ಉಗ್ರಗಾಮಿಗಳು ಮತ್ತು ಒತ್ತೆಯಾಳುಗಳು
“When Rome was burning Nero was fiddling”
(ರೋಮ್ ನಗರ ಬೆಂಕಿ ಹತ್ತಿ ಉರಿಯುತ್ತಿರುವಾಗ ಚಕ್ರವರ್ತಿ ನೀರೋ ಪಿಟೀಲು ಬಾರಿಸುತ್ತಿದ್ದ) ಎಂಬ ಗಾದೆಮಾತೊಂದು ಆಂಗ್ಲಭಾಷೆಯಲ್ಲಿದೆ. ಜನರು ಸಂಕಷ್ಟದಲ್ಲಿರುವಾಗ ಅವರ ಕಷ್ಟಗಳನ್ನು ಪರಿಹರಿಸುವ ಕಡೆ ಗಮನ ಕೊಡದೆ ಮೋಜುಮೇಜವಾನಿಯಲ್ಲಿ ತೊಡಗುವ ಬೇಜವಾಬ್ದಾರಿ ಮುಖಂಡರನ್ನು ಕುರಿತು ಈ ಟೀಕಾಪ್ರಹಾರ ಮಾಡಲಾಗುತ್ತದೆ. ಅಂತಹ ಬೇಜವಾಬ್ದಾರಿ ವರ್ತನೆಯನ್ನು ಚಕ್ರವರ್ತಿ ನೀರೋ ಮಾಡಲಿಲ್ಲ. ಇದೆಲ್ಲಾ ಅವನಿಗಾಗದವರು ಹುಟ್ಟಿಸಿದ ಕಟ್ಟು ಕತೆ. ಕ್ರಿ.ಶ. ಒಂದನೆಯ ಶತಮಾನದ ಪೂರ್ವಾರ್ಧದಲ್ಲಿದ್ದ ಅವನ ಕಾಲದಲ್ಲಿ ಪಿಟೀಲು ತಂತಿವಾದ್ಯವೇ ಇರಲಿಲ್ಲವೆಂದು ಇತಿಹಾಸಜ್ಞರು ಹೇಳುತ್ತಾರೆ. ಅವನು ಅಗ್ನಿದುರಂತದ ವಿಷಯ ತಿಳಿದೊಡನೆಯೇ ಎಲ್ಲಿಯೋ ಇದ್ದವನು ಬೆಂಕಿ ಹತ್ತಿ ಉರಿಯುವ ಸ್ಥಳಗಳಿಗೆ ಕೂಡಲೇ ಧಾವಿಸಿ ಪರಿಹಾರಕ್ರಮವನ್ನು ಕೈಗೊಂಡನೆಂದೂ, ಒಂದು ವಾರ ಕಾಲ ನಡೆದ ಆ ಅಗ್ನಿದುರಂತದಲ್ಲಿ ಮನೆ ಸುಟ್ಟು ನಿರಾಶ್ರಿತರಾದವರಿಗೆ ತನ್ನ ಅರಮನೆಗಳಲ್ಲಿಯೇ ಊಟ-ವಸತಿ ಸೌಲಭ್ಯವನ್ನು ಕಲ್ಪಿಸಿಕೊಟ್ಟನೆಂದೂ, ಬೆಂಕಿಯಲ್ಲಿ ಸುಟ್ಟುಹೋದ ಮರಮುಟ್ಟುಗಳ ಮನೆಗಳ ಬದಲು ಒಂದು ಹೊಸ ಯೋಜನೆಯನ್ನೇ ರೂಪಿಸಿ ನಿರ್ವಸತಿಕರಿಗೆ ಇಟ್ಟಿಗೆ ಗೋಡೆಗಳ ಮನೆಗಳನ್ನು ಕಟ್ಟಿಸಿಕೊಟ್ಟನೆಂದೂ ಹೇಳುತ್ತಾರೆ. ಇದು ನಿಜವೋ ಸುಳ್ಳೋ ಗತಕಾಲದ ಇತಿಹಾಸಕ್ಕೆ ಸಂಬಂಧಪಟ್ಟ ವಿಚಾರ. ಅದನ್ನು ಕಣ್ಣಾರೆ ನೋಡಿದವರು ಯಾರೂ ಈಗ ಇಲ್ಲ. ಆದರೆ ಕಳೆದ ಎರಡು ವಾರಗಳಿಂದ ಕರ್ನಾಟಕದ ಜನರೇ ಏಕೆ ಇಡೀ ಭರತಖಂಡದ ಜನತೆ ಕಣ್ಣಾರೆ ನೋಡುತ್ತಿರುವುದೇನು? ಸಿರಿಗಂಧದ ನಾಡಾದ ಕರ್ನಾಟಕದಲ್ಲಿ ಗಬ್ಬುನಾರುತ್ತಿರುವ ಕೊಳಕು ರಾಜಕೀಯ, ಅಧಿಕಾರದ ಹಪಾಹಪಿ, ನಿರ್ಲಜ್ಜೆಯ ಪರಾಕಾಷ್ಟ.
ನೆರೆಸಂತ್ರಸ್ತರಿಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಶಾಶ್ವತನೆಲೆಯನ್ನು ಕಲ್ಪಿಸಿಕೊಡಲು ಸರ್ಕಾರ ರೂಪಿಸಿರುವ ಆಸರೆ ಯೋಜನೆ ನಿಜಕ್ಕೂ ಪ್ರಶಂಸಾರ್ಹವೇ. ಈ ವಿಚಾರವಾಗಿ ಸರ್ಕಾರ ನಾಡಿನ ಮಠಾಧೀಶರ ಮತ್ತು ರಾಜಕಾರಣಿಗಳ ಸಮ್ಮುಖದಲ್ಲಿ ಏರ್ಪಡಿಸುತ್ತಿರುವ ಶಂಕುಸ್ಥಾಪನಾ ಸಮಾರಂಭಗಳನ್ನು ಕುರಿತು ಕೋಟ್ಯಾಂತರ ರೂಪಾಯಿ ಖರ್ಚುಮಾಡಿ ರಾಜ್ಯದ ಪ್ರಮುಖ ಪತ್ರಿಕೆಗಳ ಮುಖಪುಟಗಳಲ್ಲಿ ಕೊಡುತ್ತಿರುವ ದೊಡ್ಡ ದೊಡ್ಡ ಜಾಹೀರಾತುಗಳನ್ನು ದಿನವೂ ನೀವು ನೋಡುತ್ತಿದ್ದೀರಿ. ಈ ಜಾಹೀರಾತುಗಳ ಅವಶ್ಯಕತೆ ಇದೆಯೇ? ಇದು ಸಾರ್ವಜನಿಕರ ಹಣ, ಸಮಯ ಮತ್ತು ಶಕ್ತಿಯನ್ನು ಹಾಳುಮಾಡಿದಂತಾಗುವುದಿಲ್ಲವೇ? (Is it not a criminal waste of public money, time and energy?), ಯಾರ ವೈಭವೀಕರಣಕ್ಕಾಗಿ ಈ ಜಾಹೀರಾತುಗಳು? ಇದೇ ಹಣವನ್ನು ಸಂಕಷ್ಟದಲ್ಲಿರುವ ಹಳ್ಳಿಯ ಜನರಿಗೆ ಸೂರು ಕಲ್ಪಿಸಿಕೊಡಲು ಬೇಕಾದ ಸಾಮಗ್ರಿಗಳಿಗೆ ಉಪಯೋಗಿಸಲು ಬರುವುದಿಲ್ಲವೇ? ಹಾಗಾದರೆ ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳು ತಿಳಿಯುವುದಾದರೂ ಹೇಗೆ? ಎಂಬ ಪ್ರಶ್ನೆ ಉದ್ಭವಿಸಬಹುದು. ಅದಕ್ಕೆ ಉತ್ತರಿಸುವುದು ಬಹಳ ಕಷ್ಟದ ಕೆಲಸವೇನೂ ಆಗಲಾರದು. ಯಾವ ಜಾಹೀರಾತೂ ಇಲ್ಲದೆ ದಿನನಿತ್ಯ ನಡೆಯುವ ನಮ್ಮ ರಾಜಕಾರಣಿಗಳ ದಿಲ್ಲಿಯಾತ್ರೆಗಳು, ಹೈದರಾಬಾದಿನ ಪಂಚತಾರಾ ಹೋಟೆಲ್ ನಲ್ಲಿ ಸತತವಾಗಿ ಎರಡುವಾರಗಳ ಕಾಲ ಇದ್ದ ಒತ್ತೆಯಾಳುಗಳ ಬಿಡುಗಡೆಗೆ ನಮ್ಮ ರಾಜಕೀಯ ಧುರೀಣರು ಮಾಡಿದ ಭಗೀರಥ ಪ್ರಯತ್ನ, ಅವರ ಬಿಡುಗಡೆಗಾಗಿ ಹಾಕಿದ ಷರತ್ತುಗಳ ಎಲ್ಲ ವಿವರಗಳೂ ಮಾಧ್ಯಮಗಳಲ್ಲಿ ಸರ್ಕಾರದ ಖಜಾನೆಗೆ ಯಾವ ಖರ್ಚೂ ಇಲ್ಲದೆ ಜನರಿಗೆ ವಾಕರಿಕೆ ಬರುವಷ್ಟು ಬಹಿರಂಗವಾಗಿ ಜಗಜ್ಜಾಹೀರು ಆಗಿದೆಯಲ್ಲವೇ? ಮತ್ತೇಕೆ ಈ ಜಾಹೀರಾತುಗಳು? ಹೈದರಾಬಾದು ಮತ್ತು ದಿಲ್ಲಿಯ ಕಾರುಬಾರಿನ ಖರ್ಚುಗಳ ಮುಂದೆ ಪತ್ರಿಕೆಯ ಮುಖಪುಟಗಳಲ್ಲಿ ಬರುವ ಈ ಜಾಹೀರಾತುಗಳ ಖರ್ಚು ಬಹಳ ಜುಜುಬಿ ಎಂದು ನೀವು ಹೇಳಬಹುದು. ಅದೇನೇ ಇರಲಿ. ಜಾಹಿರಾತುಗಳಲ್ಲಿ ಬರುವ ಪ್ರಚಾರದ ವೈಖರಿಯನ್ನು ನೋಡಿದರೆ ಸರ್ಕಾರದಿಂದ ಮೂರೇ ತಿಂಗಳಲ್ಲಿ ಮನೆಗಳ ನಿರ್ಮಾಣವಾಗಿ ನೆರೆಸಂತ್ರಸ್ತರು ಗೃಹಪ್ರವೇಶ ಮಾಡುವಂತಾದರೆ ಬಹಳ ಸಂತೋಷ.
ಇಲ್ಲಿಗೆ ಸರಿಯಾಗಿ ಒಂದು ವರ್ಷದ ಹಿಂದೆಯಷ್ಟೇ ಪಾಕಿಸ್ತಾನ ಮೂಲದ ಉಗ್ರಗಾಮಿಗಳು ಮಾಡಿದ ಬಾಂಬ್ ಧಾಳಿಯಿಂದ ಮುಂಬಯಿ ತಾಜ್ ಮತ್ತು ಒಬೆರಾಯ್ ಹೋಟೆಲ್ ಗಳು ಹತ್ತಿ ಉರಿದು ಅನೇಕ ಸಾವು ನೋವುಗಳು ಸಂಭವಿಸಿದ ಕರಾಳ ದೃಶ್ಯ ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿತ್ತು. ಆ ಕಹಿ ನೆನಪು ಜಗತ್ತಿನ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಗುಂಡಿನ ಮಳೆಗರೆಯುತ್ತಿದ್ದ ಉಗ್ರಗಾಮಿಗಳ ಹಿಡಿತದಲ್ಲಿ ಮುಂಬಯಿ ಹೋಟೆಲ್ ಳಲ್ಲಿದ್ದ ಒತ್ತೆಯಾಳುಗಳು ಪ್ರಾಣಭೀತಿಯಿಂದ ನಡುಗುತ್ತಿದ್ದರೆ, ಇತ್ತೀಚೆಗೆ ಹೈದರಾಬಾದಿನ ಹೋಟೆಲ್ ನಲ್ಲಿ ಒತ್ತೆಯಾಳುಗಳಾಗಿದ್ದ ನಮ್ಮ ನೆಚ್ಚಿನ ನಾಯಕರುಗಳು ಉಲ್ಲಾಸದಿಂದ ಅದಾವುದೋ ಹಳ್ಳಿಯಿಂದ ರೊಟ್ಟಿ-ಚೆಟ್ಟಿ, ಮೊಸರಿನ ಗಡಿಗೆ ತರಿಸಿ ಮೋಜುಮಾಡುತ್ತಿದ್ದರು. ಅಷ್ಟೇ ಆಗಿದ್ದರೆ ಸಮಾಧಾನಪಟ್ಟುಕೊಳ್ಳಬಹದಾಗಿತ್ತು. ಮುಂಬಯಿ ಹೋಟೆಲ್ ನಲ್ಲಿ ಪಾಕಿಸ್ತಾನದ ಉಗ್ರಗಾಮಿಗಳು ಹೋಟೆಲ್ ಗೆ ನುಗ್ಗಿ ಗುಂಡು ಹಾರಿಸಿದರೆ ಒತ್ತೆಯಾಳುಗಳಾಗಿದ್ದ ಇವರೇ ಹೋಟೆಲ್ ಒಳಗಿದ್ದುಕೊಂಡು ಗುಂಡು ಹಾಕುತ್ತಿದ್ದರು ಎಂದು ಹೇಳಲು ಹೇಸಿಕೆಯಾಗುತ್ತಿದೆ.
ಎಂತಹ ವಿಪರ್ಯಾಸದ ಸಂಗತಿ ಇದು! ಚುನಾವಣೆಯ ಸಂದರ್ಭದಲ್ಲಿ ಮನೆ ಮನೆಗೆ ಹೋಗಿ ಕೈಮುಗಿದು ಓಟು ಕೇಳಿ ಗೆದ್ದ ನಮ್ಮ ಜನಪ್ರಿಯ ಶಾಸಕರು ನಾಪತ್ತೆಯಾಗಿದ್ದಾರೆ ಹುಡುಕಿ ಕೊಡಿ ಎಂದು ಕ್ಷೇತ್ರದ ಜನತೆ ಪೋಲೀಸರಿಗೆ ದೂರು ಕೊಡುವ ಮಟ್ಟಿಗೆ ಹೋಗಿರುವ ನಮ್ಮ ನಾಡಿನ ಲಜ್ಜೆಗೇಡಿತನದ ರಾಜಕೀಯ ರಿಸಾರ್ಟ್ ಸಂಸ್ಕೃತಿ ಪ್ರಪಂಚದ ಯಾವ ದೇಶದಲ್ಲೂ ಇಲ್ಲ. “Politics is the last resort of a scoundrel” (ರಾಜಕೀಯವು ಒಬ್ಬ ಫಟಿಂಗನ ಕೊನೆಯ ಆಯ್ಕೆ) ಎಂಬ ಮಾತನ್ನು ನೀವು ಕೇಳಿದ್ದೀರಿ. ಈ ಆಂಗ್ಲ ನುಡಿಗಟ್ಟಿನಲ್ಲಿ ಬರುವ resort ಶಬ್ದವು ಪ್ರಪಂಚದ ಯಾವ ಪ್ರಜಾಪ್ರಭುತ್ವದಲ್ಲೂ ಕಂಡುಬರದ ನಮ್ಮ ನಾಡಿನ ರಾಜಕೀಯ ರೆಸಾರ್ಟ್ ಸಂಸ್ಕೃತಿಗೆ ಅಥವಾ ರಾಜಕೀಯ ಹೈಜಾಕ್ ಸಂಸ್ಕೃತಿಗೆ ಪ್ರೇರಣೆಯುಂಟುಮಾಡಿರಬಹುದೇ ಎಂಬುದನ್ನು ರಾಜಕೀಯ ಪಂಡಿತರಿಗೆ ವಿಚಾರ ಮಾಡಲು ಬಿಡುವುದು ಒಳ್ಳೆಯದು.
ಒತ್ತೆಯಾಳುಗಳ ಬಿಡುಗಡೆಯಾದ ಮೇಲೆ ಸಿಹಿಹಂಚಿಕೆಯಾಯಿತೋ, ಸಿಹಿಹಂಚಿಕೆಯಾದ ಮೇಲೆ ಒತ್ತೆಯಾಳುಗಳ ಬಿಡುಗಡೆಯಾಯಿತೋ ಎಂಬುದು ನಿಮಗೆ ತಿಳಿಯದ ವಿಷಯವೇನೂ ಅಲ್ಲ. ಯಾರಾದರೂ ತಮ್ಮ ಹುಟ್ಟು ಹಬ್ಬವನ್ನು ಆಚರಿಸುವಾಗ ಕೇಕ್ ಕತ್ತರಿಸಿ ಸಿಹಿ ತಿನ್ನಿಸುವಂತೆ ಬಹಿರಂಗವಾಗಿ ಹೀನಾಮಾನ ಬೈದಾಡಿ ಪರಸ್ಪರ ದೋಷಾರೋಪಣೆ ಮಾಡಿದವರು ಒಬ್ಬರ ಬಾಯಲ್ಲಿ ಮತ್ತೊಬ್ಬರು ಸಿಹಿ ತಿನ್ನಿಸುವ ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಮಠಗಳಲ್ಲಿ ಪ್ರವಚನ ಕೇಳುವ ಧರ್ಮಭೀರುಗಳಾದ ನಮ್ಮ ಶಾಸಕರು ಮತ್ತು ಮಂತ್ರಿಗಳು ನಿಮ್ಮ ಶತ್ರುಗಳನ್ನು ಪ್ರೀತಿಸಿ ಎನ್ನುವ ಧರ್ಮೋಪದೇಶಕ್ಕೆ ಅನುಗುಣವಾಗಿ ನಡೆದುಕೊಂಡಿದ್ದಾರೆಂಬುದು ಮಾತ್ರ ಮಹೋನ್ನತವಾದ ವಿಷಯವಾಗಿದೆ. ನಮ್ಮ ನಾಡಿನಲ್ಲಿ ಯುವಕಲಾವಿದರಿಗೆ ನಾಟಕ ತರಬೇತಿ ನೀಡಿ ಉತ್ತಮವಾಗಿ ಅಭಿನಯ ಮಾಡುವುದನ್ನು ಕಲಿಸಿಕೊಡುವ ಅನೇಕ ಕಲಾಕೇಂದ್ರಗಳು (ರೆಪರ್ಟರಿ) ಇವೆ. ಉದಾಹರಣೆಗೆ ಹೆಗ್ಗೋಡಿನ ನೀನಾಸಂ, ನಮ್ಮ ಮಠದ ಶಾಖೆಯಾದ ಸಾಣೆಹಳ್ಳಿಯ ಶಿವಸಂಚಾರ, ಮೈಸೂರಿನ ರಂಗಾಯಣ ಇತ್ಯಾದಿ. ಇವೆಲ್ಲವುಗಳಿಗಿಂತಲೂ ವಿಶಿಷ್ಟವಾಗಿ ಮತ್ತು ವಿಶೇಷವಾಗಿ ರಾಜಕೀಯ ಅಭಿನಯ ಕಲೆಯನ್ನು ಕಲಿಸಿಕೊಡುವ ರೆಪರ್ಟರಿ ಎಂದರೆ ನಮ್ಮ ಬೆಂಗಳೂರಿನ ವಿಧಾನಸೌಧ! ಬೆಂಗಳೂರೇ ಏಕೆ ನಮ್ಮ ದೇಶದ ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿರುವ ವಿಧಾನಸಭೆಗಳನ್ನು “Political Repertories” ಎಂದು ಕರೆದರೆ ಅತಿಶಯೋಕ್ತಿಯೇನೂ ಆಗಲಾರದು. ಈ ರಾಜಕೀಯ ಕಲಾತಂಡಗಳ ತಿರುಗಾಟ ವರ್ಷದುದ್ದಕ್ಕೂ ಇರುತ್ತದೆ. ಗಡಿಯ ವಿಚಾರ ಬಂದಾಗ ಗುಡುಗುವ ನಮ್ಮ ರಾಜಕೀಯ ಕಲಾವಿದರ ವೈಶಿಷ್ಟ್ಯವೆಂದರೆ ಒಮ್ಮೆ ಮಹಾರಾಷ್ಟ್ರದ ವಿಧಾನಸಭೆಯ ಕಲಾತಂಡ ಬೆಂಗಳೂರಿಗೆ ಧಾವಿಸಿ ಬಂದರೆ, ಬೆಂಗಳೂರಿನ ವಿಧಾನಸಭೆಯ ಕಲಾತಂಡ ಹೈದರಾಬಾದಿಗೆ ಹೋಗುತ್ತದೆ! ಇದು ಆಯಾಯ ರಾಜ್ಯದ ಕಲಾಭಿಮಾನಿಗಳ ಮೇಲೆ ಅವಲಂಬಿಸಿರುತ್ತದೆ!
ನಿರ್ದೇಶಕರು ಯಾರೂ ಇಲ್ಲದೆ ಒಳ್ಳೆಯ ನಟನೆಯನ್ನು ಮಾಡಲು ಹೇಗೆ ಬರುತ್ತದೆ ಎಂಬುದಕ್ಕೆ ನಮ್ಮ ಅನುಭವಕ್ಕೆ ಬಂದ ಒಂದು ಘಟನೆ ಹೀಗಿದೆ: ನಮ್ಮ ಮಠದಿಂದ ಹತ್ತಾರು ಜಿಲ್ಲೆಗಳಲ್ಲಿ ನಡೆಯುವ ನೂರಾರು ಶಾಲಾಕಾಲೇಜುಗಳಲ್ಲಿ ಕೆಲಸ ಮಾಡುವ ನೌಕರರ ಪೈಕಿ ಒಬ್ಬ ಜವಾನ ಸಿರಿಗೆರೆಯಲ್ಲಿರುವ ನಮ್ಮ ಶಿಕ್ಷಣ ಸಂಸ್ಥೆಯ ಕೇಂದ್ರಕಾರ್ಯಾಲಯಕ್ಕೆ ತನ್ನ ಪತ್ನಿಯೊಡನೆ ಬಂದಿದ್ದ. ಮಧ್ಯಾಹ್ನದ ಹೊತ್ತು. ನಮ್ಮ ಕರ್ತವ್ಯಗಳನ್ನು ನಿರ್ವಹಿಸಿ ಮೇಲಿನ ಮಹಡಿಯಿಂದ ಕೆಳಗಿಳಿದು ಬರುತ್ತಿದ್ದಾಗ ಪ್ರವೇಶದ್ವಾರದಲ್ಲಿದ್ದ ಆ ನೌಕರ ತನ್ನ ಪತ್ನಿಯ ಸಹಾಯದೊಂದಿಗೆ ತೆವಳುತ್ತಾ ಬಂದು ನಮಸ್ಕರಿಸಿ ಕಣ್ಣೀರು ಸುರಿಸತೊಡಗಿದ. ಅವನ ಒಂದು ಕಾಲಲ್ಲಿ ಬ್ಯಾಂಡೇಜು ಇತ್ತು. ಯಾವುದೋ ಅಪಘಾತದಲ್ಲಿ ಅವನು ಕಾಲು ಮುರಿದುಕೊಂಡಿದ್ದಾನೆಂದು ನಮಗೆ ಸಹಜವಾಗಿ ಅವನ ಬಗ್ಗೆ ಅನುಕಂಪ ಮೂಡಿತು. ಬಂದ ವಿಚಾರವೇನೆಂದು ಕೇಳಿದಾಗ ಅವನು ದುಃಖಿಸುತ್ತಾ ಸಂಸ್ಥೆಯ ಆಡಳಿತಾಧಿಕಾರಿಗಳು ತನ್ನನ್ನು ದೂರದ ಸ್ಥಳಕ್ಕೆ ವರ್ಗ ಮಾಡಿದ್ದಾರೆ ಅದನ್ನು ರದ್ದಪಡಿಸಿ ಇದ್ದ ಸ್ಥಳದಲ್ಲಿಯೇ ಮುಂದುವರಿಯಲು ಅವಕಾಶ ಮಾಡಿಕೊಡಬೇಕೆಂದು ನಿವೇದಿಸಿಕೊಂಡ. ಅವನ ದುಃಸ್ಥಿತಿಯನ್ನು ನೋಡಿ ಮರುಗಿ ಕೂಡಲೇ ಆಡಳಿತಾಧಿಕಾರಿಗಳನ್ನು ಕರೆದು ವರ್ಗಾವಣೆ ಆದೇಶವನ್ನು ರದ್ದುಗೊಳಿಸಲು ಆದೇಶಿಸಿ ಮುಂದೆ ಸಾಗಿದೆವು. ನಮ್ಮ ಆದೇಶದಿಂದ ತೃಪ್ತಿಗೊಂಡ ಆ ದಂಪತಿಗಳು ದೊಪ್ಪನೆ ನಮ್ಮ ಪಾದದ ಮೇಲೆ ಮತ್ತೊಮ್ಮೆ ಬಿದ್ದು ತಮ್ಮ ಕೃತಜ್ಞತೆಯನ್ನು ಸೂಚಿಸಿದರು. ಮಧ್ಯಾಹ್ನ ಪ್ರಸಾದ ಮುಗಿಸಿಕೊಂಡು ವಾಪಾಸು ನಮ್ಮ ಕಾರ್ಯಾಲಯಕ್ಕೆ ಬಂದಾಗ ಆಶ್ಚರ್ಯ ಕಾದಿತ್ತು! ವರ್ಗಾವಣೆ ಆದೇಶ ರದ್ದುಪಡಿಸಲು ಆದೇಶಿಸಿ ನಾವು ಅತ್ತ ಕಡೆ ನಿರ್ಗಮಿಸಿದಾಗ ಇತ್ತ ಕಡೆ ಆ ನೌಕರ ಸಲೀಸಾಗಿ ಎದ್ದು ತನ್ನ ಹೆಂಡತಿಯೊಡನೆ ಬಸ್ ನಿಲ್ದಾಣದ ಕಡೆ ದಾಪುಗಾಲು ಇಡುತ್ತಾ ಜೋರಾಗಿ ನಡೆದುಕೊಂಡು ಹೋಗಿದ್ದ. ನಮ್ಮ ಅನುಕಂಪೆಯನ್ನು ಗಿಟ್ಟಿಸಲೋಸುಗ ಅವನು ತನ್ನ ಕಾಲಿಗೆ ಬ್ಯಾಂಡೇಜು ಸುತ್ತಿಕೊಂಡು ಬಂದಿದ್ದನೆಂದು ನಂತರ ವಿಚಾರಣೆ ಮಾಡಿದಾಗ ತಿಳಿದುಬಂತು!
ಅಧಿಕಾರಕ್ಕಾಗಿ ಸಿಹಿ ತಿನ್ನಿಸಿ ಜನರಿಗೆ ಚಳ್ಳೆಹಣ್ಣು ತಿನ್ನಿಸುವ ಜನ ರಾಜಕೀಯ ರಂಗದಲ್ಲಿರುವಾಗ ನಮ್ಮ ನೌಕರನೊಬ್ಬ ತನ್ನ ವರ್ಗಾವಣೆಯನ್ನು ರದ್ದುಪಡಿಸಿಕೊಳ್ಳಲು ನಾಟಕವಾಡಿದರೆ ಏನು ಮಹಾತಪ್ಪು ಎನ್ನಿಸುವುದು ಸಹಜ. ಹಳ್ಳಿಯ ಬಡಮಹಿಳೆಯೊಬ್ಬಳು ಗಂಡನಿದ್ದೂ ತಾಳಿಯನ್ನು ಹರಿದಿಟ್ಟು ಫೋಟೋ ತೆಗೆಸಿ, ಸ್ಥಳೀಯ ಶಾಸಕರಿಂದ ಶಿಫಾರಸ್ಸು ಮಾಡಿಸಿ ವಿಧವಾಭತ್ಯೆಯನ್ನು ಪಡೆಯುತ್ತಿದ್ದಳು. ಏನಮ್ಮಾ ಇಂತಹ ಪಾಪಕೃತ್ಯವನ್ನು ನೀನು ಮಾಡಬಹುದೇ ಎಂದು ಕೇಳಿದರೆ, ಈ ದೇಶದಲ್ಲಿ ಯಾರು ಯಾರೋ ಎಷ್ಟೋ ದುಡ್ಡು ಹೊಡೆಯುತ್ತಾರೆ, ನಾನೊಬ್ಬ ಬಡವಿ ನನ್ನ ಹೊಟ್ಟೆಪಾಡಿಗೆ ಈ ರೀತಿ ಮಾಡಿದರೆ ಏನು ಮಹಾ ತಪ್ಪು ಸ್ವಾಮಿ? ಎಂದು ಉತ್ತರಿಸಿದಳಂತೆ!
ಹೋಟೆಲ್ ನುಗ್ಗಿಯೋ, ವಿಮಾನವನ್ನು ಅಪಹರಿಸಿಯೋ ಪ್ರವಾಸಿಗರನ್ನು ಅಥವಾ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡು ಸರ್ಕಾರದ ಮುಂದೆ ತಮ್ಮ ಬೇಡಿಕೆಗಳನ್ನು ಮುಂದಿಡುವ ಉಗ್ರಗಾಮಿಗಳಂತೆ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಶಾಸಕರನ್ನು ಒತ್ತೆಯಾಳುಗಳನ್ನಾಗಿರಿಸಿಕೊಳ್ಳುವ ಈ ರಾಜಕೀಯ ರೆಸಾರ್ಟ್ ಸಂಸ್ಕೃತಿಯನ್ನು ನೋಡಿದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೇ? ನಮ್ಮ ದೇಶ ಪ್ರಜಾಪ್ರಭುತ್ವಕ್ಕೆ ಅರ್ಹವೇ? ನಮ್ಮ ಸಂವಿಧಾನದಲ್ಲಿ ಇದಕ್ಕೆ ಯಾವ ಪರಿಹಾರವೂ ಇಲ್ಲವೇ? ಎಂಬ ಪ್ರಶ್ನೆಗಳು ಹುಟ್ಟುತ್ತವೆ. ನಮ್ಮ ದೇಶದ ಸಂವಿಧಾನ ರಚಿಸಿದ ಶಿಲ್ಪಿಗಳಿಗೆ ಈ ತೆರನಾದ ಕೆಟ್ಟ ರಾಜಕೀಯ ಬೆಳವಣಿಗೆ ಉಂಟಾಗಬಹುದೆಂಬ ಅರಿವು ಖಂಡಿತಾ ಇರಲಿಲ್ಲ. ಏಕೆಂದರೆ ಅವರಿಗೆ ಇದನ್ನು ಕಲ್ಪಿಸಿಕೊಳ್ಳುವಷ್ಟು ಕೆಟ್ಟ ಹೃದಯ ಇರಲಿಲ್ಲ. ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ಬಲ್ಲವರಿಗೆ ಒಂದು ಸರ್ಕಾರ ಅಧಿಕಾರಕ್ಕೆ ಬಂದರೆ ಅದು ಐದು ವರ್ಷ ಇರಬಲ್ಲುದೇ ಎಂಬುದೇ ಅನುಮಾನ. ಅದಕ್ಕೂ ಮೊದಲು ಸರ್ಕಾರ ರಚನೆ ಮಾಡುವುದೇ ಒಂದು ದೊಡ್ಡ ಸರ್ಕಸ್! ಯಾರು ಯಾರು ಹೇಗೆ ಹೇಗೆ ಲಾಗಾ ಹಾಕುತ್ತಾರೋ ಅದನ್ನು ದಿನಂಪ್ರತಿ ನೋಡುವುದೇ ಜನರಿಗೆ ಒಂದು ಮನರಂಜನೆಯಾಗಿದೆ. ಅಂತಹ ಸುದ್ದಿ ಇಲ್ಲದಿದ್ದರೆ ಅಂದಿನ ಪತ್ರಿಕೆ ನೀರಸ. ಬೆಳಗಿನ ಚಹಾ ರುಚಿಸುವುದಿಲ್ಲವೆಂದು ಹಿಂದೆಯೇ ಬರೆಯಲಾಗಿದೆ.
ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಬದಲು ಸರ್ಕಾರವನ್ನು ಉರುಳಿಸುವ, ಅಧಿಕಾರವನ್ನು ಪಡೆಯುವ ಪಗಡೆಯಾಟದಲ್ಲಿ ನಿರಂತರವಾಗಿ ನಿರತರಾಗಿದ್ದಾರೆ. ಇದರಲ್ಲಿ ಯಾರು ಗೆಲ್ಲತ್ತಾರೋ, ಯಾರು ಸೋಲುತ್ತಾರೋ ಸಾಮಾನ್ಯ ಜನರಂತೂ ಸೋತು ಸುಣ್ಣವಾಗಿದ್ದಾರೆ. ಹಿಂದೆ ಹಣಬಲವಿರುವ ಉದ್ಯಮಿಗಳು "ಯೇನಕೇನ ಪ್ರಕಾರೇಣ" ಲಾಭ ಗಳಿಸಲು, ತಮ್ಮ ಅಕ್ರಮ ಉದ್ದಿಮೆಯನ್ನು ವಿಸ್ತರಿಸಲು, ತಮ್ಮ ಅಕ್ರಮ ಸಂಪತ್ತನ್ನು ಸಂರಕ್ಷಿಸಲು ರಾಜಕೀಯ ಅಧಿಕಾರವಿರುವವರನ್ನು ಒಲಿಸಿಕೊಂಡು ಅವರನ್ನು ತಮ್ಮ ದಾಳಗಳನ್ನಾಗಿ ಬಳಸಿಕೊಳ್ಳುತ್ತಿದ್ದರು. ಆದರೆ ಈಗ ಅದರ ಬದಲು ನೇರವಾಗಿ ತಾವೇ ರಾಜಕೀಯದಲ್ಲಿ ಸ್ಥಾನ, ಅಧಿಕಾರ ಪಡೆದು ಅದರ ಮೂಲಕ ತಮ್ಮ ಕೆಲಸವನ್ನು ಸುಸೂತ್ರಗೊಳಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಉದ್ಯಮಿಗಳಿಗೆ ತಮ್ಮ ಉದ್ದಿಮೆಯನ್ನು ಬೆಳಸುವ ಕಡೆ ಮನಸ್ಸು ಇರುತ್ತದೆಯೇ ಹೊರತು ಜನರ ಬಾಳುವೆಯನ್ನು ಸುಧಾರಿಸುವ ಕಡೆ ಇರುವುದಿಲ್ಲ. ಪಕ್ಷ, ಮೌಲ್ಯ ಇವೆಲ್ಲಾ ಗೌಣ. ಅಧಿಕಾರವೇ ಪ್ರಧಾನ ಆದಕಾರಣ ಇದಕ್ಕೆ ಇರುವ ಪರಿಹಾರವೆಂದರೆ ಈಗಾಗಲೇ ಅನೇಕರು ವಿಚಾರಮಾಡಿದಂತೆ ಜನರು ಹೇಗೆ ಶಾಸಕರನ್ನು ಆಯ್ಕೆ ಮಾಡುತ್ತಾರೋ ಹಾಗೆಯೇ ನಾಡಿನ ಮುಖ್ಯಮಂತ್ರಿಯನ್ನು ನೇರವಾಗಿ ಆಯ್ಕೆ ಮಾಡುವ ಅಧಿಕಾರ ಜನರಿಗೇ ಇರಬೇಕು. ಅಷ್ಟೇ ಸಾಲದು ಅವನು ಸರ್ವಾಧಿಕಾರಿಯಂತೆ ವರ್ತಿಸದಿರಲು ಒಂದೊಂದು ಜಿಲ್ಲೆಯಿಂದ ಒಬ್ಬೊಬ್ಬ ಮಂತ್ರಿಯನ್ನು ಆಯ್ಕೆ ಮಾಡುವ ಅಧಿಕಾರವೂ ಜನರಿಗಿರಬೇಕು. ಸಂಮಿಶ್ರ ಸರ್ಕಾರದಲ್ಲಿ ಬೇರೆ ಬೇರೆ ಪಕ್ಷದವರು ಇರಬಹುದಾದರೆ, ವಿಭಿನ್ನ ಜಿಲ್ಲೆಗಳಿಂದ ವಿಭಿನ್ನ ಪಕ್ಷಗಳ ಮಂತ್ರಿಗಳ ಆಯ್ಕೆ ಏಕಾಗಬಾರದು? ಖಾತೆ ಹಂಚಿಕೆ ಮಾಡುವ ಅಧಿಕಾರ ಮಾತ್ರ ಮುಖ್ಯಮಂತ್ರಿಗಿರಲಿ. ಆಗಲಾದರೂ ಆಯಾಯ ಜಿಲ್ಲೆಗಳಿಂದ ಆಯ್ಕೆಯಾದ ಮಂತ್ರಿಗಳು ಯಾವ ಪಕ್ಷದವರೇ ಇರಲಿ, ಅಧಿಕಾರ ಕಳೆದುಕೊಳ್ಳುವ ಭೀತಿಯಿಲ್ಲದೆ ನಿಶ್ಚಿಂತೆಯಿಂದ ಜನರ ಸೇವೆಯನ್ನು ಮಾಡಿಯಾರೇ?
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 25.11.2009.