ಸಾವಿನ ನಂತರ ಏನು?

  •  
  •  
  •  
  •  
  •    Views  

ಯುವಕನೊಬ್ಬ ದಾರಿಯಲ್ಲಿ ಹೋಗುತ್ತಿದ್ದ. ರುದ್ರಭೂಮಿಯೊಂದನ್ನು ದಾಟಿ ಹೋಗಬೇಕಾಗಿತ್ತು. ಯಾರದೋ ಸಮಾಧಿಯ ಮುಂದೆ ಹೋಗುತ್ತಿದ್ದಾಗ ಅದರ ಮೇಲಿದ್ದ ಸ್ಮಾರಕಶಿಲೆ (tombstone) ಅವನ ಕಣ್ಣಿಗೆ ಬಿತ್ತು. ಅದರಲ್ಲಿ ಹೀಗೆ ಬರೆಯಲಾಗಿತ್ತು: “Look O young man, once upon a time I was also walking like you on this earth. But remember, one day or the other, you will also have to follow my path!” (ಓ ಯುವಕನೇ! ನಿನ್ನ ಹಾಗೆಯೇ ನಾನೊಂದು ದಿನ ಈ ಭೂಮಿಯ ಮೇಲೆ ಓಡಾಡುತ್ತಿದ್ದೆ. ಆದರೆ ನೆನಪಿರಲಿ, ಮುಂದೊಂದು ದಿನ ನೀನೂ ನನ್ನ ದಾರಿಯನ್ನು ತುಳಿಯಬೇಕಾಗುತ್ತದೆ). ಯುವಕ ಓದಿ ಸಿಡಿಮಿಡಿಗೊಂಡ. ಸತ್ತ ವ್ಯಕ್ತಿಯ ಉಪದೇಶದ ಮಾತು ಅವನಿಗೆ ಹಿಡಿಸಲಿಲ್ಲ. ಆ ಸ್ಮಾರಕ ಶಿಲೆಯ ಕೆಳಗೆ ಸಿಟ್ಟಿನಿಂದ ಹೀಗೆ ಬರೆದು ಮುಂದೆ ಸಾಗಿದ: “Listen O dead man, I am not a fool to follow you blindly unless you tell me where you went!” (ಓ ಮೃತ ವ್ಯಕ್ತಿಯೇ ಕೇಳು. ನಿನ್ನನ್ನು ಕುರುಡನಂತೆ ಹಿಂಬಾಲಿಸಲು ನಾನೇನೂ ಮೂರ್ಖನಲ್ಲ. ಇರಲಿ, ನೀನು ಹೋಗಿದ್ದಾದರೂ ಎಲ್ಲಿಗೆ?). ಇದು ಆ ಯುವಕನ ಉಡಾಫೆಯ ನಡವಳಿಕೆ ಎನಿಸಿದರೂ ಅದರಲ್ಲಿ ಜೀವನದ ಗಂಭೀರವಾದ ಪ್ರಶ್ನೆ ಅಡಗಿದೆ. 

ಈ ಜಗತ್ತಿನಲ್ಲಿ ಯಾವ ಜೀವಿಯೂ ಇಷ್ಟಪಡದ ಸಂಗತಿಯೆಂದರೆ ಸಾವು. “ಇದಕಾರಂಜುವರು ಇದಕಾರಳಕುವರು, ಜಾತಸ್ಯ ಮರಣಂ ಧ್ರುವಂ ಎಂದುದಾಗಿ” ಎನ್ನುವ ಧೈರ್ಯ ಬಸವಣ್ಣನವರಿಗಲ್ಲದೆ ಹುಲುಮಾನವರಿಗೆ ಇರಲು ಸಾಧ್ಯವೇ? ಯಾವ ದೇಶದ ಸಂವಿಧಾನವೂ ದೊರಕಿಸಿಕೊಡದ ಸಮಾನತೆಯ ತತ್ವ (equality) ಸಾವಿನಲ್ಲಿದೆ. ಪ್ರಜಾಪ್ರಭುತ್ವದಲ್ಲಿ ಕಂಡುಬರುವ “ಎಲ್ಲರೂ ಸಮಾನರು, ಆದರೆ ಕೆಲವರು ಹೆಚ್ಚು ಸಮಾನರು!” (All are equal but Some are more equal!) ಎಂಬ ಮಾತೇ ಸಾವಿನ ವಿಚಾರದಲ್ಲಿ ಇಲ್ಲ. ಯಾರು ಎಷ್ಟೇ ದೊಡ್ಡವರಿರಲಿ ಸಾವಿಗೆ ಶರಣಾಗಲೇ ಬೇಕು. ಕೆಲವರು ವಯೋಧರ್ಮಕ್ಕೆ ಅನುಗುಣವಾಗಿ ವಯಸ್ಸಾದ ಮೇಲೆ ಮರಣ ಹೊಂದಿದರೆ ಇನ್ನು ಕೆಲವರು ಸಾಯುವ ವಯಸ್ಸಿಲ್ಲದಿದ್ದರೂ ಅನಿರೀಕ್ಷಿತವಾಗಿ ಸಾವನ್ನಪ್ಪುತ್ತಾರೆ. ಹಾಗೆ ನೋಡಿದರೆ ಸಾವಿಗೆ ನಿರ್ದಿಷ್ಟವಾದ ವಯಸ್ಸೆಂಬುದಿಲ್ಲ. ಮುಪ್ಪು ಬಂದ ಮೇಲೆ ಸಾಯಬಹುದು, ಹುಟ್ಟುವ ಮೊದಲೇ ತಾಯಗರ್ಭದಲ್ಲಿರುವಾಗಲೇ ಸಾಯಬಹುದು. ಪ್ರಪಂಚದ ಒಟ್ಟು ಜನಸಂಖ್ಯೆ ಸುಮಾರು 687 ಕೋಟಿ ಎಂದು ಅಂದಾಜು ಮಾಡಲಾಗಿದೆ. ಅದರಲ್ಲಿ ಸುಮಾರು ಅರ್ಧದಷ್ಟು ಜನ (340 ಕೋಟಿ) ಮಹಿಳೆಯರಿದ್ದಾರೆ. ಒಂದು ದಿನದಲ್ಲಿ ಹುಟ್ಟುವವರ ಸಂಖ್ಯೆ ಮೂರೂವರೆ ಲಕ್ಷವಾದರೆ ಮರಣ ಹೊಂದುವವರ ಸಂಖ್ಯೆ ಒಂದೂವರೆ ಲಕ್ಷ. ಅಂದರೆ ಸಾಯುವವರಿಗಿಂತ ಹುಟ್ಟುವವರ ಸಂಖ್ಯೆಯೇ ಜಾಸ್ತಿ. ವರ್ಷ ವರ್ಷಕ್ಕೂ ಸತ್ತವರ ಸಂಖ್ಯೆಗಿಂತಲೂ ಹೊಸದಾಗಿ ಹುಟ್ಟುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವಾಗ ಆ ಹೊಸ ಜೀವಾತ್ಮಗಳು ಎಲ್ಲಿಂದ ಬಂದುವು? “ಪುನರಪಿ ಜನನಂ, ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ” ಇದು ಭಾರತೀಯರ ಬಲವಾದ ನಂಬಿಕೆ. ಪುನರ್ಜನ್ಮದಲ್ಲಿ ವಿಶ್ವಾಸವಿರುವವರ ದೃಷ್ಟಿಯಲ್ಲಿ ಸತ್ತವರು ಮತ್ತೆ ಹುಟ್ಟುತ್ತಾರೆ. “ದೇಹಿನೋsಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ” ಎಂದು ಭಗವದ್ಗೀತೆಯು ಪುನರ್ಜನ್ಮ ಕುರಿತು ಹೇಳುತ್ತದೆ. ಈ ಶರೀರದಲ್ಲಿ ಬಾಲ್ಯ, ಯೌವನ, ಮುಪ್ಪು ಎಂಬ ವಿಭಿನ್ನ ಅವಸ್ಥೆಗಳು ಇರುವಂತೆ ಜೀವಾತ್ಮ ಮುಕ್ತಿಯನ್ನು ಪಡೆಯುವವರೆಗೂ ಭವಭವಾಂತರಗಳಲ್ಲಿ ವಿಭಿನ್ನ ಶರೀರಗಳನ್ನು ಹೊಂದುತ್ತದೆ. ಪ್ರಾಣಿಗಳು ಪ್ರಾಣಿಗಳಾಗಿಯೇ, ಮನುಷ್ಯರು ಮನುಷ್ಯರಾಗಿಯೇ ಹುಟ್ಟುತ್ತಾರೆಂದೇನೂ ಇಲ್ಲ, ಮನುಷ್ಯನೂ ಈ ಸೃಷ್ಟಿಯಲ್ಲಿರುವ ಅನೇಕ ಪ್ರಾಣಿಗಳಲ್ಲೊಬ್ಬ. “ಮನುಷ್ಯರೂಪೇಣ ಮೃಗಾಶ್ಚರಂತಿ” ಅಂದರೆ ಮನುಷ್ಯರ ರೂಪದಲ್ಲಿ ಮೃಗಗಳು ಸಂಚರಿಸುತ್ತಿವೆ ಎಂಬ ಭತೃಹರಿಯ ನೀತಿ ವಾಕ್ಯವನ್ನು ನೀವು ಕೇಳಿರಬಹುದು. ಯಾವ ನೀತಿ-ನಿಯಮ, ಗುಣ-ಶೀಲಗಳ ಬದ್ಧತೆಯಿಲ್ಲದ ಸ್ವತಂತ್ರ ಭಾರತದ ಕೊಳಕು ರಾಜಕಾರಣದಲ್ಲಿ ಈ ನೀತಿವಾಕ್ಯ ಎಷ್ಟೊಂದು ಅರ್ಥಪೂರ್ಣವಾಗಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. 

ಪುರಾಣಗಳ ಲೆಕ್ಕಾಚಾರದ ಪ್ರಕಾರ ಇರುವೆಯಂತಹ ಸಣ್ಣ ಗಾತ್ರದ ಜೀವಿಯಿಂದ ಹಿಡಿದು ಮನುಷ್ಯನೂ ಒಳಗೊಂಡಂತೆ ದೈತ್ಯಾಕಾರದ ತಿಮಿಂಗಲದವರೆಗೆ ಈ ಜಗತ್ತಿನಲ್ಲಿ ಎಂಭತ್ನಾಲ್ಕು ಲಕ್ಷ ವಿಭಿನ್ನ ಜೀವರಾಶಿಗಳು ಇವೆ. ಆಧುನಿಕ ವಿಜ್ಞಾನಿಗಳು ಸೂಕ್ಷ್ಮದರ್ಶಕ ಯಂತ್ರಗಳ ಸಹಾಯದಿಂದ ಇರುವೆಗಿಂತಲೂ ಚಿಕ್ಕಗಾತ್ರದ ಜೀವಕೋಶಗಳನ್ನು ಕಂಡುಹಿಡಿದಿರುವರಾದರೂ ಇದುವರೆಗೆ ಅವರ ಹದ್ದಿನ ಕಣ್ಣುಗಳಿಗೆ ಬೇರಾವ ಗ್ರಹನಕ್ಷತ್ರಗಳಲ್ಲಿಯೂ ಜೀವರಾಶಿ ಇರುವುದು ಖಚಿತವಾಗಿ ಕಂಡುಬಂದಿಲ್ಲ, ಆಕಾಶದಲ್ಲಿ ಬೇರೊಂದು ಗ್ರಹದಿಂದ ಬಂದ ಹಾರಾಡುವ ತಟ್ಟೆ (flying saucers) ಗಳನ್ನು ನೋಡಿದ ಬಗ್ಗೆ ಆಗಾಗ್ಗೆ ಕೇಳಿಬರುವ ವದಂತಿಗಳನ್ನು ಖಗೋಳ ವಿಜ್ಞಾನಿಗಳು ಕಪೋಲಕಲ್ಪಿತವೆಂದು ನಿರಾಕರಿಸಿದರೂ ಭೂಮಿಯಿಂದಾಚೆ ಎಲ್ಲಿಯೂ ಯಾವ ಜೀವಜಂತುವೂ ಇಲ್ಲವೆಂದು ವಿಜ್ಞಾನಿಗಳು ಅಲ್ಲಗಳೆಯುವುದಿಲ್ಲ. ಶುಕ್ರ, ಮಂಗಳ, ಗುರು ಮತ್ತು ಶನಿಗ್ರಹಗಳಲ್ಲಿ ಜೀವರಾಶಿ ಇರುವ ಬಲವಾದ ಸಾಧ್ಯತೆಯನ್ನು ವಿಜ್ಞಾನಿಗಳು ಹಲವು ರೀತಿಯಲ್ಲಿ ಪ್ರತಿಪಾದಿಸುತ್ತಾ ಬಂದಿದ್ದಾರೆ. ಈ ತೆರನಾದ ಅಧ್ಯಯನವನ್ನು astrobiology ಎಂದು ಕರೆಯುತ್ತಾರೆ.

ಯಾರಾದರೂ ಗತಿಸಿದರೆ ಹತ್ತಿರದ ಬಂಧುಗಳು ಮತ್ತು ಆತ್ಮೀಯರು ಮೃತ ವ್ಯಕ್ತಿಯ ಪರಿವಾರದವರಿಗೆ ಸಾಂತ್ವನದ ಮಾತುಗಳನ್ನು ಹೇಳುವಾಗ ಕೇಳಿಬರುವ ಮಾತು: “ಯಾರೂ ಈ ಭೂಮಿಯ ಮೇಲೆ ಶಾಶ್ವತವಾಗಿ ಬದುಕಿರಲು ಸಾಧ್ಯವಿಲ್ಲ; ಎಲ್ಲರೂ ಒಂದಲ್ಲ ಒಂದು ದಿನ ಹೋಗಲೇಬೇಕಾಗುತ್ತದೆ!” ಆದರೆ ಎಲ್ಲಿಗೆ? ಕನ್ನಡದ ಭಗವದ್ಗೀತೆ ಎಂದೇ ಖ್ಯಾತಿಯನ್ನು ಪಡೆದ ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗದಲ್ಲಿ ಬರುವ ಈ ಕೆಳಗಿನ ಪದ್ಯ ಸ್ಮರಣೀಯ:

ತಿರುತಿರುಗಿ ತಿರುಗುತ್ತೆ ಬುಗುರಿ ತಾನೇ ಸೋತು 
ತಿರೆಗುರುಳುವುದು ತನ್ನ ಬಲವ ತಾಂ ಕಳೆದು 
ನರನುಮಂತೆಯೆ ಸುತ್ತಿ ಸುತ್ತಿ ಕಡೆಗೊಂದು ದಿನ 
ತೆರುವನಸ್ಥಿಯ ಧರೆಗೆ ಮಂಕುತಿಮ್ಮ

ಸಾವು, ಬದುಕಿನ ವಿಸ್ಮಯಗಳಲ್ಲೊಂದು. ಇಹದ ಬದುಕಿಗೆ ಅದರ ಅರಿವು ಬೇಕಲ್ಲವೇ? ಸಾವಿನ ಭೀತಿ ಮನುಷ್ಯನ ಜೀವನ ದೃಷ್ಟಿಯನ್ನೇ ಬದಲಿಸಬಹುದಲ್ಲವೇ? ಸಾವಿನಾಚೆಯ ಸತ್ಯವನ್ನು ತಿಳಿಯುವ ಪ್ರಯತ್ನ ಸಹಸ್ರಾರು ವರ್ಷಗಳಿಂದಲೂ ಈ ಭೂಮಿಯ ಮೇಲೆ ನಡೆದಿದೆ. ಅದರ ಗೊತ್ತುಗುರಿಗಳನ್ನರಸುವುದು ಬುದ್ಧಿಯುಳ್ಳ ಜೀವಿಯ ಸಹಜ ಕುತೂಹಲ. ಅಗಲಿ ಹೋದ ಅಜ್ಜಿ/ತಾತರನ್ನು ಕುರಿತು ಮನೆಯಲ್ಲಿರುವ ಎಳೆಯ ಮಕ್ಕಳು ಕೇಳುವ ಪ್ರಶ್ನೆ, ಅದಕ್ಕೆ ಮಾಮೂಲಾಗಿ ಕೊಡುವ ಉತ್ತರ:

ತಾತ ಎಲ್ಲಿಗೆ ಹೋಗಿದೆ? 
ದೂರ ಹೋಗಿದೆ, 
ಯಾವಾಗ ಬರುತ್ತೆ?” 
ಬಾರದ ಸ್ಥಳಕ್ಕೆ ಹೋಗಿದೆ

ಏನೂ ಅರಿಯದ ಮಕ್ಕಳು ಸುಮ್ಮನಾಗುತ್ತವೆ. ಪಾಪ, ಮಕ್ಕಳಿಗೆ ಏನು ತಿಳಿಯುತ್ತದೆ ಎಂದು ಉದ್ಗರಿಸಿ ಎಲ್ಲ ಬಲ್ಲವರಂತೆ ಮಾತನಾಡುವ ಜನರಿಗಾದರೂ ತಾತ ಹೋದ ಸ್ಥಳ ಯಾವುದೆಂದು ಗೊತ್ತೇ? ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನವೇ ಜಗತ್ತಿನ ವಿವಿಧ ಧರ್ಮಗಳ ಉದಯಕ್ಕೆ ನಾಂದಿ. 

ಭಾರತದ ದಾರ್ಶನಿಕರಲ್ಲಿ ಎಲ್ಲರೂ ದೇವರನ್ನು ನಂಬಿದವರೇ ಆಗಿರಲಿಲ್ಲ. ದೇವರು ಮತ್ತು ಧರ್ಮಗಳನ್ನು ಅಲ್ಲಗಳೆಯುವವರೂ ಇದ್ದರು. ಅವರಲ್ಲಿ ಪ್ರಮುಖನೆಂದರೆ ಚಾರ್ವಾಕ. ಇದು ನಿಜವಾದ ವ್ಯಕ್ತಿಯ ಹೆಸರೋ, ಭೌತಿಕವಾದಿಯ (materialist) ಸಾಮಾನ್ಯ ಹೆಸರೋ ಹೇಳುವುದು ಕಷ್ಟ. ಇವನ ಸಿದ್ದಾಂತಗಳನ್ನು ಚಾರ್ವಾಕದರ್ಶನ ಅಥವಾ ಲೋಕಾಯತ ಎಂದು ಕರೆಯುತ್ತಾರೆ. ಲೋಕಾಯತರೇ ಬೇರೆ ಲೋಕಾಯುಕ್ತರೇ ಬೇರೆ! ಲೋಕಾಯತರನ್ನು ಮಟ್ಟ ಹಾಕುವವರು ಇಂದಿನ ಲೋಕಾಯುಕ್ತರು ಎಂದು ಬೇಕಾದರೆ ಹೇಳಬಹುದು. ಚಾರ್ವಾಕನ ಪ್ರಕಾರ ದೇಹಕ್ಕಿಂತ ಬೇರೆ ಆತ್ಮ ಎಂಬುದಿಲ್ಲ. "ದೇಹಾಕಾರ-ಪರಿಣತೇಭ್ಯಃ ಕಿಣ್ವಾದಿಭ್ಯಃ ಮದಶಕ್ತಿವತ್ ಚೈತನ್ಯಮುಪಜಾಯತೇ” ಅಂದರೆ ಮಾದಕದ್ರವ್ಯಗಳಿಂದ ಮಾದಕ ಶಕ್ತಿ ಉತ್ಪನ್ನವಾಗುವಂತೆ ಪೃಥಿವೀ, ಜಲ, ತೇಜಸ್ಸು ಮತ್ತು ವಾಯು ಎಂಬ ನಾಲ್ಕು ಭೂತಗಳಿಂದ ಆತ್ಮರೂಪೀ ಚೈತನ್ಯ ಉಂಟಾಗಿ ಮರಣಾನಂತರ ಅದು ವಿನಷ್ಟವಾಗಿ ಹೋಗುತ್ತದೆ. ಮುಕ್ತಿಯೆಂಬುದು ಬರೀ ಭ್ರಮೆ. ಅಂಗನೆಯರ ಆಲಿಂಗನವೇ ನಿಜವಾದ ಸುಖ. ಐಹಿಕ ಸುಖ ದುಃಖ ಮಿಶ್ರಿತವಾದುದೆಂದು ಹೀಗಳೆಯದೆ ಭತ್ತದ ಹೊಟ್ಟನ್ನು ಬಿಟ್ಟು ಅಕ್ಕಿಯನ್ನು ಸ್ವೀಕರಿಸುವಂತೆ ದುಃಖವನ್ನು ತ್ಯಜಿಸಿ ಬಂದ ಸುಖವನ್ನು ಸವಿಯಬೇಕು.

ಯಾವಜೀವೇತ್ ಸುಖಂ ಜೀವೇತ್ 
ಋಣಂ ಕೃತ್ವಾ ಘೃತಂ ಪಿಬೇತ್ 
ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ?

ಜೀವಿಸು ಸುಖವಾಗಿ ಜೀವನದುದ್ದಕ್ಕೂ 
ತಿನ್ನು ತುಪ್ಪವನು ಸಾಲ ಮಾಡಿಯಾದರೂ! 
ಸತ್ತು ಸುಟ್ಟು ಬೂದಿಯಾದ ಮೇಲೆ 
ಸಾಲ ಕೇಳಲು ಬಂದರೆ ನೀನಿದ್ದರೆ ತಾನೆ!

ಸಾವು ಎಂದರೇನು? ಒಬ್ಬ ವ್ಯಕ್ತಿ ಸತ್ತಿದ್ದಾನೆಂದು ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆಗೆ ಆಧುನಿಕ ವೈದ್ಯಕೀಯ ಶಾಸ್ತ್ರದಲ್ಲಿ ಒಮ್ಮತ ಅಭಿಪ್ರಾಯವಿಲ್ಲ. ಹೃದಯದ ಕ್ರಿಯೆ ನಿಂತು ಹೋದರೆ ವ್ಯಕ್ತಿ ಮೃತಪಟ್ಟಿದ್ದಾನೆಂದು ಹೇಳುವ ಕಾಲವಿತ್ತು, ನಾಡಿಯ ಮಿಡಿತವನ್ನು ನೋಡಿ, ಉಸಿರಾಟವನ್ನು ಗಮನಿಸಿ ವ್ಯಕ್ತಿ ಬದುಕಿದ್ದಾನೆಯೇ ಇಲ್ಲವೇ ಎಂದು ನಿರ್ಧರಿಸಲಾಗುತ್ತಿತ್ತು. ವೈದ್ಯಕೀಯ ಶಾಸ್ತ್ರ ಬೆಳೆದಂತೆ ಕ್ರಮೇಣ ಸಾವಿನ ಈ ಪರಿಭಾಷೆ ಬದಲಾಯಿತು. ಹೃದಯದ ನಿಷ್ಕ್ರಿಯತೆಗಿಂತ ಮೆದುಳಿನ ನಿಷ್ಕ್ರಿಯತೆಯೇ (brain death) ಸಾವಿನ ಹೆಗ್ಗುರುತೆಂದು ಪ್ರತಿಪಾದಿಸಲಾಯಿತು. ಸಾವಿನ ಈ ಹೊಸ ಪರಿಭಾಷೆಗೆ ದೊಡ್ಡ ಸವಾಲನ್ನು ಒಡ್ಡಿದ್ದು ಕೃತಕ ಉಸಿರಾಟದ ಯಂತ್ರಗಳ ಆವಿಷ್ಕಾರ. ಮೆದುಳಿಗೆ ಸಾಕಷ್ಟು ಹಾನಿಯುಂಟಾಗಿ ವ್ಯಕ್ತಿ ಚೇತರಿಸಿಕೊಳ್ಳಲು ಸಾಧ್ಯವಿಲ್ಲವೆಂದಾದ ಮೇಲೂ ಮೆದುಳಿನ ನಿಷ್ಕ್ರಿಯತೆಯೊಂದೇ ಸಾವಿನ ಸಂಕೇತವಾಗಲಾರದೆಂಬ ತೀರ್ಮಾನಕ್ಕೆ ಬರಲಾಯಿತು. ಅದಕ್ಕೆ ಕಾರಣ ಕೃತಕ ಉಸಿರಾಟದ ಮೂಲಕ ದೀರ್ಘಕಾಲ ಹೃದಯದ ಕ್ರಿಯೆ ನಿಲ್ಲದಂತೆ ನೋಡಿಕೊಳ್ಳಲು ಸಾಧ್ಯವಾದ ಮೇಲೆ ಹಾನಿಗೊಂಡಿದ್ದ ಮೆದುಳಿನಲ್ಲಿ ಉಂಟಾದ ಚೇತರಿಕೆ. ಹಾನಿಗೊಂಡ ಮೆದುಳಿನ ಭಾಗವನ್ನು ಬೇರೆಡೆಯ ಆರೋಗ್ಯಕರವಾದ ಜೀವಕೋಶಗಳನ್ನು (cells) ಬಳಸಿಕೊಂಡು ಯಶಸ್ವಿಯಾಗಿ ರಿಪೇರಿ ಮಾಡುವ ನಿಟ್ಟಿನಲ್ಲಿ ನ್ಯಾನೋ ಟೆಕ್ನಾಲಜಿ ಮುಂದುವರಿದಿದೆ. ಈಗ ಹೃದಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ಕಸಿಗೊಳಿಸಿದಂತೆ ಮುಂದೊಂದು ದಿನ ಮೆದುಳನ್ನೂ ಯಶಸ್ವಿಯಾಗಿ ಕಸಿಗೊಳಿಸುವತ್ತ ದಾಪುಗಾಲಿಡುತ್ತಿದೆ. ನಾಶಗೊಂಡ ಮೆದುಳನ್ನು ಹೊಸದಾಗಿ ಪುನರ್ ರೂಪಿಸಿದ ಮೇಲೆ ವ್ಯಕ್ತಿ ತನ್ನ ಹಿಂದಿನ ಸ್ಮರಣಶಕ್ತಿ, ತನ್ನವರೊಂದಿಗಿದ್ದ ಬಂಧುತ್ವ ಮತ್ತು ವ್ಯಕ್ತಿತ್ವವನ್ನು ಉಳಿಸಿಕೊಳ್ಳಬಲ್ಲನೇ? ಒಟ್ಟಾರೆ ಮೊದಲಿನ ವ್ಯಕ್ತಿಯಾಗಿ ಇರುತ್ತಾನೆಯೇ ಎಂಬ ಬಗ್ಗೆ ತೀವ್ರ ಅನುಮಾನವಿದೆ. ಆಗ ಸಾವಿನ ಪರಿಭಾಷೆ ಏನಾಗಬಹುದು? ಮೆದುಳಿನ ನಿಷ್ಕ್ರಿಯತೆಯೇ? ಅಥವಾ ಕೌಟುಂಬಿಕ ಸಂಬಂಧಗಳ ನಾಶವೇ? ಎಂದು ವೈದ್ಯಕೀಯ ಶಾಸ್ತ್ರದಲ್ಲಿ ಹೊಸ ಜಿಜ್ಞಾಸೆಯುಂಟಾಗಿದೆ. ಈಗಲೇ ಕೌಟುಂಬಿಕ ಜೀವನದಲ್ಲಿ ಸಂಬಂಧಗಳು ಕೆಟ್ಟಾಗ ಸತ್ತಿದ್ದೀಯಾ, ಬದುಕಿದ್ದೀಯಾ ಎಂದು ಒಂದು ದಿನವೂ ನೋಡಲು ಬರಲಿಲ್ಲ ಎಂದು ಗೊಣಗುವ ಜನರಿಗೆ ಆಗ ಬದುಕಿಯೂ ಸತ್ತಂತೆ ಆಗಬಹುದು. 

ಮನುಷ್ಯನ ಶರೀರ ಒಂದು ಬಾಡಿಗೆ ಮನೆ ಇದ್ದಂತೆ. ತನ್ನದಲ್ಲದ ಮನೆಯಲ್ಲಿ ಬಾಡಿಗೆದಾರನಾಗಿ ವಾಸ. ಸ್ವಂತ ಮನೆಯನ್ನು ಕಟ್ಟಿಸಿದವರಿಗೆ ಮಾತ್ರ ಅದರ ಮೇಲೆ ನಿಜವಾದ ಹಕ್ಕು. ಮನೆ ಮಾಲೀಕ ಬಿಡು ಎಂದಾಗ ಬಿಡಬೇಕು. ಈ ಶರೀರವೆಂಬ ಮನೆಯ ಮಾಲೀಕನೇ ಸೃಷ್ಟಿಕರ್ತನಾದ ದೇವರು ಎನ್ನುವವರಿದ್ದಾರೆ. ಇದು ಒಂದು ಅರ್ಥದಲ್ಲಿ ನಿಜ. ಅಂದರೆ ತನ್ನದಲ್ಲವೆಂಬರ್ಥದಲ್ಲಿ, ಆದರೆ ಬಾಡಿಗೆ ಹಣವನ್ನು ಯಾರೂ ಕಾಲಕಾಲಕ್ಕೆ ಸರಿಯಾಗಿ ಕೊಡುವುದಿಲ್ಲ, ಮನೆಯನ್ನೂ ಸಹ ಅಷ್ಟು ಸುಲಭವಾಗಿ ಖಾಲಿ ಮಾಡುವುದಿಲ್ಲ ಎಂಬುದು ಯಾರಿಗೆ ಗೊತ್ತಿಲ್ಲ. ಮನೆಯ ಮಾಲೀಕರು ಪೇಟೆ ಪಟ್ಟಣಗಳಲ್ಲಿ ಬಾಡಿಗೆಗೆ ಕೊಟ್ಟ ತಮ್ಮ ಮನೆಯನ್ನು ಬಿಡಿಸಿಕೊಳ್ಳುವುದು ಎಷ್ಟು ಕಷ್ಟ ಎಂಬುದರ ಅರಿವು ನಗರನಿವಾಸಿಗಳಿಗೆ ತಿಳಿಯದ ವಿಷಯವೇನಲ್ಲ. ಈ ಹಿನ್ನೆಲೆಯಲ್ಲಿಯೇ ಹೇಳಿದ ಮಾತೆಂದರೆ "ಮೂರ್ಖರು ಮನೆ ಕಟ್ಟಿಸುತ್ತಾರೆ; ಜಾಣರು ಅದರಲ್ಲಿ ವಾಸವಾಗಿರುತ್ತಾರೆ” (Fools build houses whereas wise stay in them). ಈ ಪ್ರಪಂಚ ಅಂತಹ ಜಾಣಜಾಣೆಯರಿಂದಲೇ ತುಂಬಿಹೋಗಿದೆ. ಸ್ವಂತ ಬಂಡವಾಳ ಹಾಕಿ ಮನೆಯನ್ನು ಕಟ್ಟಿಸುವುದಕ್ಕಿಂತ ಬಂಡವಾಳ ಹಾಕದ ಮನೆಯಲ್ಲಿ ಆರಾಮವಾಗಿ ವಾಸವಾಗಿದ್ದು ಬೇರೆಯವರ ಮನೆಯ ಗೋಡೆಗೆ ಮೊಳೆ ಹೊಡೆಯಲು ಆತಂಕಪಟ್ಟುಕೊಳ್ಳುವುದಿಲ್ಲ, ಅದಕ್ಕೇ ಏನೋ ದೇವರು ಆಗಾಗ್ಗೆ ಈ ಭೂಮಿಯ ಮೇಲೆ ಖುದ್ದಾಗಿ ಅವತರಿಸಿ ಬಂದು ಮನೆ ಖಾಲಿ ಮಾಡಿಸುತ್ತಿರುವುದು! 

ಅದೇನೇ ಇರಲಿ, ಮನುಷ್ಯ ಸತ್ತಮೇಲೆ ತಾನು ಮಾಡಿದ ಪುಣ್ಯ-ಪಾಪಗಳಿಗೆ ಅನುಗುಣವಾಗಿ ಸ್ವರ್ಗಕ್ಕೋ ನರಕಕ್ಕೋ ಹೋಗುತ್ತಾನೆಂಬುದು ಭಾರತೀಯರ ಬಲವಾದ ನಂಬಿಕೆ. ಸತ್ತ ಪಾಪಿಗಳನ್ನು ಯಮದೂತರು ಎಳೆದುಕೊಂಡು ಹೋಗಿ ಯಮರಾಜನ ಮುಂದೆ ನಿಲ್ಲಿಸುತ್ತಾರೆ. ಅವನ ಆಪ್ತ ಸಹಾಯಕನಾದ ಚಿತ್ರಗುಪ್ತನು ಆ ಪಾಪಿಗಳು ಮಾಡಿದ ಪಾಪಕೃತ್ಯಗಳು ಏನೆಂದು ತನ್ನ ಕಡತದಲ್ಲಿ ಬರೆದಿಟ್ಟುಕೊಂಡಿರುವುದನ್ನು ಓದಿ ಹೇಳುತ್ತಾನೆ. ಯಮರಾಜನು ಅದನ್ನು ಕೇಳಿಸಿಕೊಂಡು ಕಣ್ಣು ಕೆಂಪಾಗಿಸಿ ಮೀಸೆ ಹುರಿಮಾಡಿ ಹೂಂಕರಿಸಿ ಆಯಾಯ ಪಾಪಿಗಳ ಪಾಪದ ತೀವ್ರತೆಗೆ ಅನುಗುಣವಾಗಿ ಕಾದ ಕಬ್ಬಿಣದ ಸಲಾಕೆಯಿಂದ ಬರೆಯೆಳೆಯುವಂತೆ, ಬೆಂಕಿಯಲ್ಲಿ ಸುಡುವಂತೆ ಇಲ್ಲವೇ ಕುದಿಯುವ ಎಣ್ಣೆಯ ಕೊಪ್ಪರಿಗೆಯಲ್ಲಿ ಹಾಕಿ ಕುದಿಸುವಂತೆ ಶಿಕ್ಷೆಯನ್ನು ವಿಧಿಸುತ್ತಾನೆ ಇತ್ಯಾದಿ ಇತ್ಯಾದಿ ಭಾರತೀಯರು ಬಾಲ್ಯದಿಂದಲೂ ನಂಬಿಕೊಂಡು ಬಂದ ನರಕದ ಪರಿಕಲ್ಪನೆ.

ಸಹೃದಯ ಓದುಗರೇ, ಆ ಚಿತ್ರಗುಪ್ತ ಎಲ್ಲಿದ್ದಾನೆ, ಅವನ ವಿಳಾಸವೇನು, ಕೊನೆಯ ಪಕ್ಷ ಅವನ ಮೊಬೈಲ್ ನಂಬರ್ ಏನೆಂದು ಗೊತ್ತಾಗಿದ್ದರೆ ನಮ್ಮ ಜನಪ್ರಿಯ (ಅ)ರಾಜಕೀಯ ಧುರೀಣರು ಅವನನ್ನೂ ಭಿನ್ನಮತದ ಗುಂಪಿಗೆ ಸೆಳೆದುಕೊಂಡು ಯಾವುದಾದರೂ ರೆಸಾರ್ಟಿಗೆ ಹಾರಿಸಿಕೊಂಡು ಹೋಗುತ್ತಿದ್ದರು; ಸಾಯುವ ಮೊದಲೇ ತಮ್ಮ ತಮ್ಮ ಹೆಸರಿನ ಖಾತೆಯಲ್ಲಿರುವ ಪಾಪದ ಎಲ್ಲ ಹಾಳೆಗಳನ್ನೂ ಅವನ ಕೈಯಿಂದಲೇ ಹರಿದುಹಾಕಿಸಿ, ಮಾಡದ ಪುಣ್ಯ ಕಾರ್ಯಗಳನ್ನು ರಾತ್ರೋರಾತ್ರಿ ಹೊಸದಾಗಿ ಬರೆಸಿಕೊಂಡು ಸೀದಾ ಸ್ವರ್ಗಕ್ಕೆ ಹೋಗಿ ಸುರಾಧಿಪತಿ ದೇವೇಂದ್ರನ ಸಿಂಹಾಸನಕ್ಕೂ ಲಗ್ಗೆ ಹಾಕುತ್ತಿದ್ದರು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 20.10.2010.