ಯಾವ ಮೋಹನ ಮುರಳಿ ಕರೆಯಿತೋ!...

  •  
  •  
  •  
  •  
  •    Views  

"ಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ” ಎಂಬ ಗಾದೆ ಮಾತಿನಂತೆ ಆಸ್ಟ್ರೇಲಿಯಾದಿಂದ ಹಿಂತಿರುಗಿ ಬಂದು ಒಂದು ವಾರವಾದರೂ ಅಲ್ಲಿಯ ನೆನಪುಗಳು ಇನ್ನೂ ಒತ್ತರಿಸಿ ಬರುತ್ತಿವೆ. ಸಿಡ್ನಿಯನ್ನು ತಲುಪಿದಾಗ ನಮ್ಮ ಜೇಬುಗಡಿಯಾರ ಸಮಯವನ್ನು ತಪ್ಪಾಗಿ ತೋರಿಸುತ್ತಿತ್ತು. 5.30 ಗಂಟೆ ಹಿಂದಿತ್ತು. ಗಡಿಯಾರವೇನೂ ಕೆಟ್ಟಿರಲಿಲ್ಲ. ದೇಶ ಪ್ರಾಂತ್ಯಗಳ ಮಧ್ಯೆ ಇರುವ ಸಮಯದ ವ್ಯತ್ಯಾಸವದು. ಜಗತ್ತಿನ ಯಾವುದೇ ಎರಡು ಗಡಿಯಾರಗಳು ಒಂದೇ ಸಮಯವನ್ನು ತೋರಿಸುವುದಿಲ್ಲ ಎಂಬ ಗಾದೆ ಮಾತೊಂದು ಆಂಗ್ಲಭಾಷೆಯಲ್ಲಿದೆ. ಆದ್ದರಿಂದ ನಿಮ್ಮ ಕೈಗಡಿಯಾರ ಕೆಟ್ಟು ಸರಿಯಾದ ಸಮಯವನ್ನು ತೋರಿಸದೇ ಇದ್ದರೆ ಚಿಂತಿಸಬೇಡಿ; ಯಾವುದೋ ದೇಶದ ಸಮಯವನ್ನು ತೋರಿಸುತ್ತಿದೆಯೆಂದು ಸಮಾಧಾನಪಟ್ಟುಕೊಳ್ಳಿ. ಆ ದೇಶ ಯಾವುದಿರಬಹುದೆಂದು ಹೇಳಲು ಸವಾಲು ಹಾಕಿರಿ. ಹಾಗೆಂದು ರಿಪೇರಿ ಮಾಡಿಸಿಕೊಳ್ಳದೇ ಹೋದರೆ ಸಿಗಬೇಕಾದ ರೈಲು, ಬಸ್ಸು ಸಿಕ್ಕುವುದಿಲ್ಲ. ಆದರೆ ಸಮಯಕ್ಕೆ ಸರಿಯಾಗಿ ಬರದೆ ದಿಕ್ಕುತಪ್ಪಿ ಓಡುವ ನಮ್ಮ ದೇಶದ ರೈಲು ಬಸ್ಸುಗಳು ತಡವಾಗಿ ಹೋದರೂ ಸಿಕ್ಕರೆ ಆಶ್ಚರ್ಯವೇನೂ ಇಲ್ಲ. ಈ ವಿಷಯವಾಗಿ ಬಹಳ ಹಿಂದೆ ಇದೇ ಅಂಕಣದಲ್ಲಿ ವಿವರವಾಗಿ ಬರೆದ ನೆನಪು. 70 ರ ದಶಕದಲ್ಲಿ ಕಾಶಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆ. ಕೋಲ್ಕತ್ತಾದಿಂದ ದೆಹಲಿಗೆ ಕಾಶೀ ಮಾರ್ಗವಾಗಿ ಹೋಗುತ್ತಿದ್ದ Upper India Express ಎಂಬ ರೈಲು. ಸದಾ ಎರಡು ಮೂರು ಗಂಟೆ ತಡವಾಗಿ ಬರುವ ಖ್ಯಾತಿಯನ್ನು ಪಡೆದಿದ್ದ ಆ ರೈಲು ಒಂದು ದಿನ ಇದ್ದಕ್ಕಿದ್ದಂತೆಯೇ ನಿರ್ದಿಷ್ಟ ವೇಳಾಪಟ್ಟಿಯಂತೆ ಬಂದು ಹೋಯಿತು. ತಪ್ಪಿಹೋದ ರೈಲಿನಿಂದ ನಿರಾಶನಾದ ಯಾತ್ರಿಕನಿಗೆ ಸಹಪ್ರಯಾಣಿಕನೊಬ್ಬ ಸಮಾಧಾನಪಡಿಸಿದ: “ಗಬಡಾವೋ ಮತ್, ಯಹ್ ಆಜ್ ಕೀ ಗಾಡೀ ನಹೀಂ ಥೀ, ಕಲ್ ಕೀ ಥೀ, ಆಜ್ ಕೀ ಗಾಡೀ ಅಭೀ ಆನೇವಾಲೀ ಹೈಂ, ಬೈಠೋ”!

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿಮಾನಯಾನದ ವೇಳಾಪಟ್ಟಿಯ ಫಲಕ ಇರುವೆಡೆ ವಿಭಿನ್ನ ದೇಶಗಳಲ್ಲಿನ ಸಮಯವನ್ನು ತೋರಿಸುವ ಅನೇಕ ಗಡಿಯಾರಗಳಿರುತ್ತವೆ. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪಯಣಿಸಿದರೆ ನಿಮ್ಮ ಕೈಗಡಿಯಾರದ ಮುಳ್ಳನ್ನು ಹಿಂದಕ್ಕೆ ಸರಿಸಬೇಕಾಗುತ್ತದೆ. ಪೌರ್ವಾತ್ಯ ರಾಷ್ಟ್ರಗಳಿಗೆ ಪಯಣಿಸಿದರೆ ನಿಮ್ಮ ಕೈಗಡಿಯಾರದ ಮುಳ್ಳನ್ನು ಮುಂದಕ್ಕೆ ಸರಿಸಬೇಕಾಗುತ್ತದೆ. ಅಂದರೆ ನೀವು ಹೊರಟ ವೇಳೆಯಿಂದ ತಲುಪುವ ವೇಳೆಯವರೆಗೆ ಪ್ರಯಾಣಕ್ಕೆ ತೆಗೆದುಕೊಂಡ ಸಮಯಕ್ಕಿಂತ ಹೆಚ್ಚಿನ ಸಮಯ ಕಳೆದುಹೋಗಿರುತ್ತದೆ. ಹೀಗೆ ನಿಮ್ಮ ಅರಿವಿಲ್ಲದಂತೆ ಕಳೆದುಹೋಗುವ ಸಮಯ ನಿಜವಾಗಿಯೂ ನಿಮ್ಮ ಆಯುಷ್ಯದಲ್ಲಿ ಕಳೆದುಹೋಯಿತೆಂದು ಭಾವಿಸಬಹುದೇ? ವ್ಯವಹಾರದಲ್ಲಿ ಬಳಸುವ ಕಳೆದು ಹೋಗುವುದು, ಗಳಿಸುವುದು, ಲಾಭ, ನಷ್ಟ ಮುಂತಾದ ಶಬ್ಧಗಳೆಲ್ಲಾ ದೇಶ-ಕಾಲ ಸಾಪೇಕ್ಷ. ಈ ಸಂಬಂಧವಾಗಿ ರೋಚಕವಾದ ಜರ್ಮನ್ ಕಥೆಯೊಂದು ಹೀಗಿದೆ:

ಒಮ್ಮೆ ಪ್ರಯಾಣಿಕರ ಹಡಗನ್ನು ನಡೆಸುತ್ತಿದ್ದ ಕ್ಯಾಪ್ಟನ್ ಆಗತಾನೇ ತನ್ನ ಬೆಳಗಿನ ಉಪಹಾರವನ್ನು ಮುಗಿಸಿದ್ದ. ಅವನಿಗೆ ಉಪಹಾರವನ್ನು ಬಡಿಸಿ ಹಿಂದಿರುಗಿ ಹೋಗಿದ್ದ ಮಾಣಿ ಕಪ್ಪು ಸಾಸರ್‌ಗಳನ್ನು ತೊಳೆದು ಮತ್ತೆ ಆತನ ಕ್ಯಾಬಿನ್‌ಗೆ ಧಾವಿಸಿ ಬಂದ.

ಕ್ಯಾಪ್ಟನ್:     ಏನು ಬಂದೆ?
ಮಾಣಿ   :       ಸರ್, ನನ್ನದೊಂದು ಸಣ್ಣ ಅನುಮಾನವಿದೆ? 
ಕ್ಯಾಪ್ಟನ್:     ಏನದು? 
ಮಾಣಿ   :       ಸರ್, ಯಾವುದಾದರೂ ಒಂದು ವಸ್ತು ಎಲ್ಲಿದೆಯೆಂದು ನಮಗೆ ಗೊತ್ತಿದ್ದರೆ ಅದು ಕಳೆದಂತೆ ಆಗುತ್ತದೆಯೇ? 
ಕ್ಯಾಪ್ಟನ್:     (ನಕ್ಕು) ನೀನೆಲ್ಲೋ ಒಬ್ಬ ಹುಚ್ಚ ! ಎಲ್ಲಿದೆಯೆಂದು ಗೊತ್ತಿದ್ದರೆ ಅದು ಕಳೆದಿದೆಯೆಂದು ಹೇಗೆ ಹೇಳಲು ಸಾಧ್ಯ ? ನಿನಗೇಕೆ ಈ ಅನುಮಾನ ?
ಮಾಣಿ  :       ಸರ್, ಹಾಗಾದರೆ ನೀವು ಉಪಾಹಾರಕ್ಕೆ ಬಳಸುತ್ತಿದ್ದ ನಿಮ್ಮ ಬೆಳ್ಳಿಯ ಚಮಚ ಕಳೆದು ಹೋಗಿಲ್ಲವೆಂದಂತಾಯಿತು. 
ಕ್ಯಾಪ್ಟನ್:     ಹಾಗೆಂದರೇನು? 
ಮಾಣಿ   :      ಸರ್, ನಿಮ್ಮ ಉಪಾಹಾರವಾದ ಮೇಲೆ ನಿಮ್ಮ ಬೆಳ್ಳಿಯ ಚಮಚವನ್ನು ಸಮುದ್ರದ ನೀರಿನಲ್ಲಿ ತೊಳೆಯುತ್ತಿದ್ದೆ. ಕೈಜಾರಿ ಬಿತ್ತು. ಈಗ ಅದು ಸಮುದ್ರದ ತಳದಲ್ಲಿದೆಯೆಂದು ನನಗೆ ಚೆನ್ನಾಗಿ ಗೊತ್ತು! 

ಇನ್ನು ಲಾಭ-ನಷ್ಟ ಕುರಿತಂತೆ ಹೇಳುವುದಾದರೆ ದೈನಂದಿನ ವ್ಯವಹಾರದಲ್ಲಿ, ಸ್ನೇಹ-ವಿಶ್ವಾಸದಲ್ಲಿ ಹಣವನ್ನು ಸಾಲವಾಗಿ ಕೊಡುವುದು ಅನಿವಾರ್ಯ. ಎಷ್ಟೋ ವೇಳೆ ಕೊಟ್ಟ ಹಣ ವಾಪಾಸು ಬರುವುದಿಲ್ಲ. ಕೇಳಿದರೆ ನೀನು ಕೊಟ್ಟೇ ಇಲ್ಲ; ಏನು ಮಾಡಿಕೊಳ್ಳುತ್ತೀಯಾ ಮಾಡಿಕೋ ಹೋಗು ಎಂದು ಹಣ ಕೊಟ್ಟವರಿಗೇ ಕಿಬ್ಬದಿಯ ಕೀಲು ಮುರಿಯುವಂತೆ ಜೋರು ಮಾಡುವವರು ಇದ್ದಾರೆ. ಅಂಥವರನ್ನು ಕಂಡೇ ಹಳ್ಳಿಯಲ್ಲಿ ಗಾದೆ ಮಾತು ಹುಟ್ಟಿದ್ದು: “ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ಈರಭದ್ರ!” ಈ ವಿಚಾರದಲ್ಲಿ ಬಸವಣ್ಣನವರ ತಾತ್ವಿಕ ದೃಷ್ಟಿ ಬೇರೆಯದೇ ಆಗಿದೆ. ಬಡ್ಡಿಗಾಗಿ ಸಾಲ ಕೊಡಬೇಕೆಂದಿದ್ದರೆ ಶಿವಭಕ್ತರಿಗೇ ಕೊಡಿ ಎಂದು ಹೇಳುತ್ತಾರೆ.

ಮೃಡಭಕ್ತರಿಗಲ್ಲದೆ ಕಡಬಡ್ಡಿಯ ಕೊಡಲಾಗದು 
ಬಂದರೊಂದು ಲೇಸು ಬಾರದಿದ್ದರೆರಡು ಲೇಸು
ಅಲ್ಲಿದ್ದರೆಯೂ ಲಿಂಗಕ್ಕೆ ಬೋನ, ಇಲ್ಲಿದ್ದರೆಯೂ ಲಿಂಗಕ್ಕೆ ಬೋನ!

ದೇವರಲ್ಲಿ ಭಕ್ತಿಯುಳ್ಳವರಿಗೆ ಹಣವನ್ನು ಸಾಲವಾಗಿ ಕೊಟ್ಟರೆ ಅವರು ಮೊದಲನೆಯದಾಗಿ ಮೋಸ ಮಾಡುವುದಿಲ್ಲ. ವಾಪಾಸು ಕೊಟ್ಟೇ ಕೊಡುತ್ತಾರೆ. ಒಂದು ಪಕ್ಷ ಹಣ ಪಡೆದ ಅವರು ವಾಪಾಸು ಕೊಡಲು ಆಗದೇ ಇದ್ದರೆ ಏನೂ ನಷ್ಟವಿಲ್ಲ. ಅವರ ಕಷ್ಟಕ್ಕೆ ನೀವು ನೆರವಾದಂತೆ ಆಯಿತು. ಅವರು ಉಂಡರೇನು, ನೀವು ಉಂಡರೇನು; ಅವರ ಆತ್ಮ ಮತ್ತು ನಿಮ್ಮ ಆತ್ಮ ಎರಡೂ ಒಂದೇ ಅಲ್ಲವೇ. ಭಿನ್ನತೆ ಎಲ್ಲಿದೆ? ಅಸಂಗ್ರಹ ಬುದ್ದಿಯನ್ನು ಪ್ರತಿಪಾದಿಸುವ ಈ ಪಾರಲೌಕಿಕ ದೃಷ್ಟಿ “ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ ಇಂದಿಂಗೆ ನಾಳಿಂಗೆ ಬೇಕೆಂದೆನಾದೊಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ” ಎನ್ನುವ ಉದಾತ್ತ ಚೇತನ ಬಸವಣ್ಣನವರಿಗಲ್ಲದೆ ಸಾಮಾನ್ಯರಿಗೆ ಇರಲು ಸಾಧ್ಯವಿಲ್ಲ. 

ವಿಚಾರ ಎಲ್ಲಿಂದ ಎಲ್ಲಿಗೋ ಹೋಯಿತು. ವಿಮಾನ ನಿಲ್ದಾಣದಿಂದ ಓಂಕಾರಸ್ವಾಮಿ ತಮ್ಮ ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಕಾಣಬರುತ್ತಿದ್ದ ಸಿಡ್ನಿ ನಗರದ ಮನೆಗಳು ಬೆಂಗಳೂರಿನಲ್ಲಿ ಲೋಕಾಯುಕ್ತರ ಕಣ್ಣನ್ನು ಕೋರೈಸುವಂತಹ ಭವ್ಯಬಂಗಲೆಗಳಾಗಿರಲಿಲ್ಲ. ಮನೆಯನ್ನು ತಲುಪಿದ ಮೇಲೆ ನಮ್ಮ ಕಣ್ಣನ್ನು ಸೆಳೆದದ್ದು ಅವರ ಮನೆಯ ಹಿಂಭಾಗದ ಕೈದೋಟದಲ್ಲಿ 16 ವರ್ಷಗಳ ಹಿಂದೆ ನಾವು ನೆಟ್ಟಿದ್ದ ತಾಳೆ ಗಿಡ. ಭಾರತದಿಂದ ಅವರ ಮನೆಗೆ ಯಾರೇ ಬರಲಿ ಆ ತಾಳೆ ಮರದ ಗಾಥೆಯನ್ನು ಹೇಳದೆ ಅವರಿಗೆ ಸಮಾಧಾನವಾಗುವುದಿಲ್ಲವೆಂಬ ಸಂಗತಿ ನಮಗೆ ತಿಳಿದುಬಂದದ್ದು ಕಳೆದ ವರ್ಷ ಅವರ ಮನೆಯಲ್ಲಿ ಆತಿಥ್ಯವನ್ನು ಪಡೆದು ಬಂದ ಹಾಸ್ಯಪಟು ಸುಧಾ ಬರಗೂರು ಅವರಿಂದ. ಈಗ ಆ ಸಸಿ ಹೆಮ್ಮರವಾಗಿ ಆಕಾಶದೆತ್ತರಕ್ಕೆ ಬೆಳೆದು ನಿಂತಿತ್ತು. ಆ ತಾಳೆಮರದ ಸಸಿಯಂತೆ ಚಿಕ್ಕವರಾಗಿದ್ದ ಅವರ ಇಬ್ಬರು ಮಕ್ಕಳು ಸಂಧ್ಯಾ ಮತ್ತು ಕಾವ್ಯ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬೆಳೆದಿದ್ದರು. ಮನೆಯ ಬಾಗಿಲ ಹತ್ತಿರ ಬಂದಾಗ ಪಾದಗಳಿಗೆ ನೀರೆರೆದು ಪೂಜೆ ಮಾಡಿ ಆರತಿಯನ್ನು ಬೆಳಗಿದ್ದು ಅವರು ಮೈಗೂಡಿಸಿಕೊಂಡ ನಮ್ಮ ಸಂಸ್ಕೃತಿಯ ದ್ಯೋತಕವಾಗಿತ್ತು.

ಮಾರನೆಯ ದಿನ ಸಂಜೆ ಸಿಡ್ನಿ ನಗರದ ನಿವಾಸಿಗಳಾದ ಕನ್ನಡಿಗರ ಸಮ್ಮೇಳನ. ಇವರಾರೂ ಕನ್ನಡ ನಾಡಿನಲ್ಲಿ ಕೇಳಿಬರುವ ನವಂಬರ್ ಕನ್ನಡಿಗರಲ್ಲ. ನವಂಬರ್‌ನಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯನ್ನು ಹತ್ತು ದಿನಗಳು ಮುಂಚಿತವಾಗಿಯೇ ಒಟ್ಟಿಗೇ ಏರ್ಪಡಿಸಿದ್ದರು. ಸಭೆಗೆ ಬಂದ ಅತಿಥಿಗಳನ್ನು ಪುರೋಹಿತರ ವೇದಘೋಷದೊಂದಿಗೆ ಬರಮಾಡಿಕೊಳ್ಳುವ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತ ಅಲ್ಲಿರಲಿಲ್ಲ. ಕನ್ನಡದ ತೊಟ್ಟಿಲ ಹೊತ್ತುಕೊಂಡು ತವರು ಬಣ್ಣ ಉಟ್ಟುಕೊಂಡು ನೀಡಿದ ಆತ್ಮೀಯ ಸ್ವಾಗತ. ಸಮಾರಂಭದ ಪ್ರವೇಶ ದ್ವಾರದಲ್ಲಿ ನಗುಮುಖದ ನುರಿತ ವೈದ್ಯರಿಂದ ಸಭೆಗೆ ಬಂದ ಸದಸ್ಯರೆಲ್ಲರ BP ಮತ್ತು Blood Sugar ತಪಾಸಣೆ! ಬದುಕಿನ ಜಂಜಾಟದಲ್ಲಿ ಮೈಮರೆತ ಸದಸ್ಯರ ಆರೋಗ್ಯದ ಬಗ್ಗೆ ಇದ್ದ ಕಾಳಜಿ. ಸದಾ ಸಭೆ ಸಮಾರಂಭಗಳ ಅಲೆಮಾರಿಗಳಾದ ನಮಗೆ ಪರಿಣತ ವೈದ್ಯರಿಂದ ಸಿಕ್ಕ ಪುರಸ್ಕಾರ.

ನಾಡು ಮತ್ತು ನುಡಿಯ ಸೆಳೆತ ನಾಡಿನಾಚೆ ಹೋದಷ್ಟೂ ಹೆಚ್ಚುತ್ತಾ ಹೋಗುತ್ತದೆ. ಪರದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ನಿರಾಶ್ರಿತರಲ್ಲ (refugees); ದುಡಿಮೆಗಾಗಿ ವೃತ್ತಿಯನ್ನು ಅರಸಿಕೊಂಡು ಹೋದವರು. ಯಾರ ಶಿಫಾರಿಸು ಇಲ್ಲದೇ ಸ್ವಂತ ಪ್ರತಿಭೆ ಮತ್ತು ಪರಿಶ್ರಮಗಳಿಂದ ಮೇಲೆ ಬಂದವರು. ಒಬ್ಬೊಬ್ಬರದೂ ಒಂದೊಂದು ಸಾಹಸಗಾಥೆ. ನಾಲ್ಕಾರು ವರ್ಷ ದುಡಿದು ಸಂಪಾದನೆ ಮಾಡಿಕೊಂಡು ಮರಳಿ ತಾಯ್ನಾಡಿಗೆ ಹೋಗಬೇಕೆಂಬ ಅವರ ಆರಂಭದ ಆಲೋಚನೆ ಅವರಿಗೇ ಗೊತ್ತಿಲ್ಲದಂತೆ ಕ್ರಮೇಣ ಬದಲಾಗಿ ಕೌಟುಂಬಿಕ ಜೀವನದ ಅನಿವಾರ್ಯತೆಗಳಿಂದ ಇಲ್ಲಿಯೇ ನೆಲೆಸಿದವರು. “ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ರಾಷ್ಟ್ರಕವಿ ಕುವೆಂಪುರವರ ಆಶಯಕ್ಕೆ ಅನುಗುಣವಾಗಿ ಇರುವ ಅಪ್ಪಟ ಕನ್ನಡಿಗರು. ಸಭೆಯ ಸುತ್ತ ಕಣ್ಣು ಹಾಯಿಸಿದಾಗ ನಮಗೆ ನೆನಪಾಗಿದ್ದು ಶ್ರೀರಂಗಪಟ್ಟಣದ ರಂಗನತಿಟ್ಟು. ಪ್ರತಿ ವರ್ಷವೂ ಆಸ್ಟ್ರೇಲಿಯಾದಿಂದ ಆನೇಕ ವರ್ಣಮಯ ಪಕ್ಷಿಗಳು ಸಾವಿರಾರು ಮೈಲುಗಳ ಫೆಸಿಫಿಕ್ ಮಹಾಸಾಗರವನ್ನು ದಾಟಿ ಕಾವೇರಿ ತೀರದಲ್ಲಿರುವ ರಂಗನತಿಟ್ಟಿಗೆ ವಲಸೆ ಬಂದರೆ, ರಂಗನತಿಟ್ಟು ಇರುವ ಕನ್ನಡ ನಾಡಿನಿಂದ ಖಂಡಾಂತರಗಳನ್ನು ದಾಟಿ ಆಸ್ಟ್ರೇಲಿಯಾಕ್ಕೆ ವಲಸೆ ಬಂದ ಸುಂದರ ಕನ್ನಡ ಹಕ್ಕಿಗಳಿವು ಎನಿಸಿತು. ಅಕ್ಕಮಹಾದೇವಿಯ ಮಾತುಗಳಲ್ಲಿ ಹೇಳುವುದಾದರೆ ಇವರು ಹಿಂಡನಗಲಿ ಬಂದ ಆನೆಗಳು, ಪಂಜರದಲ್ಲಿ ಸಿಕ್ಕಿಕೊಂಡ ಗಿಳಿಗಳು! ವಿದೇಶಗಳಲ್ಲಿ ನೆಲೆಸಿದ ಭಾರತೀಯರನ್ನು ನೋಡಿದಾಗಲೆಲ್ಲಾ ನಮಗೆ ನೆನಪಾಗುವುದು ಬಸವಣ್ಣನವರ ಈ ಮುಂದಿನ ವಚನ:

ಕಾಲಲ್ಲಿ ಕಟ್ಟಿದ ಗುಂಡು, ಕೊರಳಲ್ಲಿ ಕಟ್ಟಿದ ಬೆಂಡು, 
ತೇಲಲೀಯದು ಗುಂಡು, ಮುಳುಗಲೀಯದು ಬೆಂಡು, 
ಇಂತಪ್ಪ ಸಂಸಾರಶರಧಿಯ ದಾಂಟಿಸಿ
ಕಾಲಾಂತಕನೆ ಕಾಯೋ, ಕೂಡಲ ಸಂಗಮದೇವಾ

ಬಸವಣ್ಣನವರು ಸಾಂಸಾರಿಕ ಜೀವನವನ್ನು ಒಂದು ಸಮುದ್ರಕ್ಕೆ ಹೋಲಿಸುತ್ತಾರೆ. ಈ ಸಂಸಾರಶರಧಿಯನ್ನು ದಾಟುವುದು ಅಷ್ಟು ಸುಲಭದ ಮಾತಲ್ಲ. ಈ ಸಂಸಾರವೆಂಬುದು ಕಾಲ ತುದಿಗೆ ಕಬ್ಬಿಣದ ಗುಂಡನ್ನು ಕಟ್ಟಿಕೊಂಡು, ಕೊರಳ ಸುತ್ತ ಬೆಂಡನ್ನು ಕಟ್ಟಿಕೊಂಡು ಸಮುದ್ರಕ್ಕೆ ಬಿದ್ದಂತೆ, ಕಾಲಲ್ಲಿ ಕಟ್ಟಿರುವ ಗುಂಡು ತೇಲಲು ಬಿಡುವುದಿಲ್ಲ, ಕೊರಳಲ್ಲಿ ಕಟ್ಟಿರುವ ಬೆಂಡು ಮುಳುಗಲು ಬಿಡುವುದಿಲ್ಲ. ಇತ್ತ ತೇಲಲೂ ಆಗದ ಅತ್ತ ಮುಳುಗಲೂ ಆಗದ ವಿಪರೀತ ಪರಿಸ್ಥಿತಿ. ಆದರೂ ಸಂಸಾರಶರಧಿಯನ್ನು ದಾಟುವ ಸಾಹಸ ಪ್ರವೃತ್ತಿ ಇವರದು. ಅದಕ್ಕಾಗಿ ತಾವು ಬೆಳೆದ ಮಣ್ಣಿನ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವೇ ಸಮಾರಂಭದ ಕೊನೆಯಲ್ಲಿ ಪ್ರಸ್ತುತಪಡಿಸಿದ ಭರತನಾಟ್ಯ ಮತ್ತು ನೃತ್ಯರೂಪಕ.

ನಾಡಿನ ಪ್ರಸಿದ್ಧ ಸಾಹಿತಿಗಳು ಮತ್ತು ಕಲಾವಿದರ ಹೆಸರಿಗೆ ಅವರವರ ಜನ್ಮಸ್ಥಳದ ಹೆಸರು ಅಂಟಿಕೊಂಡಿರುವಂತೆ ಸಿಡ್ನಿಯಲ್ಲಿಯೇ ಅನೇಕ ವರ್ಷಗಳಿಂದ ನೆಲೆಸಿದ ಶಿವಮೊಗ್ಗ ಜಿಲ್ಲೆಯ ಶ್ರೀನಿವಾಸ್ ಅವರು ಸಿಡ್ನಿ ಶ್ರೀನಿವಾಸ್ ಎಂದೇ ಇಲ್ಲಿ ಖ್ಯಾತನಾಮರಾಗಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ ಬಹಳ ವರ್ಷಗಳ ಕಾಲ ಲಂಡನ್ ನಲ್ಲಿದ್ದ ಶಿವಮೊಗ್ಗದ ನಮ್ಮ ಶಿಷ್ಯರೊಬ್ಬರು ಲಂಡನ್ ಬಸಪ್ಪ ಎಂದೇ ಮನೆಮಾತಾಗಿದ್ದು ನೆನಪಾಯಿತು. ಇಲ್ಲಿಯ ಸಾಂಸ್ಕೃತಿಕ ವೇದಿಕೆಗಳಿಗೆ ಅವರದು ಅಪಾರ ಕೊಡುಗೆ. ಅವರ ಪರಿಕಲ್ಪನೆಯಿಂದ ಮೂಡಿಬಂದ ನೃತ್ಯ ರೂಪಕ ಕೃಷ್ಣನ ಕೊಳಲಿನ ಕರೆ. ಕೊಳಲ ನಾದದ ವಿವಿಧ ಸ್ತರಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮ. ಕನಕದಾಸರ ಬಾರೋ ಕೃಷ್ಣಯ್ಯ, ಯಾದವರಾಯ ಬೃಂದಾವನದೊಳು, ಕವಿ ಗೋಪಾಲ ಕೃಷ್ಣ ಅಡಿಗರ ಕವಿತೆ ಯಾವ ಮೋಹನ ಮುರಳಿ, ಹಿಂದಿಯ ಕೋಹಿನೂರ್ ಚಿತ್ರದ ಮಧುಬನ್ ಮೇಂ ರಾಧಿಕಾ ನಾಚೇರೇ ಎಂಬ ಹಿಂದಿ ಹಾಡಿನ ಕನ್ನಡ ಅವತರಣಿಕೆಯನ್ನು ಅಳವಡಿಸಿಕೊಂಡು ರೂಪಿಸಿದ ಈ ಕಾರ್ಯಕ್ರಮ ಅವರ ಮಾತುಗಳಲ್ಲಿಯೇ ಹೇಳುವುದಾದರೆ “ಕನಕದಾಸರು ಬಾರೋ ಕೃಷ್ಣಯ್ಯ ಎಂದ ಕೂಡಲೇ ಕೃಷ್ಣ ಕರದಲಿ ಕೊಳಲನು ಹಿಡಿಯುತ, ಪಾಡುತ ಬಂದುಬಿಡುತ್ತಾನೆ. ಅದೇ ಕೊಳಲ ದನಿಗೆ ರಾಧೆ ಬೃಂದಾವನದಲ್ಲಿ ಮೈಮರೆತು ಕುಣಿಯುತ್ತಾಳೆ. ಕೃಷ್ಣ ಬೇರೆಯಲ್ಲ, ಕೊಳಲು ಬೇರೆಯಲ್ಲ, ಕೃಷ್ಣನಿದ್ದಲ್ಲಿ ಕೊಳಲು, ಕೊಳಲಿದ್ದಲ್ಲಿ ಕೃಷ್ಣ. ಅವನ ಕೊಳಲಿನ ಧ್ವನಿ ಮೋಹಕ, ಆಕರ್ಷಕ, ಒಲವಿನ ಸಂಕೇತ. ಅನುಭಾವಿಗಳು, ಕವಿಗಳು ತಮ್ಮದೇ ಆದ ರೀತಿಯಲ್ಲಿ ಆ ಕೊಳಲಿನ ಕರೆಗೆ ಓಗೊಟ್ಟಿದ್ದಾರೆ”.

ಈ ನೃತ್ಯರೂಪಕವನ್ನು ಭಾವಪೂರ್ಣವಾಗಿ ಅಭಿನಯಿಸಿದವರು ಯುವ ಕಲಾವಿದೆಯರಾದ ದೀಪಾ ಗೋಪಿನಾಥ್, ಸಾಂಚಿ ರಾಂಪ್ರಕಾಶ್, ಆರತಿ ಭಕ್ಷಿ, ದೀಪಿಕಾ ಅಯ್ಯರ್, ವಿಭಾ ತಿರುಮಲೈ, ಅಂಜನಾ ರಾವ್ ಮತ್ತು ಮೋಹೆನಾ ರಾವ್. ಕೆಲವು ದಿನಗಳ ಮಟ್ಟಿಗೆ ಬಂದಿದ್ದ ನಮಗೆ ಆಸ್ಟ್ರೇಲಿಯಾದಲ್ಲಿದ್ದರೂ ಕನ್ನಡ ನಾಡಿನಲ್ಲಿರುವಂತೆ ಭ್ರಮೆಯನ್ನು ಮೂಡಿಸಿದರು. ನೃತ್ಯ ಮುಗಿದ ಮೇಲೆ ಅಲ್ಲಿದ್ದ ಪ್ರತಿಯೊಬ್ಬ ಕನ್ನಡಿಗ/ಕನ್ನಡತಿಯನ್ನು ನೃತ್ಯರೂಪಕಕ್ಕೆ ಬಳಸಿಕೊಂಡಿದ್ದ ಕವಿ ಗೋಪಾಲಕೃಷ್ಣ ಅಡಿಗರ ಕವಿತೆಯ ಮಾತುಗಳಲ್ಲಿಯೇ ಕೇಳಬೇಕೆನಿಸಿತು:

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು 
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 17.11.2010