ಕಾನೂನು v/s ಮಾನವೀಯತೆ

  •  
  •  
  •  
  •  
  •    Views  

ಬ್ರಿಟಿಷ್ ಏರವೇಸ್ ವಿಮಾನವು ನ್ಯೂಯಾರ್ಕಿನಿಂದ ಸಂಜೆ 7 ಗಂಟೆಗೆ ಹೊರಟು ಲಂಡನ್ ಮಹಾನಗರವನ್ನು ತಲುಪಿದಾಗ ಮಾರನೆಯ ಬೆಳಗ್ಗೆ 7 ಗಂಟೆಯಾಗಿತ್ತು. ನಾಳೆಯಿಂದ ಲಂಡನ್ ನಲ್ಲಿ ನಡೆಯಲಿರುವ ಒಲಂಪಿಕ್ಸ್ ಕ್ರೀಡಾಮೇಳದ ಸ್ಪರ್ಧಿಗಳಲ್ಲಿ ಉದ್ದ ಜಿಗಿತ (long jump) ಛಾಂಪಿಯನ್ ಗಳಿಗೆ ಸವಾಲು ಎಸೆಯುವಂತೆ ವಿಮಾನವು ಒಂದೇ ನೆಗೆತದಲ್ಲಿ ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿತ್ತು. ಸುಮಾರು 5,500 ಕಿ.ಮೀ ದೂರವನ್ನು ಕ್ರಮಿಸಲು ಕೇವಲ ಏಳು ಗಂಟೆ ತೆಗೆದುಕೊಂಡಿದ್ದರೂ ಲಂಡನ್ ಗಡಿಯಾರವೂ 5 ಗಂಟೆ ಮುಂದಕ್ಕೆ ಓಡಿತ್ತು. ಕಾಲಮಾನದ ವ್ಯತ್ಯಾಸದಿಂದಾಗಿ ಕಣ್ಣೆದುರಿಗೇ 5 ಗಂಟೆಗಳು ಹೆಚ್ಚುವರಿಯಾಗಿ ಕಳೆದುಹೋಗಿದ್ದು ಗೊತ್ತಾಗಲೇ ಇಲ್ಲ. ಜಗತ್ತಿನಲ್ಲಿ ಯಾವ ಎರಡು ಗಡಿಯಾರಗಳೂ ಒಂದೇ ಸಮಯವನ್ನು ತೋರಿಸುವುದಿಲ್ಲವೆಂಬ ಮಾತೊಂದು ಆಂಗ್ಲಭಾಷೆಯಲ್ಲಿದೆ (No two Watches ever agree). ಆದರೆ ಕೆಟ್ಟು ನಿಂತ ಗಡಿಯಾರವೂ ಸಹ ಸದಾ ಕಾಲ ಜಗತ್ತಿನ ಯಾವುದೋ ಒಂದು ಸ್ಥಳದ ಸಮಯವನ್ನು ಕರಾರುವಾಕ್ಕಾಗಿ ತೋರಿಸುತ್ತಿರುತ್ತದೆ ಎಂದು ನೀವು ಧೈರ್ಯವಾಗಿ ಹೇಳಬಹುದು! ಹಾಗೆಂದು ನಿಮ್ಮ ಕೈಗಡಿಯಾರವನ್ನು ಸರಿಪಡಿಸಿಕೊಳದೇ ಹೋದರೆ ನಿಂತಲ್ಲಿಯೇ ನಿಲ್ಲಬೇಕಾಗುತ್ತದೆ; ಮುಂದೆ ಪ್ರಯಾಣಿಸಲು ಆಗುವುದಿಲ್ಲ.

ಲಂಡನ್ ನಲ್ಲಿ ನಡೆಯಲಿರುವ ಒಲಂಪಿಕ್ ಕ್ರೀಡಾಮೇಳಕ್ಕೆ ಈಗಾಗಲೇ ಅನೇಕ ದೇಶಗಳಿಂದ ಸುಮಾರು ಹತ್ತು ಸಾವಿರ ಕ್ರೀಡಾಪಟುಗಳು ಬಂದು ತಲುಪಿದ್ದಾರೆ. ಈ ಸಂದರ್ಭದಲ್ಲಿ ಕೈಗೆ ಹಚ್ಚಿಕೊಳ್ಳುವ ಕ್ರೀಂನಲ್ಲಿ ರಾಸಾಯನಿಕ ದ್ರಾವಣವನ್ನು ಬೆರೆಸಿ ವಿಷಪೂರಿತ ಸಯನೈಡ್ ದಾಳಿಯನ್ನು ಮಾಡಲು ಭಯೋತ್ಪಾದಕರು ಸಂಚು ಮಾಡುತ್ತಿದ್ದಾರೆಂದು ಬ್ರಿಟನ್ನಿನ ರಕ್ಷಣಾಸಿಬ್ಬಂದಿ ಕಟ್ಟೆಚ್ಚರ ವಹಿಸಿದೆ. ಸುಮಾರು ಹತ್ತು ಸಾವಿರ ಸುರಕ್ಷತಾ ಸಿಬ್ಬಂದಿ, ಐದು ಸಾವಿರ ಮಿಲಿಟರಿ ಪಡೆ ಕಾರ್ಯೋನ್ಮುಖವಾಗಿದೆ. ಅಲ್ಲದೆ ಅಮೇರಿಕೆಯಿಂದಲೂ ಮಿಲಿಟರಿ ಸಹಾಯವನ್ನು ಪಡೆಯಲಾಗಿದೆ.

ಅಂತಾರಾಷ್ಟ್ರೀಯ ವಿಮಾನ ಯಾತ್ರಿಕರಿಗೆ ಪ್ರಯಾಣದ ದಣಿವಿಗಿಂತ ವಿಮಾನನಿಲ್ದಾಣಗಳಲ್ಲಿ ನಡೆಯುವ ಸುರಕ್ಷಾ ತಪಾಸಣೆಯೇ ಹೆಚ್ಚು ಕಿರಿಕಿರಿ. ಇತ್ತೀಚೆಗೆ ನ್ಯೂಯಾರ್ಕ್ ವಿಮಾನನಿಲ್ದಾಣದಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರವರನ್ನೂ ನಾನಾರೀತಿಯ ತಪಾಸಣೆಗೆ ಗುರಿಪಡಿಸಿ ಮುಜುಗರವನ್ನುಂಟುಮಾಡಿದ ಪ್ರಸಂಗ ಕುರಿತು ನೀವು ಪತ್ರಿಕೆಗಳಲ್ಲಿ ಓದಿರಬಹುದು. ಮಕ್ಕಳು ಆಟದ ಸಾಮಗ್ರಿಗಳನ್ನು ಬಿಸಾಡಿ ಚೆಲ್ಲಾಪಿಲ್ಲಿ ಮಾಡುವಂತೆ ಸುರಕ್ಷತಾಸಿಬ್ಬಂದಿ ತಪಾಸಣೆಯ ಸಂದರ್ಭದಲ್ಲಿ ನೀವು ಬ್ಯಾಗೇಜಿನಲ್ಲಿ ಒಪ್ಪ ಓರಣವಾಗಿ ಜೋಡಿಸಿಟ್ಟುಕೊಂಡಿದ್ದ ಸಾಮಗ್ರಿಗಳನ್ನು ಹೊರತೆಗೆದು ಚೆಲ್ಲಾಪಿಲ್ಲಿ ಮಾಡಿಬಿಡುತ್ತಾರೆ. ಎಲ್ಲ ಪ್ರಯಾಣಿಕರನ್ನೂ ಅನುಮಾನ ದೃಷ್ಟಿಯಿಂದ ನೋಡುವ ಅವರ ಈ ವರ್ತನೆ ನಿಮ್ಮ ಸ್ಥಾನಮಾನಗಳಿಗೆ ಧಕ್ಕೆ ಬರುವಂತೆ ಕಂಡುಬಂದರೂ ಅವರ ಮೂಲ ಉದ್ದೇಶ ನಿಮ್ಮ ರಕ್ಷಣೆಯೇ ಆಗಿರುತ್ತದೆ.

ಇಂದು ಪ್ರಪಂಚದಲ್ಲಿ ಯಾರೂ ಯಾರನ್ನೂ ನಂಬದಂತಾಗಿದೆ. ಅಪರಿಚಿತ ವ್ಯಕ್ತಿಗಳನ್ನು ನಂಬುವುದು ಹೇಗೆ? ಕಾನೂನು ದೊಡ್ಡದೋ ಮಾನವೀಯ ಭಾವನೆ ದೊಡ್ಡದೋ? ಇವೆರಡರಲ್ಲಿ ಯಾವುದಕ್ಕೆ ಹೆಚ್ಚು ಮಹತ್ವ ಕೊಡಬೇಕು? ಲಂಡನ್ ಹೀಥ್ರೂ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದಾಗ ನಮ್ಮ ಕಣ್ಣೆದುರಿಗೇ ನಡೆದ ಒಂದು ಘಟನೆ ಮನಸ್ಸಿಗೆ ತುಂಬಾ ವೇದನೆಯನ್ನುಂಟುಮಾಡಿತು: ಅಪರಿಚಿತ ಸಹಪ್ರಯಾಣಿಕರಾದ ಯುವದಂಪತಿಗಳು ಮತ್ತು ಅವರ 2 ವರ್ಷದ ರೋಗಪೀಡಿತ ಮಗು. ತಾಯಿ ತನ್ನ ಹ್ಯಾಂಡ್‌ ಬ್ಯಾಗ್ ನಲ್ಲಿ ಮಗುವಿಗೆ ಬೇಕಾದ ಹಾಲಿನ ಬಾಟಲಿ ಮತ್ತು ಔಷಧಿ ಬಾಟಲಿಗಳನ್ನು ಇಟ್ಟುಕೊಂಡಿದ್ದಳು. ಆದರೆ ಬ್ರಿಟಿಷ್ ಕಾನೂನಿನಲ್ಲಿ ವಿಮಾನ ಪ್ರಯಾಣಿಕರು ತಮ್ಮ ಹತ್ತಿರ 200 ಎಂ.ಎಲ್.ಗಿಂತ ಹೆಚ್ಚಿನ ದ್ರವಪದಾರ್ಥಗಳನ್ನಿಟ್ಟುಕೊಳ್ಳುವುದು ನಿಷಿದ್ಧ. ಆದಕಾರಣ ಆ ಬಾಟಲಿಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದಾಗಿ ತಪಾಸಣಾ ಅಧಿಕಾರಿ ಹೇಳಿದ. ದಂಪತಿಗಳು ಮತ್ತು ಅಧಿಕಾರಿ ಮಧ್ಯೆ ತುಂಬಾ ವಾಗ್ವಾದ ನಡೆಯಿತು. ಕಾನೂನು ಮಾಡಿರುವುದು ಸರಕಾರ, ನಾನಲ್ಲ, ಅದನ್ನು ಕಾರ್ಯರೂಪಕ್ಕೆ ತರುವುದಷ್ಟೇ ನನ್ನ ಕೆಲಸ ಎಂದು ಅಧಿಕಾರಿಯ ವಾದ. ಸಿಟ್ಟಿಗೆದ್ದ ಗಂಡ ಹಾಲಿನ ಬಾಟಲಿಯಲ್ಲಿರುವುದು ಹಾಲೇ ಹೊರತು ಆಸಿಡ್ ಅಲ್ಲ, ಇಗೋ ನೋಡಿ ಎಂದು ಹಾಲಿನ ಬಾಟಲನ್ನು ಕೈಗೆತ್ತಿಕೊಂಡು ಒಂದೆರಡು ಗುಟುಕು ಕುಡಿದು ತೋರಿಸಿದ. ಅದರಿಂದ ಅವಾಕ್ಕಾದ ಅಧಿಕಾರಿ ಔಷಧಿಯ ಬಾಟಲಿಯಲ್ಲಿ ಔಷಧಿ ಇದೆಯೆಂಬುದಕ್ಕೆ ವೈದ್ಯರಿಂದ ದೃಢೀಕರಣ ಪತ್ರ ತಂದಿದ್ದೀರಾ ಎಂದು ಕೇಳಿದ. ನಿರುತ್ತರರಾದ ದಂಪತಿಗಳು ಮೇಲಧಿಕಾರಿಗಳ ಹತ್ತಿರ ಹೋಗುವುದಾಗಿ ಹೇಳಿದರು. ಅವರಿಗೂ ಸಹ ಅನುಮತಿಸಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ಅಧಿಕಾರಿ ತಾಳ್ಮೆಯಿಂದಲೇ ಹೇಳಿದ.

ಅಷ್ಟರಲ್ಲಿ ಮೇಲಧಿಕಾರಿ ಸ್ಥಳಕ್ಕೆ ಧಾವಿಸಿ ಏನೆಂದು ವಿಚಾರಿಸಿದ. ಅವನೂ ಸಹ ವೈದ್ಯರ ದೃಢೀಕರಣ ಪತ್ರವಿಲ್ಲದೆ ಅನುಮತಿಸಲು ಸಾಧ್ಯವಾಗುವುದಿಲ್ಲವೆಂದು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದ. ಎರಡು ಗಂಟೆಗಳಿಗೊಮ್ಮೆ ಆ ಔಷಧಿಯನ್ನು ಕೊಡಲೇ ಬೇಕು: ಇಲ್ಲದಿದ್ದರೆ ಮಗುವಿಗೆ ಉಸಿರುಕಟ್ಟಿದಂತಾಗುತ್ತಯೆಂದು ತಾಯಿಯ ತಳಮಳ. ಕಾನೂನು ಪರಿಪಾಲಿಸುವುದು ಅಧಿಕಾರಿಯ ಕರ್ತವ್ಯ; ಮಗುವಿನ ಆರೈಕೆ ಮಾಡುವುದು ತಾಯಿಯ ಕರ್ತವ್ಯ. ಇಬ್ಬರ ಕರ್ತವ್ಯ ನಿರ್ವಹಣೆಯಲ್ಲಿ ಯಾವುದು ಪ್ರಮುಖ? ಕಾನೂನು ಪಾಲನೆಯೋ, ಮಗುವಿನ ಆರೈಕೆಯೋ? ಕಾನೂನು ಎಷ್ಟೇ ದೊಡ್ಡದೆಂದರೂ ಅದು ಇರುವುದು ಬರೀ ಕಾನೂನಿಗಾಗಿ ಅಲ್ಲ ಜನರ ಹಿತಕ್ಕಾಗಿ ಎಂಬುದನ್ನು ಅಲ್ಲಗಳೆಯಲಾಗದು.  ಈ ದೃಷ್ಟಿಯಿಂದ ಇಲ್ಲಿ ಕಾನೂನಿಗಿಂತ ಮಾನವೀಯತೆ ಮುಖ್ಯವಾಗುತ್ತದೆ. ಆದರೆ ಒಂದೆರಡು ವರ್ಷಗಳ ಹಿಂದೆ ಇದೇ ವಿಮಾನನಿಲ್ದಾಣದಲ್ಲಿ ರಾಸಾಯನಿಕ ದ್ರವವನ್ನು ಬಳಸಿ ವಿಮಾನವನ್ನು ಆಸ್ಫೋಟಿಸುವ ವಿಫಲ ಪ್ರಯತ್ನ ನಡೆದದ್ದು ಪ್ರಯಾಣಿಕರ ಹಿತದೃಷ್ಟಿಯಿಂದ ಬಿಗಿಯಾದ ಕಾನೂನು ಮಾಡಲಾಗಿದೆ. ಹೀಗಾಗಿ ಬಹುಜನರ ಹಿತ ದೃಷ್ಟಿಯಿಂದ ಮಾಡಿದ ಕಾನೂನನ್ನು ಒಬ್ಬರಿಗೆ ತೊಂದರೆಯಾಗುತ್ತದೆಯೆಂದು ಉಲ್ಲಂಘಿಸುವಂತಿಲ್ಲ. ಈ ಮೊದಲು ಇಂತಹ ಕಾನೂನುಗಳು ಇರಲಿಲ್ಲ. ಮೇಲ್ನೋಟಕ್ಕೆ ಜನರಿಗೆ ಕಿರಿಕಿರಿಯುಂಟುಮಾಡುವ ಕಾನೂನು ಮಾಡಲಾಗಿದೆ ಎಂದು ಕಂಡುಬಂದರೂ ಅದರ ಹಿಂದಿರುವ ಸದಾಶಯವನ್ನು ಅಲ್ಲಗಳೆಯುವಂತಿಲ್ಲ. ತಾಯಿ-ಮಗುವಿನ ಮಧುರ ಸಂಬಂಧವನ್ನು ಗಾಂಜಾ ಅಫೀಮು ಕಳ್ಳಸಾಗಾಣಿಕೆಗೆ ದುರುಪಯೋಗಮಾಡಿಕೊಂಡ ಖದೀಮರೂ ಇಲ್ಲದಿಲ್ಲ. ಹೆತ್ತಮಕ್ಕಳನ್ನು ಕೊಂದು ಜೈಲುಸೇರಿದ ತಾಯಂದಿರೂ ಈ ದೇಶಗಳಲ್ಲಿದ್ದಾರೆ. ಹೀಗಾಗಿ ಜನರ ಈ ನೀತಿಬಾಹಿರ ನಡವಳಿಕೆಗಳು ಕಠಿಣವೆನಿಸುವ ಕಾನೂನಿಗೆ ಇಂಬುಮಾಡಿಕೊಟ್ಟಿವೆ. ಜನರು ಧರ್ಮಭೀರುಗಳಾಗಿ ನಡೆದುಕೊಂಡರೆ ಯಾವ ಕಾನೂನಿನ ಅವಶ್ಯಕತೆಯೂ ಬೀಳುವುದಿಲ್ಲ.

ಕಾನೂನಿಗೆ ದೇಶ ಪ್ರಾಂತ್ಯಗಳ ಚೌಕಟ್ಟು ಇರುತ್ತದೆ. ಮಾನವೀಯತೆಗೆ ಆ ಚೌಕಟ್ಟು ಇರುವುದಿಲ್ಲ, ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬರುವ ಈ ಮುಂದಿನ ಶಾಂತಿಮಂತ್ರವನ್ನು ಗಮನಿಸಿ:

"ಓಂ ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ,
ಸರ್ವೇ ಭದ್ರಾಣಿ ಪಶ್ಯಂತು, ಮಾ ಕಃಶ್ಚಿತ್ ದುಃಖಭಾಗ್ ಭವೇತ್"

ಜಗತ್ತಿನ ಜನರೆಲ್ಲರೂ ಸುಖವಾಗಿರಲಿ, ಎಲ್ಲರೂ ಆರೋಗ್ಯವಂತರಾಗಿರಲಿ, ಎಲ್ಲರೂ ಒಳಿತನ್ನೇ ನೋಡುವಂತಾಗಲಿ, ಯಾರೂ ದುಃಖಿಸುವಂತಾಗದಿರಲಿ!” ಎಂದು ಸಾವಿರಾರು ವರ್ಷಗಳ ಹಿಂದೆ ಭಾರತದ ಋಷಿಮುನಿಗಳು ಮಾಡಿದ ಹಾರೈಕೆಯಂತೆ ಹಿಂದೂಗಳಾದಿಯಾಗಿ ಜಗತ್ತಿನ ಎಲ್ಲ ಮತಧರ್ಮದವರೂ ನಡೆದುಕೊಂಡಿದ್ದರೆ ಇಂದು ಒಲಂಪಿಕ್ ಕ್ರೀಡಾಮೇಳಕ್ಕೆ ಭಯೋತ್ಪಾದಕರ ಭೀತಿ ಉಂಟಾಗುತ್ತಿರಲಿಲ್ಲ; ಜಗತ್ತಿನ ಅಶಾಂತಿಗೆ ಧರ್ಮಗಳೇ ಕಾರಣ ಎಂಬ ಆರೋಪವೂ ಕೇಳಿಬರುತ್ತಿರಲಿಲ್ಲ!
ಲಂಡನ್

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 26.7.2012