ಕಾಂಗರೂಗಳ ನಾಡಿನಲ್ಲಿ!

  •  
  •  
  •  
  •  
  •    Views  

"Ladies and Gentlemen! This is your captain speaking. In about half an hour from now, we will be landing at Sydney airport...” ಎಂದು ಪೈಲೆಟ್ ಸೂಚನೆ ನೀಡಿದಾಗ ಮಂಪರು ನಿದ್ರೆಯಿಂದ ಎಚ್ಚರವಾಯಿತು. ಹಿಂದಿನ ರಾತ್ರಿ ಬೆಂಗಳೂರಿನಿಂದ ಹೊರಟ ಸುದೀರ್ಘ ಪ್ರಯಾಣದಲ್ಲಿ ನಿದ್ರೆ ಸರಿಯಾಗಿ ಆಗಿರಲಿಲ್ಲ. ಗಗನಸಖಿ ಹತ್ತಿರ ಬಂದು ನೋಡಿ ಸೀಟ್ ಬೆಲ್ಟ್ ಹಾಕಿಕೊಂಡಿರುವುದನ್ನು ಖಚಿತಪಡಿಸಿಕೊಂಡಳು. “May I open the Windows?” ಎಂದು ಸೌಜನ್ಯದಿಂದ ಕೇಳಿ ನಮ್ಮ ಪಕ್ಕದಲ್ಲಿದ್ದ ಕಿಟಕಿಯ ಮುಚ್ಚಳವನ್ನು ಮೇಲಕ್ಕೆ ಸರಿಸಿದಳು. ಕೆಳಗೆ ಇಣುಕಿ ನೋಡಿದರೆ ದಿಗ್ ದಿಗಂತಗಳಿಗೆ ವ್ಯಾಪಿಸಿದ ನಿಶ್ಚಲ, ನಿಸ್ತರಂಗ ಫೆಸಿಫಿಕ್ ಮಹಾಸಾಗರ! ಮೇಲೆ ನೋಡಿದರೆ ವಿಶಾಲವಾದ ನೀಲ ಗಗನ! ಮೋಡಗಳು ಇರಲಿಲ್ಲ. ಭೂಮಿಯ ಗುರುತು ಎಳ್ಳಷ್ಟೂ ಇಲ್ಲ. ಸೀಟಿನ ಎದುರಿಗಿದ್ದ ಕಿರುತೆರೆಯು (TV) ವಿಮಾನ 40 ಸಾವಿರ ಅಡಿ ಎತ್ತರದಲ್ಲಿ ಗಂಟೆಗೆ 500 ಮೈಲಿಗೂ ಹೆಚ್ಚು ವೇಗದಲ್ಲಿ ಹಾರುತ್ತಿದೆಯೆಂದು ತೋರಿಸುತ್ತಿತ್ತು, ಎತ್ತರವೇನೋ ಸರಿ ಆದರೆ ನಿಶ್ಚಲವಾಗಿ ತೋರುತ್ತಿದ್ದ ವಿಮಾನದ ವೇಗವನ್ನು ನಂಬುವುದು ಕಷ್ಟವಾಯಿತು. ಸಮುದ್ರ ಮತ್ತು ಆಕಾಶ ಒಂದಾದ ಆ ಆಹ್ಲಾದಕರ ದೃಶ್ಯವನ್ನು ನೋಡುತ್ತಾ ವಿಮಾನ ಮೈಮರೆತು ಮುಂದೆ ಸಾಗದೆ ಆಕಾಶದಲ್ಲಿ ಹಾಗೆಯೇ ನಿಂತಿದೆಯೇನೋ ಎನ್ನುವಂತೆ ಭಾಸವಾಗುತ್ತಿತ್ತು. ಶಿವಮೊಗ್ಗ ಸುಬ್ಬಣ್ಣ ತಮ್ಮ ಕಂಚಿನ ಕಂಠದಿಂದ ಹಾಡುವ ರಾಷ್ಟ್ರಕವಿ ಕುವೆಂಪುರವರ ಈ ಕವಿತೆ ನೆನಪಾಯಿತು:

ಆನಂದಮಯ ಈ ಜಗ ಹೃದಯ 
ಏತಕೆ ಭಯ ಮಾಣೋ 
ಸೂರ್ಯೋದಯ ಚಂದ್ರೋದಯ 
ದೇವರ ದಯೆ ಕಾಣೋ... 
ರವಿವದನವೇ ಶಿವಸದನವೊ 
ಬರೀ ಕಣ್ಣದು ಮಣ್ಣೋ... 
ಶಿವ ಕಾಣದೆ ಕವಿ ಕುರುಡನೋ
ಶಿವ ಕಾವ್ಯದ ಕಣ್ಣೋ!

ಈ ಸೃಷ್ಟಿಯ ಸೊಬಗನ್ನು ಸಶಕ್ತ ಶಬ್ಧಗಳಲ್ಲಿ ಸೆರೆಹಿಡಿದಿರುವ ಕಾವ್ಯರ್ಷಿ ಕುವೆಂಪುರವರ “ಶಿವ ಕಾವ್ಯದ ಕಣ್ಣು” ಕೋಲ್ಮಿಂಚಿನೋಪಾದಿಯಲ್ಲಿ ನಮ್ಮ ಸ್ವಾನುಭವಕ್ಕೆ ಬಂದಂತಾಯಿತು. ವಿಮಾನದಲ್ಲಿ ಕುಳಿತು ಸಾಗರ ಮತ್ತು ಆಗಸದ ಆ ಅಪೂರ್ವ ಮಿಲನದ ಸೊಬಗನ್ನು ಸವಿಯುತ್ತಾ ಹೋದಂತೆ ಮೈಮರವೆಯುಂಟಾಯಿತು. ಸಮಾರಂಭಗಳಲ್ಲಿ ಈ ಕವಿತೆಯನ್ನು ಶಿವಮೊಗ್ಗ ಸುಬ್ಬಣ್ಣ ಭಾವಪರವಶರಾಗಿ ಹಾಡುವಾಗ ಕಾಲಲ್ಲಿ ಚಪ್ಪಲಿಯನ್ನು ಧರಿಸಿರುವುದಿಲ್ಲವೆಂಬ ಸಂಗತಿ ಅದೆಷ್ಟು ಜನ ಶ್ರೋತೃಗಳಿಗೆ ಗೊತ್ತಿದೆಯೋ ಇಲ್ಲವೋ! ಉದ್ಘಾಟಕರು ಕೆಲವರು ದೀಪವನ್ನು ಹಚ್ಚುವಾಗ ಪಾದರಕ್ಷೆಗಳನ್ನು ಬಿಟ್ಟು ಪವಿತ್ರ ಭಾವನೆಯಿಂದ ಬೆಳಗಿಸುವಂತೆ ಇರುತ್ತದೆ ಶಿವಮೊಗ್ಗ ಸುಬ್ಬಣ್ಣನವರ ಭಾವಪೂರ್ಣ ಗಾಯನ !

ಸಿಡ್ನಿ ವಿಮಾನ ನಿಲ್ದಾಣದ ರನ್‌ವೇ ಸಮುದ್ರ ತೀರದಲ್ಲಿದೆ. ಅದು ಸಮೀಪಿಸುತ್ತಿದ್ದಂತೆ ವಿಮಾನವು ಸಮುದ್ರದಲ್ಲಿ ಈಜಲು ಇಳಿಯುತ್ತಿದೆಯೇನೋ ಎನ್ನುವಂತೆ ನೀರಿಗೆ ಹತ್ತಿರ ಹತ್ತಿರವಾಗತೊಡಗಿತು. ಸಮುದ್ರದ ಮೇಲೆಯೇ ಇಳಿದರೆ ಏನು ಗತಿ ಎಂಬ ತಣ್ಣನೆಯ ನಡುಕ ಅಳ್ಳೆದೆಯ ಪ್ರಯಾಣಿಕರಿಗೆ ಉಂಟಾದರೆ ಆಶ್ಚರ್ಯವೇನೂ ಇಲ್ಲ. ಪ್ರಯಾಣದ ವೇಳೆ ವಿಮಾನದ ಮುಂಭಾಗದಲ್ಲಿ ಕಾಕ್‌ಪಿಟ್‌ಲ್ಲಿರುವ ಪೈಲೆಟ್ ಯಾರ ಕಣ್ಣಿಗೂ ಕಾಣಿಸುವುದಿಲ್ಲ.  ಹೃದಯದಲ್ಲಿ ಸುಪ್ತವಾಗಿರುವ ದೈವೀಚೇತನದಂತೆ! ಅವನು ಅಗಾಗ್ಗೆ ಕೊಡುವ ಹಲವು ಎಚ್ಚರಿಕೆಯ ಸೂಚನೆಗಳನ್ನು ಮತ್ತು ಮಾಹಿತಿಯನ್ನು ಅನೇಕರು ಸರಿಯಾಗಿ ಕೇಳಿಸಿಕೊಳ್ಳುವುದಿಲ್ಲ. ಎಲ್ಲರ ಜೀವ ಅವನ ಕೈಯಲ್ಲಿರುತ್ತದೆ. ತಲುಪಬೇಕಾದ ಸ್ಥಳವನ್ನು ಸುರಕ್ಷಿತವಾಗಿ ಮುಟ್ಟಿಸಿದ ಮೇಲೆ ಆತನಿಗೆ ಯಾರೂ ಧನ್ಯವಾದಗಳನ್ನೂ ಹೇಳುವುದಿಲ್ಲ. ಅವನೂ ಅದನ್ನು ನಿರೀಕ್ಷಿಸುವುದಿಲ್ಲ. “Thank you for flying with ...Airlines. Hope, you enjoyed the flight and will give us another opportunity to serve you in future” ಎಂದು ಹೇಳಿ ಯಾವಾಗ ಎಲ್ಲಿ ಇಳಿದು ಹೋಗುತ್ತಾನೆ ಗೊತ್ತಾಗುವುದಿಲ್ಲ. ಇತ್ತೀಚಿನ ದಿನಮಾನಗಳಲ್ಲಿ ಉಗ್ರಗಾಮಿಗಳ ಭಯದಿಂದಲೋ ಏನೋ ಅಂತಾರಾಷ್ಟ್ರೀಯ ವಿಮಾನ ಯಾನಗಳಲ್ಲಿ ಯಾರೂ ಕಾಕ್‌ಪಿಟ್ ಒಳಗೆ ಹೋಗದಂತೆ ಬಾಗಿಲನ್ನು ಲಾಕ್ ಮಾಡಿರುತ್ತಾರೆ. ವಿಮಾನ ಭೂಸ್ಪರ್ಶ ಮಾಡುತ್ತಿದ್ದಂತೆಯೇ ಅನೇಕರ ಜೇಬಿನಲ್ಲಿರುವ ಮೊಬೈಲ್ ಫೋನುಗಳು ರಿಂಗಣಿಸಲು ಆರಂಭಿಸುತ್ತವೆ. ಎಲ್ಲರಿಗೂ ಇಳಿಯಲು ಅವಸರ, ಚಡಪಡಿಕೆ. ಗಗನಸಖಿ ವಿಮಾನದ ಬಾಗಿಲನ್ನು ತೆಗೆಯುವ ಮೊದಲೇ ಪ್ರಯಾಣಿಕರು ಒಲಂಪಿಕ್ ಕ್ರೀಡಾಪಟುಗಳಂತೆ ವಿಮಾನದಿಂದ ಹೊರಗೆ ಜಿಗಿಯಲು ಸಾಲುಗಟ್ಟಿ ತುದಿಗಾಲ ಮೇಲೆ ನಿಂತಿರುತ್ತಾರೆ.

ವಿಮಾನವು ಸಿಡ್ನಿಯಲ್ಲಿ ಇಳಿಯುತ್ತಿದ್ದಂತೆ ನಮ್ಮ ಮನಸ್ಸಿನಲ್ಲಿ ಮಡುಗಟ್ಟಿದ್ದ ಹಳೆಯ ನೆನಪುಗಳು ಗರಿಗೆದರಿ ಮೆಲ್ಬೋರ್ನ್ ನಗರದತ್ತ ಹಾರತೊಡಗಿದವು. ಆಸ್ಟ್ರೇಲಿಯಾ ದೇಶಕ್ಕೆ ನಾವು ಮೊಟ್ಟಮೊದಲು ಕಾಲಿಟ್ಟದ್ದು 16 ವರ್ಷಗಳ ಹಿಂದೆ ಅಂದರೆ 1994ರಲ್ಲಿ. ಮೆಲ್ಬೋರ್ನ್ ವಿಶ್ವವಿದ್ಯಾನಿಲಯದಲ್ಲಿ 9ನೆಯ ವಿಶ್ವಸಂಸ್ಕೃತ ಸಮ್ಮೇಳನ ನಡೆದಾಗ. ಆಗ ಗಣಕಯಂತ್ರ ಈಗಿನಂತೆ ಗೃಹಬಳಕೆಯ ವಸ್ತುವಾಗಿರಲಿಲ್ಲ. Windows ಅಂತೂ ಇರಲೇ ಇಲ್ಲ. ಆಗ ಇದ್ದುದು ಕೇವಲ DOS. ಅದರಲ್ಲಿಯೇ dBase ಮತ್ತು Clipper ಪ್ರೋಗ್ರಾಂಗಳನ್ನು ಬಳಸಿಕೊಂಡು ಪಾಣಿನಿಯ ಸೂತ್ರಗಳನ್ನು ಆಧರಿಸಿ ಸಮ್ಮೇಳನದಲ್ಲಿ ಪ್ರಸ್ತುತಪಡಿಸಿದ ನಮ್ಮ “ಗಣಕಾಷ್ಟಾಧ್ಯಾಯಿ” ತಂತ್ರಾಂಶ (www.taralabalu.org) ವಿದ್ವಾಂಸರನ್ನು ಅಚ್ಚರಿಗೊಳಿಸಿತ್ತು. ಸಂಸ್ಕೃತ ವ್ಯಾಕರಣವನ್ನು ಬೋಧಿಸುವ ಪಾಣಿನಿಯ ಸೂತ್ರಗಳು ಆಧುನಿಕ ಸಾಫ್ಟ್ವೇರ್ ಎಂಜಿನಿಯರುಗಳು ಬರೆಯುವ program code ಇದ್ದಂತೆ ಎನ್ನುವ ನಮ್ಮ ಅಂದಿನ ವಾದಕ್ಕೆ ಈಗ ವಿಜ್ಞಾನ ಮತ್ತು ವಿದ್ವತ್ಪ್ರಪಂಚದಲ್ಲಿ ಮನ್ನಣೆ ದೊರೆತಿದೆ.

ಸಿಡ್ನಿ Immigration Counter ನಲ್ಲಿ ಪಾಸ್ಪೋರ್ಟ್ ಮತ್ತು ವೀಸಾ ತಪಾಸಣೆ ಮುಗಿದು ಹೊರಬರುತ್ತಿದ್ದಂತೆಯೇ ಓಂಕಾರಸ್ವಾಮಿ ಗೊಪ್ಪೇನಿ, ಮತ್ತು ತುಮಕೂರಿನ ಸುರೇಶ್ ನಮ್ಮನ್ನು ಶ್ರದ್ಧಾಭಕ್ತಿಯಿಂದ ಬರಮಾಡಿಕೊಂಡರು. ಸುರೇಶ್ರವರ ಕೈಯಲ್ಲಿ ಕರ್ಪೂರದ ಗೊಂಬೆಯಂತಿದ್ದ ಎರಡು ವರ್ಷದ ಅವರ ಮಗಳು ಶಿವಾಲೀ ತನ್ನ ಪುಟ್ಟ ಕೈಗಳನ್ನು ಜೋಡಿಸಿ ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದಳು. ಕಳೆದ 30 ವರ್ಷಗಳಿಂದ ಸಿಡ್ನಿಯಲ್ಲಿ ನೆಲೆಸಿರುವ ಓಂಕಾರಸ್ವಾಮಿಯವರ ಹೆಸರನ್ನು ಈ ದೇಶದಲ್ಲಿ ಕೇಳದ ಕನ್ನಡಿಗರಿಲ್ಲ. ಆಸ್ಟ್ರೇಲಿಯಾಕ್ಕೆ ಬರುವ ಕನ್ನಡ ಸಾಹಿತಿಗಳು ಮತ್ತು ಕಲಾವಿದರೆಲ್ಲರಿಗೂ ಅವರದು ಚಿರಪರಿಚಿತ ಮುಖ. ಉಭಯ ಕುಶಲೋಪರಿಯ ನಂತರ ಕಾರಿನಲ್ಲಿ ಕುಳಿತು ಮನೆಯತ್ತ ಪಯಣಿಸುವಾಗ ನಮ್ಮ ಸಂಭಾಷಣೆ ಸಹಜವಾಗಿ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆಯತ್ತ ತಿರುಗಿತು. ಆಸ್ಟ್ರೇಲಿಯಾ ಮತ್ತು ಪಕ್ಕದ ದೇಶವಾದ ನ್ಯೂಜಿಲ್ಯಾಂಡ್‌ನಲ್ಲಿ ವರ್ಣಭೇದ (racial descrimination) ಇದೆಯೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಭಾರತದ ಮಾಧ್ಯಮಗಳು ಇಲ್ಲಿ ನಡೆದ ಘಟನೆಗಳನ್ನು ಭೂತಾಕಾರವಾಗಿ ಬಿಂಬಿಸಿ sensational news ಮಾಡಿವೆ ಎಂಬುದು ಹತ್ತಾರು ವರ್ಷಗಳಿಂದ ಇಲ್ಲಿ ನೆಲೆಸಿರುವ ಭಾರತೀಯರ ಅಭಿಪ್ರಾಯ; ಇದರಿಂದ ಆಸ್ಟ್ರೇಲಿಯಾದ ತಮ್ಮ ಸ್ನೇಹಿತರ ಮುಂದೆ ತಲೆತಗ್ಗಿಸುವಂತಾಗಿದೆ ಎನ್ನುತ್ತಾರೆ. ನಡೆದ ಘಟನೆಗಳಲ್ಲಿ ಶೇಕಡ 15 ರಷ್ಟು ವರ್ಣದ್ವೇಷದಿಂದ ಕೂಡಿದ್ದರೆ ಉಳಿದ 85 ರಷ್ಟು ಘಟನೆಗಳು ಕಳ್ಳತನ, ಜಗಳ, ಅನಾಗರಿಕ ವರ್ತನೆ ಮತ್ತು ವೈಯಕ್ತಿಕ ದ್ವೇಷಗಳಿಂದ ನಡೆದಿವೆಯೆಂದು ಇಲ್ಲಿಯ ಭಾರತೀಯ ರಾಯಭಾರಿ ಕಛೇರಿಯೇ ಭಾರತ ಸರಕಾರಕ್ಕೆ ವರದಿ ಮಾಡಿದೆ. ನಮಗೆ ಇಲ್ಲಿ ತಿಳಿದುಬಂದ ಕೆಲವೊಂದನ್ನು ಉದಾಹರಿಸಬಹುದು:

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಬರುವವರನ್ನು ಮೂರು ವರ್ಗವಾಗಿ ವಿಂಗಡಿಸಬಹುದು: 1.ಉನ್ನತ ವ್ಯಾಸಂಗಕ್ಕೆಂದು ಓದಲು ಬರುವವರು 2.ಹೆಚ್ಚಿನ ಸಂಪಾದನೆಗೆಂದು ಕೆಲಸ ಮಾಡಲು ಬರುವವರು ಮತ್ತು 3.ಕೆಲಸ ಮಾಡುವವರ ಜೊತೆಯಲ್ಲಿ ಬರುವ ಅವರ ಕುಟುಂಬವರ್ಗದವರು/ಸಂಬಂಧಿಕರು. ಭಾರತದಿಂದ ಆಸ್ಟ್ರೇಲಿಯಾಕ್ಕೆ 80ರ ದಶಕದಿಂದಲೂ ಬಂದವರಿದ್ದಾರೆ. ಆರಂಭದಲ್ಲಿ ಓದಲೆಂದು ಬಂದವರು ಕಡಿಮೆ. ಉದ್ಯೋಗ ಅರಸಿ ಬಂದವರೇ ಜಾಸ್ತಿ. ಅವರೆಲ್ಲರೂ ಭಾರತದಲ್ಲಿಯೇ ವೈದ್ಯಕೀಯ, ಇಂಜಿನಿಯರಿಂಗ್ ಇತ್ಯಾದಿ ಮೇಲ್ಮಟ್ಟದ ಶಿಕ್ಷಣ ಹೊಂದಿದ್ದು ಇಲ್ಲಿ ಒಳ್ಳೆಯ ಸ್ಥಾನಮಾನಗಳನ್ನು ಪಡೆದವರಾಗಿದ್ದಾರೆ. ಆಗಿನ ದಿನಮಾನಗಳಲ್ಲಿ ಭಾರತದಿಂದ ಹೊಟ್ಟೆಪಾಡಿಗಾಗಿ ಕೆಳದರ್ಜೆಯ ಕೆಲಸಗಳನ್ನು ಮಾಡಲು ಬಂದವರು ಇಲ್ಲವೇ ಇಲ್ಲ ಎಂದರೂ ತಪ್ಪಲ್ಲ. ಇತ್ತೀಚೆಗೆ ಇಲ್ಲಿಗೆ ಓದಲು ಬಂದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಭಾರತದಿಂದ ಬಂದವರೇ ಜಾಸ್ತಿ. 2004 ರಿಂದ ಇಲ್ಲಿಯವರೆಗೆ ಬಂದ ಭಾರತೀಯ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ ಒಂದು ಲಕ್ಷಕ್ಕೂ ಹೆಚ್ಚು. ಕಳೆದ ಒಂದು ವರ್ಷದಿಂದ ಈ ಘಟನೆಗಳ ನಂತರ ಭಾರತ ಮತ್ತಿತರ ದೇಶಗಳಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಉತ್ತರ ಭಾರತದಿಂದ ಇಲ್ಲಿಗೆ Hair Dressing, Cookery ಇತ್ಯಾದಿ ವೃತ್ತಿ ತರಬೇತಿಗೆಂದು ಬಂದ ವಿದ್ಯಾರ್ಥಿಗಳು ಆಸ್ಟ್ರೇಲಿಯಾದ ಪ್ರಮುಖ ನಗರಗಳಾದ ಸಿಡ್ನಿ, ಮೆಲ್ಬೋರ್ನ್, ಬ್ರಿಸ್ಬೇನ್, ಅಡಿಲೇಡ್ ಮತ್ತು ಪರ್ತ್ ಗಳಲ್ಲಿ ಇದ್ದಾರೆ.

ಹಿಂದಿನ ವರ್ಷಗಳಲ್ಲಿ ಓದಲು ಬಂದ ವಿದ್ಯಾರ್ಥಿಗಳಿಗೆ ಇಲ್ಲಿ ಖಾಯಂ ನಿವಾಸಿಗಳಾಗಿರಲು ತಕ್ಷಣವೇ ವೀಸಾ ಸಿಕ್ಕುತ್ತಿರಲಿಲ್ಲ, ವಾಪಾಸ್ ನಮ್ಮ ದೇಶಕ್ಕೆ ಹೋಗಿ ಖಾಯಂ ನಿವಾಸಿ ವೀಸಾ ಪಡೆದು ಬರಬೇಕಾಗಿತ್ತು. ಇದಕ್ಕೆ Off-shore Visa ಎಂದು ಕರೆಯುತ್ತಾರೆ. ಇತ್ತೀಚೆಗೆ ನಿಯಮಗಳನ್ನು ಸಡಿಲಿಸಿ On-shore Visa ಜಾರಿಗೆ ಬಂದ ಮೇಲೆ ಓದು ಮುಗಿಸಿದ ವಿದ್ಯಾರ್ಥಿಗಳು ಇಲ್ಲಿಯೇ ಪರ್ಮನೆಂಟ್ ವೀಸಾ ಪಡೆಯಲು ಸಾಧ್ಯವಾದ ಕಾರಣ ಭಾರತದಿಂದ ಇಲ್ಲಿ ಖಾಯಂ ನಿವಾಸಿಗಳಾಗುವ ದೃಷ್ಟಿಯಿಂದ ಓದಲು ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಇವರಲ್ಲಿ ಅನೇಕರಿಗೆ ಇಂಗ್ಲೀಷ್ ಮಾತನಾಡಲು ಸರಿಯಾಗಿ ಬರುವುದಿಲ್ಲ. ಕರ್ನಾಟಕದಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಕೊಡಿಸಲು ಏಜಂಟರು ಇರುವಂತೆ ಇಲ್ಲಿಯ ವೃತ್ತಿಪರ ಕಾಲೇಜುಗಳಲ್ಲಿ ಸೀಟನ್ನು ದೊರಕಿಸಿಕೊಡಲು ಉತ್ತರ ಭಾರತದಲ್ಲಿ ಅನೇಕ ದಲ್ಲಾಳಿಗಳು ಹುಟ್ಟಿಕೊಂಡರು. ಸುಳ್ಳು ಪ್ರಮಾಣ ಪತ್ರಗಳನ್ನು ಸೃಷ್ಟಿ ಮಾಡಿ ಇಲ್ಲಿ ಪ್ರವೇಶಾವಕಾಶವನ್ನು ದೊರಕಿಸಿಕೊಟ್ಟರು. ಅನೇಕರು ಭವಿಷ್ಯದಲ್ಲಿ ಉತ್ತಮ ಜೀವನದ ಕನಸುಗಳನ್ನು ಹೊತ್ತು ಆಸ್ತಿಪಾಸ್ತಿಗಳನ್ನು ಮಾರಿಕೊಂಡು ಬಂದರು. ಒಮ್ಮೆ ವೀಸಾ ಸಿಕ್ಕರೆ ಸಾಕು ತಮ್ಮ ಜೀವನ ಬಂಗಾರವಾಗುತ್ತದೆಯೆಂದು ನಂಬಿ ಬಂದರು.

ಅಂಥವರಲ್ಲಿ ಪಂಜಾಬಿನಿಂದ ಯುವ ಮಹಿಳೆಯೊಬ್ಬಳು ಓದಲು ಇಲ್ಲಿಗೆ ಬಂದಿದ್ದಳು. ಕೆಲವು ತಿಂಗಳ ನಂತರ ಆಕೆಯ ಗಂಡ ತನ್ನ ಮಗಳೊಂದಿಗೆ ಹೆಂಡತಿಯನ್ನು ನೋಡಲು ಬಂದ. ಇದ್ದಕಿದ್ದಂತೆಯೇ ಒಂದು ದಿನ ಅವರ ಪುಟ್ಟ ಮಗಳು ಕಾಣೆಯಾಗಿ ಹೌಹಾರಿದರು. ನಂತರ ಉದ್ಯಾನವನವೊಂದರಲ್ಲಿ ಮಗುವಿನ ಶವ ದೊರೆಯಿತು. ವರ್ಣದ್ವೇಷದಿಂದ ತಮ್ಮ ಮಗುವನ್ನು ಕೊಂದು ಹಾಕಲಾಗಿದೆಯೆಂದು ದೂರು ಸಲ್ಲಿಸಲಾಯಿತು. ಪೋಲೀಸರು ತನಿಖೆ ನಡೆಸಿದರು. ಆ ಮಹಿಳೆ ಇಲ್ಲಿಗೆ ಬಂದ ಕೆಲವು ತಿಂಗಳುಗಳಲ್ಲಿಯೇ ಇಲ್ಲಿದ್ದ ಮತ್ತೊಬ್ಬ ಪಂಜಾಬಿ ಹುಡುಗನನ್ನು ಪ್ರೀತಿಸಿದ್ದ ಸಂಗತಿ ಹೊರಬಿತ್ತು. ಆ ಪ್ರಿಯಕರನೇ ಅವಳ ಮಗುವನ್ನು ಕೊಂದು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಹೋಗಿ ಉದ್ಯಾನವನದಲ್ಲಿ ಬಿಸಾಡಿದ್ದನೆಂದು ವಿಚಾರಣೆಯ ಸಂದರ್ಭದಲ್ಲಿ ತಿಳಿಯಿತು.

ಇನ್ನೊಂದು ಘಟನೆ. ಇಲ್ಲಿಗೆ ಬಂದ ಅನೇಕ ವಿದ್ಯಾರ್ಥಿಗಳು ಇಲ್ಲಿಯ ಖರ್ಚುವೆಚ್ಚಗಳನ್ನು ನಿಭಾಯಿಸಲು ಟ್ಯಾಕ್ಸಿ ಡೈವರ್‌ಗಳಾಗಿ ಇಲ್ಲವೇ ಪೆಟ್ರೋಲ್ ಬಂಕ್‌ಗಳಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಅಂಥವರಲ್ಲಿ ಒಬ್ಬ ರಾತ್ರಿ ಹಿಂದಿರುಗುವಾಗ ಅವನ ಕಾರಿಗೆ ಬೆಂಕಿ ಹಚ್ಚಲಾಯಿತು. ತನ್ನನ್ನು ಕೊಲ್ಲುವ ಪ್ರಯತ್ನ ನಡೆಯಿತೆಂದು ಪೊಲೀಸರಿಗೆ ದೂರು ಸಲ್ಲಿಸಿದ. ತನಿಖಾ ವೇಳೆಯಲ್ಲಿ ತಿಳಿದುಬಂದ ಸಂಗತಿಯೆಂದರೆ ಇನ್ಷೂರೆನ್ಸ್ ಕಂಪನಿಯಿಂದ ಹೆಚ್ಚಿನ ಪರಿಹಾರ ಹಣ ಸಿಗುತ್ತದೆಯೆಂದು ಆ ವಿದ್ಯಾರ್ಥಿಯೇ ತನ್ನ ಹಳೆಯ ಕಾರಿಗೆ ತಾನೇ ಬೆಂಕಿ ಹಚ್ಚಿದ್ದ!....

ಅದೆಷ್ಟು ವಿಮಾನಗಳನ್ನು ಹತ್ತಿ ಇಳಿದಿದ್ದೇವೋ ಲೆಕ್ಕವಿಲ್ಲ. ಆದರೆ ವಿಮಾನ ಇಳಿಯುವಾಗ ಗಗನಸಖಿಯರು ಏಕೆ ಕಿಟಕಿಗಳನ್ನು ತೆರೆಯುತ್ತಾರೆ ಎಂಬುದು ಇದುವರೆಗೂ ಗೊತ್ತಿರಲಿಲ್ಲ. ದೀರ್ಘಕಾಲದ ಪ್ರಯಾಣದಲ್ಲಿ ಭೋಜನಾನಂತರ ಪ್ರಯಾಣಿಕರು ವಿಶ್ರಾಂತಿ ಪಡೆಯಲೆಂದು ಕಿಟಕಿಗಳನ್ನು ಮುಚ್ಚಲಾಗುತ್ತದೆ. ಪ್ರಯಾಣಿಕರಿಗೆ ಗಗನಸಖಿಯರು ತೋರುವ ಆದರಾತಿಥ್ಯ ತಾಯಿ ಮಕ್ಕಳನ್ನು ನೋಡಿಕೊಂಡಂತೆ ಇರುತ್ತದೆ. ಬೆಳಕು ಕಣ್ಣಿಗೆ ಬಿದ್ದರೆ ನಿದ್ರೆ ಸರಿಯಾಗಿ ಆಗುವುದಿಲ್ಲವೆಂದು ವಿಮಾನದೊಳಗಿನ ವಿದ್ಯುದ್ದೀಪಗಳನ್ನು ಆರಿಸುತ್ತಾರೆ. ಒರಗಿಕೊಳ್ಳಲು ಮೆತ್ತನೆಯ ದಿಂಬುಗಳನ್ನು, ಚಳಿಯಾಗದಿರಲೆಂದು ಹೊದಿಕೆಗಳನ್ನು ಮತ್ತು ಕಾಲಿಗೆ ಸಾಕ್ಸ್ ಗಳನ್ನು ಕೊಡುತ್ತಾರೆ. ಕಣ್ಣಿನ ಆಪರೇಷನ್ ಆದಾಗ ವೈದ್ಯರು ಕಣ್ಣಿನ ರಕ್ಷಣೆಗೆಂದು ಕೊಡುವ ಬ್ಯಾಂಡೇಜಿನಂತಿರುವ ಬಟ್ಟೆಯ ಕನ್ನಡಕವನ್ನು ಧರಿಸಲು ಕೊಡುತ್ತಾರೆ. ವಿಮಾನ ಇಳಿಯುವ ಹೊತ್ತಿಗೆ ಮತ್ತೆ ವಿದ್ಯುದ್ದೀಪಗಳನ್ನು ಹೊತ್ತಿಸಿ, ಸೀಟ್‌ಬೆಲ್ಟ್ ಕಟ್ಟಿಕೊಳ್ಳಲು ಸೂಚಿಸಿ, ಕಿಟಕಿಗಳನ್ನು ತೆರೆಯುತ್ತಾರೆ. ಏಕೆಂದು ಈ ಬಾರಿಯ ಪ್ರಯಾಣದಲ್ಲಿ ಕೇಳಿದಾಗ ಗಗನಸಖಿ ಕೊಟ್ಟ ಉತ್ತರ: “In case of emergencey, you should know where to go. The bright light suddenly coming from outside blocks your vision. The light inside the aircraft should match the light outside”. ವಿಮಾನಯಾನದಲ್ಲಿ take off ಮತ್ತು landing ಎರಡೂ ಅಪಾಯಕರ ಸಂದರ್ಭಗಳು. ಹೊರಗಿನಿಂದ ಪ್ರಖರವಾದ ಬೆಳಕು ಇದ್ದಕ್ಕಿದ್ದಂತೆಯೇ ಕಣ್ಣಿನ ಮೇಲೆ ಬಿದ್ದರೆ ಕಣ್ಣು ಕೋರೈಸುತ್ತದೆ. ಕತ್ತಲುಗುಡಿಸಿದಂತಾಗುತ್ತದೆ. ಅಪಾಯದ ಸಂದರ್ಭಗಳಲ್ಲಿ ಆಪತ್ಕಾಲೀನ ದ್ವಾರ (emergency exit) ಎಲ್ಲಿದೆಯೆಂದು ಕಾಣಿಸುವುದಿಲ್ಲ. ಆದಕಾರಣ ಒಳಗಿನ ಬೆಳಕು ಮತ್ತು ಹೊರಗಿನ ಬೆಳಕು ಒಂದಾಗಲೆಂದು ಕಿಟಕಿಯನ್ನು ತೆರೆಯಲಾಗುತ್ತದೆ. ಗಗನಸಖಿಯ ಉತ್ತರ ನಮ್ಮನ್ನು ಆಲೋಚನಾಪರರನ್ನಾಗಿ ಮಾಡಿತು.

ಸಹೃದಯ ಓದುಗರೇ ! ಭಾರತೀಯ ದಾರ್ಶನಿಕರ ಆಶಯವಾದರೂ ಇದೇ ತಾನೆ: ತನ್ನೊಳಗಿನ ಚೈತನ್ಯ ಜಗದ ಚೈತನ್ಯದೊಂದಿಗೆ ಒಂದಾಗಬೇಕೆಂಬುದೇ ಅಲ್ಲವೇ?

ಕಂಗಳು ತುಂಬಿದ ಬಳಿಕ ನೋಡಲಿಲ್ಲ, 
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ, 
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ, 
ಮನ ತುಂಬಿದ ಬಳಿಕ ನೆನೆಯಲಿಲ್ಲ,
ಮಹಂತ ಕೂಡಲ-ಸಂಗಮ-ದೇವನ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 3.11.2010.