ಬೇವನ್ನು ಬಿತ್ತಿ ಮಾವನ್ನು ನಿರೀಕ್ಷಿಸಬಹುದೇ?

  •  
  •  
  •  
  •  
  •    Views  

ಪದೇಶದ ಮಾತುಗಳು, ತಾತ್ವಿಕ ವಿಚಾರಗಳು ಅಷ್ಟಾಗಿ ನೆನಪಿನಲ್ಲಿ ಉಳಿಯುವುದಿಲ್ಲ, ಕಥೆಗಳು, ಕಥಾನಕಗಳು ಬಹಳ ಕಾಲ ಮನಸ್ಸಿನಲ್ಲಿ ಉಳಿಯುವುದಲ್ಲದೆ ಕೇಳುಗರ ಮನಸ್ಸಿನ ಮೇಲೆ ತುಂಬಾ ಪ್ರಭಾವವನ್ನು ಬೀರುತ್ತವೆ. ಭಾರತದ ಮಹಾಕಾವ್ಯಗಳಾದ ಮಹಾಭಾರತ, ರಾಮಾಯಣದ ಕಥೆಗಳು ಸಹಸ್ರಾರು ವರ್ಷಗಳಿಂದ ಜನಮಾನಸದಲ್ಲಿ ಉಳಿದು ಬಂದಿರುವುದು ಶಾಲಾ ಶಿಕ್ಷಣದಿಂದ ಅಲ್ಲ, ಮನೆಯಲ್ಲಿರುವ ತಾಯಂದಿರಿಂದ, ಅಜ್ಜ ಅಜ್ಜಿಗಳಿಂದ. ಹಬ್ಬ ಹರಿದಿನಗಳಂದು ಮಠಮಂದಿರಗಳಲ್ಲಿ ಏರ್ಪಡಿಸುವ ಕಥಾಶ್ರವಣಗಳಿಂದ. ಪರಂಪರಾಗತವಾಗಿ ಕೇಳಿ ಬಂದ ಇಂತಹ ಕಥಾನಕಗಳು ವ್ಯಕ್ತಿಯ ಬದುಕಿನಲ್ಲಿ ಸರಿ ತಪ್ಪುಗಳ ಚಿಂತನೆಗೆ ದಾರಿ ಮಾಡಿಕೊಡುತ್ತವೆ. ಕಥೆ ಸಾಹಿತ್ಯಲೋಕದ ಬೆಳ್ಳಿಚುಕ್ಕಿ ಎನ್ನುತ್ತಾರೆ ಡಾ. ಎಂ.ಎಂ.ಕಲಬುರ್ಗಿ. ಸಾಹಿತ್ಯಕ್ಕೆ ಓನಾಮ ಶುರುವಾಗಿದ್ದೇ ಕಥೆಯಿಂದ ಎನ್ನುತ್ತಾರೆ. ಕಥೆಯನ್ನು ಹೇಳುವುದು ಮತ್ತು ಕೇಳುವುದು ಮನುಷ್ಯನಿಗೆ ಆದಿಯಿಂದ ಅಂಟಿಕೊಂಡು ಬಂದ ಗೀಳು ಎನ್ನಬಹುದು. ಕಥೆಯು ಕಟ್ಟಿಕೊಡುವ ಯಕ್ಷಲೋಕದ ಯಕ್ಷಿಣಿಗೆ ಒಳಗಾಗದ ಹಸುಗೂಸಿಲ್ಲ; ಕಥೆಗಳನ್ನು ಹೇಳಿ ಮಗುವನ್ನು ಮಲಗಿಸದ ತಾಯಿ ಇಲ್ಲ. ಕಥೆಯ ಹೇಳಲೆ ಕಂದ ಎಂದರೆ ಸಾಕು ಆರಂಭಿಸುವುದಕ್ಕೆ ಮೊದಲೇ ಹ್ಞೂಂ ಎನ್ನುತ್ತದೆ ಮಗು! ಕಥೆಯೊಂದು ಮನಸ್ಸಿನ ಮೇಲೆ ಮಾಡುವ ಪರಿಣಾಮವನ್ನು ಕಥೆಯ ಮಹತ್ವವನ್ನು ಅರಿತ ದಾರ್ಶನಿಕರು ತಂತಮ್ಮ ದರ್ಶನಗಳನ್ನು ಕಥೆಯ ಮೂಲಕ ತಿಳಿಸುವ ಪ್ರಯತ್ನವನ್ನು ಪ್ರಪಂಚದೆಲ್ಲೆಡೆ ಮಾಡಿದ್ದಾರೆ. ಪಂಚತಂತ್ರ, ಇಸೋಪನ ಕಥೆಗಳು, ಸೂಫಿ ಸಂತರ ಕಥೆಗಳು, ನಾಸಿರುದ್ದೀನನ ಕಥೆಗಳು ತುಂಬಾ ಪ್ರಸಿದ್ದ. ಅಷ್ಟೇ ಏಕೆ ನಮ್ಮ ರಾಮಾಯಣ, ಮಹಾಭಾರತ, ಉಪನಿಷತ್ತುಗಳು ಕಥೆಗಳಿಂದ ಇಡಿಕಿರಿದಿವೆ. ಕನ್ನಡದ ವಡ್ಡಾರಾಧನೆಯಂತೂ ಅದ್ಭುತವಾದೊಂದು ಕಥಾಗುಚ್ಛವೇ ಆಗಿದೆ. ಜೈನ ಧರ್ಮದ ಜಟಿಲಾತಿಜಟಿಲ ತತ್ವಗಳನ್ನು ಕಥತೆಗಳ ಒಳಲೆಯಲ್ಲಿ ಒಂದು ಹನಿಯೂ ವ್ಯರ್ಥವಾಗದಂತೆ ಈ ಗ್ರಂಥ ಕುಡಿಸುತ್ತದೆ. ದೊಡ್ಡದೊಂದು ಕಥೆ, ಅದರ ಒಡಲಲ್ಲಿ ಒಂದು ಉಪಕಥೆ, ಆ ಉಪಕಥೆಯ ಒಳಗೊಂದು ಮರಿಕಥೆ – ಹೀಗೆ ಸಾಗುವ ತಂತ್ರ ಅತ್ಯಂತ ಚೇತೋಹಾರಿಯಾಗಿದೆ. ಅಮೂರ್ತವಾದ ದರ್ಶನವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. ಸಹೃದಯ ಓದುಗರೇ! ಈ ಕೆಳಗಿನ ಆಧುನಿಕ ಕಥೆಗಳನ್ನು ನಿಮ್ಮ ಮನೆಯ ಮಕ್ಕಳಿಗೆ ಬಿಡುವ ಮಾಡಿಕೊಂಡು ಓದಿ ಹೇಳಿ ಅವರ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳಿ. ಅವರ ಕುತೂಹಲವನ್ನು ತಣಿಸಿ. ಅವರ ಮುಖದಲ್ಲಿ ಮೂಡಿಬರುವ ಮಂದಹಾಸವನ್ನು ನೋಡಿ ಸಂತೋಷಪಡಿ.

-1-

ಒಬ್ಬ ಯುವ ಮಹಿಳೆ ನ್ಯೂಯಾರ್ಕ್ನಿಂದ ಲಂಡನ್‌ಗೆ ಪ್ರಯಾಣಿಸಲು ವಿಮಾನಕ್ಕಾಗಿ ಕಾಯುತ್ತಿದ್ದಳು. ವಿಮಾನ ಹೊರಡಲು ಇನ್ನೂ ಒಂದೆರಡು ಗಂಟೆ ಬಾಕಿ ಇತ್ತು. ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಆಕೆ ವಿಮಾನನಿಲ್ದಾಣದಲ್ಲಿದ್ದ ಅಂಗಡಿಗೆ ಹೋಗಿ ಒಂದು ಪುಸ್ತಕವನ್ನು ಕೊಂಡುಕೊಂಡಳು. ಓದುವಾಗ ತಿನ್ನಲೆಂದು ಅದರ ಜೊತೆಗೆ ಒಂದು ಬಿಸ್ಕತ್ ಪೊಟ್ಟಣವನ್ನೂ ಕೊಂಡಳು. ವಾಪಾಸ್ ಬೋರ್ಡಿಂಗ್ ಲಾಂಜ್‌ಗೆ ಬಂದು ಸುಖಾಸನದಲ್ಲಿ ಕುಳಿತುಕೊಂಡಳು. ಪಕ್ಕದ ಸೀಟಿನಲ್ಲಿದ್ದ ಇನ್ನೊಬ್ಬ ಪ್ರಯಾಣಿಕ ಯಾವುದೋ ಪತ್ರಿಕೆಯನ್ನು ಓದುವುದರಲ್ಲಿ ಮಗ್ನನಾಗಿದ್ದ. ಆಕೆಯೂ ತಾನು ಕೊಂಡು ತಂದಿದ್ದ ಪುಸ್ತಕವನ್ನು ಕೈಗೆತ್ತಿಕೊಂಡು ಓದಲು ಆರಂಭಿಸಿದಳು. ಒಂದೆರಡು ಪುಟ ಓದಿದ ಮೇಲೆ ಪಕ್ಕದಲ್ಲಿಟ್ಟಿದ್ದ ಬಿಸ್ಕತ್ ಪ್ಯಾಕೆಟ್ಟನ್ನು ಬಿಚ್ಚಿ ಒಂದನ್ನು ತೆಗೆದುಕೊಂಡು ಬಾಯಲ್ಲಿ ಹಾಕಿಕೊಂಡಳು. ಪಕ್ಕದಲ್ಲಿದ್ದ ವ್ಯಕ್ತಿಯೂ ಸಹ ಕೈಚಾಚಿ ಅದರಿಂದ ಒಂದು ಬಿಸ್ಕತ್ತನ್ನು ತೆಗೆದುಕೊಂಡು ಬಾಯಲ್ಲಿ ಹಾಕಿಕೊಂಡನು. ಈಕೆಗೆ ಅಸಹನೆಯುಂಟಾಯಿತು. ಆದರೆ ಏನೂ ಮಾತನಾಡಲಿಲ್ಲ. ಅವನತ್ತ ಕಣ್ಣೆತ್ತಿಯೂ ಸಹ ನೋಡಲಿಲ್ಲ. ಪುಸ್ತಕವನ್ನು ಓದುತ್ತಲೇ ಸ್ವಲ್ಪ ಹೊತ್ತಿನ ಮೇಲೆ ಮತ್ತೊಂದು ಬಿಸ್ಕತ್ತನ್ನು ತೆಗೆದುಕೊಂಡಳು. ಆತನೂ ಸಹ ಇನ್ನೊಂದು ಬಿಸ್ಕತ್ ತೆಗೆದುಕೊಂಡ. ಹೀಗೆ ಈಕೆ ಮೇಲಿನ ಒಂದೊಂದು ಬಿಸ್ಕತ್ ಕೈಗೆ ತೆಗೆದುಕೊಂಡಂತೆ ಅವನೂ ಸಹ ಕೆಳಗಿನ ಬಿಸ್ಕತ್ತನ್ನು ತೆಗೆದುಕೊಳ್ಳುತ್ತಿದ್ದ. ಕೊನೆಯದಾಗಿ ಒಂದೇ ಒಂದು ಬಿಸ್ಕತ್ತು ಉಳಿದಿತ್ತು. ಅವನು ಅದನ್ನು ಮುರಿದು ಅರ್ಧ ಮಾತ್ರ ತೆಗೆದುಕೊಂಡ. ಈಕೆಗೆ ಕೋಪ ನೆತ್ತಿಗೇರಿತು. ಒಡನೆಯೇ ವಿಮಾನವೇರುವ ಸೂಚನೆ ಕೇಳಿಬಂತು. ಹೊರಡುವಾಗ ಅವನ ಜೊತೆಗೆ ಜಗಳವೇಕೆಂದು ಸಿಡಿಮಿಡಿಗೊಂಡು ಎದ್ದು ವಿಮಾನವನ್ನೇರಿದಳು. ಕಿಟಕಿಯ ಪಕ್ಕದಲ್ಲಿದ್ದ ತನ್ನ ಸೀಟಿನಲ್ಲಿ ಕುಳಿತುಕೊಂಡಳು. ಕಿಟಕಿಯ ಹೊರಗೆ ನೋಡುತ್ತಿದ್ದರೂ ಆಕೆಗೆ ಕಾಣಿಸುತ್ತಿದ್ದುದು ಹೊರಗಿನ ಸುಂದರ ದೃಶ್ಯವಲ್ಲ; ಆ ಅಜ್ಞಾತ ವ್ಯಕ್ತಿಯ ಅಸಭ್ಯ ನಡವಳಿಕೆ. ಮನಸ್ಸು ರೋಸಿಹೋಗಿತ್ತು. ಕೋಪ ಉಪಶಮನವಾಗಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ಗಗನಸಖಿ ಕುಡಿಯಲು ಪಾನೀಯ ತಂದುಕೊಟ್ಟಳು. ಅದನ್ನು ಗುಟುಕರಿಸುತ್ತಾ ಆ ಯುವ ಮಹಿಳೆ ಕನ್ನಡಕವನ್ನು ತೆಗೆದುಕೊಳ್ಳಲು ತನ್ನ ಪರ್ಸ್ ಒಳಗೆ ಕೈಹಾಕಿದಳು. ಆಶ್ಚರ್ಯವೆಂದರೆ ಆಕೆ ಅಂಗಡಿಯಲ್ಲಿ ಕೊಂಡು ತಂದಿದ್ದ ಬಿಸ್ಕತ್ ಪ್ಯಾಕೆಟ್ ಹಾಗೆಯೇ ಇತ್ತು! ತಮ್ಮ ಪರ್ಸ್ನಲ್ಲಿ ಇಟ್ಟುಕೊಂಡಿದ್ದನ್ನು ಆಕೆ ಮರೆತಿದ್ದಳು. ತಾನು ಕೊಂಡು ತಂದಿದ್ದ ಬಿಸ್ಕತ್ತನ್ನು ತಿನ್ನದೆ ಪಕ್ಕದಲ್ಲಿ ಕೂತಿದ್ದ ಪ್ರಯಾಣಿಕ ಇಟ್ಟುಕೊಂಡಿದ್ದ ಬಿಸ್ಕತ್ತನ್ನು ತಿಂದ ಕೂಳಬಾಕಿ ಅವಳೇ ಆಗಿದ್ದಳು! ಆಕೆಗೆ ಅಪರಾಧಿ ಪ್ರಜ್ಞೆ ಕಾಡತೊಡಗಿತು. ತನ್ನ ತಪ್ಪಿನ ಅರಿವಿಲ್ಲದೆಯೇ ತಪ್ಪು ಮಾಡಿದ್ದಳು. ಕ್ಷಮೆ ಯಾಚಿಸಲು ಅವಳು ಹತ್ತಿದ್ದ ವಿಮಾನದಲ್ಲಿ ಆ ವ್ಯಕ್ತಿ ಇರಲಿಲ್ಲ! ಅವನ ಔದಾರ್ಯ ಮತ್ತು ವಿಶಾಲ ಹೃದಯ ತನ್ನಲ್ಲಿ ಇಲ್ಲದಿದ್ದುದಕ್ಕೆ ಪರಿತಪಿಸಿದಳು.

-2-

ಅದೇ ನ್ಯೂಯಾರ್ಕ್ ನಿಂದ ಒಬ್ಬ ವಾಣಿಜ್ಯೋದ್ಯಮಿ ಯುರೋಪಿಗೆ ಹೊರಟಿದ್ದ. ವಿಮಾನನಿಲ್ದಾಣಕ್ಕೆ ಹತ್ತಿರವಿದ್ದ ಒಂದು ಬ್ಯಾಂಕಿಗೆ ಹೋದ. ತಾನು ವ್ಯವಹಾರಾರ್ಥವಾಗಿ ಯುರೋಪಿಗೆ ಹೊರಟಿರುವ ವಿಷಯವನ್ನು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿ ತನಗೆ ಐದು ಸಾವಿರ ಡಾಲರ್ ಸಾಲ ಬೇಕಾಗಿದೆಯೆಂದು ಕೇಳಿದ. ಸಾಲ ಪಡೆಯಲು ಏನಾದರೂ ಬೆಲೆಯುಳ್ಳ ವಸ್ತುವನ್ನು ಅಡವು (pledge) ಇಡಬೇಕೆಂದು ಬ್ಯಾಂಕ್ ಅಧಿಕಾರಿಗಳು ಹೇಳಿದರು. ಉದ್ಯಮಿ ತನ್ನ ಬಳಿ ಇದ್ದ ಹೊಸ ಫೆರಾರಿ ಕಾರನ್ನು ಒತ್ತೆಯಾಗಿಡಲು ನಿರ್ಧರಿಸಿ ಅದರ ಬೀಗದ ಕೈ ಮತ್ತು ಇತರ ದಾಖಲಾತಿಗಳನ್ನು ಬ್ಯಾಂಕ್ ಅಧಿಕಾರಿಗಳಿಗೆ ಕೊಟ್ಟ. ಆ ಕಾರನ್ನು ತಮ್ಮ ವಶಕ್ಕೆ ತೆಗೆದುಕೊಂಡ ಬ್ಯಾಂಕ್ ಅಧಿಕಾರಿಗಳು ಉದ್ಯಮಿ ಕೇಳಿದ ಸಾಲವನ್ನು ಮುಂಜೂರು ಮಾಡಿದರು. ಕೇವಲ ಐದು ಸಾವಿರ ಡಾಲರ್ ಸಾಲ ಪಡೆಯಲು ಎರಡೂವರೆ ಲಕ್ಷ ಡಾಲರ್ ದುಬಾರಿ ಬೆಲೆಯ ಫೆರಾರಿ ಕಾರನ್ನು ಉದ್ಯಮಿ ಒತ್ತೆ ಇಟ್ಟುದನ್ನು ನೋಡಿ ಬ್ಯಾಂಕ್ ಅಧಿಕಾರಿಗಳಿಗೆ ಒಳಗೊಳಗೆ ನಗು ಬಂತು. ಬ್ಯಾಂಕ್ ಅಧಿಕಾರಿಗಳು ಉದ್ಯಮಿಯ ಕೈಗೆ ಐದು ಸಾವಿರ ಡಾಲರ್ ಹಣವನ್ನು ಕೊಟ್ಟು ಆತನ ಕಾರನ್ನು ತೆಗೆದುಕೊಂಡು ಹೋಗಿ ಬ್ಯಾಂಕಿನ ನೆಲಮಹಡಿಯಲ್ಲಿದ್ದ ಗ್ಯಾರೇಜಿನಲ್ಲಿ ಪಾರ್ಕ್ ಮಾಡಿದರು.

ಎರಡು ವಾರಗಳ ನಂತರ ಉದ್ಯಮಿ ಯರೋಪಿನಿಂದ ವಾಪಾಸು ಬಂದ. ವಿಮಾನ ನಿಲ್ದಾಣದಲ್ಲಿ ಇಳಿದವನೇ ಸೀದಾ ಸಾಲ ಮಾಡಿದ ಬ್ಯಾಂಕಿಗೆ ಹೋದ. ಬ್ಯಾಂಕಿನಿಂದ ಪಡೆದಿದ್ದ ಐದು ಸಾವಿರ ಡಾಲರ್ ಸಾಲ ಮತ್ತು ಅದರ ಮೇಲಿನ ಬಡ್ಡಿ ಸುಮಾರು 15 ಡಾಲರ್‌ಗಳನ್ನು ಪಾವತಿಸಿ ಸಾಲ ಚುಕ್ತಾ ಮಾಡಿದ. ಬ್ಯಾಂಕ್ ಅಧಿಕಾರಿಗಳು ಉದ್ಯಮಿಯನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ಆದರೆ ಅವನ ವರ್ತನೆ ಬ್ಯಾಂಕಿನವರಿಗೆ ಆಶ್ಚರ್ಯವನ್ನುಂಟುಮಾಡಿತ್ತು. ಅವನು ಎರಡು ವಾರಗಳ ಹಿಂದೆ ಬ್ಯಾಂಕಿನಿಂದ ಸಾಲ ಪಡೆದುಕೊಂಡು ಹೋದ ಮೇಲೆ ಆತನ ಖಾತೆಯಲ್ಲಿ ಎಷ್ಟು ಹಣವಿದೆಯೆಂದು ತಪಾಸಣೆ ಮಾಡಿದಾಗ ಅವನೊಬ್ಬ ಕೋಟ್ಯಧೀಶ ಎಂದು ಗೊತ್ತಾಯಿತು. ಬ್ಯಾಂಕ್ ಖಾತೆಯಲ್ಲಿ ಕೋಟ್ಯಂತರ ಡಾಲರ್ ಹಣವಿದ್ದರೂ ಅವನು ಏಕೆ ಜುಜುಬಿ 5 ಸಾವಿರ ಡಾಲರ್‌ಗಳನ್ನು ಸಾಲವಾಗಿ ತೆಗೆದುಕೊಂಡ ಎಂಬ ವಿಚಾರ ಬ್ಯಾಂಕ್ ಅಧಿಕಾರಿಗಳಿಗೆ ಒಗಟಾಗಿತ್ತು. ಕುತೂಹಲದಿಂದ ಉದ್ಯಮಿಯನ್ನು ಕೇಳಿದರು. ಉದ್ಯಮಿಯು ಕೊಟ್ಟ ಉತ್ತರ: “ನಾನು ನಿಮ್ಮಿಂದ ಪಡೆದ ಸಾಲಕ್ಕೆ ತೆತ್ತ ಬಡ್ಡಿ ಕೇವಲ 15 ಡಾಲರ್. ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಇಷ್ಟೊಂದು ಕಡಿಮೆ ಹಣ ಕೊಟ್ಟು ಎರಡು ವಾರಗಳ ಕಾಲ ನನ್ನ ಕಾರನ್ನು ಸುರಕ್ಷಿತವಾಗಿ ಪಾರ್ಕ್ ಮಾಡಲು ಸಾಧ್ಯವಿತ್ತೇ?” ಬ್ಯಾಂಕ್ ಅಧಿಕಾರಿಗಳ ಮುಖ ಪೇಲವವಾಯಿತು. ಉದ್ಯಮಿಯು ನಸುನಗುತ್ತಾ ತನ್ನ ಕಾರನ್ನು ಬ್ಯಾಂಕಿನಿಂದ ಹಿಂದಕ್ಕೆ ಪಡೆದು ಮನೆಯತ್ತ ಸಾಗಿದ.

-3-

ಅವನ ತಾಯಿ ತುಂಬಾ ಬಡವಿ. ಗಂಡ ಸತ್ತು ಹೋಗಿದ್ದ. ಮಗನನ್ನು ಚೆನ್ನಾಗಿ ಓದಿಸಬೇಕೆಂಬ ಹಂಬಲ. ಜೀವನ ನಿರ್ವಹಣೆಗೆ ಮಾರುಕಟ್ಟೆಯಲ್ಲಿ ಒಂದು ಸಣ್ಣ ತರಕಾರಿ ಅಂಗಡಿ ಇಟ್ಟುಕೊಂಡಿದ್ದಳು. ಬಂದ ಆದಾಯದಲ್ಲಿಯೇ ಉಳಿತಾಯ ಮಾಡಿ ಒಳ್ಳೆಯ ಶಾಲೆಗೆ ಮಗನನ್ನು ಸೇರಿಸಿದಳು. ಎಲ್ಲ ತಂದೆತಾಯಂದಿರಂತೆ ಆಕೆಯೂ ಒಂದು ದಿನ ಮಗನ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿಕೊಂಡು ಬರಲು ಶಾಲೆಗೆ ಹೋದಳು. ಓರಿಗೆಯ ಸಿರಿವಂತ ಮಕ್ಕಳ ತಂದೆತಾಯಿಗಳು ಒಳ್ಳೊಳ್ಳೆಯ ಬಟ್ಟೆ ಧರಿಸಿಕೊಂಡು ಬಂದರೆ ಹರಿದ ಮತ್ತು ಮಾಸಲು ಸೀರೆಯುಟ್ಟಿದ್ದ ತನ್ನ ತಾಯಿಯನ್ನು ನೋಡಿ ಮಗನಿಗೆ ತುಂಬಾ ಮುಜುಗರ ಉಂಟಾಯಿತು. ಮೇಲಾಗಿ ಆಕೆಗೆ ಒಂದು ಕಣ್ಣು ಬೇರೆ ಇರಲಿಲ್ಲ. ಮಾರನೆಯ ದಿನದಿಂದ ಗೆಳೆಯರೆಲ್ಲರೂ ಅವನನ್ನು ನಿನ್ನ ತಾಯಿ ಒಕ್ಕಣ್ಣಳಾ? ಎಂದು ಹಂಗಿಸತೊಡಗಿದರು. ಇವನಿಗೆ ಮತ್ತಷ್ಟು ಅಸಹನೆಯುಂಟಾಗಿ ಮನೆಗೆ ಸಂಜೆ ಬಂದಾಗ ತಾಯಿಯ ಮೇಲೆ ತುಂಬಾ ರೇಗಾಡಿದ. “ನಿನಗೆ ಒಂದು ಕಣ್ಣಿಲ್ಲ. ನೀನು ಶಾಲೆಗೆ ಬಂದರೆ ನನಗೆ ಅವಮಾನವಾಗುತ್ತದೆ. ಆದಕಾರಣ ಇನ್ನು ಮುಂದೆ ಬರಬೇಡ” ಎಂದು ಹಠ ಮಾಡಿದ. ತಾಯಿಯ ಮನಸ್ಸಿಗೆ ತುಂಬಾ ವೇದನೆಯಾಯಿತು. ಆದರೂ ಅದನ್ನು ಬಹಿರಂಗವಾಗಿ ಮಗನ ಮುಂದೆ ತೋರಿಸಿಕೊಳ್ಳಲಿಲ್ಲ. ಮುಂದೆ ಅವನು ದೊಡ್ಡವನಾಗಿ ಬೆಳೆದ ಮೇಲೆ ವೃದ್ಧ ತಾಯಿ ಮರಣ ಹೊಂದಿದಳು. ಅವಳು ತನ್ನೆಲ್ಲ ಸಂಪಾದನೆಯನ್ನು ಮಗನ ಹೆಸರಿಗೆ ಬರೆದಿಟ್ಟಿದ್ದ ಮೃತ್ಯುಪತ್ರದಲ್ಲಿ ಹೀಗೆ ಬರೆದಿದ್ದಳು: “ನನ್ನ ಮುದ್ದು ಕಂದ! ನೀನು ಚಿಕ್ಕ ವಯಸ್ಸಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಒಂದು ಕಣ್ಣನ್ನು ಕಳೆದುಕೊಂಡಿದ್ದೆ. ನಿನ್ನ ಓರಿಗೆಯ ಹುಡುಗರು ನಿನ್ನನ್ನು ಒಕ್ಕಣ್ಣ ಎನ್ನಬಾರದು ಎಂದು ನನ್ನ ಒಂದು ಕಣ್ಣನ್ನು ನಿನಗೆ ಕೊಟ್ಟೆ. ನೀನು ಈ ಜಗತ್ತನ್ನು ಚೆನ್ನಾಗಿ ನೋಡುವಂತಾಗಲಿ ಎಂಬುದೇ ನನ್ನ ಕೊನೆಯ ಆಸೆ. ನನ್ನ ಸರ್ವಸ್ವವೂ ನೀನೇ. I miss you so much, I love you!”

-4-

ಒಬ್ಬ ಪ್ರಸಿದ್ಧ ಹಾಗೂ ಪ್ರಬುದ್ಧ ಚಕ್ರವರ್ತಿ ಇದ್ದ. ಪ್ರಜೆಗಳ ಹಿತವನ್ನೇ ತನ್ನ ಧ್ಯೇಯವಾಗಿರಿಸಿಕೊಂಡು ಅನೇಕ ವರ್ಷಗಳಿಂದ ಆದರ್ಶ ರಾಜ್ಯಭಾರ ಮಾಡುತ್ತಾ ಬಂದ ಅವನಿಗೆ ವಯಸ್ಸಾಯಿತು. ಅವನಿಗೆ ಮಕ್ಕಳಿರಲಿಲ್ಲ. ಹತ್ತಿರದ ಬಂಧುಗಳಲ್ಲಿ ದತ್ತು ತೆಗೆದುಕೊಂಡು ವಂಶಪಾರಂಪರ್ಯವಾಗಿ ರಾಜ್ಯಭಾರ ನಡೆಸುವುದು ಅವನಿಗೆ ಇಷ್ಟವಿರಲಿಲ್ಲ. ಒಂದು ದಿನ ತನ್ನ ರಾಜ್ಯದಲ್ಲಿರುವ ಎಲ್ಲಾ ಮಕ್ಕಳನ್ನು ಅರಮನೆಗೆ ಕರೆಸಿ ಹೇಳಿದ: “ಮಕ್ಕಳೇ, ನಿಮ್ಮಲ್ಲಿ ಯೋಗ್ಯರೆಂದು ನನಗೆ ಕಂಡುಬಂದವರನ್ನು ಮುಂದಿನ ಚಕ್ರವರ್ತಿಯನ್ನಾಗಿ ಮಾಡುತ್ತೇನೆ”. ಆ ಮಾತನ್ನು ಕೇಳಿದ ಮಕ್ಕಳಿಗೆ ಮತ್ತು ಅವರ ತಂದೆತಾಯಿಗಳಿಗೆ ಆಶ್ಚರ್ಯವಾಯಿತು. ಅದಕ್ಕಾಗಿ ಮಕ್ಕಳು ಮಾಡಬೇಕಾದ ಕೆಲಸವನ್ನು ಚಕ್ರವರ್ತಿ ವಿವರಿಸಿದ. “ಮಕ್ಕಳೇ, ನಾನಿಂದು ನಿಮಗೆ ಪ್ರತಿಯೊಬ್ಬರಿಗೂ ಒಂದೊಂದು ಬೀಜವನ್ನು ಕೊಡುತ್ತೇನೆ. ಇದು ಅಂತಿಂಥದಲ್ಲ, ಒಂದು ವಿಶೇಷವಾದ ಬೀಜ. ಇದನ್ನು ಕುಂಡದಲ್ಲಿ ನೆಟ್ಟು, ಗೊಬ್ಬರ ನೀರು ಹಾಕಿ ಇಲ್ಲಿಂದ ಒಂದು ವರ್ಷದವರೆಗೆ ಪೋಷಣೆ ಮಾಡಿಕೊಂಡು ಬನ್ನಿ. ನಿಮ್ಮಲ್ಲಿ ಯಾರು ಚೆನ್ನಾಗಿ ಸಸಿಯನ್ನು ಬೆಳೆಸಿದ್ದೀರೆಂದು ನೋಡಿ ಮುಂದಿನ ಚಕ್ರವರ್ತಿ ಯಾರೆಂದು ನಿರ್ಧರಿಸುತ್ತೇನೆ” ಎಂದು ಮಕ್ಕಳಿಗೆ ಹೇಳಿ ಕಳುಹಿಸಿದ.

ಮಕ್ಕಳು ಉತ್ಸಾಹದಿಂದ ಮನೆಗೆ ಹೋಗಿ ಚಕ್ರವರ್ತಿ ಕೊಟ್ಟ ಬೀಜವನ್ನು ಕುಂಡದಲ್ಲಿ ಹಾಕಿ ಪ್ರತಿ ದಿನವೂ ನೀರೆರೆದು ಶ್ರದ್ದೆಯಿಂದ ಬೆಳೆಸತೊಡಗಿದರು. ಮೂರು ವಾರಗಳ ನಂತರ ಬೀಜ ಮೊಳಕೆಯೊಡೆದು ಚಿಗುರುತ್ತಿರುವ ವಿಚಾರವಾಗಿ ಅನೇಕ ಮಕ್ಕಳು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳತೊಡಗಿದರು. ಪ್ರತಿದಿನವೂ ಮಕ್ಕಳ ಬಾಯಲ್ಲಿ ತಾವು ಬೆಳೆಸುತ್ತಿರುವ ಸಸಿಯ ಬೆಳವಣಿಗೆಯ ಮಾತೇ ಮಾತು. ತಂದೆತಾಯಂದಿರೂ ಸಹ ತನ್ನ ಮಗ ಮುಂದಿನ ಚಕ್ರವರ್ತಿಯಾಗಲೆಂದು ಮಕ್ಕಳಿಗೆ ಬಹಳಷ್ಟು ಪ್ರೋತ್ಸಾಹವನ್ನು ನೀಡಿದರು. ಸ್ವತಃ ಕಾಳಜಿ ವಹಿಸಿ ನೋಡಿದ್ದಲ್ಲದೆ ತನ್ನ ಮಗನಿಗೇ ರಾಜ್ಯಲಕ್ಷ್ಮಿ ಒಲಿದು ಬರಲೆಂದು ದೇವರಲ್ಲಿ ಪ್ರಾರ್ಥಿಸತೊಡಗಿದರು. ದಿನಗಳು ಉರುಳಿದಂತೆ, ತಿಂಗಳುಗಳು ಕಳೆದಂತೆ ಮುಂದಿನ ಚಕ್ರವರ್ತಿಯಾಗುವ ಅದೃಷ್ಟ ಯಾವ ತಂದೆತಾಯಿಗಳ ಮಗನಿಗೆ ಲಭಿಸುತ್ತದೆಯೆಂಬ ಕುತೂಹಲ ರಾಜ್ಯದೆಲ್ಲೆಡೆ ಹೆಚ್ಚುತ್ತಾ ಹೋಯಿತು.

ಒಂದು ವರ್ಷದ ನಂತರ ಚಕ್ರವರ್ತಿ ಎಲ್ಲ ಮಕ್ಕಳನ್ನು ಮತ್ತೆ ಅರಮನೆಗೆ ಕರೆಸಿದ. ಮಕ್ಕಳು ಅಮಿತೋತ್ಸಾಹದಿಂದ ತಾವು ಕುಂಡದಲ್ಲಿ ಬೆಳೆಸಿದ ಸಸಿಗಳನ್ನು ಹೊತ್ತು ತಂದರು. ವಿಭಿನ್ನ ಆಕಾರ ಮತ್ತು ವೈವಿಧ್ಯಮಯ ಬಣ್ಣಗಳಿಂದ ನಳನಳಿಸುತ್ತಿದ್ದ ಆ ಸಸಿಗಳು ಎಲ್ಲರ ಕಣ್ಮನ ಸೆಳೆಯುವಂತಿದ್ದವು. ಎಲ್ಲರೂ ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಬೆಳೆಸಿದ್ದರು. ಚಕ್ರವರ್ತಿ ಪ್ರತಿಯೊಬ್ಬ ಬಾಲಕನ ಕುಂಡದಲ್ಲಿರುವ ಸಸಿಯನ್ನು ಪರೀಕ್ಷಿಸುತ್ತಾ ಹೋದ. ಒಬ್ಬ ಬಾಲಕ ಅಂಜಿಕೆಯಿಂದ ಯಾರ ಕಣ್ಣಿಗೂ ಕಾಣಿಸದಂತೆ ಹಿಂದೆ ಅವಿತು ಕುಳಿತಿರುವುದನ್ನು ಚಕ್ರವರ್ತಿ ಗಮನಿಸಿದ. ಅವನನ್ನು ಕರೆತರಲು ರಾಜಭಟರಿಗೆ ಆಜ್ಞಾಪಿಸಿದ. ಬಾಲಕ ಅಂಜುತ್ತಲೇ ಮುಂದೆ ಬಂದ. ಅವನ ಕೈಯಲ್ಲಿದ್ದ ಕುಂಡದಲ್ಲಿ ಯಾವ ಸಸಿಯೂ ಇರಲಿಲ್ಲ. ಬರೀ ಮಣ್ಣು ಇದ್ದುದನ್ನು ನೋಡಿ ಉಳಿದ ಮಕ್ಕಳು ಗಹಗಹಿಸಿ ನಕ್ಕರು. ನಿನ್ನ ಕುಂಡ ನೋಡಲು ಬಹಳ ಚೆನ್ನಾಗಿದೆ ಎಂದು ಕೆಲವರು ಅಣಕಿಸಿದರು. ಬಾಲಕ ನಾಚಿ ನೀರಾದ. ಚಕ್ರವರ್ತಿಯ ಹತ್ತಿರ ಬಂದಂತೆ ಬಾಲಕನಿಗೆ ಹೆದರಿಕೆಯುಂಟಾಯಿತು. ಚಕ್ರವರ್ತಿ ಬಾಲಕನ ಮೈದಡವಿ ಏಕೆ ನಿನ್ನ ಕುಂಡ ಖಾಲಿ ಇದೆಯೆಂದು ಕೇಳಿದ. ಬಾಲಕ ತಲೆತಗ್ಗಿಸಿ “ನಾನು ಎಷ್ಟೇ ನೀರೆರೆದು ಬೆಳೆಸಲು ಪ್ರಯತ್ನಿಸಿದರೂ ಬೀಜ ಮೊಳಕೆಯೊಡಲಿಲ್ಲ, ಆದರೂ ರಾಜಾಜ್ಞೆ ಮೀರಬಾರದು. ಪ್ರಾಮಾಣಿಕವಾಗಿ ಖಾಲಿ ಕುಂಡವನ್ನೇ ತೆಗೆದುಕೊಂಡು ಹೋಗಿ ತೋರಿಸು, ಇದ್ದ ಸಂಗತಿಯನ್ನು ವಿವರಿಸು  ಎಂದು ನನ್ನ ತಾಯಿ ಹೇಳಿ ಕಳುಹಿಸಿದಳು” ಎಂದು ನುಡಿದ. ಚಕ್ರವರ್ತಿ ಆ ಬಾಲಕನ ಹೆಸರು ಏನೆಂದು ಕೇಳಿ ಅವನನ್ನೇ ಮುಂದಿನ ಚಕ್ರವರ್ತಿಯನ್ನಾಗಿ ಘೋಷಿಸಿದ!

ಆಶ್ಚರ್ಯಗೊಂಡಿದ್ದ ಜನರನ್ನು ಕುರಿತು ಚಕ್ರವರ್ತಿ ಹೇಳಿದ: “ನೋಡಿ, ಒಂದು ವರ್ಷದ ಕೆಳಗೆ ಈ ಎಲ್ಲ ಮಕ್ಕಳಿಗೆ ಬೆಳೆಸಲು ನಾನು ಕೊಟ್ಟಿದ್ದ ಬೀಜದ ವಿಶೇಷತೆಯೆಂದರೆ ಅವೆಲ್ಲವೂ ಬೆಳೆಯಲು ಸಾಧ್ಯವಾಗದ ಬೇಯಿಸಿದ ಬೀಜಗಳು! ಉಳಿದೆಲ್ಲ ಮಕ್ಕಳೂ ನಾನು ಕೊಟ್ಟ ಬೀಜ ಬೆಳೆಯದೇ ಇರುವುದನ್ನು ನೋಡಿ ಬೇರೆ ಬೀಜ ಬಿತ್ತಿ ಬೆಳೆಸಿ ತಂದಿದ್ದಾರೆ. ಆದರೆ ಈ ಹುಡುಗ ಒಬ್ಬ ಮಾತ್ರ ಪ್ರಾಮಾಣಿಕವಾಗಿ ನಾನು ಕೊಟ್ಟ ಬೀಜವನ್ನೇ ಬೆಳೆಸಲು ವಿಫಲ ಪ್ರಯತ್ನ ನಡೆಸಿದ್ದಾನೆ.” ಚಕ್ರವರ್ತಿ ಮುಂದುವರೆದು ಬಾಲಕನತ್ತ ತಿರುಗಿ ಹೇಳಿದ:

If you plant honesty, you will reap trust
If you plant goodness, you will reap friends
If you plant humility, you will reap greatness.
If you plant perseverance, you will reap victory
If you plant consideration, you will reap harmony.
If you plant hard work, you will reap success
If you plant forgiveness, you will reap reconciliation
If you plant faith, you will reap miracles.
If you plant hard word, you will reap success.
So be carefull what you plant now; 
It will determine what you will reap tomorrow

ಪ್ರಾಮಾಣಿಕತೆಯ ಬಿತ್ತಿದರೆ, ವಿಶ್ವಾಸವನ್ನು ಗಳಿಸುವೆ 
ಒಳಿತನ್ನು ಬಿತ್ತಿದರೆ, ಒಳ್ಳೆಯ ಗೆಳೆಯರನ್ನು ಗಳಿಸುವೆ 
ವಿನಯವನ್ನು ಬಿತ್ತಿದರೆ, ಹಿರಿಯತನವ ಗಳಿಸುವೆ 
ಹಿಡಿದುದ ಬಿಡದಿದ್ದರೆ, ವಿಜಯವನ್ನು ಸಾಧಿಸುವೆ
ಕ್ಷಮೆಯನ್ನು ಬಿತ್ತಿದರೆ, ಸಹಬಾಳ್ವೆ ಗಳಿಸುವೆ 
ಶ್ರದ್ಧೆಯನ್ನು ಬಿತ್ತಿದರೆ, ಪವಾಡಗಳನ್ನು ಮೆರೆಯುವೆ
ಶ್ರಮವನ್ನು ಬಿತ್ತಿದರೆ, ಸಫಲತೆಯನ್ನು ಗಳಿಸುವೆ 
ದೃಢತೆಯನ್ನು ಬಿತ್ತಿದರೆ, ಯಶಸ್ಸನ್ನು ಗಳಿಸುವೆ
ಬಿತ್ತಿದಂತೆ ಫಲವನ್ನು ನೀ ಪಡೆಯುವೆ

ಸಹೃದಯ ಓದುಗರೇ! ಅಂತಹ ಪ್ರಾಮಾಣಿಕತೆಯಿಂದ ಕೂಡಿದ ಪರಿಶುದ್ದ, ಪರಿಶುಭ್ರ ವ್ಯಕ್ತಿಗಳು ಈ ನಾಡಿಲ್ಲಿ ಇಲ್ಲವೆಂದಲ್ಲ. ಆದರೆ ಅಂತಹ ಸಚ್ಚಾರಿತ್ರ್ಯವುಳ್ಳ ನಾಯಕರು ರಾಜಕೀಯ ರಂಗದಲ್ಲಿ ಇದ್ದಾರೆಯೇ? ಇರಲು ಸಾಧ್ಯವೇ? ಇಲ್ಲವೆಂದರೆ ಈಗ ಭ್ರಷ್ಟಾಚಾರ ಕುರಿತು ಕೇಳಿ ಬರುತ್ತಿರುವ ಮಾತುಗಳು ಭ್ರಷ್ಟಾಚಾರ ನಿರ್ಮೂಲನದ ಮಾತಾಗದೆ ಕಡಿಮೆ ಭ್ರಷ್ಟರನ್ನು ಬಯಸುವ ಮಾತಾಗುತ್ತದೆಯಲ್ಲವೇ? ಬೇವಿನ ಬೀಜವನ್ನು ಬಿತ್ತಿ ಮಾವಿನ ಫಲವನ್ನು ನಿರೀಕ್ಷಿಸಿದರೆ ಹೇಗೆ?

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 1.12.2010.