ಬದುಕಿಗೆ ಬೇಕಾದ ತಾಳಮೇಳ
ಈ ಜಗತ್ತಿನಲ್ಲಿ ಕೋಟ್ಯಂತರ ಜನರಿದ್ದಾರೆ. ವಿಭಿನ್ನ ದೇಶಗಳಲ್ಲಿರುವ, ವಿಭಿನ್ನ ಭಾಷೆಗಳನ್ನು ಮಾತನಾಡುವ ಈ ಜನರು ಎಲ್ಲರೂ ಎಲ್ಲರನ್ನೂ ಮಾತನಾಡಿಸುವುದಕ್ಕಾಗಲೀ, ನೋಡುವುದಕ್ಕಾಗಲೀ ಒಂದು ಜೀವಿತಾವಧಿಯಲ್ಲಿ ಸಾಧ್ಯವಾಗುವುದಿಲ್ಲ. ಅವರಲ್ಲಿ ಕೆಲವೇ ಕೆಲವರು ಪರಸ್ಪರ ಸಂಧಿಸುತ್ತಾರೆ, ಮಾತನಾಡಿಸುತ್ತಾರೆ. ಈ ವಿಷಯ ಕುರಿತು ಸಂಸ್ಕೃತ ಸೂಕ್ತಿಯೊಂದು ಹೀಗೆ ಹೇಳುತ್ತದೆ: “ಸತಾಂ ಸದ್ಭಿಃ ಸಂಗಃ ಕಥಮಪಿ ಪುಣ್ಯೇನ ಹಿ ಭವತಿ!” ಅಂದರೆ ಒಳ್ಳೆಯವರು ಒಳ್ಳೆಯವರೊಂದಿಗೆ ಸಂಧಿಸುವುದು ಪೂರ್ವಜನ್ಮದ ಪುಣ್ಯದ ಫಲ. ಇದು ಜಗತ್ತಿನಲ್ಲಿ ಒಳ್ಳೆಯದನ್ನೇ ನೋಡಿ ಹೇಳುವ ಮಾತು. ಕರ್ನಾಟಕದ ಇತ್ತೀಚಿನ ಕೆಟ್ಟ ರೆಸಾರ್ಟ್ ರಾಜಕೀಯ ಸಂಸ್ಕೃತಿಯನ್ನು ನೋಡಿದರೆ ಈ ಸೂಕ್ತಿಯನ್ನು ಬದಲಿಸಿ “ಶಠೈಃ ಶಠಾನಾಂ ಸಂಗಃ ಕಥಮಪಿ ಪಾಪೇನ ಹಿ ಭವತಿ” ಎಂದು ತಿರುವುಮುರುವಾಗಿ ಹೇಳಬೇಕೆನಿಸುತ್ತದೆ. ಕೆಟ್ಟವರು ಕೆಟ್ಟವರೊಂದಿಗೆ ಮಾಡುವ ಲಜ್ಜೆಗೇಡಿತನದ ಒಡನಾಟ ಮತ್ತು ದುಷ್ಟಕೂಟಗಳು ಪೂರ್ವಜನ್ಮದ ಪಾಪದ ಫಲವೋ, ಪ್ರಜಾಪ್ರಭುತ್ವದ ದೌರ್ಭಾಗ್ಯವೋ ಹೇಳಲಾಗದು. ಅಂಥವರನ್ನು ಆರಿಸಿ ಕಳುಹಿಸಿದ ಜನರ ಮಠ್ಠಾಳತನವೆಂದು ಮಾತ್ರ ನಿಸ್ಸಂದೇಹವಾಗಿ ಹೇಳಬಹುದು. ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ಮೊನ್ನೆ ವಿಧಾನಸಭೆಯಲ್ಲಿ ಜನಪ್ರತಿನಿಧಿಗಳ ಮಧ್ಯೆ ನಡೆದ ಮಾರಾಮಾರಿಯ ವಿವರವಾದ ಕದನಕೋಲಾಹಲ ವರದಿಗಳು ಬಂದಿವೆ. ಅಧಿಕಾರದ ಹಗ್ಗಜಗ್ಗಾಟದಲ್ಲಿ ಕಳೆದ ಒಂದು ವಾರದಿಂದ ಕರ್ನಾಟಕದ ಒಳಹೊರಗೆ ನಡೆದ ನಿರ್ಲಜ್ಜ ರಾಜಕಾರಣವನ್ನು ದೂಷಿಸಲು ಕನ್ನಡದ ಶಬ್ದಕೋಶಗಳಲ್ಲಿರುವ ಬೈಗುಳಗಳು ಸಾಲವು ಎಂದು ಸಕಾಲಿಕ ಅಂಕಣಕಾರ ಲೋಕೇಶ್ ಕಾಯರ್ಗ ಬರೆದಿದ್ದಾರೆ. ನಿನ್ನೆಯ ವಿಜಯಕರ್ನಾಟಕ ಪತ್ರಿಕೆಯ ಮುಖಪುಟದಲ್ಲಿ ಶಾಸಕರ/ಮಂತ್ರಿಗಳ ಈ ಲಜ್ಜೆಗೇಡಿ ವರ್ತನೆಯ ಸಚಿತ್ರ ವರದಿಯ ಮೇಲ್ಭಾಗದಲ್ಲಿ ಪತ್ರಿಕೆಯ ಅಗಲಕ್ಕೂ ಸ್ತ್ರೀಪುರುಷರ ಇಪ್ಪತ್ತು ವಿಭಿನ್ನ ವಿನ್ಯಾಸದ ಚಪ್ಪಲಿಗಳ ಜಾಹಿರಾತು ಬಂದಿದೆ. ಇದರ ಧ್ವನ್ಯರ್ಥ ಏನಿರಬಹುದು? ಓದುಗರ ಊಹೆಗೆ ಬಿಟ್ಟ ವಿಚಾರ. ಸಂಪಾದಕರು ಪ್ರಜ್ಞಾಪೂರ್ವಕವಾಗಿ ಈ ಸಕಾಲಿಕ ಜಾಹಿರಾತನ್ನು ಆಯ್ಕೆ ಮಾಡಿಕೊಂಡಿದ್ದರೆ ಅಷ್ಟೊಂದು ದುಬಾರಿ ಬೆಲೆಯ ಪಾದರಕ್ಷೆಗಳು ಬೇಕೇ, ಮನೆಯಲ್ಲೇ ಇರುವ ಹಳೆಯ ಹತ್ತಿಪ್ಪತ್ತು ಸಾಕೇ ಎಂಬುದು ಮಾತ್ರ ಚಿಂತನಾರ್ಹ! ಈ ಕೆಲಸವನ್ನು ಪ್ರಜ್ಞಾವಂತ ಮತದಾರರು ಮುಂಬರುವ ಚುನಾವಣೆಗಳಲ್ಲಿ ಮಾಡಿದರೆ ವಿಧಾನಸಭೆಯಲ್ಲಿ ನಡೆಯುವ ಇಂತಹ ಭೀಭತ್ಸ ದೃಶ್ಯಗಳು ಕೊನೆಗೊಳ್ಳಬಹುದು. ಅದೇನೆ ಇರಲಿ, ಇದು ಪ್ರಸ್ತುತ ಲೇಖನದ ಪ್ರಮುಖ ವಿಷಯವಲ್ಲ. ಪ್ರಾಸಂಗಿಕವಾಗಿ ಪ್ರಸಕ್ತ ವಿದ್ಯಮಾನಗಳನ್ನು ನೋಡಿ ಬೇಸರಗೊಂಡು ತಡೆಯಲಾರದೆ ಬರೆದ ನೋವಿನ ವಿಚಾರ.
ಬದುಕಿನ ವಿವಿಧ ಘಟ್ಟಗಳಲ್ಲಿ, ದೈನಂದಿನ ವ್ಯವಹಾರಗಳಲ್ಲಿ ಅನೇಕರೊಂದಿಗೆ ಮಾತನಾಡುವುದು ಸಾಧ್ಯವಾದರೂ ಎಲ್ಲರೂ ಆತ್ಮೀಯರಾಗುವುದಿಲ್ಲ. ವ್ಯಕ್ತಿ ವ್ಯಕ್ತಿಗಳ ಸಂಬಂಧ ಅನೇಕ ವರ್ತುಲಗಳಿಂದ ಕೂಡಿರುತ್ತದೆ. ನಿಶ್ಚಲವಾದ ಕೊಳದ ನೀರಿಗೆ ಒಂದು ಕಲ್ಲನ್ನು ಎಸೆದರೆ ಹೇಗೆ ವೃತ್ತಾಕಾರದ ಅಲೆಗಳು ಆವಿರ್ಭವಿಸುತ್ತವೆಯೋ ಹಾಗೆ. ಅಥವಾ ರೇಖಾಗಣಿತವನ್ನು ಬಲ್ಲ ಶಾಲಾ ಮಕ್ಕಳು ಒಂದು ಬಿಂದುವಿನ ಸುತ್ತ ವಿವಿಧ ತ್ರಿಜ್ಯದ (radius) ವೃತ್ತಗಳನ್ನು ಎಳೆಯುತ್ತಾ ಹೋದರೆ ಹೇಗೋ ಹಾಗೆ. ವ್ಯಕ್ತಿಯನ್ನು ಕೇಂದ್ರಬಿಂದುವನ್ನಾಗಿಸಿಕೊಂಡರೆ ಅವನ ಸುತ್ತ ಇರುವ ಸಂಬಂಧಗಳು ವಿವಿಧ ವ್ಯಾಸದ ವೃತ್ತಗಳಂತೆ ಇರುತ್ತವೆ. ಕೆಲವರು ತೀರಾ ಹತ್ತಿರದಲ್ಲಿರುತ್ತಾರೆ (inner circle) ಇನ್ನು ಕೆಲವರು ದೂರದಲ್ಲಿರುತ್ತಾರೆ (outer circle). ವ್ಯಕ್ತಿ-ವ್ಯಕ್ತಿಗಳ ಸಂಬಂಧದ ಹರವು ಅವರ ಮಧ್ಯೆ ಇರುವ ರಕ್ತಸಂಬಂಧವನ್ನು ಅವಲಂಬಿಸಿರುವುದಿಲ್ಲ. ಮನೆಯೊಳಗೆ ಒಟ್ಟಿಗೆ ಇದ್ದ ಮಾತ್ರಕ್ಕೆ ಮನಸ್ಸುಗಳು ಒಂದಾಗಿ ಇರುತ್ತವೆಯೆಂದು ನಂಬಲಾಗದು. ಹತ್ತಿರದಲ್ಲಿದ್ದರೂ ದೂರದವರಂತೆ ಇರುತ್ತಾರೆ. ದೂರದಲ್ಲಿದ್ದರೂ ಹತ್ತಿರದವರಾಗಿರುತ್ತಾರೆ. ಅದು ಅವರವರ ಮನಸ್ಸನ್ನು, ಹೃದಯದಲ್ಲಿರುವ ಭಾವನೆಗಳನ್ನು ಅವಲಂಬಿಸಿರುತ್ತದೆ. ಒಂದೇ ನಮೂನೆಯ ರೆಕ್ಕೆಪುಕ್ಕವುಳ್ಳ ಹಕ್ಕಿಗಳು ಒಂದೆಡೆ ಸೇರುತ್ತವೆ ಎಂಬ ನಾಣ್ಣುಡಿಯೊಂದು ಆಂಗ್ಲಭಾಷೆಯಲ್ಲಿದೆ (Birds of the same feather flock together). ಇಲ್ಲಿ ಬಳಸಿರುವ ಹಕ್ಕಿಗಳ ಪುಕ್ಕ ಅವರವರ ಗುಣಸ್ವಭಾವಗಳ ಪ್ರತೀಕ.
ನಮ್ಮ ಆತ್ಮೀಯ ಒಡನಾಟವಿದ್ದ ಹಿರಿಯ ವಯಸ್ಸಿನ ಶಿಷ್ಯರು ಕೆಲವರು ಇತ್ತೀಚೆಗೆ ವಿಧಿವಶರಾದರು. ಸಾವಿನ ಸರದಿಯೋ ಎಂಬಂತೆ ಒಬ್ಬರ ನಂತರ ಮತ್ತೊಬ್ಬರು ಮರಣ ಹೊಂದಿದರು. ಅವರಲ್ಲಿ ಕೆಲವರು ಆದರ್ಶ ಶಿಕ್ಷಕರಾಗಿದ್ದರು. ನಿವೃತ್ತರಾದ ಮೇಲೆ ನಮ್ಮ ಮಠದ ಶೈಕ್ಷಣಿಕ ಮತ್ತು ಸಾಮಾಜಿಕ ಸೇವಾಕಾರ್ಯಗಳಲ್ಲಿ ಬಹಳವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದವರು. ಅವರ ನಿಧನದಿಂದ ದುಃಖತಪ್ತರಾಗಿದ್ದ ಕುಟುಂಬವರ್ಗದವರನ್ನು ಸಂತೈಸಿ ಅಂತ್ಯಸಂಸ್ಕಾರಕ್ಕೆ ಹೋಗಿ ಬಂದು ಒಂದೆರಡು ದಿನಗಳಾಗಿರಲಿಲ್ಲ. ದೂರದ ಚೆನ್ನೈನಿಂದ ಮತ್ತೊಂದು ಸಾವಿನ ಸುದ್ದಿ ಬಂತು. ಮೂಲತಃ ತಂಜಾವೂರಿನವರಾದ 82 ವರ್ಷ ವಯಸ್ಸಿನ ವಯೋವೃದ್ದೆ ಸದ್ಗೃಹಿಣಿ ಶ್ರೀಮತಿ ರಮಣಿ ಭಾಸ್ಕರ್ ಕೊನೆಯುಸಿರೆಳೆದಿದ್ದರು. ಐದು ವರ್ಷಗಳ ಹಿಂದೆ ಅವರ ಪತಿ ಮರಣ ಹೊಂದಿದ ದಿನವೇ ಅವರು ಇಹಲೋಕಯಾತ್ರೆ ಮುಗಿಸಿದ್ದರು. ಕೆಲವು ತಿಂಗಳ ಹಿಂದೆಯಷ್ಟೇ ಆವರ ಬಂಧುಗಳ ಮದುವೆಗೆಂದು ಆಹ್ವಾನಿತರಾಗಿ ಚೆನ್ನೈಗೆ ಹೋದಾಗ ಅವರ ಮನೆಗೆ ತೆರಳಿ ನಡೆಸಿದ ಆತ್ಮೀಯ ಸಂಭಾಷಣೆಯೇ ನಮ್ಮ ಅವರ ಕೊನೆಯ ಭೇಟಿಯಾಗುತ್ತದೆಯೆಂದು ಎಣಿಸಿರಲಿಲ್ಲ. ಅವರ ಅಳಿಯ ಡಾ. ರಾಮನಾಥನ್ ಮದ್ರಾಸು ವಿಶ್ವವಿದ್ಯಾನಿಲಯದ ಸಂಗೀತಶಾಸ್ತ್ರ ವಿಭಾಗದ ನಿವೃತ್ತ ಪ್ರೊಫೆಸರ್. ಚೆನ್ನೈನಿಂದ ಹೊರಡುವಾಗ ಅವರ ಮಗಳು ಹೇಮಾ ರಾಮನಾಥನ್ “ರಾಗಲಕ್ಷಣಸಂಗ್ರಹ” ಎಂಬ ಪುಸ್ತಕವನ್ನು ಕೊಟ್ಟಿದ್ದರು. ತಾಯಿಯಂತೆಯೇ ಗಂಭೀರ ವ್ಯಕ್ತಿತ್ವದ ನೇರ ನುಡಿಯ ಪ್ರತಿಭಾನ್ವಿತೆ ಹೇಮಾ ಕರ್ನಾಟಕ ಸಂಗೀತದ 72 ಮೇಳಕರ್ತ ರಾಗಗಳನ್ನು ಕುರಿತು ಸಂಸ್ಕೃತ, ತಮಿಳು, ಕನ್ನಡ ಮತ್ತು ತೆಲುಗಿನಲ್ಲಿ 5 ಶತಮಾನಗಳ (1550 ರಿಂದ 1904) ಅವಧಿಯಲ್ಲಿ ಬಂದಿರುವ ಸಂಗೀತಶಾಸ್ತ್ರ ಗ್ರಂಥಗಳನ್ನು ಆಧರಿಸಿ ಆಂಗ್ಲ ಭಾಷೆಯಲ್ಲಿ ಬರೆದ ಸುಮಾರು 1500 ಪುಟಗಳ ಉದ್ಗ್ರಂಥವದು. ಓದಲು ಕಾಲಾವಕಾಶ ದೊರೆಯದೆ ನಮ್ಮ ಅಧ್ಯಯನದ ಮೇಜಿನ ಮೇಲೆ ಹಾಗೆಯೇ ಇರುವುದು ನೆನಪಾಯಿತು. ಮೊಬೈಲ್ ರಿಂಗಣಿಸಿದಾಗ ಯಾವುದೋ ಕಾರ್ಯಕ್ರಮದ ನಿಮಿತ್ತ ಕಾರಿನಲ್ಲಿ ನಮ್ಮ ಪ್ರಯಾಣ ಸಾಗಿತ್ತು. ಆದರೆ ಅವರ ತಾಯಿಯ ಸಾವಿನ ದಾರುಣ ಸುದ್ದಿಯನ್ನು ಕೇಳಿ ತಲುಪಬೇಕಾಗಿದ್ದ ಸ್ಥಳವನ್ನು ಮುಟ್ಟುವ ಮೊದಲೇ ನಮ್ಮ ಮನಸ್ಸು 40 ವರ್ಷಗಳ ಹಿಂದಿನ ಕಾಶಿಯನ್ನು ತಲುಪಿತ್ತು.
ಶ್ರೀಮತಿ ರಮಣಿಯವರ ಪತಿ ಭಾಸ್ಕರ್ ರೈಲ್ವೆ ಇಲಾಖೆಯಲ್ಲಿ ಮುಖ್ಯ ಎಂಜಿನಿಯರಾಗಿ ಕೆಲಸಮಾಡುತ್ತಿದ್ದರು. ರಜಾ ವೇಳೆಯಲ್ಲಿ ಪತಿಯೊಂದಿಗೆ ತಮ್ಮ ಮಗಳು ಮತ್ತು ಅಳಿಯನನ್ನು ನೋಡಲು ಕಾಶಿಗೆ ಬರುತ್ತಿದ್ದರು. 70ರ ದಶಕದಲ್ಲಿ ಅವರ ಮಗಳು ಹೇಮಾ ಮತ್ತು ಅಳಿಯ ರಾಮನಾಥನ್ ನಮ್ಮಂತೆಯೇ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದರು. ಸಂಸ್ಕೃತ, ದರ್ಶನಶಾಸ್ತ್ರ ಮತ್ತು ಸಂಗೀತ ಹೀಗೆ ವಿಭಿನ್ನ ವಿಷಯಗಳಲ್ಲಿ ನಮ್ಮ ಅವರ ವಿಶೇಷ ಅಧ್ಯಯನ ಸಾಗಿತ್ತು. ವಿಶ್ವವಿದ್ಯಾನಿಲಯದ ಹೊರವಲಯದಲ್ಲಿ ಅವರ ಮನೆ ಇತ್ತು. ಕರ್ನಾಟಕ ಶಾಸ್ತ್ರೀಯ ಸಂಗೀತ ನಮ್ಮನ್ನು ಅವರ ಮನೆಗೆ ಎಳೆದೊಯ್ಯುತ್ತಿತ್ತು. ಕಾಶಿಯಲ್ಲಿದ್ದ ವರ್ಷಗಳಲ್ಲಿ ಅವರ ಮನೆಗೆ ಹೋಗದ ತಿಂಗಳುಗಳಿಲ್ಲ. ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಆಗಾಗ್ಗೆ ನಡೆಯುತ್ತಿದ್ದ ವಿದ್ಯಾರ್ಥಿಗಳ ಮುಷ್ಕರದ ದಿನಗಳಲ್ಲಿ ಪೋಲಿಸರ ಲಾಠಿ ಪ್ರಹಾರ ನಡೆದು ಹಾಸ್ಟೆಲ್ ಬಿಡುವಂತಾದಾಗ ಅವರ ಮನೆಯೇ ನಮಗೆ ಆಶ್ರಯ ತಾಣವಾಗುತ್ತಿತ್ತು. ಕಾಲೇಜಿನಿಂದ ಹಿಂದಿರುಗಿದ ಮೇಲೆ ಮುಸ್ಸಂಜೆಯ ಹೊತ್ತು ಅವರ ಮನೆಗೆ ಹೋದರೆ ಹೃದಯ ಮತ್ತು ಹೊಟ್ಟೆ ಎರಡಕ್ಕೂ ಪುಷ್ಕಳವಾದ ರುಚಿಕರ ಆಹಾರ ದೊರೆಯುತ್ತಿತ್ತು. ಸರಳ ಸಜ್ಜನಿಕೆಯ ಸುಸಂಸ್ಕೃತ ಮನೆತನದ ಹೇಮಾ ಕುಳಿತುಕೊಳ್ಳಲು ಚಾಪೆ ಹಾಸಿ ದೀಪ ಹಚ್ಚುತ್ತಿದ್ದರು. ಅವರ ಪತಿ ರಾಮನಾಥನ್ ಸ್ವತಃ ಪಿಟೀಲು ವಾದಕರಾದರೂ ನಮ್ಮ ಕೈಗೆ ಪಿಟೀಲು ನುಡಿಸಲು ಕೊಡುತ್ತಿದ್ದರು. ಮೈಸೂರಿನ ಪಿಟೀಲು ಚೌಡಯ್ಯನವರ ಬಿಡಾರಂ ಕೃಷ್ಣಪ್ಪ ಕಲಾಶಾಲೆಯಲ್ಲಿ ಅಭ್ಯಾಸಮಾಡಿದ್ದ ನಮಗೆ ಪಿಟೀಲಿನ ಕಮಾನಿನ (bow) ಮೇಲೆ ಹಿಡಿತವಿತ್ತು. ನಮ್ಮ ಕೈಬೆರಳುಗಳು ತಂತಿಗಳ ಮೇಲೆ ಲೀಲಾಜಾಲವಾಗಿ ಹರಿದಾಡಿ ಕಿವಿಗೆ ಆಪ್ಯಾಯಮಾನವಾಗಿ ಹೊರಹೊಮ್ಮಿಸುತ್ತಿದ್ದ ಗಮಕಸ್ವರಗಳನ್ನು ಕೇಳಿ ರಾಮನಾಥನ್ ದಂಪತಿಗಳು ತಲೆದೂಗುತ್ತಿದ್ದರು. ಹೇಮಾ ತಂಬೂರಿಯನ್ನು ಮೀಟುತ್ತಾ ಹಾಡಿದರೆ, ರಾಮನಾಥನ್ ಕೈಯಲ್ಲಿ ತಾಳ ಹಿಡಿದು ದನಿಗೂಡಿಸುತ್ತಿದ್ದರು. ದೀಪದ ಬೆಳಕಿನ ಸುತ್ತ ಕುಳಿತು ನಮ್ಮ ಪಕ್ಕವಾದ್ಯದೊಂದಿಗೆ ನಡೆಯುತ್ತಿದ್ದ ಸಂಗೀತಗೃಹಕಛೇರಿ ಬೇರೆ ಯಾವ ಶ್ರೋತೃಗಳನ್ನೂ ಮೆಚ್ಚಿಸುವ ಉದ್ದೇಶ ಹೊಂದಿರದೆ ನಮ್ಮ ಆತ್ಮತೃಪ್ತಿಗಾಗಿ ಮಾಡುವ ಅಧ್ಯಾತ್ಮಿಕ ಸಾಧನೆಯಾಗಿತ್ತು. ತ್ಯಾಗರಾಜರ ಪಂಚರತ್ನಕೃತಿಗಳು ಅದರಲ್ಲೂ ಶ್ರೀರಾಗದಲ್ಲಿರುವ “ಎಂದರೋ ಮಹಾನುಭಾವುಲು ಅಂದರಿಕಿ ವಂದನಮು” (ಮಹಾನುಭಾವರನೇಕರು, ಅವರೆಲ್ಲರಿಗೂ ವಂದನೆಗಳು) ನಮಗೆ ತುಂಬಾ ಪ್ರಿಯವಾದ ಕೀರ್ತನೆಯಾಗಿತ್ತು. ಆಗಾಗ್ಗೆ ರಜಾ ಕಾಲದಲ್ಲಿ ಮಗಳನ್ನು ನೋಡಲು ಬರುತ್ತಿದ್ದ ಶ್ರೀಮತಿ ರಮಣಿ ಮತ್ತು ಅವರ ಪತಿ ಭಾಸ್ಕರ್ ನಮ್ಮ ಸಂಗೀತ ಕಛೇರಿಯ ಶ್ರೋತೃಗಳಾಗುತ್ತಿದ್ದರು. ಅವರ ಮಗಳಾದ ಹೇಮಾಳನ್ನು ನಾವು ಎಂದೂ ಹೆಸರು ಹಿಡಿದು ಕರೆದವರಲ್ಲ. ಹೆಚ್ಚುಕಡಿಮೆ ಸಮವಯಸ್ಕರಾದ ಅವರನ್ನು ಅವರ ಮಾತೃಭಾಷೆ ತಮಿಳಿನಲ್ಲಿ ಹಿರಿಯ ವಯಸ್ಸಿನವರನ್ನು ಕರೆಯುವಂತೆ ಮಾಮಿ ಎಂದೇ ಕರೆಯುತ್ತಿದ್ದೆವು. ಅದನ್ನು ಕೇಳಿ ಅವರ ತಾಯಿ ಶ್ರೀಮತಿ ರಮಣಿ ಮೊದಮೊದಲು ಆಕ್ಷೇಪಿಸಿದರೂ ನಮ್ಮ ಮಠದ ಹಿನ್ನೆಲೆ ತಿಳಿದ ಮೇಲೆ “My grandson, the future Jagadguru” ಎಂದು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಹಿಂದೂಸ್ತಾನೀ ಕಾಪಿರಾಗದಲ್ಲಿರುವ ಪುರಂದರದಾಸರ “ಜಗದುದ್ಧಾರನ ಆಡಿಸಿದಳೆಶೋದೆ” ಎಂಬ ದೇವರನಾಮವನ್ನು ಪಿಟೀಲಿನಲ್ಲಿ ನುಡಿಸಲು ಒತ್ತಾಯಪಡಿಸಿ ಕೇಳಿ ಆನಂದಿಸುತ್ತಿದ್ದರು.
ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯ ಕೊನೆಯಲ್ಲಿ ಸಂಗೀತ ವಿದ್ವಾಂಸರು ತಿಲ್ಲಾನಕ್ಕೆ ಮುಂಚೆ ಪುರಂದರದಾಸರ ಈ ದೇವರ ನಾಮವನ್ನು ಹಾಡುವಾಗ “ಆಡಿಸಿದಳೆಶೋದೆ” ಎಂದೇ ಆರಂಭಿಸುತ್ತಾರೆ. ಅದುವರೆಗಿನ ಸಂಗೀತ ಕಛೇರಿಯಲ್ಲಿ ಅವರ ಹಾಡುಗಾರಿಕೆಯು ಬಿಗಿಯಾದ ತಾಳ ಮತ್ತು ಲಯದಲ್ಲಿ ಹಗ್ಗದ ಮೇಲಿನ ನಡಿಗೆಯಂತೆ ಇರುತ್ತದೆ. ತಮ್ಮ ಕೈಬೆರಳುಗಳಲ್ಲಿ ತಾಳದ ಲೆಕ್ಕಾಚಾರವನ್ನು ಹಿಡಿದು ಲಯಕ್ಕನುಗುಣವಾಗಿ ತಲೆಯನ್ನು ಕೊಡವಿ ಸವಾಲಿನೋಪಾದಿಯಲ್ಲಿ ತೊಡೆಯನ್ನು ತಟ್ಟಿ ಮೃದಂಗವಾದಕರತ್ತ ನೋಡುತ್ತಾರೆ. ಏರುದನಿಯಲ್ಲಿ ಹಾಡಿ ಗಟ್ಟಿಗೊಂಡಿದ್ದ ಅವರ ಕಂಠದ ಸ್ನಾಯುಗಳು ಹಿಂದೂಸ್ಥಾನಿ ಕಾಪಿ ರಾಗದಲ್ಲಿ ಈ ದೇವರ ನಾಮವನ್ನು ಹಾಡುವಾಗ ಇದ್ದಕ್ಕಿದ್ದಂತೆಯೇ ಸಡಿಲಗೊಳ್ಳುತ್ತವೆ. ಭೋರ್ಗರೆವ ಜಲಪಾತದ ನೀರು ಧುಮ್ಮಿಕ್ಕಿ ನಂತರ ಜುಳು ಜುಳು ನಿನಾದ ಮಾಡುತ್ತಾ ಮುಂದೆ ಸಾಗುವಂತೆ. ತನ್ನ ಮುದ್ದುಕೃಷ್ಣನನ್ನು ಮುದ್ದಿಸುವ ತಾಯಿ ಯಶೋದೆಯ ವಾತ್ಸಲ್ಯಭಾವವನ್ನು ಹೃದಯದಲ್ಲಿ ತುಂಬಿಕೊಂಡು ಪಕ್ಕವಾದ್ಯದವರನ್ನು ಸರಸ ಸಂಭಾಷಣೆಯ ರೂಪದಲ್ಲಿ ಮುಗುಳ್ನಗುತ್ತಾ ನೋಡಿ ಪ್ರಸನ್ನವದನರಾಗಿ ಹಾಡುತ್ತಾರೆ. ಕನ್ನಡ ಬಾರದ ಕೆಲವು ಗಾಯಕರು ಜಗದುದ್ಧಾರನ ಎನ್ನುವ ಬದಲು ಜಗದೋದ್ಧಾರನ ಎಂದು ತಪ್ಪಾಗಿ ಹಾಡುವುದೂ ಉಂಟು. “ಮೂರ್ಖೋ ವದತಿ ವಿಷ್ಣಾಯ, ಜ್ಞಾನೀ ವದತಿ ವಿಷ್ಣವೇ, ದ್ವಯೋರೇವ ಸಮಂ ಪುಣ್ಯಂ ಭಾವಗ್ರಾಹೀ ಜನಾರ್ದನಃ” (ದಡ್ಡರು ವಿಷ್ಣಾಯ ನಮಃ ಎನ್ನುತ್ತಾರೆ, ಪಂಡಿತರು ವಿಷ್ಣವೇ ನಮಃ ಎನ್ನುತ್ತಾರೆ; ಆದರೆ ಭಾವಗ್ರಾಹಿಯಾದ ವಿಷ್ಣುವು ಇಬ್ಬರಿಗೂ ಸಮಾನರೀತಿಯಲ್ಲಿ ಅನುಗ್ರಹಿಸುತ್ತಾನೆ) ಎನ್ನುವಂತೆ ವ್ಯಾಕರಣದೋಷ ಏನಾದರಾಗಲಿ ಭಾವ ಮುಖ್ಯ ತಾನೆ?
ಭಾರತೀಯ ಸಂಗೀತ ಹುಟ್ಟಿದ್ದು ಕೇವಲ ಮನಸ್ಸಿನ ರಂಜನೆಗಾಗಿ ಅಲ್ಲ: ದೇವರ ಸಾಕ್ಷಾತ್ಕಾರಕ್ಕಾಗಿ. ಜಪಮಾಲೆಯನ್ನು ಹಿಡಿದು ಯಾಂತ್ರಿಕವಾಗಿ ಮಾಡುವ ಮಂತ್ರಜಪಕ್ಕಿಂತ ಭಾವತುಂಬಿ ಹಾಡಿ ಮಾಡುವ ಭಗವನ್ನಾಮಸಂಕೀರ್ತನೆ ಹೆಚ್ಚು ಅರ್ಥಪೂರ್ಣ. “ಕೋಟ್ಯನುಕೋಟಿ ಜಪವನ್ನು ಮಾಡಿ ಕೋಟಲೆಗೊಳ್ಳಲದೇಕೆ ಮನವೇ? ಕಿಂಚಿತ್ತು ಗೀತವೊಂದು ಅನಂತಕೋಟಿ ಜಪ!” ಎನ್ನುತ್ತಾರೆ ಬಸವಣ್ಣನವರು. “ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ, ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ” ಎಂದು ಅವರೇ ಮತ್ತೊಂದು ವಚನದಲ್ಲಿ ಎಚ್ಚರಿಸುತ್ತಾರೆ. ದೇವರು ಒಲಿಯುವುದು ಕೇವಲ ಸಂಗೀತದ ನಾದಮಾಧುರ್ಯಕ್ಕಲ್ಲ, ಹೃದಯದಲ್ಲಿರುವ ಭಕ್ತಿಭಾವಕ್ಕೆ. ಈ ಅರ್ಥದಲ್ಲಿಯೇ “ಕೇಳನೋ ಹರಿ, ತಾಳನೋ, ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ” ಎನ್ನುತ್ತಾರೆ ಪುರಂದರದಾಸರು. ತ್ಯಾಗರಾಜರಾಗಲೀ, ಪುರಂದರದಾಸರಾಗಲಿ ಕೀರ್ತನೆಗಳನ್ನು ರಚಿಸಿದ್ದು, ಹಾಡಿದ್ದು ಸಂಗೀತ ಕಛೇರಿಗಾಗಿ ಅಲ್ಲ; ಲೋಕದ ಜನರನ್ನು ಮೆಚ್ಚಿಸಲು ಅಲ್ಲವೇ ಅಲ್ಲ. ಅವರ ಕೀರ್ತನೆಗಳು ಪ್ರಖ್ಯಾತ ಪಾಶ್ಚಾತ್ಯ ಸಂಗೀತಜ್ಞರಾದ Beethoven, Mozart, Shubert ಮೊದಲಾದವರು Symphony Orchestra ಗಳಿಗೆ ಬರೆದ ರಚನೆಗಳಂತಲ್ಲ. ಅವರ ಗುರಿ ಎದುರಿಗೆ ಕುಳಿತ ಶ್ರೋತೃಗಳ ಮನಸ್ಸನ್ನು ರಂಜಿಸುವುದಾಗಿರಲಿಲ್ಲ. ತಮ್ಮೊಳಗಿದ್ದೂ ಕಾಣದಂತಿರುವ ಅಗಮ್ಯ, ಅಗೋಚರ, ಅಪ್ರತಿಮ ಚೈತನ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವುದಾಗಿತ್ತು. ಪಾಶ್ಚಾತ್ಯ ಸಂಗೀತಜ್ಞರಲ್ಲಿಯೂ ಸಂಗೀತವು ಲೌಕಿಕ ಮತ್ತು ಪಾರಮಾರ್ಥಿಕ ಜೀವನಗಳ ಮಧ್ಯೆ ಇರುವ ಸೇತು ಎಂಬ ಪಾರಲೌಕಿಕ ದೃಷ್ಟಿ ಇದೆ ಎಂಬುದನ್ನು ಅಲ್ಲಗಳೆಯಲಾಗದು (Music is the mediator between the spiritual and sensual life – Beethoven).
ನಿಸರ್ಗವು ಭಗವಂತನ ಕೈಯಲ್ಲಿರುವ ಶ್ರುತಿವಿಡಿದ ವೀಣೆಯಂತೆ ಎಂದರೆ ತಪ್ಪಲ್ಲ. ಬ್ರಹ್ಮಾಂಡದಲ್ಲಿರುವ ಗ್ರಹತಾರೆಗಳು ನಿರ್ದಿಷ್ಟವಾದ ಕಕ್ಷೆಯಲ್ಲಿ ನಿರ್ದಿಷ್ಟವಾದ ಗತಿಯಲ್ಲಿ ತಿರುಗುತ್ತವೆ. ಇದನ್ನು ವೇದೋಪನಿಷತ್ತುಗಳಲ್ಲಿ ಋತ ಎಂದು ಕರೆಯಲಾಗಿದೆ. ಈ ಸೃಷ್ಟಿಯಲ್ಲಿ ಒಂದು ತಾಳವಿದೆ, ರಾಗವಿದೆ. ನಿಸರ್ಗದ ಕೂಸಾದ ಮನುಷ್ಯನ ಜೀವನದಲ್ಲಿ ಮಾತ್ರ ತಾಳ ಮೇಳಗಳಿಲ್ಲದಂತಾಗಿದೆ. ಪ್ರಖ್ಯಾತ ಆಂಗ್ಲಕವಿ ಲಾರ್ಡ್ ಬೈರನ್ ಬರೆದ ಕವಿತೆ ಇಲ್ಲಿ ಸ್ಮರಣೀಯ:
Theres music in the sighing of a reed;
Theres music in the gushing of a rill;
Theres music in all things, if men had ears;
Their earth is but an echo of the spheres!
ನಾದವಿದೆ ಹರಿಯುವ ತೊರೆಯ ಜುಳು ಜುಳು ನಿನಾದದಲಿ
ನಾದವಿದೆ ಕೋಗಿಲೆಯ ಪಂಚಮದಿಂಚರದಲ್ಲಿ
ಮೇಣ್ ಸಕಲ ಚರಾಚರ ವಸ್ತುಗಳಲ್ಲಿ
ಮನುಜರಿಗೆ ಇದ್ದರೆ ಕೇಳುವ ಕಿವಿ
ಬ್ರಹ್ಮಾಂಡದನುರಣವೀ ಭುವಿ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 13.10.2010.