ಭಯಭಕ್ತಿ v/s ಶ್ರದ್ಧಾಭಕ್ತಿ
ಮುಕ್ತಿಯನ್ನು ಪಡೆಯಲು ಭಕ್ತಿಮಾರ್ಗ, ಕರ್ಮಮಾರ್ಗ ಮತ್ತು ಜ್ಞಾನಮಾರ್ಗಗಳೆಂಬ ಮೂರು ದಾರಿಗಳಿವೆ ಎಂದು ಹೇಳುತ್ತಾರೆ. ಇದರಲ್ಲಿ ಭಕ್ತಿಮಾರ್ಗ ಸುಲಭವೆಂದು ಹಲವರ ನಂಬಿಕೆ. ಆದರೆ ಅದು ಸುಲಭವಾದ ಮಾರ್ಗವಲ್ಲ ಎಂದೇ ಬಸವಣ್ಣನವರ ಅಭಿಪ್ರಾಯ. "ಭಕ್ತಿಯೆಂಬುದ ಮಾಡಬಾರದು, ಅದು ಗರಗಸದಂತೆ ಹೋಗುತ್ತಲೂ ಕೊಯ್ವುದು, ಬರುತ್ತಲೂ ಕೊಯ್ವುದು" ಎಂಬ ವಚನದಲ್ಲಿ ಅದು ಎಷ್ಟೊಂದು ಕಠಿಣ ಎಂಬುದನ್ನು ಮನೋಜ್ಞವಾಗಿ ವರ್ಣಿಸಿದ್ದಾರೆ. ಗರಗಸವು ಹೇಗೆ ಹೋಗುವಾಗ ಬರುವಾಗ ಎರಡೂ ಕಡೆಗಳಿಂದಲೂ ಮರವನ್ನು ಕೊಯ್ಯುತ್ತದೆಯೋ ಹಾಗೆ ಭಕ್ತನ ಜೀವನದಲ್ಲಿ ಅವನು ದೇವರಲ್ಲಿಟ್ಟಿರುವ ನಂಬಿಕೆಯನ್ನು ಬುಡಮೇಲು ಮಾಡುವಂತಹ ಅಗ್ನಿಪರೀಕ್ಷೆ ನಿರಂತರವಾಗಿ ನಡೆಯುತ್ತಿರುತ್ತದೆ.
ನಚ್ಚಿದೆನೆಂದರೆ, ಮೆಚ್ಚಿದೆನೆಂದರೆ ಸಲೆ ಮಾರುಹೋದೆನೆಂದರೆ
ತನುವನಲ್ಲಾಡಿಸಿ ನೋಡುವೆ ನೀನು,
ಮನವನಲ್ಲಾಡಿಸಿ ನೋಡುವೆ ನೀನು,
ಧನವನಲ್ಲಾಡಿಸಿ ನೋಡುವೆ ನೀನು,
ಇದಕೆಲ್ಲ ಅಂಜದಿದ್ದರೆ ಭಕ್ತಿಕಂಪಿತ ನಮ್ಮ ಕೂಡಲ ಸಂಗಮದೇವಾ.
ಭಕ್ತನಾದವನಿಗೆ ಭಗವಂತನಲ್ಲಿ ಅದಮ್ಯ ವಿಶ್ವಾಸವಿರಬೇಕು. ಬರುವ ಸಂಕಷ್ಟಗಳನ್ನು ಎದುರಿಸಲಾಗದೆ ಭಗವಂತನ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುವ ಅಳ್ಳೆದೆ ಅವನಲ್ಲಿ ಇರಬಾರದು. ತನ್ನ ಕಣ್ಣನ್ನೇ ಕಿತ್ತು ಲಿಂಗಕ್ಕರ್ಪಿಸಿದ ಬೇಡರ ಕಣ್ಣಪ್ಪನ ಜೀವನವೃತ್ತಾಂತವಾಗಲೀ, ತಮಗಿದ್ದ ಒಬ್ಬನೇ ಮುದ್ದಿನ ಮಗನಾದ ಚೀಲಾಳನನ್ನೇ ಕೊಂದು ಅಡುಗೆಮಾಡಿ ಬಡಿಸಿದ ಸಿರಿಯಾಳ-ಚಂಗಳೆಯರ ಜೀವನವೃತ್ತಾಂತವಾಗಲೀ ಭಕ್ತಿಮಾರ್ಗವನ್ನು ಅನುಸರಿಸುವವರು ಜೀವನದಲ್ಲಿ ಎಂತಹ ಕಠಿಣ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ಕೆಲವು ಉದಾಹರಣೆಗಳು.
ಲೌಕಿಕ ಜೀವನದಲ್ಲಿ ಗಂಡ-ಹೆಂಡತಿ, ತಂದೆ-ಮಗ, ತಾಯಿ-ಮಗು ಇವರ ಮಧ್ಯೆ ಪ್ರೀತಿಯ ಬೆಸುಗೆ ಹೇಗೆ ಇರುತ್ತದೆಯೋ ಹಾಗೆಯೇ ಪಾರಲೌಕಿಕ ಜೀವನದಲ್ಲಿ ಭಕ್ತ ಮತ್ತು ಭಗವಂತನ ಮಧ್ಯೆ ಇರುವ ಗಾಢವಾದ ಪ್ರೀತಿಯ ಬೆಸುಗೆಯೇ ಭಕ್ತಿ, "ಸಾ ಪರಾನುರಕ್ತಿ: ಈಶ್ವರೇ" ಅಂದರೆ ಭಕ್ತನಿಗೆ ಪರಮಾತ್ಮನಲ್ಲಿ ಇರುವ ಅನನ್ಯ ಅನುರಾಗವೇ ಭಕ್ತಿ ಎಂದು ನಾರದಭಕ್ತಿಸೂತ್ರ ಹೇಳುತ್ತದೆ. ಲೌಕಿಕ ಸ್ತರದಲ್ಲಿ ಮನುಷ್ಯ-ಮನುಷ್ಯರ ಮಧ್ಯೆ ಇರುವ ಎಲ್ಲ ರೀತಿಯ ಪ್ರೀತಿಯ ಸಂಬಂಧಗಳೂ ಪಾರಲೌಕಿಕ ಸ್ತರದಲ್ಲಿ ಭಕ್ತ ಮತ್ತು ಭಗವಂತನ ಮಧ್ಯೆ ವಿಭಿನ್ನ ರೀತಿಯ ಭಕ್ತಿಯಾಗಿ ರೂಪುಗೊಂಡಿರುವುದನ್ನು ಮನಗಾಣಬಹುದಾಗಿದೆ. ಚೆನ್ನಮಲ್ಲಿಕಾರ್ಜುನನನ್ನು ಕುರಿತು ಅಕ್ಕಮಹಾದೇವಿಯ ಹೃದಯದಲ್ಲಿ ಮಿಡಿದ ಸತಿ-ಪತಿಭಾವದ ಭಕ್ತಿ, ಮುದ್ದು ಕೃಷ್ಣನನ್ನು ಕುರಿತು ತಾಯಿ ಯಶೋದೆಯ ಹೃದಯದಲ್ಲಿ ಉಕ್ಕಿಹರಿದ ವಾತ್ಸಲ್ಯಭಾವದ ಭಕ್ತಿ, ಅಂತೆಯೇ ವಾಸುದೇವನನ್ನು ಕುರಿತು ಅಪ್ರತಿಮ ವೀರ ಅರ್ಜುನನ ಹೃದಯದಲ್ಲಿದ್ದ ಸಖ್ಯಭಾವದ ಭಕ್ತಿ - ಹೀಗೆ ಭಕ್ತಿಯ ವಿವಿಧ ರೂಪಗಳನ್ನು ಕಾಣಬಹುದು.
ಗುರುಹಿರಿಯರಲ್ಲಿ ಭಯ-ಭಕ್ತಿ ಇರಬೇಕು ಎಂದು ಹೇಳುತ್ತಾರೆ. ಇದು ತಪ್ಪು. ಭಕ್ತಿಯ ಮೂಲ ಭಯವಾದರೆ ಭಯವು ನಿವಾರಣೆಯಾದ ಮೇಲೆ ಭಕ್ತಿಯು ಉಳಿಯಲಾರದು. ಭಯದಿಂದ ಹುಟ್ಟಿದ ಭಕ್ತಿಯು ಪರಿಶುದ್ದವೂ, ಶಾಶ್ವತವೂ ಆಗಿರುವುದಿಲ್ಲ. ತಂದೆಯ ಮೇಲೆ ಭಯದ ಕಾರಣದಿಂದ ಮಗನಿಗೆ ಭಕ್ತಿ ಉಂಟಾಗಿದ್ದರೆ, ಅವನು ದೊಡ್ಡವನಾಗಿ ತಂದೆಗೆ ವಯಸ್ಸಾದ ನಂತರ ಆ ಭಕ್ತಿ ಮಾಯವಾಗಿ ತನ್ನ ಸ್ವಾರ್ಥಕ್ಕೆ ಅಡ್ಡಿಬಂದಾಗ ತಂದೆಯ ಮೇಲೆಯೇ ತಿರುಗಿ ಬೀಳುತ್ತಾನೆ. ಆಸ್ತಿಪಾಸ್ತಿ ಹಂಚಿಕೆಯಲ್ಲಿ ವ್ಯತ್ಯಾಸ ಉಂಟಾದರೆ ತಂದೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸಲೂ ಹೇಸುವುದಿಲ್ಲ. ಅದೇ ತಂದೆಯ ಮೇಲಿನ ಅವನ ಭಕ್ತಿ ತನಗೆ ಜೀವಕೊಟ್ಟವನು ಎಂಬ ಕೃತಜ್ಞತೆಯಿಂದ ಕೂಡಿದ್ದರೆ ಮಗನಿಗೆ ಎಷ್ಟೇ ವಯಸ್ಸಾಗಿದ್ದರೂ ಸಹ ತಂದೆಯ ಮೇಲಿನ ಪಿತೃಭಕ್ತಿಗೆ ಕುಂದು ಬರಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳಲ್ಲಿ ಭಯ-ಭಕ್ತಿಯನ್ನು ಹುಟ್ಟಿಸುವುದಕ್ಕಿಂತ ಶ್ರದ್ಧಾ-ಭಕ್ತಿಯನ್ನು ಬೆಳೆಸುವುದೇ ಒಳ್ಳೆಯದು.
ವ್ಯಕ್ತಿ ತನ್ನ ಮೇಲೆ ವಿಶ್ವಾಸ ಮತ್ತು ನಿಷ್ಕಲ್ಮಶ ಪ್ರೀತಿಯುಳ್ಳವನಿಗೆ ಸ್ಪಂದಿಸುತ್ತಾನೆ. ಪ್ರೀತಿ ವಿಶ್ವಾಸಗಳನ್ನು ತೋರಿದವನಿಗೆ ತಾನು ಯಾವ ಮಟ್ಟದ ಸಹಾಯವನ್ನಾದರೂ ಮಾಡಲು ಹಿಂಜರಿಯುವುದಿಲ್ಲ. ಹಾಗೆ ಸಹಾಯ ಮಾಡುವುದರಲ್ಲಿ ಸಾರ್ಥಕ ಭಾವವನ್ನು ಅವನು ಅನುಭವಿಸುತ್ತಾನೆ. ಆದರೆ ಅದು ಬೂಟಾಟಿಕೆಯ ಪ್ರೀತಿ/ವಿಶ್ವಾಸವೆಂದು ಕಂಡುಬಂದಾಗ ಅವನಿಗೆ ಆಗುವ ವೇದನೆ ಅಷ್ಟಿಷ್ಟಲ್ಲ. ಆ ಕ್ಷಣದಿಂದ ಅಂಥಹ ವ್ಯಕ್ತಿಯ ಬಗ್ಗೆ ತೀವ್ರವಾದ ತಿರಸ್ಕಾರ ಮೂಡುತ್ತದೆ. ಸಮಾಜ ಜೀವನವನ್ನು ನಿತ್ಯವೂ ತೀರಾ ನಿಕಟವಾಗಿ ನೋಡುತ್ತಿರುವ ನಮಗೆ ಎರಡು ಬಗೆಯ ಜನರ ಪರಿಚಯವಿದೆ. ಹೃದಯದಲ್ಲಿ ನಮ್ಮನ್ನು ಮನಸಾರೆ ಆರಾಧಿಸುವವರದು ಒಂದು ವರ್ಗ. ಕೇವಲ ವ್ಯಾವಹಾರಿಕವಾಗಿ ನಮ್ಮನ್ನು ಬಳಸಿಕೊಂಡು ವೈಯಕ್ತಿಕ ಲಾಭಕ್ಕಾಗಿ ತೋರಿಕೆಯ ಭಕ್ತಿಯನ್ನು ಪ್ರದರ್ಶಿಸುವವರದು ಇನ್ನೊಂದು ವರ್ಗ. ಎರಡನೆಯ ವರ್ಗದವರನ್ನು ನೋಡಿ ಮನಸ್ಸು ರೋಸಿಹೋಗಿದೆ. ಅನೇಕವೇಳೆ ನಮ್ಮ ಅನುಭವದಲ್ಲಿ ಯಾರಾದರೂ ಕೈಯಲ್ಲಿ ದೊಡ್ಡ ಹಾರ ಹಿಡಿದುಕೊಂಡು ಬಂದರೆಂದರೆ ನಮ್ಮ ಕೊರಳಿಗೆ ಉರುಲು ಬಿತ್ತೆಂದೇ ಅರ್ಥ! ಆ ಅಸಾಮಾನ್ಯ ಹಾರದ ಹಿಂದೆ ಅಸಾಮಾನ್ಯ ಬೇಡಿಕೆ ಇರುತ್ತದೆ. ಅದನ್ನು ಪೂರೈಸಲು ಯಾವ ದೇವರಿಂದಲೂ ಸಾಧ್ಯವಿಲ್ಲ. ಶ್ರದ್ಧಾಭಕ್ತಿಯಿಂದ ಆರಾಧಿಸುವ ಮೊದಲನೆಯ ವರ್ಗದ ಜನರ ಗುರುಭಕ್ತಿ ನಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡಿದೆ. ಸಾರ್ವಜನಿಕ ಜೀವನದಲ್ಲಿ ಎದುರಾಗುವ ಎಲ್ಲ ವಿಷಮಪ್ರಸಂಗಗಳನ್ನು ಎದುರಿಸಲು ಅವರೇ ನಮ್ಮ ಬದುಕಿನ ಜೀವನಾಡಿ.
ಕೆಲವು ವರ್ಷಗಳ ಹಿಂದೆ ಅಮೇರಿಕಾದ ಉತ್ತರ ತುದಿಯಲ್ಲಿರುವ ಡೆಟ್ರಾಯಿಟ್ ನಗರದಲ್ಲಿ ವಾಸವಾಗಿರುವ ಡಾ. ಜಯರಾಜ್ ಕಲ್ಮಠ್ ಅವರು ಭಾರತಕ್ಕೆ ಬಂದಿದ್ದರು. ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ನಾವಿದ್ದ ವಿಷಯವನ್ನು ತಿಳಿದು ದರ್ಶನಕ್ಕಾಗಿ ತಮ್ಮ ಪತ್ನಿಯೊಂದಿಗೆ ಬಂದರು. ಶಿಷ್ಟಾಚಾರದಂತೆ ದಂಪತಿಗಳು ಕಾಣಿಕೆಯನ್ನು ಕೊಟ್ಟು ನಮಸ್ಕರಿಸಿದರು. ಕಾಣಿಕೆಯನ್ನು ಕೊಟ್ಟ ಸ್ವಲ್ಪಹೊತ್ತಿನ ಮೇಲೆ ನೆನೆಸಿಕೊಂಡು ಜೇಬಿನಲ್ಲಿದ್ದ ಒಂದು ಕವರನ್ನು ಹೊರತೆಗೆದು ನಮ್ಮ ಕೈಗೆ ಕೊಟ್ಟು ಮತ್ತೆ ನಮಸ್ಕರಿಸಿದರು. ನಮ್ಮ ಹೆಸರು ಬರೆದಿದ್ದ ಆ ಕವರನ್ನು ನೋಡಿ ಪ್ರಾಯಶಃ ಅಮೆರಿಕಾದಲ್ಲಿರುವ ನಮ್ಮ ಶಿಷ್ಯರು ಯಾರೋ ಅವರ ಕೈಯಲ್ಲಿ ಕಳಿಸಿರುವ ಪತ್ರ ಅದಿರಬಹುದೆಂದು ಬಿಡಿಸಿ ನೋಡಿದರೆ ಅದರಲ್ಲಿ ಯಾವ ಪತ್ರವೂ ಇರಲಿಲ್ಲ. ಒಂದು ನೂರು ಅಮೇರಿಕನ್ ಡಾಲರ್ ನೋಟು ಇತ್ತು! ಏತಕ್ಕಾಗಿ ಎಂದು ತಿಳಿಯದೆ ವಿಸ್ಮಯವಾಯಿತು. "ಈಗ ತಾನೆ ಗುರುಕಾಣಿಕೆಯನ್ನು ಕೊಟ್ಟಿರಲ್ಲಾ ಮತ್ತೇನಿದು ಕವರ್, ಇದನ್ನೇಕೆ ಪ್ರತ್ಯೇಕವಾಗಿ ಕೊಡುತ್ತಿದ್ದೀರಿ?" ಎಂದು ಡಾ. ಕಲ್ಮಠ್ ರವರನ್ನು ಕೇಳಿದಾಗ ಅವರು ನೀಡಿದ ವಿವರಣೆ ನಮ್ಮ ಹೃದಯವನ್ನು ಆರ್ದ್ರಗೊಳಿಸಿತು.
ಬಹಳ ವರ್ಷಗಳ ಹಿಂದೆ ಅಮೇರಿಕೆಗೆ ಹೋಗಿದ್ದಾಗ ಡೆಟ್ರಾಯಿಟ್ ನಗರದಲ್ಲಿದ್ದ ಅವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದೆವು. ಅದೇ ನಗರದಲ್ಲಿ ವಾಸವಾಗಿದ್ದ ದಾವಣಗೆರೆಯ ಬಾಪೂಜಿ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಗುರುಪಾದಪ್ಪನವರ ಮಗ ಡಾ. ರವಿ ತಾನು ಹೊಸದಾಗಿ ಕಟ್ಟಿಸಿದ್ದ ಮನೆಗೆ ನಮ್ಮನ್ನು ಪೂಜೆಗೆಂದು ಆಹ್ವಾನಿಸಿದ್ದನು. ಒಂದೆರಡು ವರ್ಷಗಳ ಹಿಂದೆ ಮದುವೆಯಾಗಿದ್ದ ಆತನಿಗೆ ಒಂದು ಮುದ್ದಾದ ಹೆಣ್ಣು ಮಗುವೂ ಆಗಿದ್ದು ಅದಕ್ಕೆ ನಮ್ಮಿಂದ ಲಿಂಗಧಾರಣೆಯನ್ನು ಮಾಡಿಸುವ ಉದ್ದೇಶವೂ ಅವನಿಗಿತ್ತು. ಅವನ ಮನೆಯಲ್ಲಿ ಪೂಜೆ ಮುಗಿಸಿಕೊಂಡು ಡಾ. ಜಯರಾಜ್ ಕಲ್ಮಠರ ಕಾರಿನಲ್ಲಿ ವಾಪಾಸು ಬರುವಾಗ ಡಾ. ರವಿ ಕೊಟ್ಟ ಕಾಣಿಕೆಯ ಲಕೋಟೆಯನ್ನು ನಮ್ಮ ಆಪ್ತಸಹಾಯಕ ಡಾ. ಸಿದ್ದಯ್ಯನು ಅವರ ಕಾರಿನಲ್ಲಿ ಬೀಳಿಸಿಕೊಂಡಿದ್ದನು. ಮಾರನೆಯ ದಿನ ನಾವು ಬೇರೆ ನಗರಕ್ಕೆ ಪ್ರಯಾಣ ಬೆಳೆಸಿದ ಮೇಲೆ ಡಾ. ಕಲ್ಮಠ್ ರವರು ತಮ್ಮ ಆಫೀಸಿಗೆ ಹೋಗುವಾಗ ಕಾರಿನ ಹಿಂಬದಿಯ ಸೀಟಿನ ಕೆಳಭಾಗದಲ್ಲಿ ಬಿದ್ದಿದ್ದ ಆ ಲಕೋಟೆ ಅವರ ಕಣ್ಣಿಗೆ ಬಿತ್ತು. ಹಿಂದಿನ ದಿನ ಡಾ. ರವಿ ಕೊಟ್ಟಿದ್ದ ಗುರುಕಾಣಿಕೆ ಅದಿರಬೇಕೆಂದು ತಿಳಿಯಲು ಅವರಿಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ಡಾ. ಕಲ್ಮಠ್ ಅತ್ಯಂತ ಶ್ರದ್ಧಾಭಕ್ತಿಯಿಂದ ಅದನ್ನು ತಮ್ಮ ಮನೆಯ ಪೂಜಾಕೋಣೆಯಲ್ಲಿ ಬಸವಣ್ಣನವರ ಭಾವಚಿತ್ರದ ಎದುರುಗಡೆ ಇಟ್ಟು ಭಾರತಕ್ಕೆ ಬರುವಾಗ ಮರೆಯದೆ ತಮ್ಮ ಜೇಬಿನಲ್ಲಿಟ್ಟುಕೊಂಡು ಬಂದಿದ್ದರು! ದಿನನಿತ್ಯ ಪೂಜಾ ಸಂದರ್ಭದಲ್ಲಿ ಆ ಲಕೋಟೆಗೆ ಅವರ ಧರ್ಮಪತ್ನಿ ಶ್ರೀಮತಿ ಶೈಲಜಾ ಹಚ್ಚಿದ್ದ ವಿಭೂತಿ, ಅರಿಶಿಣ, ಕುಂಕುಮ, ಗಂಧಾಕ್ಷತೆಗಳು ಅವರ ಶ್ರದ್ಧಾಭಕ್ತಿಯ ಪ್ರತೀಕವಾಗಿ ಕಂಗೊಳಿಸುತ್ತಿದ್ದವು! ಕಳಬೇಡ, ಕೊಲಬೇಡ... ಎಂಬ ವಚನ ನೆನಪಾಯಿತು. ಡಾ. ಕಲ್ಮಠ್ ರವರು ಆ ನೂರು ಡಾಲರ್ ನೋಟನ್ನು ಬಳಸಿಕೊಂಡು ಭಾರತಕ್ಕೆ ಬಂದಾಗ ಬೇರೆ ನೂರು ಡಾಲರ್ ಹಣವನ್ನು ನೀಡಿದ್ದರೂ ಬಸವಣ್ಣನವರ ವಚನದ ಆದರ್ಶತತ್ವಕ್ಕೆ ಚ್ಯುತಿಯೇನೂ ಬರುತ್ತಿರಲಿಲ್ಲ, ಅಲ್ಲವೇ? ಆದರೆ ಅವರು ಹಾಗೆ ಮಾಡದೆ ಅದನ್ನು ಎರಡು ವರ್ಷಗಳ ಕಾಲ ಜೋಪಾನವಾಗಿ ತಮ್ಮ ದೇವರ ಮನೆಯಲ್ಲಿಟ್ಟು ಪೂಜಿಸಿದ್ದರು. ಭಾರತಕ್ಕೆ ಬರುವಾಗ ಮರೆಯದೆ ತಮ್ಮ ಜೇಬಿನಲ್ಲಿಟ್ಟುಕೊಂಡು ಬಂದಿದ್ದ ಆ ಲಕೋಟೆಯಲ್ಲಿ ಅವರ ನಿರ್ಮಲಾಂತಃಕರಣದ ಗುರುಭಕ್ತಿ ತುಂಬಿತ್ತು. ಆ ಲಕೋಟೆಯನ್ನು ಹಾಗೆಯೇ ಮಠದಲ್ಲಿ ಜೋಪಾನವಾಗಿ ಕಾಯ್ದಿರಿಸದೆ ತಪ್ಪು ಮಾಡಿದೆವು ಎಂದು ಈ ಲೇಖನ ಬರೆಯುವಾಗ ವ್ಯಥೆಯಾಗುತ್ತಿದೆ.
ಮತ್ತೊಂದು ಘಟನೆ: ಒಂದು ದಿನ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಹನುಮಂತಜ್ಜನ ಮಕ್ಕಳು ಮಠಕ್ಕೆ ಬಂದಿದ್ದರು. ಅಜ್ಜಿ ಮನೆಯಲ್ಲಿ ಜಾರಿ ಬಿದ್ದು ಸಂಪೂರ್ಣ ಪ್ರಜ್ಞೆಯನ್ನು ಕಳೆದುಕೊಂಡು ಆಸ್ಪತ್ರೆ ಸೇರಿಸಿದ್ದ ವಿಷಯವನ್ನು ತಿಳಿಸಿದರು. ಕಳೆದ 15 ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಅಜ್ಜನಿಗೆ ಇದ್ದಕ್ಕಿದ್ದಂತೆಯೇ ಪ್ರಜ್ಞೆ ಬಂದಿರುವುದಾಗಿಯೂ, ಪ್ರಜ್ಞೆ ಬಂದ ಕ್ಷಣದಿಂದ ತಮ್ಮನ್ನೇ ಕನವರಿಸುತ್ತಿರುವುದಾಗಿಯೂ, "ನಾನು ಗುರುಗಳನ್ನು ನೋಡಬೇಕು, ಬೆಂಗಳೂರಿನ ತರಳಬಾಳು ಕೇಂದ್ರಕ್ಕೆ ಹತ್ತು ಸಾವಿರ ರೂಗಳನ್ನು ಕೊಡುವುದಾಗಿ ನಾನು ವಾಗ್ದಾನ ಮಾಡಿದ್ದೆ, ನನಗೆ ದೇವರು ಪ್ರಜ್ಞೆ ಮರಳಿ ಬರುವಂತೆ ಮಾಡಿರುವುದೇ ಈ ಗುರುಕಾಣಿಕೆಯನ್ನು ಸಲ್ಲಿಸಲು, ಮಠಕ್ಕೆ ಬೇಗನೆ ಹೋಗಿ ಮನೆಗೆ ದಯಮಾಡಿಸಲು ಬಿನ್ನಹ ಮಾಡಿ ಬನ್ನಿ" ಎಂದು ಒತ್ತಾಯ ಮಾಡಿ ಕಳುಹಿಸಿರುವುದಾಗಿ ನಿವೇದಿಸಿಕೊಂಡರು. ಮಠದ ಶೈಕ್ಷಣಿಕ ಸಾಮಾಜಿಕ ಸೇವಾಕಾರ್ಯಗಳಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡಿದ್ದ ಹನುಮಂತಪ್ಪ ದಾವಣಗೆರೆಯ ತಮ್ಮ ಮಗನ ಮನೆಯಲ್ಲಿ ನಮಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿತ್ತು! ಮನೆಯ ಮುಂದೆ ನಮ್ಮ ಕಾರಿನ ಹಾರನ್ ಕೇಳಿಸುತ್ತಿದ್ದಂತೆಯೇ ಹಾಸಿಗೆ ಹಿಡಿದಿದ್ದ ಅಜ್ಜ ಮಂಚದ ಮೇಲಿಂದ ಕೆಳಗಿಳಿದು ಕೋಲನ್ನು ಊರಿಕೊಂಡು ಯಾರ ಆಸರೆಯೂ ಇಲ್ಲದೆ ಮನೆಯ ಮುಂಬಾಗಿಲವರೆಗೆ ನಡೆದುಕೊಂಡು ಬಂದೇಬಿಟ್ಟಿತು. ನಿತ್ರಾಣಗೊಂಡಿದ್ದ ಅಜ್ಜನ ಕಾಲುಗಳಿಗೆ ನಮ್ಮ ಆಗಮನದಿಂದ ನವಚೈತನ್ಯ ತುಂಬಿ ಬಂದಿತ್ತು. ಒಳಗೆ ಬರಮಾಡಿಕೊಂಡು ವಾಗ್ದಾನ ಮಾಡಿದ್ದ ಕಾಣಿಕೆಯನ್ನು ಕೊಟ್ಟು ಅಜ್ಜ ಆನಂದದಿಂದ ಕಣ್ಣೀರು ಸುರಿಸಿತು. "ಗುರುಗಳ ಋಣದಲ್ಲಿ ಎಲ್ಲಿ ಸತ್ತುಬಿಡುತ್ತೇನೋ ಎಂದು ಚಿಂತೆಯಾಗಿತ್ತು. ಈಗ ನಿರುಮ್ಮಳವಾಯಿತು, ನಾಳೆಯೇ ನನಗೆ ಸಾವು ಬಂದರೂ ಇನ್ನು ನನಗೆ ಹೆದರಿಕೆ ಇಲ್ಲ" ಎಂದು ಹೇಳಿತು. ನಮಗೆ ಹೃದಯ ತುಂಬಿ ಬಂತು. ಈ ಘಟನೆಯ ನಂತರ ಎರಡು ವರ್ಷಗಳ ಕಾಲ ಬದುಕಿ ಉಳಿದ ಅಜ್ಜನ ನಿರ್ಮಲಭಕ್ತಿ ನಮಗೆ ಮರೆಯಲಾಗದ ಅನುಭವ.
ಮತ್ತೊಂದು ಘಟನೆ ಹೀಗಿದೆ. ಇದೇ ಹರಿಹರ ತಾಲ್ಲೂಕಿನ ರೈತನೊಬ್ಬ ಒಂದು ದಿನ ಮಠಕ್ಕೆ ಬಂದು 10 ಸಾವಿರದ ನೋಟಿನ ಕಂತೆಯನ್ನು ಹೊರತೆಗೆದು ನಮಗೆ ಐದು ಸಾವಿರ ರೂ.ಗಳನ್ನು ಕೊಟ್ಟು ಉಳಿದ ಐದು ಸಾವಿರ ರೂ.ಗಳನ್ನು ಜೇಬಿನಲ್ಲಿಟ್ಟುಕೊಂಡ. "ಏನಪ್ಪಾ ಇದು?" ಎಂದು ಕೇಳಿದಾಗ ಆತ ಹೇಳಿದ ಬುದ್ದೀ, ನಮ್ಮೂರಿಗೆ ತಾವು ದಯಮಾಡಿಸಿದಾಗ ನಾನು ತಮಗೆ ವಾಗ್ದಾನ ಮಾಡಿದ್ದೆ. ಕೈಯಲ್ಲಿ ಹಣವಿದ್ದಾಗಲೆಲ್ಲಾ ಆಮೇಲೆ ಕೊಟ್ಟರಾಯಿತು ಎಂದು ಉದಾಸೀನ ಮಾಡಿ, ಕೊಡುವುದನ್ನು ಮುಂದಕ್ಕೆ ಹಾಕುತ್ತಾ ಬಂದೆ. ಬಹಳ ದಿನವಾದರೂ ಕೊಟ್ಟಿರಲಿಲ್ಲ. ಈ ದಿನ ಬ್ಯಾಂಕಿನಲ್ಲಿ ನನಗೆ ಹತ್ತು ಸಾವಿರ ರೂಪಾಯಿ ಸಾಲ ಸಿಕ್ಕಿತು. ಹಣವನ್ನು ಬ್ಯಾಂಕಿನಿಂದ ಬಿಡಿಸಿಕೊಂಡವನೇ ಇನ್ನು ಮನೆಗೆ ಹೋದರೆ ಯಾತಕ್ಕಾದರೂ ಖರ್ಚಾಗಿ ಹೋಗುತ್ತದೆ ಎಂದು ಊರಿಗೆ ಹೋಗದೆ ತಮಗೆ ಅರ್ಪಿಸಲು ಸೀದಾ ಮಠಕ್ಕೆ ಬಂದಿದ್ದೇನೆ ಎಂದು ಮುಗ್ಧತೆಯಿಂದ ನುಡಿದ.
ಬೆಂಗಳೂರಿನ ನಮ್ಮ ತರಳಬಾಳು ಕೇಂದ್ರದ ಕಟ್ಟಡಕ್ಕೆ ನಮ್ಮ ಮಠದ ಶಿಷ್ಯರಷ್ಟೇ ಅಲ್ಲ ಇತರ ಧರ್ಮೀಯರೂ ಸಹ ಶಕ್ತಾನುಸಾರ ದಾನ ನೀಡಿರುತ್ತಾರೆ. ಅವರ ಪೈಕಿ ನಮ್ಮ ಮಠದ ಅಭಿಮಾನಿಗಳಾಗಿದ್ದ ಚಿತ್ರದುರ್ಗದ ಪೀರ್ ಸಾಬ್ ರವರೂ ಒಬ್ಬರು. ಬೆಂಗಳೂರಿನಲ್ಲಿ ನಡೆದ ಕಟ್ಟಡದ ಶಂಕುಸ್ಥಾಪನೆ ಸಂದರ್ಭದಲ್ಲಿ ನಮ್ಮ ಗುರುವರ್ಯರಿಗೆ ಆಗ 75 ವರ್ಷಗಳಾಗಿದ್ದನ್ನು ಗಮನದಲ್ಲಿಟ್ಟುಕೊಂಡು ವರ್ಷಕ್ಕೆ 100 ರೂ.ಗಳಂತೆ ಲೆಕ್ಕ ಹಾಕಿ ಒಟ್ಟು 7,500 ರೂ.ಗಳನ್ನು ಕೊಡುವುದಾಗಿ ವಾಗ್ದಾನ ಮಾಡಿದ್ದರು. ಇನ್ನೂ ಕೊಟ್ಟಿರಲಿಲ್ಲ. ಒಂದೆರಡು ವರ್ಷಗಳ ನಂತರ ಇನ್ನೆಷ್ಟು ಕಾಲ ಬದುಕಿರುತ್ತೇನೋ ಏನೋ, ಮಠಕ್ಕೆ ಹೋಗಿ ವಾಗ್ದಾನದ ಹಣವನ್ನು ಮುಟ್ಟಿಸಿ ಬರೋಣ ಎಂದು ಅವರ ಸ್ನೇಹಿತರ ಹತ್ತಿರ ಹಿಂದಿನ ರಾತ್ರಿ ಮಾತನಾಡಿ ಹಣವನ್ನು ಜೋಡಿಸಿಕೊಂಡು ಮಲಗಿದ್ದ ಪೀರ್ ಸಾಬ್ ಮಾರನೆಯ ದಿನ ಎಚ್ಚರಗೊಳ್ಳಲೇ ಇಲ್ಲ, ಅವರ ಜೀವ ಅಲ್ಲಾನಲ್ಲಿ ಸೇರಿ ಹೋಗಿತ್ತು. ವಾಗ್ದಾನದ ಹಣದ ಥೈಲಿಯನ್ನು ಅವರ ಮಗ ಜೈನುಲ್ಲಾಬ್ದಿನ್ ತನ್ನ ಸ್ವಂತಕ್ಕೆ ಬಳಸಿಕೊಳ್ಳದೆ ಹಾಗೆಯೇ ತೆಗೆದಿರಿಸಿದ್ದರು. ಪ್ರತಿ ದಿನ ಅವರ ತಂದೆ ಕನಸಿನಲ್ಲಿ ಬಂದು ಹಮಾರೇ ಸಿರಿಗೆರೆ ಸ್ವಾಮೀಜೀ ಕೋ ಯಶ್ ಪೈಸಾ ಅಬ್ತಕ್ ತೂನೆ ಕ್ಯೋ ನಹೀಂ ದಿಯಾ ಎಂದು ಗದರಿಸುತ್ತಿದ್ದರಂತೆ. ತಂದೆಯು ತೆಗೆದಿರಿಸಿದ್ದ ಆ ಹಣದ ಥೈಲಿಯನ್ನು ಅದೇ ವರ್ಷ ಹಾವೇರಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ ನಮಗೆ ಸಮರ್ಪಣೆ ಮಾಡುವಾಗ ಅವರ ತಂದೆ ಕನಸಿನಲ್ಲಿ ಬಂದು ಕೇಳುತ್ತಿದ್ದುದನ್ನು ಜೈನುಲ್ಲಾಬ್ದಿನ್ ನೆನೆಸಿಕೊಂಡು ಗದ್ಗದಿತರಾಗಿದ್ದರು!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 30.9.2009.