ಜೈಲು ಶಿಕ್ಷೆ ಅವಮಾನಕರವೇ?

  •  
  •  
  •  
  •  
  •    Views  

ಳೆದ ಕೆಲವು ದಿನಗಳಿಂದ ಪರಪ್ಪನ ಅಗ್ರಹಾರ ಸುದ್ದಿಯಲ್ಲಿದೆ. ರಾಜಮಹಾರಾಜರುಗಳ ಕಾಲದಲ್ಲಿ ಅಗ್ರಹಾರಗಳು ಶೈಕ್ಷಣಿಕ ಕೇಂದ್ರಗಳಾಗಿದ್ದವು. ಪರಂಪರಾಗತವಾಗಿ ವೇದಶಾಸ್ತ್ರಪುರಾಣಗಳಲ್ಲಿ ಪಾರಂಗತರಾದ ಸುಸಂಸ್ಕೃತ ಬ್ರಾಹ್ಮಣರು ವಾಸವಾಗಿದ್ದ ಸ್ಥಳಗಳು ಅವು. ಮಧ್ಯೆ ದೇವಾಲಯ, ಇಕ್ಕೆಲಗಳಲ್ಲಿ ಅವರ ಮನೆಗಳು. ಮೈಸೂರು ಪ್ರಾಂತ್ಯದಲ್ಲಿ ಅಗ್ರಹಾರವೆಂಬ ಹೆಸರಿನ ನೂರಾರು ಹಳಿಗಳಿವೆ. ಅವುಗಳಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರವೂ ಒಂದು. ಅದೇನು ಅದರ ದುರದೃಷ್ಟವೋ ಏನೋ ಹಿಂದಿನ ರಾಜಮಹಾರಾಜರುಗಳಿಂದ ಪಡೆದ ಗೌರವವು ಇಂದಿನ ಭ್ರಷ್ಟ ರಾಜಕಾರಣಿಗಳಿಂದ ಮಣ್ಣುಪಾಲಾಗಿ ಹೋಗಿ ಮೂದಲಿಕೆಗೆ ಒಳಗಾಗಿದೆ. ಸದಾಚಾರ ಸಂಪನ್ನರ ತಾಣವಾಗುವ ಬದಲು ದುರಾಚಾರ ದುಷ್ಕೃತ್ಯಗಳನ್ನೆಸಗಿದವರನ್ನು ಕೂಡಿಹಾಕುವ ಕಾರಾಗೃಹವಾಗಿ ಪರಿಣಮಿಸಿದೆ. ಈ ಕಾರಾಗೃಹದ ಕಂಬಿಗಳಿಗೇನಾದರೂ ಮಾತನಾಡಲು ಬಂದಿದ್ದರೆ ಅವು ಅದೆಷ್ಟು ಕಥೆಗಳನ್ನು ಹೇಳುತ್ತಿದ್ದವೋ ಏನೋ! ಜೈಲಿಗೆ ಹೋಗುವುದೆಂದರೆ ತುಂಬಾ ಅವಮಾನಕರವೆಂಬುದು ನಿಜ. ಆದರೆ ಗಾಂಧೀಜಿ ಒಂದು ಕಡೆ ಹೀಗೆ ಹೇಳುತ್ತಾರೆ: “Shame lies not so much in going to jail as in committing the offence that makes one go to jail”. ಜೈಲಿಗೆ ಹೋಗುವುದೇ ಅವಮಾನಕರವಲ್ಲ, ಯಾವ ಕಾರಣಕ್ಕಾಗಿ ಜೈಲಿಗೆ ಹೋಗುವ ಪ್ರಸಂಗ ಬರುತ್ತದೆ ಎನ್ನುವುದರ ಮೇಲೆ ಅದು ಅವಮಾನಕರ ಹೌದೇ ಅಲ್ಲವೇ ಎಂಬುದು ನಿರ್ಧಾರವಾಗುತ್ತದೆಯೆಂಬುದು ಗಾಂಧೀಜಿ ಅಭಿಮತ. ಜೈಲಿಗೆ ಹೋಗುವುದೂ ಸಹ ಮರ್ಯಾದೆ ತರಬಲ್ಲುದು ಎಂಬುದಕ್ಕೆ ಸ್ವತಃ ಗಾಂಧೀಜಿಯೇ ಉತ್ತಮ ಉದಾಹರಣೆಯಾಗಿದ್ದಾರೆ.

ಸ್ವಾತಂತ್ರಪೂರ್ವದಲ್ಲಿ ಗಾಂಧೀಜಿ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರರು ಅನೇಕ ಬಾರಿ ಜೈಲಿಗೆ ಹೋದರು. ಅವರು ಜೈಲಿಗೆ ಹೋಗಲು ಕಾರಣ ದೇಶದ ಸ್ವಾತಂತ್ರಕ್ಕಾಗಿ ಮಾಡುತ್ತಿದ್ದ ಚಳುವಳಿ ಮತ್ತು ಹೋರಾಟ, ಬ್ರಿಟಿಷರ ದಾಸ್ಯದಿಂದ ವಿಮುಕ್ತಿ ಪಡೆಯಲು ನಡೆಸಿದ ಚಳುವಳಿಯ ಹಿನ್ನೆಲೆಯಲ್ಲಿ ಅವರು ಜೈಲಿಗೆ ಹೋಗುವಂತಾದರೂ ಅವರ ಗೌರವ ಘನತೆಗೆ ಯಾವುದೇ ಕಳಂಕ ಬರಲಿಲ್ಲ; ಬದಲಾಗಿ ಪುಟಕ್ಕಿಟ್ಟ ಚಿನ್ನದಂತೆ ಹೊಳಪುಗೊಂಡಿತು. ರಾಜ್ಯಭಾರ ಮಾಡುತ್ತಿದ್ದ ಬ್ರಿಟಿಷರ ವಿರುದ್ಧ ಅವರು ಮಾಡಿದ ಹೋರಾಟ ಅಂದಿನ ಆಡಳಿತದ ದೃಷ್ಟಿಯಿಂದ ಕಾನೂನುಬಾಹಿರ ನಡವಳಿಕೆಯೇ ಆಗಿತ್ತು. ಆದರೂ ಒಂದು ಮಹಾನ್ ಉದ್ದೇಶಕ್ಕಾಗಿ ಅವರು ಮಾಡಿದ ಹೋರಾಟದಿಂದ ಜೈಲು ಸೇರುವಂತಾದರೂ ಜನಸಾಮಾನ್ಯರ ಮೆಚ್ಚುಗೆಯನ್ನು ಪಡೆದಿತ್ತು, ರಾಷ್ಟ್ರಾಭಿಮಾನದ ಸಂಗತಿಯಾಗಿತ್ತು; ನಿಸ್ವಾರ್ಥಪರ ತ್ಯಾಗದ ಪ್ರತೀಕವಾಗಿತ್ತು.

ಸ್ವಾತಂತ್ರಪೂರ್ವಕಾಲಕ್ಕೂ ಸ್ವಾತಂತ್ರೋತ್ತರಕಾಲಕ್ಕೂ ಮೂಲಭೂತವಾಗಿ ಒಂದು ವ್ಯತ್ಯಾಸವಿದೆ. ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಮೊದಲು ಜೈಲಿಗೆ ಹೋಗಿ ನಂತರ ಮಂತ್ರಿಗಳಾದರೆ, ಸ್ವಾತಂತ್ರೋತ್ತರ ಭಾರತದಲ್ಲಿ ಮೊದಲು ಮಂತ್ರಿಗಳಾಗಿ ನಂತರ ಜೈಲು ಸೇರುತ್ತಿದ್ದಾರೆ. ತಿಂದದ್ದನ್ನು ಜೀರ್ಣಿಸಿಕೊಳ್ಳಲಾರದೆ ಸಿಕ್ಕಿಬೀಳುತ್ತಿದ್ದಾರೆ; ಸಾಲು ಸಾಲಾಗಿ ಜೈಲಿಗೆ ಹೋಗಿ ಕಂಬಿಗಳ ಹಿಂದೆ ಕುಳಿತು ಕಣ್ಣೀರು ಸುರಿಸುತ್ತಿದ್ದಾರೆ! ವಿಷಾದದ ಸಂಗತಿಯೆಂದರೆ ಹೀಗೆ ಜೈಲಿಗೆ ಹೋಗುವವರ ಬಗ್ಗೆ ಕಣ್ಣೀರು ಸುರಿಸುವ ಜನರೂ ಇದ್ದಾರೆ. ಅದೆಲ್ಲಾ ರಾಜಕೀಯ ಪ್ರೇರಿತ, ಸ್ವಾರ್ಥಪೂರಿತ.

ಆರೋಪ ಹೊತ್ತವನು ಅಪರಾಧಿ ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸಬೇಕಾದುದು ನ್ಯಾಯಾಲಯ. ವಿಚಾರಣೆಯ ಹಂತದಲ್ಲಿ ಜೈಲಿಗೆ ಹೋದವರ ಮೇಲಿರುವ ಆರೋಪ ಸಾಬೀತಾಗುವ ಮೊದಲೇ ಅಗೌರವ ಭಾವನೆ ಜನಸಮುದಾಯದಲ್ಲಿ ಮೂಡುತ್ತದೆ. ನ್ಯಾಯವಾಗಿ ಅದು ಮೂಡಬೇಕಾದುದು ವಿಚಾರಣೆ ನಡೆದು ಅಪರಾಧ ಸಾಬೀತಾದ ಮೇಲೆಯೇ ಹೊರತು ಆರೋಪದ ಹಂತದಲ್ಲಿ ಅಲ್ಲ, ನ್ಯಾಯಾಲಯದಲ್ಲಿ ಅವನು ತಪ್ಪಿತಸ್ಥನೆಂದು ಸಾಬೀತಾಗುವ ತನಕ ಅವನು ಆರೋಪಿಯೇ ಹೊರತು ಅಪರಾಧಿಯಲ್ಲ ಎಂಬುದನ್ನು ಜನ ಮರೆಯುತ್ತಾರೆ. ನಿರಪರಾಧಿಯೆಂದು ಜೈಲಿನಿಂದ ವಾಪಾಸು ಬಂದ ಮೇಲೂ ಕಳಂಕ ತಪ್ಪಿದ್ದಲ್ಲ. ಹಳಿಗಳಲ್ಲಿ ಪೋಲೀಸರು ಠಾಣೆಗೆ ಎಳೆದುಕೊಂಡು ಹೋದರೆಂದರೆ ಅವಮಾನವಾಯಿತೆಂದು ಅಳುವ ಜನರಿದ್ದಾರೆ. 

ನೂರು ಜನ ಅಪರಾಧಿಗಳಿಗೆ ಶಿಕ್ಷೆ ಆಗದಿದ್ದರೂ ಪರವಾ ಇಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬುದು ನಮ್ಮ ನ್ಯಾಯಾಂಗದ ಕಾರ್ಯ ವೈಖರಿಯ ವಿಧಾಯಕ ನಿಲುವು. ಆದರೆ ನ್ಯಾಯದಾನವು ವಿಳಂಬವಾಗುವುದರಿಂದ ನ್ಯಾಯಾಲಯದ ಭೀತಿಯೇ ಬಹಳ ಜನರಿಗೆ ಇಲ್ಲದಂತಾಗಿದೆ. ಶಿಕ್ಷೆ ವಿಧಿಸಿದಾಗ ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂದು ಜನ ಉದ್ಗರಿಸುತ್ತಾರೆ. ಆದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ “ಉಪ್ಪು ತಿಂದ ಬಹಳ ಜನ ನೀರು ಕುಡಿಯುವುದೇ ಇಲ್ಲ, ಕಾನೂನಿಗೇ ನೀರು ಕುಡಿಸುತ್ತಾರೆ. ಅನಿವಾರ್ಯವಾಗಿ ಕುಡಿಯಲೇ ಬೇಕಾದ ಅತ್ಯಲ್ಪ ಜನರೂ ತುಂಬಾ ತಡವಾಗಿ ಕುಡಿಯುತ್ತಾರೆ. ಕಾನೂನಿನ ಕೈಗಳು ಬಹಳ ಉದ್ದ ಎನ್ನುತ್ತಾರೆ. ಎಷ್ಟೇ ಉದ್ದವಿದ್ದರೂ ನಿಲುಕದಷ್ಟು ದೂರ ನಿಲ್ಲುವ ಜಾಣ್ಮೆ ಬಹಳ ಜನರಿಗಿದೆ. ಎಂಥ ಘನಘೋರ ಶಿಕ್ಷೆ ಕೊಟ್ಟರೂ ಮೇಲಿನ ಕೋರ್ಟಿದೆ ನೋಡಿಕೊಳ್ಳೋಣ ಎಂಬ ಉಡಾಫೆ ಮಾತುಗಳನ್ನಾಡುತ್ತಾರೆ. ಅಪರಾಧಗಳನ್ನು ಬೇರೆಯವರು ಮಾಡದಿರಲಿ, ಅಪರಾಧ ಮಾಡುವವರಲ್ಲಿ ಭೀತಿ ಮೂಡಲಿ ಎಂಬುದು ಶಿಕ್ಷೆ ವಿಧಿಸುವುದರ ಹಿಂದಿರುವ ಉದ್ದೇಶ. ಆದರೆ ಜನರಲ್ಲಿ ಅಂತಹ ಅಪರಾಧಗಳನ್ನು ಮಾಡಬಾರದು ಎಂಬ ಮನೋಭಾವ ಮೂಡುವುದರ ಬದಲು ಶಿಕ್ಷೆಗೆ ಒಳಗಾದವನು ಎಡವಿದ್ದು ಎಲ್ಲಿ, ಅಕ್ರಮ ಎಸಗುವಾಗ ಹೇಗೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುದಕ್ಕೆ ಅದೊಂದು ಪಾಠ ಎಂದು ಭಾವಿಸುವವರಿದ್ದಾರೆ. Nobody is above law. ಕಾನೂನಿಗೆ ಯಾರೂ ಅತೀತರಲ್ಲವೆಂಬುದೇನೋ ನಿಜ. ಆದರೆ ನ್ಯಾಯಾಲಯ ಶಿಕ್ಷೆ ವಿಧಿಸಿದರೆ ಅದು ಇತರರಿಗೆ ಎಚ್ಚರಿಕೆಯ ಗಂಟೆಯಾಗುತ್ತಿದೆಯೇ? ಅಂತಹ ಅಪರಾಧಗಳನ್ನು ಮಾಡಬಾರದು ಎಂದು ಎಷ್ಟು ಜನ ಸಾರ್ವಜನಿಕ ಬದುಕಿನಲ್ಲಿ ಪರಿಶುದ್ಧ ಜೀವನ ನಡೆಸಲು ಮುಂದಾಗುತ್ತಾರೆ, ಕಾನೂನು ಬಾಹಿರ ನಡವಳಿಕೆಗಳಿಂದ ದೂರ ಸರಿಯುವ ಸಂಕಲ್ಪ ಮಾಡುತ್ತಾರೆ? ಅದರ ಬದಲು ಕಾನೂನಿನ ಕಣ್ಣುಗಳಿಗೆ ಮಣ್ಣೆರಚಿ ಕುತಂತ್ರ ಮಾಡಿ ತಪ್ಪಿಸಿಕೊಳ್ಳುವುದು ಹೇಗೆಂದು ಯೋಚನೆ ಮಾಡುವವರೇ ಹೆಚ್ಚು.

ಕಾನೂನು ಧರ್ಮದ ಒಂದು ಭಾಗವೇ ಆಗಿದೆ. ಆದರೆ ಅನೇಕ ಸಂದರ್ಭಗಳಲ್ಲಿ ಕಾನೂನು ಮತ್ತು ಧರ್ಮಗಳ ಮಧ್ಯೆ ಸಂಘರ್ಷವೇರ್ಪಡುತ್ತದೆ. ಕೆಲವೊಮ್ಮೆ ಕಾನೂನು ಬಾಹಿರ ನಡವಳಿಕೆಗಳು ಧರ್ಮಬಾಹಿರವಾಗದೇ ಇರಬಹುದು. ಅದೇ ರೀತಿ ಧರ್ಮಬಾಹಿರ ನಡವಳಿಕೆಗಳು ಕಾನೂನುಬಾಹಿರ ಎನಿಸದೇ ಇರಬಹುದು. ಆಗಾಗ ಧರ್ಮಬಾಹಿರ ನಡವಳಿಕೆಗಳನ್ನು ಕಾನೂನುಬದ್ಧಗೊಳಿಸುವ ಪ್ರಯತ್ನಗಳೂ ನಡೆಯುವುದುಂಟು. ಇದಕ್ಕೆ ಇತ್ತೀಚಿನ ಒಳ್ಳೆಯ ಉದಾಹರಣೆಯೆಂದರೆ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಬೇಕೆಂಬ ಸರಕಾರದ ಮುಂದಿರುವ ಬಹು ಚರ್ಚಿತವಾದ ಪ್ರಸ್ತಾವನೆ. ಅಕ್ರಮ-ಸಕ್ರಮ ಎಂಬ ಯೋಜನೆಯನ್ನೂ ಸರಕಾರಗಳು ತಮ್ಮ ಸಾಧನೆಯಾಗಿ ಹೇಳಿಕೊಳ್ಳುತ್ತವೆ! ಹಾಗೆ ಮಾಡಿ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತವೆ. ಜನರು ಮಟಕಾ ಆಟ ಆಡಿದರೆ ಶಿಕ್ಷಾರ್ಹ ಅಪರಾಧ. ಅದೇ ಸರಕಾರದ ಲಾಟರಿ ಟಿಕೆಟ್ ತೆಗೆದುಕೊಂಡರೆ ಅಪರಾಧವಲ್ಲ. ಧರ್ಮದ ದೃಷ್ಟಿಯಿಂದ ನೋಡುವುದಾದರೆ ಎರಡೂ ಅಪರಾಧಗಳೇ.

ಒಂದು ಒಳ್ಳೆಯ ಉದ್ದೇಶಕ್ಕಾಗಿ ಹೋರಾಟ ನಡೆಸಿ ಜೈಲಿಗೆ ಹೋದವರನ್ನು ಅವರ ಅಭಿಮಾನಿಗಳು ಕಾಣಲು ಹೋದರೆ ತಪ್ಪೇನೂ ಇಲ್ಲ. ಆದರೆ ಅಪರಾಧಿಯೆಂದು ನ್ಯಾಯಾಲಯ ನಿರ್ಣಯಿಸಿ ಜೈಲಿಗೆ ತಳ್ಳಿದ ಮೇಲೂ ಆತನು ಮಾಡಿದ ದುಷ್ಕೃತ್ಯಗಳ ಅರಿವು ಇನ್ನೂ ಸಹ ಅನುಕಂಪ ವ್ಯಕ್ತಪಡಿಸುವವರನ್ನು ಸತ್ಯ ಪಕ್ಷಪಾತಿಗಳು ಎನ್ನಲಾದೀತೆ? ಅಂಧಾಭಿಮಾನ, ವಿಚಾರಶಕ್ತಿಯ ಕೊರತೆಗಳೇ ಇವೆಲ್ಲಕ್ಕೂ ಕಾರಣ. ದೇಶದ ಹಿತಕ್ಕಾಗಿ ಜೈಲಿಗೆ ಹೋದ ಗಾಂಧೀಜಿ ತಮ್ಮ ತ್ಯಾಗಭಾವನೆಯಿಂದ ರಾಷ್ಟ್ರಪಿತ ಎಂಬ ಗೌರವಕ್ಕೆ ಭಾಜನರಾದರು. ಜೈಲುಗಳನ್ನು ಜನ ಈಗಲೂ ದೇವಾಲಯಗಳಂತೆ ಪೂಜ್ಯಭಾವನೆಯಿಂದ ಕಾಣುತ್ತಾರೆ. ಅಂತಹ ದೇಶಭಕ್ತರ ಸಂತತಿ ಸಾವಿರವಾಗಲಿ ಎಂಬುದು ಗಾಂಧಿ ಜಯಂತಿ ದಿನದ ಹಾರೈಕೆಯಾಗಲಿ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 2.10.2014