ದರೋಡೆಕೋರರ ಹೃದಯದಲ್ಲೂ ಧಾರ್ಮಿಕ ಶ್ರದ್ಧೆ

  •  
  •  
  •  
  •  
  •    Views  

ಶ್ರೀಮದ್ಭಾಗವತದಲ್ಲಿ ಭಕ್ತಿಯನ್ನು ಕುರಿತು ಒಂದು ಅಪರೂಪದ ಶ್ಲೋಕವಿದೆ. “ಉತ್ಪನ್ನಾ ದ್ರವಿಡೇ ಸಾಹಂ ವೃದ್ಧಿ ಕರ್ನಾಟಕೇ ಗತಾ | ವೃಂದಾವನಂ ಪುನಃ ಪ್ರಾಪ್ಯ ನವೀನೇವ ಸುರೂಪಿಣೀ | ಜಾತಾಹಂ ಯುವತೀ ಸಮ್ಯಕ್... ||” ಭಕ್ತಿಯು ಇಂದಿನ ತಮಿಳುನಾಡಿನಲ್ಲಿ ಹುಟ್ಟಿ, ಕರ್ನಾಟಕದಲ್ಲಿ ಬೆಳೆದು, ವೃಂದಾವನದಲ್ಲಿ ಸುಂದರ ಯುವತಿಯಾಗಿ ರೂಪಗೊಂಡಿತೆಂದು ಇದರ ತಾತ್ಪರ್ಯ. ಕರ್ನಾಟಕಕ್ಕೂ ಯಮುನಾತೀರದಲ್ಲಿರುವ ಬೃಂದಾವನಕ್ಕೂ ಹೀಗೆ ಪ್ರಾಚೀನಕಾಲದಿಂದಲೂ ಭಕ್ತಿಯ ವಿಶೇಷ ಸೆಳೆತವಿದ್ದರೆ ಅಲ್ಲಿರುವ ಚೈತನ್ಯ ಸಂಪ್ರದಾಯದ ಧರ್ಮಗುರುಗಳಾದ ಶ್ರೀವತ್ಸ ಗೋಸ್ವಾಮಿಯವರಿಗೂ ನಮಗೂ ಅನೇಕ ದಶಕಗಳ ಆತ್ಮೀಯ ಗೆಳೆತನದ ಸೆಳೆತ. ರೂಪುಗೊಂಡಿದ್ದು 70ರ ದಶಕದಲ್ಲಿ ಬೆನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ನಾವೀರ್ವರೂ ಓದುತ್ತಿದ್ದಾಗ. ಸಂಸ್ಕೃತವಿಭಾಗದಲ್ಲಿ ನಮ್ಮ ಉನ್ನತ ಅಧ್ಯಯನ ನಡೆದಿದ್ದರೆ ಪಕ್ಕದ ತತ್ವಶಾಸ್ತ್ರ ವಿಭಾಗದಲ್ಲಿ ಅವರ ಅಧ್ಯಯನ ಸಾಗಿತ್ತು. ಆ ಗೆಳೆತನದ ಸೆಳೆತದಿಂದ ಅವರು ವಾರದ ಹಿಂದೆ ಬೃಂದಾವನದಿಂದ ಸಿರಿಗೆರೆಯ ನಮ್ಮ ಶಾಂತಿವನಕ್ಕೆ ಬಂದಿದ್ದರು. ಹಳೆಯ ನೆನಪುಗಳ ಸುರುಳಿ ಬಿಚ್ಚುತ್ತಾ ಹೋಯಿತು. ಭವಭೂತಿಯು ತನ್ನ ಉತ್ತರ ರಾಮಚರಿತ ನಾಟಕದಲ್ಲಿ ಶ್ರೀರಾಮಸೀತೆಯರ ಸಂಮಿಲನದ ಸಂಭಾಷಣೆ ಕುರಿತು ರಾತ್ರಿರೇವ ವರಂಸೀತ್ ಎಂದು ವರ್ಣಿಸುವಂತೆ ಗೋಸ್ವಾಮಿಯವರು ಇಲ್ಲಿಂದ ತೆರಳಿದ ಮೇಲೂ ದೂರವಾಣಿಯಲ್ಲಿ ನಮ್ಮಿರ್ವರ ಸಂಭಾಷಣೆ ಮುಂದುವರಿದಿತ್ತು. ಮಾತಿನ ಮಧ್ಯೆ ಅವರು ನಿರೂಪಿಸಿದ ಘಟನೆಯೊಂದು ನಮ್ಮನ್ನು ತಲ್ಲಣಗೊಳಿಸಿತು.

ಈಗ್ಗೆ ಒಂದು ವರ್ಷದ ಹಿಂದೆ ಅವರು ಜೈಪುರದಿಂದ ಅಲಹಾಬಾದಿನ ತ್ರಿವೇಣಿ ಸಂಗಮಕ್ಕೆ ಪ್ರಯಾಣಿಸುತ್ತಿದ್ದರು. ಮಧ್ಯರಾತ್ರಿ ವೇಳೆ ನಿರ್ಜನ ಪ್ರದೇಶದಲ್ಲಿ ಅವರ ಕಾರು ಚಲಿಸುತ್ತಿತ್ತು. ಗೋಸ್ವಾಮಿಯವರು ಕೋಲ್ಕತ್ತಾದ ತಮ್ಮ ಶಿಷ್ಯರೊಂದಿಗೆ ಮೊಬೈಲಿನಲ್ಲಿ ಮಾತನಾಡುತ್ತಿದ್ದರೆ, ಚಾಲಕ ಮೌನವಾಗಿ ವಾಹನವನ್ನು ಚಲಾಯಿಸುತ್ತಿದ್ದ. ಇದ್ದಕ್ಕಿದ್ದಂತೆಯೇ ಐದಾರು ಜನರಿದ್ದ ದರೋಡೆಕೋರರ ಗುಂಪೊಂದು ಅವರನ್ನು ತಡೆದು ನಿಲ್ಲಿಸಿತು. ಮುಸುಕುಧಾರಿಗಳಾದ ಅವರ ಕೈಯಲ್ಲಿ ಬಂದೂಕುಗಳಿದ್ದವು. ಕಾರನ್ನು ಸುತ್ತುವರಿದು ಮುಂಭಾಗದ ಗಾಜನ್ನು ಒಡೆದು ಪುಡಿಪುಡಿ ಮಾಡಿದರು. ಚಾಲಕನನ್ನು ಮನಬಂದಂತೆ ಥಳಿಸಿದರು. ಕಾರನ್ನು ಹೆದ್ದಾರಿಯ ಪಕ್ಕದ ಕಿರುರಸ್ತೆಗೆ ತಾವೇ ಡ್ರೈವ್ ಮಾಡಿಕೊಂಡು ಹೋದರು. ದರೋಡೆಕೋರರಿಗೆ ನಿರೀಕ್ಷಿಸಿದಷ್ಟು ಹಣವಾಗಲೀ ಬೆಳ್ಳಿಬಂಗಾರವಾಗಲೀ ಸಿಗಲಿಲ್ಲ. ಸಿಕ್ಕದ್ದು ಒಂದು ಲ್ಯಾಪ್ಟಾಪ್, ಸ್ವಲ್ಪ ಹಣ. ಗೋಸ್ವಾಮಿಯವರದು ತುಂಬಾ ಸರಳ ಜೀವನ, ಸಾಧಾರಣ ಉಡುಗೆ, ಸಾದಾ ಕಚ್ಚೆಪಂಚೆ ಮೇಲೊಂದು ಉತ್ತರೀಯ. ಹೊಲಿದ ಉಡುಪನ್ನು ಅವರು ಧರಿಸುವುದಿಲ್ಲ. ನಿರಾಸೆಗೊಂಡ ದರೋಡೆಕೋರರು ಹಣ ಒಡವೆಗಳನ್ನು ಎಲ್ಲಿಟ್ಟಿದ್ದೀರಿ ಹೇಳಿ ಎಂದು ಬಂದೂಕನ್ನು ಎದೆಗೆ ಒಡ್ಡಿ ಹೆದರಿಸಿದರು. ಗೋಸ್ವಾಮಿಯವರು ತಮ್ಮ ಅವಸಾನ ಸಮೀಪಿಸಿತೆಂದು ದೇವರನ್ನು ಧ್ಯಾನಿಸುತ್ತಾ ಮಡದಿ ಮಕ್ಕಳಿರುವ ಚಾಲಕನನ್ನು ಕೊಲ್ಲಬೇಡಿ, ನಿಮಗೆ ಅನುಮಾನವಿದ್ದರೆ ಕಾರನ್ನೇ ತೆಗೆದುಕೊಂಡು ಹೋಗಿ ಎಂದು ದರೋಡೆಕೋರರಿಗೆ ಸಮಾಧಾನಚಿತ್ತದಿಂದ ಹೇಳಿದರು. ದರೋಡೆಕೋರರು ತಮ್ಮ ಕೈಗೆ ಸಿಕ್ಕನ್ನು ದೋಚಿಕೊಂಡು ಹೊರಡುವಾಗ ಇವರನ್ನು ಜೀವಂತ ಬಿಟ್ಟರೆ ಪೋಲೀಸರಿಗೆ ಸುಳಿವು ಸಿಗಬಹುದೆಂದು ಕೊಲ್ಲಲು ಹವಣಿಸಿದರು. ಆದರೆ ಅವರಲ್ಲೊಬ್ಬ ಯಹ್ ಕೋಈ ಸಾಧು ಲಗ್ತೇ ಹೈಂ, ಛೋಡ್ ದೋ (ಇವರು ಯಾರೋ ಸಾಧುಗಳು ಇದ್ದಂತೆ ತೋರುತ್ತದೆ, ಕೊಲ್ಲುವುದು ಬೇಡ, ಬಿಟ್ಟು ಬಿಡು ಎಂದು ಹೇಳಿ ಇಬ್ಬರ ಕೈಕಾಲುಗಳನ್ನೂ ಹೆಡೆಮುರಿ ಕಟ್ಟಿ ಪಕ್ಕದ ಹೊಲಕ್ಕೆ ತಳ್ಳಿ ಪಲಾಯನ ಮಾಡಿದರು. ಈ ದುರ್ಘಟನೆಯ ಸಂದರ್ಭದಲ್ಲಿ ಗೋಸ್ವಾಮಿಯವರ ಕೈಯಲ್ಲಿದ್ದ ಮೊಬೈಲ್ ಫೋನ್ ಕಾರೊಳಗೆ ಬಿದ್ದುದನ್ನು ದರೋಡೆಕೋರರು ಗಮನಿಸಲಿಲ್ಲ. ಸಂಭಾಷಣೆಯಲ್ಲಿ ನಿರತರಾಗಿದ್ದ ದೂರದ ಕೋಲ್ಕತ್ತಾದ ಶಿಷ್ಯರು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು ಪೋಲೀಸರ ಗಮನಕ್ಕೆ ತಂದರು. ದೊಡ್ಡ ದೊಡ್ಡ ಪೋಲೀಸು ಅಧಿಕಾರಿಗಳು ಖುದ್ದಾಗಿ ಕಾರ್ಯ ಪ್ರವೃತ್ತರಾದರೂ ಏನೂ ಪ್ರಯೋಜನವಾಗಲಿಲ್ಲ. ಗೋಸ್ವಾಮಿಯವರು ಹಗ್ಗಸಡಿಲಿಸಿಕೊಂಡು ಮೇಲೇಳುವ ಹೊತ್ತಿಗೆ ಮೂಡಣದಲ್ಲಿ ಅರುಣೋದಯವಾಗಿ ಪೋಲೀಸರ ದಂಡು ಹಾಜರಾಗಿತ್ತು!

ಗೋಸ್ವಾಮಿಯವರ ಈ ಸ್ವಾನುಭವ ಕಥನ ಸುಮಾರು 15 ವರ್ಷಗಳ ಹಿಂದೆ ನಮ್ಮ ಜೀವನದಲ್ಲಿ ನಡೆದ ಘಟನೆಯನ್ನು ನೆನಪಿಗೆ ತಂದಿತು. ಗುಲ್ಬರ್ಗಾ ಜಿಲ್ಲೆಯ ಮಾದನ ಹಿಪ್ಪರಗಿಯಲ್ಲಿರುವ ಮಠದ ಕಾರ್ಯಕ್ರಮದಲ್ಲಿ ಹುಕ್ಕೇರಿ ಮಠದ ಲಿಂಗೈಕ್ಯ ಶ್ರೀಶಿವಲಿಂಗಾನಂದ ಸ್ವಾಮಿಗಳವರ ಒತ್ತಾಸೆ ಮೇರೆಗೆ ಭಾಗವಹಿಸಿದ್ದೆವು. ಕಾರ್ಯಕ್ರಮದ ನಂತರ ಸ್ನಾನ-ಪೂಜೆ-ಪ್ರಸಾದ ಪೂರೈಸಿಕೊಂಡು ಹೊರಟಾಗ ತಡರಾತ್ರಿ. ಯಾದಗಿರಿ ಜಿಲ್ಲೆ ಶಹಪುರ-ಜೇವರ್ಗಿ ಮಧ್ಯೆ ಪಯಣಿಸುವಾಗ ಮಧ್ಯರಾತ್ರಿ 2 ಗಂಟೆ. ನಮ್ಮ ಹಿಂದೆ ಬರುತ್ತಿದ್ದ ಕಾರಿನ ಚಾಲಕ ತುಂಬಾ ಹಾರನ್ ಮಾಡುತ್ತಿದ್ದ. ಏನೋ ತುರ್ತು ಇರಬೇಕೆಂದು ತೋರುತ್ತದೆ ದಾರಿಬಿಡು ಎಂದು ನಮ್ಮ ಚಾಲಕನಿಗೆ ಸೂಚನೆ. ಕ್ಷಣಾರ್ಧದಲ್ಲಿ ನಮ್ಮ ಕಾರನ್ನು ದಾಟಿ ಮುಂದೆ ಸಾಗಿದ್ದು ಒಂದು ಅಂಬಾಸಿಡರ್ ಕಾರು. ಅದರಲ್ಲಿದ್ದವರು ಕಾರಿನ ಕಿಟಕಿಗಳಿಂದ ಕೈ ಹೊರಗೆ ಹಾಕಿ ನಮ್ಮ ಕಾರನ್ನು ನಿಲ್ಲಿಸಬೇಕೆಂದು ಸೂಚನೆ ನೀಡತೊಡಗಿದರು. ಯಾರೋ ದಾವಣಗೆರೆ ಕಡೆಯ ಶಿಷ್ಯರು ಇರಬೇಕೆಂದು ನಮ್ಮ ಚಾಲಕನ ಊಹೆ. ನಮಗೆ ಅನುಮಾನ ಬಂದು `ಇದು ಅಪರಾತ್ರಿ, ಕಾರು ನಿಲ್ಲಿಸುವುದು ಸರಿಯಲ್ಲ. ಆ ಕಾರನ್ನು ಓವರ್ಟೇಕ್ ಮಾಡು ಎಂದು ಸೂಚಿಸಿದಂತೆ ನಮ್ಮ ಚಾಲಕ ಮಾಡಿದ. ನಮ್ಮ ಕಾರು ಮುಂದೆ ಸಾಗುತ್ತಿದ್ದಂತೆ ಕಾರಿನಲ್ಲಿದ್ದವರು ಜೋರಾಗಿ ಕಿರುಚಿಕೊಳ್ಳಲಾರಂಭಿಸಿದರು. ಶಿಷ್ಯರಾರೂ ಹಾಗೆ ಕರ್ಕಶವಾಗಿ ಬೊಬ್ಬೆ ಇಡಲು ಸಾಧ್ಯವೇ ಇಲ್ಲ! ನಮ್ಮ ಅನುಮಾನ ಖಚಿತವಾಯಿತು. ಕಾರು ಜೇವರ್ಗಿ ತಲುಪಿದಾಗ ಪೋಲೀಸರಿಗೆ ದೂರು ಕೊಡಬೇಕೆಂದು ನಮ್ಮ ಚಾಲಕನ ಅನಿಸಿಕೆ. ನಮ್ಮ ಆಲೋಚನೆ ಅದಕ್ಕಿಂತ ಭಿನ್ನವಾಗಿತ್ತು. ದೂರು ಕೊಡಲು ನಿಲ್ಲಿಸಿದರೆ ದರೋಡೆಕೋರರು ಮುಂದೆ ಹೋಗಿ ಆಯಕಟ್ಟಿನ ಜಾಗದಲ್ಲಿ ನಮಗಾಗಿ ಹೊಂಚುಹಾಕುವುದು ಖಚಿತ ಎಂಬುದು ನಮ್ಮ ತರ್ಕ. ಆದಕಾರಣ ಸ್ವಲ್ಪವೂ ತಡಮಾಡದೆ ಕಾರನ್ನು ಮತ್ತಷ್ಟೂ ವೇಗವಾಗಿ ಓಡಿಸಲು ಚಾಲಕನಿಗೆ ಆದೇಶ. ಅದರಂತೆ ಅತಿ ವೇಗವಾಗಿ ಚಲಿಸುವಾಗ ಕಾರಿನ ಶಾಕ್ ಅಬ್ಬಾರ್ಬರ್ ತುಂಡಾಯಿತು. ಆದರೂ ನಿಲ್ಲಿಸದೆ ಮುಂದೆ ಸಾಗಿ ಹೊಸಪೇಟೆ ಸಮೀಪ ಗಂಗಾವತಿ ತಲುಪಿದಾಗ ಹರ ಕರುಣೋದಯವಾದಂತೆ ಅರುಣೋದಯವಾಗಿ ಮೂಡಣ ದಿಗಂತದಲ್ಲಿ ಬೆಳಕು ಮೂಡಿತ್ತು!

ಮಾರನೆಯ ದಿನವೇ ಪತ್ರಿಕೆಗಳಲ್ಲಿ ಬಂದ ಸುದ್ದಿ ಅದೇ ರಸ್ತೆಯಲ್ಲಿ ದರೋಡೆಕೋರರು ಸರಕಾರಿ ಬಸ್ಸನ್ನು ತಡೆದು, ಗಾಜನ್ನು ಪುಡಿ ಪುಡಿ ಮಾಡಿ, ಚಾಲಕನನ್ನು ಥಳಿಸಿ, ಪ್ರಯಾಣಿಕರನ್ನು ಬೆದರಿಸಿ ನಗ ನಾಣ್ಯಗಳನ್ನು ದೋಚಿದ್ದರು. ನಮ್ಮ ಪ್ರಯಾಣದ ವಿವರಗಳನ್ನು ಪೋಲೀಸರು ಪಡೆದರು. ಮಾರನೆಯ ದಿನ ಆಂಧ್ರದ ಗಡಿಯಲ್ಲಿದ್ದ ಮತ್ತೊಂದು ಕಾರ್ಯಕ್ರಮ ಮುಗಿಸಿಕೊಂಡು ಪೋಲೀಸರ ಬೆಂಗಾವಲಿನಲ್ಲಿ ಸಿರಿಗೆರೆಗೆ ಮರುಪ್ರಯಾಣ.

ಮೇಲಿನ ಘಟನೆ ಗೆಳೆಯರಾದ ಶ್ರೀವತ್ಸಗೋಸ್ವಾಮಿಯವರ ಜೀವನದಲ್ಲಿ ನಡೆದ ಘಟನೆಗಿಂತ ದೊಡ್ಡದಲ್ಲ. ಏನಾಗಬಹುದಿತ್ತು ಎಂಬುದರ ಒಂದು ಸುಳಿವು ಮಾತ್ರ. ಇಂತಹ ಸಂದರ್ಭಗಳಲ್ಲಿ ನಾವೆಲ್ಲರೂ ಆರಾಧಿಸುವ ಭಗವಂತನ ಪಾತ್ರವೇನು? ಹೊಸಪೇಟೆಯ ವೈಕುಂಠಕ್ಕೆ ಹಿಂದಿರುಗಿ ವಿಶ್ರಮಿಸಿಕೊಂಡು ಮೆಲುಕುಹಾಕಿದಾಗ ಈ ಕೆಳಗಿನ ಸಂಸ್ಕೃತ ಸುಭಾಷಿತ ನೆನಪಾಯಿತು:

ನ ದೇವಾ ದಂಡಮಾದಾಯ ರಕ್ಷಂತಿ ಪಶುಪಾಲವತ್|
ಯಂತು ರಕ್ಷಿತುಮಿಚ್ಛಂತಿ ಸುಬುದ್ಧ್ಯಾ ಯೋಜಯಂತಿ ತಮ್ ||

ದನಗಾಹಿಯು ಕೈಯಲ್ಲಿ ಕೋಲನ್ನು ಹಿಡಿದು ದನಕರುಗಳನ್ನು ಕಾಯುವಂತೆ ದೇವರು ಸ್ವತಃ ಬಂದು ತನ್ನ ಭಕ್ತರನ್ನು ರಕ್ಷಿಸುವುದಿಲ್ಲ, ಬದಲಾಗಿ ತಾನು ರಕ್ಷಣೆ ನೀಡಬೇಕಾದವರಿಗೆ ಸರಿಯಾದ ಬುದ್ದಿಯನ್ನು ಕೊಟ್ಟು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವ ಸಾಮರ್ಥ್ಯವನ್ನು ಕರುಣಿಸುತ್ತಾನೆ. ಈ ಸುಭಾಷಿತ ಎಷ್ಟೊಂದು ಅರ್ಥಗರ್ಭಿತ ಎಂದು ತಿಳಿಯುವುದು ಇಂತಹ ವಿಷಮ ಸನ್ನಿವೇಶಗಳನ್ನು ಎದುರಿಸಿದಾಗ ಮಾತ್ರ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 7.8.2014