ನಿಮ್ಮ ಕಣ್ಣಿಗೆ ಪೊರೆ ಬಂದಿದೆಯೇ

  •  
  •  
  •  
  •  
  •    Views  

ಒಂದು ವಾರದ ಹಿಂದೆಯಷ್ಟೇ ದಾವಣಗೆರೆಯಲ್ಲಿ ಒಂದು ಖಾಸಗಿ ಆಸ್ಪತ್ರೆಯ ಉದ್ಘಾಟನೆ ಇತ್ತು. ಆಸ್ಪತ್ರೆಯ ಹೆಸರು ನಯನ. ಹೆಸರಿನಿಂದ ಅದೊಂದು ಕಣ್ಣಿನ ಆಸ್ಪತ್ರೆಯೆಂದು ನಿಮಗೆ ಆಗಲೇ ಅರ್ಥವಾಗಿರಬೇಕು. ಅತ್ಯಾಧುನಿಕ ಉಪಕರಣಗಳನ್ನುಳ್ಳ ಸುಸುಜ್ಜಿತ ಕಣ್ಣಿನ ಆಸ್ಪತ್ರೆ. ಲಂಡನ್ನಲ್ಲಿ ತರಬೇತಿಯನ್ನು ಪಡೆದ ಈರ್ವರು ಯುವವೈದ್ಯರು ಅದನ್ನು ಆರಂಭಿಸಿದ್ದಾರೆ. ನಮ್ಮಿಂದಲೇ ಉದ್ಘಾಟನೆ ಮಾಡಿಸಬೇಕೆಂಬುದು ಅವರ ಮನದಾಳದ ಆಶಯವಾಗಿತ್ತು. ಅದರಲ್ಲಿ ಯಾವುದೇ ತೋರಿಕೆ ಇರಲಿಲ್ಲ. ಅಬ್ಬರದ ಪ್ರಚಾರ ಪಡೆಯುವ ನಿಹಿತ ಉದ್ದೇಶವೂ ಅವರಿಗಿರಲಿಲ್ಲ. ಅವರ ಕಾರ್ಯಕ್ರಮವನ್ನು ಒಪ್ಪುತ್ತೇವೋ ಇಲ್ಲವೋ ಎಂಬ ಆತಂಕದಿಂದ ಅಮೇರಿಕೆಯಲ್ಲಿರುವ ನಮ್ಮ ಆತ್ಮೀಯ ಶಿಷ್ಯರಾದ ಅವರ ಬಂಧುಗಳಿಂದ ಫೋನ್ ಮಾಡಿಸಿದ್ದರು. ನಮ್ಮ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಪತ್ರಿಕೆಗಳಲ್ಲಿ ಜಾಹೀರಾತನ್ನು ಕೊಟ್ಟಾಗ ನೌಕರಿಗಾಗಿ ಶಿಷ್ಯಪ್ರಮುಖರಿಂದ, ರಾಜಕೀಯ ಧುರೀಣರಿಂದ ಶಿಫಾರಿಸು ಪತ್ರಗಳು, ಫೋನುಗಳು ಬರುತ್ತವೆ. ಆದರೆ ಒಂದು ಸಮಾರಂಭಕ್ಕೆ ಬರಲು ಒಪ್ಪುವಂತೆ ಪರದೇಶದಿಂದ ಶಿಫಾರಸ್ಸು ಮಾಡಿಸುವುದನ್ನು ನೋಡಿದ್ದು ಇದೇ ಮೊದಲು. ಇದು ಆ ಯುವವೈದ್ಯರು ಮಠ ಮತ್ತು ಗುರುಗಳ ಮೇಲಿಟ್ಟಿರುವ ಶ್ರದ್ಧಾಭಕ್ತಿಯನ್ನು ತೋರಿಸುತ್ತದೆ. ಅವರಿಗೆ ಹುಬ್ಬಳ್ಳಿಯಲ್ಲಿ ತರಬೇತು ನೀಡಿದ್ದ ಹಿರಿಯ ಖ್ಯಾತ ನೇತ್ರತಜ್ಞರಾದ ಡಾ. ಎಂ.ಎಂ. ಜೋಷಿಯವರು ಬಂದು ಯುವವೈದ್ಯರ ಪರಿಣತಿಯನ್ನು ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದು "ಶಿಷ್ಯಾದಿಚೇತ್ ಪರಾಜಯಂ" (ಶಿಷ್ಯನಿಂದ ಸೋಲನ್ನು ಬಯಸುವವನು ನಿಜವಾದ ಗುರು) ಎನ್ನುವ ಸಂಸ್ಕೃತ ಸೂಕ್ತಿಯನ್ನು ನಮ್ಮ ನೆನಪಿಗೆ ತಂದುಕೊಟ್ಟಿತು. ನಮ್ಮ ದೇಶದ ಜನರು ಅವರು ವೈದ್ಯರಿರಲಿ, ಇಂಜಿನಿಯರಿರಲಿ, ಜನಸಾಮಾನ್ಯರಿರಲಿ ಯಾವುದೇ ವ್ಯವಹಾರ ಉದ್ದಿಮೆಯನ್ನು ಆರಂಭಿಸುವಾಗ ಅದರ ಯಶಸ್ಸಿಗೆ ಗುರುಹಿರಿಯರ ಆಶೀರ್ವಾದವನ್ನು ಬೇಡುವುದು ರೂಢಿಗತವಾಗಿ ನಡೆದುಕೊಂಡು ಬಂದ ಸತ್‌ ಸಂಪ್ರದಾಯ. ಉದ್ಘಾಟನಾ ಸಮಾರಂಭ ಸಾಂಪ್ರದಾಯಿಕವಾಗಿ ದೀಪಬೆಳಗುವುದರೊಂದಿಗೆ ಆರಂಭವಾಯಿತು. ಈ ದೇಶದಲ್ಲಿ ಬೆಂಕಿ ಹಚ್ಚುವುದು ಸುಲಭ (ಆ ಕೆಲಸವನ್ನು ನಮ್ಮ ರಾಜಕಾರಣಿಗಳು ನಿತ್ಯವೂ ಸಮರ್ಥರೀತಿಯಲ್ಲಿ ಮಾಡುತ್ತಾ ಬಂದಿದ್ದಾರೆ) ಆದರೆ ಸಭೆ ಸಮಾರಂಭಗಳಲ್ಲಿ ದೀಪ ಹಚ್ಚುವುದು ಮಾತ್ರ ಬಹಳ ಕಷ್ಟದ ಕೆಲಸ! ಅತಿಥಿಗಳು ಒಟ್ಟುಗೂಡಿ ಕಷ್ಟಪಟ್ಟು ಹಚ್ಚಿದ ಮರುಕ್ಷಣವೇ ದೀಪ ಆರಿಹೋಗುವುದು ಸರ್ವೆ ಸಾಮಾನ್ಯವಾಗಿ ಎಲ್ಲ ಸಭೆಗಳಲ್ಲಿಯೂ ಕಾಣುವ ದೃಶ್ಯ. ಆ ದಿನ ಆಗಿದ್ದೂ ಅದೇ. ದೀಪ ಬೆಳಗಿಸಿದ ಕ್ಷಣಹೊತ್ತಿನಲ್ಲೇ ಆರಿ ಮಂಕಾಗಿದ್ದನ್ನು ನೋಡಿದಾಗ ನಮ್ಮ ಮನಸ್ಸಿನಲ್ಲಿ “Operation was successful but the patient died!” ಎಂಬ ಪ್ರಚಲಿತವಾದ ಇಂಗ್ಲೀಷ್ ನುಡಿಗಟ್ಟು ನೆನಪಾಗಿ ಅದರ ಅರ್ಥಕ್ಕೆ ಹೊಸ ಆಯಾಮವಿರುವುದನ್ನು ಕಂಡಂತಾಯಿತು.

ಕಡೂರು, ಚಿಕ್ಕಮಗಳೂರು, ಬೇಲೂರು, ಹಳೇಬೀಡು, ಅರಸೀಕೆರೆ, ತಿಪಟೂರು ಭಾಗದ ಹಳ್ಳಿಗಳಿಗೆ ಹೋದರಂತೂ ಗುರುಗಳ ಕಾರು ಹತ್ತಿರ ಬರುತ್ತಿದ್ದಂತೆಯೇ ಕೊಂಬು ಕಹಳೆಯನ್ನೂದಿ, ಮದ್ದಳೆ ಬಾರಿಸಿ ಪಟಾಕಿಗಳನ್ನು ಪಟಪಟನೆ ಸಿಡಿಸುತ್ತಾರೆ. ಕೈಯಲ್ಲಿರುವ ತೆಂಗಿನಕಾಯನ್ನು ಮೇಲೆತ್ತಿ ನಿವಾಳಿಸಿ ನೆಲಕ್ಕೆ ಜೋರಾಗಿ ಒಡೆಯುತ್ತಾರೆ. ಕಾಯಿ ಹೋಳಾಗಿ ಅದರೊಳಗಿರುವ ಕೊಬ್ಬರಿ ಮಣ್ಣುಪಾಲಾಗುತ್ತದೆ. ಪಾಪ ಅದನ್ನೇ ಮಕ್ಕಳು ಕೊಬ್ಬರಿಯಾಸೆಗೆ ಭರದಿಂದ ಓಡಿಹೋಗಿ ಧೂಳು ಮೆತ್ತಿಕೊಂಡ ಕೊಬ್ಬರಿಯ ಹೋಳುಗಳನ್ನು ಪೈಪೋಟಿಯಿಂದ ಎತ್ತಿಕೊಳ್ಳುವ ದೃಶ್ಯ ನಮ್ಮಿಂದ ನೋಡಲಾಗದು. ಗುರುಗಳ ಹಸ್ತ ಮುಟ್ಟಿಸಿ ಮಕ್ಕಳಿಗೆ ಹಂಚಿರಿ, ಖುಷಿಯಿಂದ ತಿನ್ನುತ್ತಾರೆ ಎಂದರೆ "ಮೊದಲಿನಿಂದ ನಡೆದು ಬಂದ ಸಂಪ್ರದಾಯ ಮುರಿಯುವುದು ಹೇಗೆ" ಎಂಬ ಆತಂಕ ಹಳ್ಳಿಯ ಮುಗ್ಧ ಜನರಿಗೆ! ಅದೇ ರೀತಿ ಶಿಷ್ಯರು ಜೇಬಿನಿಂದ ಬೆಂಕಿಪೊಟ್ಟಣ ಹೊರತೆಗೆದು ಕಡ್ಡಿಗೀರಿ ಕಾರಿನ ಮುಂದೆ ಕೈಬೊಗಸೆಯಷ್ಟು ಕರ್ಪೂರ ಹಚ್ಚುವುದು ವಾಡಿಕೆ. ಆರತಿಯನ್ನು ಮಾಡಿ ವೀಳೆದೆಲೆಯ ಮೇಲೆ ಕಡಲೆಬತ್ತಿಯನ್ನು ಹಚ್ಚಿ ಗುರುಗಳ ಕಾರಿನ ಮುಂಭಾಗದಲ್ಲಿಯೇ ನೆಲದ ಮೇಲೆ ಇಡದಿದ್ದರೆ ಭಕ್ತಿಸಂಪನ್ನರಾದ ಸುಮಂಗಲೆಯರಿಗೆ ಸಮಾಧಾನವಾಗುವುದಿಲ್ಲ. ಅದನ್ನು ನೋಡಿದಾಗಲೆಲ್ಲಾ ಹಳ್ಳಿಯ ಶಿಷ್ಯರ ಭಕ್ತಿಸಂಪನ್ನತೆಗೆ, ಮುಗ್ಧತೆಗೆ ಹೃದಯ ಮಾರುಹೋದರೂ ಭಕ್ತಿ ಕಂಪಿತ ನಮ್ಮ ಕೂಡಲಸಂಗಮದೇವಾ ಎಂಬ ಬಸವಣ್ಣನವರ ವಚನ ನೆನಪಾಗಿ ಗಾಬರಿಯಾಗುತ್ತದೆ. ಆ ಉರಿವ ಕರ್ಪೂರ ಮತ್ತು ಕಡಲೆಬತ್ತಿಯ ಮೇಲೆ ಕಾರು ಹಾಯ್ದುಹೋಗಿ ಪೆಟ್ರೋಲ್ ಟ್ಯಾಂಕಿಗೆ ಉರಿತಾಗಿದರೆ ಗುರುಗಳನ್ನು ಆ ಕರುಣಾಮಯಿ ದೇವರೇ ಕಾಪಾಡಬೇಕು! ಕಾರು ತಯಾರಿಸುವ ಕಂಪನಿಗಳಿಗೆ ಈ ವಿಷಯ ಗೊತ್ತಿರಲಿಕ್ಕಿಲ್ಲ.

ವಿಯೆನ್ನಾಕ್ಕೆ ಉನ್ನತವ್ಯಾಸಂಗಕ್ಕೆಂದು ಹೋಗುವ ಮುಂಚೆ ಪೂನಾದ Goethe Institute ನಲ್ಲಿ ವಿಶೇಷವಾಗಿ ಜರ್ಮನ್ ಭಾಷೆಯನ್ನು ಕಲಿಯುತ್ತಿರುವಾಗ ಪಠ್ಯಗ್ರಂಥದಲ್ಲಿ ಓದಿದ ಒಂದು ರೋಚಕ ಜರ್ಮನ್ ಕಥೆ ನೆನಪಾಗುತ್ತಿದೆ. ಕಾರು ಚಾಲಕನೊಬ್ಬ ರಾತ್ರಿ ಹೊತ್ತು ಪೆಟ್ರೋಲ್ ಬಂಕಿಗೆ ಹೋದ. ಪರದೇಶಗಳಲ್ಲಿ ನಮ್ಮ ದೇಶದಂತೆ ಪೆಟ್ರೋಲ್ ತುಂಬಿಕೊಡಲು ಸಹಾಯಕರು ಯಾರೂ ಇರುವುದಿಲ್ಲ. ಚಾಲಕರು ಸ್ವತಃ ತಾವೇ ನಿರ್ವಹಿಸಬೇಕು. ತುಂಬಿಕೊಡಲು ಬಂಕಿನವರನ್ನು ಕೇಳಿದರೆ ಅವರಿಗೆ Service Charge ಎಂದು ದುಡ್ಡು ಕೊಡಬೇಕಾಗುತ್ತದೆ. ಆದಕಾರಣ ಯಾರು ಎಷ್ಟೇ ಶ್ರೀಮಂತರಿರಲಿ ಎಲ್ಲರೂ ಯಾವ ಬಿಗುಮಾನವೂ ಇಲ್ಲದೆ ಕಾರಿನಿಂದ ಕೆಳಗಿಳಿದು ಸ್ವತಃ ಪೆಟ್ರೋಲ್ ಬಂಕಿನ ಹ್ಯಾಂಡಲ್ ಹಿಡಿದುಕೊಂಡು ತಮಗೆ ಬೇಕಾದಷ್ಟು ಪೆಟ್ರೋಲನ್ನು ತಾವೇ ಕಾರಿಗೆ ತುಂಬಿಕೊಳ್ಳುತ್ತಾರೆ. ನಂತರ ಯಂತ್ರದಿಂದ ತಾನೇ ತಾನಾಗಿ ಬರುವ ಬಿಲ್ಲನ್ನು ತೆಗೆದುಕೊಂಡು ಕ್ಯಾಷ್ ಕೌಂಟರಿಗೆ ಹೋಗಿ ಪಾವತಿಸುತ್ತಾರೆ. ಅದಕ್ಕನುಗುಣವಾಗಿ ಒಬ್ಬ ಚಾಲಕ ತನ್ನ ಕಾರಿಗೆ ಪೆಟ್ರೋಲ್ ಹಾಕಿಕೊಂಡ. ಮಂದ ಬೆಳಕಿನಲ್ಲಿ ಕಾರಿನ ಟ್ಯಾಂಕ್ ಪೂರಾ ತುಂಬಿದೆಯೋ ಹೇಗೆ ಎಂದು ಸರಿಯಾಗಿ ಕಾಣಿಸುತ್ತಿರಲಿಲ್ಲ. ಅದಕ್ಕಾಗಿ ಆ ಚಾಲಕ ಬೆಂಕಿಕಡ್ಡಿ ಗೀರಿ ಕಾರಿನ ಪೆಟ್ರೋಲ್ ಟ್ಯಾಂಕಿನ ಹತ್ತಿರ ಹಿಡಿದು ಇಣುಕಿ ನೋಡಿದನಂತೆ!

ಸಮಾರಂಭದ ಆಹ್ವಾನಪತ್ರಿಕೆಯ ಮೇಲೆ ಕಣ್ಣುಹಾಯಿಸಿದಾಗ ಅದರಲ್ಲೊಂದು ಸಂಸ್ಕೃತ ಸೂಕ್ತಿ ಇತ್ತು: “ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ. ಅಂದರೆ ಮನುಷ್ಯನ ಎಲ್ಲ ಇಂದ್ರಿಯಗಳಿಗಿಂತಲೂ ಕಣ್ಣು ಮುಖ್ಯವಾದುದು. ಅದನ್ನು ಓದಿದಾಗ ಮನಸ್ಸಿನಲ್ಲಿ ಅನೇಕ ವಿಚಾರಗಳು ಆವಿರ್ಭವಿಸತೊಡಗಿದವು. ಕರ್ಣರಸಾಯನಮಲೆ ಭಾರತಂ ಎಂಬ ಪಂಪನ ಮಾತನ್ನು ಬದಲಾಯಿಸಿ ಕರ್ಣಕಠೋರಮಲೆ ಭಾಷಣಂ ಎನ್ನಬಹುದಾದ ಭಾಷಣಗಳೇನೂ ಅಷ್ಟಾಗಿ ಇರಲಿಲ್ಲ. ಎದುರಿಗೆ ಪತ್ರಕರ್ತರು ಅನೇಕರು ಕುಳಿತಿದ್ದರು. ಸಾಮಾನ್ಯವಾಗಿ ಪತ್ರಿಕಾ ವರದಿಗಾರರು ಭಾಷಣಗಳನ್ನು ಕೇಳಿ ನಗುವುದು ಅಪರೂಪ. ಯಾವಾಗಲೂ ಮಾತನಾಡುವ ಅತಿಥಿಗಳನ್ನು ದುರುಗುಟ್ಟಿಕೊಂಡು ನೋಡುತ್ತಿರುತ್ತಾರೆ ಇಲ್ಲವೇ ಅಂತರ್ಮುಖಿಗಳಾಗಿ ಕುಳಿತಿರುತ್ತಾರೆ. ನಮ್ಮ ಮಂತ್ರಿಗಳಂತೆ ಅವರಿಗೂ ರಾಜಾತಿಥ್ಯ. ಬಗಲಲ್ಲಿ ಕೈಚೀಲ ಇಳಿಬಿಟ್ಟುಕೊಂಡು ಕೈಯಲ್ಲಿ ಪೆನ್ನು ನೋಟ್ ಪ್ಯಾಡ್ ಹಿಡಿದು ಆಗಾಗ್ಗೆ ಏನನ್ನೋ ಗೀಚುತ್ತಿರುತ್ತಾರೆ. ಸಭೆಯಲ್ಲಿ ಬಹಳ ಹೊತ್ತು ಇರುವುದಿಲ್ಲ. ಮಂತ್ರಿಗಳು ನಿರ್ಗಮಿಸುತ್ತಿದ್ದಂತೆಯೇ ದಿಢೀರನೆ ಎದ್ದು ಅವರ "ಘೆರಾವ್" ಮಾಡಿ ಪ್ರಶ್ನೆಗಳ ಸುರಿಮಳೆಗರೆದು ಅವರ ಮೈನೀರಿಳಿಸುತ್ತಾರೆ. ಕಣ್ಣುಕೋರೈಸುವ ಕೋಲ್ಮಿಂಚಿನಂತೆ ಕೈಯಲ್ಲಿರುವ ಕ್ಯಾಮರಾಗಳು ಕಣ್ಣು ಮಿಟುಕಿಸುತ್ತಿರುತ್ತವೆ.     ನಿರಾಸಕ್ತಿಯಿಂದ ಸಭೆಯ ಸುತ್ತ ಕಣ್ಣುಹಾಯಿಸಿದಂತೆ ಕಂಡುಬಂದರೂ ಅವರ ಹದ್ದಿನ ಕಣ್ಣುಗಳಿಗೆ ಏನಾದರೂ ಬಿದ್ದರೆ ಮಾರನೆಯ ದಿನ ಓದುಗರ ಮನಸ್ಸು ಅರಳುವಂತೆ ಬರೆಯುತ್ತಾರೆ.

ಅತಿಥಿಗಳು ಮಾತನಾಡುತ್ತಿರುವಾಗ ನಮ್ಮ ಆಲೋಚನೆ ಮುಂದುವರಿದಿತ್ತು. ಆಸ್ಪತ್ರೆಗೆ ಇಟ್ಟಿದ್ದ ಹೆಸರು ನಯನ ಸಂಸ್ಕೃತ ಶಬ್ದ. ಅದು ಒಂದು ವಿಶೇಷತೆಯಿಂದ ಕೂಡಿದೆ ಎನಿಸಿತು. ಮೂರಕ್ಷರಗಳ ನಯನ ಶಬ್ದವನ್ನು ಎಡಬದಿಯಿಂದ ಓದಿದರೂ ನಯನ, ಬಲಬದಿಯಿಂದ ಓದಿದರೂ ನಯನ. ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯರು ಬಲಗೈಯಲ್ಲಿ ಮಂತ್ರದಂಡದಂತಿರುವ ಯಂತ್ರವನ್ನು ಹಿಡಿದು ನಿಮ್ಮ ಅಕ್ಷಿಪಟಲದ ಮೇಲೆ ಬೆಳಕು ಚೆಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನೋಡುವಾಗ ಈಚೆ ಬದಿಯಿಂದ ನೋಡುವುದೂ ಕಣ್ಣು ಆಚೆಬದಿಯಿಂದ ನೋಡುವುದೂ ಕಣ್ಣು, ಯಾವುದಾದರೂ ಒಂದು ವಸ್ತುವಿನ ಮಹತ್ವವನ್ನು ಅರಿಯಬೇಕೆಂದರೆ ಅದು ಇಲ್ಲದಿದ್ದರೆ ಏನಾಗುತ್ತಿತ್ತು ಎಂದು ವಿಚಾರಮಾಡಬೇಕು. ಮನುಷ್ಯನ ಎಲ್ಲ ಇಂದ್ರಿಯಗಳ ಬಗೆಯೂ ಅವು ಇಲ್ಲದಿದ್ದರೆ ಏನಾಗುತ್ತಿತ್ತು ಎಂದು ಯೋಚಿಸುತ್ತಾ ಹೋದರೆ ಒಂದು ಇಂದ್ರಿಯದ ಕೆಲಸವನ್ನು ಮತ್ತೊಂದು ಇಂದ್ರಿಯ ಮಾಡಲು ಸಾಧ್ಯವಿಲ್ಲ. ಯಾವುದೂ ಮೇಲಲ್ಲ ಯಾವುದೂ ಕೀಳಲ್ಲ. ಎಲ್ಲ ಇಂದ್ರಿಯಗಳೂ ಜೀವನನಿರ್ವಹಣೆಗೆ ಬೇಕು ಎನಿಸುವುದು ಸಹಜ. ಆದರೆ ಅವೆಲ್ಲವುಗಳಿಗಿಂತ ನೋಡುವ ಕಣ್ಣುಗಳು ಇಲ್ಲದಿದ್ದರೆ ಇಡೀ ಬದುಕನ್ನು ಕಗ್ಗತ್ತಲು ಆವರಿಸುತ್ತದೆ. ಉಳಿದ ಇಂದ್ರಿಯಗಳು ಇಲ್ಲದಿದ್ದರೆ ಹೇಗೋ ಸುಧಾರಿಸಿಕೊಳ್ಳಬಹುದು. ಆದರೆ ಕಣ್ಣಿಲ್ಲದಿದ್ದರೆ ಜೀವನ ನಿರ್ವಹಣೆ ಬಹಳ ಕಷ್ಟಕರ. ಕಣ್ಣು ಶರೀರವೆಂಬ ಹಣತೆಯ ಜ್ಯೋತಿ ಇದ್ದಂತೆ. ಆಕಾರದಲ್ಲಿ ಪುಟ್ಟದಾದರೂ ಇಡೀ ಬ್ರಹ್ಮಾಂಡವನ್ನೇ ನೋಡಬಲ್ಲದು. ಕಣ್ಣು ಮುಚ್ಚಿದರೂ ನೆನಪಿನ ಸುರುಳಿ ಬಿಚ್ಚಿದರೆ ಸಾಕು ಗತಕಾಲದ ದೃಶ್ಯಾವಳಿಗಳು ಒಳಗಣ್ಣಿನ ಮುಂದೆ ಸುಳಿದಾಡುತ್ತವೆ. ಮನುಷ್ಯನ ಕಣ್ಣು ಜೀವಂತ ಕ್ಯಾಮರಾ ಇದ್ದಂತೆ. ಒಂದು ಸೆಕೆಂಡಿಗೆ ಅದೆಷ್ಟು ಚಿತ್ರಗಳನ್ನು ಅದು ತೆಗೆಯುತ್ತದೆಯೋ ಏನೋ.

ಕಣ್ಣು ಕಣ್ಣು ಕೂಡಿ ಪ್ರೀತಿ ಅಂಕುರಿಸಿ (Love at first sight) ಬಾಳಸಂಗಾತಿಗಳಾದ ದಂಪತಿಗಳು ಕಣ್ಣಿನಿಂದ ಕಲಿಯಬೇಕಾದ್ದು ಬಹಳಷ್ಟಿದೆ. ಪ್ರೀತಿ (Love ) ಬೇರೆ ಕಾಮ(Passion) ಬೇರೆ ಎಂಬುದನ್ನು ಮೊದಲು ಅವರು ತಿಳಿದುಕೊಳ್ಳಬೇಕು. ಇಬ್ಬರಿಗೂ ಎರಡೆರಡು ಕಣ್ಣುಗಳಿವೆ. ಎಡಗಣ್ಣು ಎಡಕ್ಕೆ ತಿರುಗಿದರೆ ಬಲಗಣ್ಣು ಎಡಕ್ಕೆ ತಿರುಗುತ್ತದೆ. ಬಲಗಣ್ಣು ಬಲಕ್ಕೆ ತಿರುಗಿದರೆ ಎಡಗಣ್ಣೂ ಬಲಕ್ಕೆ ತಿರುಗುತ್ತದೆ. ಅವು ಎಂದೂ ಪರಸ್ಪರ ಜಗಳವಾಡುವುದಿಲ್ಲ, ಪೈಪೋಟಿ ನಡೆಸುವುದಿಲ್ಲ. ಕಣ್ಣೆರಡಾದರೂ ನೋಡುವ ದೃಷ್ಟಿ ಹೇಗೆ ಒಂದೋ ಹಾಗೆ ಸಂಸಾರದಲ್ಲಿ ಪತಿಪತ್ನಿಯರ ಸಂಬಂಧ ಇರಬೇಕು. ಶಿವನ ಅರ್ಧನಾರೀಶ್ವರ ಲೀಲೆಯಂತೆ ಒಂದಾಗಿರಬೇಕು. ಆದರೆ ಈಗ ಕಾಣಿಸುತ್ತಿರುವುದೇನು? ಮದುವೆಗೆ ಮುಂಚೆ ಓಡಾಡಿಕೊಂಡಿದ್ದಾಗ "ಚಂದ್ರಮುಖಿ"ಯಾಗಿ ಕಂಡಿದ್ದವಳು ಮದುವೆಯ ನಂತರ "ಶೂರ್ಪನಖಿ"ಯಾಗಿ ಕಾಣಿಸುತ್ತಾಳೆ! ಕಣ್ಣು ಎರಡಾದರೂ ನೋಡುವ ದೃಷ್ಟಿ ಒಂದಾಗಿಲ್ಲ. ನಾಲಿಗೆ ಒಂದಾದರೂ ಆಡುವ ಮಾತು ಒಂದಾಗಿಲ್ಲ." ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಎಂದು ದಾಸರು ಪರಿತಪಿಸಿದ್ದು ಇದಕ್ಕಾಗಿಯೇ. ಪತಿಪತ್ನಿಯರು ಕಣ್ಣಿಂದ ನೋಡಿದ್ದನ್ನು ನಂಬುವುದಕ್ಕಿಂತ ಕಿವಿಯಿಂದ ಕೇಳುವುದನ್ನೇ ನಂಬುವುದು ಜಾಸ್ತಿ. ಇಲ್ಲಸಲ್ಲದ ಚಾಡಿ ಮಾತುಗಳನ್ನು  ಹೇಳಿ ಗಂಡಹೆಂಡಿರನ್ನು ಅಗಲಿಸುವ "ಕರ್ಣಪಿಶಾಚಿ"ಗಳು ಸಂಬಂಧದಲ್ಲಿ, ಸಮಾಜದಲ್ಲಿ ಬಹಳಷ್ಟು ಇವೆ. ಕಷ್ಟಕಾಲದಲ್ಲಿ ಒಂದು ಬಿಡಿಗಾಸಿನಷ್ಟೂ ಸಹಾಯಮಾಡದ ಈ ಪಿಶಾಚಿಗಳು ಪತಿಪತ್ನಿಯರನ್ನು ಅವರ ಪಾಡಿಗೆ ಅವರು ನೆಮ್ಮದಿಯಿಂದ ಬದುಕುವುದಕ್ಕೆ ಬಿಡುವುದಿಲ್ಲ. ಮನೆ ಮಹಾಭಾರತದ ಕುರುಕ್ಷೇತ್ರವಾಗುತ್ತದೆ. ಮದುವೆಮನೆಯಲ್ಲಿ ಮೃಷ್ಟಾನ್ನ ಭೋಜನ ಉಂಡು ಮದುಮಕ್ಕಳಿಗೆ ಅಕ್ಕಿಕಾಳು ಹಾಕಿದ ಈ ಜ(ದ)ನ ಒಬ್ಬರ ಹಿಂದೆ ಒಬ್ಬರು ನಿಂತು ಹಗ್ಗಜಗ್ಗಾಟವಾಡಿ ಕಟ್ಟಿದ ತಾಳಿ ಹರಿಯುವವರೆಗೂ ಬಿಡುವುದಿಲ್ಲ. ನವವಧುವನ್ನು ವಧೆ ಮಾಡಿ ಮತ್ತೊಂದು ಅಮಾಯಕ ಹೆಣ್ಣಿನ ಕೊರಳಿಗೆ ತಾಳಿ ಬಿಗಿಸುವವರೆಗೂ ಇವರಿಗೆ ಸಮಾಧಾನವಾಗುವುದಿಲ್ಲ. ಇನ್ನು ಅವರ ಬಂಧು ಬಾಂಧವರೋ ಗಂಡು ಎಷ್ಟು ಸಾರಿ ತಾಳಿ ಕಟ್ಟಿದರೂ ಸಂತೃಪ್ತಿಯಾಗಿ ಮೃಷ್ಟಾನ್ನ ಭೋಜನ ಮಾಡುವ "ಉದಾ(ದ)ರಜೀವಿಗಳು! ಛೀ, ಥೂ ಎನ್ನಲು ಯಾರೂ ಸಿದ್ಧರಿಲ್ಲ. ತಮ್ಮ ಮಗಳನ್ನೇನಾದರೂ ಕೊಟ್ಟು ಆಸ್ತಿ ಹೊಡೆದುಕೊಳ್ಳಲು ಬರುತ್ತದೆಯೋ ಹೇಗೆ ಎಂದು ಲೆಕ್ಕಾಚಾರ ಹಾಕಲೂ ಹೇಸದ ಹೇಸರಗತ್ತೆಗಳು. ನಮ್ಮ "ಸದ್ಧರ್ಮ ನ್ಯಾಯಪೀಠದಲ್ಲಿ" ಇಂತಹ ಎಷ್ಟೋ ಪ್ರಕರಣಗಳು ವಿಚಾರಣೆ ನಡೆದು ಈ ನರರಾಕ್ಷಸರನ್ನು ದೂರ ಓಡಿಸಿದ ಮೇಲೆಯೇ ಗಂಡಹೆಂಡಿರು ಒಂದಾದ ಉದಾಹರಣೆಗಳು ಬಹಳಷ್ಟು ಇವೆ.  

“Face is the index of mind” ಎಂದು ಹೇಳುವಲ್ಲಿ ಕಣ್ಣುಗಳ ಪಾತ್ರವೇ ಜಾಸ್ತಿ ಎನಿಸುತ್ತದೆ. ಮಕ್ಕಳ ಕಣ್ಣುಗಳನ್ನು ನೋಡಿ. ಅವುಗಳಲ್ಲಿ ಎಂತಹ ಶುಭ್ರತೆ ಇರುತ್ತದೆ. ಎಂತಹ ಮುಗ್ಧತೆ ಇರುತ್ತದೆ. ಎಂತಹ ನಿರ್ಮಲತೆ ಇರುತ್ತದೆ. ಎಂತಹ ಕಟುಕನ ಹೃದಯವನ್ನೂ ಮಗುವಿನ ಕಣ್ಣುಗಳು ಗೆಲ್ಲುತ್ತವೆ.  ಮಗುವಿನ ಮನಸ್ಸು ಕಣ್ಣಿನ ಮಧ್ಯೆ ಇದ್ದ ಪಾರದರ್ಶಕತೆ ಕ್ರಮೇಣ ವಯಸ್ಸು ಕಳೆದಂತೆ ವಿಕೃತಗೊಳ್ಳುತ್ತಾ ಹೋಗುತ್ತದೆ. ಮುಗ್ದತೆಯ ಜಾಗವನ್ನು ಮೋಸ, ಕಪಟ, ವಂಚನೆ ದುರ್ಗುಣಗಳು ಆಕ್ರಮಿಸಿಕೊಳ್ಳುತ್ತವೆ. ಒಳಗೆ ಇರುವುದೇ ಒಂದು ಹೊರಗೆ ಕಾಣಿಸಿಕೊಳ್ಳುವುದೇ ಒಂದು. ಮನುಷ್ಯನ ಮನಸ್ಸು ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಕಾಣದ ಮನಸ್ಸಿನ ಬಾಹ್ಯರೂಪವೇ ಕಣ್ಣು ಎಂದು ಹೇಳಬಹುದು. ಮನಸ್ಸು ಮತ್ತು ಹೃದಯದಲ್ಲಿರುವ ಎಲ್ಲ ಭಾವನೆ/ದುರ್ಭಾವನೆಗಳೂ ಕಣ್ಣುಗಳಲ್ಲಿ ಗೋಚರಿಸುತ್ತವೆ. ಪ್ರೀತಿ-ದ್ವೇಷ, ಕೋಪ-ತಾಪ, ಹಮ್ಮು-ಬಿಮ್ಮು, ಕರುಣೆ-ಕ್ರೌರ್ಯ, ಔದಾರ್ಯ-ಲೋಭ, ಮೋಹ-ನಿರ್ಮೋಹ, ಮದ-ಮತ್ಸರ, ಅಹಂಕಾರ-ಸಂಕೋಚ, ಠೇಂಕಾರ-ಸೌಜನ್ಯ, ಗಾಂಭೀರ್ಯ-ನಿರ್ಲಜ್ಞೆ, ಭಯ-ನಿರ್ಭಯ, ಕಪಟತನ-ನಿಷ್ಠಪಟತನ, ಮಾನ-ಅವಮಾನ ಇವೆಲ್ಲವುಗಳೂ ಕಣ್ಣುಗಳಲ್ಲಿ ಅಡಗಿರುತ್ತವೆ. ಮನುಷ್ಯನಿಗೆ ಸಿಟ್ಟು ಬಂದಾಗ ಕಾಲಿನಿಂದ ಒದೆಯುತ್ತಾನೆ, ಕೈಯಿಂದ ಹೊಡೆಯುತ್ತಾನೆ. ಭಯ ಉಂಟಾದಾಗ ಬೆಚ್ಚಿಬೀಳುತ್ತಾನೆ, ಕಾಲ್ಕೀಳುತ್ತಾನೆ. ಸಂತೋಷವಾದಾಗ ಕುಣಿಯುತ್ತಾನೆ, ಖುಷಿಯಿಂದ ಕೈಬೀಸುತ್ತಾನೆ. ಶಬ್ದ ತರಂಗಗಳು ಕಿವಿಯ ಮೇಲೆ ಬಿದ್ದಾಗ ಕೇಳುವುದು ಬೇರೆ, ಒಬ್ಬರ ಮೇಲಿನ ದ್ವೇಷದಿಂದ ಕಿವಿಯನ್ನು ಕಚ್ಚುವುದು ಬೇರೆ, ಮನುಷ್ಯನ ವಿಭಿನ್ನ ಅಂಗಾಂಗಗಳಿಂದ ಒಂದಲ್ಲ ಒಂದು ಭಾವನೆ ಪ್ರಕಟವಾದರೂ ಹೆಚ್ಚಿನ ಭಾವನೆಗಳು ಪ್ರಕಟವಾಗುವುದು ಕಣ್ಣುಗಳಲ್ಲಿ ಮಾತ್ರ. ಕಣ್ಣುರಿ ಕಣ್ಣು ಕುಕ್ಕುವುದು, ಕಣ್ಣು ಹೊಡೆಯವುದು, ಕಣ್ಣ ಮಿಟುಕಿಸುವುದು, ಕಣ್ಣು ಕೆಂಪಗೆಮಾಡುವುದು, ಕಣ್ಣಾಸರ ಆಗುವುದು, ಕಣ್ಣು ಕೆಕ್ಕರಿಸಿ ನೋಡುವುದು, ಕಣ್ ಕಣ್ ಬಿಡುವುದು, ಮೊಸಳೆ  ಕಣ್ಣೀರು ಸುರಿಸುವುದು, ಕಣ್ಣು ತೆರೆದು ನೋಡುವುದು, ಕಣ್ಣೀರು ಸುರಿಸುವುದು, ಹದ್ದಿನ ಕಣ್ಣು, ಕಾಮಾಲೆ ಕಣ್ಣು, ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಇತ್ಯಾದಿ ಎಷ್ಟೊಂದು ಕ್ರಿಯಾಪದಗಳು ಕಣ್ಣಿನೊಂದಿಗೆ ಜೋಡಣೆಗಾಗಿವೆ. ಕೆಲವೊಮ್ಮೆ ನೋಡು ಎಂಬುದು ಕೇವಲ ಕಣ್ಣಿಗೆ ಸಂಬಂಧಿಸಿದ ಗ್ರಹಿಕೆ ಮಾತ್ರವಲ್ಲ. ಎಲ್ಲ ಇಂದ್ರಿಯಗಳ ಗ್ರಹಿಕೆಯೂ ಆಗುತ್ತದೆ. ಉದಾಹರಣೆಗೆ ಕೇಳಿ ನೋಡು, ತಿಂದು ನೋಡು, ರುಚಿ ನೋಡು, ಕುಡಿದು ನೋಡು, ಮಾಡಿ ನೋಡು, ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಪ್ರೀತಿ ಹುಟ್ಟುವುದು ಕಣ್ಣುಗಳಲ್ಲಿ, ಅನುಕಂಪ ಮೂಡುವುದು ಕಣ್ಣುಗಳಲ್ಲಿ, ಕೌರ್ಯ ಕಾಣಿಸುವುದು ಕಣ್ಣುಗಳಲ್ಲಿ, ದ್ವೇಷದ ಕಿಡಿ ಹೊರಹೊಮ್ಮುವುದು ಕಣ್ಣುಗಳಲ್ಲಿ, ಅಷ್ಟೇ ಏಕೆ ತೇಲ್ಗಣ್ಣು ಮೇಲ್ಗಣ್ಣಾಗಿ ಜೀವತಂತು ಕೊನೆಗೊಳ್ಳುವುದೂ ಕಣ್ಣುಗಳಲ್ಲಿ! ಅದಕ್ಕೇ ಅಲ್ಲವೆ ಬಸವಣ್ಣನವರು ಕೇಳಿದ್ದು:

ಕಣ್ಣೊಳಗೆ ಕಣ್ಣಿದ್ದೂ ಕಾಣಲೇಕರಿಯರಯ್ಯಾ? 
ಕಿವಿಯೊಳಗೆ ಕಿವಿಯಿದ್ದೂ ಕೇಳಲೇಕರಿಯರಯ್ಯಾ?”
ಇದನರಿತು ಬದುಕುವುದೇ ಸಾರ್ಥಕ ಜೀವನ.

ಪ್ರಖ್ಯಾತ ನೇತ್ರತಜ್ಞ ದಿವಂಗತ ಡಾ. ಎಂ.ಸಿ.ಮೋದಿಯವರ ಹೆಸರನ್ನು ಕೇಳದವರಿಲ್ಲ. ಅವರು ನಮ್ಮ ನಾಡಿನಲ್ಲಿ ಮಾಡಿದ ಲಕ್ಷಾಂತರ ಜನರ ನೇತ್ರ ಶಸ್ತ್ರಚಿಕಿತ್ಸೆ ಒಂದು ವಿಶ್ವದಾಖಲೆ. ಅವರ ಕೈಯಲ್ಲಿ ಏನು ಮೋಡಿ ಇತ್ತೋ ಏನೋ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಅವರ “ಉಚಿತ ನೇತ್ರ ಚಿಕಿತ್ಸಾ ಶಿಬಿರಗಳಲ್ಲಿ ಹಳ್ಳಿಯ ಜನರು ಸಾಲುಗಟ್ಟಿ ನಿಂತಿರುತ್ತಿದ್ದರು. ಡಾ. ಮೋದಿಯವರು ಸಾಲಿನಲ್ಲಿ ನಿಂತಿದ್ದ ಜನರ ಹತ್ತಿರ ತಾವೇ ಹೋಗಿ ಕೈಯಲ್ಲಿದ್ದ ಟಾರ್ಚ್‌ ನಿಂದ ಬೆಳಕನ್ನು ಬಿಟ್ಟು ತುಂಬಾ ತಾಳ್ಮೆಯಿಂದ ಪರೀಕ್ಷಿಸಿ ಕಣ್ಣಿನ ಪೊರೆ ಕಟ್ಟಿ ಶಸ್ತ್ರಚಿಕಿತ್ಸೆ ಅವಶ್ಯಕ ಎಂದು ಕಂಡುಬಂದವರಿಗೆ ಕೆಂಪು ಕಾರ್ಡನ್ನು, ಉಳಿದವರಿಗೆ ಹಸಿರು ಕಾರ್ಡನ್ನು ಕೊಡುತ್ತಿದ್ದರು. ನಂತರ ಕೆಂಪು ಕಾರ್ಡು ಪಡೆದವರ ಕಣ್ಣುಗಳ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಿದ್ದರು. ಸರ್ಕಾರ ಕೊಡುವ ಹಸಿರು ಕಾರ್ಡಿಗೆ ಆಸೆಪಡುವ ಹಳ್ಳಿಯ ರೈತರು ಡಾ. ಮೋದಿಯವರ ಕೈಯಿಂದ ಮಾತ್ರ ಯಾವಾಗಲೂ ಕೆಂಪು ಕಾರ್ಡು ಪಡೆಯಲು ಹಾತೊರೆಯುತ್ತಿದ್ದರು. ಡಾ. ಮೋದಿಯವರು ಪ್ರತಿವರ್ಷ ವಿವಿಧ ಸ್ಥಳಗಳಲ್ಲಿ ನಡೆಯುವ ನಮ್ಮ ಮಠದ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ತಪ್ಪದೆ ಬರುತ್ತಿದ್ದರು. ಅವರು ಬಂದಾಗಲೆಲ್ಲಾ ಭಾಷಣ ಮಾಡುವಾಗ ಒಂದು ಮಾತನ್ನು ತಪ್ಪದೆ ಹೇಳುತ್ತಿದ್ದರು: “ನಾನೊಬ್ಬ ಕಣ್ಣಿನ ಡಾಕ್ಟರು ನಿಜ. ನನ್ನ ಹತ್ತಿರ ಜನರು ಕಣ್ಣಿನ ಚಿಕಿತ್ಸೆಗೆಂದು ಬರುತ್ತಾರೆ. ನಾನು ಆಪರೇಷನ್ ಮಾಡಿ ಕಣ್ಣಿನ ಪೊರೆ ತೆಗೆದು ಕಳುಹಿಸುತ್ತೇನೆ. ಆದರೆ ನಾನು ಆಪರೇಷನ್ ಮಾಡುವುದು ಜನರ ಹೊರಗಣ್ಣನ್ನು ಮಾತ್ರ. ನಾನೂ ಒಬ್ಬ ಕಣ್ಣಿನ ರೋಗಿ. ನನ್ನ ಒಳಗಣ್ಣನ್ನು ಸಿರಿಗೆರೆಯ ಸ್ವಾಮಿಗಳಿಂದ ಆಪರೇಷನ್ ಮಾಡಿಸಿಕೊಳ್ಳಲು ಈ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಬರುತ್ತೇನೆ”. ಅವರ ಈ ಮಾತುಗಳನ್ನು ಕೇಳಿದ ಜನರು ಭಾವಪರವಶರಾಗಿ ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದರು. ಆದರೆ ನಮ್ಮ ದೃಷ್ಟಿಯಲ್ಲಿ ಡಾ. ಮೋದಿಯವರ ಯಾವ ಒಳಗಣ್ಣಿಗೂ ಪೊರೆ ಕಟ್ಟಿದ್ದಿಲ್ಲ. ಅವರ ಒಳಗಣ್ಣನ್ನು ಯಾರೂ ಆಪರೇಷನ್ ಮಾಡುವ ಅವಶ್ಯಕತೆ ಎಂದೂ ನಮಗೆ ಕಂಡುಬರಲಿಲ್ಲ. ಪ್ರತಿವರ್ಷವೂ ಅವರು ನಮ್ಮಿಂದ ಹಸಿರುಕಾರ್ಡನ್ನೇ ಪಡೆದುಕೊಂಡು ಹೋಗುತ್ತಿದ್ದರು! ಅವರು ಇಹಲೋಕದಿಂದ ಕಣ್ಮರೆಯಾಗಿ ಅನೇಕ ವರ್ಷಗಳಾದರೂ ಗ್ರಾಮೀಣ ಜನರ ಕಣ್ಣುಗಳಲ್ಲಿ ಈಗಲೂ ಅವರು ಹಚ್ಚಹಸಿರಾಗಿಯೇ ಉಳಿದಿದ್ದಾರೆ! ಈ ಹಿನ್ನಲೆಯಲ್ಲಿ ನಿಮ್ಮ ಅಂತರಂಗದ ಕಣ್ಣಿಗೆ ಪೊರೆ ಕಟ್ಟಿದಯೇ ಹೇಗೆ? ನೀವೆ ಅಂತರ್ ಮುಖಿಗಳಾಗಿ ಪರೀಕ್ಷೀಸಿಕೊಳ್ಳಿ ಮನವರಿಯದ ಕಳ್ಳತನವಿಲ್ಲವೆಂಬಮಾತು ಸದಾ ನಿಮ್ಮ ನೆನಪಿನಲ್ಲಿರಲಿ! 

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 18.11.2009.