ಸರಣಿ ಪತ್ರಗಳು
ಹಿಂದಿನ ವಾರದ ಅಂಕಣದ ಕೊನೆಯಲ್ಲಿ ಪ್ರಸ್ತಾಪಿಸಿದ ಸರಣಿಪತ್ರ ಆಂಗ್ಲಭಾಷೆಯಲ್ಲಿದ್ದು ಅದರ ಯಥಾವತ್ ಕನ್ನಡಾನುವಾದ ಹೀಗಿದೆ:
ಶ್ರೀವೆಂಕಟೇಶ್ವರಸ್ವಾಮಿ ಪ್ರಸನ್ನ
ಈ ಪತ್ರವು ತಿರುಪತಿಯ ಶ್ರೀವೆಂಕಟೇಶ್ವರ ಸ್ವಾಮಿಯ ಕೃಪಾಶೀರ್ವಾದಗಳನ್ನು ಹೊತ್ತು ತಂದಿದೆ. ಈ ಪತ್ರವು ಪ್ರಪಂಚವನ್ನು ನಾಲ್ಕು ಬಾರಿ ಸುತ್ತಿ ಜಗತ್ತಿನೆಲ್ಲೆಡೆ ಇರುವ ಶ್ರೀಸ್ವಾಮಿಯ ಭಕ್ತಾದಿಗಳಿಗೆ ಒಳ್ಳೆಯ ಅದೃಷ್ಟ ಮತ್ತು ಸಂಪತ್ತನ್ನು ಅನುಗ್ರಹಿಸುತ್ತಾ ಬಂದಿದೆ. ದಯವಿಟ್ಟು ಈ ಪತ್ರ ತಲುಪಿದ 9 ದಿನದೊಳಗೆ ಇದರ 20 ಪ್ರತಿಗಳನ್ನು ಯಥಾವತ್ತಾಗಿ ಪ್ರತಿಲಿಪಿ ಮಾಡಿ ನಿಮ್ಮ ವಿಶ್ವಾಸದಲ್ಲಿರುವ 20 ಜನರಿಗೆ ಶ್ರೀವೆಂಕಟೇಶ್ವರಸ್ವಾಮಿಯ ಈ ಆಶೀರ್ವಾದವನ್ನು ಮರೆಯದೆ ಕಳುಹಿಸಿಕೊಡಿ.
ಇದು ಪ್ರಪಂಚದ ಸುತ್ತ ಸಂಚರಿಸುತ್ತಿರುವ ಶ್ರೀವೆಂಕಟೇಶ್ವರ ಸ್ವಾಮಿಯ ದಿವ್ಯ ಆಶೀರ್ವಾದ ಪತ್ರ. ಈ ಪತ್ರಸರಣಿಯನ್ನು ನಿಲ್ಲಿಸಬೇಡಿ. ಇದನ್ನು ಮುಂದುವರಿಸಿದ ನವಮಣಿ ಎಂಬ ಭಕ್ತನಿಗೆ 5 ಲಕ್ಷ ರೂ. ಗಳು ದೊರೆತವು. ಇದನ್ನು ನಿರ್ಲಕ್ಷಿಸಿದ ರಾಮನ್ ಎಂಬ ವ್ಯಕ್ತಿಯು ಕೆಲವೇ ದಿನಗಳಲ್ಲಿ ತನ್ನ ನೌಕರಿಯನ್ನು ಕಳೆದುಕೊಂಡನು. ತನ್ನ ತಪ್ಪಿನ ಅರಿವಾಗಿ ಈ ಪತ್ರಸರಣಿಯನ್ನು ಮುಂದುವರಿಸಿದ ಮೇಲೆ ಆತನಿಗೆ ಕಳೆದುಹೋದ ನೌಕರಿಯು ಮತ್ತೆ ಸಿಕ್ಕುವಂತಾಯಿತು. ಈ ಪತ್ರವನ್ನು ನೋಡಿ ಹರಿದು ಕಸದ ಬುಟ್ಟಿಗೆ ಎಸೆದ ಸೆಲ್ವನಾಯಕ ಎಂಬ ವ್ಯಕ್ತಿಯು ಸತ್ತುಹೋದನು. ಆದಕಾರಣ ದಯವಿಟ್ಟು ಈ ಪತ್ರವನ್ನು ನೀವು ಉಪೇಕ್ಷಿಸಬೇಡಿ. ಇದರ 20 ಪ್ರತಿಯನ್ನು ಮಾಡಿ ನಿಮಗೆ ಗೊತ್ತಿರುವ 20ಜನರಿಗೆ ತಪ್ಪದೆ ಕಳುಹಿಸಿರಿ. ಹಾಗೆ ಮಾಡಿದರೆ 25 ದಿನದೊಳಗಾಗಿ ಶ್ರೀಸ್ವಾಮಿಯ ಕೃಪೆಯಿಂದ ನಿಮಗೆ ಅತ್ಯಂತ ಸಂತೋಷವನ್ನುಂಟುಮಾಡುವ ಅತ್ಯದ್ಭುತವಾದ ಕಾರ್ಯ ಆಗುತ್ತದೆ. - ಇತಿ ಶ್ರೀವೆಂಕಟೇಶ್ವರಸ್ವಾಮಿಯ ಪಾದಸೇವಕ.
ಈ ಪತ್ರವು ನಮಗೆ ಎಲ್ಲಿಂದ ಬಂದಿರಬಹುದೆಂದು ನೀವು ಊಹಿಸಬಲ್ಲಿರಾ? ನಿಮ್ಮ ಊಹೆಯನ್ನು ಸುಲಭಗೊಳಿಸಲು ನೀಡಬಹುದಾದ ಕೆಲವೊಂದು ಸುಳಿವು ಹೀಗಿದೆ: 1.ಈ ಪತ್ರ ಮೂಲತಃ ಆಂಗ್ಲಭಾಷೆಯಲ್ಲಿದ್ದು ಮೇಲೆ ಕೊಟ್ಟಿರುವುದು ನಮ್ಮ ಕನ್ನಡಾನುವಾದ. 2.ಮೂಲ ಪತ್ರ ಗಣಕಯಂತ್ರದಲ್ಲಿ ಮುದ್ರಿತವಾಗಿದೆ. 3.ಅದಕ್ಕಾಗಿ ಬಳಸಿದ ಕಾಗದದ ಎರಡೂ ಬದಿಯಲ್ಲಿ ಪ್ರಿಂಟರಿನ ಹಲ್ಲುಗಳು ಸಂಚರಿಸುವ ರಂಧ್ರಗಳು (pin feed holes) ಕಾಣಿಸುತ್ತಿವೆ. 4.ನಮಗೆ ಬಂದಿರುವುದು ಗಣಕಯಂತ್ರದ ಕಾಗದದ ಛಾಯಾಪ್ರತಿ (xerox). 5.ನಮ್ಮ ಹೆಸರು ಮತ್ತು ವಿಳಾಸ ಸರಿಯಾಗಿಯೇ ಇದೆ..... Well, can you guess now?
ನಿಮ್ಮೆಲ್ಲ ಊಹೆಗಳೂ ತಪ್ಪಾಗಲಿವೆಯೆಂದು ನಿಸ್ಸಂದೇಹವಾಗಿ ಊಹಿಸಬಹುದು. ನಿಮ್ಮ ಊಹೆಗೂ ನಿಲುಕದ ಸ್ಥಳದಿಂದ ಈ ಪತ್ರ ನಮಗೆ ಬಂದಿದೆ. ಹಾಗಾದರೆ ಎಲ್ಲಿಂದ ಎಂಬ ಕುತೂಹಲವೇ? ಇದು ನಮಗೆ ಇಂಗ್ಲೆಂಡ್ ನಿಂದ ಬಂದಿದೆಯೆಂದರೆ ನಿಮಗೆ ಆಶ್ಚರ್ಯವಾಗದಿರದು. ಮೇಲೆ ಸುಳಿವು ನೀಡುವಾಗ ಈ ಪತ್ರದ ಮೇಲೆ ಇಂಗ್ಲೆಂಡ್ ದೇಶದ ಅಂಚೆಚೀಟಿಗಳು ಇದ್ದವೆಂಬ ಮುಖ್ಯ ಸುಳಿವು ನೀಡಲಿಲ್ಲವೆಂದು ನಿಮ್ಮ ತಕರಾರೇ? Objection Sustained! ನಮ್ಮ ಹೆಸರು ಮತ್ತು ವಿಳಾಸ ಪಿನ್ ಕೋಡ್ ಆದಿಯಾಗಿ ಸರಿಯಾಗಿರುವುದರಿಂದ ಈ ಪತ್ರವನ್ನು ಇಂಗ್ಲೆಂಡ್ನಿಂದ ನಮಗೆ ರವಾನಿಸಿದ ವ್ಯಕ್ತಿಗೆ ನಮ್ಮ ಪರಿಚಯ ಚೆನ್ನಾಗಿಯೇ ಇದೆಯೆಂದು ಪರಿಭಾವಿಸಬಹುದಾಗಿದೆ. ಈ ಪತ್ರದ ಮೂಲ ಒಕ್ಕಣಿಕೆಯೂ ಸಹ ಅದರ 20 ಪ್ರತಿಗಳನ್ನು ನಿಮಗೆ ಗೊತ್ತಿರುವ 20 ಜನರಿಗೆ ಕಳುಹಿಸಬೇಕೆಂಬ ಸ್ಪಷ್ಟವಾದ ಸೂಚನೆ ಇರುವುದರಿಂದ ನಮಗೆ ಗೊತ್ತಿಲ್ಲದ ಅಪರಿಚಿತ ವ್ಯಕ್ತಿ ಕಳುಹಿಸಿರಲು ಸಾಧ್ಯವೇ ಇಲ್ಲ. Objection overruled!
ಈ ಸರಣಿಪತ್ರ ನಮಗೆ ಇಂಗ್ಲೆಂಡಿನಿಂದ ಬಂದಿದ್ದರೂ ಮೂಲತಃ ಅಲ್ಲಿಂದ ಬರೆದ ಪತ್ರವಿದಲ್ಲ. ಇಂಗ್ಲೆಂಡಿನಿಂದ ಬಂದಿರುವುದು ಅದರ ಛಾಯಾಪ್ರತಿ ಮಾತ್ರ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ಪತ್ರದ ಒಕ್ಕಣಿಕೆಯಲ್ಲಿ ಪತ್ರಸರಣಿಯನ್ನು ಮುಂದುವರಿಸಿದ ನವಮಣಿಯೆಂಬ ವ್ಯಕ್ತಿಗೆ 5ಲಕ್ಷ ರೂ.ಗಳು ದೊರೆತವೆಂದು ಹೇಳಲಾಗಿದೆಯೇ ಹೊರತು 5ಲಕ್ಷ ಪೌಂಡ್ ಸಿಕ್ಕಿತೆಂದು ಹೇಳಿಲ್ಲ. ಇಂಗ್ಲೆಂಡಿನಲ್ಲಿ ಚಲಾವಣೆಯಲ್ಲಿರುವ ಹಣ ಪೌಂಡ್, ರೂಪಾಯಿಯಲ್ಲ. ಆದಕಾರಣ ಈ ಪತ್ರವು ತನ್ನ ವಿಶ್ವಪರ್ಯಟನೆಯನ್ನು ಭಾರತದಿಂದಲೇ ಆರಂಭಿಸಿರಬೇಕೆಂದೂ, ಇದರ ಮೂಲ ಒಕ್ಕಣಿಕೆಯ ಕರಡುಪ್ರತಿಯು ಭಾರತದಲ್ಲಿಯೇ ಸಿದ್ಧವಾಗಿರಬೇಕೆಂದೂ ನಿಃಸಂಶಯವಾಗಿ ಹೇಳಬಹುದಾಗಿದೆ! ಇದರಲ್ಲಿ ಉಲ್ಲೇಖಗೊಂಡಿರುವ ನವಮಣಿ, ರಾಮನ್, ಸೆಲ್ವನಾಯಕನ್ ಮೊದಲಾದ ಹೆಸರುಗಳನ್ನು ನೋಡಿದರೆ ಈ ಪತ್ರ ತನ್ನ ಮೊದಲ ವಿಶ್ವಯಾತ್ರೆಯನ್ನು ತಮಿಳುನಾಡಿನಿಂದಲೋ, ಕೇರಳದಿಂದಲೋ ಅಥವಾ ಬೆಂಗಳೂರಿನಿಂದಲೋ ಆರಂಭಿಸಿರಬೇಕೆಂದು ತೋರುತ್ತದೆ. ಈ ಪತ್ರ ಪ್ರಪಂಚವನ್ನು ನಾಲ್ಕು ಬಾರಿ ಪ್ರದಕ್ಷಿಣೆ ಮಾಡಿ ಬಂದಿರುವುದಾಗಿ ಹೇಳುತ್ತದೆ. ಅದನ್ನು ನಂಬುವುದಾದರೂ ಹೇಗೆ? ಹೊರಟಿದ್ದು ಎಲ್ಲಿಂದ, ಬಂದಿದ್ದು ಎಲ್ಲಿಂದ? ಪ್ರಪಂಚದ ಯಾವ ಯಾವ ದೇಶಗಳಿಗೆ ಹೋಗಿ ಬಂತು? ಇದರ ದಿಗ್ವಿಜಯಯಾತ್ರೆಯನ್ನು ದಾಖಲಿಸಿದವರು ಯಾರು, ಹೇಗೆ, ಎಲ್ಲಿ ? ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಹೊರಟ ಏರ್ ಇಂಡಿಯಾ ವಿಮಾನ ಪ್ರಪಂಚದ ಪ್ರಮುಖ ನಗರಗಳಾದ ಲಂಡನ್, ನ್ಯೂಯಾರ್ಕ್, ಲಾಸ್ ಆಂಜಲೀಸ್, ಟೋಕಿಯೋ, ಹಾಂಕಾಂಗ್ ಮಾರ್ಗವಾಗಿ ವಾಪಾಸ್ ಬೆಂಗಳೂರಿಗೆ ಬಂದರೆ ಒಂದು ಸುತ್ತು ಬಂತು ಎಂದು ಹೇಳಬಹುದು. ಆದರೆ ಈ ಸರಣಿಪತ್ರ ಹೀಗೆ ಒಂದಲ್ಲ ನಾಲ್ಕು ಬಾರಿ ವಿಶ್ವಪ್ರದಕ್ಷಿಣೆ ಮಾಡಿ ದಿಗ್ವಿಜಯ ಸಾಧಿಸಿರುವುದನ್ನು ಸಾಬೀತುಪಡಿಸುವುದಾದರೂ ಹೇಗೆ?
ಇಂಗ್ಲೆಂಡಿನಿಂದ ಈ ಪತ್ರ ಕಳುಹಿಸಿದ ಅನಾಮಧೇಯ ವ್ಯಕ್ತಿ ನಮ್ಮ ಶುಭಚಿಂತಕ ಇರಬೇಕು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಹಾಗೆ ಕಳುಹಿಸುವುದರಿಂದ ತನಗೆ 5 ಲಕ್ಷ ರೂ. ಸಿಗುತ್ತದೆ ಎಂಬ ಲೆಕ್ಕಾಚಾರವಾಗಲೀ, ನಮಗೆ 5 ಲಕ್ಷ ಸಿಗುತ್ತದೆ ಎಂಬ ನಿರೀಕ್ಷೆಯಾಗಲೀ ಅವರಿಗೆ ಇದೆಯೆಂದು ನಾವು ನಂಬುವುದಿಲ್ಲ. ಅವರ ಮನಸ್ಸಿಗೆ ಉಂಟಾಗಿರುವ ತಾಕಲಾಟವೆಂದರೆ ಪತ್ರದಲ್ಲಿ ಸೂಚಿಸಿರುವ ಪ್ರಕಾರ ಎಲ್ಲಿ ರಾಮನ್ ನಂತೆ ನೌಕರಿಯನ್ನು ಕಳೆದುಕೊಳ್ಳುತ್ತೇನೋ, ಎಲ್ಲಿ ಸೆಲ್ವನಾಯಕನಂತೆ ಸಾಯುತ್ತೇನೋ ಎಂಬ ಭಯ. ದೂರದ ಇಂಗ್ಲೆಂಡಿನಲ್ಲಿರುವ ಆ ವ್ಯಕ್ತಿ ತನ್ನ ನೌಕರಿ/ಪ್ರಾಣಕ್ಕೇ ಬಂದಿರುವ ಕುತ್ತನ್ನು ಉಪೇಕ್ಷಿಸುವುದು ಹೇಗೆ ಸಾಧ್ಯ? ನೌಕರಿ ಹೋದರೆ ಜೀವಿಸುವುದಾದರೂ ಹೇಗೆ? ಸತ್ತುಹೋದರೆ ಹೆಂಡತಿಮಕ್ಕಳ ಗತಿ ಏನು? ಅವರಿಗೆ ಆಶ್ರಯ ಕೊಡುವವರು ಯಾರು? ಮಕ್ಕಳ ಮೆಡಿಕಲ್ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಬೇಕಾದ ದುಬಾರಿ ವಂತಿಗೆ ಹಣವನ್ನು ಕೊಡುವವರು ಯಾರು? ಮಗಳ ಮದುವೆಗೆ ಮಾಡಿದ ಲಕ್ಷಾಂತರ ರೂ. ಸಾಲ ತೀರಿಸುವವರು ಯಾರು? ಇವೆಲ್ಲಾ ನೆನೆಸಿಕೊಂಡಾಗ ಆ ಪತ್ರವನ್ನು ಪ್ರತಿಲಿಪಿಮಾಡಿ 20 ಜನ ಸ್ನೇಹಿತರಿಗೆ ಕಳುಹಿಸುವುದು ಏನು ಮಹಾ ದೊಡ್ಡ ಕೆಲಸ? ಅದಕ್ಕೆಲ್ಲಾ ಏನು ಮಹಾ ಖರ್ಚು ಬರುತ್ತದೆ? ಆ ಪತ್ರದಲ್ಲಿರುವ ಹೆಸರುಗಳು, ಘಟನೆಗಳು ಕಪೋಲಕಲ್ಪಿತವಿರಬೇಕೆಂಬ ಅನುಮಾನ ಮನಸ್ಸಿನಲ್ಲಿ ಸುಳಿದಾಡಿದರೂ ಅಕಸ್ಮಾತ್ ಅದರಲ್ಲಿ ಎಚ್ಚರಿಸಿರುವಂತೆ ಏನಾದರೂ ದುರ್ಘಟನೆ ಸಂಭವಿಸಿದರೆ ಗತಿ ಏನು ಎಂದು ಆ ಯಾವ ವಿಪತ್ತನ್ನೂ ತಂದುಕೊಳ್ಳಲು ಅವನು ಸಿದ್ಧನಾಗುವುದಿಲ್ಲ. ಮನೆಯಲ್ಲಿ ನಡೆದ ಏನೋ ಒಂದು ಚಿಕ್ಕಘಟನೆ, ಅದು ಮಕ್ಕಳಿಗೆ ಬಂದ ಜ್ವರ, ಶೀತ, ನೆಗಡಿ, ಕೆಮ್ಮು ಇರಬಹುದು ಅಥವಾ ದಾರಿಯಲ್ಲಿ ಹೋಗುವಾಗ ಸ್ವಲ್ಪದರಲ್ಲಿಯೇ ಪಾರಾದ ರಸ್ತೆ ಅಪಘಾತ ಇರಬಹುದು ಅವೆಲ್ಲಾ ಮನಸ್ಸಿನಲ್ಲಿ ಸುಳಿದಾಡಿ ನಡುಕವನ್ನುಂಟುಮಾಡುತ್ತವೆ. ಇದಕ್ಕೆಲ್ಲಾ ಆ ಪತ್ರವನ್ನು ಉಪೇಕ್ಷಿಸಿದ್ದೇ ಕಾರಣ ನಿಮಗೆ ಹೆಂಡತಿ-ಮಕ್ಕಳ ಯೋಚನೆ ಏನಾದರೂ ಇದೆಯೇ? ಎಂದು ಹರಿಹಾಯುತ್ತಾಳೆ ಕೈಹಿಡಿದ ಮನದನ್ನೆ. ಬೇರೆ ಮದುವೆಯಾಗಲು ಬೇಗ ನಾನು ಸಾಯಲಿ ಎಂದು ಕಾಯುತ್ತಿದ್ದೀರೋ ಏನೋ ಎಂದು ಹಂಗಿಸಿ ಕಂಬನಿಗರಿಯುತ್ತಾಳೆ. ಈ ರೀತಿ ಸಂಸಾರದಲ್ಲಿ ಅನುಮಾನ ಆತಂಕಗಳನ್ನು ಸೃಷ್ಟಿ ಮಾಡಿದ ಆ ಮಾಂತ್ರಿಕ ಪತ್ರವನ್ನು ಇನ್ನು ಉಪೇಕ್ಷಿಸುವುದು ಸರಿಯಲ್ಲ ಎಂದು ನಿರ್ಧರಿಸಿ ಅದರ 20 ಪ್ರತಿಗಳನ್ನು ರವಾನಿಸಲು ಅವನು ಪೋಸ್ಟ್ ಆಫೀಸಿಗೆ ಧಾವಿಸುತ್ತಾನೆ. (ಅಷ್ಟೊಂದು ಪತ್ರಗಳನ್ನು ಅವನು ನಿತ್ಯವೂ ತುದಿಗಾಲ ಮೇಲೆ ನಿಂತು ಕಾಯುತ್ತಿರುವ ತನಗೆ ಜನ್ಮ ನೀಡಿದ ತಂದೆತಾಯಿಗಳಿಗೆ ಬರೆದಿದ್ದಾನೆಂಬುದೇ ನಮಗೆ ಅನುಮಾನ), ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿದ ದೇಶದಲ್ಲಿದ್ದರೂ ತನ್ನ ಅತಂತ್ರಸ್ಥಿತಿಯನ್ನು ನೆನೆಸಿಕೊಂಡು ಮಾನಸಿಕ ದೌರ್ಬಲ್ಯಕ್ಕೆ ಒಳಗಾಗುತ್ತಾನೆ. ಸುಲಭವಾಗಿ ಛಾಯಾಪ್ರತಿಯನ್ನು ಮಾಡುವ xerox ಯಂತ್ರವನ್ನು ಕಂಡುಹಿಡಿದ ವಿಜ್ಞಾನಿಗೆ ಅವನು ಧನ್ಯವಾದ ಹೇಳಬೇಕು. ಆ ಯಂತ್ರ ಇಲ್ಲದೇ ಹೋಗಿದ್ದರೆ ಅಂಚೆಪೆಟ್ಟಿಗೆಯ ಮೇಲೆ ನಮೂದಿಸಿರುವ ಕೊನೆಯ clearance ವೇಳೆಯೊಳಗೆ ಅವನು ಆ ಪತ್ರದ 20 ಪ್ರತಿಗಳನ್ನು ತಯಾರು ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಆ ರೀತಿ ಭಯಭೀತಿಯನ್ನು ಹುಟ್ಟಿಸಿ ಅವನನ್ನು ಅಂಚೆಕಛೇರಿಗೆ ಓಡುವಂತೆ ಮಾಡಿದ ಅವನ ಆತ್ಮೀಯ ಗೆಳೆಯ ಯಾರಿರಬಹುದು? ಅವನ ಉದ್ದೇಶವಾದರೂ ಏನು? ಆತ್ಮೀಯ ಸ್ನೇಹಿತರ ಮನಸ್ಸಿನಲ್ಲಿ ಇಂತಹ ದುಗುಡವನ್ನು ನಿರ್ಮಾಣಮಾಡುವುದು ಸರಿಯೇ? ಸಾವಿನ ಭೀತಿ ಎಂಥವರನ್ನೂ ಅಧೀರರನ್ನಾಗಿಸುತ್ತದೆ. ಜಗವೆಲ್ಲ ನಗುತಿರಲು ನೀನಳುತ ಬಂದೆ, ಜಗವೆಲ್ಲ ಅಳುತಿರಲು ನೀ ನಗುತ ಹೋಗು ಎಂಬ ವೇದಾಂತದ ಮಾತು ಹೇಳುವುದು ಸುಲಭ. ಈ ವಿವೇಕದ ಮಾತನ್ನು ಹೇಳಿದ ಕವಿಯಾದರೂ ನಗುನಗುತ್ತಾ ದೇಹತ್ಯಾಗ ಮಾಡಿರಬಹುದೇ? ಸಾವಿನ ಹೊಸ್ತಿಲಲ್ಲಿರುವ ಯಾವ ಜೀವಿಯೂ ಈ ಸುಂದರವಾದ ಜಗತ್ತನ್ನು ಬಿಟ್ಟು ಹೋಗಲು ಇಷ್ಟಪಡುವುದಿಲ್ಲ. ಆದರೂ ಜೀವನದಲ್ಲಿ ಕೆಲವೊಂದು ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಾವಿಗೆ ಅಂಜದೆ "ಮರಣವೇ ಮಹಾನವಮಿ" ಎಂದು ಸಾವನ್ನು ಸ್ವಾಗತಿಸಿದ ಮಹಾನ್ ಚೇತನಗಳನ್ನು ಇತಿಹಾಸದಲ್ಲಿ ನೋಡಬಹುದಾಗಿದೆ. "ನಾಳೆ ಬಪ್ಪುದು ನಮಗಿಂದೇ ಬರಲಿ, ಇಂದು ಬಪ್ಪುದು ನಮಗೀಗಲೇ ಬರಲಿ, ಇದಕಾರಂಜುವರು, ಇದಕಾರಳುಕುವರು? ಜಾತಸ್ಯ ಮರಣಂ ಧ್ರವಂ" ಎಂದ ಬಸವಣ್ಣನವರನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ನೇಣುಗಂಬವನ್ನೇರಿದ ವೀರ ಹುತಾತ್ಮರನ್ನು ನೆನೆಸಿಕೊಳ್ಳಬಹುದು. ಎದೆಗೆ ಗುಂಡು ತಾಗಿದಾಗ ಹೇ ರಾಮ್ ಎಂದು ಉದ್ಗರಿಸಿ ಕೊನೆಯುಸಿರೆಳೆದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯನ್ನು ಸ್ಮರಿಸಿಕೊಳ್ಳಬಹುದು.
"Cowards die many times before their death" (ಹೇಡಿಗಳು ಸಾವಿಗೆ ಮುಂಚೆ ನೂರಾರು ಬಾರಿ ಸಾಯುತ್ತಾರೆ) ಎನ್ನುತ್ತಾನೆ ಷೇಕ್ಸ್ ಪಿಯರ್. ಈ ಮಾತಿಗೆ ತದ್ವಿರುದ್ಧವಾಗಿ ಸಾವನ್ನು ಮೆಟ್ಟಿನಿಂತ ಧೀರಪುರುಷರೂ ಇತಿಹಾಸದಲ್ಲಿ ಆಗಿಹೋಗಿದ್ದಾರೆ. ನಮ್ಮ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಬದುಕಿನಲ್ಲಿ ಅಂತಹ ಆತ್ಮವಿಶ್ವಾಸವಿತ್ತು. ಯಾವುದೋ ಪ್ರಸಂಗದಲ್ಲಿ ಅವರಾಡಿದ ಈ ಮುಂದಿನ ಮಾತು ನಮ್ಮ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ: "ಸಾಕ್ಷಾತ್ ಯಮನೇ ಬಂದು ನಿಮ್ಮ ಆಯುಷ್ಯ ಪೂರ್ತಿಯಾಯಿತು, ಇನ್ನು ನೀವು ಹೊರಡಿರಿ ಎಂದು ಹೇಳಿದರೆ ನಮ್ಮ ಕರ್ತವ್ಯಗಳು ಮುಗಿಯುವವರೆಗೂ ಅವನನ್ನು ಮಠದ ಮಹಾದ್ವಾರದಲ್ಲಿ ಒಂಟಿಗಾಲ ಮೇಲೆ ನಿಲ್ಲಿಸುತ್ತೇವೆ!" ಶರಣರ ಸಾವ ಮರಣದಲ್ಲಿ ನೋಡು ಎನ್ನುವಂತೆ ಅವರ ಈ ಮಾತಿಗನುಗುಣವಾಗಿ ಒಮ್ಮೆ ಅವರ ಸನಿಹಕ್ಕೆ ಬಂದಿದ್ದ ಸಾವು ವೈದ್ಯರೆಲ್ಲರೂ ಅಚ್ಚರಿಪಡುವಂತೆ ಮತ್ತೆ 5 ವರ್ಷಗಳ ಕಾಲ ಒಂಟಿಗಾಲ ಮೇಲೆ ನಿಲ್ಲಬೇಕಾಯಿತು ಎಂಬುದನ್ನು ಅವರ ಕೊನೆಯ ದಿನಗಳನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು.
ಅಂತಹ ಆತ್ಮವಿಶ್ವಾಸ ಬದುಕಿನಲ್ಲಿ ಎಲ್ಲರಿಗೂ ಇರುವುದಿಲ್ಲ. ಜೀವನದಲ್ಲಿ ದುರ್ಬಲ ಮನಸ್ಸುಳ್ಳವರಿಗೆ ಆತ್ಮವಿಶ್ವಾಸ ತುಂಬುವ ವ್ಯಕ್ತಿಗಳು ಬೇಕು. ಕಳೆದ ವಾರದ ನಮ್ಮ ಅಂಕಣ ಬರಹಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರಿನ ಓದುಗರಾದ ಕಾರ್ತಿಕ್ ಎಂ ಶಾಸ್ತ್ರಿಯವರಿಗೆ ಈ ರೀತಿಯ ಸರಣಿಪತ್ರ ಕೆಲವು ತಿಂಗಳ ಹಿಂದೆ ಬಂದಾಗ ಅವರಿಗೆ ಕ್ಷಣಕಾಲ ಏನು ಮಾಡಬೇಕೆಂದು ತಿಳಿಯದಾಯಿತಂತೆ. ಅವರು ತಮ್ಮ ತಾಯಿಯನ್ನು ಕೇಳಿದಾಗ ದೇವರ ಮೇಲೆ ಭಾರ ಹಾಕಿ ಸುಮ್ಮನಿರು, ಚಿಂತೆ ಮಾಡಬೇಡ, ಇದನ್ನು ನಿನ್ನ ಸ್ನೇಹಿತರಿಗೆ ಕಳುಹಿಸಿ ಅವರ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಬೇಡ ಎಂದು ಕಿವಿಮಾತು ಹೇಳಿದ್ದರಂತೆ. ತಾಯಿಯ ಮಾತಿನಂತೆ ನಡೆದುಕೊಂಡ ಅವರಿಗೆ ಯಾವ ಕೇಡೂ ಉಂಟಾಗಿಲ್ಲ. ಶ್ರದ್ಧಾಳು ಓದುಗರೇ! ನಿಮಗೂ ಇಂತಹ ಪತ್ರಗಳು ಬಂದಾಗ ಗಾಬರಿಯಾಗಬೇಡಿ. ಇಂತಹ ಪತ್ರಸರಣಿಯನ್ನು ಮುಂದುವರಿಸುವುದು ಖಂಡಿತಾ ದೇವರ ಮೇಲಿನ ಭಕ್ತಿಯಿಂದ ಅಲ್ಲ. ದೇವರ ಹೆಸರಿನಲ್ಲಿ ಹುಟ್ಟಿಸಿರುವ ಭಯಭೀತಿಗಳಿಂದ! ಇದು ದೇವರ ಮೇಲಿನ ಭಕ್ತಿಯನ್ನು ತೋರಿಸುವುದಿಲ್ಲ; ಮನಸ್ಸಿನ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ. ಇದನ್ನು ನಿಲ್ಲಿಸುವುದರಿಂದ ದೇವರೇನೂ ಸಿಟ್ಟಾಗುವುದಿಲ್ಲ. ಇದು ದೇವರ ಮೇಲೆ ಇಟ್ಟಿರುವ ನಂಬಿಕೆಯಲ್ಲ, ದೇವರ ಮೇಲೆ ನಂಬಿಕೆ ಇಟ್ಟಿರುವ ಆತ್ಮೀಯ ಸ್ನೇಹಿತರಿಗೆ ಮಾಡುವ ವಿಶ್ವಾಸದ್ರೋಹ! ಇವು ಒಂಥರಾ ಬೆದರಿಕೆಯ ಪತ್ರಗಳಲ್ಲದೆ ಬೇರೆ ಅಲ್ಲ ಭಕ್ತವತ್ಸಲನಾದ ದೇವರಿಗೆ ಈ ತೆರನಾದ ಯಾವ ಜಾಹೀರಾತುಗಳೂ ಬೇಕಿಲ್ಲ. ಅವನಿಗೆ ಬೇಕಾಗಿರುವುದು ಶುದ್ಧಾಂತಃಕರಣದಿಂದ ಕೂಡಿದ ನಿಮ್ಮ ಹೃದಯದ ನಿರ್ವ್ಯಾಜ ಭಕ್ತಿ.
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತಾ ಪ್ರಯಚ್ಛತಿ |
ತದಹಂ ಭಕ್ಕುವಹೃತಮಶ್ನಾಮಿ ಪ್ರಯತಾತನಃ || -(ಭಗವದ್ಗೀತೆ 9.26)
ಅದಕ್ಕಾಗಿ ಪಕ್ಕದ ಮನೆಯವರ ಕೈತೋಟದೊಳಕ್ಕೆ ಉದ್ದನೆಯ ಕೈಚಾಚಿ ತಂದ ಪತ್ರೆಪುಷ್ಪಗಳು ಯಾವ ದೇವರಿಗೆ ಪ್ರೀತಿಯಾಗಬಲ್ಲವು? ಮಾರುಕಟ್ಟೆಯಿಂದ ತಂದ ಮಲ್ಲಿಗೆಯ ಹೂವನ್ನು ಮುಡಿಗೇರಿಸಿದ ಮಾತ್ರಕ್ಕೆ ನಿಮ್ಮ ಮಡದಿಯೇ ಮರುಳಾಗುವುದಿಲ್ಲವೆಂದರೆ ನಿಮ್ಮ ಒಳಹೊರಗನ್ನು ಬಲ್ಲ ದೇವರನ್ನು ಮರುಳುಗೊಳಿಸಲು ಸಾಧ್ಯವೇ? ನೀವೇ ಹೇಳಿ.
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು
ನೀನು ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು
ಅರಿವು ಕಣ್ಣೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಾ!
– ಅಕ್ಕಮಹಾದೇವಿ
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 14.10.2009.