ಎಂಟು ಕಾಲುಗಳಲ್ಲಿ ನಡೆಯುವ ವಿಚಿತ್ರ ಪ್ರಾಣಿ ಯಾವುದು?

  •  
  •  
  •  
  •  
  •    Views  

ನಿಮಗೆ ನಿತ್ಯವೂ ಅನೇಕ ಫೋನುಗಳು ಬರುತ್ತಿರುತ್ತವೆ. ಅವುಗಳಲ್ಲಿ ನಿಮಗೆ ಬೇಕಾದ ವ್ಯಕ್ತಿಗಳ ಕರೆಗಳು ಇರಬಹುದು; ಬೇಡವಾದ ವ್ಯಕ್ತಿಗಳ ಕರೆಗಳೂ ಇರಬಹುದು. ಇತ್ತೀಚಿನ ವರ್ಷಗಳಲ್ಲಿ ಲ್ಯಾಂಡ್ ಲೈನ್ ಕರೆಗಳಿಗಿಂತ ಮೊಬೈಲ್ ಕರೆಗಳೇ ಜಾಸ್ತಿ. ಮೊಬೈಲ್ ಫೋನುಗಳು ಬಂದ ಮೇಲೆ ಲ್ಯಾಂಡ್ ಲೈನ್ ಪೋನುಗಳು ಮೂಲೆಗುಂಪಾಗುತ್ತಿವೆ. ಮೊದಲೆಲ್ಲಾ ಮನೆಯಲ್ಲಿ ಇದ್ದರೂ ಸಂದರ್ಭಾನುಸಾರ ಇಲ್ಲವೆಂದು ಹೇಳಬಹುದಿತ್ತು. ಈಗ ಹಾಗಲ್ಲ, ನಿಮ್ಮ ಕೈಯಲ್ಲಿರುವ ಮೊಬೈಲಿಗೇ ನೇರವಾಗಿ ಕರೆಗಳು ಬರುವುದರಿಂದ ಇಲ್ಲವೆಂದು ಹೇಳಲು ಬರುವುದಿಲ್ಲ.ಆದರೆ ನಿಮ್ಮ ಮಡದಿ ಬೇಸರಗೊಂಡರೆ ಮೌನಮುದ್ರೆಯನ್ನು ಧರಿಸುವಂತೆ ನಿಮಗೆ ಬೇಡವಾದ ಕರೆಗಳಿಂದ ಬೇಸರವಾಗಿದ್ದರೆ ನಿಮ್ಮ ಮೊಬೈಲ್ ಸಹ ಮೌನಮುದ್ರೆ ಧರಿಸುವಂತೆ ಮಾಡಬಹುದು. ಅಥವಾ ಗೊರಕೆ ಹೊಡೆಯದಂತೆ ನಿಷ್ಕ್ರಿಯಗೊಳಿಸಿ ನಿದ್ರೆಗುಳಿಗೆ ಕೊಡದೆ ಸುಖನಿದ್ರೆ ಮಾಡುವಂತೆ ಮಾಡಬಹುದು. ಆದರೆ ಒಂದು ವ್ಯತ್ಯಾಸ. ನಿಮ್ಮ ಮೊಬೈಲ್ ಪೋನಿನ ಮೌನಮುದ್ರೆಯನ್ನು ಸುಲಭವಾಗಿ ಮುರಿಯುವಂತೆ ಸುಖನಿದ್ರೆಯಿಂದ ಸುಲಭವಾಗಿ ಎಚ್ಚರಿಸಿದಂತೆ ನಿಮ್ಮ ಮಡದಿಯ ಮೌನಮುದ್ರೆಯನ್ನು ಮುರಿಯುವಂತೆ ಮಾಡುವುದು, ಸುಖನಿದ್ರೆಯಿಂದ ಎಚ್ಚರಿಸುವುದು ನಿಮಗೆ ಬಹಳ ಕಷ್ಟಕರವಾದ ಕೆಲಸ. ನಿಮಗೆ ಮಡದಿಯ ಮೇಲಿನ ಪ್ರೀತಿಗಿಂತ ಮೊಬೈಲ್ ರಾಣಿಯ ಮೇಲೆಯೇ ಹೆಚ್ಚು ಪ್ರೀತಿ ಎಂದರೆ ಅತಿಶಯೋಕ್ತಿಯಾಗಲಾರದು. ನೀವು ಯಾವಾಗಲೂ ಅವಳೊಂದಿಗೆ ಕಿವಿಯಲ್ಲಿ ಪಿಸುಗುಟ್ಟುತ್ತಲೇ ಇರುವುದನ್ನು ಯಾರು ಕಂಡಿಲ್ಲ, ಹೇಳಿ! ಹೀಗಿರುವಾಗ ಅದನ್ನು ನೋಡಿ ನಿಮ್ಮ ಮಡದಿಗೆ ಸಿಟ್ಟು ಬರದೇ ಇರಲು ಸಾಧ್ಯವೇ? ಹೇಳಿದಂತೆ ಕೇಳಿಕೊಂಡು ಮನೆಯಲ್ಲಿ ಬಿದ್ದಿರು ಎಂದು ಜೋರುಮಾಡಿ ಹೇಳಿದರೆ ಮನೆಯಲ್ಲಿ ರಾದ್ಧಾಂತವಾಗುತ್ತದೆ. ನಿಮ್ಮ ಮೊಬೈಲ್ ರಾಣಿ ಹಾಗಲ್ಲ, ನೀವು ಹೇಳದಿದ್ದರೂ ಕೇಳಿಕೊಂಡು ನಿಮ್ಮ ಜೇಬಿನಲ್ಲಿಯೇ ಸದಾ ನಿಮ್ಮ ಹೃದಯಕ್ಕೆ ಹತ್ತಿರವಾಗಿ ನಿಮ್ಮ ಪ್ರೀತಿಗೆ ಪಾತ್ರಳಾಗಿ ಇರುತ್ತಾಳೆ. ನಿಮ್ಮ ಮಡದಿ ಎಲ್ಲೆಂದರಲ್ಲಿ ನಿಮ್ಮನ್ನು ಹಿಂಬಾಲಿಸಿದರೆ ನಿಮಗೆ ಇಷ್ಟವಾಗುವುದಿಲ್ಲ. ಅವಳಿಗಿಲ್ಲದ ಸ್ವಾತಂತ್ರ್ಯ ನಿಮ್ಮ ಮೊಬೈಲ್ ರಾಣಿಗೆ ಇದೆ. ಮನೆಯಲ್ಲಿದ್ದರೂ ಮಡದಿಯೊಂದಿಗೆ ಮಾತನಾಡದೆ ಅವಳೊಂದಿಗೆ ನಿಮ್ಮ ಮಾತು ಜಾಸ್ತಿ. ಹೀಗಿರುವಾಗ ಅವಳ ಮೇಲೆ ಸಹಜವಾಗಿ ನಿಮ್ಮ ಮಡದಿಗೆ ಸವತಿಮಾತ್ಸರ್ಯ ಉಂಟಾದರೆ ಆಶ್ಚರ್ಯವೇನಿಲ್ಲ. ನೀವು ಯಾವಾಗ ಯಾರೊಂದಿಗೆ ಎಷ್ಟು ಹೊತ್ತು ಮಾತನಾಡಿದ್ದೀರಿ, ಯಾರಿಂದ ಏನೆಂದು ನಿಮಗೆ SMS ಗಳು ಬಂದಿವೆಯೆಂದು ನಿಮ್ಮ ಮಡದಿ ಕದ್ದುಮುಚ್ಚಿ ಬೇಹುಗಾರಿಕೆ ಮಾಡಲು, ಷುರುಮಾಡಿದರೆ ನಿಮ್ಮ ಸಂಸಾರದ ನೆಮ್ಮದಿಗೆ ಎಳ್ಳುನೀರು ಬಿಟ್ಟಂತೆಯೇ ಸರಿ. ಇಂತಹ ಕೆಲವು ಪ್ರಕರಣಗಳು ನಮ್ಮ ಸದ್ಧರ್ಮನ್ಯಾಯಪೀಠದ ಮುಂದೆ ಬಂದು ವಿಚಾರಣೆಯ ಹಂತದಲ್ಲಿವೆ.

ಕೆಲವು ವರ್ಷಗಳ ಹಿಂದೆ ಮೊಬೈಲ್ ಫೋನು ಕೆಲವೇ ಕೆಲವು ಶ್ರೀಮಂತರ ಸ್ವತ್ತಾಗಿದ್ದು ದೊಡ್ಡಸ್ತಿಕೆಯ ಸಂಕೇತವಾಗಿತ್ತು. ಮದುವೆ ಮನೆಯಲ್ಲಿ ಮಹಿಳೆಯರು ತಮ್ಮ ಮೈಮೇಲಿರುವ ಆಭರಣಗಳನ್ನು ಇತರೆ ಹೆಂಗಳೆಯರ ಕಣ್ಣುಕುಕ್ಕುವ ಹಾಗೆ ತೋರಿಸಿಕೊಂಡಂತೆ ಎಲ್ಲರೆದುರಿಗೆ ಮೊಬೈಲ್ ಫೋನಿನಲ್ಲಿ ಮಾತನಾಡುವುದೇ ಒಂದು ಗತ್ತು ಗೈರತ್ತು ಆಗಿತ್ತು. ಈಗ ಮಾರುಕಟ್ಟೆಯಲ್ಲಿ ಬೀಡಾ ಅಂಗಡಿಯವನಿಂದ ಹಿಡಿದು, ಮೂಟೆ ಹೊರುವ ಹಮಾಲರೂ ಸಹ ಮೊಬೈಲ್ ಫೋನು ಇಟ್ಟುಕೊಂಡಿದ್ದಾರೆ. ಅಷ್ಟೇ ಏಕೆ ನಮ್ಮ ಮಠದ ಪಟ್ಟದಾನೆ ಗೌರಿಯನ್ನು ನೋಡಿಕೊಳ್ಳುವ ಮಾಹುತ ಇಸ್ಮಾಯಿಲ್ ಸಹ ಮೊಬೈಲ್ ಫೋನು ಇಟ್ಟುಕೊಂಡಿದ್ದಾನೆ. ಇದರಿಂದ ಮಠದ ಆನೆ ಎಲ್ಲಿದೆಯೆಂದು ಪತ್ತೆ ಹಚ್ಚಲು, ಹೇಗಿದೆಯೆಂದು ವಿಚಾರಿಸಿಕೊಳ್ಳಲು ಅನುಕೂಲವಾಗಿದೆ.

ಹಿಂದೆಲ್ಲಾ ಒಂದು ಲ್ಯಾಂಡ್ ಫೋನನ್ನು ಹಾಕಿಸಿಕೊಳ್ಳಬೇಕೆಂದರೆ ವರ್ಷಗಟ್ಟಲೆ ಕಾಯಬೇಕಾಗಿತ್ತು. ಅದಕ್ಕಾಗಿ MP ಗಳ ಮೊರೆ ಹೋಗಬೇಕಾಗಿತ್ತು. ಅವರಿಗೆ ಇರುವ ಸ್ಪೆಷಲ್ ಕೋಟಾದಲ್ಲಿ ಮುಂಜೂರು ಮಾಡಿಸಿಕೊಳ್ಳಬೇಕಾಗಿತ್ತು. ಈಗ ದೂರವಾಣಿ ಕ್ರಾಂತಿ ಎಷ್ಟೊಂದು ಆಗಿದೆಯೆಂದರೆ ಒಬ್ಬರ ಹತ್ತಿರ ಒಂದಲ್ಲ ಅನೇಕ ಮೊಬೈಲ್ಗಳು ಇರುವುದನ್ನು ನೋಡಬಹುದಾಗಿದೆ. ಒಂದು ಕಾಲದಲ್ಲಿ ಮುಂದುವರಿದ ದೇಶವಾದ ಅಮೇರಿಕೆಯಲ್ಲಿ ಎಷ್ಟು ಕಾರುಗಳಿವೆಯೋ ಅಷ್ಟು ಜನರಿದ್ದಾರೆ ಎಂದು ಹೇಳಬಹುದಿತ್ತು. ಈಗ ಜಗತ್ತಿನೆಲ್ಲೆಡೆ ಜನಸಂಖ್ಯೆಗಿಂತ ಮೊಬೈಲ್ ಸಂಖ್ಯೆಯೇ ಜಾಸ್ತಿ. ನ್ಯೂಜಿಲೆಂಡ್ ನಲ್ಲಿ ಜನಸಂಖ್ಯೆಗಿಂತ ಕುರಿಗಳ ಸಂಖ್ಯೆ ಮೂರು ಪಟ್ಟು ಜಾಸ್ತಿ ಇರುವಂತೆ. ಈ ಮೊಬೈಲ್ ಫೋನಿನಿಂದ ಅನುಕೂಲಕ್ಕಿಂತ ಅನನುಕೂಲವೇ ಜಾಸ್ತಿ ಎಂದು ಮೂಗುಮುರಿಯುವವರೂ ಇದ್ದಾರೆ. ಅದು ಬಳಕೆದಾರರ ಮನೋಧರ್ಮದ ಮೇಲೆ ಹೋಗುತ್ತದೆ. ವಿಜ್ಞಾನ ನಾಗರೀಕ ಸೌಲಭ್ಯಗಳನ್ನು ಒದಗಿಸಬಲ್ಲದು. ಅವುಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬ ಧರ್ಮಪ್ರಜ್ಞೆಯನ್ನು ಕಲಿಸಿಕೊಡಲು ಅದರಿಂದ ಸಾಧ್ಯವಿಲ್ಲ. ಮದುವೆ ಮಂಟಪದಲ್ಲಿ ಮಂತ್ರಹೇಳುವ ಕೆಲವರು ಪುರೋಹಿತರು ಕೊರಳಲ್ಲಿ ಮೊಬೈಲ್ ಫೋನು ನೇತುಹಾಕಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಹೀಗೆ ವಧೂವರರಿಗೆ ತಾಳಿ ಕಟ್ಟಿಸುವಾಗ ಪುರೋಹಿತರು ಕೊರಳಲ್ಲಿ ಮೊಬೈಲ್ ಪೋನು ಹಾಕಿಕೊಂಡಿರಬೇಕೆಂದು ಯಾವ ಧರ್ಮಶಾಸ್ತ್ರ ಹೇಳುತ್ತದೆ? ಆದರೂ ಅನೇಕ ಮದುವೆ ಶಾಸ್ತ್ರಗಳಲ್ಲಿ ಸಾಂಕೇತಿಕ ಅರ್ಥ ಇರುತ್ತದೆ. ಅದಕ್ಕನುಗುಣವಾಗಿ ಎರಡು ಮೊಬೈಲ್ ಫೋನುಗಳ ಮಧ್ಯೆ ಒಂದು ಕರೆಮಾಡಿದೊಡನೆ ಮತ್ತೊಂದು ರಿಂಗಣಿಸಿ ಶಬ್ದತರಂಗಗಳು ಪ್ರವಹಿಸುವಂತೆ ನವದಂಪತಿಗಳ ಹೃದಯದಲ್ಲಿ ಗಾಢವಾದ ಪ್ರೀತಿ ಪ್ರವಹಿಸಬೇಕು, ಒಂದು ಹೃದಯ ಮತ್ತೊಂದು ಹೃದಯಕ್ಕೆ ಮಿಡಿಯಬೇಕು, Not reachable ಅಥವಾ Switched off ಆಗಬಾರದು ಎಂದು ವಿಶೇಷ ಅರ್ಥ ಕಲ್ಪಿಸಿ ವ್ಯಾಖ್ಯಾನಿಸಬಹುದೋ ಏನೋ!

ಅದೇನೆ ಇರಲಿ, ನಾವು ಬರೆಯಬೇಕೆಂದು ಹೊರಟ ವಿಷಯ ಮೊಬೈಲ್ ಫೋನ್ ಅಲ್ಲ, ವಿಷಯ ಎಲ್ಲಿಂದ ಎಲ್ಲಿಗೋ ಹೋಯಿತು. ಬಹಳ ವರ್ಷಗಳ ಹಿಂದೆ ಅಮೇರಿಕಾ ಪ್ರವಾಸದಲ್ಲಿದ್ದಾಗಿನ ಮಾತು. ಡೆಟ್ರಾಯಿಟ್ ಸಮೀಪದಲ್ಲಿರುವ ಪಿಟ್ಸ್ಬರ್ಗ್ ನಲ್ಲಿ ಶಿಷ್ಯರಾದ ಡಾ| ಚಂದ್ರಶೇಖರ ನಾಡಿಗ್ ಅವರ ಮನೆಯಲ್ಲಿ ತಂಗಿದ್ದೆವು. ಪೂಜೆಪ್ರಸಾದ ಮುಗಿದ ಮೇಲೆ ಲೋಕಾಭಿರಾಮವಾಗಿ ಮಾತನಾಡುತ್ತಾ ಇರುವಾಗ ಅವರ ಪತ್ನಿ ಶ್ರೀಮತಿ ಶೋಭಾ ನಾಡಿಗ್ ಅವರು ಒಂದು ಪ್ರಸಂಗವನ್ನು ವಿವರಿಸಿದರು. ಅವರ ಪತಿ ಆಸ್ಪತ್ರೆಗೆ ಕೆಲಸದ ಮೇಲೆ ಹೋದಾಗ ಮನೆಯಲ್ಲಿ ಶ್ರೀಮತಿ ಶೋಭಾ ಒಬ್ಬರೇ ಇದ್ದರು. ದೂರವಾಣಿ ರಿಂಗಣಿಸಿತು. ಆಗಿನ್ನೂ ಮೊಬೈಲ್ ಫೋನುಗಳು ಇರಲಿಲ್ಲ. ರಿಸೀವರ್ ಎತ್ತಿದಾಕ್ಷಣವೇ ಕೇಳಿಸಿದ್ದು ಅಪರಿಚಿತ ಧ್ವನಿ. ಈಗಿನಂತೆ ದೂರವಾಣಿಯಲ್ಲಿ business ಕರೆಗಳು ಬರುತ್ತಿದ್ದುದು ಆಗಲೂ ರೂಢಿ. ಆದರೆ ಅಂದು ಕೇಳಿಬಂದ business ಕರೆ ಅವರ ಹೃದಯನ್ನು ತಲ್ಲಣಗೊಳಿಸಿತು. ಫೋನಿನ ಆಚೆಬದಿಯಲ್ಲಿದ್ದ ವ್ಯಕ್ತಿ ತನ್ನ ಕಂಪನಿಯ ಹೆಸರನ್ನು ಹೇಳಿ ಅವರನ್ನು ಕೇಳಿದ್ದು ಏನು ಗೊತ್ತೆ: "Good Morning Madam! Do you want to reserve a place in the burial ground?" (ನಮಸ್ಕಾರ, ನಿಮಗೆ ರುದ್ರಭೂಮಿಯಲ್ಲಿ ಜಾಗ ಕಾಯ್ದಿರಿಸಲು ಇಚ್ಛೆ ಇದೆಯೇ?). ಫೋನ್ ಮಾಡಿದ ವ್ಯಕ್ತಿ ಯಾವ ದರೋಡೆಕೋರನೂ ಅಲ್ಲ, ಅವರ ಶತ್ರುವೂ ಅಲ್ಲ. ಅವನೊಬ್ಬ Funeral Service Association ಅಂದರೆ ಯಾರಾದರೂ ಸತ್ತರೆ ಅವರ ಅಂತಿಮ ಸಂಸ್ಕಾರವನ್ನು ವಿಧಿವತ್ತಾಗಿ ಮಾಡುವ ಒಂದು ಕಂಪನಿಯ ನೌಕರ. ಈ ಅನಿರೀಕ್ಷಿತ ಪ್ರಶ್ನೆಯನ್ನು ಕೇಳಿದ ತಕ್ಷಣವೇ ಶ್ರೀಮತಿ ಶೋಭಾರವರ ಹೃದಯ ಹೊಡೆದುಕೊಳ್ಳಲಾರಂಭಿಸಿತು. ತಕ್ಷಣವೇ ಫೋನನ್ನು ಕೆಳಗಿಟ್ಟು ಏದುಸಿರುಬಿಡತೊಡಗಿದರಂತೆ. ರೈಲು ಬಸ್ಸು ವಿಮಾನಗಳಲ್ಲಿ ಸೀಟು ಕಾಯ್ದಿರಿಸುವುದನ್ನು ಕೇಳಿದ್ದೀರಿ. ಸ್ಮಶಾನದಲ್ಲಿ ಜಾಗ ಕಾಯ್ದಿರಿಸುವುದನ್ನು ಭಾರತೀಯರಾರೂ ಕೇಳಿಲ್ಲ. ಅಂತಹ ಉದ್ದಿಮೆಯೇ ನಮ್ಮಲ್ಲಿ ಇಲ್ಲ. ಇದು ನಮ್ಮ ಜಾಯಮಾನಕ್ಕೆ ಒಗ್ಗದ ಮಾತು. ನಮ್ಮ ಮಹಿಳೆಯರು ತುಂಬಾ ಭಾವಜೀವಿಗಳು. ಅಕಸ್ಮಾತ್ ನಾನು ಸತ್ತರೆ ಏನು ಮಾಡುತ್ತೀಯಾ ಎಂದು ವಿನೋದವಾಗಿ ಗಂಡ ಕೇಳಿದರೆ ಹೆಂಡತಿ ಥೂ ಬಿಡ್ತು ಅನ್ರಿ ಎಂದು ಆತಂಕದಿಂದ ಆಕ್ಷೇಪಿಸುತ್ತಾಳೆ. ಆರತಿ ಬೆಳಗುವಾಗ ಗಾಳಿಯ ಹೊಡೆತದಿಂದ ದೀಪ ಆರಿದರೆ ಅಪಶಕುನವಾಯಿತೆಂದು ಆತಂಕಗೊಳ್ಳುತ್ತಾಳೆ. ಗಾಳಿಯ ಹೊಡೆತ ಎಷ್ಟೇ ತೀವ್ರತರವಾಗಿದ್ದರೂ ಬತ್ತಿಯನ್ನು ತಿದ್ದಿತೀಡಿ ಹೇಗಾದರೂ ಮಾಡಿ ದೀಪ ಹಚ್ಚುವ ಹರಸಾಹಸ ಮಾಡುತ್ತಾಳೆ. ದೀಪ ಬೆಳಗುವವರೆಗೂ ಆಕೆಯ ಮನಸ್ಸಿಗೆ ಸಮಾಧಾನವಾಗುವುದಿಲ್ಲ.

ನಮ್ಮ ದೇಶದಲ್ಲಿ ಯಾರೂ ತಮ್ಮ ಸಾವಿನ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ಮಕ್ಕಳ ಮದುವೆ ಬಗ್ಗೆ ಮಾತನಾಡುತ್ತಾರೆ, ತಮ್ಮ ತಮ್ಮ ಅಂತಸ್ತಿಗೆ ಅನುಗುಣವಾಗಿ ಯಾವ ಕಲ್ಯಾಣಮಂಟಪದಲ್ಲಿ ಮದುವೆಗೆ ಏರ್ಪಾಡು ಮಾಡಬೇಕೆಂದು ಸಮಾಲೋಚಿತ್ತಾರೆ. ಆಹ್ವಾನಪತ್ರಿಕೆ ಹೇಗಿರಬೇಕು, ಮುಹೂರ್ತ ಯಾವಾಗ, ಜಾತಕ ಸರಿಯಾಗಿ ಹೊಂದಿದೆಯೇ ಹೇಗೆ, ಮದುವೆ ಮಂಟಪವನ್ನು ಹೇಗೆ ಅಲಂಕರಿಸಿಬೇಕು, ದೀಪಾಲಂಕಾರ, ಹೂವಿನ ಅಲಂಕಾರ ಹೇಗಿರಬೇಕು, ಬೀಗರಿಗೆ ತೃಪ್ತಿಯಾಗುವಂತೆ ಎಂಥ ಅಡುಗೆ ಮಾಡಿಸಬೇಕು, Menu ಏನೇನು, ಚೆನ್ನಾಗಿ ಮಂತ್ರ ಹೇಳುವ ಪುರೋಹಿತರು ಯಾರು, ಮಂಗಳ ವಾದ್ಯದ ವ್ಯವಸ್ಥೆ ಹೇಗೆ, ಮದುಮಕ್ಕಳು ಯಾವ ಬಟ್ಟೆ ಧರಿಸಬೇಕು, ಮದುಮಗಳಿಗೆ ಏನು ಒಡವೆ ಹಾಕಬೇಕು ಇತ್ಯಾದಿ ವಿವರವಾಗಿ ಚರ್ಚಿಸುತ್ತಾರೆ. ಕೆಲವೊಮ್ಮೆ ಈ ವಿಚಾರದಲ್ಲಿ ಬೀಗರ ಮಧ್ಯೆ ಜಗಳಗಳೂ ಆಗುತ್ತವೆ. ಆ ಕಾರಣಕ್ಕಾಗಿ ಮದುವೆಗಳೂ ನಿಂತು ಹೋಗುತ್ತವೆ. ಆದರೆ ವಯಸ್ಸಾದ ಅಜ್ಜ ಅಜ್ಜಿ ಸತ್ತರೆ ಎಲ್ಲಿ ಹೇಗೆ ಅವರ ಅಂತಿಮಸಂಸ್ಕಾರ ಮಾಡಬೇಕೆಂದು ಯಾರೂ ಸಹ ಅಪ್ಪಿತಪ್ಪಿಯೂ ಬಹಿರಂಗವಾಗಿ ಕುಟುಂಬದ ಸದಸ್ಯರೊಂದಿಗೆ ಮಾತನಾಡುವುದಿಲ್ಲ, ಅವರು ಪ್ರಾಣ ಬಿಟ್ಟಾಗಲೇ ಅದರ ಯೋಚನೆ.

"ಜೀವನದಲ್ಲಿ ಏನನ್ನು ಸಂಪಾದಿಸದಿದ್ದರೂ ಸತ್ತಾಗ ನಿನ್ನ ಹೆಣವನ್ನು ಹೊರಲು ನಾಲ್ಕು ಜನರನ್ನು ಸಂಪಾದಿಸಿಕೋ" ಎಂದು ಹಿರಿಯರು ಹೇಳುತ್ತಾರೆ. ಇದೇ ವಿಚಾರವಾಗಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಬರೆದ ಪ್ರಸಿದ್ದ "ಭೂತಯ್ಯನ ಮಗ ಅಯ್ಯು" ಎಂಬ ಕಾದಂಬರಿಯನ್ನು ನೀವು ಓದಿರಬಹುದು. ಸಾಲ ಕೊಡದ ಹೊರತು ಸಾಲಗಾರನ ಹೆಣ ಎತ್ತಲು ಬಿಡದ ಕ್ರೂರಿ ಜಿಪುಣಸಾಹುಕಾರ ತಾನೇ ಸತ್ತಾಗ ಅವನ ಹೆಣವನ್ನು ಎತ್ತಲು ಯಾರೂ ಮುಂದೆ ಬರದ ಕಾರಣ ಮಗನೇ ತನ್ನ ತಂದೆಯ ಹೆಣವನ್ನು ಗಾಡಿಯ ಮೇಲೆ ಹೇರಿಕೊಂಡು ಸ್ಮಶಾನಕ್ಕೆ ಸಾಗಿಸಬೇಕಾದ ದೃಶ್ಯವನ್ನು ನೀವು ಗೊರೂರು ಅವರ ಕಾದಂಬರಿಯಲ್ಲಿ ಅಲ್ಲದಿದ್ದರೂ ಅದೇ ಹೆಸರಿನ ಸಿನೇಮಾದಲ್ಲಿಯಾದರೂ ನೋಡಿರಬಹುದು. ಈ ಹಿತೋಪದೇಶದ ಅವಶ್ಯಕತೆ ಪಾಶ್ಚಾತ್ಯರಾಷ್ಟ್ರಗಳಲ್ಲಿ ಇಲ್ಲ. ಕೈಯಲ್ಲಿ ದುಡ್ಡು ಇದ್ದರೆ ಸಾಕು ಯಾರ ಹಂಗೂ ಆ ದೇಶದವರಿಗೆ ಬೇಕಾಗಿಲ್ಲ. ಸತ್ತಾಗ ಅಳುವವರು ಯಾರೂ ಇಲ್ಲದಿದ್ದರೆ ಅದಕ್ಕಾಗಿ "Professional mourners" ಅಲ್ಲಿ ಸಿಗುತ್ತಾರೆ. ಮೇಲೆ ವಿವರಿಸಿದಂತೆ ಮದುವೆ ಮಂಟಪ, ದೀಪಾಲಂಕಾರ, ಉಡುಗೆ-ತೊಡುಗೆ, ಊಟ-ವಸತಿ ಇತ್ಯಾದಿ ವ್ಯವಸ್ಥೆ ಮಾಡುವ ಏಜೆನ್ಸಿಗಳು ನಿರ್ದಿಷ್ಟವಾದ ರೇಟು ನಿಗದಿಪಡಿಸಿದಂತೆ ಪಾಶ್ಚಾತ್ಯರಾಷ್ಟ್ರಗಳಲ್ಲಿ ಶವಸಂಸ್ಕಾರದ ಹೊಣೆಹೊರುವ ಏಜನ್ಸಿಗಳು ಒಂದೊಂದಕ್ಕೂ ಒಂದೊಂದು ರೇಟು ನಿಗದಿಪಡಿಸಿರುವುದನ್ನು ನೋಡಬಹುದಾಗಿದೆ. ಅಂತಹ ಒಂದು ಸಂಸ್ಥೆಯು ಗ್ರಾಹಕರಿಗೆ (ಗ್ರಹಚಾರ ನೆಟ್ಟಗಿಲ್ಲದವರಿಗೆ?) ನೀಡಿರುವ ಈ ಕೆಳಗಿನ ಮಾಹಿತಿಯನ್ನು ನೋಡಿ: 

Before making arrangements, here are a few things to consider:

  • Have you decided on a funeral provider? Do you have friends or relatives who might recommend someone?
  • Will the deceased be buried or cremated?
  • Do you want a viewing at the funeral? What kind of casket do you want? Will there be a graveside service? What kind of grave marker do you want?
  • Do you want a full funeral service with the casket present or a memorial service?
  • Do you want a reception at the funeral home or a community facility, or a gathering of friends atyour house?
  • How much of the arrangements do you want the funeral provider to look after and what do you and your family wants to look after yourselves?
  • If the deceased is to be cremated, have you considered what you want to do with the cremated remains?
  • Are you clear about the cost of all services and products?
  • Have you also thought about extra costs for such things as a memorial book, an urn, flowers, a fee or honorarium for the minister, a fee for an organist or soloist, or vehicles in which to get to the cemetery?

ಅಮೇರಿಕಾದಲ್ಲಿ ಶವಸಂಸ್ಕಾರ ಒಂದು ಮಾನವೀಯ ಕಾರ್ಯವಾಗಿಲ್ಲ, ಅದೊಂದು ಉದ್ದಿಮೆಯಾಗಿದೆ. ಸತ್ತಾಗ ಮೃತದೇಹ ಹೇಗೆ ಠಾಕುಠೀಕಾಗಿ ಜನರಿಗೆ ಕಾಣಿಸಬೇಕು, ಹೇಗೆ reception ಏರ್ಪಡಿಸಬೇಕು ಎಂದು ವಿಚಾರಮಾಡುವುದು ನಮ್ಮ ದೇಶದವರ ಜಾಯಮಾನಕ್ಕೆ ಹೊಂದುವುದಿಲ್ಲ,ಅಂತಿಮ ಸಂಸ್ಕಾರ ಮಾಡುವ ಮೊದಲು ಮೃತವ್ಯಕ್ತಿಯ ಮೈಮೇಲಿರುವ ಬಂಗಾರದ ಒಡವೆಗಳನ್ನು ತೆಗೆದುಕೊಳ್ಳುವುದನ್ನು ಮಾತ್ರ ಮರೆಯುವದಿಲ್ಲ!

ಗ್ರೀಕ್ ಪುರಾಣದಲ್ಲಿ ಸ್ಫಿಂಕ್ಸ್ (Sphinx) ಎಂಬ ವಿಚಿತ್ರಪ್ರಾಣಿಯ ಉಲ್ಲೇಖ ಬರುತ್ತದೆ. ಅದರ ತಲೆ ಮತ್ತು ಎದೆ ಮಹಿಳೆಯಂತೆ, ಶರೀರ ಸಿಂಹದಂತೆ, ರೆಕ್ಕೆಗಳು ಹದ್ದಿನಂತೆ ಮತ್ತು ಬಾಲ ಹಾವಿನಂತೆ ಇದ್ದುವಂತೆ. ಅದು ಕಾಡಿನಲ್ಲಿ ಸಂಚರಿಸುವ ದಾರಿಹೋಕರಿಗೆ ಕೇಳುತ್ತಿದ್ದ ಪ್ರಶ್ನೆ: "ಬೆಳಗಿನ ಹೊತ್ತು ನಾಲ್ಕು ಕಾಲುಗಳ ಮೇಲೆ, ಮಧ್ಯಾಹ್ನದ ಹೊತ್ತು ಎರಡು ಕಾಲುಗಳ ಮೇಲೆ, ಸಂಜೆ ಹೊತ್ತು ಮೂರು ಕಾಲುಗಳ ಮೇಲೆ ಹೋಗುವ ಪ್ರಾಣಿ ಯಾವುದು?" ಇದಕ್ಕೆ ಉತ್ತರ ಕೊಡದವರನ್ನು ಅದು ತಿಂದುಹಾಕುತ್ತಿತ್ತಂತೆ. ಈ ಪ್ರಶ್ನೆಗೆ ಸರಿಯಾದ ಉತ್ತರವನ್ನು ಈಡಿಪಸ್ ಕೊಟ್ಟನಂತೆ. ಅದೇನೆಂದರೆ: ಮನುಷ್ಯ - ಬೆಳಗಿನ ಹೊತ್ತು ಅಂದರೆ ಬಾಲ್ಯದಲ್ಲಿ ಅಂಬೆಗಾಲಿಡುವ ಮಗು, ಮಧ್ಯಾಹ್ನ ಅಂದರೆ ಯುವವಯಸ್ಸಿನಲ್ಲಿ ನಡೆದಾಡುವ ಯುವಕ, ಸಂಜೆ ಹೊತ್ತು ಅಂದರೆ ಮುಪ್ಪಿನಲ್ಲಿ ಕೋಲು ಹಿಡಿದು ನಡೆದಾಡುವ ಮುದುಕ. ಈ ಪ್ರಶ್ನೆಯನ್ನು ಮುಂದುವರಿಸಿ ರಾತ್ರಿ ಹೊತ್ತು ಎಂಟುಕಾಲುಗಳಲ್ಲಿ ನಡೆದಾಡುವ ವಿಚಿತ್ರ ಪ್ರಾಣಿ ಯಾವುದು ಎಂದು ಕೇಳಬಹುದು ಎನಿಸುತ್ತದೆ. ಅದಕ್ಕೂ ಉತ್ತರ: ಮನುಷ್ಯ, ರಾತ್ರಿ ಹೊತ್ತು ಅಂದರೆ ಸತ್ತಾಗ ನಾಲ್ಕು ಜನರ ಹೆಗಲ ಮೇಲ ಸಂಚರಿಸುವ ಮನುಷ್ಯನ ಶವ. ಇಂತಹ ಶವಸಂಸ್ಕಾರ ಪಾಶ್ಚಾತ್ಯರಂತೆ ನಮ್ಮ ನಾಡಿನಲ್ಲಿ ಒಂದು ಉದ್ದಿಮೆಯಾಗಿ ರೂಪುಗೊಳ್ಳದಿರಲಿ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 4.11.2009.