ಪ್ರವಾಹದಲ್ಲಿ ಕೊಚ್ಚಿ ಹೋಗದ ಭಕ್ತಿ!

  •  
  •  
  •  
  •  
  •    Views  

ಸಾರ್ವಜನಿಕ ಜೀವನ ನಡೆಸುವುದೆಂದರೆ ಸರ್ಕಸ್ ನಲ್ಲಿ ತಂತಿಯ ಮೇಲೆ ನಡೆದಂತೆ, ಸಮತೆಯೆಂಬ ಉದ್ದನೆಯ ಕೋಲನ್ನು ಹಿಡಿದು ಸರಿದೂಗಿಸಿಕೊಂಡು ಹುಷಾರಾಗಿ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ಆಚೆ ಈಚೆ ಬೀಳದಂತೆ ಎಚ್ಚರವಹಿಸಿ ಮುನ್ನಡೆಯಬೇಕಾಗುತ್ತದೆ. ಸುತ್ತಲೂ ಸಾವಿರಾರು ಕಣ್ಣುಗಳು ನೋಡುತ್ತಿರುತ್ತವೆ. ಆದರೆ ಸರ್ಕಸ್ ಆಟಗಾರ್ತಿಯನ್ನು ನೋಡುವ ಕಣ್ಣುಗಳಿಗೂ ಸಾರ್ವಜನಿಕ ರಂಗದಲ್ಲಿರುವವರನ್ನು ನೋಡುವ ಕಣ್ಣುಗಳಿಗೂ ಒಂದು ಮುಖ್ಯವಾದ ವ್ಯತ್ಯಾಸವಿದೆ. ಅದೇನೆಂದರೆ ಸರ್ಕಸ್ ನಲ್ಲಿ ನೋಡುವ ಕಣ್ಣುಗಳು ತಂತಿಯ ಮೇಲೆ ನಡೆಯುವ ಆಟಗಾರ್ತಿಯನ್ನು ಬೆಕ್ಕಸ ಬೆರಗಾಗಿ ನೋಡುತ್ತಿರುತ್ತವೆ. ಅವಳು ಕೆಳಗೆ ಬಿದ್ದರೆ ಗತಿ ಏನು ಎಂಬ ಆತಂಕ ನೋಡುಗರಿಗೆ ಇರುತ್ತದೆ. ಹೀಗಾಗಿ ಪ್ರೇಕ್ಷಕರು ತಮಗೆ ಅರಿವಿಲ್ಲದಂತೆ ತಂತಿಯ ಮೇಲೆ ತಾವೇ ನಡೆದಂತೆ ಉಸಿರುಗಟ್ಟಿ ನೋಡುತ್ತಿರುತ್ತಾರೆ. ಸ್ವಲ್ಪ ಮುಗ್ಗರಿಸಿದರೂ ತಾವೇ ಬಿದ್ದಂತಾಗಿ ಲೊಚಗುಟ್ಟುತ್ತಾರೆ. ಆಟಗಾರ್ತಿ ಬೀಳದಂತೆ ಗುರಿಯನ್ನು ಮುಟ್ಟಿದರೆ ಖುಷಿಪಡುತ್ತಾರೆ. ಬಿದ್ದರೆ ಅನುಕಂಪ ವ್ಯಕ್ತಪಡಿಸುತ್ತಾರೆ. ಆದರೆ ಸಾರ್ವಜನಿಕ ಕ್ಷೇತ್ರದಲ್ಲಿರುವ ಮುಂದಾಳುಗಳನ್ನು ನೋಡುವ ಕಣ್ಣುಗಳು ಹಾಗಿರುವುದಿಲ್ಲ, ಮೆಚ್ಚುವ ಕಣ್ಣುಗಳು ಸಾವಿರಾರು ಇದ್ದರೂ ಮತ್ಸರದಿಂದ ನೋಡುವ ಕಣ್ಣುಗಳು ನೂರಾದರೂ ಇರುತ್ತವೆ. ಸಲೀಸಾಗಿ ನಡೆಯದಂತೆ ತೊಡರಗಾಲು ಕೊಡುವ ಕೈಗಳು ಇನ್ನೆಷ್ಟೋ ಹೇಳತೀರದು. ಅವೆಲ್ಲವನ್ನೂ ಮೆಟ್ಟಿ ಮುಂದೆ ಸಾಗಿ ಗುರಿ ಮುಟ್ಟುವುದು ಅಷ್ಟು ಸಲೀಸಾದ ಕಾರ್ಯವಲ್ಲ, ಲೇಸೆನಿಸಿಕೊಂಡು ಐದು ದಿನ ಬದುಕಿದರೇನು!... ಲೇಸೆನಿಸಿಕೊಂಡು ಒಂದು ದಿನ ಬದುಕಿದರೆ ಸಾಲದೆ? ಎನ್ನುತ್ತಾರೆ ಬಸವಣ್ಣನವರು. ಇಲ್ಲಿ ಲೇಸು ಅಂದರೆ ಹೌದು ಎನಿಸಿಕೊಂಡು ಬಾಳುವುದು. ಆದರೆ ಯಾರಿಂದ ಹೌದು ಎನಿಸಿಕೊಂಡು ಬಾಳಬೇಕೆಂಬುದನ್ನು ಬಸವಣ್ಣನವರು ಸ್ಪಷ್ಟವಾಗಿ ಇಲ್ಲಿ ಹೇಳಿಲ್ಲ. ಜನರಿಂದ ಹೌದು ಎನಿಸಿಕೊಂಡು ಬಾಳಬೇಕೆಂದರೆ ಅದು ಸಾಕ್ಷಾತ್ ಶಿವನಿಂದಲೂ ಸಾಧ್ಯವಿಲ್ಲ, ಬೋಳೆ ಶಂಕರ, ಸ್ಮಶಾನವಾಸಿ, ಬೂದಿಬಡುಕ ಎಂದೆಲ್ಲಾ ಶಿವನನ್ನೇ ನಿಂದಿಸುವ ಮಾತುಗಳನ್ನು ನೀವು ಕೇಳಿರಬೇಕಲ್ಲವೇ?

ಜನರಿಂದ ಹೌದು ಎನಿಸಿಕೊಂಡು ಬಾಳುವುದು ಎಷ್ಟು ಕಷ್ಟ ಎನ್ನುವುದಕ್ಕೆ ಒಂದು ರೋಚಕವಾದ ಕಥಾನಕ ಹೀಗಿದೆ: ತಂದೆ ಮತ್ತು ಮಗ ಜಾತ್ರೆಯಲ್ಲಿ ಒಂದು ಕತ್ತೆಯನ್ನು ಖರೀದಿಸಿ ಇಬ್ಬರೂ ಅದರ ಮೇಲೆ ಹತ್ತಿಕೊಂಡು ಮನೆಯ ಕಡೆ ಹೋಗುತ್ತಿದ್ದರು. ದಾರಿಯಲ್ಲಿದ್ದ ಜನ ಅವರನ್ನು ನೋಡಿ ಎಂತಹ ದಾಂಡಿಗರಿದ್ದಾರೆ, ಪಾಪ ಬಡಪಾಯಿ ಕತ್ತೆಯ ಮೇಲೆ ಇಬ್ಬರೂ ಹೇಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದಾರೆ ನೋಡು! ಎಂದು ಆಕ್ಷೇಪಿಸಿ ಮಾತನಾಡಿದರಂತೆ. ಅದನ್ನು ಕೇಳಿ ಮಗ ಇಳಿದು ಅಪ್ಪನೊಬ್ಬನನ್ನೇ ಕತ್ತೆಯ ಮೇಲೆ ಕೂರಿಸಿಕೊಂಡು ತಾನು ಕಾಲ್ನಡಿಗೆಯಲ್ಲಿ ಮುಂದೆ ಹೋದ. ಸ್ವಲ್ಪ ದೂರ ಹೋದ ಮೇಲೆ ಜನ ಮಾತನಾಡಿದರು: ಪಾಪ, ಎಳೆಯ ಹುಡುಗನನ್ನು ನಡೆಸಿಕೊಂಡು ಅಪ್ಪ ಹೇಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದಾನೆ ನೋಡು, ಮಗನ ಮೇಲೆ ಸ್ವಲ್ಪವೂ ಕರುಣೆ ಬೇಡವೇ? ಎಂದು ಉದ್ಗರಿಸಿದರಂತೆ. ಇದನ್ನು ಕೇಳಿಸಿಕೊಂಡ ಅಪ್ಪ ಕೆಳಗಿಳಿದು ಮಗನನ್ನು ಕತ್ತೆಯ ಮೇಲಿ ಕೂರಿಸಿಕೊಂಡು ತಾನು ಕಾಲ್ನಡಿಗೆಯಲ್ಲಿ ಮನ್ನಡೆದ. ಸ್ವಲ್ಪ ಹೊತ್ತಿನಲ್ಲಿಯೇ ಮುಂದೆ ಸಿಕ್ಕ ಜನ ಮಾತನಾಡಿದರಂತೆ: ಆ ಪೋಕರಿ ಹುಡುಗನನ್ನು ನೋಡು, ಪಾಪ ವಯಸ್ಸಾದ ಅಪ್ಪನನ್ನು ನಡೆಯಲು ಹಚ್ಚಿ ತಾನು ಮಾತ್ರ ದಿಮಾಕಿನಿಂದ ಹೇಗೆ ಕತ್ತೆ ಸವಾರಿ ಮಾಡುತ್ತಿದ್ದಾನೆ! ಜನರ ಆಕ್ಷೇಪಣೆಯ ಮಾತುಗಳಿಂದ ಬೇಸತ್ತ ತಂದೆ-ಮಗ ಅದಾವುದಕ್ಕೂ ಅವಕಾಶ ಮಾಡಿಕೊಡಬಾರದೆಂದು ಆಲೋಚಿಸಿ ಇಬ್ಬರೂ ಕತ್ತೆಯನ್ನು ಹೊತ್ತುಕೊಂಡು ಹೋದರು! ಈಗಲಾದರೂ ಜನ ಟೀಕೆಮಾಡುವುದನ್ನು ಬಿಟ್ಟಾರು ಎಂಬ ಅವರ ನಿರೀಕ್ಷೆ ಹುಸಿಯಾಯಿತು. ಕತ್ತೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಅವರನ್ನು ಕಂಡ ಜನ ಗಹಗಹಿಸಿ ನಕ್ಕು ಎಂತಹ ಕತ್ತೆಗಳಿದ್ದಾರೆ ಇವರು, ಕತ್ತೆಯ ಮೇಲೆ ಹತ್ತಿಕೊಂಡು ಹೋಗುವುದನ್ನು ಬಿಟ್ಟು ಹೊತ್ತುಕೊಂಡು ಹೋಗುತ್ತಿದ್ದಾರಲ್ಲಾ, ಇವರಿಗೇನಾದರೂ ಬುದ್ದಿ ಇದೆಯೇ? ಎಂದು ಗೇಲಿ ಮಾಡತೊಡಗಿದರಂತೆ! ಪ್ರಶ್ನೆ ಮೊದಲಿದ್ದ ಸ್ಥಿತಿಗೇ ಬಂತು!

ಸಾರ್ವಜನಿಕ ಸ್ಥಾನಗಳಲ್ಲಿರುವವರು ಮೇಲಿನ ಕಥೆಯನ್ನು ಚೆನ್ನಾಗಿ ಮನದಟ್ಟುಮಾಡಿಕೊಳ್ಳಬೇಕು. ಏನು ಮಾಡಿದರೂ ಹೀಗಳೆಯುವ ಜನ ಇದ್ದೇ ಇರುತ್ತಾರೆ. ನಿಂದನೆಯ ಮಾತುಗಳಿಂದ ಮನಸ್ಸನ್ನು ನೋಯಿಸಿಕೊಳ್ಳದೆ ಆ ಮಾತುಗಳ ಹಿಂದಿರುವ ಸತ್ಯ ಎಷ್ಟು ಎಂಬುದನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಂಡು ತಮ್ಮ ಗುರಿಯತ್ತ ದೃಢವಾದ ಹೆಜ್ಜೆಗಳನ್ನಿಡುತ್ತಾ ಮುಂದೆ ಸಾಗಬೇಕು. ಮೇಲಿನ ವಚನದಲ್ಲಿ ಯಾರಿಂದ ಹೌದು ಎನಿಸಿಕೊಂಡು ಬಾಳಬೇಕೆಂದು ಹೇಳದ ಬಸವಣ್ಣನವರು ಕೆಳಗಿನ ವಚನದ ಕೊನೆಯ ಸಾಲಿನಲ್ಲಿ ಅದರ ಸ್ಪಷ್ಟ ನಿರ್ದೇಶನ ನೀಡಿರುತ್ತಾರೆ:

ನುಡಿದರೆ ಮುತ್ತಿನ ಹಾರದಂತಿರಬೇಕು 
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು 
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು!

ನೀವು ಆಡುವ ಮಾತು ಮುತ್ತಿನ ಹಾರದಂತೆ ಸುಂದರವಾಗಿರಬೇಕು, ಮಾಣಿಕ್ಯದ ದೀಪ್ತಿಯಂತೆ ಹೊಳಪುಳ್ಳದ್ದಾಗಿರಬೇಕು, ಸ್ಪಟಿಕದ ಸಲಾಕೆಯಂತೆ ಸ್ಪುಟವಾಗಿರಬೇಕು, ಇವೆಲ್ಲಕ್ಕಿಂತ ಮಿಗಿಲಾಗಿ ಎಲ್ಲವನ್ನು ಬಲ್ಲ ದೇವರೂ (ಲಿಂಗ) ಸಹ ನೀವಾಡುವ ಮಾತನ್ನು ಕೇಳಿ ತಲೆದೂಗುವಂತಿರಬೇಕು. ಲೋಕಾಪವಾದಗಳು ಮತ್ತು ಟೀಕೆಗಳು ಬರುತ್ತವೆ, ಹೋಗುತ್ತವೆ. ಅವುಗಳಿಂದ ಘಾಸಿಗೊಳ್ಳದೆ ಮನ್ನಡೆಯುವ ದೃಢತೆ ಇರಬೇಕು. ಸಾರ್ವಜನಿಕ ಬದುಕಿನಲ್ಲಾಗಲೀ, ವೈಯಕ್ತಿಕ ಬದುಕಿನಲ್ಲಾಗಲೀ ಮನುಷ್ಯ ಮೆಚ್ಚಿಸಬೇಕಾದ್ದು ಜನರನ್ನಲ್ಲ: ತನ್ನೊಳಗಿರುವ ಆತ್ಮವನ್ನು, ಬಣ್ಣ ಬಣ್ಣದ ಮಾತುಗಳಿಂದ ಲೋಕದ ಜನರನ್ನು ವಂಚಿಸಬಹುದು; ಮರುಳುಮಾಡಬಹುದು. ಆದರೆ ತನ್ನೆಲ್ಲ ಕ್ರಿಯೆಗಳಿಗೂ ಸಾಕ್ಷೀಭೂತಚೈತನ್ಯವಾದ ಆತ್ಮವನ್ನು ಮಾತ್ರ ವಂಚಿಸುವುದು ಯಾರಿಂದಲೂ ಸಾಧ್ಯವಿಲ್ಲ.

ಈ ಮೇಲಿನ ಮಾತುಗಳನ್ನು ಬರೆಯಲು ಕಾರಣ ನಮಗೆ ಇತ್ತೀಚೆಗೆ ಬಂದ ಎರಡು ಈ-ಮೇಲ್ ಗಳು. ಕ್ರಿ.ಪೂ. 5ನೆಯ ಶತಮಾನದಲ್ಲಿ ಜೀವಿಸಿದ್ದ ಪಾಣಿನಿ ಎಂಬ ಮಹರ್ಷಿಯ ಹೆಸರನ್ನು ಸಂಸ್ಕೃತ ಸಾರಸ್ವತಲೋಕದಲ್ಲಿ ಕೇಳದವರಿಲ್ಲ. ಅವರು ರಚಿಸಿದ ಸಂಸ್ಕೃತ ವ್ಯಾಕರಣ ಸೂತ್ರಗಳನ್ನು ಆಧರಿಸಿ ನಾವು ರೂಪಿಸಿರುವ "ಗಣಕಾಷ್ಟಾಧ್ಯಾಯಿ" ಎಂಬ ತಂತ್ರಾಂಶ (Software) ಸಂಸ್ಕೃತವಿದ್ವಾಂಸರ ಮತ್ತು ಭಾಷಾವಿಜ್ಞಾನಿಗಳ ಅಪಾರ ಮೆಚ್ಚುಗೆಯನ್ನು ಗಳಿಸಿದೆ. ಅಂತರಜಾಲದಲ್ಲಿ (www.taralabalu.org) ಉಚಿತವಾಗಿ ದೊರೆಯುವಂತೆ ಮಾಡಿರುವ ನಮ್ಮ ಈ ತಂತ್ರಾಂಶವನ್ನು ಜಗತ್ತಿನಾದ್ಯಂತ ಸುಮಾರು 10 ಸಾವಿರ ಜನರು ಬಳಸುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ಮಹಾರಾಷ್ಟ್ರದ ಔರಂಗಾಬಾದ್ ನಗರದಲ್ಲಿರುವ ಕ್ಯಾಪ್ಟನ್ ಪರಶುರಾಂ ರಾಮಚಂದ್ರ ಗೋಖಲೆಯವರು. ಅವರ ವೈಯಕ್ತಿಕ ಪರಿಚಯ ನಮಗೆ ಇಲ್ಲ. ಆದರೂ ನಾವು ರೂಪಿಸಿರುವ ಪಾಣಿನಿಯ ಸಾಪ್ಟ್ ವೇರ್ ನಿಂದ ಪ್ರಭಾವಿತರಾಗಿರುವ ಅವರು ಮೊನ್ನೆ ತಾನೇ ಒಂದು ಈ-ಮೇಲ್ ಬರೆದು ಒಂದು ಆಶ್ಚರ್ಯಕರ ಹಾಗೂ ವಿಷಾದಕರ ಸಂಗತಿಯನ್ನು ತಿಳಿಸಿದ್ದಾರೆ. ಅದೇನೆಂದರೆ ಅವರು ವಾಸವಾಗಿರುವ ಔರಂಗಾಬಾದಿಗೆ ಕರ್ನಾಟಕದ ಸ್ವಾಮಿಗಳೊಬ್ಬರು ಬಂದಿರುವರಂತೆ. ವಿಷಯ ತಿಳಿದು ಉತ್ಸಾಹದ ಭರದಲ್ಲಿ ನಾವೇ ಬಂದಿರಬಹುದೇನೋ ಎಂದು ತಪ್ಪಾಗಿ ಗ್ರಹಿಸಿ ಸ್ವಾಮಿಗಳು ಉಳಿದುಕೊಂಡಿರುವ ಶಿಷ್ಯರ ಮನೆಗೆ ಫೋನ್ ಮಾಡಿದರಂತೆ. ಆ ಸ್ವಾಮಿಗಳು ವ್ಯಕ್ತಪಡಿಸಿದ ಪ್ರತಿಕ್ರಿಯೆಯನ್ನು ಅವರ ಮಾತುಗಳಲ್ಲಿಯೇ ಕೇಳಿ:

One Swami.... of ......Math has come to Aurangabad, Maharashtra and is staying with Mr.... whose phone no. is..... When I learnt this, I first thought that your goodself has come. So I immediately contacted him on phone. When I mentioned your name to him and about your work, he replied rudely "I do not know any Dr. Shivamurthy..." He also talked very disrespectfully about you. I am really surprised and hence informing you. Please take any action deemed fit. My phone No. is..... I wish you a happy Diwali. 
-Capt. Parshuram Ramchandra Gokhale.

ಕ್ಯಾಪ್ಟನ್ ಗೋಖಲೆಯವರು ನಮಗೆ ಬರೆದ ಪತ್ರದಲ್ಲಿ ಮಠ ಮತ್ತು ಸ್ವಾಮಿಗಳ ಹೆಸರನ್ನು ಸ್ಪಷ್ಟವಾಗಿ ನಮೂದಿಸಿದ್ದರೂ ಇಲ್ಲಿ ಕೈಬಿಡಲಾಗಿದೆ. ಅಭಿಮಾನದಿಂದ ಬರೆದ ಅವರ ವರದಿಯನ್ನು ಓದಿ ನಮಗೆ ಸಂಸ್ಕೃತದಲ್ಲಿರುವ ಈ ಮುಂದಿನ ನೀತಿವಾಕ್ಯ ನೆನಪಾಯಿತು: ಪಂಡಿತಂ ಪಂಡಿತೋ ದೃಷ್ವಾ ಶ್ವಾನವತ್ ಗುರ್ ಗುರಾಯತೇ (ಒಬ್ಬ ಪಂಡಿತ ಮತ್ತೊಬ್ಬ ಪಂಡಿತನನ್ನು ನೋಡಿ ನಾಯಿಯಂತೆ ಗು ಎನ್ನುತ್ತಾನೆ!). ಈ ಸೂಕ್ತಿಯ ಅರ್ಥ ಹಿಂದೆ ಓದಿದ್ದಕ್ಕಿಂತ ಈಗ ನಮಗೆ ಚೆನ್ನಾಗಿ ಮನದಟ್ಟಾಯಿತೆಂದು ಹೇಳಬಹುದು. ಇನ್ನುಮುಂದೆ ಈ ಸೂಕ್ತಿಯನ್ನು "ಸ್ವಾಮೀ ಚ ಸ್ವಾಮಿನಂ ದೃಷ್ವಾ ಶ್ವಾನವತ್ ಗುರ್ ಗುರಾಯತೇ" ಎಂದು ಸೂಕ್ತವಾಗಿ ಬದಲಾಯಿಸಿ ಹೇಳಬಹುದೆಂದು ತೋರುತ್ತದೆ. ಇಂತಹ ನಿಂದನೆಯ ಮಾತುಗಳು ಕೇಳಿ ಬಂದಾಗ ಏನು ಮಾಡಬೇಕೆಂದು ಬಸವಣ್ಣನವರು ಹೀಗೆ ಹೇಳುತ್ತಾರೆ.

ಕಾಣದ ಠಾವಿನಲ್ಲಿ ಜರಿದರೆಂದರೆ ಕೇಳಿ ಪರಿಣಾಮಿಸಬೇಕು 
ಅದೇನು ಕಾರಣ? ಕೊಳ್ಳದೆ ಕೊಡದೆ ಅವರಿಗೆ ಸಂತೋಷವಹುದಾಗಿ!

ಈ ವಚನದ ತಾತ್ಪರ್ಯ ಇಷ್ಟು: ಯಾರಾದರೂ ಮರೆಯಲ್ಲಿ ನಿಂದಿಸಿದರೆ ಕೋಪಗೊಳ್ಳುವ ಬದಲು ಸಂತೋಷಪಡಬೇಕು. ಏಕೆಂದರೆ ನೀವು ಸಂತೋಷಪಡುವುದು ಯಾವಾಗ? ನಿಮಗೆ ಪ್ರಿಯವಾದ ವಸ್ತುವನ್ನು ಯಾರಾದರೂ ಕೊಟ್ಟಾಗ ಅಥವಾ ನೀವು ಪ್ರೀತಿಸುವ ವ್ಯಕ್ತಿಗೆ ಏನಾದರೂ ಕೊಟ್ಟು ಅವರು ಖುಷಿಪಟ್ಟಾಗ. ನಿಮ್ಮನ್ನು ನಿಂದಿಸುವ ವ್ಯಕ್ತಿಯಿಂದ ನೀವೇನೂ ಪಡೆದಿಲ್ಲ, ನೀವೂ ಅವನಿಗೆ ಏನೂ ಕೊಟ್ಟಿಲ್ಲ. ಹೀಗಿರುವಾಗ ನೀವೇನೂ ಅವನಿಗೆ ಕೊಡದೆ, ಅವನಿಂದ `ನೀವೇನೂ ಪಡೆಯದೆ ಅವನು ನಿಮ್ಮನ್ನು ನಿಂದಿಸುವುದರಿಂದ ಖುಷಿಪಡುವುದಾದರೆ ತಲೆಕೆಡಿಸಿಕೊಳ್ಳಲು ಖುಷಿಪಡಲಿ ಹೋಗುತ್ತೀರಿ ಬಿಡಿ, ಎನ್ನುತ್ತಾರೆ .

ಬಸವಣ್ಣನವರು ಮೇಲೆ ಉಲ್ಲೇಖಿಸಿದ ಈ-ಮೇಲ್ ನಿಂದ ಸ್ಫೂರ್ತಿಯನ್ನು ಪಡೆದು ದೀಪಾವಳಿಯ ಹಬ್ಬದ ಪ್ರಯುಕ್ತ ಬರೆದ ನಮ್ಮ ಕವಿತೆ ಹೀಗಿದೆ:

ಮತ್ಸರದ ಬತ್ತಿ

ಹತ್ತಿಉರಿಯುತಿದೆ ಸುತ್ತಲೂ ಮತ್ತರದ ಸುರುಸುರು ಬತ್ತಿ
ಹಚ್ಚಲಾದೀತೇ ಅದರಿಂದ ಮತ್ತೊಂದು ಹಣತೆಯ ಬತ್ತಿ!
ಹಣತೆ ಹಣತೆಯ ಕೂಡಿದರೆ ಕಂಗೊಳಿಸುವುದು ಜ್ಯೋತಿ
ಹಣತೆ ಬಿರುಸಿನ ಕುಡಿಕೆಯ ಕೂಡಿದರೆ ಉಗುಳುವುದು ಬೆಂಕಿ
ಯಾರ ಬದುಕಿನ ಅಂಗಳದಲ್ಲಿ ಯಾರು ಇಡುವರೋ ಬತ್ತಿ 
ಅದು ಸಿಡಿದಾಗಲೇ ಗೊತ್ತು ಬತ್ತಿ ಇಟ್ಟವನ ಕುಯುಕ್ತಿ! 
ಸುಳಿಯದಿರು ಸತ್ತಂತಿಹ ಪಟಾಕಿಗಳಿದ್ದೆಡೆಯಲ್ಲಿ 
ಸಿಡಿಯುವುದು ಜೋಕೆ ನಿನ್ನ ಕಣ್ಣಾಲಿ!
ಮತ್ತೆಂದೂ ಕಾಣಲಾರೆ ಮುಂದಿನ ದೀಪಾವಳಿ!

ಬೆಳಕು ಜ್ಞಾನದ ಸಂಕೇತ; ಕತ್ತಲು ಅಜ್ಞಾನದ ಸಂಕೇತ. ಶತಮಾನಗಳಿಂದ ಗಿಳಿಪಾಠ ಹೇಳಿದ್ದೇ ಹೇಳಿದ್ದು, ನಮ್ಮ ಅಜ್ಞಾನ ನಿವಾರಣೆಯಾಗಿ ಜ್ಞಾನ ಮೂಡಿದೆಯೇ? ನಮ್ಮ ಬದುಕು ಕತ್ತಲಿಂದ ಬೆಳಕಿನಡೆಗೆ ಸಾಗಿದೆಯೇ? ದೀಪದ ಬುಡದಲ್ಲೇ ಕತ್ತಲು, ಪಟಾಕಿಗಳ ಸದ್ದು ಅಡಗಲಿಲ್ಲ, ನೆರೆಹಾವಳಿಯ ಗೋಳು ತೀರಲಿಲ್ಲ. ದೀಪ ಹಚ್ಚಿದ್ದಕ್ಕಿಂತ ಪಟಾಕಿ ಹೊಡೆದಿದ್ದೇ ಜಾಸ್ತಿ. ಒಂದು ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ ಪಟಾಕಿಗಳಿಗೆ ಮಾಡಿದ ಖರ್ಚು 30 ಕೋಟಿ ರೂ., ಮುಂಬಯಿಯಲ್ಲಿ 60 ಕೋಟಿ ರೂ., ಉತ್ತರಭಾರತದಲ್ಲಿ 3 ಸಾವಿರ ಕೋಟಿ ರೂ. ನಮಗೆ ತಿಳಿದಿರುವ ಮಟ್ಟಿಗೆ ರಾಮಾಯಣ, ಮಹಾಭಾರತ ಇತ್ಯಾದಿ ಪ್ರಾಚೀನ ಗ್ರಂಥಗಳಲ್ಲಿ ದೀಪಾವಳಿಯಂದು ದೀಪಗಳನ್ನು ಹಚ್ಚಿದ ಉಲ್ಲೇಖವಿದೆಯೇ ಹೊರತು ಪಟಾಕಿಗಳನ್ನು ಸಿಡಿಸಿದ ಉಲ್ಲೇಖವಿಲ್ಲ.

ನಮ್ಮ ಮನಸ್ಸನ್ನು ಚುಚ್ಚಿದ್ದು ಮತ್ತೊಂದು ಈ-ಮೇಲ್ ಪತ್ರ, ನೆರೆಹಾವಳಿಯ ಸಂತ್ರಸ್ತರಿಗೆ ತಮ್ಮ ಮಠದಿಂದ ಯಾವ ಸಹಾಯವೂ ಹೋಗದಿರುವುದು ವಿಷಾದಕರ ಸಂಗತಿ ಎಂದು ಆರೋಪಿಸಿ ಓದುಗರೊಬ್ಬರು ಬರೆದಿದ್ದಾರೆ. ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ವರದಿ ಬಂದಿಲ್ಲವೆಂದ ಮಾತ್ರಕ್ಕೆ ಮಠದಿಂದ ಸಹಾಯಮಾಡಿಲ್ಲವೆಂದು ಆರೋಪಿಸುವುದು ಎಷ್ಟರಮಟ್ಟಿಗೆ ಸರಿ? ಒಳ್ಳೆಯ ಕೆಲಸವನ್ನು ಮಾಡುವವರಿಗೆ ಇಂದಲ್ಲ ನಾಳೆ ಕೀರ್ತಿ ಪ್ರಶಂಸೆಗಳು ಬಂದೇ ಬರುತ್ತವೆ. ಆದರೆ ಅವು ನೆರಳಿದ್ದಂತೆ. ಎಷ್ಟೇ ಆಗಲಿ ನೆರಳು ಕತ್ತಲು, ಬೆಳಕಲ್ಲ. ನೆರಳು ನಮ್ಮನ್ನು ಹಿಂಬಾಲಿಸಬೇಕೇ ಹೊರತು ನಾವು ನೆರಳನ್ನು ಹಿಂಬಾಲಿಸಬಾರದು. ನಮ್ಮ ಈ ಬಿಸಿಲು ಬೆಳದಿಂಗಳು ಅಂಕಣ ಕಳೆದ ವರ್ಷ ಆರಂಭವಾಗಿದ್ದೇ "ಕೀರ್ತಿಶನಿಯ ಬೆನ್ನ ಹಿಂದೆ ಬಿದ್ದರೆ" ಎಂಬ ಲೇಖನದಿಂದ. ಹೀಗಿರುವಾಗ ನಾವೇ ಅದರ ಬೆನ್ನ ಹಿಂದೆ ಬಿದ್ದರೆ ಹೇಗೆ? ಮತ್ತು ಹುನಗುಂದ ತಾಲ್ಲೂಕುಗಳಲ್ಲಿರುವ ಡಣಾಕ್ ಶಿರೂರು, ಮನ್ನೇರಿ, ಗೋನಾಳು, ಶಿರಬಡಗಿ, ಇನಾಂಬೂದಿಹಾಳು, ಕಬ್ಬಿನಕುಣಿ, ಹಳೆಪಟ್ಟದಕಲ್ಲು, ಹೊಸಪಟ್ಟದಕಲ್ಲು, ಹಿರೇಮಾಗಿ ಈ ಮೊದಲಾದ ಹಳ್ಳಿಗಳಿಗೆ ನಮ್ಮ ಮಠದಿಂದ ನಿಯುಕ್ತರಾದ ನೂರು ಜನ ಸ್ವಯಂಸೇವಕರು ಹೋಗಿ ಸುಮಾರು ಒಂದು ತಿಂಗಳಿಗೆ ಆಗುವಷ್ಟು ಆಹಾರ ಸಾಮಗ್ರಿಗಳನ್ನು ಮತ್ತು ಬಟ್ಟೆಬರೆಗಳನ್ನು ವಿತರಿಸಿ ಬಂದಿರುತ್ತಾರೆ. ಮುಂಬರುವ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ. ಅದರ ಬದಲು ಮಠದಿಂದ ಅಂದಾಜು ಐದು ಕೋಟಿ ರೂ.ಗಳಿಗೂ ಹೆಚ್ಚಿನ ವೆಚ್ಚದಲ್ಲಿ ಪ್ರವಾಹಪೀಡಿತರಿಗೆ ಮನೆಗಳನ್ನು ಕಟ್ಟಿಸಿಕೊಡಲು ಶಿಷ್ಯರು ಮತ್ತು ಅಭಿಮಾನಿಗಳು ಮುಂದೆ ಬಂದಿದ್ದಾರೆ. ಉಳ್ಳವರು ಇಲ್ಲದವರಿಗೆ ನೆರವಾಗುವುದೇ ಧರ್ಮ, ಮಠದ ಸ್ವಯಂಸೇವಕರು ಹಿಂತಿರುಗುವಾಗ ಮನೆ ನೋಡಾ ಬಡವರು, ಮನ ಘನ ಸಂಪನ್ನರು ಎಂಬ ಬಸವಣ್ಣನವರ ವಚನದ ಅನುಭವವನ್ನು ಪಡೆದು ಬಂದಿದ್ದಾರೆ. ಅವರು ಮೇಲ್ಕಂಡ ಪ್ರವಾಹ ಪೀಡಿತ ಹಳ್ಳಿಗಳಲ್ಲಿ ಆಹಾರಸಾಮಗ್ರಿಗಳನ್ನು ವಿತರಿಸುವಾಗ ಅಲ್ಲಿಯ ಬಡ ರೈತರು ಮಠದ ದಾಸೋಹಕ್ಕೆ ನಾವು ನೆರವಾಗಬೇಕು, ಅಯ್ಯೋ ದುರ್ವಿಧಿಯೇ! ಮಠದಿಂದಲೇ ನಾವು ಪಡೆಯುವಂತಾಯಿತಲ್ಲಾ ಮಠದ ಈ ಋಣವನ್ನು ನಾವು ಹೇಗೆ ತೀರಿಸುವುದು ಎಂದು ಹಲುಬಿದ್ದಾರೆ. ಅಂತಹ ಕಷ್ಟದಲ್ಲೂ ಹಳೆಪಟ್ಟದಕಲ್ಲಿನ ಮಹಿಳೆಯೊಬ್ಬಳು ನಮಗೆ 11 ರೂ. ಪಾದಕಾಣಿಕೆಯನ್ನು ಕಳುಹಿಸಿಕೊಟ್ಟಿದ್ದಾಳೆ.  ನೀವು ಕಷ್ಟದಲ್ಲಿದ್ದೀರಿ, ನಿಮಗೇ ಬೇಕು, ಇಟ್ಟುಕೊಳ್ಳಿ ಎಂದು ನಮ್ಮ ಸ್ವಯಂಸೇವಕರು ಎಷ್ಟೇ ಹೇಳಿದರೂ ಒಪ್ಪದೆ ಒತ್ತಾಯ ಮಾಡಿ ತನ್ನ ಅಲ್ಪಕಾಣಿಕೆಯನ್ನು ತಪ್ಪದೆ ಗುರುಗಳಿಗೆ ಮುಟ್ಟಿಸಬೇಕೆಂದು ಹೇಳಿ ಕಳುಹಿಸಿಕೊಟ್ಟಿದ್ದಾಳೆ. ಶಿಷ್ಯರು ಪ್ರವಾಹ ಪರಿಹಾರ ನಿಧಿಗೆ ವಾಗ್ದಾನ ಮಾಡಿದ 5 ಕೋಟಿ ರೂಗಳ ಮುಂದೆ ಈ 11 ರೂ, ಏನು ಮಹಾ ಅನ್ನಲು ಆದೀತೇ? ಸ್ವಯಂಸೇವಕರು ಆ ಕಾಣಿಕೆಯನ್ನು ನಮ್ಮ ಕೈಗೆ ಕೊಟ್ಟಾಗ ಹೃದಯ ತುಂಬಿಬಂತು. ಭೀಕರಪ್ರವಾಹದಲ್ಲಿ ನೂರಾರು ಜನ-ಜಾನುವಾರಗಳು ಕೊಚ್ಚಿಹೋಗಿರಬಹುದು. ನಿತ್ಯವೂ ದೇವರ ಮನೆಯಲ್ಲಿ ಪೂಜೆಗೊಳ್ಳುತ್ತಿದ್ದ ದೇವರು ಪ್ರವಾಹದಲ್ಲಿ ತೇಲಿ ಹೋಗಿರಬಹುದು. ಆದರೆ ಈ ದೇಶದ ಸಾಮಾನ್ಯ ಜನ ದೇವರು ಮತ್ತು ಮಠಮಂದಿರಗಳ ಮೇಲೆ ಇಟ್ಟಿರುವ ಭಕ್ತಿಯನ್ನು ಎಂತಹ ಪ್ರವಾಹವೂ ಕೊಚ್ಚಿಕೊಂಡು ಹೋಗಲು ಸಾಧ್ಯವಿಲ್ಲವೆಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಪುರಾವೆ ಬೇಕೆ?

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 21.10.2009.