಳಲ್ಲಿ,
ಅಗ್ನಿಯಲ್ಲಿ, ವಾಯುವಿನಲ್ಲಿ,
ಸೂರ್ಯ-ಚಂದ್ರ-ನಕ್ಷತ್ರಗಳಲ್ಲಿ
ಜಲದಲ್ಲಿ, ಗಿಡಮರಬಳ್ಳಿಗಳಲ್ಲಿ
ಪಶುಪಕ್ಷಿಪ್ರಾಣಿಗಳಲ್ಲಿ
ನೆಲೆಸಲಿ ಶಾಂತಿ ನನ್ನೊಳಗಿನ ಚೇತನದಲ್ಲಿ!)
ಸಹಸ್ರಾರು ವರ್ಷಗಳಿಂದ ಹಿಂದೂ ಮಠಮಂದಿರಗಳಲ್ಲಿ ಪಠಿಸಿಕೊಂಡು ಬಂದಿರುವ ಯಜುರ್ವೇದದ ಈ ಶಾಂತಿಮಂತ್ರ ಅಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿದೆ. ವೇದೋಪನಿಷತ್ತುಗಳ ಕಾಲದಲ್ಲಿ ಜನರು ಸೇವಿಸುತ್ತಿದ್ದ ಗಾಳಿ, ನೀರು, ಆಹಾರ ಇಂದಿನಷ್ಟು ಕಲುಷಿತಗೊಂಡಿರಲಿಲ್ಲ. ಸುತ್ತಣ ಪರಿಸರ ಇಷ್ಟೊಂದು ವಿನಾಶಗೊಂಡಿರಲಿಲ್ಲ. ಇಂದಿನ ಪರಿಸ್ಥಿತಿಯನ್ನು ಮನಗಂಡೇ ಅಂದಿನ ದ್ರಷ್ಟಾರರಾದ ಋಷಿಮುನಿಗಳು ಈ ಮಂತ್ರವನ್ನು ನುಡಿದಂತಿದೆ. ಪ್ರಕೃತಿಯ ಮೇಲೆ ಅವರಿಗಿದ್ದ ಪ್ರೀತಿ, ಮನುಕುಲದ ಬಗ್ಗೆ ಅವರಿಗಿದ್ದ ಕಾಳಜಿ, ಪಶುಪಕ್ಷಿಪ್ರಾಣಿಗಳ ಬಗ್ಗೆ ಅವರಿಗಿದ್ದ ಅನುಕಂಪೆ ವರ್ಣಿಸಲಸದಳ. ಇವೆಲ್ಲವೂ ತಮ್ಮ ಅನುಕೂಲಕ್ಕಾಗಿ ಇವೆಯೆಂಬ ಸ್ವಾರ್ಥಭಾವನೆ ಅವರಲ್ಲಿ ಇರಲಿಲ್ಲ. ತಮ್ಮಂತೆಯೇ ಅವೂ ಸಹ ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಿಕೊಡಬೇಕೆಂಬ ವಿಶಾಲ ಹೃದಯ ಅವರಲ್ಲಿತ್ತು. ಜಗತ್ತಿನ ಅಶಾಂತಿಗೆ ತನ್ನೊಳಗಿನ ಅಶಾಂತಿಯೇ ಕಾರಣವೆಂಬುದನ್ನು ಅವರು ಮನಗಂಡಿದ್ದರು. “ಶಾಂತಿರ್ಮೇsಸ್ತು ಶಾಂತಿಃ” (ನೆಲಸಲಿ ಶಾಂತಿ ಎನ್ನೊಳಗೆ) ಎನ್ನುವಾಗ ಹೊರಗೆ ಶಾಂತಿ ನೆಲೆಸಬೇಕೆಂದರೆ ಮೊದಲು ತನ್ನೊಳಗೆ ಶಾಂತಿ ನೆಲೆಸಬೇಕೆಂಬುದರ ಸ್ಪಷ್ಟ ಅರಿವು ಅವರಿಗಿತ್ತು.
ಭಾರತ ಶಾಂತಿಪ್ರಿಯರಾಷ್ಟ್ರವೆಂಬುದನ್ನು ಜಗತ್ತಿಗೆ ಸಾಬೀತು ಮಾಡಿಕೊಡಬೇಕಾಗಿದೆ. ಇನ್ನೊಂದು ದಿನ ಕಳೆದರೆ ಅಲಹಾಬಾದ್ ಹೈಕೋರ್ಟಿನ ತೀರ್ಪು ಹೊರಬೀಳಲಿದೆ. ಏನೆಂದು ತೀರ್ಪು ಬರುತ್ತದೆ ಎಂಬುದಕ್ಕಿಂತ ತೀರ್ಪಿನ ಪರಿಣಾಮ ಎಲ್ಲಿ ಏನಾಗಬಹುದೆಂಬ ಆತಂಕ, ಕಳವಳ ಇಡೀ ದೇಶದ ಜನರ ಮನಸ್ಸಿನಲ್ಲಿದೆ. ತೀರ್ಪು ಏನೇ ಬಂದರೂ ಅತ್ತ ಪುಲಿ, ಇತ್ತ ದರಿ ಎನ್ನುವ ವಾತಾವರಣ. ರಾಮಜನ್ಮ ಭೂಮಿ ಮತ್ತು ಬಾಬರಿ ಮಸೀದಿಯು ಅನೇಕ ಶತಮಾನಗಳಿಂದ ಒಂದು ಸ್ಥಳೀಯ ಸಮಸ್ಯೆಯಾಗಿದ್ದು ಕಳೆದ ಎರಡು ದಶಕಗಳಿಂದ ಅದೊಂದು ಜಟಿಲವಾದ ರಾಷ್ಟ್ರೀಯ ಸಮಸ್ಯೆಯಾಗಿದೆ. ಅಂತರರಾಷ್ಟ್ರೀಯ ಗಮನವನ್ನೂ ಸೆಳೆದಿದೆ. ಒಂದು ಕಡೆ ಮಸೀದಿಯನ್ನು ಕೆಡವಿದರೆ ಮತ್ತೊಂದು ಕಡೆ ಮಂದಿರವನ್ನು ಕೆಡವಲಾಗಿದೆ. ಇಂದಿನ ದಿನಮಾನಗಳಲ್ಲಿ ಜನರ ಮನಸೂ ಸಹ ಎಷ್ಟೊಂದು ಕುಲುಷಿತವಾಗಿದೆಯೆಂದರೆ ಮುಷ್ಕರ, ಗಲಭೆ, ಜಾಥಾ, ಇರಿತ, ಕೊಲೆ, ಸುಲಿಗೆ, ಲಾಠಿ ಪ್ರಹಾರ, ಗೋಲೀಬಾರ್, ಕರ್ಪ್ಯೂ, ಮಂತ್ರಿಮಂಡಲ ಪುನಾರಚನೆ, ಸರ್ಕಾರದ ಪತನ, ರಾಷ್ಟ್ರಪತಿ ಆಡಳಿತ, ಚುನಾವಣೆ ಇತ್ಯಾದಿ ಸುದ್ದಿಗಳು ಇಲ್ಲದೇ ಹೋದರೆ ಆ ದಿನದ ಪತ್ರಿಕೆ ತುಂಬಾ ನೀರಸ. "ಅಂಥಾ ಹೇಳಿಕೊಳ್ಳುವಂತಹ ಸುದ್ದಿ ಏನೂ ಇಲ್ಲ!” ಎಂದೇ ಬೆಳಗಿನ ಟೀ ಗುಟುಕರಿಸುತ್ತಾ ಉದ್ದರಿಸುತ್ತಾರೆ. ಅಯೋಧ್ಯೆಯಲ್ಲಿ ಮಸೀದಿಯನ್ನು ಕೆಡವಿದ್ದು ಹೇಳಿಕೊಳ್ಳುವಂಥಾ ಸುದ್ದಿಯೇ? ಪಾಕಿಸ್ತಾನದಲ್ಲಿ ಮಂದಿರಗಳನ್ನು ಕೆಡವಿದ್ದು ಹೇಳಿಕೊಳ್ಳುವಂಥಾ ಸುದ್ದಿಯೇ ?
ಅಜ್ಞಾನಿ ಜನರ ಧಾರ್ಮಿಕ ದುರ್ಭಾವನೆಗಳು ವಿಜ್ಞಾನಿಯ ಅಣುಬಾಂಬಿಗಿಂತಲೂ ಹೆಚ್ಚು ಅಪಾಯಕಾರಿ ಮತ್ತು ಆಸ್ಫೋಟಕಾರಿ ಎಂಬುದನ್ನು ನಾವು ಈ ಪ್ರಕರಣಗಳಿಂದ ಮನಗಾಣಬಹುದಾಗಿದೆ. ಎರಡನೇ ಮಹಾಯುದ್ದದಲ್ಲಿ ಅಣುಬಾಂಬಿನ ದಾಳಿಯಿಂದ ತತ್ತರಿಸಿದ ಜಪಾನ್ ದೇಶವು ಮತ್ತೆ ಚೇತರಿಸಿಕೊಂಡು ತಲೆ ಎತ್ತಿ ನಿಂತಿದೆ. ಆದರೆ ಶತಮಾನಗಳಿಂದ ಬೆಳೆದು ಬಂದಿರುವ ಹಿಂದೂ-ಮುಸ್ಲಿಮರ ವಿದ್ವೇಷದ ದಳ್ಳುರಿಯಿಂದ ಭಾರತವು ಮಾತ್ರ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂದಿನ ಜಾತೀಯ ಮತ್ತು ಮತೀಯ ರಾಜಕಾರಣವನ್ನು ಗಮನಿಸಿದರೆ ಮುಂದೆ ಚೇತರಿಸಿಕೊಳ್ಳಬಹುದೆಂಬ ನಂಬಿಕೆಯೂ ಉಳಿದಿಲ್ಲ. ಮುಂದಾಳುಗಳು ಎನಿಸಿಕೊಂಡವರು, ಅವರು ರಾಜಕೀಯ ಮುಖಂಡರೇ ಇರಲಿ, ಧಾರ್ಮಿಕ ಮುಖಂಡರೇ ಇರಲಿ, ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ನಮ್ಮ ದೇಶದ ಜನಸಾಮಾನ್ಯರ ಒಂದು ದೊಡ್ಡ ಗುಣವೆಂದರೆ ಮುಂದಾಳುಗಳ ಮೇಲೆ ಅಪಾರ ವಿಶ್ವಾಸವನ್ನಿಟ್ಟು ಅವರು ಕರೆದತ್ತ ಹೋಗುವುದು. ಅನೇಕ ಸಂದರ್ಭಗಳಲ್ಲಿ ಜನಸಾಮಾನ್ಯರ ತಪ್ಪು ಏನೂ ಇರುವುದಿಲ್ಲ. ಆದರೆ ಅವರ ಭಾವನೆಗಳನ್ನು ಕೆರಳಿಸಿ, ಅವರನ್ನು ಪ್ರಚೋದಿಸಿ, ಪರಿಸ್ಥಿತಿಯು ಹದಗೆಟ್ಟಾಗ “ಉದ್ರಿಕ್ತ ಗುಂಪು” “ಸಮಾಜ ಘಾತುಕ ಶಕ್ತಿಗಳ ಕೈವಾಡ” ಎಂದೆಲ್ಲಾ ಬೇರೆಯವರ ಮೇಲೆ ತಪ್ಪನ್ನು ಹೊರಿಸಿ, ತಮ್ಮ ತಪ್ಪನ್ನು ಮರೆಮಾಚುವ ಹೊಣೆಗೇಡಿ ವರ್ತನೆ ಮುಂದಾಳುಗಳಿಂದ ನಡೆದಿದೆ. ಜನಸಾಮಾನ್ಯರ ವಿಶ್ವಾಸಕ್ಕೆ ದ್ರೋಹವನ್ನು ಬಗೆದು ಅವರ ಗೋರಿಗಳ ಮೇಲೆ ತಮ್ಮ ಮಹಲುಗಳನ್ನು ಕಟ್ಟಿಸಿಕೊಳ್ಳುವ ಸ್ವಾರ್ಥಸಾಧನೆಯ ಕೆಲಸ ಈಗ ಭಾರತದ ಉದ್ದಗಲಕ್ಕೂ ನಡೆದಿದೆ.
ಯಾವ ಧರ್ಮವೂ ಇನ್ನೊಂದು ಧರ್ಮದವರನ್ನು ದ್ವೇಷಿಸಬೇಕೆಂದು ಬೋಧಿಸುವುದಿಲ್ಲ. ಆದರೆ ಜಗತ್ತಿನ ಯಾವ ಭಾಗದಲ್ಲಿಯೂ ಒಂದು ಧರ್ಮದವರು ಮತ್ತೊಂದು ಧರ್ಮದವರೊಂದಿಗೆ ಜಗಳ ಕಾಯದೆ, ಕಾದಾಡದೆ ಬಿಟ್ಟಿಲ್ಲ. ಎಲ್ಲ ಧರ್ಮಗಳೂ ಮೂಲಭೂತವಾಗಿ ಮನುಷ್ಯನ ಮನಸ್ಸಿಗೆ ಶಾಂತಿಯನ್ನೂ, ನೆಮ್ಮದಿಯನ್ನೂ, ನಿತ್ಯ ಸುಖವನ್ನೂ ತಂದು ಕೊಡಲು ಹುಟ್ಟಿಕೊಂಡಿದ್ದರೂ ಎಲ್ಲಿ ನೋಡಿದರೂ ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಕಲಹ, ಕೋಲಾಹಲ, ಹಿಂಸಾಚಾರಗಳೇ ನಡೆಯುತ್ತಾ ಬಂದಿವೆ. ಇದಕ್ಕೆ ಕಾರಣ ಧರ್ಮಗಳಲ್ಲ. ಧರ್ಮಗಳು ನೈಜ ಧರ್ಮಗಳಾಗಿ ಉಳಿಯದೆ ಮತ ಧರ್ಮಗಳಾಗಿ, ಜಾತಿ ಉಪಜಾತಿಗಳಾಗಿ ಪರಿಣಮಿಸಿ, ಜನರು ಗೊಡ್ಡು ಸಂಪ್ರದಾಯಗಳಿಗೆ ಕಟ್ಟುಬಿದ್ದು, ಸಂಪ್ರದಾಯಗಳ ಹಿಂದೆ ಇರುವ ಸದಾಶಯಗಳನ್ನು ನಿರ್ಲಕ್ಷಿಸಿರುವುದು ಇಂತಹ ದುರ್ಘಟನೆಗಳಿಗೆ ಮೂಲ ಕಾರಣವಾಗಿದೆ. ಎಷ್ಟೋ ವೇಳೆ ಇಬ್ಬರ ವೈಯಕ್ತಿಕ ದ್ವೇಷಾಸೂಯೆಗಳು ಎರಡು ಕೋಮುಗಳ ಮಧ್ಯೆ ಸಂಘರ್ಷ ಮತ್ತು ಹಿಂಸಾಚಾರಗಳಿಗೆ ಎಡೆ ಮಾಡಿಕೊಟ್ಟ ಉದಾಹರಣೆಗಳು ಅನೇಕ ಇವೆ. ಜಗಳ ಎಲ್ಲಿ ಆಗುವುದಿಲ್ಲ? ಒಂದು ಊರಿನಲ್ಲಿ ಆಗುವುದಿಲ್ಲವೇ? ಒಂದು ಕೇರಿಯಲ್ಲಿ ಆಗುವುದಿಲ್ಲವೇ? ಒಂದು ಮನೆಯಲ್ಲಿ ಆಗುವುದಿಲ್ಲವೇ? ಹೆಚ್ಚೇನು ಹೇಳುವುದು; ಪರಸ್ಪರ ಪ್ರೀತಿಸಿ ಮದುವೆಯಾದ ಗಂಡ-ಹೆಂಡಿರ ಮಧ್ಯೆ ಆಗುವುದಿಲ್ಲವೇ? ಒಬ್ಬರ ತಪ್ಪಿಗೆ ಮತ್ತೊಬ್ಬರು ಎಷ್ಟರ ಮಟ್ಟಿಗೆ ಹೊಣೆಗಾರರು ಎಂಬುದನ್ನು ಪರಸ್ಪರರು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಪ್ಪು ಮಾಡಿದ ವ್ಯಕ್ತಿಗೆ ತನ್ನ ತಪ್ಪಿನ ಅರಿವು ಇರುವುದಿಲ್ಲ. ಒಂದು ಪಕ್ಷ ಇದ್ದರೂ ತನ್ನದೇ ಸರಿ ಎಂದು ಸಾಧಿಸುವ ಮೊಂಡುತನವೂ ಇರುತ್ತದೆ. ಪಕ್ಕದ ಮನೆಯ ಮಗುವಿನೊಂದಿಗೆ ಜಗಳವಾಡಿಕೊಂಡು ಬಂದ ತನ್ನ ಮಗುವನ್ನೇ ತಾಯಿಯಾದವಳು ಶಿಕ್ಷಿಸಬೇಕೇ ಹೊರತು, ತನ್ನ ಮಗುವಿನ ಮೇಲಿನ ವ್ಯಾಮೋಹದಿಂದ ನೆರಮನೆಯ ಮಗುವಿನ ತಾಯಿಯೊಂದಿಗೆ ಜಗಳಕ್ಕೆ ಇಳಿಯಬಾರದು. ಒಂದು ಪಕ್ಷ ತನ್ನ ಮಗುವಿನ ತಪ್ಪು ಏನೂ ಇಲ್ಲವೆಂದು ಕಂಡು ಬಂದರೂ, ತನ್ನ ಮಗುವನ್ನೇ ಎಚ್ಚರಿಸಬೇಕು. ಅಂತಹ ಸಂದರ್ಭಗಳನ್ನು ತಂದುಕೊಳ್ಳದಿರಲು ಮಗುವಿನ ಮೈದಡವಿ ವಿವೇಕ ಹೇಳಬೇಕು. ಈ ಕಾರ್ಯವನ್ನು ನಮ್ಮ ನಾಡಿನ ಎಲ್ಲ ಧರ್ಮಗುರುಗಳೂ ತಮ್ಮ ತಮ್ಮ ಮತಧರ್ಮದ ಅನುಯಾಯಿಗಳು ಅನುಸರಿಸುವಂತೆ ಮಾಡಿದ್ದರೆ ಪ್ರಾಯಶಃ ಇಂತಹ ದುಷ್ಪ್ರಸಂಗಗಳು ಒದಗಿ ಬರುತ್ತಿರಲಿಲ್ಲ. ಅಯೋಧ್ಯೆಯ ಘಟನಾವಳಿಗಳನ್ನು ಗಮನಿಸಿದರೆ ಧಾರ್ಮಿಕ ಲಾಂಛನಗಳನ್ನು ಧರಿಸಿದ ಅನೇಕ ಸಾಧು-ಸಂತರು, ಸ್ವಾಮಿಗಳು, ಮೌಲ್ವಿಗಳು ಪ್ರಚ್ಛನ್ನ ರಾಜಕಾರಣಿಗಳಾಗಿದ್ದಾರೆಂಬುದನ್ನು ತೋರಿಸಿಕೊಟ್ಟಿದ್ದಾರೆ.
ಹಿಂದೂ-ಮುಸ್ಲಿಮರ ದ್ವೇಷದ ದಳ್ಳುರಿಯಿಂದ ಇಂದು ದೇಶ ತತ್ತರಿಸಿ ಹೋಗಿದೆ. ಸಹಸ್ರಾರು ಅಮಾಯಕ ಜನರು ಈ ದ್ವೇಷದ ಜ್ವಾಲೆಯಲ್ಲಿ ಬೆಂದು ಹೋಗಿದ್ದಾರೆ. 1992 ರಲ್ಲಿ ದಾವಣಗೆರೆಯಲ್ಲಿ ಘಟಿಸಿದ ಹಿಂದೂ-ಮುಸ್ಲಿಂ ಘರ್ಷಣೆ ನೇರವಾಗಿ ಬಾಬರಿ ಮಸೀದಿ ವಿಧ್ವಂಸಗೊಂಡ ಕಾರಣದಿಂದ ಆಗಿದ್ದಲ್ಲ. ಇಬ್ಬರು ಬಿಸಿರಕ್ತದ ಯುವಕರ ಮಾತಿನ ಘರ್ಷಣೆಯಲ್ಲಿ ಒಬ್ಬನ ಕೊಲೆಯಾಗಿ ಭುಗಿಲೆದ್ದ ಕೋಮುಘರ್ಷಣೆ. ನಂತರ ಪೋಲೀಸರಿಂದ ನಡೆದ ಗೋಲಿಬಾರ್ ನಲ್ಲಿ 20 ಜನ ಅಮಾಯಕರ ಸಾವು. ಈ ಮಾರಣ ಹೋಮದಿಂದ ತತ್ತರಿಸಿದ್ದ ದಾವಣಗೆರೆಯಲ್ಲಿ ಶಾಂತಿ ನೆಲೆಸುವಂತೆ ಮಾಡಲು ನಮ್ಮ ಪ್ರಯತ್ನ, ಎರಡೂ ಜನಾಂಗಗಳ ಮುಖಂಡರೊಂದಿಗೆ ಸಮಾಲೋಚಿಸಿ ನಗರದ ಬೀದಿಗಳಲ್ಲಿ ನಡೆಸಿದ ಶಾಂತಿಪಾದಯಾತ್ರೆ ಈಗಲೂ ಜನಮಾನಸದ ನೆನಪಿನಲ್ಲಿದೆ. ತನ್ನ ಮಗನನ್ನು ಕಳೆದುಕೊಂಡ ದುಃಖಿತ ತಂದೆ ದಾರಿಯಲ್ಲಿ ನಮ್ಮ ದರ್ಶನಕ್ಕೆ ಬಂದಾಗ ಪಕ್ಕದಲ್ಲಿದ್ದ ಮುಸ್ಲಿಂ ವೃದ್ದರೊಬ್ಬರು ಅವರನ್ನು ಬಿಗಿದಪ್ಪಿ ಸಂತೈಸಿದ್ದು ಮರೆಯಲಾಗದ ದೃಶ್ಯ. ಅದೆಷ್ಟು ಜನ ತಾಯಂದಿರು ತಮ್ಮ ಪ್ರೀತಿಯ ಮಕ್ಕಳನ್ನು ಕಳೆದುಕೊಂಡಿದ್ದಾರೋ! ಅದೆಷ್ಟು ಜನ ಹೆಣ್ಣು ಮಕ್ಕಳು ತಮ್ಮ ಗಂಡಂದಿರನ್ನು ಕಳೆದುಕೊಂಡು ವಿಧವೆಯರಾಗಿ ನರಕಯಾತನೆಯನ್ನು ಅನುಭವಿಸುತ್ತಿದ್ದಾರೋ! ಸರ್ಕಾರವೇನೋ ಸಂತ್ರಸ್ತ ಕುಟುಂಬದವರಿಗೆ ಪರಿಹಾರ ಧನವನ್ನು ನೀಡುತ್ತದೆ. ಆದರೆ ಗತಿಸಿ ಹೋದ ಪ್ರಾಣಗಳನ್ನು ತಂದುಕೊಡಲು ಸಾಧ್ಯವೇ? ಮೃತ ಪರಿವಾರಗಳಿಗೆ ಶಾಂತಿ-ಸಮಾಧಾನಗಳನ್ನು ತಂದುಕೊಡಲು ಸಾಧ್ಯವೇ? ಇವರ ಕಣ್ಣೀರಿನ ಗೋಳನ್ನು ಯಾವ ಪರಿಹಾರ ಧನದಿಂದ ನಿವಾರಣೆ ಮಾಡಲು ಸಾಧ್ಯ? ಮುಸ್ಲಿಂ ತಾಯಿಯಾಗಲೀ, ಹಿಂದೂ ತಾಯಿಯಾಗಲಿ ಅವಳ ಹೃದಯದಲ್ಲಿರುವುದು ಒಂದೇ ಧರ್ಮ: ಅದುವೇ ತನ್ನ ಮಗುವಿನ ಮೇಲಿರುವ ಮಾತೃವಾತ್ಸಲ್ಯ! ತನ್ನ ಕರುಳ ಕುಡಿಯನ್ನು ಕಳೆದುಕೊಂಡಾಗ ಮುಸ್ಲಿಂ ತಾಯಿಗೆ ಒಂದು ರೀತಿಯ ವೇದನೆ, ಹಿಂದೂ ತಾಯಿಗೆ ಮತ್ತೊಂದು ರೀತಿಯ ವೇದನೆ ಆಗುವುದಿಲ್ಲ. ಮಾತೃವಾತ್ಸಲ್ಯಕ್ಕೆ ಹಿಂದೂ-ಮುಸ್ಲಿಂ ಎಂಬ ಭೇದವಿಲ್ಲ.
ನಮ್ಮ ದೇಶವು ಧರ್ಮನಿರಪೇಕ್ಷ ರಾಷ್ಟ್ರ. ಇಲ್ಲಿ ಎಲ್ಲ ಮತಧರ್ಮದವರಿಗೂ ಸಮಾನವಾಗಿ ಬದುಕುವ ಹಕ್ಕಿದೆ. ನಮ್ಮ ಸಂವಿಧಾನವು ಈ ರಾಷ್ಟ್ರದಲ್ಲಿರುವ ಪ್ರತಿಯೊಬ್ಬ ನಾಗರಿಕನ ಮತಧರ್ಮವನ್ನು ಗೌರವಿಸುತ್ತದೆಯೇ ಹೊರತು ಉಪೇಕ್ಷಿಸುವುದಿಲ್ಲ. ಈ ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನ ಧರ್ಮದಲ್ಲಿ ನಂಬುಗೆ, ವಿಶ್ವಾಸವನ್ನು ಇಟ್ಟುಕೊಳ್ಳಲು ಸ್ವತಂತ್ರನು. ಆದರೆ ಅವನ ಧರ್ಮವು ಯಾವುದೇ ಇರಲಿ ಅದು ರಾಷ್ಟ್ರ ಧರ್ಮಕ್ಕೆ ಚ್ಯುತಿಯನ್ನುಂಟು ಮಾಡಬಾರದು. ಆಯಾಯ ಧರ್ಮೀಯರು ಅವರವರ ಧರ್ಮಗ್ರಂಥಗಳನ್ನು ಗೌರವಿಸುವಂತೆಯೇ ಎಲ್ಲ ಧರ್ಮೀಯರು ಸಮಾನವಾಗಿ ಬದುಕುವ ಅವಕಾಶವನ್ನು ಕಲ್ಪಿಸಿಕೊಟ್ಟ ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಬೇಕು. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹಿಂದೂಗಳ ರಕ್ತವೂ ಹರಿದಿದೆ, ಮುಸ್ಲಿಮರ ರಕ್ತವೂ ಹರಿದಿದೆ, ಸಿಖ್ಖರ ರಕ್ತವೂ ಹರಿದಿದೆ. ಎಲ್ಲರ ಬಲಿದಾನದಿಂದ, ಕುರ್ಬಾನಿನಿಂದ ಪಡೆದ ಸ್ವಾತಂತ್ರವು ಒಂದು ದೊಡ್ಡ ಹೊಣೆಗಾರಿಕೆಯೇ ಹೊರತು ಸ್ವೇಚ್ಛಾಚಾರವಲ್ಲ, ಮನಸ್ವೀ ವರ್ತನೆಯಲ್ಲ. ಮಂದಿರ-ಮಸೀದಿಯ ಜಗಳ ಏತಕ್ಕಾಗಿ? ಯಾವ ಪುರುಷಾರ್ಥಕ್ಕಾಗಿ? ಮಂದಿರದಲ್ಲಿರುವ ದೇವರು ಮಸೀದಿಯಲ್ಲಿಲ್ಲವೇ? ಮಸೀದಿಯಲ್ಲಿರುವ ದೇವರು ಮಂದಿರದಲ್ಲಿಲ್ಲವೇ? ಮುಸ್ಲಿಮರಿಗೇ ಬೇರೆ ದೇವರು, ಹಿಂದೂಗಳಿಗೇ ಬೇರೆ ದೇವರು ಇದ್ದಾನೆಯೇ? "ಏಕಂ ಸತ್ ವಿಪ್ರಾ ಬಹುಧಾ ವದಂತಿ”, “ದೇವನೊಬ್ಬ ನಾಮ ಹಲವು”, “ಅಲ್ಲಾಹು ಅಕ್ಬರ್”, “ಲಾ ಇಲಾಹ ಇಲ್ಲಲ್ಲಾ” ಎಂದು ಎಲ್ಲ ಧರ್ಮಗಳೂ ಬೋಧಿಸುತ್ತಿರುವುದು ಒಬ್ಬನೇ ದೇವರನ್ನು ಕುರಿತು ಅಲ್ಲವೇ?
ವಾಯಿಜ್ ಮುಝೇ ಪೀನೇ ದೇ ಮಸ್ ಜಿದ್ ಮೇ ಬೈಠ್ ಕೇ
ವರನಾ ವೊ ಜಗಹ್ ಬತಾ ಜಹಾಂ ಖುದಾ ನಹೀ!
“ಎಲೈ ಮೌಲ್ವಿಯೇ! ಮಸೀದಿಯಲ್ಲಿ ಕುಳಿತು ಹೆಂಡವನ್ನು ಕುಡಿಯಲು ನನಗೆ ಅವಕಾಶ ಮಾಡಿಕೊಡು, ಇಲ್ಲದಿದ್ದರೆ ಅಲ್ಲಾ ಇಲ್ಲದ ಸ್ಥಳವನ್ನು ಹೇಳು, ಅಲ್ಲಿಗೆ ಹೋಗಿ ಕುಡಿಯುತ್ತೇನೆ!” ಎಂದು ಹೇಳಿದ ಕವಿಯ ಮಾತಿನ ತಾತ್ಪರ್ಯವೇನು? “ಈಶಾವಾಸ್ಯಂ ಇದಂ ಸರ್ವಂ ಯತ್ ಕಿಂಚ ಜಗತ್ಯಾಂ ಜಗತ್” (ಈ ಜಗತ್ತೆಲ್ಲವೂ ಈಶ್ವರನ ಆವಾಸಸ್ಥಾನ) ಎಂದು ಸಾರಿದ ಉಪನಿಷತ್ತಿನ ಸಿದ್ದಾಂತವೇನು? “ನ ಮಂದಿರ್ ಮೇ ಹೂಂ ನ ಮಸ್ ಜಿದ್ ಮೇ, ನ ಕಾಬಾ ಮೇ ಹೂಂ ನ ಕೈಲಾಸ್ ಮೇ!” (ನಾನು ಮಂದಿರದಲ್ಲೂ ಇಲ್ಲ; ಮಸೀದಿಯಲ್ಲೂ ಇಲ್ಲ! ಕಾಬಾದಲ್ಲೂ ಇಲ್ಲ; ಕೈಲಾಸದಲ್ಲೂ ಇಲ್ಲ!) ಎಂದು ದೇವರ ಬಾಯಿಂದ ಹೇಳಿಸಿದ ಕಬೀರನ ಸಂದೇಶವೇನು? “ಅಂಗುಷ್ಠ ಮಾತ್ರ ಪುರುಷೋsಂತರಾತ್ಮಾ ಸದಾ ಜನಾನಾಂ ಹೃದಿ ಸಂನಿವಿಷ್ಠಃ!” (ಹೆಬ್ಬರಳಿನಷ್ಟು ಗಾತ್ರದ ಅಂತರಾತ್ಮನು ಎಲ್ಲ ಜನರ ಹೃದಯದಲ್ಲಿ ಸದಾ ನೆಲೆಸಿರುತ್ತಾನೆ) ಎಂದು ಬೋಧಿಸಿದ ಭಗವದ್ಗೀತೆಯ ತಾತ್ಪರ್ಯವೇನು? “ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನ ಕಳಶವಯ್ಯಾ ಕೂಡಲಸಂಗಮ ದೇವ ಕೇಳಯ್ಯಾ ಸ್ಥಾವರಕ್ಕಳಿವುಂಟು! ಜಂಗಮಕ್ಕಳಿವಿಲ್ಲ!” ಎಂದು ಪ್ರತಿಯೊಬ್ಬ ವ್ಯಕ್ತಿಯ ಶರೀರವನ್ನೇ ದೇಗುಲವನ್ನಾಗಿ ಮಾಡಬಯಸಿದ ಬಸವಣ್ಣನವರ ವಚನದ ಆಶಯವೇನು?
ಇಂತಹ ತತ್ವೋಪದೇಶಗಳನ್ನು ನಾವು ಅರ್ಥ ಮಾಡಿಕೊಳ್ಳುವುದು ಇನ್ನೂ ಯಾವಾಗ? ಅರಮನೆಯ ಪ್ರತಿಯೊಂದು ಕಂಬದಲ್ಲೂ ಹರಿಯನ್ನು ಕಂಡ ಪ್ರಹ್ಲಾದನನ್ನು ಇಂದು ಕೇಳಿದ್ದರೆ ಮಸೀದಿಯ ಗುಮ್ಮಟದಲ್ಲೂ ಹರಿಯನ್ನು ತೋರಿಸುತ್ತಿದ್ದನಲ್ಲವೇ! ಇಂದು ಕಟ್ಟಬೇಕಾಗಿರುವುದು, ಕೆಡವಬೇಕಾಗಿರುವುದು ಮಸೀದಿಯನ್ನಾಗಲೀ, ಮಂದಿರವನ್ನಾಗಲೀ ಅಲ್ಲ. ಹಿಂದೂ ಮುಸ್ಲಿಮರ ಮಧ್ಯೆ ಇರುವ ದ್ವೇಷ-ವೈಷಮ್ಯಗಳ ಗೋಡೆಯನ್ನು ಕೆಡವಬೇಕಾಗಿದೆ; ಪರಸ್ಪರರ ಹೃದಯದಲ್ಲಿ ಸಾಮರಸ್ಯ ಸೌಹಾರ್ದ ಭಾವನೆಗಳ ಸೇತುವೆಯನ್ನು ಕಟ್ಟಬೇಕಾಗಿದೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 22.9.2010.