ಕಾಮಾತುರಾಣಾಂ ನ ಭಯಂ ನ ಲಜ್ಜಾ
ನಮ್ಮ ದೇಶದಲ್ಲಿರುವ ನೂರಾರು ನದಿಗಳು, ಜಲಾಶಯಗಳು, ಸರೋವರಗಳು, ಹಳ್ಳಕೊಳ್ಳಗಳು ಒಮ್ಮೆ ಮೈದುಂಬಿ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದರೆ, ಮತ್ತೊಮ್ಮೆ ಬತ್ತಿ ಭೂಮಿ ಬಿರುಕುಬಿಟ್ಟು ಚಿಂತೆಯ ಗೆರೆಗಳು ಮೂಡುವಂತೆ ಮಾಡುತ್ತವೆ. ಆದರೆ ಭಾರತದ ಮಹಾಕಾವ್ಯಗಳಾದ ವಾಲ್ಮೀಕಿಯ ರಾಮಾಯಣವಾಗಲೀ, ವ್ಯಾಸರ ಮಹಾಭಾರತವಾಗಲೀ ಎಂದೂ ಬತ್ತದ ಸಾಹಿತ್ಯ ರಸಗಂಗೆಯಾಗಿ ಜನಮಾನಸದಲ್ಲಿ ಸದಾ ಕಾಲ ತುಂಬಿ ಹರಿಯುತ್ತಾ ಬಂದಿವೆ! ಇವುಗಳಲ್ಲಿ ಬರುವ ಕಥಾಪ್ರಸಂಗಗಳು ಒಂದೆಡೆ ನಾಡಿನ ಜನರ ದೈನಂದಿನ ಸಂಭಾಷಣೆಯ ಆಕರಗಳಾಗಿ ಬದುಕಿಗೆ ಬೆಳಕಾಗಿದ್ದರೆ, ಮತ್ತೊಂದೆಡೆ ಕಾಲಕಾಲದಲ್ಲಿ ಉದಯಿಸಿ ಬಂದ ಕವಿವರೇಣ್ಯರ ಸಾಹಿತ್ಯ ಕೃಷಿಗೆ ಸ್ಫೂರ್ತಿಯ ಸೆಲೆಯಾಗಿ ಕಂಗೊಳಿಸುತ್ತಿವೆ. ಸಂಸ್ಕೃತದಲ್ಲಿರುವ ಈ ಮೇರುಕೃತಿಗಳಿಂದ ಪ್ರಭಾವಿತಗೊಂಡು ಪ್ರಾಂತೀಯ ಭಾಷೆಗಳಲ್ಲಿ ಮೈದಾಳಿದ ಪ್ರಮುಖ ಗ್ರಂಥಗಳಲ್ಲಿ ಹಿಂದಿಯಲ್ಲಿ ವಿರಚಿತವಾದ 16ನೆಯ ಶತಮಾನದ ತುಲಸೀದಾಸರ ರಾಮಚರಿತಮಾನಸವೂ ಒಂದು. ಕನ್ನಡ ನಾಡಿನಲ್ಲಿ ಶಿವಶರಣರ ವಚನಗಳನ್ನು, ದಾಸರ ಪದಗಳನ್ನು ದಿನನಿತ್ಯದ ಬದುಕಿಗೆ ಮಾರ್ಗದರ್ಶಿಯಾಗಿ ಉದಾಹರಿಸಿದಂತೆ ಉತ್ತರಭಾರತೀಯರು ತುಲಸೀರಾಮಾಯಣದ ಚೌಪಾಯಿಗಳನ್ನು ನಿತ್ಯಜೀವನದಲ್ಲಿ ಗಾದೆಮಾತುಗಳಂತೆ ನೀತಿವಾಕ್ಯಗಳಂತೆ ಉದಾಹರಿಸುತ್ತಾರೆ. ಕಲಿಯುಗದಲ್ಲಿ ವಾಲ್ಮೀಕಿಯೇ ತುಲಸೀದಾಸನಾಗಿ ಹುಟ್ಟಿಬಂದನೆಂದು ಉತ್ತರಭಾರತದಲ್ಲಿ ಒಂದು ಪ್ರತೀತಿ ಇದೆ.
ತುಲಸೀದಾಸರಾಗಲೀ, ಪುರಂದರದಾಸರಾಗಲೀ ತಮ್ಮ ಬದುಕಿನಲ್ಲಿ ಒಂದು ಹೊಸ ತಿರುವು ಪಡೆದದ್ದು ಯಾವುದೇ ಮಠದ ಸ್ವಾಮಿಗಳ ಉಪದೇಶದಿಂದ ಅಲ್ಲ; ತಮ್ಮ ತಮ್ಮ ಸಹಧರ್ಮಿಣಿಯರ ಸನ್ನಡತೆ ಮತ್ತು ವಿವೇಕದ ಮಾತುಗಳಿಂದ! ಇತಿಹಾಸದಲ್ಲಿ ಕೆಲವರು ಸ್ವಾಮಿಗಳು ಸಂನ್ಯಾಸವನ್ನು ತ್ಯಜಿಸಿ ಗೃಹಸ್ಥಧರ್ಮವನ್ನು ಸ್ವೀಕರಿಸುವಂತೆ ನಂತರ ಪರಿತಪಿಸುವಂತೆ, ಪ್ರಲೋಭನೆ ಮಾಡಿದವರು ಅವಿವಾಹಿತ ಮಹಿಳೆಯರಾದರೆ, ಗೃಹಸ್ಥರಾದ ಗಂಡಂದಿರಿಗೆ ಸ್ವಾಮಿಗಳಾಗುವಂತೆ ಪ್ರೇರೇಪಿಸಿದವರು ಸಾದ್ವಿಮಣಿಗಳಾದ ಅವರ ಮಡದಿಯರು. ಜಿಪುಣಾಗ್ರೇಸರನಾದ ಶೀನಪ್ಪನು ಪುರಂದರದಾಸರಾಗಿ ಪರಿವರ್ತನೆ ಹೊಂದಿದ್ದು ಧರ್ಮದುರಂಧರೆಯಾದ ಅವರ ಮಡದಿ ಸರಸ್ವತಿದೇವಿಯಿಂದ. ತಮ್ಮ ಬದುಕಿನಲ್ಲಾದ ಈ ತಿರುವಿಗೆ ತನ್ನ ಹೆಂಡತಿಯೇ ಕಾರಣ ಎಂಬ ಸಂಗತಿಯನ್ನು ಸ್ವತಃ ಪುರಂದರದಾಸರೇ ಹೀಗೆ ನೆನೆಸುತ್ತಾರೆ:
ದಂಡಿಗೆ ಬೆತ್ತ ಹಿಡಿಯುವುದಕ್ಕೆ