ಮದುವೆಯೆಂಬುದು ಏಳು ಸುತ್ತಿನ ಕೋಟೆ....
ಒಮ್ಮೆ ದೆಹಲಿಗೆ ಹೋದಾಗ ಲೋಕಾಭಿರಾಮವಾಗಿ ಮಾತನಾಡುವ ಸಂದರ್ಭದಲ್ಲಿ ಶಿಷ್ಯರೊಬ್ಬರು ತಮ್ಮ ಅನುಭವಕ್ಕೆ ಬಂದ ಒಂದು ಅಪರೂಪದ ಪ್ರಸಂಗವನ್ನು ವಿವರಿಸಿದರು. ಅವರು ಸ್ನೇಹಿತರ ಮನೆಯಲ್ಲಿ ಒಂದು ಔತಣಕೂಟಕ್ಕೆ ಆಹ್ವಾನಿತರಾಗಿ ಹೋಗಿದ್ದರಂತೆ. ಅವರು ಊಟ ಮುಗಿದ ಮೇಲೆ ವಾಪಾಸ್ಸು ಹೊರಡುವಾಗ ಆತಿಥೇಯರ ಪತ್ನಿಯನ್ನು ಕಂಡು ನೀವು ಮಾಡಿದ ಅಡುಗೆ ತುಂಬಾ ಚೆನ್ನಾಗಿತ್ತಮ್ಮಾ, ಇಷ್ಟು ರುಚಿಯಾದ ಊಟವನ್ನು ನನ್ನ ಜನ್ಮದಲ್ಲೇ ಉಂಡಿಲ್ಲ ಎಂದು ಸೌಜನ್ಯದ ಕೆಲವು ಮಾತುಗಳನ್ನು ಹೇಳಿದರು. ಮೆಚ್ಚುಗೆಯ ಮಾತುಗಳನ್ನು ಕೇಳಿಸಿಕೊಂಡ ಅವರ ಸ್ನೇಹಿತರ ಮಡದಿ ಏನನ್ನೋ ನೆನೆಸಿಕೊಂಡು ಭಾವುಕಳಾಗಿ ಕಣ್ಣುಂಬಾ ನೀರು ತಂದುಕೊಂಡಳು. ಏಕಿರಬಹುದೆಂದು ಗಾಬರಿಯಾಗಿ ಅತಿಥಿ ಕೇಳಿದರು. ಅದಕ್ಕೆ ಆ ಮಹಿಳೆ ಸಾವರಿಸಿಕೊಂಡು: “ಏನಿಲ್ಲಾ, ನಿಮಗೆ ನಾನು ಊಟಕ್ಕೆ ಬಡಿಸಿದ್ದು ಈ ದಿನ ಒಂದು ಹೊತ್ತು ಮಾತ್ರ. ಎಷ್ಟು ಒಳ್ಳೆಯ ಮಾತುಗಳನ್ನು ಆಡಿದಿರಿ! ಈ ನನ್ನ ಗಂಡ ಅನ್ನೋ ಪ್ರಾಣಿ ಇದ್ದಾರಲ್ಲಾ, ಮದುವೆಯಾಗಿ 30 ವರ್ಷಗಳಾಗಿವೆ, ದಿನವೂ ಮೂರು ಹೊತ್ತು ರುಚಿ ರುಚಿಯಾದ ಅಡುಗೆ ಮಾಡಿ ಉಣಬಡಿಸುತ್ತಾ ಬಂದಿದ್ದೇನೆ. ಒಂದು ದಿನವೂ ನೀನು ಮಾಡಿದ ಅಡುಗೆ ಚೆನ್ನಾಗಿದೆ ಕಣೇ ಎಂದು ಇವರ ಬಾಯಿಂದ ಒಂದು ಒಳ್ಳೆಯ ಮಾತು ಬಂದಿಲ್ಲ! ಅದನ್ನು ನೆನೆಸಿಕೊಂಡು ಅಳುಬಂತು ಎಂದಳಂತೆ!” ಒಂದು ಜೀವ ಮತ್ತೊಂದು ಜೀವದೊಂದಿಗೆ ಒಂದುಗೂಡಿ ಬಾಳುವಾಗ ನಾಲ್ಕು ಮೆಚ್ಚುಗೆಯ ಮಾತುಗಳನ್ನು, ಸಾಂತ್ವನದ ನುಡಿಗಳನ್ನು ಬಯಸುತ್ತದೆ. ಶಬ್ದಗಳಲ್ಲಿ ಅಭಿವ್ಯಕ್ತಗೊಳಿಸದಿದ್ದರೂ ಕಣ್ಣಂಚಿನಲ್ಲಿ, ಮುಖಭಾವದಲ್ಲಿ ಮೂಡಿಬಂದರೆ ಸಾಕು ಕಷ್ಟಪಟ್ಟ ಜೀವಕ್ಕೆ ದಣಿವಾರಿಕೆಯಾಗುತ್ತದೆ; ಜೀವನೋತ್ಸಾಹದ ಕಾರಂಜಿ ಚಿಮ್ಮುತ್ತದೆ.
ಹತ್ತಾರು ವರ್ಷಗಳಿಂದ ಮದುವೆಯಾದ ಪತಿ-ಪತ್ನಿಯರನ್ನು ನೀವು ಖಾಸಗಿಯಾಗಿ ಮದುವೆ ಎಂದರೇನು? ಎಂದು ಕೇಳಿ. ನಿಮ್ಮ ಪ್ರಶ್ನೆಗೆ ನೇರವಾಗಿ ಉತ್ತರ ಸಿಗುವುದಿಲ್ಲ. ಹತ್ತು ಜನ ಹತ್ತು ರೀತಿಯಲ್ಲಿ ಉತ್ತರಿಸುತ್ತಾರೆ. ಇವಳು ಇಂಥವಳು ಎಂದು ಗೊತ್ತಿದ್ದರೆ ನಾನು ಇವಳನ್ನು ಮದುವೆಯಾಗುತ್ತಿದ್ದಿಲ್ಲ ಎಂದು ಗಂಡ ಹುಬ್ಬುಗಂಟಿಕ್ಕಿದರೆ, ಅಯ್ಯೋ ಇವರು ಇಂಥವರು ಎಂದು ಮೊದಲೇ ಗೊತ್ತಿದ್ದರೆ ನಾನೆಲ್ಲಿ ಇವರಿಂದ ತಾಳಿ ಕಟ್ಟಿಸಿಕೊಳ್ಳುತ್ತಿದ್ದೆ ಎಂದು ಹೆಂಡತಿ ದೂರುತ್ತಾಳೆ. ಇದು ತಂದೆತಾಯಂದಿರು ನೋಡಿ ಮಾಡಿದ Arranged Marriage ಗಳಲ್ಲಿ ಅಷ್ಟೇ ಅಲ್ಲ, ಪರಸ್ಪರ ಪ್ರೀತಿಸಿ ಮದುವೆಯಾದ Love Marriage ಗಳದ್ದೂ ಇದೇ ಹಣೆಬರಹ. ಮದುವೆಯನ್ನು ಕುರಿತು ಅಜ್ಞಾತ ಕವಿಯೊಬ್ಬ ಬರೆದ ಅರ್ಥಪೂರ್ಣವಾದ ಇಂಗ್ಲೀಷ್ ಕವಿತೆಯೊಂದು ಹೀಗಿದೆ:
Marriage is a beautiful fort
Those who are outside it
Want to get into it curiously!
Those who are inside it
Want to get out of it desparately!
(ಮದುವೆಯೆಂಬುದು ಕಿನ್ನರಲೋಕದ ಕೋಟೆ. ಹೊರಗಿದ್ದವರಿಗೆ ಒಳಗೇನಿದೆಯೆಂದು ನುಗ್ಗಿ ನೋಡುವ ಕನವರಿಕೆ ಒಳಗಿದ್ದವರಿಗೆ ಸದ್ಯ ಹೊರಗೆ ಹೋಗುವಂತಾದರೆ ಸಾಕೆಂಬ ಚಡಪಡಿಕೆ!)
ಮದುವೆ ಅಂದರೆ ಏನೆಂಬುದನ್ನು ಡಾ|| ಎಸ್ ರಾಧಾಕೃಷ್ಣನ್ ಅವರು ಈ ಮುಂದಿನ ಶಬ್ದಗಳಲ್ಲಿ ತುಂಬಾ ಚೆನ್ನಾಗಿ ವ್ಯಾಖ್ಯಾನಿಸಿರುತ್ತಾರೆ: Marriage seems to be a permanent form of human association. It is an adjustment between the biological purposes of nature and the sociological purposes of man. Whether it is successful or not depends on the way it is Worked. ಮದುವೆ ಮಾನವ ಸಂಬಂಧಗಳ ಒಂದು ವಿಶಿಷ್ಟ ವಿನ್ಯಾಸದ ಕೊಂಡಿ; ಜಗತ್ತಿನಾದ್ಯಂತ ಸಾವಿರಾರು ವರ್ಷಗಳ ಪ್ರಾಯೋಗಿಕ ಅನುಭವದಿಂದ ಗಟ್ಟಿಗೊಂಡ ಸಾಮಾಜಿಕ ವ್ಯವಸ್ಥೆ. ಅದರಲ್ಲಿ ವ್ಯಕ್ತಿಗತ ಸುಖ ಮತ್ತು ಸಾಮಾಜಿಕ ಸ್ವಾಸ್ಥ್ಯ ಎರಡೂ ಅಡಕವಾಗಿವೆ. ಮದುವೆ ಒಂದು ಪ್ರೀತಿಯ ಬೆಸುಗೆ. ಆ ಬೆಸುಗೆ ಸಡಿಲಗೊಂಡರೆ ಆಗುವ ಅವಾಂತರ ಅಷ್ಟಿಷ್ಟಲ್ಲ. ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದ ಜಾತಿಯ ಕಟ್ಟುಪಾಡುಗಳನ್ನು ಧಿಕ್ಕರಿಸಿ, ಹೆತ್ತವರ ಒತ್ತಾಸೆಗೆ ಜಗ್ಗದೆ ವಿಭಿನ್ನ ಜಾತಿಗಳಲ್ಲಿ ಮದುವೆಯಾಗುವ ಎದೆಗಾರಿಕೆಯನ್ನು ತೋರಿಸುವ ಇಂದಿನ ವಿದ್ಯಾವಂತ ಯುವಕ-ಯುವತಿಯರು ಬದುಕಿನುದ್ದಕ್ಕೂ ಬಾಳಸಂಗಾತಿಗಳಾಗಿ ಬಾಳುವಲ್ಲಿ ವಿಫಲರಾಗುತ್ತಿದ್ದಾರೆ. ಪ್ರೀತಿ (love) ಬೇರೆ, ಮೋಹ (passion) ಬೇರೆ ಎಂಬ ಅರಿವು ಇಂದಿನ ಬಹುತೇಕ ಯುವಕ-ಯುವತಿಯರಿಗೆ ಇದ್ದಂತಿಲ್ಲ. ಇದನ್ನು ಕಂಡೇ ಏನೋ ಯಾರೋ ಒಬ್ಬ ಅನುಭವಿ If you want to stop some one from loving you, you should marry him ಎಂದು ಹೇಳಿದ್ದಾನೆ. ದಾಂಪತ್ಯಜೀವನದಲ್ಲಿ ಪ್ರೀತಿ ಬಹಳ ಮುಖ್ಯ.
ಪ್ರೀತಿ ಇಲ್ಲದ ಮೇಲೆ
ಹೂವು ಅರಳೀತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ - (ಜಿ.ಎಸ್.ಎಸ್)
ಪ್ರೀತಿಯ ಮೂಲಸ್ರೋತ ಹೃದಯವೇ ಹೊರತು, ಬುದ್ಧಿಯಲ್ಲ. ಅದು ಬುದ್ದಿಯ ಶುಷ್ಕ ತರ್ಕಕ್ಕೆ ನಿಲುಕುವ ವಸ್ತುವಲ್ಲ. ಪತಿ-ಪತ್ನಿಯರ ಮಧ್ಯೆ ಇರುವ ಗಾಢವಾದ ಪ್ರೀತಿಯನ್ನು ಆಧ್ಯಾತ್ಮಿಕತೆಯ ಸೋಪಾನವನ್ನಾಗಿ ಶರಣರು ಪರಿಗಣಿಸಿದ್ದಾರೆ: ಸತಿ-ಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ, ಶರಣ ಸತಿ - ಲಿಂಗ ಪತಿ ಎಂಬ ನುಡಿಗಟ್ಟಿನಲ್ಲಿ ಭಕ್ತ ಮತ್ತು ಭಗವಂತನ ಪಾರಮಾರ್ಥಿಕ ಸಂಬಂಧವನ್ನು ಪತಿ-ಪತ್ನಿಯರ ಲೌಕಿಕ ಸಂಬಂಧಕ್ಕೆ ಹೋಲಿಸಿದ್ದಾರೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಎಷ್ಟು ಮುಖ್ಯವೋ, ಅದರ ಮೇಲಿನ ನಂಬಿಕೆಯೂ ಅಷ್ಟೇ ಮುಖ್ಯ. ಪ್ರೀತಿಯ ಮೇಲಿನ ನಂಬಿಕೆಯೆಂದರೆ ಗಾಢವಾದ ಪ್ರೀತಿ. ಅದಿಲ್ಲದಾಗ ಸಂಶಯದ ಕಾರ್ಮೋಡಗಳು ಆವಿರ್ಭವಿಸುತ್ತವೆ:
ಪ್ರೀತಿ ಇಲ್ಲದ ಮೇಲೆ
ಸಂಶಯದ ಗಡಿಗಳುದ್ದಕ್ಕು
ಸಿಡಿಗುಂಡುಗಳ ಕದನ ನಿಂತೀತು ಹೇಗೆ? - (ಜಿ.ಎಸ್.ಎಸ್)
ದಾಂಪತ್ಯ ಜೀವನದಲ್ಲಿ ಪತಿಪತ್ನಿಯರು ಸಂಶಯದ ಸುಳಿಯಲ್ಲಿ ಸಿಕ್ಕಿಕೊಂಡರೆ ಅದರಿಂದ ಹೊರಬರುವುದು ಕಷ್ಟ. “Marriages are made in Heaven” (ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ) ಎನ್ನುತ್ತಾನೆ ಕವಿ ಟೆನಿಸನ್. ಆದರೆ ಇಂದಿನ ಕೌಟುಂಬಿಕ ಸ್ಥಿತಿಗತಿಗಳನ್ನು ಗಮನಿಸಿದರೆ "Marriages often end in Hell" (ಮದುವೆಗಳು ಬಹುತೇಕ ನರಕದಲ್ಲಿ ಪರ್ಯವಸಾನವಾಗುತ್ತವೆ) ಎಂದು ಹೇಳಬೇಕೆನಿಸುತ್ತದೆ. ಮದುವೆಗೆ ಮುಂಚೆ "ಚಂದ್ರಮುಖಿಯಾಗಿ" ಕಂಡವಳು, ಮದುವೆಯ ನಂತರ "ಶೂರ್ಪನಖಿಯಾಗಿ" ಕಾಣಿಸುತ್ತಾಳೆ. ಅಂತಹ ಒಂದು ಪ್ರಸಂಗ ಹೀಗಿದೆ:
ಕಳೆದ ವಾರದ ಅಂಕಣದಲ್ಲಿ ಪ್ರಸ್ತಾಪಿಸಿದಂತೆ ಪ್ರತಿ ಸೋಮವಾರ ನಮ್ಮ ಸಮ್ಮುಖದಲ್ಲಿ ನಡೆಯುವ ಸದ್ಧರ್ಮ ನ್ಯಾಯಪೀಠ ದ ಮುಂದೆ ಒಮ್ಮೆ ಯುವ ಮಹಿಳೆಯೊಬ್ಬಳು ಅರ್ಜಿದಾರಳಾಗಿ ಹಾಜರಾದಳು. ಮುಖ ಬಾಡಿತ್ತು. ಕೈಯಲ್ಲಿದ್ದ ಒಂದು ವರ್ಷದ ಹಸುಗೂಸು ಅಳುತ್ತಿತ್ತು. ಒಂದು ಕೈಯಲ್ಲಿ ಕೂಸನ್ನು ಸಂತೈಸುತ್ತಾ ಮತ್ತೊಂದು ಕೈಯಲ್ಲಿ ತಾನು ಬರೆದುಕೊಂಡು ಬಂದಿದ್ದ ಅರ್ಜಿಯನ್ನು ಮುಂದಿಟ್ಟು ತಲೆಬಾಗಿ ತನ್ನ ಸಂಕಟವನ್ನು ಹೇಳತೊಡಗಿದಳು:
ಮದುವೆಯಾದ ಮೂರು ತಿಂಗಳು ಗಂಡ ಹೆಂಡತಿ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದೆವು. ನವಂಬರ್ ಮೊದಲ ವಾರ ದೀಪಾವಳಿ ಹಬ್ಬಕ್ಕೆಂದು ಊರಿಗೆ ಬಂದೆ. ಹಬ್ಬಕ್ಕೆ ನೀವೂ ಬನ್ನಿರೆಂದು ನನ್ನ ಪತಿದೇವರಿಗೆ ಹೇಳಿ ಬಂದೆ. ಅವರು ಬರುವಾಗ ದಾರಿಯಲ್ಲಿ ಯಾರೋ ಬಂದು ಹಲ್ಲೆ ಮಾಡಿ ಹೋದರಂತೆ. ಅವನು ಯಾರು ಹುಡುಕಿಕೊಡು ಎಂದು ಕೇಳಿದರು. ಹೊಡೆಸಿಕೊಂಡು ಬಂದವರು ನೀವು. ನನಗೆ ಹುಡುಕಿಕೊಡು ಎಂದು ಕೇಳಿದರೆ ನನಗೆ ಗೊತ್ತಿಲ್ಲದವರನ್ನು ಹೇಗೆ ಹುಡುಕಿ ತರಲಿ? ಎಂದೆ. ಹಬ್ಬ ಮುಗಿಸಿಕೊಂಡು ಗಂಡನ ಮನೆಗೆ ಹೋದೆ. ಆಗ ನಾನು ಮೂರು ತಿಂಗಳ ಗರ್ಭಿಣಿ. ಈ ಮಗು ಬೇಡವೆಂದು ನನಗೆ ನನ್ನ ಪತಿದೇವರು ಮಾನಸಿಕ ಹಿಂಸೆ ಕೊಟ್ಟರು. ನನಗೆ ಆ ಮಗು ಬೇಕೆಂದೆ. ಕೊನೆಗೆ ಅವರ ಹಿಂಸೆ ತಾಳಲಾರದೆ ಶೂನ್ಯಮಾಸ ಬಂತೆಂದು ನನ್ನ ಗಂಡನ ಮನೆಯವರೆಲ್ಲರ ಒಪ್ಪಿಗೆ ಪಡೆದು ನನ್ನ ತವರಿಗೆ ಬಂದೆ. ನಂತರ ಗಂಡನ ಮನೆಗೆ ಹೋಗಲು ಎಷ್ಟೇ ಪ್ರಯತ್ನಿಸಿದರೂ ಅವರು ನನ್ನನ್ನು ಬಿಟ್ಟುಕೊಳ್ಳಲಿಲ್ಲ. ನನ್ನ ತಮ್ಮ, ತಾಯಿ ಮತ್ತು ಅಕ್ಕ ಹತ್ತಾರು ಸಾರಿ ಹೋಗಿ ಕೇಳಿಕೊಂಡರೂ ಮಣಿಯದೆ ಹೀನಾಮಾನವಾಗಿ ಬೈದು ಕಳುಹಿಸಿದರು. ತುಂಬು ಗರ್ಭಿಣಿಯಾಗಿ ಎಷ್ಟೇ ಗೋಳಾಡಿದರೂ ನೀನು ಬರಕೂಡದೆಂದು ನಿಷ್ಕರುಣೆಯಿಂದ ಆಜ್ಞಾಪಿಸಿದರು. ವಿಧಿಯಿಲ್ಲದೆ ತವರು ಮನೆಯಲ್ಲಿಯೇ ಉಳಿದೆ. ಮಗುವಿಗೆ ಜನ್ಮ ನೀಡಿದ ನಂತರ ಎಷ್ಟೇ ಫೋನು ಮಾಡಿ ಹೇಳಿಕಳುಹಿಸಿದರೂ ಬರಲೇ ಇಲ್ಲ. ನನ್ನ ಮೇಲೆ ತುಂಬಾ ಸಂಶಯ. ಮದುವೆಗೆ ಮುಂಚೆ abortion ಆಗಿತ್ತೆಂದು ಯಾರೋ ಅವರಿಗೆ ಸಹಿ ಇಲ್ಲದ ಸುಳ್ಳು, ಸರ್ಟಿಫಿಕೇಟ್ ಕಳುಹಿಸಿದ್ದಾರೆ. ಈಗಿನ ಕಾಲದಲ್ಲಿ ಬದುಕಿದ್ದರೂ ಸತ್ತಿರುವುದಾಗಿ ಸರ್ಟಿಫಿಕೇಟ್ ಕೊಡುವ ಡಾಕ್ಟರು ಎಷ್ಟು ಜನರಿಲ್ಲ? ದುಡ್ಡು ಒಂದಿದ್ದರೆ ಏನಾದರೂ ಮಾಡಬಹುದು. ಯಾರೋ ಸಹಿಸದವರು ನಮ್ಮ ಸಂಸಾರ ಕೆಡಿಸಲು ಹೀಗೆ ಮಾಡುತ್ತಿದ್ದಾರೆ. ಇದಕ್ಕೆ ನಾನು ಹೇಗೆ ಹೊಣೆ? ನಾನು ನೀತಿಗೆಟ್ಟವಳಲ್ಲ. ಈ ಮಾತನ್ನು ಹತ್ತಾರು ಸಾವಿರ ಜನರೆದುರು ಹೇಳಬೇಕೆಂದರೂ ಪ್ರಮಾಣ ಮಾಡಿ ಹೇಳುತ್ತೇನೆ ಬುದ್ದಿ.... ಎನ್ನುತ್ತಾ ಆ ಮಹಿಳೆ ತನ್ನ ದುಃಖವನ್ನು ತಡೆಯಲಾರದೆ ನಮ್ಮ ನ್ಯಾಯಪೀಠದ ಮುಂದೆ ಅಳತೊಡಗಿದಳು. ಗಂಡ ಕೋರ್ಟಿನಲ್ಲಿ ವಿವಾಹವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆಂದೂ ತಿಳಿಯಿತು. ಆ ಮಹಿಳೆಯ ಬಗ್ಗೆ ಅನುಕಂಪ ಮೂಡಿದರೂ ಸತ್ಯಪರಿಶೋಧಕರು ಎದುರಾಳಿಯನ್ನು ವಿಚಾರಿಸದೆ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಆಕೆಯ ಗಂಡ ಮತ್ತು ಮಾವನಿಗೆ ನೋಟೀಸ್ ಕಳುಹಿಸಿದೆವು. ನಿಗದಿತ ದಿನಾಂಕದಂದು ಪ್ರತಿವಾದಿಗಳು ಹಾಜರಾದರು. ವಿಚಾರಣೆ ಆರಂಭಿಸಿದೆವು:
“ನಿನ್ನ ಹೆಂಡತಿಯ ನಡತೆ ಬಗ್ಗೆ ಸಂಶಯ ಪಡಲು ಬಲವಾದ ಕಾರಣಗಳೇನು?”
"ನನ್ನನ್ನು ಕೊಲೆಮಾಡುವುದಾಗಿ ಅನಾಮಧೇಯ ಪತ್ರಗಳು ಬರುತ್ತಿವೆ. ನಾನು ಮದುವೆಯಾಗಬೇಕೆಂದಿದ್ದ ಹುಡುಗಿಯನ್ನು ನೀನು ಏಕೆ ಮದುವೆಯಾದೆ. ನಾನು ಅವಳನ್ನು ಪ್ರೀತಿಸಿದ್ದೆ. ಅವಳು ಯಾವತ್ತಿದ್ದರೂ ನನ್ನ ಸ್ವತ್ತು. ಮದುವೆಯಾದರೂ ಪರವಾಗಿಲ್ಲ. ಅವಳು ನನಗೆ ಬೇಕು. ಅವಳನ್ನು ನನ್ನ ಬಳಿ ಕಳುಹಿಸು. ಇಲ್ಲದಿದ್ದರೆ ನಿನ್ನನ್ನು ಜೀವಸಹಿತ ಹೂಳುತ್ತೇನೆಂದು ಇವಳ ಪ್ರೇಮಿ ಹೆದರಿಸುತ್ತಿದ್ದಾನೆ. ಈಕೆಗೂ ದಿನಕ್ಕೆ ಒಂದಲ್ಲ ಎರಡು ಪ್ರೇಮಪತ್ರಗಳು ಬರುತ್ತಿವೆ. ನಾನು ಹೇಗೆ ಇವಳೊಂದಿಗೆ ಸಂಸಾರ ಮಾಡಲಿ?"
“ನಿನಗೆ ಪ್ರೇಮಪತ್ರಗಳು ಬರುತ್ತಿರುವುದು ನಿಜವೇನಮ್ಮಾ?”
“ಹೌದು, ನಿಜ, ಬುದ್ದಿ.”
“ಹಾಗಾದರೆ ನಿನ್ನ ತಪ್ಪನ್ನು ಒಪ್ಪಿಕೊಂಡಂತಾಗುವುದಿಲ್ಲವೇ?”
“ಇಲ್ಲ, ಪತ್ರ ಬರೆಯುತ್ತಿರುವ ವ್ಯಕ್ತಿ ನನಗೆ ಗೊತ್ತಿಲ್ಲ.”
“ಈಕೆಯ ಎದೆಯ ಮೇಲಿರುವ ಕಲೆಯ ಗುರುತು ಹೆತ್ತ ತಾಯಿಗೆ, ಕೂಡಿದ ಗಂಡನಿಗೆ ಮಾತ್ರ ಗೊತ್ತಾಗಬೇಕು. ಅವನಿಗೆ ಹೇಗೆ ತಿಳಿಯಿತು?”
“ನಾನು ದೊಡ್ಡವಳಾದಾಗ ನನ್ನ ಎದೆಯ ಮೇಲೆ ಗಂಟಾಗಿತ್ತು. ಆಸ್ಪತ್ರೆಯಲ್ಲಿ ವಾರಗಟ್ಟಲೆ ಇದ್ದು ಆಪರೇಷನ್ ಮಾಡಿಸಿ ತೆಗೆಸಬೇಕಾಯಿತು. ಇದು ಊರ ಜನರಿಗೆಲ್ಲಾ ಗೊತ್ತು.”
“ನಿನಗೆ ಬಂದ ಪ್ರೇಮಪತ್ರಗಳನ್ನು ಏನು ಮಾಡಿದೆ?’
“ಹಾಗೆಯೇ ಇಟ್ಟಿದ್ದೇನೆ.”
“ತಂದು ತೋರಿಸುತ್ತೀಯಾ?”
“ತೋರಿಸುತ್ತೇನೆ.”
ಮುಂದಿನ ವಿಚಾರಣೆಗೆ ಆ ಮಹಿಳೆ ಗಂಟು ಕಟ್ಟಿದ್ದ ನೂರಾರು ಪತ್ರಗಳನ್ನು ತಂದು ನಮ್ಮ ಮುಂದಿಟ್ಟಳು. ಒಂದು ಕ್ಷಣ ಆ ಪತ್ರಗಳ ಮೇಲೆ ಕಣ್ಣುಹಾಯಿಸುತ್ತಾ ಮತ್ತೊಂದು ಕ್ಷಣ ಆ ಮಹಿಳೆಯನ್ನು ದಿಟ್ಟಿಸಿ ನೋಡಿದಾಗ ಆಕೆಯ ಮುಖಭಾವದಲ್ಲಿ ಯಾವ ಅಪರಾಧಿಪ್ರಜ್ಞೆಯೂ, ಉದ್ವಿಗ್ನತೆಯೂ ಕಾಣಿಸಲಿಲ್ಲ. ಆಕೆ ಮುಗ್ಧೆ ಎನಿಸಿತು. ಆದರೆ ಅವಳೊಂದಿಗೆ ಬಾಳಬೇಕಾದ ಗಂಡನಿಗೆ ಮನವರಿಕೆ ಮಾಡಿಕೊಡುವುದು ಹೇಗೆ? “ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು” ಎಂಬ ಹಿರಿಯರ ಗಾದೆಯನ್ನು ಅವನಿಗೆ ತಿಳಿಹೇಳಿದವು. ಆಕೆಗೆ ಬಂದ ಆ ಪ್ರೇಮಪತ್ರಗಳೆಲ್ಲವನ್ನೂ ದೊಡ್ಡ ಬಂಡಲ್ನಲ್ಲಿಟ್ಟು ಸೀಲ್ ಮಾಡಿಸಿ ಜಿಲ್ಲೆಯ ವರಿಷ್ಠ ಪೋಲೀಸ್ ಅಧಿಕಾರಿಗಳಿಗೆ ಕಳುಹಿಸಿಕೊಟ್ಟು ವಿಚಾರಣೆಯನ್ನು ಒಂದೆರಡು ತಿಂಗಳು ಮುಂದಕ್ಕೆ ಹಾಕಿದವು. ಪೋಲೀಸರು ತನಿಖೆ ಶುರುಮಾಡಿದರು. ಸುತ್ತಮುತ್ತಣ ಗ್ರಾಮಗಳಲ್ಲೆಲ್ಲಾ ಸುದ್ದಿಯಾಯಿತು. ಅನಾಮಧೇಯ ವ್ಯಕ್ತಿ ಯಾರೆಂದು ತಿಳಿಯದಿದ್ದರೂ ಆ ಮಹಿಳೆಗೆ ಅನಾಮಧೇಯ ಪತ್ರಗಳು ಬರುವುದು ನಿಂತಿತು.
ಎಂದಿನಂತೆ ಪ್ರಾತಃಕಾಲ ಸಿರಿಗೆರೆಯ ಹೊರವಲಯದಲ್ಲಿ ಮುಖ ವಾಕಿಂಗ್ ಹೊರಟಿದ್ದೆವು. ಮೂಡಣ ದಿಕ್ಕಿನಲ್ಲಿ ನಸುಗೆಂಪಾದ ಸೂರ್ಯ ಕಣ್ಣೆರೆಯುತ್ತಿದ್ದ. ಮುಂದಿದ್ದ ಶ್ವೇತವರ್ಣದ ಪೊಮೇರಿಯನ್ ಜಾತಿಯ ನಮ್ಮ ನಾಯಿಮರಿ “ಮುನ್ನಿ” ದಾಪುಗಾಲಿಟ್ಟು ನಮ್ಮನ್ನು ಜಗ್ಗುತ್ತಿತ್ತು. ಪಕ್ಕದಲ್ಲಿ ನಮ್ಮ ಕಾಲೇಜು ಪ್ರಿನ್ಸಿಪಾಲ್ ಡಿ.ಎಂ. ನಾಗರಾಜ್ ಜೊತೆಯಲ್ಲಿದ್ದರು. ಎದುರುಗಡೆಯಿಂದ ಬರುತ್ತಿದ್ದ ಒಂದು ಮೋಟಾರ್ ಸೈಕಲ್ ನಮ್ಮ ಹತ್ತಿರ ಬಂದೊಡನೆ ನಿಂತಿತು. ಅದರಲ್ಲಿ ಕುಳಿತಿದ್ದ ಯುವ ದಂಪತಿಗಳು ಕೆಳಗಿಳಿದು ಕಾಣಿಕೆಯನ್ನು ಕೊಟ್ಟು ನಮಸ್ಕರಿಸಿದರು. ಅವರನ್ನು ಎಲ್ಲಿಯೋ ನೋಡಿದ ನೆನಪು, ಆ ದಂಪತಿಗಳೇ ಎರಡು ತಿಂಗಳ ಹಿಂದೆ ನಮ್ಮ ನ್ಯಾಯಪೀಠದ ಮುಂದೆ ಹಾಜರಾಗಿದ್ದ ವಿಷಯವನ್ನು ನೆನಪು ಮಾಡಿಕೊಟ್ಟರು. ಹೆಚ್ಚಿನ ವಿವರಗಳನ್ನು ಕೇಳಲಾಗಲಿಲ್ಲ. ಗಂಡನ ರಾಹುಗ್ರಹಣದಿಂದ ಹೊರಬಂದಂತಿತ್ತು! ಹೆಂಡತಿಯ ಮುಖ ಉದಯೋನ್ಮುಖ ಭಾಸ್ಕರನ ಕೆಂಪನ್ನು ನಾಚಿಸುವಂತಿತ್ತು! ಮಗುವಿನ ಮುಖದಲ್ಲಿ ನಗೆಯ ಮಂದಾರ ಅರಳಿತ್ತು! ಒಟ್ಟಾರೆ ಅವರ ಮುಖದಲ್ಲಿ ಕೃತಜ್ಞತೆಯ ಭಾವ ತುಂಬಿತ್ತು. ಮುಂದಿನ ಸೋಮವಾರ ಗಂಡ ತನ್ನ ಹೆಂಡತಿ ಮತ್ತು ಮಗುವಿನೊಂದಿಗೆ ಸ್ವತಃ ಹಾಜರಾಗಿ ಕೋರ್ಟಿನಲ್ಲಿ ಹಾಕಿದ್ದ ವಿವಾಹವಿಚ್ಛೇದನದ ಅರ್ಜಿಯನ್ನು ವಾಪಾಸ್ ತೆಗೆದುಕೊಂಡು ಬಂದು ಮತ್ತೆ ಆಶೀರ್ವಾದ ಪಡೆಯುವುದಾಗಿ ಹೇಳಿದ. ಅದರಂತೆ ನಮ್ಮ ಲಿಂಗೈಕ್ಯ ಗುರುವರ್ಯರ ಶ್ರದ್ಧಾಂಜಲಿಯಂದು ಸಪತ್ನಿಕನಾಗಿ ಬಂದಿದ್ದ. “ಹೇಗಿದ್ದೀಯಮ್ಮಾ” ಎಂದು ಅವನ ಸಹಧರ್ಮಿಣಿಯನ್ನು ಕೇಳಿದೆವು. ಹಸನ್ಮುಖಳಾಗಿ ಚೆನ್ನಾಗಿದ್ದೇನೆಂದು ಹೇಳಿದಳು. ಗಂಡ ಹೇಗೆ ಬದಲಾವಣೆಯಾದನೆಂದು ಕೇಳಲು ಹೋಗಲಿಲ್ಲ. ಹಾಗೆ ಕೇಳಿ ಅವಳ ಮನಸ್ಸಿನ ಗಾಯವನ್ನು ಮತ್ತೆ ಕೆದಕಲು ಮನಸ್ಸಾಗಲಿಲ್ಲ. ಈರ್ವರೂ ಸುಖವಾಗಿದ್ದರೆ ಸಾಕು ಎನಿಸಿತು. “ಜೀವೇತ ಶರದಃ ಶತಂ” ಎಂದು ದಂಪತಿಗಳನ್ನು ಹರಸಿ ಕಳುಹಿಸಿದೆವು....
ಜಗತ್ತಿನಲ್ಲಿ ನಮಗೆ ತಿಳಿದಿರುವಂತೆ ಜಗಳವಾಡದ ಗಂಡಹೆಂಡಿರು ಇಲ್ಲ. ಜಗಳವಾಡದ ಗಂಡಹೆಂಡರಿಗೆ ಒಂದು ವಿಶೇಷ ನೋಬೆಲ್ ಪಾರಿತೋಷಕವನ್ನು ಕೊಡಮಾಡಿದರೆ ಅದನ್ನು ಪಡೆಯುವ ಅರ್ಹತೆಯುಳ್ಳ ಯಾವ ದಂಪತಿಗಳೂ ಜಗತ್ತಿನಲ್ಲಿ ಸಿಕ್ಕುವುದಿಲ್ಲ. ʻಕಿವುಡ ಗಂಡ, ಕುರುಡಿ ಹೆಂಡತಿಯಾದರೆ ಸಂಸಾರ ಚೆನ್ನಾಗಿರುತ್ತದೆʼ (A deaf husband and a blind wife make a successful marriage) ಎಂಬ ಅರ್ಥವನ್ನು ನೀಡುವ ಗಾದೆ ಮಾತೊಂದು ಡೇನಿಷ್ ಭಾಷೆಯಲ್ಲಿದೆ. ವೈವಾಹಿಕ ಜೀವನದಲ್ಲಿ ಕೆಲವೊಮ್ಮೆ ಗಂಡ ಕುರುಡನೂ ಆಗಬೇಕಾಗುತ್ತದೆ; ಹೆಂಡತಿ ಕಿವುಡಿಯೂ ಆಗಬೇಕಾಗುತ್ತದೆ. ಆದರ್ಶ ಗಂಡ, ಆದರ್ಶ ಹೆಂಡತಿ ಸಿಗುವುದು ಹೇಗೆ ದುರ್ಲಭವೋ ಹಾಗೇನೆ ಆದರ್ಶದಂಪತಿಗಳು ಸಿಗುವುದೂ ದುರ್ಲಭ. ದಾಂಪತ್ಯ ಜೀವನದ ಯಶಸ್ಸು ಬಾಳಸಂಗಾತಿಗಳ ನಿರ್ವ್ಯಾಜ ಪ್ರೇಮ, ತ್ಯಾಗ, ತಾಳ್ಮೆ, ನಿರಹಂಕಾರ ಮತ್ತು ಸೌಹಾರ್ದಭಾವನೆಯನ್ನು ಅವಲಂಬಿಸಿದೆ. (Happiness in marriage requires a generous self-abandonment, endless tolerance, gentleness and politeness of heart).
ಗಂಡ ಹೆಂಡಿರ ಬಾಳುವೆಗೆ ಬೇಕಾದ ಜೀವನಾದರ್ಶದ ಒಳಗುಟ್ಟು ಅವರ ಶರೀರದಲ್ಲಿಯೇ ಇರುವ ಕಣ್ಣು, ಕಿವಿ, ಕಾಲು, ಕೈಗಳಲ್ಲಿದೆ ಕಣ್ಣುಗಳು ಎರಡಾದರೂ ನೋಡುವ ದೃಷ್ಠಿ ಒಂದು, ಕಿವಿಗಳೆರಡಾದರೂ ಕೇಳುವ ನಾದ ಒಂದು. ಕಾಲುಗಳೆರಡಾದರೂ ನಡೆಯುವ ನಡಿಗೆ ಒಂದು, ಕೈಗಳೂ ಎರಡಾದರೂ ಮಾಡುವ ಮಾಟ ಒಂದು. ಹಾಗೇನೆ ದೇಹ ಎರಡಾದರೂ ಹೃದಯ ಒಂದಾಗಬೇಕು. ಇಹದ ಸುಖ ಮತ್ತು ಪರದ ನಿಃಶ್ರೇಯಸ್ಸನ್ನು ಪಡೆಯುವ ನಿಟ್ಟಿನಲ್ಲಿ ಉಭಯತರು ನೋಡುವ ದೃಷ್ಟಿ, ಕೇಳುವ ದನಿ, ನೆಡೆಯುವ ಹೆಜ್ಜೆ, ಮಾಡುವ ಮಾಟ ಒಂದಾಗಬೇಕು! ಹಾಗಾದಾಗ ಸಂಸಾರ ಸುಖಕರವಾಗಿರುತ್ತದೆ. ದಾರಿಯಲ್ಲಿ ಒಬ್ಬಂಟಿಗರಾಗಿ ನಡೆಯುವುದಕ್ಕೂ ಇಬ್ಬರು ಜೊತೆಗೂಡಿ ನಡೆಯುವುದಕ್ಕೂ ವ್ಯತ್ಯಾಸವಿದೆಯಲ್ಲವೇ?
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 12.11.2008.