ಅಡಕೆಗೆ ಹೋದ ಮಾನ…

  •  
  •  
  •  
  •  
  •    Views  

ಸಿಡ್ನಿ ವಿಮಾನ ನಿಲ್ದಾಣದಿಂದ ಹೊರಟ ನಮ್ಮ ಕಾರು ಮನೆ ಮುಟ್ಟಲು ಇನ್ನೂ ಒಂದು ಗಂಟೆ ಇತ್ತು. ಕಾರಿನ ಮುಂಭಾಗದಲ್ಲಿದ್ದ ಜಿ.ಪಿ.ಎಸ್. (Global Positioning System) ತನ್ನ ಕಿರುತೆರೆಯಲ್ಲಿ ನಾವು ಹೋಗುತ್ತಿರುವ ಮಾರ್ಗದ ಹೆಸರು, ಕಾರಿನ ವೇಗ, ತಲುಪುವ ವೇಳೆ ಮತ್ತು ದೂರ ಎಲ್ಲವನ್ನೂ ಕರಾರುವಾಕ್ಕಾಗಿ ತೋರಿಸುತ್ತಿತ್ತು. ಕಾರು ಮುಂದೆ ಮುಂದೆ ಓಡುತ್ತಿದ್ದಂತೆ “Take the first exit, go straight, turn left, turn right” ಎಂದೆಲ್ಲಾ ಅದೇ ಹೇಳುತ್ತಿತ್ತು. ಯಾವ ದಾರಿಯಲ್ಲಿ ಹೋಗಬೇಕೆಂದು ಯಾರನ್ನೂ ಕೇಳುವ ಪ್ರಮೇಯವಿರಲಿಲ್ಲ; ಕೇಳಲು ಜನರೂ ಅಷ್ಟಾಗಿ ಆ ದೇಶಗಳ ದಾರಿಯಲ್ಲಿ ಸಿಗುವುದಿಲ್ಲ. ನಾವು ಹೋಗಬೇಕೆಂದಿರುವ ಸ್ಥಳದ ವಿಳಾಸವನ್ನು ಅದರಲ್ಲಿ ನಮೂದಿಸಿದರೆ ಸಾಕು ಕೆಲವೇ ಸೆಕೆಂಡುಗಳಲ್ಲಿ ಅದು ನಾವಿರುವ ತಾಣವನ್ನು ಗುರುತಿಸಿ ಯಾವ ದಾರಿಯಲ್ಲಿ ಹೋಗಬೇಕೆಂದು ಸ್ಪಷ್ಟವಾದ ಮಾರ್ಗದರ್ಶನ ಮಾಡುತ್ತದೆ. ಅದರ ಅವಶ್ಯಕತೆ ನಮಗೆ ಇರಲಿಲ್ಲ. ಕಾರನ್ನು ನಡೆಸುತ್ತಿದ್ದ ಅಲ್ಲಿಯ ನಿವಾಸಿಗಳಾದ ಓಂಕಾರಸ್ವಾಮಿಯವರಿಗೆ ತಮ್ಮ ಮನೆಯ ದಾರಿ ಗೊತ್ತಿದ್ದರೂ ಅಭ್ಯಾಸ ಬಲದಿಂದ ಅದನ್ನು ಹಾಕಿಕೊಂಡಿದ್ದರು. ಒಂದು ಕುತೂಹಲಕಾರಿ ಸಂಗತಿಯೆಂದರೆ ಅದರಲ್ಲಿ ತಮ್ಮ ಮನೆಯ ವಿಳಾಸವನ್ನು ಖಾಯಂ ಆಗಿ ನಮೂದಿಸಲು ಬರುತ್ತಿದ್ದರೂ ಆ ಸೌಲಭ್ಯವನ್ನು ಅವರು ಬಳಸಿಕೊಂಡಿರಲಿಲ್ಲ. ಕಾರಣ ಕಾರನ್ನು ಎಲ್ಲಿಯಾದರೂ ಪಾರ್ಕ್ ಮಾಡಿದಾಗ ಜಾಣ ಕಳ್ಳರು ಆ ಉಪಕರಣವನ್ನು ಕದ್ದು ಕಾರಿನ ಮಾಲೀಕರ ಮನೆಯನ್ನು ಸುಲಭವಾಗಿ ಪತ್ತೆ ಹಚ್ಚಿ ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ದೋಚಿದ ಪ್ರಸಂಗಗಳು.

ಇಂತಹ ಉಪಕರಣವನ್ನು ವಿಜ್ಞಾನಿಗಳು ಕಂಡು ಹಿಡಿಯಲು ಮನುಷ್ಯನ ಅವಶ್ಯಕತೆ ಕಾರಣವೋ ಅಥವಾ ಅವನ ಬುದ್ಧಿಚಾತುರ್ಯ ಕಾರಣವೋ ಹೇಳಲಾಗದು.“Necessity is the mother of invention” ಎನ್ನುತ್ತಾರೆ. ಅವಶ್ಯಕತೆಗಳು ಹೆಚ್ಚಿದಂತೆ ಸೌಲಭ್ಯಗಳ ಶೋಧನೆ ಹೆಚ್ಚುತ್ತಾ ಹೋಗುತ್ತದೆಯೋ, ಸೌಲಭ್ಯಗಳು ಹೆಚ್ಚಿದಂತೆ ಅವಶ್ಯಕತೆಗಳ ತುಡಿತ ಹೆಚ್ಚುತ್ತಾ ಹೋಗುತ್ತದೆಯೋ ಎಂದು ಕೇಳಿದರೆ ನೀವು ಏನು ಹೇಳಬಲ್ಲಿರಿ? ನಮ್ಮ ದೃಷ್ಟಿಯಲ್ಲಿ ಅವರೆಡೂ ನಿಜ. ವಿಜ್ಞಾನದ ಆವಿಷ್ಕಾರದಿಂದಾಗಿ ಹಿಂದಿನ ರಾಜಮಹಾರಾಜರುಗಳಿಗೆ ಇಲ್ಲದ ಸೌಲಭ್ಯ ಇಂದು ಜನಸಾಮಾನ್ಯರಿಗೆ ದೊರೆಯುವಂತಾಗಿದೆ. ಸೌಲಭ್ಯಗಳು ಇಲ್ಲದೇ ಇದ್ದಾಗ ಮನುಷ್ಯ ಹೇಗೋ ಹೊಂದಿಕೊಂಡು ಜೀವನ ನಡೆಸುತ್ತಿದ್ದ. ಸೌಲಭ್ಯ ಇದೆಯೆಂದು ತಿಳಿದ ಮೇಲೆ ಅದಕ್ಕಾಗಿ ಹಾತೊರೆಯುತ್ತಾನೆ. ಅದು ಸಿಗದೇ ಹೋದರೆ ಗೊಣಗುತ್ತಾನೆ. ಆ ಸೌಲಭ್ಯ ಸಿಗದ ಕಾರಣ ಉಂಟಾಗುವ ತೊಂದರೆಗಿಂತ ಅದನ್ನು ಪಡೆಯಲು ಸಾಧ್ಯವಾಗದ ಕಾರಣದಿಂದ ಉಂಟಾಗುವ ಮಾನಸಿಕ ಕ್ಲೇಶವೇ ಜಾಸ್ತಿ. ಇಂತಹ ಉಪಕರಣಗಳು ಮೊದಮೊದಲು ವ್ಯಕ್ತಿಯ ಅಂತಸ್ತಿನ ಮಾನದಂಡಗಳಾಗಿ ಕಂಡುಬಂದರೆ ಕ್ರಮೇಣ ಇವುಗಳನ್ನು luxury ಎನ್ನುವುದಕ್ಕಿಂತ ನವನಾಗರಿಕ ಸಮಾಜದಲ್ಲಿ ಅನಿವಾರ್ಯ ಬಳಕೆಯ ವಸ್ತುಗಳು ಎಂಬಂತಾಗಿದೆ.

ಓಂಕಾರಸ್ವಾಮಿ ಕಾರನ್ನು ಮುನ್ನಡೆಸಿದಂತೆ ನಮ್ಮ ಸಂಭಾಷಣೆಯೂ ಮುನ್ನಡೆದಿತ್ತು. ದಾರಿಯುದ್ದಕ್ಕೂ ಅಲ್ಲಲ್ಲಿ ಟ್ರಾಫಿಕ್ ಲೈಟುಗಳು. ಕೆಂಪುದೀಪ ಹತ್ತಿದಾಗ ಕಾರು ನಿಲ್ಲುತ್ತಿತ್ತೇ ಹೊರತು ನಮ್ಮ ಸಂಭಾಷಣೆ ಮಾತ್ರ ನಿಲ್ಲುತ್ತಿರಲಿಲ್ಲ. ಆಸ್ಟ್ರೇಲಿಯಾದ ಪೋಲೀಸರು ಬಹಳ ಕಟ್ಟುನಿಟ್ಟು. ದೇಶದ ಪ್ರಧಾನ ಮಂತ್ರಿಯೇ ಇರಲಿ, ನ್ಯಾಯಾಧೀಶರೇ ಇರಲಿ, ಯಾರು ಎಷ್ಟೇ ದೊಡ್ಡವರಿರಲಿ ರಸ್ತೆಯ ನಿಯಮಗಳನ್ನು ಪಾಲಿಸದೇ ಇದ್ದರೆ ಅವರಿಗೆ ದಂಡ ವಿಧಿಸಲು ಇಲ್ಲಿಯ ಪೋಲೀಸರು ಹಿಂಜರಿಯುವುದಿಲ್ಲ. ಇತ್ತೀಚೆಗೆ ಇಲ್ಲಿ ಇಡೀ ದೇಶದ ಗಮನ ಸೆಳೆದ ಒಂದು ಅಪರೂಪದ ಘಟನೆ. ಅದಕ್ಕೆ ಮುಂಚೆ ಇಲ್ಲಿಯ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಕೆಲವು ಮಾತುಗಳು. ನಮ್ಮ ದೇಶದಲ್ಲಿರುವಂತೆ ಇಲ್ಲಿಯೂ ವಿವಿಧ ದರ್ಜೆಯ ನ್ಯಾಯಾಲಯಗಳು ಇವೆ. ಈ ದೇಶದ ವರಿಷ್ಠ ನ್ಯಾಯಾಲಯವನ್ನು ನಮ್ಮ ದೇಶದಲ್ಲಿರುವಂತೆ Supreme Court ಎಂದು ಕರೆಯುವುದಿಲ್ಲ, High Court ಎಂದು ಕರೆಯುತ್ತಾರೆ. ಆಯಾಯ ರಾಜ್ಯ/ಪ್ರಾಂತ್ಯಗಳಲ್ಲಿರುವ ನ್ಯಾಯಾಲಯಗಳನ್ನು Federal Courts/Supreme Courts ಎಂದು ಕರೆಯುತ್ತಾರೆ. ಅವೆಲ್ಲವುಗಳಿಗಿಂತ ಮೇಲ್ಪಟ್ಟ ಈ ದೇಶದ ಅತ್ಯುನ್ನತ ನ್ಯಾಯಾಲಯವೇ ಹೈಕೋರ್ಟ್. 1903 ರಲ್ಲಿ ಸ್ಥಾಪಿತಗೊಂಡ ಈ ದೇಶದ ಶ್ರೇಷ್ಠ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶರೂ ಒಳಗೊಂಡಂತೆ ಆರಂಭದಲ್ಲಿ ಮೂವರು ನ್ಯಾಯಾಧೀಶರಿದ್ದರು. 1946 ರಿಂದ ಇತ್ತೀಚೆಗೆ ನ್ಯಾಯಾಧೀಶರ ಸಂಖ್ಯೆಯನ್ನು ಏಳಕ್ಕೆ ಏರಿಸಲಾಗಿದೆ. ಅವರಲ್ಲಿ ಈಗ ನಾಲ್ವರು ಪುರುಷರೂ, ಮೂವರು ಮಹಿಳೆಯರೂ ಇರುವುದು ಒಂದು ವಿಶೇಷ. ಶ್ರೇಷ್ಠ ನ್ಯಾಯಾಲಯವು ದೇಶದ ರಾಜಧಾನಿಯಾದ ಕ್ಯಾನ್ ಬೆರಾ (Canberra) ದಲ್ಲಿ ಇದ್ದರೂ ತಿಂಗಳಿಗೊಮ್ಮೆ ಪ್ರಮುಖ ನಗರಗಳಾದ ಸಿಡ್ನಿ ಮತ್ತು ಮೆಲ್ಬೋರ್ನ್ ಗಳಲ್ಲಿ ತನ್ನ ಕಾರ್ಯಕಲಾಪಗಳನ್ನು ನಡೆಸುತ್ತದೆ. ಕೆಲವೊಮ್ಮೆ ಅಡಿಲೇಡ್, ಬ್ರಿಸ್ ಬೇನ್, ಪರ್ತ್ ಮುಂತಾದ ಇನ್ನಿತರ ಪ್ರಮುಖ ನಗರಗಳೊಂದಿಗೂ ವೀಡಿಯೋ ಲಿಂಕ್ ಮುಖಾಂತರ ವಿಚಾರಣೆಗಳು ನಡೆಯುತ್ತವೆ. 

ಅಪರಾಧಿಗಳಿಗೆ ಶಿಕ್ಷೆಯನ್ನು ವಿಧಿಸುವ ದೊಡ್ಡ ಸ್ಥಾನದಲ್ಲಿದ್ದ ದೇಶದ ವರಿಷ್ಠ ನ್ಯಾಯಾಲಯದ ನ್ಯಾಯಮೂರ್ತಿಗಳೊಬ್ಬರು ಒಂದು ಸಣ್ಣ ತಪ್ಪನ್ನು ಮಾಡಿ ಪೋಲೀಸರಿಗೆ ಸಿಕ್ಕಿಬಿದ್ದು 2 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಯಿತು. ಅವರ ಹೆಸರು ನ್ಯಾಯಮೂರ್ತಿ ಮಾರ್ಕುಸ್ ಐನ್ಫೆಲ್ಡ್ (Markus Einfeld). ಆಸ್ಟ್ರೇಲಿಯಾದಲ್ಲಿ ತುಂಬಾ ಹೆಸರಾಂತ ನ್ಯಾಯಾಧೀಶರಾಗಿದ್ದ ಎಪ್ಪತ್ತು ವರ್ಷ ವಯಸ್ಸಿನ ಈ ಹಿರಿಯ ನ್ಯಾಯಮೂರ್ತಿಗಳು ಬ್ರಿಟಿಷ್ ರಾಣಿಯ ಸಲಹೆಗಾರರಾಗಿದ್ದರು. 2002 ರಲ್ಲಿ ವಿಶ್ವ ರಾಷ್ಟ್ರಸಂಸ್ಥೆಯ ಶಾಂತಿ ಪ್ರಶಸ್ತಿ ಪಡೆದಿದ್ದರು. ಕೆಲವು ವರ್ಷಗಳ ಹಿಂದೆ ಶ್ರೇಷ್ಠ ನ್ಯಾಯಮೂರ್ತಿಗಳಾಗಿ ನಿವೃತ್ತರಾಗಿದ್ದರೂ ಈ ದೇಶದಲ್ಲಿನ ನಿರಾಶ್ರಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಿಶೇಷ ಅನುಭವ ಹಾಗೂ ಪರಿಣತಿಯನ್ನುಳ್ಳ ಇವರನ್ನು ಬಹಳ ಮುಖ್ಯವಾದ ಕೇಸುಗಳ ವಿಚಾರಣೆಗೆಂದು ಪುನಃ ಸೇವೆಯ ಮೇಲೆ ತೆಗೆದುಕೊಳ್ಳಲಾಗಿತ್ತು. ನ್ಯಾಯಾಲಯದ ಖರ್ಚಿನಲ್ಲಿ ಒಬ್ಬ ಚಾಲಕನನ್ನು ನೇಮಿಸಿಕೊಂಡು ಗೌರವಯುತವಾಗಿ ಹಿಂದುಗಡೆ ಸೀಟಿನಲ್ಲಿ ಕುಳಿತುಕೊಂಡು ಪ್ರಯಾಣಿಸಬಹುದಾಗಿದ್ದ ನ್ಯಾಯಮೂರ್ತಿಗಳು ಸ್ವತಃ ತಮ್ಮ ಕಾರನ್ನು ನಡೆಸುತ್ತಿದ್ದರು. ಅವರು ತಮ್ಮ ಇಳಿ ವಯಸ್ಸಿನಲ್ಲಿ ಮಾಡಿದ ತಪ್ಪೆಂದರೆ ಒಂದು ದಿನ ತಮ್ಮ ಕಾರನ್ನು ವೇಗವಾಗಿ ಓಡಿಸಿದ್ದು. ದಾರಿಯಲ್ಲಿದ್ದ  Speed Camera ದಲ್ಲಿ ಅವರ ಕಾರು ವೇಗಮಿತಿಗಿಂತ 10 ಕಿ.ಮೀ ಹೆಚ್ಚಿನ ವೇಗದಲ್ಲಿ ಓಡುತ್ತಿದ್ದುದು ದಾಖಲಾಗಿತ್ತು. ಇಷ್ಟು ಸಣ್ಣ ತಪ್ಪಿಗಾಗಿ ಅವರಿಗೆ 2 ವರ್ಷಗಳ ಜೈಲುಶಿಕ್ಷೆಯೇ ಎಂದು ನಿಮಗೆ ಮರುಕ ಉಂಟಾಗಬಹುದು. ಈ ಪ್ರಕರಣದ ಪೂರ್ಣ ವಿವರಗಳನ್ನು ಗಮನಿಸಿದಾಗ “ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ” ಎಂಬ ಕನ್ನಡದ ಗಾದೆಮಾತು ನೆನಪಿಗೆ ಬರುತ್ತದೆ.

ನ್ಯಾಯಮೂರ್ತಿಗಳು ತಮ್ಮ ಕಾರನ್ನು ವೇಗವಾಗಿ ಓಡಿಸುತ್ತಿದ್ದ ಆರೋಪದ ಮೇಲೆ ಪೋಲೀಸರು ನಿಯಮಾನುಸಾರ ಅವರಿಗೆ 77 ಡಾಲರ್ ದಂಡ ವಿಧಿಸಿದರು. ಮರುಮಾತನಾಡದೆ ದಂಡದ ಹಣವನ್ನು ಕಟ್ಟಿದ್ದರೆ ಆಕಾಶವೇನೂ ಕಳಚಿ ಬೀಳುತ್ತಿರಲಿಲ್ಲ. ಅವಸರದಲ್ಲಿ ಇಂತಹ ತಪ್ಪುಗಳು ಅನೇಕರಿಂದ ಆಗುತ್ತವೆ. ಆಸ್ಟ್ರೇಲಿಯಾ ಸರಕಾರಕ್ಕೆ ಹೆಚ್ಚಿನ ಆದಾಯ ಬರುವ ಬಾಬುಗಳಲ್ಲಿ ಇದೂ ಒಂದು. ದಂಡ ಕಟ್ಟಿದ್ದರೆ ಅವರ ಗೌರವಕ್ಕೆ ಧಕ್ಕೆಯೇನೂ ಆಗುತ್ತಿರಲಿಲ್ಲ. ಆದರೆ ನ್ಯಾಯಮೂರ್ತಿಗಳು ಆ ದಿನ ಆ ಕಾರನ್ನೇ ಓಡಿಸಿಲ್ಲವೆಂದೂ ತಮ್ಮ ಅತಿಥಿಯಾಗಿ ಬಂದಿದ್ದ ಅಮೇರಿಕೆಯ ಪ್ರೊಫೆಸರ್‌ರವರಿಗೆ ಓಡಾಡಲು ತಮ್ಮ ಕಾರನ್ನು ಕೊಟ್ಟಿದ್ದಾಗಿ ವಿವರಣೆ ನೀಡಿದರು. ಪೋಲೀಸರು ಅಲ್ಲಿಗೇ ಸುಮ್ಮನಾಗಲಿಲ್ಲ. ಅವರು ಯಾರೆಂದು ಹೆಸರನ್ನು ಕೇಳಿ ಅಮೇರಿಕೆಯ ಆ ಪ್ರೊಫೆಸರ್‌ರವರ ಜನ್ಮಕುಂಡಲಿಯನ್ನು ಜಾಲಾಡಿದರು. ಆಗ ತಿಳಿದುಬಂದ ಸಂಗತಿಯೆಂದರೆ ಅಮೇರಿಕೆಯ ಆ ಪ್ರೊಫೆಸರ್ ಆ ವೇಳೆಗೆ ತೀರಿಕೊಂಡು ಮೂರು ವರ್ಷಗಳಾಗಿದ್ದವು! ಅವರಲ್ಲ, ಅದೇ ಹೆಸರಿನ ಬೇರೊಬ್ಬ ವ್ಯಕ್ತಿ ಎಂದು ನ್ಯಾಯಮೂರ್ತಿಗಳು ಸಬೂಬು ಹೇಳಿ ಆ ದಿನ ತಮ್ಮ ಸ್ವಂತ ಕಾರನ್ನು ಬಳಸಿಯೇ ಇಲ್ಲವೆಂದೂ, 94 ವರ್ಷಗಳ ತಮ್ಮ ವೃದ್ಧ ತಾಯಿಯ ಟೊಯೊಟಾ ಕಾರನ್ನು ಬಳಸಿದ್ದಾಗಿಯೂ ಹೇಳಿಕೆ ನೀಡಿದರು. ಪೋಲೀಸರು ಅದನ್ನೂ ವಿವರವಾಗಿ ತನಿಖೆ ನಡೆಸಿದರು. ನ್ಯಾಯಮೂರ್ತಿಗಳ ತಾಯಿಯ ಕಾರು ಆ ದಿನವೆಲ್ಲಾ ಗ್ಯಾರೇಜಿನಲ್ಲಿಯೇ ಇದ್ದು ಹೊರಗೆ ಬಂದೇ ಇಲ್ಲವೆಂದು ಗ್ಯಾರೇಜಿನ Security Camera ದಲ್ಲಿ ದಾಖಲಾಗಿರುವುದು ಪತ್ತೆಯಾಯಿತು. ಹೀಗೆ ಸುಳ್ಳಿಗೆ ಸುಳ್ಳು ಪೋಣಿಸಿ ತಮ್ಮನ್ನು ಸಮರ್ಥನೆ ಮಾಡಿಕೊಳ್ಳಲು ವಿಫಲ ಪ್ರಯತ್ನ ನಡೆಸಿದ ನ್ಯಾಯಾಧೀಶರು ಅವರ ಕೈಕೆಳಗಿನ ನ್ಯಾಯಾಧೀಶರಿಂದಲೇ 2 ವರ್ಷಗಳ ಜೈಲುಶಿಕ್ಷೆ ಅನುಭವಿಸುವ ವಿಪರೀತ ಸ್ಥಿತಿಯನ್ನು ತಂದುಕೊಂಡರು. ನ್ಯಾಯಾಲಯ ಶಿಕ್ಷೆ ವಿಧಿಸಿದ್ದು ವೇಗಮಿತಿಯನ್ನು ಅತಿಕ್ರಮಿಸಿದ್ದಕ್ಕಿಂತ ಹೆಚ್ಚಾಗಿ ಸತ್ಯಸಂಧರಾಗಿರಬೇಕಾಗಿದ್ದ ಹಿರಿಯ ನ್ಯಾಯಾಧೀಶರು ಸುಳ್ಳಿನ ಸರಮಾಲೆಗಳನ್ನು ಪೋಣಿಸಿದ್ದಕ್ಕಾಗಿ! ಹತ್ತು ಕಿ.ಮೀ. ಹೆಚ್ಚಿನ ವೇಗವಾಗಿ ಹೋದ ನ್ಯಾಯಾಧೀಶರಿಂದ ಯಾರ ಪ್ರಾಣಕ್ಕೂ ಕುತ್ತು ಬರುತ್ತಿರಲಿಲ್ಲ ಎಂದು ಕೆಲವರ ವಾದವಾದರೆ, ಸತ್ಯಕ್ಕೆ ಅಪಚಾರವನ್ನು ಮಾಡಿ ತಮ್ಮ ವೃತ್ತಿಗೆ ಕಳಂಕವನ್ನು ತಂದರೆಂದು ಮತ್ತೆ ಕೆಲವರ ವಾದ. “ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ” ಎಂದು ಸಾಕ್ಷಿದಾರರಿಂದ ಪ್ರಮಾಣೀಕರಿಸ ಬಯಸುವ ನ್ಯಾಯಾಧೀಶರು ಹೀಗೇಕೆ ಮಾಡಿದರು ಎಂಬುದು ಆಸ್ಟ್ರೇಲಿಯಾದ ನಾಗರಿಕರಿಗೆ ಬಿಡಿಸಲಾಗದ ಒಗಟಾಗಿದೆ.

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದಾಗ ಈ ದೇಶ ಹೀಗೆ, ನಮ್ಮ ದೇಶ ಏಕೆ ಹಾಗೆ? ಎಂಬ ನೂರಾರು ಪ್ರಶ್ನೆಗಳು ಉದ್ಭವಿಸುತ್ತವೆ. ಸಾಂಸ್ಕೃತಿಕ ಭಿನ್ನತೆ, ಜನರ ಮನೋಧರ್ಮ ಎಲ್ಲವೂ ವಿಭಿನ್ನವಾಗಿ ಕಾಣಿಸುತ್ತವೆ. ಆಸ್ಟ್ರೇಲಿಯಾದ ರಾಜಕೀಯಕ್ಕೂ ಕರ್ನಾಟಕದ ರಾಜಕೀಯಕ್ಕೂ ಕೆಲವೊಂದು ಹೋಲಿಕೆ ವ್ಯತ್ಯಾಸಗಳು ಇದ್ದಂತೆ ತೋರುತ್ತದೆ. ಇಲ್ಲಿಯ ಪಾರ್ಲಿಮೆಂಟ್ ಚುನಾವಣೆ ಮೂರು ವರ್ಷಕ್ಕೊಮ್ಮೆ ನಡೆದರೆ, ವಿಧಾನಸಭೆಯ ಚುನಾವಣೆ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವನ್ನು ನಿಯಂತ್ರಿಸುವ ಯಾವ ಅಧಿಕಾರವೂ ಇಲ್ಲ. ಈ ದೇಶದ ರಾಜಧಾನಿ ಮೊದಲು ಮೆಲ್ಬೋರ್ನ್ ನಗರವಾಗಿತ್ತು. ನಂತರ ಸಿಡ್ನಿಗೆ ಸ್ಥಳಾಂತರಿಸಬೇಕೆಂದು ಬಯಸಿದಾಗ ವಿರೋಧ ಬಂದು ಎರಡೂ ನಗರಗಳ ಮಧ್ಯೆ ಕ್ಯಾನ್ ಬೆರಾದಲ್ಲಿ ಹೊಸದಾಗಿ ಪಾರ್ಲಿಮೆಂಟ್ ಭವನ ನಿರ್ಮಾಣವಾಯಿತು. ಈ ರಾಜಧಾನಿಯಲ್ಲಿ ನೂರು ವರ್ಷಕ್ಕಿಂತ ಹಳೆಯದು ಏನೂ ಇಲ್ಲ. ಪ್ರಮುಖವಾಗಿ ಎರಡು ರಾಜಕೀಯ ಪಕ್ಷಗಳು ಇವೆ. ಲೇಬರ್ ಪಾರ್ಟಿ ಆಡಳಿತಾರೂಢ ಪಕ್ಷ. ಲಿಬರಲ್ ಪಾರ್ಟಿ ವಿರೋಧಪಕ್ಷ. ಆಡಳಿತ ಪಕ್ಷವಾದ ಲೇಬರ್ ಪಾರ್ಟಿ ಒಬ್ಬ ಪರಿಸರವಾದಿ ಪಕ್ಷದ ಸದಸ್ಯ ಮತ್ತು ಮೂವರು ಪಕ್ಷೇತರ ಸದಸ್ಯರ ಬೆಂಬಲದಿಂದ ಸರಕಾರ ರಚನೆ ಮಾಡಿದೆ. ವಿರೋಧ ಪಕ್ಷದವರೂ ಪಕ್ಷೇತರರ ಬೆಂಬಲ ಪಡೆದು ಸರಕಾರ ರಚನೆ ಮಾಡಲು ವಿಫಲ ಪ್ರಯತ್ನ ನಡೆಸಿದರು. ಆದರೆ ಇಲ್ಲಿ ನಡೆದದ್ದು ಕರ್ನಾಟಕದ ರೆಸಾರ್ಟ್ ರಾಜಕೀಯ ಅಲ್ಲ. ಪಕ್ಷೇತರರಿಗೆ ಮಂತ್ರಿಪದವಿ, ಸ್ಪೀಕರ್ ಪದವಿ ಕೊಡುವುದಾಗಿ ಹೇಳಿದರೂ ಪಕ್ಷೇತರರು ಆ ಯಾವ ಪದವಿಯನ್ನು ಪಡೆಯಲು ಒಪ್ಪದೆ ಲೇಬರ್ ಪಾರ್ಟಿಯನ್ನು ಬೆಂಬಲಿಸಿ ಸ್ವತಂತ್ರವಾಗಿಯೇ ಉಳಿದಿದ್ದಾರೆ. ಪಾರ್ಲಿಮೆಂಟಿನಲ್ಲಿ ಆಡಳಿತ ಪಕ್ಷದೊಂದಿಗಾಗಲೀ, ವಿರೋಧ ಪಕ್ಷದೊಂದಿಗಾಗಲೀ ಕುಳಿತುಕೊಳ್ಳದೆ ಪ್ರತ್ಯೇಕವಾಗಿ ಕುಳಿತುಕೊಂಡಿದ್ದಾರೆ. ಲೇಬರ್ ಪಾರ್ಟಿಯನ್ನು ಅವರು ಬೆಂಬಲಿಸಲು ಹಾಕಿದ ಷರತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಆಸ್ಪತ್ರೆಗಳನ್ನು ಮುಚ್ಚಬಾರದು, ತಾವು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಇಂತಿಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಇತ್ಯಾದಿ ಜನಹಿತ ಕಾರ್ಯಗಳೇ ಹೊರತು ಮಂತ್ರಿ ಪದವಿ, ನಿಗಮಾಗಮಗಳ ಸ್ಥಾನಮಾನ ಬೇಕೆಂಬ ಸ್ವಹಿತಕಾರ್ಯಗಳಲ್ಲ. ಈಗಿನ ಪ್ರಧಾನ ಮಂತ್ರಿಯ ಹೆಸರು ಜೂಲಿಯಾ ಗಿಲ್ಲರ್ಡ್ (Julia Gillard). ಅವಿವಾಹಿತ ಮಹಿಳೆ. ನಾವು ಪಾರ್ಲಿಮೆಂಟ್ಗೆ ಹೋದಾಗ ಆರ್ಥಿಕ ಅಭಿವೃದ್ಧಿ ಕುರಿತು ಚರ್ಚೆ ನಡೆಯುತ್ತಿತ್ತು. ಪ್ರಧಾನ ಮಂತ್ರಿ ವಿರೋಧ ಪಕ್ಷದ ನಾಯಕರ ಪ್ರಶ್ನೆಗೆ ಗಂಭೀರವಾಗಿ ಉತ್ತರ ನೀಡುತ್ತಿದ್ದರು. ಆಡಳಿತ ಪಕ್ಷದಲ್ಲಿ ಮಂತ್ರಿಗಳು ಇದ್ದಂತೆ ವಿರೋಧ ಪಕ್ಷದಲ್ಲಿಯೂ ಮಂತ್ರಿಗಳು ಇರುತ್ತಾರೆ. ಅವರನ್ನು Shadow Ministers ಎಂದು ಕರೆಯುತ್ತಾರೆ. ಈ ಛಾಯಾಮಂತ್ರಿಗಳು ಆಯಾಯ ಇಲಾಖೆಯ ವಿಷಯಗಳಲ್ಲಿ ಹೆಚ್ಚಿನ ಪರಿಣತಿಯನ್ನು ಪಡೆದವರಾಗಿದ್ದು ಅದೇ ವಿಷಯಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳುತ್ತಾರೆ. ನಾವು ಹೋದಾಗ ವಿದ್ಯಾರ್ಥಿಗಳ ದೊಡ್ಡ ಸಮುದಾಯವೇ ಅಧಿವೇಶನವನ್ನು ವೀಕ್ಷಿಸುತ್ತಿತ್ತು. ಕಣ್ಣಾರೆ ಕಂಡ ಒಂದು ಗಂಟೆಯ ಅವಧಿಯಲ್ಲಿ ಅಲ್ಲಿ ಕಾಣಿಸಿದ್ದು ಪ್ರಶ್ನೋತ್ತರಗಳ ವಾಕ್ ಸಮರವೇ ಹೊರತು ಮೈಪರಚುವಿಕೆಯಾಗಲೀ, ಮಾರಾಮಾರಿಯಾಗಲೀ ಅಲ್ಲ. ಒಂದು ಹಂತದಲ್ಲಿ ಮಾತಿನ ಚಕಮಕಿ ನಡೆದು ಸ್ಪೀಕರ್ order, order, order ಎಂದು ಆದೇಶಿಸಿದರೂ ವಿರೋಧಪಕ್ಷದವರು ಸುಮ್ಮನಾಗಲಿಲ್ಲ. ಸದನದ ಗೌರವಕ್ಕೆ ಧಕ್ಕೆ ಬರುವಂತಹ ನಿಂದಾತ್ಮಕ ಶಬ್ದಗಳನ್ನು ಉಪಯೋಗಿಸಿದರು. ಆಗ ಸ್ಪೀಕರ್ ಸಿಡಿಮಿಡಿಗೊಂಡು ಎದ್ದು ನಿಂತರು. ಸದಸ್ಯರೆಲ್ಲರೂ ಗರಬಡಿದವರಂತೆ ಸುಮ್ಮನಾದರು. ಕ್ಷಣಕಾಲ ಸದನದಲ್ಲಿ ನೀರವತೆ ಆವರಿಸಿತು. ಆ ಅಪಶಬ್ದವನ್ನು ಹಿಂತೆಗೆದುಕೊಂಡು ಸದನದ ಕ್ಷಮೆ ಯಾಚಿಸಲು ಸ್ಪೀಕರ್ ಆದೇಶಿಸಿ ಆಸೀನರಾದರು.

ಸುಮಾರು ಎರಡೂವರೆ ಕೋಟಿ ಜನಸಂಖ್ಯೆಯನ್ನು ಹೊಂದಿದ ಆಸ್ಟ್ರೇಲಿಯಾ ದೇಶದಲ್ಲಿ ಹೊರಗಿನಿಂದ ವಲಸೆ ಬಂದವರೇ ಹೆಚ್ಚು. ಸುಮಾರು ಮೂರು ಲಕ್ಷ ಜನಸಂಖ್ಯೆಯುಳ್ಳ ಭಾರತೀಯರು ಹೀಗೆ ವಲಸೆ ಬಂದವರಲ್ಲಿ ನಾಲ್ಕನೆಯ ಸ್ಥಾನದಲ್ಲಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಆಸ್ಟ್ರೇಲಿಯಾ ದೇಶದ ಪಾರ್ಲಿಮೆಂಟ್ ಭವನ ವಿದ್ಯುದ್ದೀಪಗಳಿಂದ ಜಗಮಗಿಸುತ್ತದೆಯೆಂಬ ಸಂಗತಿ ನಮ್ಮ ದೇಶದಲ್ಲಿ ಅದೆಷ್ಟು ಜನರಿಗೆ ತಿಳಿದಿದೆಯೋ ಇಲ್ಲವೋ. ಸ್ವದೇಶಕ್ಕೆ ಹಿಂತಿರುಗುವಾಗ ಮೇಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಸುಂದರವಾದ ಮಂಟಪ ಕಾಣಿಸಿತು. ಅದರ   ಮಧ್ಯೆ ಗಣೇಶ ಗೌರಿಯ ವಿಗ್ರಹಗಳನ್ನಿಟ್ಟು ಸಿಂಗರಿಸಲಾಗಿತ್ತು. ಭಾರತೀಯ ಪ್ರಯಾಣಿಕರು ತಮ್ಮ ಕೈಯಲ್ಲಿದ್ದ ನಾಣ್ಯಗಳನ್ನು ಕಾಣಿಕೆಯಾಗಿ ಗಣೇಶನಿಗೆ ಅರ್ಪಿಸಿರುವುದು ಕಾಣಿಸುತ್ತಿತ್ತು. ವಿದೇಶೀ ಪ್ರಯಾಣಿಕರ ಮಗುವೊಂದು ಗಣೇಶನ ವಿಗ್ರಹವನ್ನು ಕುತೂಹಲದಿಂದ ನೋಡುತ್ತಿತ್ತು. ಆ ಮಗು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದ ತಂದೆ ನಮ್ಮಿಂದ ಕೇಳಿ ತಿಳಿದುಕೊಂಡು ವಿವರಿಸಿದಾಗ ಮಗುವಿನ ಮುಖ ಅರಳಿತು.

ಸಹೃದಯ ಓದುಗರೇ! ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಿಂದ ವಿಮಾನ ಸ್ವದೇಶಾಭಿಮುಖವಾಗಿ ಗಗನಕ್ಕೆ ಹಾರಿದಾಗ ವಿಶಾಲವಾದ ಫೆಸಿಫಿಕ್ ಮಹಾಸಾಗರ ಪ್ರಶಾಂತವಾಗಿರುವುದು ಮತ್ತೆ ಗೋಚರವಾಗಿ ನಮ್ಮ ಮನಸ್ಸಿಗೆ ಆಹ್ಲಾದವನ್ನುಂಟುಮಾಡಿತು. ಆದರೆ ನಮ್ಮ ದೇಶಕ್ಕೆ ಸಮೀಪಿಸುತ್ತಿದ್ದಂತೆ ವಿಮಾನ ಹಿಂದೂ ಮಹಾಸಾಗರದ ಮೇಲೆ ಹಾರುತ್ತಿರುವಾಗ ಈ ಬಾರಿ ಪೈಲೆಟ್ ಕೊಟ್ಟ ಸೂಚನೆ ಬೇರೆಯದೇ ಆಗಿತ್ತು: “Ladies and Gentlemen! The catering is suspended as we are expecting a turbulent weather ahead, please fasten your seatbelts!” ಗಗನಸಖಿಯವರು ಪ್ರಯಾಣಿಕರಿಗೆ ನೀಡುತ್ತಿದ್ದ ಆಹಾರಪಾನೀಯಗಳನ್ನು ತಕ್ಷಣವೇ ನಿಲ್ಲಿಸಿ ಆಪತ್ಕಾಲೀನ ದ್ವಾರಗಳ (emergency exit) ಸಮೀಪದಲ್ಲಿ ಆಸೀನರಾದರು. ಪೈಲಟ್ ಇಂಜಿನಿಯರ್ ಬಾಗಿಲ ಬಳಿ ಕುಳಿತು ತಾಂತ್ರಿಕ ಉಪಕರಣಗಳನ್ನು ಹಿಡಿದು ಏನೋ ಮಾಡುತ್ತಿದ್ದ. ನಮ್ಮ ದೃಷ್ಟಿ ತಾಗಿದೊಡನೆ ಪರದೆಯನ್ನು ಸರಿಸಿ ಮರೆಮಾಡಿದ. ಏಕೆಂದು ಗೊತ್ತಾಗಲಿಲ್ಲ. ಸತತವಾಗಿ ಎರಡು ಗಂಟೆಗಳ ಕಾಲ ವಿಮಾನ ಪ್ರಕ್ಷುಬ್ಧ ವಾತಾವರಣದಿಂದ ಹೊರಬರದ ಕಾರಣ ಪ್ರಯಾಣಿಕರಿಗೆ ದಿಗಿಲಾಯಿತು. ಪೈಲಟ್ ನೀಡಿದ ಎಚ್ಚರಿಕೆಯ ನುಡಿಗಳಲ್ಲಿ ಹಿಂದೂಮಹಾಸಾಗರ ಅಲ್ಲೋಲ ಕಲ್ಲೋಲವಾಗಿದೆಯೆಂಬುದರ ಸೂಚನೆಯಲ್ಲದೆ ಈ ನಾಡಿನ ಪ್ರಕ್ಷುಬ್ಧ ರಾಜಕೀಯ ವಾತಾವರಣದ ಸೂಚನೆಯೂ ಇದ್ದಂತೆ ತೋರಿತು !

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 10.11.2010.