ನೈತಿಕತೆ ಮತ್ತು ಶಿಷ್ಟಾಚಾರಗಳ ತಾಕಲಾಟ

  •  
  •  
  •  
  •  
  •    Views  

ಮುಂದಿನ ಎರಡು ಆಪತ್ಕಾಲೀನ ಘಟನೆಗಳನ್ನು ಗಮನವಿಟ್ಟು ಓದಿ: ಹಡಗು ಬಿರುಗಾಳಿಗೆ ಸಿಕ್ಕು ತತ್ತರಿಸಿ ಮುಳುಗಲಾರಂಭಿಸುತ್ತದೆ. ಲೈಫ್ ಜಾಕೆಟ್ ತೊಟ್ಟುಕೊಂಡು ರಕ್ಷಣಾ ದೋಣಿಗಳನ್ನೇರಿ ಆತ್ಮರಕ್ಷಣೆ ಮಾಡಿಕೊಳ್ಳಲು ಕ್ಯಾಪ್ಟನ್ ಪ್ರಯಾಣಿಕರಿಗೆ ಸೂಚನೆ ಕೊಡುತ್ತಾನೆ. ಗಾಬರಿಗೊಂಡ ಅನೇಕ ಪ್ರಯಾಣಿಕರು ನೂಕುನುಗ್ಗಲಿನಲ್ಲಿ ಸಮುದ್ರಕ್ಕೆ ಬಿದ್ದು ಸತ್ತುಹೋಗುತ್ತಾರೆ. ಇನ್ನು ಕೆಲವರು ರಕ್ಷಣಾ ದೋಣಿಗಳನ್ನೇರಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಾರೆ. ಒಂದು ದೋಣಿಯಲ್ಲಿ ಅದರ ಕ್ಷಮತೆಗಿಂತ ಹೆಚ್ಚು ಪ್ರಯಾಣಿಕರು ಇದ್ದರು. ಅವರ ಭಾರಕ್ಕೆ ದೋಣಿಯೂ ಮುಳುಗುವ ಅಪಾಯದ ಸ್ಥಿತಿಯಲ್ಲಿತ್ತು. ಅವರಲ್ಲೊಬ್ಬ ತೀರಾ ನಿಶ್ಯಕ್ತನಾದ ರೋಗಿ ಇದ್ದ. ಕೊರೆಯುವ ಚಳಿ ಬೇರೆ. ಆ ಚಳಿಯಲ್ಲಿ ಅವನು ಬದುಕಿ ಉಳಿಯುವ ಸಾಧ್ಯತೆ ಕಡಿಮೆ. ಅವನು ಬದುಕುತ್ತಾನೋ ಸಾಯುತ್ತಾನೋ ಎಂಬುದು ಬೇರೆಯವರಿಗೆ ಮುಖ್ಯವಾಗಿರಲಿಲ್ಲ. ಅವನನ್ನು ದೋಣಿಯಿಂದ ಹೊರದೂಡಿದರೆ ಮಾತ್ರ ಉಳಿದವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಬಹುದೆಂದು ಇತರೆ ಪ್ರಯಾಣಿಕರಿಗೆ ಅನ್ನಿಸುತ್ತದೆ. ನೀವು ಆ ಪ್ರಯಾಣಿಕರಲ್ಲಿ ಒಬ್ಬರಾಗಿದ್ದರೆ ಆ ನಿಶ್ಯಕ್ತ ರೋಗಿಯನ್ನು ಸಮುದ್ರಕ್ಕೆ ಎಸೆಯಲು ಸಮ್ಮತಿಸುತ್ತೀರಾ?

ನಿಮ್ಮ ಮನೆಗೆ ರಾತ್ರಿ ಹೊತ್ತು ದರೋಡೆಕೋರರು ನುಗ್ಗುತ್ತಾರೆ. ಅದನ್ನರಿತ ನೀವು ಮತ್ತು ನಿಮ್ಮ ಮನೆಯವರೆಲ್ಲರೂ ಹೆದರಿ ಸದ್ದುಗದ್ದಲ ಮಾಡದೆ ಅಡಗುದಾಣದಲ್ಲಿ ಅವಿತುಕೊಳುತ್ತೀರಿ. ಆದರೆ ನಿಮ್ಮ ಮಗು ಅಳಲು ಆರಂಭಿಸುತ್ತದೆ. ಮಗುವನ್ನು ಹಾಗೆಯೇ ಅಳಲು ಬಿಟ್ಟರೆ ದರೋಡೆಕೋರರಿಗೆ ನೀವು ಅವಿತುಕೊಂಡಿರುವ ತಾಣದ ಸುಳಿವು ಸಿಕ್ಕು ಅವರು ಗುಂಡು ಹಾರಿಸಿ ಎಲ್ಲರನ್ನೂ ಸಾಯಿಸಿಬಿಡುತ್ತಾರೆ. ಛೇ! ನೀವು ಎಷ್ಟೇ ಪ್ರಯತ್ನಪಟ್ಟರೂ ಮಗು ಅಳುವುದನ್ನು ನಿಲ್ಲಿಸುವುದಿಲ್ಲ. ನೀವು ಬದುಕಬೇಕೆಂದರೆ ಮಗುವನ್ನು ಉಸಿರುಕಟ್ಟಿಸಿ ಸಾಯಿಸಲೇಬೇಕು. ಬೇರೆ ಮಾರ್ಗವಿಲ್ಲ, ಅಸಹಾಯಕರಾಗಿ ಉಳಿದವರಾದರೂ ಬದುಕಲೆಂದು ನಿಮ್ಮ ಮಗುವನ್ನು ನೀವೇ ಕೈಯಾರೆ ಸಾಯಿಸುತ್ತೀರಾ?

ಈ ತರಹದ ಹಲವಾರು ಸಂದಿಗ್ಧ ಸಂದರ್ಭಗಳನ್ನು ಉಲ್ಲೇಖಿಸಿ ಇದೇ ಅಂಕಣದಲ್ಲಿ ಬಹಳ ಹಿಂದೆ ಬರೆದ ನೆನಪು. ಮೇಲ್ಕಂಡ ಘಟನೆಗಳನ್ನು ಅವಲೋಕಿಸಿದಾಗ ಕಂಡುಬರುವ ಮುಖ್ಯ ಸಂಗತಿಗಳೆಂದರೆ ಮನುಷ್ಯನು ವೈಯಕ್ತಿಕ ನೆಲೆಗಟ್ಟಿನಲ್ಲಿ ಮಾಡುವ ಸ್ವಾರ್ಥಪರ ಆಲೋಚನೆ ಒಂದು ಕಡೆ ಮತ್ತು ಅದನ್ನು ಮೆಟ್ಟಿನಿಲ್ಲುವ ನೈತಿಕಪ್ರಜ್ಞೆ ಇನ್ನೊಂದು ಕಡೆ. ಇವೆರಡರ ಸೆಳೆತವೇ ಮನಸಿನ ತಾಕಲಾಟಕ್ಕೆ ಮೂಲ ಕಾರಣ. ಒಂದು ವ್ಯಾವಹಾರಿಕ ದೃಷ್ಟಿಯಿಂದ ಕೂಡಿದ ಸ್ವಾರ್ಥ ಮತ್ತೊಂದು ಪರಾರ್ಥ ದೃಷ್ಟಿಯಿಂದ ಕೂಡಿದ ತ್ಯಾಗ. ವ್ಯಕ್ತಿಯ ಬದುಕಿನಲ್ಲಿ ಈ ವ್ಯವಹಾರ ಮತ್ತು ಆದರ್ಶಗಳ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.

ಮೊನ್ನೆ ಕ್ಯಾಲಿಫೋರ್ನಿಯಾದಲ್ಲಿ ನಡೆದ 35ನೆಯ VSNA ವಾರ್ಷಿಕ ಸಮ್ಮೇಳನವನ್ನು ಮುಗಿಸಿಕೊಂಡು ಶಿಷ್ಯರಾದ ಕತ್ತಲಗೆರೆ ಹಾಲಪ್ಪನವರ ಮನೆಗೆ ಬಂದು ರಾತ್ರಿ ಮಲಗುವಾಗ ಹಾಸಿಗೆಯ ಪಕ್ಕದ ಟೀಪಾಯ್ ಮೇಲಿದ್ದ TIME ಮ್ಯಾಗಜಿನ್ ನಮ್ಮ ಕಣ್ಣಿಗೆ ಬಿತ್ತು. ಅದರಲ್ಲಿದ್ದ “What makes us moral?” ಎಂಬ ಅಗ್ರಲೇಖನ ನಮ್ಮನ್ನು ಆಕರ್ಷಿಸಿತು. ಅದನ್ನು ಪೂರಾ ಓದಿ ಮುಗಿಸಿದ ಮೇಲೆ ವಿಚಾರಗಳ ಸುಳಿಯಲ್ಲಿ ಸಿಕ್ಕಿಕೊಂಡು ಬಹಳ ಹೊತ್ತು ನಿದ್ರೆ ಬರಲಿಲ್ಲ. ಮರುದಿನ ಇಲ್ಲಿಯ ಪ್ರಸಿದ್ಧ ವನವಾದ Yesiameti Park ಗೆ ಹೋದರೂ ವಿಚಾರಗಳು ಬೆನ್ನುಹತ್ತಿದ್ದವು. ಸಾವಿರಾರು ವರ್ಷಗಳಷ್ಟು ಹಳೆಯದಾದ ಅಲ್ಲಿಯ ಮರಗಳು ಈಗಲೂ ಜೀವಂತವಾಗಿರುವಂತೆ ಪತ್ರಿಕೆ ಹಳೆಯದಾಗಿದ್ದರೂ ಅದರಲ್ಲಿದ್ದ ವಿಚಾರಗಳು ಈಗಲೂ ಪ್ರಸ್ತುತವಾಗಿದ್ದವು. ಕಳೆದ ಶತಮಾನದಲ್ಲಿ ತ್ಯಾಗಮಯ ಜೀವನವನ್ನು ನಡೆಸಿ ಇತಿಹಾಸದ ಪುಟಗಳನ್ನು ಸೇರಿಹೋದ ಮಹಾತ್ಮಾ ಗಾಂಧೀ, ಮದರ್ ತೆರೇಸಾ, ಮಾರ್ಟಿನ್ ಲೂಥರ್ ಕಿಂಗ್ ಮೊದಲಾದವರ ಭಾವಚಿತ್ರಗಳು ಒಂದು ಪುಟದಲ್ಲಿ ರಾರಾಜಿಸಿದರೆ ಮತ್ತೊಂದು ಪುಟದಲ್ಲಿ ಲಕ್ಷಾಂತರ ಜನರ ಕಗ್ಗೂಲೆಗೆ ಕಾರಣರಾದ ಸ್ಟಾಲಿನ್, ಹಿಟ್ಲರ್, ಬಿನ್ ಲಾಡೆನ್ ಮೊದಲಾದವರ ಭಾವಚಿತ್ರಗಳು ಕಣ್ಣಿಗೆ ರಾಚುತ್ತಿದ್ದವು. ಮಾನವತೆಯ ಒಳಿತು-ಕೆಡುಕುಗಳಿಗೆ ಕಾರಣರಾದ ಈ ವ್ಯಕ್ತಿಗಳ ವಿಭಿನ್ನ ಮನೋಧರ್ಮಕ್ಕೆ ಕಾರಣವೇನಿರಬಹುದೆಂಬ ವೈಜ್ಞಾನಿಕ ವಿಶ್ಲೇಷಣೆ ಲೇಖನದಲ್ಲಿತ್ತು. ನೈತಿಕ ತಾಕಲಾಟಗಳು (moral dilemmas) ಉಂಟಾದಾಗ ಮೆದುಳಿನ ಯಾವ ಯಾವ ಭಾಗದಲ್ಲಿ ಏನಾಗುತ್ತದೆಯೆಂಬ ಇತ್ತೀಚಿನ ವೈದ್ಯಕೀಯ ಅಧ್ಯಯನದ ಸಚಿತ್ರ ವಿವರಣೆ ಸಹ ಕುತೂಹಲಕಾರಿಯಾಗಿತ್ತು.

ಅವನು ತುಂಬಾ ಒರಟ, ಆದರೆ ಹೃದಯ ಮಾತ್ರ ಒಳೆಯದು ಎಂಬ ಮಾತನ್ನು ನೀವು ಕೇಳಿದ್ದೀರಿ. ಮನುಷ್ಯನ ಮನಸ್ಸಿನಲ್ಲಿ ಸುಪ್ತವಾಗಿರುವ ಮಾನವೀಯ ಭಾವನೆಯನ್ನು ಗ್ರಹಿಸುವುದು ಬಹಳ ಕಷ್ಟ. ಆಕಸ್ಮಿಕವಾಗಿ ಸಂಭವಿಸುವ ರಸ್ತೆ ಅಪಘಾತದಲ್ಲಿ ವಾಹನ ಚಾಲಕ ನಾಯಿಯನ್ನು ಉಳಿಸಲು ಹೋಗಿ ಮನುಷ್ಯರಿಗೆ ಡಿಕ್ಕಿ ಹೊಡೆಯುತ್ತಾನೆಯೇ ಹೊರತು ನಾಯಿಗಿಂತ ಮನುಷ್ಯನ ಜೀವ ಶ್ರೇಷ್ಠವೆಂದು ಪ್ರಜ್ಞಾಪೂರ್ವಕವಾಗಿ ಆಲೋಚಿಸಿ ನಾಯಿಯನ್ನು ಹೊಡೆದು ಸಾಯಿಸುವುದಿಲ್ಲ! ಒಟ್ಟಾರೆ ಜೀವಹತ್ಯೆ ಮಹಾ ಪಾಪ ಎಂಬ ನೈತಿಕಪ್ರಜ್ಞೆ ಅವನಲ್ಲಿರುತ್ತದೆ. ಈ ನೈತಿಕ ಪ್ರಜ್ಞೆ ಬರುವುದು ಎಲ್ಲಿಂದ, ಯಾರಿಂದ ಮತ್ತು ಯಾವಾಗಿನಿಂದ? ಬಾಲ್ಯದಲ್ಲಿ ತಂದೆ-ತಾಯಿಗಳಿಂದ. ಆದರೆ ದೇವರ ಮೇಲಿನ ನಂಬುಗೆಯಿಂದಲೂ, ಧರ್ಮದ ಮೇಲಿನ ವಿಶ್ವಾಸದಿಂದಲೂ ಬರುತ್ತದೆ ಎನ್ನುವುದನ್ನು ಮಾತ್ರ ವಿಚಾರವಾದಿಗಳನೇಕರು ಒಪ್ಪುವುದಿಲ್ಲ. ನೈತಿಕತೆಗೂ ನಾಸ್ತಿಕತೆಗೂ ಧರ್ಮಕ್ಕೂ ಸಂಬಂಧವಿಲ್ಲವೆಂದು ಅವರು ಹೇಳುತ್ತಾರೆ. ನಾಸ್ತಿಕರೆಲ್ಲರೂ ಅನೀತಿವಂತರಲ್ಲ; ಆಸ್ತಿಕರೆಲ್ಲರೂ ನೀತಿವಂತರಲ್ಲ ಎಂಬುದು ಅವರ ವಾದ. ಆದರೆ ಅವರ ಈ ವಾದದಲ್ಲಿರುವ ಧರ್ಮದ ಪರಿಕಲ್ಪನೆ ತಪ್ಪು ಗ್ರಹಿಕೆಯಿಂದ ಕೂಡಿದೆ. ಧರ್ಮವೆಂದರೆ ಅವರು ಅಂದುಕೊಂಡಂತೆ ಇಂದು ಕಾಣುವ ಹಿಂದೂ, ಕ್ರೈಸ್ತ, ಇಸ್ಲಾಂ ಇತ್ಯಾದಿ ಮತಧರ್ಮಗಳಲ್ಲ, ಭಾರತೀಯ ದಾರ್ಶನಿಕರ ಪ್ರಕಾರ ಧರ್ಮವೆಂದರೆ ಸನ್ನಡತೆ, ಸದಾಚಾರ: ಸತ್ಯಂ ವದ, ಧರ್ಮಂ ಚರ, ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಇತ್ಯಾದಿ ಸಪ್ತಶೀಲಗಳು. ಅವನು ದೇವರಿಗೆ ಹೆದರುತ್ತಾನೆ, ಧರ್ಮಭೀರು ಎಂದರೆ ಕೆಟ್ಟ ಮಾರ್ಗದಲ್ಲಿ ನಡೆಯಲು ಹೆದರುತ್ತಾನೆ ಎಂದರ್ಥ.

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ, ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ. ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯಾ ತಂದೆ! ಎನ್ನುವ ಬಸವಣ್ಣನವರ ವಚನ ಆಬಾಲವೃದ್ಧರಿಗೆಲ್ಲ ಸುಪರಿಚಿತ.     

ನೈತಿಕತೆಗೂ ಶಿಷ್ಟಾಚಾರಕ್ಕೂ ವ್ಯತ್ಯಾಸವಿದೆ. ನೈತಿಕತೆಯಿಂದ ಶಿಷ್ಟಾಚಾರಗಳು ರೂಪುಗೊಳ್ಳುತ್ತವೆಯಾದರೂ ಎಲ್ಲ ಶಿಷ್ಟಾಚಾರಗಳಿಗೂ ನೈತಿಕತೆಯೇ ತಳಹದಿಯಾಗಿರುತ್ತದೆಯೆಂದು ಹೇಳಲಾಗದು. ಕೆಲವು ಶಿಷ್ಟಾಚಾರಗಳು ದೇಶದಿಂದ ದೇಶಕ್ಕೆ ಬೇರೆಯಾಗಿರುತ್ತವೆ; ವಿಭಿನ್ನ ಭಾಷೆ, ವಿಭಿನ್ನ ಸಂಸ್ಕೃತಿಗಳಿಗೆ ಅನುಗುಣವಾಗಿ ವಿಭಿನ್ನವಾಗಿರುತ್ತವೆ. ಒಬ್ಬರು ಮತ್ತೊಬ್ಬರನ್ನು ಸಂಧಿಸಿದಾಗ ಕೈಕುಲುಕುವುದು ಪಾಶ್ಚಾತ್ಯರ ಶಿಷ್ಟಾಚಾರವಾದರೆ, ಕೈಮುಗಿಯುವುದು ಭಾರತೀಯರ ಶಿಷ್ಟಾಚಾರ. ಪರಸ್ಪರ ಭೇಟಿಯಾದಾಗ ಗೌರವದ ಪ್ರತೀಕವಾಗಿ ತಮ್ಮ ತಲೆಯ ಮೇಲಿರುವ ಹ್ಯಾಟನ್ನು ಮೇಲೆತ್ತಿ ಹಲೋ ಎನ್ನುವುದು ಇಲ್ಲಿಯವರ ಸಭ್ಯ ನಡವಳಿಕೆಯಾದರೆ, ತಲೆಯ ಮೇಲೆ ಪಟಗ ಧರಿಸಿ ಗುರುಗಳ ಕಾಲಿಗೆ ಅಡ್ಡಬೀಳುವುದು ನಮ್ಮವರ ಸಭ್ಯ ನಡವಳಿಕೆ. ನಮ್ಮ ದೇಶದಲ್ಲಿ ಗುರುಹಿರಿಯರ ಎದುರಿಗೆ ಕಾಲ ಮೇಲೆ ಕಾಲು ಇಟ್ಟುಕೊಂಡು ಕುಳಿತುಕೊಳ್ಳುವುದು, ಕಾಲು ಕುಣಿಸುವುದು ಅಸಭ್ಯತನವಾದರೆ ಈ ದೇಶಗಳಲ್ಲಿ ಯಾರೂ ಅದನ್ನು ತಪ್ಪಾಗಿ ಗ್ರಹಿಸುವುದಿಲ್ಲ. ಹೀಗೆ ಶಿಷ್ಟಾಚಾರಗಳು ದೇಶದಿಂದ ದೇಶಕ್ಕೆ ಭಿನ್ನವಾದರೂ ನೈತಿಕ ಮೌಲ್ಯಗಳು ಮಾತ್ರ ಎಲ್ಲ ದೇಶಗಳಿಗೂ, ಎಲ್ಲ ಕಾಲಕ್ಕೂ ಒಂದೇ ಎಂದು ಹೇಳಬಹುದು.

ಇಲ್ಲಿಯ ಅನಿವಾಸಿ ಭಾರತೀಯ ಯುವಕ-ಯುವತಿಯರಿಗೆ ತಂದೆ-ತಾಯಿಗಳು ತಮ್ಮ ಚಲನ-ವಲನಗಳ ಮೇಲೆ ನಿಗಾ ಇಡುವುದು ಸ್ವಲ್ಪವೂ ಇಷ್ಟವಾಗುವುದಿಲ್ಲ. ಮೊನ್ನೆ ಸಿಲಿಕಾನ್ ವ್ಯಾಲಿಯಲ್ಲಿ ನಡೆದ VSNA ಸಮ್ಮೇಳನದಲ್ಲಿ ಆ ಯುವಕ-ಯುವತಿಯರು ನಮ್ಮೊಂದಿಗೆ ಮಾತನಾಡುವಾಗ ಅವರ ಹಿರಿಯರನ್ನು ಹೊರಗೆ ಕಳುಹಿಸುವವರೆಗೂ ಬಾಯ್ದೆರೆಯದೆ ಮೌನವ್ರತಾಚರಣೆ ಮಾಡಿದರು. ಅವರ ಒತ್ತಡಕ್ಕೆ ಮಣಿದು  ಅವರು ಯಾರ ಜೊತೆಯಲ್ಲಾದರೂ ಓಡಾಡಿಕೊಂಡಿರಲಿ, ಆದರೆ ಯಾರ ಜೊತೆಗೆ ಡೇಟಿಂಗ್ ಮಾಡಿಕೊಂಡಿರುತ್ತಾರೋ ಅವರೊಂದಿಗೆ ಕೇವಲ ಚಕ್ಕಂದವಾಡದೆ ಅವರನ್ನೇ ಮದುವೆ ಮಾಡಿಕೊಂಡು ಸುಖವಾಗಿ ಬಾಳುವಂತೆ ತಾವು ತಿಳಿಹೇಳಿ  ಗುರುಗಳೇ ಎಂದು ನಮ್ಮ ಹತ್ತಿರ ಗೋಗರೆದು ಅವರ ಹಿರಿಯರು ಹೊರನಡೆದರು!

ಕ್ಯಾಲಿಫೋರ್ನಿಯಾ

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 12.7.2012