ಮಾತು ಬೆಳ್ಳಿಯೇ ಮೌನ ಬಂಗಾರವೇ?
ಯಾರಾದರೂ ಗಣ್ಯವ್ಯಕ್ತಿಗಳು ಮರಣ ಹೊಂದಿದರೆ ಸಾರ್ವಜನಿಕ ಸಭೆಸಮಾರಂಭಗಳಲ್ಲಿ ಮೃತರ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮಾಡುವುದು ಪದ್ಧತಿ. ಮೃತರು ರಾಜಕೀಯ ಧುರೀಣರಾಗಿದ್ದರೆ ಸಶಸ್ತ್ರ ಪೊಲೀಸ್ ಪಡೆ ಠಾಕುಠೀಕಾಗಿ ನಡೆದುಬಂದು ಎದೆನಡುಕವುಂಟಾಗುವಂತೆ ಗಾಳಿಯಲ್ಲಿ ಗುಂಡು ಹಾರಿಸಿ ಶಿಸ್ತಿನಿಂದ ಸೆಲ್ಯೂಟ್ ಮಾಡುತ್ತಾರೆ; ಪೋಲೀಸ್ ಬ್ಯಾಂಡ್ ಶೋಕಗೀತೆ ನುಡಿಸುತ್ತದೆ. ಮೃತ ಪರಿವಾರದವರು ಅವರವರ ಧಾರ್ಮಿಕ ನಂಬುಗೆಗಳಿಗೆ ಅನುಗುಣವಾಗಿ ಮರಣೋತ್ತರ ವಿಧಿಗಳನ್ನು ನಡೆಸುತ್ತಾರೆ. ಧಾರ್ಮಿಕ ವಿಧಿವಿಧಾನಗಳಲ್ಲಿ ಏನೇ ಭಿನ್ನತೆ ಇದ್ದರೂ ಎಲ್ಲರೂ ತಂತಮ್ಮ ಬಂಧುಬಾಂಧವರಿಗೆ ಆತ್ಮೀಯ ಸ್ನೇಹಿತರಿಗೆ ಆಹ್ವಾನ ನೀಡಿ ಮೃತರ ಸ್ಮರಣೆಯಲ್ಲಿ ದಾಸೋಹ/ಭೋಜನ ಏರ್ಪಡಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಸಭೆಯನ್ನು ಏರ್ಪಡಿಸಿ ವಚನಗೀತೆ ಮತ್ತು ಉಪನ್ಯಾಸಗಳ ಮೂಲಕ ಅನಾಯಾಸವಾಗಿ ಸೇರಿದ ಜನರಿಗೆ ಬಸವಾದಿ ಶಿವಶರಣರ ತಾತ್ವಿಕ ವಿಚಾರಗಳನ್ನು ಉಣಬಡಿಸುವ ವಿನೂತನ ಪದ್ದತಿಯನ್ನು ಜಾರಿಗೆ ತಂದವರು ನಮ್ಮ ಗುರುವರ್ಯರಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು.
ಇತ್ತೀಚೆಗೆ ತರೀಕೆರೆ ತಾಲ್ಲೂಕಿನ ಶಿಷ್ಯ ಪ್ರಮುಖರೊಬ್ಬರು ಶಿವೈಕ್ಯರಾಗಿದ್ದು, ಅವರ ಸಂಸ್ಕರಣೆಯಲ್ಲಿ ಏರ್ಪಡಿಸಿದ್ದ ಶಿವಗಣಾರಾಧನೆ ಕಾರ್ಯಕ್ರಮ ನಮ್ಮ ಸಮ್ಮುಖದಲ್ಲಿ ಕಳೆದ ಭಾನುವಾರ ನಡೆಯಿತು. ಸಾವಿರಾರು ಜನರು ಸೇರಿದ್ದ ಅಂದಿನ ಸಭೆಯ ಆರಂಭದಲ್ಲಿ ಮೌನ ಆಚರಣೆ ನಡೆಯಿತು. ನಂತರ ಭಾಷಣ ಮಾಡಲು ಆರಂಭಿಸಿದ ಮಾಜಿ ವಿಧಾನಪರಿಷತ್ ಸಭಾಪತಿಗಳಾದ ಬಿ.ಎಲ್.ಶಂಕರ್ ಅವರು ಮೌನಾಚರಣೆಯಾದ ಮೇಲೆ ಮಾತನಾಡುವುದು ಎಷ್ಟರಮಟ್ಟಿಗೆ ಸರಿ ಎಂದು ವೇದಿಕೆಯ ಮೇಲೆ ಕೇಳಿ ಬಂದ ಪ್ರಶ್ನೆಯನ್ನು ಪ್ರಸ್ತಾಪಿಸಿದರಾದರೂ ಉತ್ತರ ಕಂಡುಕೊಳ್ಳುವ ಹೊಣೆಗಾರಿಕೆಯನ್ನು ಸಭಿಕರಿಗೆ ವಹಿಸಿ ಮಾತು ಮುಂದುವರಿಸಿದರು. ಎಲ್ಲರ ಮಾತುಗಳು ಮುಗಿದು ನಮ್ಮ ಸರದಿ ಬಂದಾಗ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿತ್ತು. ಅದುವರೆಗೆ ಚಿಂತಿಸುತ್ತಾ ಕುಳಿತ ನಮಗೆ ಸಭಿಕರ ಮನಸ್ಸಿನಲ್ಲಿ ಮೂಡಿದ್ದ ಜಿಜ್ಞಾಸೆಗೆ ಉತ್ತರ ನೀಡಬೇಕೆನಿಸಿತು.
ಮಾತು ಬೆಳ್ಳಿ, ಮೌನ ಬಂಗಾರ ಎಂದು ಹೇಳುವುದುಂಟು. ಅಂದರೆ ಮೌನವೇ ಶ್ರೇಷ್ಠ, ಮೌನದೊಂದಿಗೆ ಹೋಲಿಸಿದಾಗ ಮಾತು ಕನಿಷ್ಠ ಎಂಬುದು ಸಾಮಾನ್ಯ ತಿಳುವಳಿಕೆ. ಮನಸ್ಸಿನ ಆಲೋಚನೆಗಳು ಶಬ್ದತರಂಗಗಳಾಗಿ ರೂಪುಗೊಂಡು ಎಲ್ಲರಿಗೂ ಕೇಳುವಂತೆ ಪ್ರಕಟಗೊಳುವ ಬಾಹ್ಯ ಅಭಿವ್ಯಕ್ತಿಯೇ ಮಾತು. ಆದರೆ ಮೌನ ಧರಿಸಿದಾಗ ಮಾತು ನಿಲ್ಲಬಹುದೇ ಹೊರತು ಮನಸ್ಸಿನ ಆಲೋಚನೆಗಳು ನಿಲ್ಲುವುದಿಲ್ಲ, ಮನಸ್ಸು ಹರಿಯುವ ನದಿಯ ನೀರಿದ್ದಂತೆ. ಹರಿವ ನದಿಯ ನೀರನ್ನು ಹಾಗೆಯೇ ಹರಿಯಲು ಬಿಟ್ಟರೆ ಪೋಲಾಗುತ್ತದೆ. ಒಂದೆಡೆ ಜಲಾಶಯದಲ್ಲಿ ಸಂಗ್ರಹಿಸಿ ಕಾಲುವೆಯ ಮೂಲಕ ಹೊಲ ಗದ್ದೆಗಳಿಗೆ ಹರಿಸಿದರೆ ಬೆಳೆ ನಳನಳಿಸುತ್ತದೆ. ಮೌನಾವಸ್ಥೆಯಲ್ಲಿರುವ ಮನಸ್ಸು ಹಿಡಿದಿಟ್ಟ ಜಲಾಶಯದ ನೀರಿನಂತೆ. ಏಕಾಗ್ರತೆಯನ್ನು ಸಾಧಿಸಿದ ಮನಸ್ಸಿನಲ್ಲಿ ಅದ್ಭುತ ಶಕ್ತಿ ಅಡಗಿರುತ್ತದೆ. ಬರೀ ಮಾತನಾಡದಂತೆ ಮೌನ ಧರಿಸುವುದೂ ಉಪಯುಕ್ತವಲ್ಲ ಸಭೆ-ಸಮಾರಂಭಗಳಲ್ಲಿ ಭಾಗವಹಿಸಿದ ಕೆಲವರು ಸ್ವಾಮಿಗಳು ಈ ದಿನ ಮೌನವ್ರತದಲ್ಲಿರುವುದರಿಂದ ಭಾಷಣ ಮಾಡುವುದಿಲ್ಲವೆಂದು ಶಿಷ್ಯರು ಹೇಳುವುದನ್ನು ಕೇಳಿರಬಹುದು. ಮೌನಧರಿಸಿದ ಸ್ವಾಮಿಗಳು ಶಿಷ್ಯರೊಂದಿಗೆ ಮಾತನಾಡದೆ ಬರೆದು ತೋರಿಸುತ್ತಾರೆ. ಅಂತಹ ಬಲವಂತವಾದ ಮೌನ ಅರ್ಥಹೀನ. ಬಹಿರಂಗವಾಗಿ ಮಾತನಾಡಿದರೂ ಒಂದೇ, ಸನ್ನೆ ಮಾಡಿ ಬರೆದು ತೋರಿಸಿದರೂ ಒಂದೇ. ಮೌನದಲ್ಲಿ ಮನಸ್ಸು ವ್ಯಾವಹಾರಿಕ ಜಗತ್ತಿನಿಂದ ದೂರವಿದ್ದು ಅಂತರ್ಮುಖಿಯಾಗಬೇಕು. ಮಾತಿನಿಂದ ಹೇಳಲಾಗದ್ದನ್ನು ಸಾಧಿಸಬೇಕು.
ಮೌನವಾಗಿದ್ದ ಮಾತ್ರಕ್ಕೆ ಮನಸ್ಸು ಸುಮ್ಮನಿರುತ್ತದೆ ಎಂದಲ್ಲ, ಆಲೋಚನೆಗಳು ಇಳಿಜಾರಿನಲ್ಲಿ ಹರಿಯುವ ನದಿಯ ನೀರಿದ್ದಂತೆ. ಅವು ಹರಿಯುತ್ತಲೇ ಇರುತ್ತವೆ. ಮನೋವ್ಯಾಪಾರ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಹರಿದಾಡುವ ಮನವ ಮಚ್ಚೆಲಿ ಹೊಡೆದು ನಿಲಿಸು ಮನುಜ ಎಂದು ಶಿಶುನಾಳ ಷರೀಫರು ಹೇಳುತ್ತಾರೆ. ಆದರೆ ಅದು ಅಷ್ಟು ಸುಲಭದ ಮಾತಲ್ಲ, ಕೊಳದ ನೀರಿನಲ್ಲಿ ಮೌನವಾಗಿ ನಿಂತ ಬಕಪಕ್ಷಿಯದು ಧ್ಯಾನವಲ್ಲ, ತನ್ನ ಆಹಾರವಾದ ಮೀನನ್ನು ಹಿಡಿಯಲು ಅದು ಹಾಕುವ ಹೊಂಚಷ್ಟೇ! "ಧ್ಯಾನಗೈಯುವ ನೆವದಿ ಯಾವ ಹೆಣ್ಣನು ನೆನೆವೆ?" (ಧ್ಯಾನವ್ಯಾಜಮುನೇತ್ಯ ಚಿಂತಯಸಿ ಕಾಮುಲ್ಯ ಚಕ್ಷುಃ ಕ್ಷಣಂ) ಎನ್ನುತ್ತಾನೆ ನಾಗಾನಂದ ನಾಟಕಕಾರ ಶ್ರೀಹರ್ಷ ನಾಂದಿ ಪದ್ಯದಲ್ಲಿ! ಮೇಲಿನಿಂದ ಕೆಳಕ್ಕೆ ಹರಿಯುವುದು ನೀರಿನ ಸಹಜಗುಣ. ಕೆಳಸ್ತರದಲ್ಲಿ ವಿಷಯಾಭಿಮುಖವಾಗಿ ಹರಿಯುವುದು ಮನಸ್ಸಿನ ಸಹಜಗುಣ. ಅದು ವಿಷಯವಾಸನೆಯ ಬಗ್ಗಡದಿಂದ ತಿಳಿಗೊಳಬೇಕು. ಆಧ್ಯಾತ್ಮಿಕ ಸಾಧನೆಯಿಂದ ಮನಸ್ಸನ್ನು ನಿಗ್ರಹಿಸಿ ಮೇಲುಸ್ತರಕ್ಕೆ ಹರಿಯುವಂತೆ ಎಚ್ಚರವಹಿಸಬೇಕು. ಮನಸ್ಸನ್ನು ಕೇವಲ ನಿಗ್ರಹಿಸಿದರೆ ಸಾಲದು, ಉದಾತ್ತೀಕರಿಸಿಕೊಳ್ಳಬೇಕು. ಇಲ್ಲದಿದ್ದರೆ ಒಡೆದ ಜಲಾಶಯದ ಕಟ್ಟೆಯಂತೆ ಅನಾಹುತಕ್ಕೆ ಇಂಬುಗೊಡುತ್ತದೆ.
ಹೀಗೆ ಮೌನದಲ್ಲಿ ಎರಡು ವಿಧ. ವಿಷಯಾಭಿಮುಖವಾಗಿ ಹರಿಯುವ ಮನಸ್ಸು. ಆಧ್ಯಾತ್ಮಿಕವಾಗಿ ಮೇಲೇರುವ ಮನಸ್ಸು. ಅಧೋಮುಖವಾಗಿ ಹರಿಯುವ ಮನಸ್ಸು ಚಂಚಲ. ಊರ್ಧ್ವಮುಖವಾಗಿ ಹರಿಯುವ ಮನಸ್ಸು ನಿಸ್ತರಂಗ ಕಾಸಾರವಿದ್ದಂತೆ. ಅದೇ ಧ್ಯಾನ. ಜಲಾಶಯದಲ್ಲಿ ಹಿಡಿದಿಟ್ಟ ನೀರು ಪ್ರಶಾಂತವಾಗಿದ್ದರೂ ಅಪಾರ ಶಕ್ತಿಯನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿರುತ್ತದೆ. ಹಾಗೆಯೇ ಹಿಡಿತಲ್ಲಿರುವ ಮನಸ್ಸು ಅದ್ಭುತ ಶಕ್ತಿಸಂಪನ್ನವಾಗಿರುತ್ತದೆ. ಅದು ಆತ್ಮಸಾಕ್ಷಾತ್ಕಾರಕ್ಕೆ ಕಾರಣೀಭೂತವಾಗುತ್ತದೆ. ಅಂತಹ ಅಂತ ದರ್ಶನವನ್ನು ನಮ್ಮ ಋಷಿಮುನಿಗಳು, ದ್ರಷ್ಟಾರರು ಮಾಡಿಕೊಂಡಿದ್ದರು. ಬುದ್ಧನ ಉದಾಹರಣೆಯನ್ನೇ ತೆಗೆದುಕೊಂಡರೆ ಅವನಿಗೆ ಜ್ಞಾನೋದಯವಾದದ್ದು ಬೋಧಿವೃಕ್ಷದ ಕೆಳಗೆ ಕುಳಿತು ಮಾಡಿದ ಧ್ಯಾನದಿಂದ. ಮೌನದ ಅನುಸಂಧಾನವಿಲ್ಲದ ಮಾತು ಶಿಳ್ಳೆ ಹೊಡೆದಂತೆ, ಮೌನದ ಅನುಸಂಧಾನದ ನಂತರ ಹೊರಡುವ ಮಾತು ಕೊಳಲು ನುಡಿಸಿದಂತೆ! ಮಾತು ಬೆಳ್ಳಿ ಎನ್ನುವ ಉಕ್ತಿ ಅನುಸಂಧಾನ ಪೂರ್ವದ ಕೆಳಸ್ತರದ ಮಾತನ್ನು ಕುರಿತು ಹೇಳಿದ್ದು, ಧ್ಯಾನಮೌನಗಳ ಅನುಸಂಧಾನದ ನಂತರ ಆಡುವ ಮೇಲುಸ್ತರದ ಮಾತು ಬೆಳಿಯಲ್ಲ, ಬಂಗಾರವೂ ಅಲ್ಲ, ಬೆಳಿ-ಬಂಗಾರಕ್ಕಿಂತ ಮಿಗಿಲಾದ ಮಾಣಿಕ್ಯ ಎಂಬುದನ್ನು ಸರ್ವಜ್ಞನ ಈ ಮುಂದಿನ ತ್ರಿಪದಿಯಲ್ಲಿ ಮನಗಾಣಬಹುದು.
ಮಾತಿನಿಂ ನಗೆನುಡಿಯು, ಮಾತಿನಿಂ ಹಗೆಹೊಲೆಯು
ಮಾತಿನಿಂ ಸರ್ವ ಸಂಪದವು, ಲೋಕಕ್ಕೆ
ಮಾತೆ ಮಾಣಿಕ್ಯವು ಸರ್ವಜ್ಞ
ಈಗ ಎಲ್ಲೆಲ್ಲೂ ಮಾತು ಮಾತು ಮಾತು. ಎಲ್ಲ ರಂಗಗಳೂ ಮಾತಿನ ಅಖಾಡಗಳೇ. ಮಾತಿನ ಮಲ್ಲರ ಕುಸ್ತಿಯೇ ನಡೆದಿದೆ. ನಾಲಿಗೆ ಜಾರಿ ಮಾತನಾಡಿಬಿಡುವುದು, ನಂತರ ತಾನಾಡಿದ ಮಾತೇ ಕೊರಳಿಗೆ ಸುತ್ತಿಕೊಳತೊಡಗಿದಾಗ, ನಾನು ಹಾಗೆ ಹೇಳಿಯೇ ಇಲ್ಲ ಎಂದು ಜಾರಿಕೊಳುವುದು, ತಾವು ಮಾಡಿದ ತಪ್ಪನ್ನು ಇನ್ನೊಬ್ಬರ ಮೇಲೆ ಹೊರಿಸಿ ಮಾತನಾಡುವುದು ಇಂದಿನ ಜನರ ಜಾಯಮಾನ! ಮಾತಿನ ಜಾತ್ರೆಯಲ್ಲಿ ಮೌನದ ಮುತ್ತು ಕಳೆದು ಹೋಗಿದೆ. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುವುದು ಇದಕ್ಕೇ ಅಲ್ಲವೆ?
ಅಂತರಂಗದ ಅನುಭವವನ್ನು ಅಭಿವ್ಯಕ್ತಿಪಡಿಸುವಾಗ ಮಾತು ಸೋಲಬಹುದು. ಅನುಭಾವವನ್ನು ಬಿಚ್ಚಿಡುವಾಗಲಂತೂ ಮಾತು ಹೇಳವಾಗುತ್ತದೆ. ಅನುಭಾವವು ಮೂಗ ಕಂಡ ಕನಸಿನಂತೆ ಮಾತಿಗೆ ನಿಲುಕದ್ದು, ಅದನ್ನು ಹೇಳಲೇ ಬೇಕಾಗಿ ಬಂದಾಗ ಕೋಡಗನ ಕೋಳಿ ನುಂಗಿತ್ತ ಕೇಳವ್ವ ತಂಗಿ ಎಂಬಂತಹ ಪ್ರತಿಮೆಗಳಿಗೆ ಮೊರೆಹೋಗುತ್ತಾರೆ ಅನುಭಾವಿಗಳು, ಅಲ್ಲಮಪ್ರಭುವಿನ ದೃಷ್ಟಿಯಲ್ಲಿ ಮಾತೆಂಬುದು ಜ್ಯೋತಿರ್ಲಿಂಗ!. ಬೇಕಾದ ಮಾತನ್ನು ಕುರಿತ ಚನ್ನವೀರ ಕಣವಿಯವರ ಕವಿತೆಯ ಈ ಮುಂದಿನ ಸಾಲುಗಳು ಸ್ಮರಣೀಯ:
ನಾವು ಆಡುವ ಮಾತು ಹೀಗಿರಲಿ ಗೆಳೆಯ
ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ;
ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 22.1.2015